ಮಳೆ ಬರುತ್ತಿದ್ದರೂ ಈಕೆ ನೆನೆಯುತ್ತಿಲ್ಲ. ಏಕೆಂದರೆ ಟಾರ್ಚ್ ರೀತಿಯ ದಂಡ ಹಿಡಿದಿದ್ದಾಳೆ. ಇದೇ ಛತ್ರಿಯಂತೆ. ಅದೇನದು? ಮಾಹಿತಿ ಇಲ್ಲಿದೆ…. ಸಕ್ಕತ್ ‘ಛತ್ರಿ’ ಕಣ್ರೀ ಇದು. ಹೆಸರು ಏರ್‌ಅಂಬ್ರೆಲ ಅಲಿಯಾಸ್ ಗಾಳಿ ಕೊಡೆ. ಮಳೆ ಬರುತ್ತಿರುವಾಗ ಬಟನ್ ಹಿಡಿದರೆ ಸಾಕು…ಗಾಳಿಯನ್ನು ಹೀರಿ ಛತ್ರಿ ಹಿಡಿದ ದಿಕ್ಕಿನತ್ತ ‘ಬ್ಲೋ’ ಆಗುತ್ತದೆ. ಸುರಿಯುವ ಚೆಲ್ಲಾಪಿಲ್ಲಿಯಾಗಲಿದೆ. ಆಮೂಲಕ ನೆನೆಯದೆ ಮಳೆಯಲ್ಲೂ ನಡೆಯಬಹುದು. ಇದರ ಕಾರ್ಯನಿರ್ವಹಣೆಯ ವ್ಯಾಪ್ತಿ ಏನು? ಏರ್‌ಬ್ಲೋ ಆಗಿ ಒಂದು ಮೀಟರ್ ವ್ಯಾಸದಲ್ಲಿ ಮಳೆಯಾಗದಂತೆ ಮಾಡಲಿದೆ. ಅಂದಹಾಗೆ ಇದರ ಪವರ್ ೩೦ ನಿಮಿಷಗಳಿಗೆ ಮಾತ್ರ ಇರಲಿದೆ. ನಂತರ ಬ್ಯಾಟರಿ ಬದಲಿಸಬೇಕು. ಇಲ್ಲ ಬ್ಯಾಟರಿ ಚಾರ್ಜ್ ಮಾಡಬೇಕು.
ಗಾಳಿ ಕೊಡೆ
ಮಳೆ ಸುರಿಯುತ್ತಿದ್ಧಾಗಲೇ ಬ್ಯಾಟರಿ ಆಫ್ ಆದರೆ? ನೆನೆಯುವುದು ಖಚಿತ. ಅಥವಾ ಮಳೆಯಲ್ಲೇ ಬ್ಯಾಟರಿ ಬದಲಿಸುವ ಸರ್ಕಸ್ ಮಾಡಬೇಕು. ಚೈನಾದವರ ಆವಿಷ್ಕಾರವಿದು. ಬೆಲೆ ೧೦ ಸಾವಿರ ಡಾಲರ್‌ಗಳು. ನಮ್ಮಲ್ಲೂ ಈ ಛತ್ರಿ ಬಂದರೆ ಕೊಳ್ಳುವಿರಾ? ಇಲ್ಲ….೧೦ ಸಾವಿರ ಡಾಲರ್ ಕೊಟ್ಟರೆ ೧೦ ಸಾವಿರ ಛತ್ರಿಗಳೇ ಬಂದಿತು. ಅಂತಿರುವಾಗ ಈ ಛತ್ರಿ ನಮಗೇಕೆ ಅಲ್ವಾ?! ಅಷ್ಟಕ್ಕೂ ಇದು ಮಳೆ ಬಂದಾಗ ಮಾತ್ರ ಇದರ ಬಳಕೆ ಆದರೆ ನಮ್ಮ ಛತ್ರಿಗಳು ಹಾಗಲ್ಲಾ ಬಿಸಿಲ ಝಳದಿಂದ ತಪ್ಪಿಸಿಕೊಳ್ಳಲೂ ಬಳಸಬಹುದು ಏನಂತೀರಾ?! ಆದರೆ ಏರಂಬ್ರೆಲದಿಂದ ಕಿಟಕಿ, ವಾಹನಗಳ ಮೇಲಿನ ಧೂಳು ಝಾಡಿಸಲು ಅನುಕೂಲವಾಗಲಿದೆ. ಮಾಮೂಲಿ ಛತ್ರಿಯಿಂದ ಈ ಕೆಲಸವಾಗದು.
‘ಬಿಸಿ’ಲ್ಗಲೆ
ಕಲೆ ಎಲ್ಲರಿಗಾಗಿ ಎಂದು ನಮ್ಮ ಚಿತ್ರಕಲಾ ಪರಿಷತ್ ನವರು ಹೇಳುತ್ತಾರೆ. ವರ್ಷಕ್ಕೊಮ್ಮೆ ಚಿತ್ರ ಸಂತೆಯನ್ನೂ ಮಾಡುತ್ತಾರೆ. ಆದರೆ ಕಲಾವಿದನಾಗುವುದು ಎಲ್ಲರಿಗು ಸಾಧ್ಯವಾಗದು. ಅದರಲ್ಲೂ ಬಿಸಿಲ ಕಲೆ ಅಂದರೆ ಸುಮ್ಮನೆ ಅಲ್ಲ. ಬಿಸಿಲಲ್ಲಿ ಕೂತು ಚಿತ್ರ ಬಿಡಿಸಬೇಕು. ಏನದು ಬಿಸಿಲ ಕಲೆ ಇಲ್ಲಿದೆ ಮಾಹಿತಿ… ಸಕ್ಕತ್ ‘ಕಲಾಕಾರ್’ ಅಂದ್ರೆ ಇವನೇ…! ಹೆಸರು ಜೋರ್ಡಾನ್ ಮ್ಯಾಂಗೋಸಾನ್- ಫಿಲಿಪೈನ್ಸ್‌ನ ನಿವಾಸಿ. ಈತ ಕುಂಚ ಹಿಡಿಯುವುದಿಲ್ಲ. ಪೆನ್ಸಿಲ್, ಪೆನ್, ಬಣ್ಣ-ಸುಣ್ಣ ಏನನ್ನು ಬಳಸದೆ ಚಿತ್ರ ಬಿಡಿಸುತ್ತಾನೆ! ಅಷ್ಟೇ ಅಲ್ಲ ಈಚ ಚಿತ್ರವನ್ನೂ ಮುಟ್ಟುವುದಿಲ್ಲ. ಅದು ಹೇಗೆ ಸಾಧ್ಯ?
ಭೂತಗಾಜಿನಲ್ಲಿ ಸೂರ್ಯ ಕಿರಣಗಳ ಸೆರೆಹಿಡಿದು ಹಲಗೆಗಳ ಮೇಲೆ ಇಳಿಸುತ್ತಾನೆ. ಈ ಶಾಖಕ್ಕೆ ಹಲಗೆ ಸುಡುತ್ತಾ ಹೋಗುತ್ತದೆ. ಹಾಗೆ ಸುಟ್ಟೇ ಕಲೆ ಅರಳಿಸುತ್ತಾನೆ. ಅಪರಿಮಿತ ಜಾಣ್ಮೆ, ತಾಳ್ಮೆ ಜತೆಗೆ ಬಿಸಿಲು ಎದುರಿಸುವ ತಾಕತ್ತು ಎಲ್ಲವೂ ಇದ್ದಲ್ಲಿ ಮಾತ್ರ ಈ ಕಲೆ ಒಲಿದು ಬಂದೀತು. ಒಂದೊಂದು ಚಿತ್ರ ರಚಿಸಲು ೬-೭ತಿಂಗಳು ಬೇಕಂತೆ. ಜಗದ ಸೋಜಿಗ ಎಂದರೆ ಇವನೇ… ವಿಶ್ವಕ್ಕೆ ಈತನೇ ‘ಸೋಲಾರ್ ಆರ್ಟ್’ ನ ಸಂಸ್ಥಾಪಕ. ಇವನು ಹುಟ್‌ಕಲಾವಿದ ಅಲ್ಲದಿದ್ದರೂ ಸುಟ್‌ಕಲಾವಿದ ಎನ್ನಲು ಅಡ್ಡಿಯಿಲ್ಲ. ಈತನ ಬಿಸಿಲ್ಗಲೆಗೆ ಕೋಟ್ಯಾಂತರ ರೂಪಾಯಿಗಳ ಮೌಲ್ಯವಿದೆ. ‘ಸಾವಿರಕೆ ಒಬ್ಬ ಕಲಾವಿದಾ…’ ಎಂದು ಲತಾ ಹಂಸಲೇಖ ಹಾಡಿದ್ದು ಅದನ್ನು ತಿದ್ದು ‘ವಿಶ್ವಕ್ಕೇ ಒಬ್ಬನೇ ಬಿಸಿಲಕಲಾವಿದ…’ ಎಂದು ಹಾಡಬೇಕಾದೀತು.
ಸಕ್ಕತ್ ‘ತೋಳ’
ರಷ್ಯಾ ದೇಶದ ಕ್ರಿಲ್ ಥೆರ್‍ಶಿನ್ ಸಾಧಾರಣ ಮಾನವನಾಗಿದ್ದರೂ ಅಸಾಧಾರಣ ತೋಳುಗಳಿಸಿದ್ದಾನೆ. ನಮ್ಮ ಪೈಲ್ವಾನರು ಈತನ ತೋಳುಗಳನ್ನು ನೋಡಿಯೇ ಆನಂದ ಪಡಬಹುದು. ಅಂತಹ ‘ತೋಳ’ ಇವನು. ಭಾರಿ ಕಸರತ್ತು ಮಾಡಿರಬೇಕು? ಇಲ್ಲ. ಅಧಿಕ ಪ್ರೊಟೀನ್ ಅಂಶಗಳುಳ್ಳ ‘ಸಿಂಥೋಲ್’ ಅನ್ನು ತನ್ನ ಭುಜಗಳಿಗೆ ಚುಚ್ಚಿಕೊಳ್ಳಲು ಆರಂಭಿಸಿದ. ದಿನ ನಿತ್ಯ ಕಸರತ್ತು ಬಿಟ್ಟು ಇಂಜಕ್ಷನ್ ಚುಚ್ಚಿಕೊಳ್ಳುವುದೇ ಇವನ ವ್ಯಾಯಾಮವಾಗಿರಬೇಕು. ಸ್ವಲ್ಪ ಸ್ವಲ್ಪವೇ ತೋಳು ಊದತೊಡಗಿತು. ಸಿಂಥೋಲ್ ಪ್ರಮಾಣವನ್ನು ಲೀಟರ್‌ಗೆ ಹೆಚ್ಚಿಸಿದ. ಜ್ವರ, ಅನಾರೋಗ್ಯ ಬಾಧಿಸಿತು. ಛಲ ಬಿಡದೆ ಚಿಕಿತ್ಸೆ ಮುಂದುವರೆಸಿದ. ಈಗ ತೊಳಲಾಟವಿಲ್ಲದ ‘ತೋಳ’ದ ಆಸಾಮಿಯಾಗಿದ್ದಾನೆ.
‘ಕಸರತ್ತಿನ ಮೂಲಕ ಗಳಿಸಿದ್ದೇ ಉಳಿಯದು. ಇಂಜಕ್ಶನ್‌ಗಳಿಗೆ ಉಳಿದೀತೇ?’ ಖಂಡಿತ ಇಲ್ಲ. ವೈದ್ಯರ ಸಲಹೆಯಿಲ್ಲದೆ ಇಂತಹ ಪ್ರಯೋಗ ಸರಿಯಲ್ಲ. ಅತ್ಯಂತ ಅಪಾಯಕಾರಿ. ಇರುವುದೊಂದೇ ಪ್ರಾಣ ಎಂಬುದು ನೆನಪಿರಲಿ. ಅಂದಹಾಗೆ ಈ ನಕಲಿ ತೋಳ್ಬಲದ ಆಸಾಮಿಗಳನ್ನು ‘ಪೊಪ್ಪಾಯ’ ಎಂಬ ಅಡ್ಡನಾಮದಿಂದಲೂ ಕರೆಯಲಾಗುತ್ತದೆ. ನಮ್ಮ ನಾಡಿಗೆ ಬಂದರೆ? ‘ತೋಳ ಬಂತು ತೋಳ’ ಎಂಬ ಗೇಲಿಗೊಳಗಾಗಬಹುದು.
ಹೈಟೆಕ್ ಜೋಪಡಿ
ಚಿಕ್ಕಮಕ್ಕಳು ಗೂಡು ಕಟ್ಟಿಕೊಂಡು ಆಡುತ್ತಾರಲ್ಲಾ ಅದೇ ಈಗ ದೊಡ್ಡವರ ಪಾಡು. ಏನದು ಪಡಬೇಕಾದ ಪಾಡು ಎಂದರೇ… ಇದು ಪಾಸ್‌ಪಾಡ್- ಏಕೆಂದರೆ ಕೆಲಸದ ಒತ್ತಡ ಹೆಚ್ಚಾದಾಗ, ಧ್ಯಾನ ಮಾಡಲು, ನಿದ್ದೆ ಬಂದಾಗ ಮಲಗಲು, ಕತ್ತಲಿನ ವಾತಾವರಣದಲ್ಲಿ ಮನಸ್ಸು ಹಗುರ ಮಾಡಿಕೊಳ್ಳಲು ಸಲೀಸು. ಬಾಸ್ ಒಪ್ಪಿದರೆ ಕಚೇರಿಗೂ ಇದು ಉತ್ತಮ. ಬೇಡವೆನಿಸಿದರೆ ವಿಹಾರಕ್ಕೆ ತೆರಳಿದಾಗ ಅಲ್ಲಿಯು ಇದನ್ನು ಬಳಸಬಹುದು. ಮನೆಯ ಅಂಗಳದಲ್ಲಿ ಹೀಗೆ ಎಲ್ಲೆಂದರಲ್ಲಿ ಉಪಯೋಗಿಸಬಹುದು. ಹೆಚ್ಚಾಗಿ ಇದು ಬಳಕೆಯಾಗುತ್ತಿರುವುದು ಕಚೇರಿಗಳಲ್ಲಿ ನೋಡಲು ಪುಟ್ಟ ಗುಡಿಸಲು, ಗೂಡಾದರೂ…ಪುಟ್ಟ ಗೂಡಾದರೂ ಮೊಬೈಲ್ ಚಾರ್ಜಿಂಗ್, ರೀಡಿಂಗ್ ಲ್ಯಾಂಪ್, ಟ್ಯಾಬ್ಲೆಟ್ ತೂಗಿಹಾಕಲು ಕೊಕ್ಕೆ ಎಲ್ಲವೂ ಇದೆ. ಸ್ವೀಡನ್ ಸಂಶೋಧಕರ ಈ ಪಾಸ್‌ಪಾಡ್‌ನ ಬೆಲೆ ೧೦ ಸಾವಿರ ಡಾಲರ್‌ಗಳು…
‘ಜೋಗಿ ಬಿಟ್ಟಲೇ ಬೀಡು’… ಅಂತಾರಲ್ಲಾ ರೀ… ಹಾಗೆ ಈ ಪಾಸ್‌ಪಾಡ್. ಸುಲಭವಾಗಿ ಮಡಚಿ ಒಯ್ಯಬಹುದು. ಹೆಚ್ಚು ಭಾರವಿಲ್ಲ. ಕೊಳ್ಳುಗರಿಗೆ ಮಾತ್ರ ಇದು ಬಲು ಭಾರ. ನಮ್ಮ ಸರ್ಕಾರದ, ಬಿಬಿಎಂಪಿ ಕಚೇರಿಗಳಲ್ಲೂ ಇದರ ಬಳಕೆ ಬಂದರೆ ಹೇಗೆ? ಬೇಡ… ಇಲ್ಲಿರುವ ನಮ್ಮ ಅಧಿಕಾರಿಗಳ ಕುರ್ಚಿಗಳೇ ಪಾಸ್‌ಪಾಡ್‌ಗಿಂತಲೂ ಉತ್ತಮ. ಇದರಲ್ಲಿ ಕೂತಲ್ಲಿ ತೂಕಡಿಕೆ, ನೆಮ್ಮದಿ, ಲಂಚದ ಹಣ ಎಲ್ಲವೂ ಬರಲಿದೆ. ಈ ಕುರ್ಚಿಗಳನ್ನೇ ಸ್ವೀಡನ್‌ಗೆ ಕಳುಹಿಸುವುದು ಲೇಸು!
ಟಾಯ್ಲೆಟ್ ಕೆಫೆ
‘ಶೌಚದಲ್ಲಿ ಉಣ್ಣಬಾರ್‍ದು ; ಉಂಡ ತಕ್ಷಣ ಕಕ್ಕ ಮಾಡಲು ಹೋಗಬಾರ್‍ದು’ ಅನ್ನುವ ಮಾತು ನಮ್ಮಲ್ಲಿದೆ. ಆದರೆ ಈ ಹೋಟೆಲ್‌ಗೆ ತೆರಳಿದರೆ ಕಮೋಡ್ ಕಟ್ಟೆಯ ಮೇಲೆ ಕೂತು ಉಣ್ಣಬೇಕು. ಕೂರುವ ಪೀಠೋಪಕರಣಗಳು, ಸಿದ್ದ ಪಡಿಸಿದ ಅಡುಗೆ ಸಂಗ್ರಹಿಸಿಡುವ ಪಾತ್ರೆಗಳು, ಸೂಪ್‌ನ ಕಪ್‌ಗಳು ಇವೆಲ್ಲಾ ಕಮೋಡ್ ಆಕಾರದಲ್ಲಿವೆ. ಸೇವಿಸಲು ನೀಡುವ ಐಸ್‌ಕ್ರೀಮ್, ಚಿಕನ್, ಬನ್ ಹೀಗೆ ಹಲವು ತಿನಿಸುಗಳು ‘ಸೂಸು’ ರೀತಿಯಲ್ಲಿರಲಿವೆ. ಥೂ… ಇಂಥಹ ಹೋಟೆಲ್‌ಗೆ ಯಾರು ಬರುತ್ತಾರೆ? ಇಲ್ಲೇ ನೀವು ತಪ್ಪು ಊಹೆ ಮಾಡಿರುವುದು! ರೇಟ್ ದುಭಾರಿಯಾಗಿವೆ. ಆದರೂ ಜನ ಮುಗಿಬಿದ್ದು ಬರುತ್ತಿದ್ದಾರೆ. ರಷ್ಯಾದ ಮಾಸ್ಕೋ ನಗರದ ಅರಬಾಟ್ ರಸ್ತೆಯ ‘ಕ್ರೇಜಿ ಟಾಯ್ಲೆಟ್ ಕೆಫೆ’ ಸ್ಥಾನಿಯರನ್ನು ಹುಚ್ಚೆಬ್ಬಿಸಿದೆ.
