ಕನ್ನಡ ಸಿನಿಮಾ ಇಂಡಸ್ಟ್ರಿಯ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳ ಪೈಕಿ KVN ಕೂಡ ಒಂದು. ಚಿತ್ರ ನಿರ್ಮಾಣದ ಜೊತೆಗೆ ವಿತರಣೆಯಲ್ಲೂ ತೊಡಗಿಸಿಕೊಂಡಿರುವ ಈ ಸಂಸ್ಥೆ, ಆರ್ ಆರ್ ಆರ್, ಸೀತರಾಮಂ, ಚಾರ್ಲಿ, ವಿಕ್ರಾಂತ್ ರೋಣ ಸೇರಿದಂತೆ ಹಲವು ಬಿಗ್‍ಬಜೆಟ್ ಸಿನಿಮಾಗಳನ್ನು ನಾಡಿನಾದ್ಯಂತ ವಿತರಣೆ ಮಾಡಿದೆ. ಮಾರ್ಟಿನ್ ಹಾಗೂ ಸಪ್ತಸಾಗರದಾಚೆ ಎಲ್ಲೋ ಸಿನಿಮಾವನ್ನ ಗಡಿಯಾಚೆ ತಲುಪಿಸೋ ಜವಬ್ದಾರಿ ಹೊತ್ತಿರೋ ಈ ಪ್ರೊಡಕ್ಷನ್ ಹೌಸ್, ಬಹದ್ದೂರ್ ಗಂಡು ಧ್ರುವ ಸರ್ಜಾ ಅಭಿನಯದ `ಕೆಡಿ’ ಚಿತ್ರಕ್ಕೆ ಬಂಡವಾಳ ಹೂಡಿದೆ. ಇದನ್ನ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಲುಪಿಸಲು ರೆಡಿಯಾಗಿರೋ ಈ ಸಂಸ್ಥೆ, ಇದ್ದಕ್ಕಿದ್ದ ಹಾಗೇ ಬಿಗ್ ಅನೌನ್ಸ್‍ಮೆಂಟ್ ಕಮ್ಮಿಂಗ್ ಸೂನ್ ಅಂತ ಪೋಸ್ಟರ್ ಹರಿಬಿಟ್ಟು ಸಂಚಲನ ಮೂಡಿಸಿದೆ.
ಹೌದು, KVN ಸಂಸ್ಥೆಯ ಸೋಷಿಯಲ್ ಮೀಡಿಯಾ ಪುಟದಲ್ಲಿ `ಬಿಗ್ ಅನೌನ್ಸ್ ಮೆಂಟ್ ಕಮ್ಮಿಂಗ್ ಸೂನ್’ ಎನ್ನುವ ಪೋಸ್ಟರ್ ಅಪ್‍ಲೋಡ್ ಆಗಿದೆ. ಅದರಲ್ಲಿ ಯಾವ ಸಿನಿಮಾದ ಅಪ್‍ಡೇಟ್ ? ಯಾವ ಸ್ಟಾರ್ ಸಿನಿಮಾದ ಕಂಟೆಂಟ್? ಇದ್ಯಾವುದರ ಬಗ್ಗೆಯೂ ಮಾಹಿತಿ ಇಲ್ಲ. ಹೀಗಾಗಿ ಕುತೂಹಲ ಗರಿಗೆದರಿದೆ. ಆ ಬಿಗ್ ಅನೌನ್ಸ್ ಮೆಂಟ್ ನ್ಯಾಷನಲ್‍ಸ್ಟಾರ್ ಯಶ್ ಮುಂದಿನ ಸಿನಿಮಾದ್ದಾಗಿರಬಹುದಾ? ಕೆವಿಎನ್ ಸಂಸ್ಥೆಗೆ ರಾಕಿಭಾಯ್ ಕಾಲ್‍ಶೀಟ್ ಸಿಕ್ಕಿರಬಹುದಾ? ಇಡೀ ಜಗತ್ತು ಕುತೂಹಲದಿಂದ ಎದುರುನೋಡ್ತಿರುವ `ಯಶ್-19′ ಪಿಕ್ಚರ್ ನ ಕನ್ನಡದ ನಿರ್ಮಾಣ ಸಂಸ್ಥೆಯೇ ಪ್ರೊಡ್ಯೂಸ್ ಮಾಡಬಹುದಾ? ಹೀಗೆ ಚರ್ಚೆಗಳು ಶುರುವಾಗಿವೆ.
