ಇನ್ನೊಬ್ಬರ ಕಷ್ಟ ಅರ್ಥವಾಗಬಹುದು. ಆದರೆ ಇವರಿಗೆ ಇನ್ನೊಬ್ಬರ ನೋವು ಅರ್ಥವಾಗದು! ಏಕೆಂದರೆ ಇವರಿಗೆ ಇವರ ನೋವೇ ಇವರಿಗೆ ಅರಿವಾಗುತ್ತಿಲ್ಲ… ಬೇಜಾನ್ ಕನ್ಫ್ಯೂಸ್ ಆಯಿತಾ…? ಹಾಗಿದ್ದರೆ ಮುಂದೆ ಓದಿ… ‘ದಿ ಮಾರ್ಸಿಲ್ ಸಿಂಡ್ರೋಂ’ ಎನ್ನುವ ಕಾಯಿಲೆಗೆ ಈ ಕುಟುಂಬ ತುತ್ತಾಗಿದೆ. ಅಂದಹಾಗೆ ಈ ಕಾಯಿಲೆಗೆ ‘ಮಾರ್ಸಿಲ್’ ಹೆಸರು ಬರಲು ಇವರೇ ಕಾರಣವೂ ಅಂತೆ. ಒಟ್ಟು ೬ ಮಂದಿಯ ಈ ಕುಟುಂಬದಲ್ಲಿ ಯಾರೊಬ್ಬರಿಗು ನೋವಿನ ಅನುಭವವೇ ಆಗಿಲ್ಲ.
ನೋವಿಲ್ದೋರು!
ಕುಟುಂಬದ ಲೆಟಿಜಾ ಮಾರ್ಸಿಲ್ ಫುಟ್ಬಾಲ್ ಆಡುವಾಗ ಆಗಾಗ ಬೀಳುತ್ತಾನೆ. ಆದರೂ ಯಾತನೆ ಎಂದು ಅತ್ತಿಲ್ಲ. ಸುಟ್ಟ ಗಾಯವಾದಾಗ, ಕತ್ತಿ, ಕತ್ತರಿಯಿಂದ ಕೈ ಕತ್ತರಿಸಿಕೊಂಡಾಗ, ಬಿದ್ದು ಊತ ಸಂಭವಿಸಿದಾಗ… ಹೀಗೆ ಏಟು ಬಿದ್ದ ಸಂದರ್ಭ ಯಾವುದೇ ಇರಲಿ.. ನೋವೆಂದು ಯಾರೂ ದೂರಿಲ್ಲ. ಒಳ್ಳೆಯದೇ ಆಯಿತಲ್ಲಾ? ಹೌದು… ಒಂದರ್ಥದಲ್ಲಿ ಒಳ್ಳಯದೇ… ಆದರೆ ವೈಜ್ಞಾನಿಕವಾಗಿ ನೋವು ಅರಿವಾದರೆ ಸಮಸ್ಯೆ ಅರ್ಥವಾಗಿ ಗುಣಪಡಿಸುವುದು ಸಲೀಸು. ಬಿದ್ದು ಮೂಳೆ ಮುರಿದಿದ್ದರೆ ನೋವಿದ್ದಲ್ಲಿ ಶೀಘ್ರ ಪತ್ತೆ ಹಚ್ಚಬಹುದು. ನೋವಿಲ್ಲದೇ ಹೋದಲ್ಲಿ ಏನೆಂದು ವೈದ್ಯರಬಳಿಗೆ ತೆರಳುತ್ತಾರೆ? ಅಲ್ವಾ…? ಅಷ್ಟಕ್ಕೂ ತೊಂದರೆಯೇ ಅರ್ಥವಾಗಿದ್ದರೆ ಏನೆಂದು ಚಿಕಿತ್ಸೆ ಕೊಡುತ್ತಾರೆ. ಅದೆಲ್ಲಾ ಏನಾದರೂ ಇರಲಿ…. ನಾವಂತೂ ಇತರರಿಗಿಂತಲೂ ಅದೃಷ್ಟವಂತರೆಂದು ಕುಟುಂಬದ ೫೨ರ ಲೆಟಿಜಿಯಾ ಮಾರ್ಸಿಲ್ ಹೇಳುತ್ತಾಳೆ. ಈ ಯಾತನಾ ರಹಿತ ಕುಟುಂಬ ಇಟಲಿಯಲ್ಲಿದೆ. ಇಂತಹವರ ಸಂಖ್ಯೆ ಹೆಚ್ಚಾದಷ್ಟೂ ಏನಾಗಬಹುದು? ನೋವು ನಿವಾರಕ ಗುಳಿಗೆ ತಯಾರಿಸುವ, ಮಾರಾಟ ಮಾಡುವ ಕಂಪೆನಿಗಳಿಗೆ ಬೀಗ ಬೀಳಲಿದೆ.
೧ ನಿಮಿಷದಲ್ಲಿ ೧೨೨ ಕಾಯಿ ಫಳಾರ್!
ಒಂದು ನಿಮಿಷದಲ್ಲಿ ೧-೨ ತೆಂಗಿನ ಕಾಯಿ ಒಡೆದು ಹಾಕಬಹುದು. ಇನ್ನೂ ಹೆಚ್ಚೆಂದರೆ ೫-೬ ಮಾಡಬಹುದು. ಆದರೆ ಅಭಿಷೇಶ್ ಡೊಮಿನಿಕ್ ೧೨೨ ತೆಂಗಿನ ಕಾಯಿ ಒಡೆದು ದಾಖಲೆ ಮಾಡಿದ್ದಾನೆ. ಈತನ ಕೈ ಏಟಿಗೆ ನಲುಗಿದ ತೆಂಗಿನ ಕಾಯಿಗಳು ನೀರು ಚೆಲ್ಲಿಕೊಂಡಿವೆ. ತೆಂಗು ತುಂಡು ತುಂಡಾಗಿವೆ. ಅಭಿಷೇಶ್ ಒಂದೊಂದು ಕಾಯಿ ಪುಟ್ಟಿ ಮಾಡಿದಾಗಲೂ ‘ಅಯ್ಯೋ ಅಮ್ಮಾ’ ಎನ್ನದೇ ಭಲೇ ಜೋಷ್ನಲ್ಲಿಯೇ ಕಾಯಿ ಕುಟ್ಟಿದ್ದಾನೆ. ತೆಂಗಿನಕಾಯಿ ಒಡೆದು ದಾಖಲೆ ನಿರ್ಮಿಸುವ ಕೆಲಸ ಇಂದು ನಿನ್ನೆಯದಲ್ಲ. ಈ ಹಿಂದೆ ಕೂಡ ಇಂತಹ ಪ್ರಯೋಗಗಳು ಆಗಿತ್ತು. ೨೦೧೧ರಲ್ಲಿ ಜರ್ಮನಿಯ ಕಹ್ರಿಮನೋವಿಕ್ ಬರಿಗೈಯಲ್ಲಿ ಒಂದು ನಿಮಿಷದಲ್ಲಿ ೧೧೮ ತೆಂಗಿನಕಾಯಿ ಒಡೆದಿದ್ದ.
ಅವನ ಈ ದಾಖಲೆಯನ್ನು ಡೊಮಿನಿಕ್ ಮುರಿದಿದು ಈ ಬಾರಿಯ ಗಿನ್ನೀಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸೇರಿದ್ದಾನೆ. ಅಭಿಷೇಶ್ ಡೊಮಿನಿಕ್ ಕೇವಲ ತನ್ನ ಬಲಗೈ-ಬರಿಗೈ ಬಳಸಿ ಕೇರಳದ ಕೊಟ್ಟಾಯಾಂನಲ್ಲಿ ಕುಟ್ಟಿದ್ದಾನೆ. ಇವನ ಕೈಚಳಕಕ್ಕೆ ನೋಡುಗರು ಬೆರಗಾದರೆ ಇವನು ಬಸವಳಿಯಲೇ ಇಲ್ಲ. ‘ನಾನು ಬಲವಾದ ನಿರ್ಣಯವನ್ನು ಕೈಗೊಳ್ಳುವ ವ್ಯಕ್ತಿ. ಮನುಷ್ಯರಲ್ಲಿ ಬಲವಾದ ಶಕ್ತಿ ಇದೆ ಎನ್ನುವುದನ್ನು ನಂಬುತ್ತೇನೆ. ಗಿನ್ನಿಸ್ ದಾಖಲೆ ಮಾಡಬೇಕು ಎನ್ನುವುದು ನನ್ನ ಕನಸಾಗಿತ್ತು’ ಎಂದು ಅಭಿಷೇಷ್ ತಿಳಿಸಿದ್ದಾನೆ. ಕಾಯಿ ಕುಟ್ಟುವ ಕೊಟ್ಟಾಯಾಂ ‘ಅಭಿ’ಗೆ ಯಾವ ವೃತ್ತಿ ಸೂಕ್ತ? ಜಾತ್ರೆಗಳಲ್ಲಿ ತೆಂಗಿನಕಾಯಿ ಒಡೆಯುವ ಕೆಲಸ ಉತ್ತಮ.
ಶಾಂತಿನಿವಾಸಗಳು
ಸುಂದರ ಬಂಗಲೆ, ವೈಭವೋಪೇತ ವಿಲ್ಲಾಗಳು, ಮನೆಯೊಳಗೆ ಗುಣಮಟ್ಟದ ಪೀಠೋಪಕರಣ, ಆಧುನಿಕಸ್ಪರ್ಶ, ಧೂಳು ಕಾಣದ ನೆಲ , ಅಂದ ಹೆಚ್ಚಿಸಲು ಹೂ ಕುಂಡಗಳು, ಮನೆಯ ಮುಂದೆ ಕೈ ತೋಟ, ಅಲ್ಲಿ ಬೆಳೆದು ನಿಂತ ಗಿಡ ಮರಗಳು, ಅಂಗಳ ದಾಟಿದರೆ ಸದ್ದಿಲ್ಲ-ಸಂಚಾರವಿಲ್ಲದ ವಿಶಾಲ ರಸ್ತೆಗಳು, ತಡರಾತ್ರಿಯಲ್ಲಿ ಜಗಮಗಿಸುವ ವಿದ್ಯುತ್ ದೀಪಗಳು, ಕೆಲವು ಮನೆಗಳಲ್ಲಿ ಎಸಿ, ಎಲ್ಲವೂ ಇದೆ…ಇವೆಲ್ಲಾ ಯಾವುದೋ ಡಾಲರ್ಸ್ ಕಾಲೋನಿ ಅಥವಾ ನಗರದ ಹೊರವಲಯದ ಚಿತ್ರಣವಲ್ಲ. ಅಥವಾ ಅಮೆರಿಕ, ಆಸ್ಟ್ರೇಲಿಯಾ ದೇಶದ ಶ್ರೀಮಂತರ ವಿಲ್ಲಾಗಳಿರುವ ಬಡಾವಣೆಗಳಲ್ಲ. ಚಿರಶಾಂತಿ ನಿವಾಸಗಳು, ಅಂದರೆ ಸ್ಮಶಾನ ಮೌನವಿರುವ ಶಾಂತಿಧಾಮಗಳು ಮತ್ತೊಮ್ಮೆ ಅಲಿಯಾಸ್ ಸ್ಮಶಾನಗಳು.
ಶ್ರೀಮಂತರು ಸತ್ತಮೇಲೂ ವೈಭೋಗ ಮಾಡುತ್ತಾರಂತೆ. ಅವರ ವೈಭೋಗಕ್ಕೆ ತಕ್ಕಂತೆ ಇಲ್ಲಿ ಮನೆಗಳನ್ನು ನಿರ್ಮಿಸಲಾಗಿದೆ. ಇದು ಚೀನಿಯರ ನಂಬಿಕೆ. ಈ ನಂಬಿಕೆಗೆ ೨೦೦ ವರ್ಷಗಳ ಇತಿಹಾಸವಿದೆ. ಅಚ್ಚರಿಯೆಂದರೆ ‘ಶಾಂತಿ ನಿವಾಸಗಳು’ ಫಿಲಿಪೈನ್ಸ್ನ ಮಾಣಿಲ ನಗರದಲ್ಲಿದೆ. ಸುಮಾರು ೧೦ಸಾವಿರಕ್ಕೂ ಹೆಚ್ಚು ವೈಭವೋ ‘ಪ್ರೇತ’ ಮನೆಗಳಿವೆ. ಸ್ಥಳೀಯ ಸರ್ಕಾರ ಇವುಗಳನ್ನು ಕಾಪಿಡುವ ಕೆಲಸ ಮಾಡುತ್ತಿವೆ. ‘ಬೇವರ್ಲಿ ಹಿಲ್ಸ್ ಆಫ್ ಡೆಡ್’ ಎಂದು ನಾಮಕರಣ ಮಾಡಿದೆ. ಈ ಬೃಹತ್ ಸಮಾಧಿ ಬಡಾವಣೆಯನ್ನು ಪ್ರವಾಸಿ ಕೇಂದ್ರವನ್ನಾಗಿ ಮಾಡುವ ಇರಾದೆ ಫಿಲಿಫೈನ್ ಸರ್ಕಾರದ್ದು. ಈ ‘ಬೃಂದಾ’ವನಗಳನ್ನು ವೀಕ್ಷಿಸಲು ಜಗತ್ತಿನ ವಿವಿಧ ಭಾಗಗಳಿಂದ ಜನ ಇಲ್ಲಿಗೆ ಬರುತ್ತಾರೆ. ಅಲ್ಲಿಹುದು ನಮ್ಮ ಮನೆ ಇಲ್ಲಿಗೆ ಬಂದೆ ಸುಮ್ಮನೆ ಎನ್ನುತ್ತಾ ಮಾಣಿಲಾಗೆ ಒಮ್ಮೆ ನೋಡಿಬರಲು ಅಡ್ಡಿಯಿಲ್ಲ. ಬಿದರ್ ಮೋಟಾರ್…
ಈ ‘ಬಿದರ್ಮೋಟಾರ್’ಗೆ ಬೊಂಬ್ ಆಧಾರ. ಅಂತಿಮಯಾತ್ರೆಗಲ್ಲ – ನಿತ್ಯಯಾತ್ರೆಗೂ ಇದು ಬಳಕೆಯಾಗುತ್ತಿದೆ. ಗುಡುಗುಡು ಎನ್ನುತ್ತಾ ಗೂಡು ಸೇರಿಸುತ್ತದೆ. ಪ್ರಯಾಣ ಪುಗಸಟ್ಟೆಯಲ್ಲ. ಒಂದು ರೈಡ್ಗೆ ೫೦ ಸೆಂಟ್ಸ್ ಪಾವತಿಸಬೇಕು. ವಿದೇಶಿಯರಿಗೆ, ವ್ಯವಹಾರ ಅರಿತಿಲ್ಲದವರಿಗೆ ಇದರ ರೊಕ್ಕ ಇನ್ನಷ್ಟು ದುಬಾರಿಯಾಗಲಿದೆ. ಎದುರಿನಿಂದ ಉಗಿಬಂಡಿ ಬಂದರೇ…? ಹಾಗಾಗದು. ೧೯೮೦ರಲ್ಲಿ ಆರಂಭಗೊಂಡ ‘ಬಿದರ್ ಎಕ್ಸ್ಪ್ರೆಸ್’ಗೆ ಹಿಂದೆ-ಮುಂದೆ ಯಾವುದೇ ಟ್ರೈನ್ ಗುದ್ದಿಲ್ಲ. ಯಾಕೆ ಹೀಗೆ? ೧೯೭೦ರಲ್ಲಿಯೇ ರೈಲ್ವೆ ಹಳಿ ನಿರ್ಮಿಸಲಾಯಿತು. ಆದರೆ ರಾಷ್ಟ್ರೀಯ ರೈಲ್ವೆ ಅಭಿವೃದ್ಧಿ ನಿಗಮ ಹಣ ಬಿಡುಗಡೆಗೆ ಉದಾಸೀನತೆ ತೋರತೊಡಗಿತು.
