ಈ ವರ್ಷದ ಮಹಾ ಶಿವರಾತ್ರಿ ಸಂಪನ್ನಗೊಂಡಿದೆ. ಭಾರತ ಧಾರ್ಮಿಕ ನಂಬಿಕೆಯನ್ನೇ ಉಸಿರಾಗಿಸಿಕೊಂಡಿರೋ ಅಪರೂಪದ ದೇಶ. ಖಂಡಿತವಾಗಿಯೂ ಇಷ್ಟೊಂದು ಆಳವಾದ, ವಿಸ್ತಾರವಾದ ನಂಬಿಕೆಗಳನ್ನು ಹೊಂದಿರುವ ಬೇರೊಂದು ದೇಶ ಈ ಜನಗತ್ತಿನಲ್ಲಿ ಇರಲಿಕ್ಕಿಲ್ಲ. ಇಲ್ಲಿ ಹತ್ತಾರು ತೆರನಾದ ಹಬ್ಬ ಹರಿ ದಿನಗಳಿದ್ದಾವೆ. ಅವೆಲ್ಲವಕ್ಕೂ ಅತ್ಯಂತ ನಿಖರವಾದ, ಕರಾರುವಾಕ್ಕಾದ ಪುರಾಣ ಕಥೆಗಳೂ ಇವೆ. ನಮ್ಮ ನಂಬಿಕೆಗಳಲ್ಲಿ ಹಲವಾರು ದೇವರುಗಳಿದ್ದಾರೆ. ಆ ಪ್ರತೀ ದೇವರ ಸುತ್ತಲೂ ನಾನಾ ಅವತಾರಗಳ ಕಥನಗಳಿದ್ದಾವೆ. ಅದೆಲ್ಲದರಲ್ಲಿ ಭಿನ್ನವಾಗಿ ಕಾಣಿಸುವಾತ ಶಿವ. ಶಿವನೆಂಬೋ ಶಕ್ತಿಯನ್ನು ನಾನಾ ಸ್ವರೂಪಗಳಲ್ಲಿ ಆರಾಧಿಸಲಾಗುತ್ತದೆ. ಪ್ರಾಮಾಣಿಕವಾದ ಶ್ರದ್ಧೆ ಭಕ್ತಿಗಳಿಗೆ ಒಲಿಯುವ ದೇವರೆಂಬ ವಿಶೇಷಣವೂ ಶಿವನಿಗಿದೆ.
ಮಹಾಕಾಲ ಎಂಬುದೂ ಸೇರಿದಂತೆ ಅನೇಕಾನೇಕ ಹೆಸರುಗಳು, ಅವತಾರದಲ್ಲಿರುವ ಶಿವ ಮೇಲು ನೋಟಕ್ಕೆ ರುಧ್ರ ಭಯಂಕರನಾಗಿ ಕಾಣಿಸೋದಿದೆ. ಆದರೆ ಭಕ್ತರ ಮುಂದೆ ಮಗುವಿನಂತೆ ಒಲಿದು ನಿಲ್ಲುವ ಶಿವನೆಂದರೆ ಆಪ್ತ ಭಾವ ಮೂಡಿಕೊಳ್ಳುತ್ತೆ. ಶಿವನ ರೌಧ್ರಾವತಾರಗಳ ಘೋರ ಕಥನಗಳು ನಮಗೇನೂ ಹೊಸತಲ್ಲ. ವಿಶೇಷವೆಂದರೆ, ಅಂಥಾ ರೌಧ್ರ ಕಥನಗಳೆಲ್ಲವೂ ಭಯ ಹುಟ್ಟಿಸುವ ಬದಲು ಶಿವನತ್ತ ಒಂದು ಆಪ್ತ ಭಾವ ಮೂಡಿಕೊಳ್ಳುವಂತೆ ಮಾಡಿ ಬಿಟ್ಟಿದೆ. ಭಕ್ತಿಯೊಂದನ್ನು ಮಾತ್ರವೇ ಮಾನದಂಡವಾಗಿಸಿಕೊಂಡಿರುವ ಶಿವ ರಕ್ಕಸರಿಗೂ ಕರುಣೆ ತೋರಿದ ಉದಾಹರಣೆಗಳಿವೆ. ಅಂಥಾ ಭಕ್ತಿ ಕುಯುಕ್ತಿಯಾಗಿ ಮೇರೆ ಮೀರಿದಾಗ ರುದ್ರತಾಂಡವವಾಡಿ ಅಂತ್ಯ ಹಾಡಿದ ಕಥನಗಳೂ ಇದ್ದಾವೆ. ಇಂಥಾ ವೈವಿಧ್ಯಮಯ ಶಕ್ತಿಯಾದ ಶಿವನನ್ನು ಆರಾಧಿಸುವ ಮಹಾ ಶಿವರಾತ್ರಿ ಹಬ್ಬ ಹಿಂದೂ ಸಂಪ್ರದಾಯದಲ್ಲಿ ಅತ್ಯಂತ ಮಹತ್ವ ಪಡೆದುಕೊಂಡಿದೆ. ಈ ಮಹಾ ಶಿವರಾತ್ರಿಯ ಸುಸಂದರ್ಭದಲ್ಲಿ ನಮ್ಮ ದೇಶಾದ್ಯಂತ ಹಬ್ಬಿಕೊಂಡಿರುವ ಅಪರೂಪದ ಶಿವನ ದೇವಸ್ಥಾನಗಳನ್ನು ಪರಿಚಯ ಮಾಡಿಕೊಳ್ಳುವುದೂ ಕೂಡಾ ಒಂದು ಪುಣ್ಯದ ಸಂಗತಿ!
ಶಕ್ತಿ ಶಿವ
ಶಿವನೆಂದರೆ ಅದೊಂದು ರೀತಿಯ ಬೆಚ್ಚಗಿನ ಭಾವ ಪ್ರತೀ ಭಕ್ತರಲ್ಲಿಯೂ ಮೂಡಿಕೊಳ್ಳುತ್ತೆ. ಈವತ್ತಿಗೆ ಕಲಿಯುಗ ಆವರಿಸಿಕೊಂಡು ಜನರ ಬದುಕಿನ ದಿಕ್ಕು ದೆಸೆಗಳೇ ಬದಲಾಗಿವೆ. ದೇವರೆಂಬ ವ್ಯಾಖ್ಯಾನ ಕೂಡಾ ಅವರವರ ಭಾವಕ್ಕೆ ತಕ್ಕುದಾಗಿಯಷ್ಟೇ ದಕ್ಕುತ್ತಿದೆ. ಅದೆಂಥಾದ್ದೇ ಮೋಸ ವಂಚನೆ ಮಾಡಿ ಹುಂಡಿಗೊಂದಿಷ್ಟು ಕಾಸು ಹಾಕಿದರೆ ಪಾಪ ವಿಮೋಚನೆ ಆಗುತ್ತದೆಂಬಂಥಾ ಅನಾಹುತಕಾರಿ ನಂಬಿಕೆಗೆ ಬಹುತೇಕರು ಪಕ್ಕಾಗಿದ್ದಾರೆ. ಇಂಥಾ ವಾತಾವರಣದಲ್ಲಿಯೂ ಕೂಡಾ ಶಿವನ ಪ್ರಭೆಯ ಮುಂದೆ ಮನುಷ್ಯ ಮಾತ್ರರ ಯಾವ ಆಟಗಳೂ ನಿಲ್ಲೋದಿಲ್ಲ ಎಂಬಂಥಾ ಗಾಢ ನಂಬಿಕೆಯೊಂದು ಎಲ್ಲರಲ್ಲಿಯೂ ಇದ್ದೇ ಇದೆ. ಕಲಿಯುಗವೇ ತಾಂಡವವಾಡುತ್ತಿರುವ ಈ ಹೊತ್ತಿನಲ್ಲಿಯೂ ಕೂಡಾ ಅಂಥಾದ್ದೊಂದು ನಂಬಿಕೆ ಶಿವನ ಸುತ್ತ ಆಳವಾಗಿ ಬೇರೂರಿಕೊಂಡಿದೆ.
ಒಂದಷ್ಟು ಹಬ್ಬಗಳು ಈ ದೇಶದ ಕೆಲ ಭಾಗಗಳಿಗೆ ಮಾತ್ರವೇ ಸೀಮಿತವಾಗಿರೋದಿದೆ. ಆದರೆ ಮಹಾಕಾಲನ ಮಹಾಶಿವರಾತ್ರಿ ಹಬ್ಬ ಮಾತ್ರ ದೇಶದ ಉದ್ದಗಲಕ್ಕೂ ಹಬ್ಬಿಕೊಂಡಿದೆ. ಭಾರತದ ಅಷ್ಟೂ ರಾಜ್ಯಗಳಲ್ಲಿಯೂ ಕೂಡಾ ಮಹಾ ಶಿವರಾತ್ರಿಯ ಆಚರಣೆಗಳು ಅತ್ಯಂತ ಭಕ್ತಿ ಭಾವಗಳಿಂದ ನೆರವೇರುತ್ತವೆ. ಈ ಹಬ್ಬ ನಾನಾ ರಾಜ್ಯಗಳ, ನಾನಾ ಭೂಭೂಊಗಗಳಲ್ಲಿ ಪ್ರಚಲಿತದಲ್ಲಿರುವ ರೀತಿಯೇ ಅಧ್ಯಯನ ಯೋಗ್ಯವಾದ ಸಂಗತಿ. ಶಿವ ಹೇಳಿಕೇಳಿಒ ಎಲ್ಲರ ಬೊಗಸೆಗೂ ದಕ್ಕುವಂಥಾ ಶಕ್ತಿ. ಶಿವ ಈ ನೆಲದ ಅನೇಕ ಬುಉಡಕಟ್ಟು ಜನಾಂಗಗಳ ಪಾಲಿಗೂ ಆರಾಧ್ಯ ದೈವ. ಬೇರೇನೂ ನೋಡ ಬೇಕಿಲ್ಲ; ಶಿವನ ಶಕ್ತಿ ಮತ್ತು ಆತನ ರೂಪ ನಮ್ಮ ದೇಶದ ತುಂಬೆಲ್ಲ ಹಬ್ಬಿಕೊಂಡಿರುವ ಪರಿಯೇ ಆ ಮಹಾ ಶಕ್ತಿಯ ದ್ಯೋತಕದಂತಿರೋದು ಸುಳ್ಳಲ್ಲ. ಶಿವನೆಂದರೆ ಒಂದು ಕಾಂತಿಯುತ ಸ್ವರೂಪ ನಮ್ಮೊಳಗೆ ಮೂಡಿಕೊಳ್ಳುತ್ತೆ. ಆದರೆ, ಬುಡಕಟ್ಟು ಜನಾಂಗಗಳು ಆರಾಧಿಸುವ ಶಿವನ ರೂಪ ಚಿತ್ರವಿಚಿತ್ರವಾಗಿದೆ. ಅದು ಮಹಾಕಾಲನ ಪ್ರಭೆಯ ಎಲ್ಲೆಯಿಲ್ಲದ ಶಕ್ತಿಗೊಂದು ಪುರಾವೆಯಂತೆ ಕಾಣಿಸುತ್ತದೆ.
ಆತ ಮಾಯಾವಿ!
ಶಿವ ಎಲ್ಲರ ಭಕ್ತಿಗೂ ತಕ್ಕ ಪ್ರತಿಫಲ ನೀಡುವ, ಹೆಜ್ಜೆ ಹೆಜ್ಜೆಗೂ ಅಗೋಚರವಾಗಿ ಕಾಯುವ ಮಹಾ ಶಕ್ತಿ. ಈ ಕಾರಣದಿಂದಲೇ ನಾನಾ ಸ್ವರೂಪಗಳಲ್ಲಿ ಶಿವ ಈ ಭೂಲೋಕದಲ್ಲಿ ನೆಲೆ ನಿಂತಿಒಒದ್ದಾನೆ. ಅಂಥಾ ನೆಲೆಗಳೆಲ್ಲವೂ ದೇಶಾದ್ಯಂತ ಶಿವನ ದೇಗುಲಗಳಾಗಿ ಪ್ರಸಿದ್ಧಿ ಪಡೆದುಕೊಂಡಿವೆ. ಶಿವನನ್ನು ಜ್ಯೋತಿರ್ಲಿಂಗ ರೂಪದಲ್ಲಿ ಫುಜಿಸುವ ಸಾಕಷ್ಟು ದೇವಾಲಯಗಳು ದೇಶದ ಉದ್ದಗಲಕ್ಕೂ ಕಂಡುಬರುತ್ತವೆ. ಹೇಳಿಕೇಳಿ ಪ್ರತಿಯೊಬ್ಬ ಹಿಂದೂ ಧರ್ಮದವರು ಮೋಕ್ಷದಲ್ಲಿ ನಂಬಿಕೆ ಹೊಂದಿದ್ದಾರೆ. ಅದು ಶಿವ ಹಾಗೂ ವಿಷ್ಣುವಿನ ಕೃಪಾಕಟಾಕ್ಷ ದೊರಕಿದಾಗ ಮಾತ್ರವೇ ಸಾಧ್ಯವಾಗುತ್ತದೆ ಎಂಬುದು ಬಹುತೇಕರ ನಂಬಿಕೆ. ಈ ಕಾರಣದಿಂದಲೇ ಶಿವನ ದೇವಾಲಯಗಳಿಗೆ ಭೇಟಿ ನೀಡಲು ಸದಾ ಹಾತೊರೆಯುತ್ತಿರುತ್ತಾರೆ. ಈ ಮೂಲಕ ದೇಶದಲ್ಲಿರುವ ಸಾಕಷ್ಟು ಶಿವನ ದೇವಾಲಯಗಳ ಲ್ಲಿ ಆಯ್ದ ಮಹತ್ವದ ಶಿವ ದೇವಾಲಯಗಳ ಕಿರು ಪರಿಚಯ ಮಾಡಿಸೋ ಅಗತ್ಯವಿದೆ.
ಈ ಶಿವನ ದೇವಾಯಗಳು ಒಂದಕ್ಕಿಂತ ಒಂದು ಭಿನ್ನವಾಗಿವೆ. ಸುಂದರವಾಗಿವೆ. ವಾಸ್ತು ಶಿಲ್ಪ ಕಲೆಯ ದೃಷ್ಟಿಯಿಂದ ಹಿಂದೂ ದೇವಾಲಯಗಳನ್ನು ಗಮನಿಸುವಾಗ ಅಗ್ರಗಣ್ಯ ದೇವಸ್ಥಾನಗಳ ಸಾಲಿನಲ್ಲಿ ತಂಜಾವೂರಿನ ಬೃಹದೇಶ್ವರ ದೇವಸ್ಥಾನ ಪ್ರಧಾನವಾಗಿ ಗಮನ ಸೆಳೆಯುತ್ತದೆ. ಭಾರತದಲ್ಲಿ ಕಂಡುಬರುವ ದೊಡ್ಡ ದೇವಾಲಯಗಳ ಲ್ಲಿ ಒಂದಾಗಿರುವ ಈ ದೇವಸ್ಥಾನ ಸುಮಾರು ಹದಿನಾರನೆ ಶತಮಾನದಲ್ಲಿ ನಿರ್ಮಿಸಿದರೆನ್ನಲಾಗುವ ಕೋಟೆಯ ಗೋಡೆಗಳಿಂದ ಸುತ್ತು ವರೆದಿದೆ. ಈ ದೇವಸ್ಥಾನ ಪುರಾತನ ವಾಸ್ತುಶಾಸ್ತ್ರ ಮತ್ತು ಆಗಮ ಶಾಸ್ತ್ರಗಳ ಬುನಾದಿಯ ಮೇಲೆ ನಿರ್ಮಾಣವಾಗಿದೆ. ಚೋಳರ ಕಾಲದಲ್ಲಿ ರಾಜರಿಂದ ನಿರ್ಮಿಸಲ್ಪಟ್ಟ ಈ ಶಿವನ ದೇವಾಲಯ ತಮಿಳುನಾಡು ರಾಜ್ಯದ ತಂಜಾವೂರು ಪಟ್ಟಣದಲ್ಲಿ ತಲೆಯೆತ್ತಿ ನಿಂತಿದೆ. ದೇಶದ ಪ್ರಸಿದ್ಧ ಶಿವನ ದೇವಾಲಯಗಳಲ್ಲಿ ಈ ದೇವಸ್ಥಾನಕ್ಕೆ ಪ್ರಧಾನ ಸ್ಥಾನವಿದೆ.
ಇನ್ನು ಶಿವನ ದೇವಾಲಯಗಳಲ್ಲಿ ಆಧುನಿಕ ಜಗತ್ತನ್ನೂ ಬೆರಗಾಗಿಸುವಂಥಾ ದೇವಾಲಯ ಸೋಮನಾಥೇಶ್ವರ ಸನ್ನಿಧಾನ. ಗುಜರಾತ್ ರಾಜ್ಯದ ವೇರಾವಳ್ ಪ್ರದೇಶದಲ್ಲಿ ಸೋಮನಾಥ ಜ್ಯೋತಿರ್ಲಿಂಗವಿದೆ. ಈಗಲೂ ಇದನ್ನು ಅನಂತಮಯ ದೇಗುಲವೆಂದು ಹೇಳಲಾಗುತ್ತದೆ. ಶಿವನ ಪ್ರಮುಖ ದೇವಾಲಯಗಳ ಲ್ಲಿ ಸೋಮೇಶ್ವರ ದೇವಾಲಯ ಒಂದಾಗಿ ಗುರುತಿಸಿಕೊಂಡಿದೆ. ಮಧ್ಯ ಪ್ರದೇಶದ ಪುರಾಣ ಪ್ರಸಿದ್ಧ ನಗರವಾದ ಉಜ್ಜಯಿನಿಯಲ್ಲಿ ಮಹಾಕಾಲೇಶ್ವರ ಜ್ಯೋತಿರ್ಲಿಂಗ ನೆಲೆ ಕಂಡುಕೊಂಡಿದೆ. ಸ್ವಯಂಭೂ ಲಿಂಗ ರೂಪದ ಮಹಾಕಾಲೇಶ್ವರ ದೇವಸ್ಥಾನ ರುದ್ರ ಸಾಗರ ಕೆರೆಯ ದಂಡೆಯಲ್ಲಿ ನೆಲೆಗೊಂಡಿದೆ. ಓಂಕಾರೇಶ್ವರ ಶಿವನ ದೇವಸ್ಥಾನ ಮಧ್ಯ ಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ಹರಿದಿರುವ ನರ್ಮದಾ ನದಿಯ ಮೇಲಿರುವ ಶಿವಪುರಿ ಎಂಬ ದ್ವೀಪದಲ್ಲಿ ತಲೆಯೆತ್ತಿ ನಿಂತಿದೆ. ಈ ದ್ವೀಪ ಹಿಂದುಗಳ ಪವಿತ್ರ ಸಂಕೇತದ ಆಕಾರದಲ್ಲಿರುವುದರಿಂದ ಓಂಕಾರೇಶ್ವರ ಎಂಬ ಹೆಸರು ಬಂದಿದೆ ಎಂಬ ವಿಶ್ಲೇಷಣೆ ಇದೆ.