ಇಂಥಹ ‘ಹೇಸಿಗೆ’ ತಿನ್ನಲು ಅಲ್ಲಿಗೇಕೆ ತೆರಳುತ್ತೀರಿ. ನಮ್ಮಲ್ಲೂ ಬನ್ನಿ… ಎಂದು ಇಂಡೋನೇಷ್ಯದವರೂ ಆರಂಭಿಸಿದ್ದಾರೆ. ಜಾಂಬಾ ಕೆಫೆ ಹೆಸರಿನ ಈ ಹೋಟೆಲ್‌ಗೆ ಜನ ಜಂಭದಿಂದಲೇ ಬರುತ್ತಿದ್ದಾರೆ. ಕಂಟಕ ಇಲ್ಲ-ಸಂಕಟವಿಲ್ಲ, ಆದರೂ (ಹುಚ್ಚ) ವೆಂಕಟ ಅನ್ನೋರಿಗೆ ಈ ಹೋಟೆಲ್ ಸೂಕ್ತವಾದೀತು. ನಮ್ಮಲ್ಲೂ ಇಂತಹ ಹೋಟೆಲ್‌ಗಳು ಬಂದರೆ… ಅಂತಹ ಹೋಟೆಲ್‌ಗಳಿಗೆ ಏನೆಂದು ಹೆಸರಿಸಬಹುದು? ಅಡಿಗಾಸ್ ‘ವೇಸ್ಟ್ ಫುಡ್’!
ಪ್ಲಾಸ್ಟಿಕ್ ಮ್ಯಾನ್!
ಕಾಡುತ್ತಿರುವ ಮಾಲಿನ್ಯಕ್ಕೆ ಪ್ಲಾಸ್ಟಿಕ್‌ನ ಕೊಡುಗೆ ಅಪಾರ. ಸೃಷ್ಟಿಸಿದ ಪ್ಲಾಸ್ಟಿಕ್‌ನ ನಾಶ ಸುಲಭವಲ್ಲ. ಸುಟ್ಟು ಬೂದಿ ಮಾಡಿದರೆ ಅಪರಿಮಿತ ವಿಷಯುಕ್ತ ಹೊಗೆ ಸೃಷ್ಟಿಯಾಗಲಿದೆ. ಲಭ್ಯವಾದ ಬೂದಿಯೂ ವಿಷವೇ! ಮತ್ತೇನು ಮಾಡುವುದು ಪ್ಲಾಸ್ಟಿಕ್‌ನ? ಪ್ಲಾಸ್ಟಿಕ್ ಮರುಬಳಕೆ ಸುಲಭ. ಆಗಲೂ ಅದಕ್ಕೆ ಬೆಂಕಿ ಸೋಕಿಸಿ ಮಾಡಲೇಬೇಕು. ರಸ್ತೆ ನಿರ್ಮಾಣಕ್ಕೆ ಬಳಸುವುದರಿಂದ ಅನುಕೂಲ ಎಂದು ತರ್ಕಿಸಲಾಯಿತು. ಮಧುರೈನ ತ್ಯಾಗರಾಜ ಕಾಲೇಜ್ ಆಫ್ ಎಂಜಿನಿಯರಿಂಗ್‌ನಲ್ಲಿ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿರುವ ವಾಸುದೇವನ್ ಈ ಕಲ್ಪನೆಯ ರುವಾರಿ. ಇವರು ಟಾರ್ ಅರೆಯುವಾಗ ಪ್ಲಾಸ್ಟಿಕ್ ಸೇರಿಸಿ ಟಾರ್ ಅರೆದು ರಸ್ತೆಗೆ ಬಳಸಬಹುದೆಂದು ಸಂಶೋಧಿಸಿ ನುಡಿದರು. ಪ್ಲಾಸ್ಟಕ್ ಕವರ್‌ಗಳು, ಬಿಸ್ಕತ್ತಿಗೆ ಸುತ್ತಿದ ಪ್ಲಾಸ್ಟಿಕ್ ಹಾಳೆ, ಪ್ಲಾಸ್ಟಿಕ್ ಬಾಟಲಿ…ಇವೆಲ್ಲಾ ನಮ್ಮ ಕಸದ ಭಾಗವಾಗಿದ್ದು ಇವುಗಳಿಂದ ಅರೆದು ನಿರ್ಮಿಸಿದ ರಸ್ತೆಗಳು ಬಹುಬಾಳಕೆ ಬರುತ್ತವೆ. ನೀರು, ಬಿಸಿಲು ಗಾಳಿಗೂ ಕುಗ್ಗದೆಂದರು. ಅಂದಿನ ತಮಿಳುನಾಡಿನ ಜಯಲಲಿತಾ ಇವರ ಕಲ್ಪನೆಗೆ ರೆಕ್ಕೆಯಾದರೆ ಭಾರತ ಸರ್ಕಾರವೂ ಇವರ ನಿರ್ಧಾರಕ್ಕೆ ಜೈ ಹೊ ಎಂದಿತು. ನೆರೆಯ ಪಾಕ್, ಇಂಡೋನೇಷ್ಯಾ ಕೂಡ ಇವರ ಐಡಿಯವನ್ನು ಅನುಕರಿಸುತ್ತಿವೆ. ಭಾರತ ಸರ್ಕಾರದ ಪದ್ಮಪ್ರಶಸ್ತಿಗಳಿಸಿರುವ ವಾಸುದೇವನ್ ದೇಶದ ಪ್ಲಾಸ್ಟಿಕ್ ಮ್ಯಾನ್ ಎಂಬ ಹೆಗ್ಗಳಿಕೆಗೆ ಪಾತ್ರರು.
