ಸೌತ್ ಮಾತ್ರವಲ್ಲ ಆಲ್ ಓವರ್ ಇಂಡಿಯಾವನ್ನೇ ಕಣ್ಣರಳಿಸಿ ಕೂರುವಂತೆ ಮಾಡಿದ್ದ ದಳಪತಿ ವಿಜಯ್ ಅಭಿನಯದ ಬಹುನಿರೀಕ್ಷಿತ ಚಿತ್ರ `ಲಿಯೋ’ ಇಂದು ತೆರೆಕಂಡಿದೆ. ವಿಶ್ವದಾದ್ಯಂತ ಅದ್ಧೂರಿಯಾಗಿಯೇ ಬಿಡುಗಡೆಯಾದ `ಲಿಯೋ’ ಸಿನಿಮಾ ಭರ್ಜರಿ ರೆಸ್ಪಾನ್ಸ್ ಗಿಟ್ಟಿಸಿಕೊಳ್ಳುವಲ್ಲಿ ವಿಫಲವಾಗಿದೆ. ಹೌದು, ಮಾಸ್ಟರ್ ಜೋಡಿಯಲ್ಲಿ ಮೂಡಿಬಂದ `ಲಿಯೋ’ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ. ದಳಪತಿಯ ಅಖಂಡ ಅಭಿಮಾನಿಗಳೇನೋ ಬಹುಪರಾಕ್ ಹಾಕ್ತಿದ್ದಾರೆ. ಆದರೆ, ಕೆಲ ಸಿನಿಮಾ ಪ್ರೇಮಿಗಳು ಮತ್ತು ಕೆಲ ವಿಮರ್ಶಕರು ನೀರಸ ಪ್ರತಿಕ್ರಿಯೆ ಹೊರಹಾಕ್ತಿದ್ದಾರೆ. ಹೀಗಾಗಿ, ಚಿತ್ರಕ್ಕೆ ಪಾಸಿಟೀವ್ ಮತ್ತು ನೆಗೆಟೀವ್ ಎರಡು ತರಹದ ರೆಸ್ಪಾನ್ಸ್ ಹರಿದುಬರುತ್ತಿದೆ. ಬೆಟ್ಟದಷ್ಟು ನಿರೀಕ್ಷೆ ಮೂಡಿಸಿದ್ದ ಮಾಸ್ಟರ್ ಕಾಂಬೋ ಕಮಾಲ್ ಮಾಡುವಲ್ಲಿ ಸೋಲುಂಡಿದ್ದು, `ಲಿಯೋ’ ಎಲ್ಸಿಯು… ಆಡಿಯನ್ಸ್ `ಐಸಿಯೂ’ ಅಂತ ಶುರುಮಾಡಿ ಸರಣಿ ಟ್ವೀಟ್ ಮಾಡಿದ್ದಾರೆ ತಮಿಳು ಸಿನಿ ವಿಮರ್ಶಕ ಮನೋಬಲ ವಿಜಯಬಾಲನ್
`ಲಿಯೋ’ ಸಿನಿಮಾ ಲೋಕೇಶ್ ಕನಗರಾಜ್ ನಿರ್ದೇಶನದಲ್ಲಿ, ಎಲ್ಸಿಯು ಅಂದರೆ `ಲೋಕೇಶ್ ಸಿನಿಮ್ಯಾಟಿಕ್ ಯೂನಿವರ್ಸ್’ ಕಾನ್ಸೆಪ್ಟ್ನಲ್ಲಿ ಮೂಡಿಬಂದಿದೆ. ಕೈಥಿ ಹಾಗೂ ವಿಕ್ರಮ್ ಸಿನಿಮಾದ ಕಥೆ ಮತ್ತು ಪಾತ್ರಗಳನ್ನು `ಲಿಯೋ’ದಲ್ಲಿ ಕಂಟಿನ್ಯೂ ಮಾಡುವ ಮೂಲಕ ಸಿನಿಮಾ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದ್ದರು. ಹೈವೋಲ್ಟೇಜ್ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಮೂಲಕ ಕಮಾಲ್ ಮಾಡುವ ಭರವಸೆ ಮೂಡಿಸಿದ್ದರು. ಆದರೆ, ಅವರು ಕೊಟ್ಟ ಮಾತು ಹುಸಿಯಾದಂತೆ ಕಾಣ್ತಿದೆ, ಚಿತ್ರದ ಸುತ್ತ ಸೃಷ್ಟಿಸಿದ್ದ ಹೈಪ್ ಸಿನಿಮಾಗೆ ಮುಳುವಾದಂತೆ ಗೋಚರಿಸುತ್ತಿದೆ. ಹೀಗಾಗಿಯೇ ಸಿನಿಮಾ ವಿಶ್ಲೇಷಕ ಮನೋಬಲ ವಿಜಯಬಾಲನ್ ಒಂದರ ಹಿಂದೊಂದು ಟ್ವೀಟ್ ಮಾಡಿದ್ದಾರೆ. ಲಿಯೋ ದಳಪತಿ ವಿಜಯ್ ಸಿನಿಕರಿಯರ್ ನ ದುರ್ಬಲ ಸಿನಿಮಾ. ವಿಜಯ್ ಸೇರಿದಂತೆ ಇಡೀ ಚಿತ್ರದ ತಾರಾಬಳಗದ ನಟನೆಯ ಬಗ್ಗೆ ತಕರಾರಿಲ್ಲ. ಆದರೆ, ಕ್ರಿಯೇಟ್ ಮಾಡಿದ್ದ ಹೈಪ್ನ ಅವರು ಉಳಿಸಿಕೊಳ್ಳಲಿಲ್ಲ. ಈ ಸಿನಿಮಾ ವಿಕ್ರಮ್, ಕೈಥಿ ಸಮೀಪಕ್ಕೂ ಬರಲು ಸಾಧ್ಯವಿಲ್ಲ. ಇದೊಂದು ಸಾಧಾರಣ ಪ್ರಯತ್ನವಷ್ಟೇ. ವಿಕ್ರಮ್ ರೋಲೆಕ್ಸ್ ಕ್ಯಾರೆಕ್ಟರ್ ನ ಇಟ್ಕೊಂಡು ಲಿಯೋ ಮಾಡಿದ್ದಾರೆ. ಸಿಂಹ ಆಗಲಿಕ್ಕೆ ಹೋಗಿ ಬೆಕ್ಕಾಗಿದ್ದಾರೆ ಅಂತೆಲ್ಲಾ ಕುಟುಕಿದ್ದಾರೆ.
ಇಷ್ಟಕ್ಕೆ ಸುಮ್ಮನಾಗದ ಮನೋಬಲ ಅವರು, ತಮಿಳುನಾಡು ಗವರ್ನಮೆಂಟ್ಗೆ `ಲಿಯೋ’ ಟೀಮ್ನವರು ಅರ್ಲಿಮಾರ್ನಿಂಗ್ 4 ಗಂಟೆಗೆ, 7 ಗಂಟೆಗೆ ಶೋಸ್ ಕೊಡಿ ಅಂತ ಬೇಡಿದ್ಯಾಕೆ ಅನ್ನೋದಕ್ಕೆ ಈಗ ಕ್ಲ್ಯಾರಿಟಿ ಸಿಗ್ತಾಯಿದೆ. ಮೊದಲ ವಾರದ ಟಿಕೆಟ್ ಸೋಲ್ಡ್ ಔಟ್ ನಲ್ಲಿ 85 ಪರ್ಸೆಂಟ್ ನಮಗೆ ಕೊಡಬೇಕು ಅಂತ ಡಿಮ್ಯಾಂಡ್ ಮಾಡಿದ್ದೇಕೆ ಅನ್ನೋದು ಈಗ ಸ್ಪಷ್ಟವಾಗ್ತಿದೆ. ಓಟಿಟಿ ರೈಟ್ಸ್ ಸೇಲ್ ಗೂ, ಆಡಿಯೋ ಫಂಕ್ಷನ್ ಕ್ಯಾನ್ಸಲ್ಗೂ, ಅದ್ದೂರಿಯಾಗಿ ಪ್ರಮೋಷನ್ ಮಾಡದೇ ಇರೋದಕ್ಕೂ ಎಲ್ಲದಕ್ಕೂ ಕಾರಣ `ಲಿಯೋ’ ಬಂಡವಾಳ ಅವರಿಗೂ ಗೊತ್ತಿತ್ತು. ನಿರೀಕ್ಷೆಯ ಹಂತ ತಲುಪಲ್ಲ, ಸಿನಿಮಾ ದೊಡ್ಡ ಮಟ್ಟದಲ್ಲಿ ಆಫ್ಟರ್ ರಿಲೀಸ್ ಸೌಂಡ್ ಮಾಡಲ್ಲ ಎಂಬ ಸತ್ಯ ಗೊತ್ತಿದ್ದಕ್ಕೆ ಅವರು ರಿಸ್ಕ್ ತೆಗೆದುಕೊಂಡಿಲ್ಲ ಎಂಬುದು ಸಿನಿಮಾ ವಿಮರ್ಶಕ ಮನೋಬಲ ಅವರ ಅಭಿಪ್ರಾಯ. ಇದನ್ನೇ ಅವರು ಟ್ವೀಟ್ ಮೂಲಕ ಹೊರಹಾಕಿದ್ದಾರೆ. ಇಷ್ಟೆಲ್ಲಾ ಟ್ವೀಟ್ ನಡುವೆಯೂ `ಲಿಯೋ’ ಪೈರಸಿ ತಡೆಗಟ್ಟುವ ಕೆಲಸ ಮಾಡಿದ್ದಾರೆ. ಯಾರೂ ಕೂಡ ಸೋಷಿಯಲ್ ಮೀಡಿಯಾದಲ್ಲಿ ಲೀಕಾಗಿರುವ ಲಿಯೋ ದೃಶ್ಯಗಳನ್ನ ಹಂಚಿಕೊಳ್ಳಬೇಡಿ ಎಂದು ಮೆಸೇಜ್ ಪಾಸ್ ಮಾಡಿದ್ದಾರೆ.
ಒಟ್ನಲ್ಲಿ `ಲಿಯೋ’ ನಿರೀಕ್ಷೆಯ ಮಟ್ಟ ಮುಟ್ಟಿಲ್ಲ ಎಂಬುದು ಇವರ ವಾದ. ಆದರೆ, ದಳಪತಿ ಭಕ್ತರು ಇದೊಂದು ಟ್ರೆಂಡ್ ಸೆಟ್ಟರ್ ಮೂವೀ. ಇಂತಹ ಸಿನಿಮಾ ವಿಜಯ್ ಸರ್ ಕರಿಯರ್ನಲ್ಲೇ ಬಂದಿರಲಿಲ್ಲ. ಔಟ್ ಅಂಟ್ ಔಟ್ ಮಾಸ್ ಮೂವೀಯಾದರೂ ಫ್ಯಾಮಿಲಿ ಸೆಂಟಿಮೆಂಟ್ ಸಿನಿಮಾದಲ್ಲಿದೆ. ಭರ್ ಪೂರ್ ಆ್ಯಕ್ಷನ್ ಇದೆ. ಸಂಜಯ್ ದತ್ತ್, ಅರ್ಜುನ್ ಸರ್ಜಾ, ಗೌತಮ್ ವಾಸುದೇವ್ ಮೆನನ್, ತ್ರಿಷಾ, ಪ್ರಿಯಾ ಆನಂದ್, ಫಹಾದ್ ಫಾಸಿಲ್ ಹೀಗೆ ಅದ್ದೂರಿ ತಾರಾಬಳಗವೇ ಚಿತ್ರದಲ್ಲಿದೆ. ಅನಿರುದ್ದ್ ರವಿಚಂದರ್ ಮ್ಯೂಸಿಕ್ `ಲಿಯೋ’ಗೆ ಬೂಸ್ಟರ್ ಡೋಸ್ ಅಂದರೆ ತಪ್ಪಾಗಲ್ಲ. ನಮ್ಮ ಬಾಸ್ `ಲಿಯೋ’ ಮುಂದೆ ಜೈಲರ್ ಏನೇನು ಅಲ್ಲ. ಒಂದು ಸಲ ಥಿಯೇಟರ್ ಗೆ ಬಂದು ಸಿನಿಮಾ ನೋಡಿ ಅಂತ ಪ್ರತಿಕ್ರಿಯೆ ಕೊಡ್ತಿದ್ದಾರೆ.