ನಾನಾ ಅವತಾರ
ಸದರಿ ದ್ವೀಪದಲ್ಲಿ ಎರಡು ದೇವಸ್ಥಾನಗಳಿದ್ದಾವೆ. ಪ್ರಣವನಾದ ಓಂಕಾರೇಶ್ವರ ದೇವಸ್ಥಾನ ಮತ್ತು ಅಮರೇಶ್ವರ ದೇವಸ್ಥಾನಗಳು ಪ್ರಸಿದ್ಧಿ ಪಡೆದುಕೊಂಡಿವೆ. ಇದರ ಸುತ್ತಾ ಅನೇಕಾನೇಕ ದಂತ ಕಥೆಗಳೇ ಹಬ್ಬಿಕೊಂಡಿವೆ. ಅದರನ್ವಯ ಹೇಳೋದಾದರೆ, ಒಂದೇ ಶಿವಲಿಂಗವನ್ನು ಎರಡು ಭಾಗವಾಗಿಸಿ ಓಂಕಾರೇಶ್ವರ ಮತ್ತು ಮಾಮಲೇಶ್ವರ ಅಥವಾ ಅಮರೇಶ ಲಿಂಗವನ್ನಾಗಿ ಸೃಷ್ಟಿಸಲಾಗಿದೆ. ಅವೆರಡೂ ಕ್ಷೇತ್ರಗಳು ಪ್ರಸಿದ್ಧ ಶಿವ ದೇವಾಲಯಗಳಾಗಿ ದೇಶಾದ್ಯಂತ ಭಕ್ತರನ್ನು ಸೆಳೆಯುತ್ತಿವೆ. ಉತ್ತರಾಖಂಡ ರಾಜ್ಯದ ಮಂದಾಕಿನಿ ನದಿಯ ಅಂಚಿನಲ್ಲಿ ಮತ್ತೊಂದು ಪುರಾಣ ಪ್ರಸಿದ್ಧ ಶಿವ ದೇವಾಲಯವಿದೆ. ಅದನ್ನು ಕೇದಾರನಾಥದ ದೇವಾಲಯವೆಂದು ಕರೆಯಲಾಗುತ್ತದೆ. ಇದು ಶಿವನಿಗೆ ಅರ್ಪಿತವಾದ ದೇವಾಯವಾಗಿ ಗಮನ ಸೆಳೆದಿದೆ.
ಈ ಕ್ಷೇತ್ರ ಭೌಗೋಳಿಕವಾಗಿಯೂ ಕೂಡಾ ಅನೇಕಾನೇಕ ವಿಶೇಷತೆಗಳನ್ನು ಒಳಗೊಂಡಿದೆ. ಈ ಪವಿತ್ರ ಕ್ಷೇತ್ರ ಸಮುದ್ರ ಮಟ್ಟಕ್ಕಿಂತ ಅತ್ಯಂತ ಎತ್ತರದಲ್ಲಿದೆ. ಈ ಕ್ಷೇತ್ರ ಹಿಮಾಲಯ ಶ್ರೇಣಿಗಳ ತಪ್ಪಲಿನಲ್ಲಿಯೇ ಇರುವದರಿಂದ ಪ್ರತಿಕೂಲ ವಾತರಾವರಣ ದಾಟಿಕೊಂಡೇ ಅಲ್ಲಿಗೆ ಭೇಟಿ ಕೊಡಬೇಕಾಗುತ್ತೆ. ಈ ಪ್ರಾಕೃತಿಕ ಗುಣ ಲಕ್ಷಣಗಳಿಂದಾಗಿಯೇ ಈ ಶಿವನ ದೇವಾಲಯ ಪ್ರತೀ ವರ್ಷದ ಏಪ್ರಿಲ್ ತಿಂಗಳ ಅಂಚಿನಿಂದ ನವಂಬರ್ ತಿಂಗ ಮಧ್ಯ ಭಾಗದವರೆಗೆ ಮಾತ್ರವೇ ದರ್ಶನಕ್ಕೆ ಲಭ್ಯವಿರುತ್ತದೆ. ಇನ್ನುಳಿದಂತೆ ಜ್ಯೋತಿರ್ಲಿಂಗ ತಾಣವಾದ ಭೀಮಾಶಂಕರ ದೇವಸ್ಥಾ ಮಹಾರಾಷ್ಟ್ರ ರಾಜ್ಯದ ಪುಣೆ ಬಳಿಯಿರುವ ಖೇದ್ ಎಂಬ ತಾಲೂಕಿನಲ್ಲಿ ನೆಲೆಗೊಂಡಿದೆ. ಭೀಮಾ ನದಿ ತಟದಲ್ಲಿ ಈ ದೇವಾಲಯದಲ್ಲಿದೆ. ಈ ಕಾರಣದಿಂದಲೇ ಶಿವ ಭೀಮಾಶಂಕರನಾಗಿ ಭಕ್ತರನ್ನು ಪೊರೆಯುತ್ತಾ ಬಂದಿದ್ದಾನೆ. ಉತ್ತರ ಪ್ರದೇಶದ ಕಾಶಿಯಲ್ಲಿ ಶಿವ ವಿಶ್ವನಾಥನಾಗಿ ದರ್ಶನ ಕೊಡುತ್ತಿದ್ದಾನೆ. ಈ ಕಾಶಿ ಎಂಬುದು ನಮ್ಮ ಭಕ್ತಿ ಭಾವಗಳ ಉತ್ತುಂಗದಲ್ಲಿರುವ ದಿವ್ಯ ಕ್ಷೇತ್ರವಾಗಿ ಗುರುತಿಸಿಕೊಂಡಿದೆ. ಬದುಕಿನಲ್ಲೊಮ್ಮೆ ಈ ಕ್ಷೇತ್ರಕ್ಕೆ ಭೇಟಿ ಕೊಡಬೇಕೆಂಬುದು ಆಸ್ತಿಕ ವಲಯದ ಮಹದಾಸೆಯಾಗಿರುತ್ತೆ.