ಕುತ್ತಿಗೆ ಜಗ್ಗಾಟ
ಅವನ ಕುತ್ತಿಗೆ ಇವನು ಎಳೆಯುತ್ತಾನೆ… ಇವನ ಕುತ್ತಿಗೆ ಅವನು ಎಳೆದಯುತ್ತಾನೆಂದರೆ ಏನಿದು? ರಾಜಕಾರಣ… ಆಟ ಎನ್ನಲು ಅಡ್ಡಿಯಿಲ್ಲ. ತಾ’ಕತ್ತು’ ತೋರುವ ‘ಗೋಅನಾ ಪುಲ್ಲಿಂಗ್’ ಆಟವಿದು. ಸ್ಪರ್ಧಿಗಳಿಬ್ಬರನ್ನು ಗೋ ಅನಾ ಟೇಬಲ್ ಮೇಲೆ ಮಲಗಿಸಿ ಚೈನ್ ಬಿಗಿಯುತ್ತಾರೆ. ಇಬ್ಬರೂ ಪರಸ್ಪರ ಎಳೆದಾಡಬೇಕು. ಕೈ ಜಾರಿದರೇ, ಬಿದ್ದರೆ, ಅಥವಾ ನಿಶ್ಚಿತ ಬೌಂಡರಿ ಮೀರಿದವ ಔಟ್. ಪುರುಷರ ಹೆವಿವೈಟ್ ಅಂದರೆ ೯೫ ಕೆ.ಜಿ. ದಾಟಿದವರು, ಮಿಡ್ಲ್ ವೈಟ್ ೮೨ರಿಂದ ೯೪ ಕೆ.ಜಿ.ಗಳು, ೬೩ರಿಂದ ೮೧ ಕೆ.ಜಿ. ಹೀಗೆ ೩ ವಿಧಗಳಲ್ಲಿ ಕುತ್ತಿಗೆ ಜಗ್ಗಾಟ ನಡೆಯಲಿದೆ. ಅವರಿಗೂ ಇದೇ ರೀತಿ ೩ ವಿಭಾಗದ ಸ್ಪರ್ಧೆ… ಬಹುಮಾನ ಎಲ್ಲವೂ ಇರಲಿದೆ. ಕತ್ತು ಗಟ್ಟಿಗಿದ್ದು ಆಡುವ-ನೋಡುವ ಅಪೇಕ್ಷೆ ಇದ್ದವರು. ಆಸ್ಟ್ರೇಲಿಯಕ್ಕೆ ತೆರಳಬೇಕು. ಸ್ಪಾಂಡಿಲೈಸಿಸ್ ಅಂದರೆ ಕುತ್ತಿಗೆ ನೋವು ಇದ್ದವರು
ಈ ಚಿತ್ರ ನೋಡಿದರೆ ಸಾಕಾದೀತು. ಗಂಡು ಮತ್ತು ಹೆಣ್ಣು ಇಬ್ಬರೂ ಸೇರಿ ಆಡುವ ಮಿಕ್ಸಡ್ ಸಿಂಗಲ್ಸ್ ಇರುವುದಿಲ್ಲವಾ…. ನೋಡಲು ಚೆನ್ನಾಗಿರುತ್ತದೆ. ಇಂಥ ಆಟ ಆಡಿಸಿದರೆ ಗಂಡು ಸೋಲುವ ಸಂಭವಗಳೇ ಹೆಚ್ಚಿರಲಿದೆ! ಹೆಣ್ಣೇ ಗೆದ್ದಾಳು…. ಅದರಲ್ಲೂ ಆಕೆ ಆಟವಾಡುವಾಗ ತನ್ನ ರವಿಕೆ ಮೇಲಿನ ೧-೨ ಗುಂಡಿಗಳನ್ನು ಹಾಕಿಲ್ಲವಾದಲ್ಲಿ ಖಂಡಿತ ಎದುರಾಳಿ ಗಂಡು ಸೋಲುವುದು ಖಚಿತ. ‘ಗೋ ಅನಾ’ ಒಂದು ಜಾತಿಯ ಹಲ್ಲಿ. ಅದೇ ಹೆಸರನ್ನು ಈ ಕ್ರೀಡೆಗೆ ಇಡಲಾಗಿದೆ…ಆದರೆ ಹಲ್ಲಿಗಳು ಹುಲುಮಾನವರಂತೆ ಕಾದಾಡುವುದಿಲ್ಲ ಎಂಬುದು ಖರೇ.
ರೋಬೋ ಕಾಪ್ಸ್…
ರಸ್ತೆಯ ಮಧ್ಯದಲ್ಲೇಕೆ ಬೆದರು ಬೊಂಬೆ ಎಂದು ಯೋಚಿಸದೆ ಮುಂದೆ ಓದಿ…ರೊಬೋ ಕಾಪ್ಸ್ ಹೆಸರಿನ ರೋಬೋವಿದು. ಆಜಾನುಬಾಹುಗಳೂ ಹೌದು. ವಾಹನದಟ್ಟಣೆ ಇರುವೆಡೆ ಟ್ರಾಫಿಕ್ ಪೊಲೀಸ್ ಮತ್ತು ಸಿಗ್ನಲ್ ದೀಪಗಳಂತೆ ದ್ವಂದ್ವ ಕಾರ್ಯಗಳನ್ನು ನಿರ್ವಹಿಸುತ್ತದೆ. ಸುಲಭವಾಗಿ ವೃತ್ತದಿಂದ ವೃತ್ತಕ್ಕೆ ಸಾಗಿಸಬಹುದು. ವಾಹನ ದಟ್ಟಣೆ ಇರುವ ಜಾಗದಲ್ಲಿ ಈ ಬೊಂಬೆಯನ್ನು ನಿಲ್ಲಿಸಿ ಸಂಚಾರ ಸಮಸ್ಯೆ ನೀಗಿಸಬಹುದು.
ಇವು ನಿಂತಲ್ಲೇ ಸಂದರ್ಭಕ್ಕೆ ತಕ್ಕಂತೆ ತಿರುಗುತ್ತವೆ. ಕ್ಯಾಮರಾ ಕೂಡ ಅಳವಡಿಸಿದ್ದು, ಸಿಗ್ನಲ್ ಜಂಪ್ ಆದವರ ಪತ್ತೆಗೂ ನೆರವಾಗಲಿದೆ. ಗಲಭೆ-ಗದ್ದಲಗಳನ್ನು ಸೃಷ್ಟಿಸುವವರೂ ಇದರಲ್ಲಿ ‘ಸೆರೆ’ಯಾಗಲಿದ್ದಾರೆ. ವಾಹನಗಳ ಭಯವಿಲ್ಲ. ಜೀವದ ಹಂಗಿಲ್ಲ. ಹೊಗೆ, ಧೂಳು, ಕಲ್ಮಶಗಳ ಅಲರ್ಜಿ ಇಲ್ಲ….ಆಳೆತ್ತರದ ರೋಬೋ ಕಾಪ್ಸ್‌ಗಳನ್ನು ಹಿಂದುಳಿದ ದೇಶ, ಕಗ್ಗತಲ ಖಂಡ ಆಫ್ರಿಕಾದ ಕಿನ್‌ಶಾಸ ಪ್ರಾಂತ್ಯದ ವೃತ್ತಗಳಲ್ಲಿ ಗೋಚರಿಸುತ್ತಿದೆ. ಆದರೆ ಸಿಲಿಕನ್ ಸಿಟಿ, ಐಟಿ-ಬಿಟಿ ಸಿಟಿ ಎಂದೆಲ್ಲಾ ಕರೆಸಿಕೊಳ್ಳುವ ಬೆಂಗಳೂರಿನಲ್ಲಿ ಮಾತ್ರ ಗೋಚರಿಸಿಲ್ಲ. ಬೇಸರದ ಸಂಗತಿ ಎಂದರೆ ನಮ್ಮ ಪೊಲೀಸರಂತೆ ಭತ್ಯೆ ಕೇಳುವುದಿಲ್ಲ. ಲಂಚಕ್ಕೆ ಕೈ ಒಡ್ಡುವುದಿಲ್ಲ. ನಮ್ಮಲ್ಲೂ ಇವುಗಳನ್ನು ಕರೆತರಬೇಕೆ? ತಂದರೆ ಅಧಿಕಾರಸ್ಥರಿಗೆ, ರಾಜಕಾರಣಿಗಳಿಗೆ ಬೇಜಾನ್ ‘ಇನ್‌ಕಂ’, ನಮ್ಮ ಪೊಲೀಸರಿಗೆ ಹೆವಿ ಲಾಸ್ ಆಗುವ ಸಾಧ್ಯತೆಗಳು ಹೆಚ್ಚು!
ಕಿಲ್ಲಿಂಗ್ ಸೌಂಡ್!