ಅಷ್ಟಕ್ಕೂ, ಯಶ್ ಮುಂದಿನ ಸಿನಿಮಾಗೆ ಕೆವಿಎನ್ ಬಂಡವಾಳ ಹೂಡುತ್ತೆ ಅನ್ನೋದು ಹೊಸ ಸುದ್ದಿಯೇನಲ್ಲ. ಕೆಜಿಎಫ್ ಪಾರ್ಟ್-2 ರಿಲೀಸ್ ಆದಾಗಿಂದಲೂ ಹೀಗೊಂದು ಸುದ್ದಿ ಹರಿದಾಡುತ್ತಲೇ ಇದೆ. ಆದರೆ, ಕೆವಿಎನ್ ಸಂಸ್ಥೆಯ ಮಾಲೀಕರಾಗಲೀ, ಸ್ವತಃ ಯಶ್ ಆಗ್ಲೀ ಈ ವಿಚಾರವನ್ನ ಎಲ್ಲಿಯೂ ಹೇಳಿಕೊಳ್ಳುತ್ತಿಲ್ಲ. ಬದಲಾಗಿ ಸಾಕಷ್ಟು ಖಾಸಗಿ ಕಾರ್ಯಕ್ರಮಗಳಲ್ಲಿ ಅಣ್ತಮ್ಮನ ಜೊತೆಗೆ ಕೆವಿಎನ್ ಮಾಲೀಕರು ಕೂಡ ಗುರ್ತಿಸಿಕೊಳ್ತಿದ್ದಾರೆ. ಹೀಗಾಗಿ, `ಯಶ್-19′ ಪಿಕ್ಚರ್‍ಗೆ ಕೆವಿಎನ್ ದಣಿಗಳೇ ದುಡ್ಡು ಸುರಿಯೋದು ಎನ್ನುವ ಮಾತು ದಟ್ಟವಾಗಿ ಕೇಳಿಬರುತ್ತಿದೆ. ಇದಕ್ಕೆ `ಬಿಗ್ ಅನೌನ್ಸ್ ಮೆಂಟ್ ಕಮ್ಮಿಂಗ್ ಸೂನ್’ ಪೋಸ್ಟರ್ ಸಾಕ್ಷಿಯೆನ್ನುವಂತಿದೆ.
ಅಚ್ಚರಿ ಅಂದರೆ ಪೋಸ್ಟರ್‍ನಲ್ಲಿ ಡೇಟ್, ಟೈಮ್ ಮೆನ್ಷನ್ ಮಾಡದೇ ಇರೋದ್ರಿಂದ ಯಾವ ಕ್ಷಣದಲ್ಲಿ ಬೇಕಾದ್ರೂ ಅಪ್‍ಡೇಟ್ ನೀಡಬಹುದು. ಹೀಗಾಗಿ, ಯಶ್ ಬಳಗದ ಜೊತೆಗೆ ಆಲ್ ಓವರ್ ಇಂಡಿಯಾ ಪ್ರೇಕ್ಷಕರು `ಕೆವಿಎನ್’ ಸೋಷಿಯಲ್ ಮೀಡಿಯಾ ಸೈಟ್ ಜೊತೆಗೆ ಕನೆಕ್ಟೆಡ್ ಇರಬೇಕಾಗುತ್ತದೆ. ಅಪ್‍ಕೋರ್ಸ್ ಇರೋದ್ರಿಂದಲೇ `ಯಶ್-19′ ಟ್ರೆಂಡಿಂಗ್‍ನಲ್ಲಿದೆ. ಕೆವಿಎನ್ ಸಂಸ್ಥೆ ಅನೌನ್ಸ್ ಮೆಂಟ್ ಮಾಡೋದು ನಮ್ಮ ಬಾಸ್ ಸಿನಿಮಾದ ಬಗ್ಗೇನೇ ಅಂತ ಜಾತಕ ಪಕ್ಷಿಯಂತೆ ಫ್ಯಾನ್ಸ್ ಕಣ್ಣರಳಿಸಿದ್ದಾರೆ. ಒಂದ್ವೇಳೆ ಈ ಸುದ್ದಿ ನಿಜ ಆದರೆ, ಒಂದೂವರೆ ವರ್ಷಗಳ ಕಾಯುವಿಕೆಗೆ ಬಿಗ್ ಬ್ರೇಕ್ ಬೀಳುತ್ತೆ. ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಸಿಕ್ಕಂತಾಗುತ್ತೆ.