೧೯೮೦ರ ವೇಳೆಗೆ ಗಲಭೆ ದೊಂಬಿಗಳು ಆರಂಭವಾದ ಕಾರಣ ಉಗಿ ಬಂಡಿ ಹಳಿಗೆ ರೈಲು ಇಳಿಸಲು ವಿಳಂಬವಾಯಿತು. ಆನಂತರ ಕೆಲವರು ‘ಹಳಿ’ದು ಹೋಗುತ್ತಿರುವ ರೈಲುಗಳ ಮೇಲೆ ಚಕ್ರಗಳುಳ್ಳ ಬಿದರ್ ಗಾಡಿ ಕಟ್ಟಿದರು. ದೋಣಿಗಳನ್ನು ಹುಟ್ಟು ಹಾಕಿ ಚಲಾಯಿಸುವಂತೆ ಓಡಿಸಲಾಗುತ್ತಿತ್ತು. ಆನಂತರ ಮೋಟರ್ ಬಂತು, ಸ್ಪರ್ಧಿಗಳು ಬಂದರು. ಪ್ರವಾಸಿಗರು ಬಂದರು. ರೈಲು ಓಡದಿದ್ದರೇನು…? ಇವರ ಬಿದರು ಮೋಟರ್ನ ವ್ಯವಹಾರ ಭರ್ಜರಿಯಾಗಿ ಸಾಗಿದೆ. ವಿದೇಶಗಳಿಂದಲು ಬಿದರ್ ಮೋಟಾರ್ ಸರ್ವಿಸ್ನ ಸವಿ ಸವೆಯಲು ಬರುತ್ತಾರೆ. ಸರ್ಕಾರ ನಿರ್ಧಾರ ತೆಗೆದುಕೊಳ್ಳೋದು ನಿಧಾನ ಮಾಡಿದರೂ ಹಲವರಿಗೆ ಲಾಭ ಖಚಿತ. ಬಿದರ್ನ ಖದರ್ ಕಾಣಲು ಕಾಂಬೋಡಿಯಕ್ಕೆ ತೆರಳಬೇಕು. ಅಲ್ಲಿ ಓಸರಾಲು ಊರಿನಲ್ಲಿ ಇಂತಹ ಬಿದರ್ ಮೋಟಾರ್ ಗಾಡಿಗಳನ್ನು ಕಾಣಬಹುದು. ಕಳೆದ ವರ್ಷ ಅಕ್ಷರಶಃ ರೈಲುಗಳನ್ನು ಓಡಿಸಲು ಅಲ್ಲಿನ ರಾಷ್ಟ್ರೀಯ ರೈಲ್ವೆ ಪ್ರಾಧಿಕಾರ ಚಿಂತನೆ ನಡೆಸಿತು. ಆದರೆ ಕಾರ್ಯಗತವಾದ ಬಗೆಗೆ ಮಾತ್ರ ಮಾಹಿತಿಯಿಲ್ಲ.
ಕಲ್ಲಲ್ಲಿ ಘಂಟಾನಾದ
ಇಲ್ಲಿ ಬಿದ್ದಿರುವ ಬಂಡೆಗಳನ್ನು, ಕಲ್ಲುಗಳನ್ನು ತಟ್ಟಿದರೆ ಕರ್ಕಶ ಶಬ್ದ ಬಾರದು… ಗಂಟೆ, ಮೃದಂಗ, ಟಮಟೆ… ಮುಂತಾದ ವಾದ್ಯಗಳ ನಾದ-ನಿನಾದ ಹೊರಹೊಮ್ಮುತ್ತದೆ. ೧-೨ ಬಂಡೆಗಳಾಗಿದ್ದರೆ ನಮ್ಮಲ್ಲೂ ಇದೆ ಎಂದು ನಾವು ಬೀಗಬಹುದಿತ್ತು. ೧೨೮ ಎಕರೆಯಲ್ಲಿನ ಕಲ್ಲುಗಳಿಗೆಲ್ಲಾ ಈ ಗುಣವಿದೆ. ಈ ಕಲ್ಗುಣಕ್ಕೆ ಕಾರಣ? ಪ್ರಾಯಶಃ ಈ ಶಿಲೆಗಳಲ್ಲಿ ಕಬ್ಬಿಣ ಮತ್ತು ಅಲ್ಯೂಮಿನಿಯಂ ಅಂಶ ಅತಿ ಹೆಚ್ಚಾಗಿರಬಹುದೆನ್ನುತ್ತಾರೆ ಭೂ ವಿಜ್ಞಾನಿಗಳು. ಅಥವಾ ಇಲ್ಲಿ ಆಯಸ್ಕಾಂತೀಯ ಶಕ್ತಿಗಳ ಪರಿಣಾಮ ಹೀಗೆ ನಾದ ಹೊಮ್ಮಲು ಕಾರಣವಾಗಿರಬಹುದು. ಅರೆ ಈ ಕಲ್ಲುಗಳನ್ನು ತಂದು ವಾದ್ಯಗಳನ್ನು ಮಾಡಬಹುದಲ್ಲವೇ? ಹೌದು. ಆ ಕೆಲಸವನ್ನೂ ಮಾಡಿದ್ದಾರೆ. ಸುಮಾರು ಇನ್ನೂರು ವರ್ಷಗಳ ಹಿಂದೆಯೇ ಈ ಶಿಲೆಗಳನ್ನು ಬಡಿದು ಸಂಗೀತ ಕಚೇರಿ ಮಾಡಿದವರಿದ್ದಾರೆ.