ಗೋದಾವರಿ ತಟದಲ್ಲಿ…
ಇಂತಾ ಅತ್ಯಪರೂಪದ ಶಿವ ಸನ್ನಿಧಾನಗಳು ಪ್ರತೀ ರಾಜ್ಯದಲ್ಲಿಯೂ ಇದ್ದಾವೆ. ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ತ್ರಯಂಬಕ ಪಟ್ಟಣದಲ್ಲಿರುವ ತ್ರಯಂಬಕೇಶ್ವರ ದೇವಸ್ಥಾನ ಅದರಲ್ಲೊಂದಾಗಿ ದಾಖಲಾಗುತ್ತದೆ. ಅದು ಪುರಾಣ ಪ್ರಸಿದ್ಧ ಜ್ಯೋತಿರ್ಲಿಂಗ ದೇವಾಲಯವಾಗಿ ಮಹತ್ವ ಪಡೆದುಕೊಂಡಿದೆ. ನಾಸಿಕ್ ಪಟ್ಟಣದಿಂದ ಇಪ್ಪತ್ತೆಂಟು ಕಿಲೋಮೀಟರ್ ದೂರದಲ್ಲಿರುವ ತ್ರಯಂಬಕೇಶ್ವರ ಕ್ಷೇತ್ರ ಗೋದಾವರಿ ನದಿ ತಟದಲ್ಲಿ ನೆಲೆಗೊಂಡಿದೆ. ಗೋದಾವರಿ ನದಿಗೆ ಭಾರತದ ಅತೀ ಉದ್ದದ ನದಿಯೆಂಬ ಹೆಗ್ಗಳಿಕೆಯೂ ಇದೆ. ಇನ್ನು ವೈದ್ಯನಾಥ ದೇವಾಲಯದ ಬಗ್ಗೆ ಆಗಾಗ ಚರ್ಚೆಗಳು ನಡೆಯುತ್ತಿರುತ್ತವೆ. ಜಾರ್ಖಂಡ್ ರಾಜ್ಯದ ದೇವಘಡ್ ನಲ್ಲಿರುವ ವೈದ್ಯನಾಥ ಜ್ಯೋತಿರ್ಲಿಂಗವನ್ನು ಹನ್ನೆರಡು ಜ್ಯೋತಿರ್ಲಿಂಗಳಲ್ಲಿಯೇ ಪ್ರಧಾನವಾದುದೆಂದು ಪ್ರಾಜ್ಞರು ಗುರುತಿಸುತ್ತಾರೆ. ಉತ್ತರಾಖಂಡ್ ರಾಜ್ಯದ ಜಾಗೇಶ್ವರದಲ್ಲಿ ನಾಗೇಶ್ವರ ಜ್ಯೋತಿರ್ಲಿಂಗ ದೇವಳವಿದೆ.
ಇದು ಶಿವಲೀಲೆಗಳಿಂದ ಸುತ್ತುವರೆದು ಭಕ್ತಿ ಭಾವಗಳಿಂದ ಲಕ್ಷಾಂತರ ಭಕ್ತರನ್ನು ತನ್ನತ್ತ ಸೆಳೆಯುತ್ತಿದೆ. ಸದರಿ ಜ್ಯೋತಿರ್ಲಿಂಗವನ್ನು ಭೂಮಿಯ ಪ್ರಪ್ರಥಮ ಜ್ಯೋತಿರ್ಲಿಂಗವೆಂದು ಗುರುತಿಸಲಾಗಿದೆ. ತಮಿಳುನಾಡಿನ ರಾಮೇಶ್ವರಂ ನಲ್ಲಿರುವ ರಾಮೇಶ್ವರ ಜ್ಯೋತಿರ್ಲಿಂಗ ದೇವಸ್ಥಾನ ದಕ್ಷಿಣ ಭಾರತದ ಪ್ರಧಾನ ತೀರ್ಥ ಕ್ಷೇತ್ರವಾಗಿ ಗುರುತಿಸಿಕೊಂಡಿದೆ. ರಾಜಸ್ಥಾನದ ಜೈಪುರ್ ನಗರದಿಂದ ನೂರು ಕಿಲೋಮೀಟರ್ ದೂರದಲ್ಲಿ ಶಿವಾರ್ ಎಂಬಲ್ಲಿ ಈ ಜ್ಯೋತಿರ್ಲಿಂಗ ದೇವಸ್ಥಾನವಿದೆ. ಹನ್ನೆರಡನೆಯ ಜ್ಯೋತಿರ್ಲಿಂಗವೆಂದು ಇದನ್ನು ಪರಿಗಣಿಸಲಾಗಿದೆ. ಇನ್ನು ಆಂಧ್ರದ ಕರ್ನೂಲ್ ಜಿಲ್ಲೆಯ ಶ್ರೀಶೈಲಂನಲ್ಲಿರುವ ಮಲ್ಲಿಕಾರ್ಜುನ ದೇವಸ್ಥಾನ ಹನ್ನೆರಡು ಜ್ಯೋತಿರ್ಲಿಂಗಗಳ ಪೈಕಿ ಒಂದೆಂದು ದಾಖಲಾಗಿದೆ. ಕೃಷ್ಣಾ ನದಿ ತಟದಲ್ಲಿ ನೆಲೆಸಿರುವ ಭ್ರಮರಾಂಭಾ ಮಲ್ಲಿಕಾರ್ಜುನ ದೇವಸ್ಥಾನ ಪ್ರಖ್ಯಾತವಾದ ಧಾರ್ಮಿಕ ಯಾತ್ರಾ ಕೇಂದ್ರವಾಗಿ ಪ್ರಸಿದ್ಧವಾಗಿದೆ.
ಬಾದಾಮಿಯಲ್ಲಿ…
ಕರ್ನಾಟಕದ ಕೀರ್ತಿ ಕಳಶದಂತಿರುವ ಬಾದಾಮಿಯಲ್ಲಿ ಭೂತನಾಥ ದೇವಾಲಯಗಳ ಸಮೂಹವೇ ಇದೆ. ಕರ್ನಾಟಕದ ಐತಿಹಾಸಿಕ ಪಟ್ಟಣವಾದ ಬಾದಾಮಿಯಲ್ಲಿ ಶಿವನಿಗೆ ಸಮರ್ಪಿತವಾದ ದೇವಾಲಯ ಸಮೂಹ ಅತ್ಯಂತ ವ್ಯವಸ್ಥಿತವಾಗಿ ನಿರ್ಮಾಣ ಗೊಂಡಿದೆ. ಈ ಭೂತನಾಥ ದೇವಾಲಯಗಳಲ್ಲಿ ಎರಡು ದೇವಾಲಯಗಳಿದ್ದಾವೆ. ದೊಡ್ಡದಾಗಿರುವ ದೇವಾಲಯ ಕೆರೆಯ ಪೂರ್ವಭಾಗದಲ್ಲಿ ನಿರ್ಮಾಣಗೊಂಡಿದೆ. ಇದರಲ್ಲಿ ಎರಡನೆಯ ದೇವಾಲಯ ಕೊಂಚ ಚಿಕ್ಕ ಗಾತ್ರದಲ್ಲಿ ಕೆರೆಯ ಈಶಾನ್ಯ ದಿಕ್ಕಿನಲ್ಲಿ ನೆಲೆನಿಂತಿದೆ. ಈ ಸಮೂಹವನ್ನು ಇದನ್ನು ಮಲ್ಲಿಕಾರ್ಜುನ ದೇವಾಲಯದ ಸಮೂಹವೆಂದು ಕೆಲ ಮಂದಿ ಕರೆಯೋದಿದೆ. ದಕ್ಷಿಣ ಹಾಗು ಉತ್ತರ ಭಾರತದ ವಾಸ್ತುಶೈಲಿ ಮೊದಲನೆ ದೇವಾಲಯದಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಎರಡನೇ ದೇವಾಲಯದಲ್ಲಿ ಕಲ್ಯಾಣಿ ಚಾಲುಕ್ಯರ ಶೈಲಿ ಮೇಲು ನೋಟಕ್ಕೇನೇ ಕಾಣಿಸುತ್ತದೆ.