ಕಿಲ್ಲಿಂಗ್ ಸೌಂಡ್ ಅಂದ್ರೆ ಇದೇ… ಇದರ ಗಡಚಿಕ್ಕುವ ಶಬ್ದಕ್ಕೆ ಸಾವು ಖಚಿತ. ೧೫೪ಗೂ ಅಧಿಕ ಡೆಸಿಬಲ್‌ಗಳಷ್ಟು ರೌದ್ರವ ಧ್ವನಿಯನ್ನು ಇವು ಹೊರಸೂಸುತ್ತದೆ. ಕರ್ಣಗಳಿಗೆ ಕಠೋರ-ಹೃದಯಕ್ಕೆ ಭಾರ ಹಾಗೂ ಹಲವು ಅಂಗಾಂಗಳ ವೈಫಲ್ಯವಾಗಿ ಕಿವಿ, ಬಾಯಲ್ಲಿ ರಕ್ತ ಕಾರಿಕೊಂಡು ಯಮಪುರಿ ತಲುಪಬೇಕಾಗುತ್ತದೆ. ಇದೇನು ಮನುಷ್ಯರನ್ನು/ಮೃಗಗಳನ್ನು ಕೊಲ್ಲುವ ಕಸಾಯಿ ಖಾನೆಗಳೇ? ಅಲ್ಲಾ ರೀ… ರಾಕೆಟ್‌ಗಳ ಉಢಾವಣೆಯ ವೇಳೆ ಭಾರಿ ಸದ್ದು ಉಂಟಾಗುತ್ತದೆ. ರಾಕೆಟ್‌ಗಳ ಉಢಾವಣೆ ಮಾಡುವ ಮೊದಲು ಅವುಗಳನ್ನು ಸೌಂಡ್ ಟೆಸ್ಟ್ ಚೇಂಬರ್‌ಗಳಲ್ಲಿ ಪರೀಕ್ಷೆಗೊಳಪಡಿಸಲಾಗುತ್ತದೆ. ೧೬.೪ಮೀಟರ್ ಎತ್ತರ, ೧೧.೪ ಮೀಟರ್‌ಗಳಷ್ಟು ಅಗಲ ಹಾಗೂ ೯ ಮೀಟರ್‌ಗಳಷ್ಟು ಆಳದಲ್ಲಿ ಈ ಟೆಸ್ಟ್ ಸಾಗಲಿದೆ. ರಾಕೆಟ್‌ಗಳಲ್ಲಿ ಅಳವಡಿಸಿರುವ ಉಪಕರಣಗಳಲ್ಲಿ ನೈಟ್ರೋಜನ್ ಗ್ಯಾಸ್ ಚಿಮ್ಮಿ ಹೊರಬರುತ್ತದೆ. ಆಗ ಅಪರಿಮಿತ ಧ್ವನಿ ಚಿಮ್ಮುತ್ತದೆ. ಈ ಸಿಸ್ಟಂನ್ನು ಯುರೋಪಿಯನ್ ಸ್ಪೇಸ್ ಏಜೆನ್ಸಿಯಲ್ಲಿ ಕಾಣಲು ಸಾಧ್ಯ.
ಅರೆ ರಾಕೆಟ್ ವಿಷಯ ಬಿಡ್ರೀ… ಈ ಟಿಯರ್ ಗ್ಯಾಸ್, ಗುಂಡು ಹೊಡೆಯುವುದು ಬಿಟ್ಟು ಇದನ್ನು ಅಸ್ತ್ರವನ್ನಾಗಿ ಬಳಸಿಕೊಂಡು ಭಯೋತ್ಪಾದಕರು, ಗಲಭೆಕೋರರು ಹಾಗೂ ನಕ್ಸಲರನ್ನು ಸದೆ ಬಡಿಯಲು ಬಳಸಿಕೊಳ್ಳಬಹುದಲ್ಲವೇ? ಹೌದು. ಪ್ರಯೋಗಗಳು ನಡೆಯುತ್ತಿವೆ. ಯಶಸ್ವಿಯಾಗುವ ಎಲ್ಲಾ ಸಂಭವಗಳು ಇವೆ. ಏನೇ ಪ್ರಯೋಗ ಮಾಡಬಹುದು ರೀ… ರಾಕೆಟ್ ಉಢಾವಣಾ ಕೇಂದ್ರದ ಹೊರತಾಗಿ ಬೇರೆ ಎಲ್ಲಾದರೂ ಕಿವಿಗಡಚ್ಚಿಕ್ಕು ಕೇಂದ್ರವಿರಲು ಸಾಧ್ಯವೇ ಇಲ್ಲ ಅಲ್ಲವೇ? ಇದೆ. ನಮ್ಮ ಮಹಿಳಾಮಂಡಳಿಯ ಸಭೆಗಳಲ್ಲಿ ಹೆಚ್ಚಿನ ಶಬ್ದೋತ್ಪಾದನೆ ಕೇಳಬಹುದು!