ಎಲ್ಲಿದೆ ಈ ಕಲ್ಗುಣ ಇರುವ ಬಂಡೆಗಳು? ಅಮೆರಿಕದ ಫಿಲಿಡೆಲ್ಪಿಯಾದಲ್ಲಿದೆ. ಈ ಕಲ್ಲುಗುಣ ಅರಿಯುವಾಗ ಆಯ ತಪ್ಪಿ ಬಿದ್ದರೆ? ಕಾಲ್ಗುಣ ಸರಿಯಿಲ್ಲ ಎನ್ನಬಹುದು. ಈ ಕಲ್ಲುಗಳಲ್ಲಿಯೇ ಘಂಟೆ ಮಾಡಿ ಇಲ್ಲಿನ ದೇವಸ್ಥಾನಗಳಲ್ಲಿ ಮೊಳಗಿಸಿದರೆ ಹೇಗೆ? ಬೇಡ. ಫಿಲಿಡೆಲ್ಫಿಯಾದ ಕಲ್ಲಿನ ಘಂಟೆಗಳನ್ನು ಕೊಳ್ಳಲು ಗಂಟು ಗಂಟು ಹಣ ಖರ್ಚುಮಾಡಬೇಕಾಗುತ್ತದೆ. ಕಲ್ಲು ದೇವರಿಗೆ, ಕಲ್ಲಿನ ಘಂಟೆಗಿಂತಲೂ ಕಂಚಿನ ಘಂಟೆನೇ ಶ್ರೇಷ್ಠ.
ಮ್ಯಾನ್ ಹೋಲ್ ಮುಚ್ಚಳದ ಎದೆ ಮೇಲೆ!
‘ಕಲೆ’ ಎನ್ನುವುದು ಒಂದು ರೀತಿಯಲ್ಲಿ ಸೌಂದರ್ಯವಿದ್ದಂತೆ. ಗುರುತಿಸುವ ಕಣ್ಣುಗಳಿಗೆ ಮಾತ್ರವೇ ಕಂಡೀತು. ಮ್ಯಾನ್ ಹೋಲ್ ಮುಚ್ಚಳದ ಮೇಲಿನ ವಿವಿಧ ಆಕಾರವು ಕಲೆತಯಂತೆ ಕಂಡೀತು. ಅದನ್ನೇ ಎದೆಯ ಮೇಲೆ ಧರಿಸಿ ಅಡ್ಡಾಡುತ್ತಿದ್ದರೆ ಅದೇ ಒಂದು ಫ್ಯಾಶನ್ ಆದೀತು. ಇಸ್ಸೀ… ಥೂ… ಎನ್ನದಿರಿ. ಇದು ಅಕ್ಷರಶಃ ಹೊಸ ಟ್ರೆಂಡ್. ಬಿಬಿಎಂಪಿಯ ಪೌರ ಕಾರ್ಮಿಕರು ಹುಟ್ಟುಹಾಕಿದ್ದಲ್ಲ. ಜರ್ಮನಿಯ ಬರ್ಲಿನ್ ಕಲಾಕಾರನೊಬ್ಬ ಇದನ್ನು ಆವಿಷ್ಕರಿಸಿದ್ದಾನೆ. ಮುಂದುವರೆದ ಜರ್ಮನಿಯವರೇ ಹೀಗೆ ಮಾಡುತ್ತಿರುವುದರಿಂದ ಬೆಂಗಳೂರಿಗರು ಇದನ್ನು ಮುಂದುವರೆಸಿಕೊಂಡು ಹೋಗಲು ಅಡ್ಡಿಯಿಲ್ಲ!
