ಕನ್ನಡ ಚಿತ್ರರಂಗದಲ್ಲಿ ಕಲಾವಿದರಾಗಿ ಗುರುತಿಸಿಕೊಂಡಿರುವ ನಟಿ ಹರ್ಷಿಕಾ ಪೂಣಚ್ಚ ಮತ್ತು ನಟ ಭುವನ್ ಪೊನ್ನಣ್ಣ ಸತಿ ಪತಿಗಳಾಗಿ ವೈವಾಹಿಕ ಜೀವನಕ್ಕೆೆ ಕಾಲಿರಿಸಿದ್ದಾರೆ. ಕೊಡಗಿನ ವಿರಾಜಪೇಟೆಯ ಅಮ್ಮತ್ತಿ ಕೊಡವ ಸಮಾಜದಲ್ಲಿ ಆಗಸ್ಟ್ 24ರ ಗುರುವಾರ ನಡೆದ ಮದುವೆ ಸಮಾರಂಭದಲ್ಲಿ ಕುಟುಂಬಸ್ಥರು, ಬಂಧು-ಬಳಗ, ಗಣ್ಯರ ಸಮ್ಮುಖದಲ್ಲಿ ಈ ಜೋಡಿ ಹೊಸ ಜೀವನಕ್ಕೆೆ ಅಡಿಯಿಟ್ಟಿತು.
ಕೊಡವ ಸಂಪ್ರದಾಯದಂತೆ ಶಾಸ್ತ್ರೊಕ್ತವಾಗಿ ನಡೆದ ಭುವನ್ – ಹರ್ಷಿಕಾ ಮದುವೆ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವರಾದ ಕೆ. ಸುಧಾಕರ್, ಮುರುಗೇಶ್ ನಿರಾಣಿ, ಹಿರಿಯ ನಟ ದೊಡ್ಡಣ್ಣ, ಗಣೇಶ್, ತಬಲಾ ನಾಣಿ, ರಘು ಮುಖರ್ಜಿ, ನಟಿ ಅನು ಪ್ರಭಾಕರ್, ಪೂಜಾ ಗಾಂಧಿ ಸೇರಿದಂತೆ ರಾಜಕೀಯ ಮತ್ತು ಚಿತ್ರರಂಗದ ಹಲವು ಗಣ್ಯರು ಭಾಗಿಯಾಗಿ ನವ ದಂಪತಿಗೆ ಶುಭ ಹಾರೈಸಿದರು.
‘ಪಿಯುಸಿ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆೆ ನಟಿಯಾಗಿ ಪರಿಚಯವಾದ ಹರ್ಷಿಕಾ ಪೂಣಚ್ಚ ಬಳಿಕ ‘ಜಾಕಿ’, ‘ತಮಸ್ಸು’, ‘ಮುರಳಿ ಮೀಟ್ಸ್ ಮೀರಾ’, ‘ಕಾಸಿನ ಸರ’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದ ಜೊತೆಗೆ ತೆಲುಗು, ತಮಿಳು, ಕೊಂಕಣಿ, ತುಳು, ಭೋಜ್‌ಪುರಿ ಸೇರಿದಂತೆ 6ಕ್ಕೂ ಹೆಚ್ಚು ಭಾಷೆಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಕಿರುತೆರೆಯ ‘ಬಿಗ್‌ಬಾಸ್’ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಪರಿಚಯವಾದ ಭುವನ್ ಪೊನ್ನಣ್ಣ ಕಿರುತೆರೆಯ ಒಂದಷ್ಟು ಶೋಗಳು ಮತ್ತು ‘ರಾಂಧವ’ ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ.