Life Of Mrudula: ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ’ಲೈಫ್ ಆಫ್ ಮೃದುಲ’(Life Of Mrudula) ಚಿತ್ರವನ್ನು ಮದನ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಮದನ್‌ಕುಮಾರ್.ಸಿ ನಾಯಕ ಮತು ನಿರ್ಮಾಪಕ. ಸಂಭಾಷಣೆ ಬರೆದಿರುವ ಯೋಗಿದೇವಗಂಗೆ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ಹಲವು ನಿರ್ದೇಶಕರ ಬಳಿ ಕೆಲಸ ಕಲಿತಿರುವ ಕೋಲಾರದ ಚೇತನ್ ತ್ರಿವೇಣ್ ಸಿನಿಮಾಕ್ಕೆ ರಚನೆ,ಚಿತ್ರಕಥೆ, ಸಾಹಸ ಹಾಗೂ ಆಕ್ಷನ್ ಕಟ್ ಹೇಳಿದ್ದಾರೆ.
ಪ್ರಚಾರದ ಮೊದಲ ಹಂತವಾಗಿ ಹಾಡು ಬಿಡುಗಡೆ ಸಮಾರಂಭವು ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನಡೆಯಿತು. ಯುವ ಮುಖಂಡ ಮೊಹ್ಮದ್ ನಲಪಾಡ್(Mohamad Nalpad) ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತಂಡಕ್ಕೆ ಶುಭ ಹಾರೈಸಿದರು. ಕಾಲ್ಪನಿಕ ಡಾರ್ಕ್ ಡ್ರಾಮಾ ಜಾನರ್‌ನ ಕಥೆಯಾಗಿದ್ದು, ಮೃದುಲಾ ಎಂಬುವಳ ಜೀವನದಲ್ಲಿ ಎದುರಾಗುವ ಮೂರು ವಿಭಿನ್ನ ಕಾಲ ಘಟ್ಟಗಳು ಬರುತ್ತದೆ. ಆಕೆಗೆ ಬದುಕಲ್ಲಿ ಅನಿರೀಕ್ಷಿತವಾಗಿ ಬರುವ ಸವಾಲನ್ನು ಯಾವ ರೀತಿ ಎದುರಿಸುತ್ತಾಳೆ ಎಂಬುದನ್ನು ಕುತೂಹಲ ತಿರುವುಗಳ ಮೂಲಕ ಥ್ರಿಲ್ಲರ್ ರೂಪದಲ್ಲಿ ತೋರಿಸಲಾಗಿದೆ.
ನಾಯಕಿಯಾಗಿ ಪೂಜಾ ಲೋಕಾಪುರ(Pooja Lokapura). ಇವರೊಂದಿಗೆ ಆಶಾಸುಜಯ್, ಶಶಾಂಕ್, ಕುಲದೀಪ್, ಯೋಗಿದೇವಗಂಗೆ, ಅನೂಪ್‌ಥಾಮಸ್, ಪ್ರೀತಿಚಿದಾನಂದ್, ಶರೀಫ್ ಮುಂತಾದವರು ನಟಿಸಿದ್ದಾರೆ. ಸಂಗೀತ ರಾಹುಲ್.ಎಸ್.ವಾಸ್ತರ್, ಛಾಯಾಗ್ರಹಣ ಅಚ್ಚುಸುರೇಶ್, ಸಂಕಲನ ವಸಂತಕುಮಾರ್.ಕೆ ಅವರದಾಗಿದೆ. ಬೆಂಗಳೂರು, ಕುಂದಾಪುರ ಸುಂದರ ತಾಣಗಳಲ್ಲಿ 25 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಸೆನ್ಸಾರ್‌ನಿಂದ ಪ್ರಶಂಸೆ ಪಡೆದುಕೊಂಡ ಚಿತ್ರವನ್ನು ಆಗಸ್ಟ್ ತಿಂಗಳಲ್ಲಿ ತೆರೆಗೆ ತರಲು ನಿರ್ಮಾಪಕರು ಯೋಜನೆ ರೂಪಿಸಿಕೊಂಡಿದ್ದಾರೆ.