ಇಲ್ಲಿರುವ ಎಲ್ಲ ದೇವಾಲಯಗಳೂ ಕೂಡಾ ಬೆರಗಾಗಿಸುವಂಥಾ ವಾಸ್ತುಶಿಲ್ಪಗಳಿಂದ ಕಂಗೊಳಿಸುತ್ತಿವೆ. ಸರಿ ಸುಮಾರು ಹನ್ನೆರಡನೇ ಶತಮಾನದಲ್ಲಿ ಹೊಯ್ಸಳ ದೊರೆ ವಿಷ್ಣುವರ್ಧನನ ಕಾಲದಲ್ಲಿ ನಿರ್ಮಾಣವಾದ ಈ ಶಿವನ ದೇವಾಲಯ ಅತ್ಯದ್ಭುತವಾದ ವಾಸ್ತುಶಿಲ್ಪ ಕಲೆಗೆ ಹೆಸರುವಾಸಿಯಾಗಿದೆ. ಇದು ಉತ್ತರ ಕರ್ನಾಟಕದ ಗದಗ್ ಜಿಲ್ಲೆಯಲ್ಲಿರುವ ಗಜೇಂದ್ರಗಢ ಪ್ರದೇಶದಲ್ಲಿ ಪ್ರಸಿದ್ಧವಾದ ಧಾರ್ಮಿಕ ಯಾತ್ರಾ ಕ್ಷೇತ್ರವಾಗಿ ಪ್ರಾಧಾನ್ಯತೆ ಪಡೆದುಕೊಂಡಿದೆ. ಇಲ್ಲಿ ದಕ್ಷಿಣ ಕಾಶಿ ಅಂತಲೇ ಪ್ರಸಿದ್ಧಿ ಪಡೆದಿರುವ ಕಾಲಕಾಲೇಶ್ವರನ ದೇವಾಲಯವಿದೆ. ಇದು ಅತ್ಯಂತ ವಿಶೇಷವಾದ ಹೊರಾಂಗಣ ಸೊಬಗನ್ನೂ ಒಳಗೊಂಡಿದೆ. ಈ ದೇವಾಲಯದ ಆವರಣದಲ್ಲಿ ಪುಟ್ಟ ಚೌಕಾಕಾರದ ನೀರಿನ ಪುಷ್ಕರಣಿ ಇದೆ.. ಸುಡು ಸುಡುವ ಬೇಸಿಗೆಯ ಕಾಲದಲ್ಲೂ ಇದು ಬತ್ತುವುದಿಲ್ಲ. ಕೋಲಾರ ಜಿಲ್ಲೆಯ ಕಮ್ಮಸಂದ್ರವೆಂಬೋ ಹಳ್ಳಿಯಲ್ಲಿ ಕೋಟಿಲಿಂಗೇಶ್ವರ ದೇವಸ್ಥಾನವನ್ನು ನೆಲೆಗೊಂಡಿದೆ.
ಉತ್ತರದ ಅಚ್ಚರಿ
ಪ್ರಸಿದ್ಧ ಕೆಜಿಎಫ್ ನಿಂದ ಐದು ಕಿಲೋಮೀಟರ್ ದೂರದಲ್ಲಿ ಕೋಟಿಲಿಂಗೇಶ್ವರ ದೇವಸ್ಥಾನವಿದೆ. ಇದು ವಿಶ್ವದ ಅತೀ ಎತ್ತರದ ಶಿವಲಿಂಗಗಳ ಪೈಕಿ ಒಂದು ಶಿವಲಿಂಗ ಈ ಕೋಟಿ ಲಿಂಗೇಶ್ವರ ತಾಣದಲ್ಲಿದೆ. ಅಲ್ಲದೆ ದೇವಾಲಯದ ಆವರಣದಲ್ಲಿ ಸಾಕಷ್ಟು ಸಂಖ್ಯೆಯ ಸಣ್ಣ ಸಣ್ಣ ಶಿವಲಿಂಗಗಳು ಭಕ್ತರನ್ನು ಸೆಳೆಯುತ್ತಿವೆನಿದು ದಕ್ಷಿಣ ಭಾರತದ ಶಿವ ಸ್ಥಾನಗಳ ಕಥೆಯಾದರೆ, ಉತ್ತರದಲ್ಲಿ ಶಿವನ ಅಸ್ತಿತ್ವ ಮತ್ತಷ್ಟು ಭಿನ್ನವಾಗಿದೆ. ಅದರಲ್ಲಿ ಅಮರನಾಥ ಕ್ಷೇತ್ರ ಪ್ರಧಾನವಾಗಿ ಸೇರಿಕೊಳ್ಳುತ್ತೆ. ಇದು ಪ್ರಸಿದ್ಧ ಗುಹಾ ದೇವಾಲಯ. ಇದು ಅನೇಕ ಅಚ್ಚರಿಗಳನ್ನು ಒಳಗೊಂಡಿದೆ. ವರ್ಷದ ಒಂದು ನಿರ್ದಿಷ್ಟ ಅವಧಿಯಲ್ಲಿ ಮಾತ್ರವೇ ಇಲ್ಲಿ ಮಂಜುಗಡ್ಡೆಯಿಂದ ಶಿವಲಿಂಗ ಸೃಷ್ಟಿಯಾಗುತ್ತೆ. ಅದೇ ಈ ಕ್ಷೇತ್ರದ ಅಸಲೀ ವಿಶೇಷತೆ. ಸದರಿ ಶಿವಲಿಂಗ ಆ ಸಮಯದಲ್ಲಿ ಸಂಪೂರ್ಣವಾಗಿ ಮಂಜುಗಡ್ಡೆಯಿಂದ ರೂಪಗೊಳ್ಳುತ್ತದೆ.
