ಕಾಲಿವುಡ್ ಸೂಪರ್ ಸ್ಟಾರ್ ವಿಜಯ್ ಹಾಗೂ ಕಾಲಿವುಡ್‌ನ ಸೆನ್ಸೇಷನಲ್ ಡೈರೆಕ್ಟರ್ ಲೋಕೇಶ್ ಕನಗರಾಜ್ ಕಾಂಬಿನೇಷನ್‌ನಲ್ಲಿ ಮೂಡಿಬಂದ ಲಿಯೋ ಸಿನಿಮಾದ ಬಗ್ಗೆ ನಿಮಗೆಲ್ಲ ತಿಳಿದೆಯಿದೆ. ಅಕ್ಟೋಬರ್ 19ರಂದು ವಲ್ಡ್ ವೈಡ್ ಲಗ್ಗೆ ಇಟ್ಟ ಹೈವೋಲ್ಟೇಜ್ ಆಕ್ಷನ್ ಥ್ರಿಲ್ಲರ್ ಲಿಯೋ ನಿರೀಕ್ಷೆಯ ಮಟ್ಟ ಮುಟ್ಟಲಿಲ್ಲ. ಸೆಟ್ಟೇರಿದಾಗಿನಿಂದ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತಾದ್ರೂ ಕೂಡ ಗಲ್ಲಾಪೆಟ್ಟಿಗೆಯಲ್ಲಿ ಗಹಗಹಿಸಲಿಲ್ಲ. ಆದರೆ, ದಳಪತಿ ಫ್ಯಾನ್ಸ್‌ಗೆ ಲಿಯೋ ಚಿತ್ರ ಕಿಕ್ ಕೊಟ್ಟಿತ್ತು. ಬಿಗಿಲ್ ಹೀರೋ ಕ್ರೇಜ್ ಗಡಿದಾಟಿತ್ತು. ಹೀಗಾಗಿ, ಲಿಯೋ ಸಾರಥಿ ಸೀಕ್ವೆಲ್ ಮಾಡುವ ಕುರಿತು ಅಂದೇ ಯೋಚಿಸಿದ್ದರು. ಇದೀಗ ಆ ಬಗ್ಗೆ ಹೇಳಿಕೊಂಡಿದ್ದಾರೆ.
ಹೌದು, ಇತ್ತೀಚಿಗೆ ನಡೆದ ಸಂವಾದದಲ್ಲಿ ಭಾಗಿಯಾಗಿದ್ದ ನಿರ್ದೇಶಕ ಲೋಕೇಶ್ ಕನಗರಾಜ್, ವಿಜಯ್ನ ಒಳಗೊಂಡ ‘ಲಿಯೋ 2’ ಸಿನಿಮಾ ಶೀಘ್ರವೇ ನಿಮ್ಮ ಮುಂದೆ ಬರಲಿದೆ ಎಂದು ದಳಪತಿ ಫ್ಯಾನ್ಸ್‌ಗೆ ಖಾತ್ರಿ ಪಡಿಸಿದ್ದಾರೆ. ಸದ್ಯ, ತಲೈವಾ ಸಿನಿಮಾದ ಸ್ಕ್ರಿಪ್ಟ್ ಸಿದ್ದತೆಯಲ್ಲಿ ಬ್ಯುಸಿಯಾಗಿದ್ದಾರೆ. ಇದೇ ಮೊದಲ ಭಾರಿಗೆ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಡೈರೆಕ್ಟ್ ಮಾಡುವ ಅವಕಾಶ ದಕ್ಕಿದೆ. ʻತಲೈವರ್-171ʼ ಸಿನಿಮಾ ನಿರ್ದೇಶಿಸುವ ಜವಾಬ್ದಾರಿ ವಿಕ್ರಮ್ ಡೈರೆಕ್ಟರ್ ಹೆಗಲೇರಿದೆ. ಎಲ್ ಸಿಯೂ ಕಾನ್ಸೆಪ್ಟ್‌ನಲ್ಲಿ ಪಡೆಯಪ್ಪನ ಸಿನಿಮಾ ತೆಗೆಯಲು ಹೊರಟಿರೋ ಲೋಕೇಶ್ ಕನಗರಾಜ್, ಬಾಷಾನ ತೆರೆಮೇಲೆ ಯಾವ್ ರೀತಿ ತೋರಿಸ್ತಾರೆನ್ನುವ ಕುತೂಹಲ ಅಭಿಮಾನಿಗಳನ್ನ ಒಂಟಿಕಾಲಿನಲ್ಲಿ ನಿಲ್ಲಿಸಿದೆ.
ಮಾಸ್ಟರ್ ಡೈರೆಕ್ಟರ್ ಕೈಯಲ್ಲಿ ಮೂರ್ನಾಲ್ಕು ಸಿನಿಮಾಗಳಿವೆ. ಹೀಗಾಗಿ, ‘ತಲೈವರ್ 171’ ಮತ್ತು ‘ಕೈತಿ 2’ ಸಿನಿಮಾಗಳ ಕೆಲಸಗಳನ್ನು ಪೂರ್ಣಗೊಳಿಸಿದ ಬಳಿಕವೇ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲಿದ್ದೇನೆ ಎಂದು ಲೋಕೇಶ್ ತಿಳಿಸಿದ್ದಾರೆ. ಈ ಮೂಲಕ ದಳಪತಿ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿ ಸಂಭ್ರಮಿಸುವಂತೆ ಮಾಡಿದ್ದಾರೆ.