ಒಟ್ನಲ್ಲಿ `ಯಶ್-19′ ಮೇಲೆ ನಿರೀಕ್ಷೆ ಹೆಚ್ಚಿದೆ. ನ್ಯಾಷನಲ್ ಸ್ಟಾರ್ ಗೆ ಆ್ಯಕ್ಷನ್ ಕಟ್ ಹೇಳೋರ್ಯಾರು ಎನ್ನುವ ಕುತೂಹಲ ಎಲ್ಲರನ್ನೂ ಒಂಟಿಕಾಲಿನಲ್ಲಿ ನಿಲ್ಲಿಸಿದೆ. ಕಳೆದೊಂದು ವರ್ಷದಲ್ಲಿ ಕಾಶ್ಮೋರ ಸಿನಿಮಾ ಖ್ಯಾತಿಯ ಗೋಕುಲ್, ಇರುಂಬುತಿರೈ ಸಿನಿಮಾದ ನಿರ್ದೇಶಕ ಮಿತ್ರನ್, ದಂಗಲ್ ಡೈರೆಕ್ಟರ್ ನಿತೀಶ್ ತಿವಾರಿ, ಮಲೆಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ಸೇರಿದಂತೆ ಹಲವರ ಹೆಸರು ಕೇಳಿಬಂದಿದೆ. ಇವರ್ಯಾರು ಅಲ್ಲ ಪ್ರಶಾಂತ್ ನೀಲ್ ಅವರೇ ಡೈರೆಕ್ಟ್ ಮಾಡ್ತಾರೆ. ನೆಕ್ಸ್ಟ್ ಪಿಕ್ಚರ್ ಕೆಜಿಎಫ್-3ನೇ ಆಗಿರಲಿದೆ ಎನ್ನುವ ಸುದ್ದಿಯೂ ಇದೆ. ಒಂದ್ವೇಳೆ ಈ ಸುದ್ದಿ ನಿಜ ಆದರೆ ಇಡೀ ಜಗತ್ತಿಗೆ ಜಗತ್ತೇ ಕಣ್ಣುಜ್ಜಿಕೊಂಡು ದಢಕ್ಕನೇ ಎದ್ದುಕೂರುತ್ತೆ. ಪ್ಯಾನ್ ಇಂಡಿಯಾದ ಸಿನಿಮಾ ಮಂದಿ ಜೊತೆಗೆ ಪ್ಯಾನ್ ವಲ್ರ್ಡ್‍ನವರು ಅಲರ್ಟ್ ಆಗ್ತಾರೆ. ಯಾಕಂದ್ರೆ, ಹಂಗೈತಿ ಕೆಜಿಎಫ್ ಸೀರೀಸ್ ಹವಾ. ನೋಡೋಣ ಇಷ್ಟು ದಿನಾನೇ ಕಾದಿದ್ದೇವೆ. ಇನ್ನೊಂದಿಷ್ಟು ದಿನ ತಳ್ಳೋಣ. ಆಸ್ಟ್ರೇಲಿಯಾ, ಅಮೇರಿಕಾ, ಸಿಡ್ನಿ, ನ್ಯೂಜಿಲ್ಯಾಂಡ್, ಇಟಲಿ, ಯುರೋಪ್, ಲಂಡನ್, ಶ್ರೀಲಂಕಾ, ದುಬೈ, ಮಲೇಷಿಯಾ ಅಂತ ಅಣ್ತಮ್ಮ ಸುತ್ತಿದ್ದು, ಹಾಲಿಡೇ ಎಂಜಾಯ್ ಮಾಡಲಿಕ್ಕಾ ಅಥವಾ ಕೆಜಿಎಫ್ ಪಾರ್ಟ್3 ಗೆ ಲೊಕೇಷನ್ ಫೈನಲ್ ಮಾಡಲಿಕ್ಕಾ ಅನ್ನೋದನ್ನ ತಿಳಿಯುತ್ತೆ.