ಹಾಗಾದರೆ ಭಾರತದಲ್ಲಿರುವ ಅಷ್ಟೂ ಶಿವನ ಸನ್ನಿಧಾನದಲ್ಲಿ ಮಹಾನ್ ಕಾರಣೀಕದ ಕ್ಷೇತ್ರ ಯಾವುದು ಎಂಬ ಗೊಂದಲ ಭಕ್ತ ಗಣವನ್ನು ಕಾಡುತ್ತದೆ. ಈ ನಿಟ್ಟಿನಲ್ಲಿ ಹೇಳೋದಾದರೆ, ಅಮರನಾಥ ಪುರಾಣ ಪ್ರಸಿದ್ಧ ಪುಣ್ಯ ಕ್ಷೇತ್ರಗಳ ಸಾಲಿನಲ್ಲಿ ಪ್ರಥಮ ಸ್ಥಾನದಲ್ಲಿದೆ. ಈ ಗುಹಾ ದೇವಾಲಯದ ಸುತ್ತ ಹಿಮದಿಂದ ಆವೃತವಾದ ಬೆಟ್ಟಗಳ ಸಮೂಹವೇ ಇದೆ. ಈ ಕ್ಷೇತ್ರ ಸಮುದ್ರ ಮಟ್ಟದಿಂದ ತುಂಬಾನೇ ಎತ್ತರದಲ್ಲಿದೆ. ಜಮ್ಮು ಕಾಶ್ಮೀರ ರಾಜ್ಯದಲ್ಲಿ ಇರುವ ಅಮರನಾಥ ಕ್ಷೇತ್ರ ರಾಜಧಾನಿ ಶ್ರೀನಗರದಿಂದ ನೂರಾ ನಲವತ್ತೊಂದು ಕಿಲೋಮೀಟರ್ ದೂರದಲ್ಲಿದೆ.ರೀ ಕ್ಷೇತ್ರಕ್ಕೆ ತಲುಪುವ ಹಾದಿಯೂ ಕೂಡಾ ಸಾಹಸ ಬೇಡುತ್ತೆ. ಆ ಅನುಭವ ನಿಜಕ್ಕೂ ರೋಮಾಂಚಕವಾಗಿರುತ್ತದೆ. ಇನ್ನು ಮಹಾರಾಷ್ಟ್ರದ ಎಲ್ಲೋರಾದಲ್ಲಿರುವ ಶಿವನ ಕಲ್ಲಿನ ದೇವಸ್ಥಾನ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಇನ್ನು ಮಧ್ಯ ಪ್ರದೇಶ ರಾಜ್ಯದ ಭೋಜ್ ಪುರ ಪಟ್ಟಣದ ಒಡಲಿನಲ್ಲಿ ಮತ್ತೊಂದು ವಿಶೇಷವಾದ ಶಿವನ ದೇವಾಲಯವಿದೆ. ಅಲ್ಲಿ ಅಪೂರ್ಣವಾದ ಶಿವ ಭೋಜೇಶ್ವರ ದೇವಸ್ಥಾನದಲ್ಲಿ ನೆಲೆಗೊಂಡಿದ್ದಾನೆ. ಈ ದೇವಸ್ಥಾನದಲ್ಲಿರುವ ಶಿವಲಿಂಗ ಎತ್ತರದ ಶಿವ ಲಿಂಗಗಳ ಸಾಲಿಗೆ ಸೇರ್ಪಡೆಗೊಳ್ಳುತ್ತದೆ.
ಇನ್ನುಳಿದಂತೆ ತಮಿಳುಡಿನ ತಿರುಚ್ಚಿಯಲ್ಲಿರುವ ಜಂಬುಲಿಂಗೇಶ್ವರರ್ ದೇವಸ್ಥಾನವನ್ನು ಎರಡು ಸಾವಿರ ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿದೆ ಎಂದು ನಂಬಲಾಗಿದೆ. ಚೋಳರ ಆಳ್ವಿಕೆ ಪ್ರಾರಂಭವಾದಾಗ ರಾಜನಾಗಿದ್ದ ಕೊಚೆಂಗ ಚೋ ಎಂಬ ರಾಜನೋರ್ವ ಈ ದೇವಾಲಯವನ್ನು ಕಟ್ಟಿಸಿರಬಹುದು ಅಂತ ಇತಿಹಾಸಕಾರರು ಪ್ರತಿಪಾದಿಸುತ್ತಾರೆ. ಅಷ್ಟೊಂದು ವರ್ಷಗಳ ಹಿಂದೆ ನಿರ್ಮಾಣಗೊಂಡರೂ ಕೂಡಾ ಈವತ್ತಿಗೂ ಸುಸ್ಥಿತಿಯಲ್ಲಿರುವುದು ಸದರಿ ಪ್ರಾಚೀನ ದೇವಾಲಯದ ವಿಶೇಷತೆ. ಚೋಳರ ನಂತರ ಧಿಕಾರ ನಿರ್ವಹಿಸಿದ ಬಹುತೇಕ ಎಲ್ಲ ರಾಜರು ಕೂಡಾ ಈ ದೇವಾಲಯವನ್ನು ಅತ್ಯಂತ ಭಯ ಭಕ್ತಿಗಳಿಂದ ಪೋಶಿಸಿಕೊಂಡು ಬಂದಿದ್ದಾರೆ. ಗರ್ಭಗುಡಿಯ ತಳ ಭಾಗದಲ್ಲಿ ಅತ್ಯಂತ ಶುದ್ಧವಾದ ನೀರಿನ ಒರತೆ ಇರೋದು ಈ ದೇವಾಲಯದ ವಿಶೇಶತೆ. ಇಲ್ಲಿನ ನೀರನ್ನು ಮೊಗೆದು ಹೊರ ಹಾಕಿದರೂ ಮತ್ತೆ ಸೃಷ್ಟಿಯಾಗುತ್ತೆ. ಆ ಒರತೆಯ ಮೂಲಕ ಕಂಡು ಹಿಡಿಯಲು ಈವತ್ತಿಗೂ ಸಾಧ್ಯವಾಗಿಲ್ಲ.
ಕೇರಳದ ಒಚಿರಾ ದೇವಾಲಯ ಕೂಡಾ ಅತ್ಯಂತ ಪುರಾತನ ದೇವಾಲಯವಾಗಿ ಮಹತ್ವ ಪಡೆದುಕೊಂಡಿದೆ. ಇದು ಪುರಾತನ ಶಿವನ ದೇವಾಲಯವಾಗಿ ಯಾತ್ರಾರ್ಥಿಗಳನ್ನು ಸೆಳೆದುಕೊಳ್ಳುತ್ತಿದೆ. ಕೊಲ್ಲಂ ಜಿಲ್ಲೆಯಲ್ಲಿ ಈ ದೇವಾಲಯ ನೆಲೆ ಗೊಂಡಿದೆ. ಕೇರಳದ ಪ್ರಧಾನ ಹಬ್ಬವಾದ ಓಣಂ ಮುಗಿದ ನಂತರ ಮತ್ತೊಮ್ಮೆ ಅದ್ದೂರಿಯಾಗಿ ಆಚರಿಸುವ ಉತ್ಸವಕ್ಕೆ ಈ ದೇವಾಲಯ ಪ್ರಸಿದ್ಧಿ ಪಡೆದುಕೊಂಡಿದೆ. ಒಚಿರಾ ದೇವಾಲಯಕ್ಕೆ ಕಟ್ಟಡದ ರಚನೆಯೇ ಇಲ್ಲದಿರೋದು ಅಸಲೀ ವಿಶೇಷತೆ. ಅದು ಶಿವನ ಪ್ರಧಾನ ಗುಣದ ಸೂಚಕವೂ ಹೌದು. ನಿರಾಕಾರ ಪರಬ್ರಹ್ಮನ ರೂಪದಲ್ಲಿ ಇಲ್ಲಿ ಶಿವನನ್ನು ಗಿಡಗಳ ರೂಪದಲ್ಲಿ ಪೂಜಿಸಲಾಗುತ್ತದೆ. ಪ್ರಸಿದ್ಧವಾದ ತಿರುವಣ್ಣಾಮಲೈ ಬೆಟ್ಟ ಕ್ಷೇತ್ರ ತನ್ನಲ್ಲಿರುವ ಅಣ್ಣಾಮಲಯಾರ್ ದೇವಾಲಯಕ್ಕೆ ದೇಶಾದ್ಯಂತ ಪ್ರಸಿದ್ಧಿ ಪಡೆದಿದೆ. ತಮಿಳುನಾಡು ರಾಜ್ಯದ ಪ್ರಮುಖ ತೀರ್ಥ ಕ್ಷೇತ್ರಗಳಲ್ಲಿ ತಿರುವಣ್ಣಾಮಲೈ ಕ್ಷೇತ್ರ ಪ್ರಧಾನವಾಗಿದೆ.
ಇನ್ನು ನಮ್ಮ ಕರ್ನಾಟಕದಲ್ಲಿಯೇ ಇರುವ ಪ್ರಸಿದ್ಧ ಶಿವ ಸನ್ನಿಧಾನಗಳಲ್ಲಿ ಮಂಗಳೂರಿನ ಕುದ್ರೋಳಿಯಲ್ಲಿರುವ ಗೋಕರ್ಣನಾಥೇಶ್ವರನ ದೇವಸ್ಥಾನಕ್ಕೂ ವಿಶೇಷ ಸ್ಥಾನವಿದೆ. ಹಾಗಂತ ಇದಕ್ಕೆ ಭಾರೀ ವರ್ಷಗಳ ಇತಿಹಾಸವೇನೂ ಇಲ್ಲ. ಇದು ಸಂತ ನಾರಾಯಣಗುರು ಅವರ ಪರಿಕಲ್ಪನೆಯಲ್ಲಿ ಮೂಡಿಕೊಂಡಿರುವ ಕ್ಷೇತ್ರ. ಇನ್ನುಳಿದಂತೆ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಕಪಿಲಾ ನದಿಯ ದಂಡೆಯಲ್ಲಿಯೇ ಶಿವ ಸಾನಿಧ್ಯವಿದೆ. ಈ ಕ್ಷೇತ್ರಕ್ಕೆ ದಕ್ಷಿಣ ಕಾಶಿ ಎಂಬ ಖ್ಯಾತಿಯೂ ಇದೆ. ಇಲ್ಲಿಂದ ಮತ್ತೆ ಉತ್ತರದತ್ತ ಹೊರಳಿಕೊಂಡರೆ, ದೇವಭೂಮಿ ಉತ್ತರಾಖಂಡದಲ್ಲಿ ರುದ್ರಪ್ರಯಾಗ್ ಜಿಲ್ಲೆಯಲ್ಲಿರುವ ತುಂಗನಾಥ ಕ್ಷೇತ್ರ ಪ್ರಸಿದ್ಧ ಶಿವಸನ್ನಿಧಾನ. ಈ ರಾಜ್ಯದ ರುದ್ರಪ್ರಯಾಗ್ ಜಿಲ್ಲೆಯ ಚಂದ್ರಪರ್ವತ ಗಿರಿ ಶಿಖರದಲ್ಲಿ ಈ ಕ್ಷೇತ್ರವಿದೆ. ಇಲ್ಲಿರುವ ಶಿವನ ದೇವಸ್ಥಾನ ಸಮುದ್ರ ಮಟ್ಟದಿಂದ ಸಾವಿರಾರು ಅಡಿ ಎತ್ತರದಲ್ಲಿ ಸಾವಿರಾರು ವರ್ಷಗಳ ಹಿಂದೆ ನಿರ್ಮಾಣಗೊಂಡಿದೆ. ಆದಿ ಶಂಕರಾಚಾರ್ಯರುಶೀ ದೇವಸ್ಥಾನದಲ್ಲಿರತುವ ಶಿವನನ್ನು ಪ್ರತಿಷ್ಠಾಪಿಸಿದ್ದಾರೆಂದು ನಂಬಲಾಗುತ್ತದೆ. ಇನ್ನುಳಿದಂತೆ ದೇಶದ ನಾನಾ ಭಾಗಗಳಲ್ಲಿ ಭಿನ್ನ ಚಹರೆಗಳಲ್ಲಿ ಮಾಯಾವಿ ಶಿವ ನೆಲೆಗೊಂಡಿದ್ದಾನೆ. ಭಕ್ತಿ ಭಾವಗಳಿಗೆ ಪಾತ್ರನಾಗಿದ್ದಾನೆ.