ಜರ್ಮನಿಯ ರಾಬ್ರುಡೆಕ್ರಿನಿನ್ ಎಂಬ ಮುದ್ರಣಕಾರರು ಈಗ ಜರ್ಮನಿ ಸೇರಿದಂತೆ ಯುರೋಪಿನ ವಿವಿಧ ದೇಶಗಳ ಮ್ಯಾನ್ ಹೋಲ್ಗಳನ್ನು ಹುಡುಕಿ ಅದರ ಮುಚ್ಚಳದ ಮೇಲಿನ ಡಿಸಿಜೈನ್ಗೆ ಮಾರುಹೋಗಿದ್ದಾರೆ. ಮಾಸದ ಶಾಯಿಯನ್ನು ಮ್ಯಾನ್ ಮುಚ್ಚಳಕ್ಕೆ ಬಳಿಯುತ್ತಾರೆ. ಟಿ ಶರ್ಟ್ ಅದರ ಮೇಲೆ ಇಟ್ಟು ಪ್ರಿಂಟ್ ಹಾಕಿ ಮಾರಾಟಕ್ಕೆ ಇಟ್ಟಿದ್ದಾರೆ. ಜನ ಮುಗಿಬಿದ್ದು ಇವುಗಳನ್ನು ಖರೀದಿಸುತ್ತಿದ್ದಾರೆ. ರಾಬ್ರುಡೆಕ್ರಿನಿನ್ ಹೀಗೆ ಮಾಡುತ್ತಿರುವರು? ನಮ್ಮ ಸುತ್ತಲೂ ಇರುವ ಕಲೆಗಳನ್ನು ಜನ ಗುರುತಿಸುವಂತಾಗಬೇಕು ಎಂಬುದು ಅವರ ಉದ್ದೇಶವಂತೆ. ಅದೆಷ್ಟು ನಿಜವೋ ಗೊತ್ತಿಲ್ಲ. ಒಟ್ಟಿನಲ್ಲಿ ಪುಗ್ಸಟ್ಟೆ ಅಚ್ಚು ಸಿಕ್ತು ಪ್ರಿಂಟ್ ಹಾಕಿ ಕಾಸು ದೇಪುತ್ತಿದ್ದಾರೆ ಅಷ್ಟೇ. ಜನರ ರುಚಿ, ಅಭಿರುಚಿ ಎರಡೂ ಬದಲಾಗುತ್ತಿದೆ. ಕಕ್ಕಸುಗುಂಡಿಳೆಂದರೆ ಅಸಹ್ಯ ಪಡುವ ಕಾಲವೊಂದಿತ್ತು. ಅದರ ಮೇಲಿನ ಮುಚ್ಚಳವೂ ಅಷ್ಟೇ ಅಸಹ್ಯವಾಗುತ್ತಿತ್ತು. ಆದರೆ ಈಗ ಗುಂಡಿಗಳ ಮೇಲಿನ ಮುಚ್ಚಳ ಆಪ್ಯಾಯಮಾನವಾಗುತ್ತಿದೆ. ನಾಳೆ ಇಂತಹ ಮ್ಯಾನ್ಹೋಲ್ಗಳಲ್ಲಿರುವುದನ್ನೇ ಬಳಿದುಕೊಟ್ಟರೂ ಹೊಸ ಪ್ಯಾಷನ್ ಎಂದು ಧರಿಸಿ ಅಡ್ಡಾಡಿದರೂ ಅಚ್ಚರಿಯಿಲ್ಲ. ನಿಂತು ಕೂರಿ-ಕೂರಿ ನಿಲ್ಲಿ!
ನೋಡೋದಿಕ್ಕೆ ಅಂಗವಿಕಲರು ಬಳಸುವ ಊರುಗೋಲಿನಂತೆ ಇದ್ದರೂ ಇದು ಚೇರ್ ಎಂದರೆ ನೀವು ನಂಬಲೇಬೇಕು. ಈ ನೂತನ ಆವಿಷ್ಕಾರವು ಕ್ರಿಕೆಟ್ ಆಟಗಾರರ ಪ್ಯಾಡ್ಗಳ ರೀತಿಯಲ್ಲಿ ಗೋಚರಿಸಬಹುದು. ಆದರೆ ಇವುಗಳ ಮೇಲೆ ತಕ್ಕಮಟ್ಟಿಗೆ ಕೂರಬಹುದು. ತೀರಾ ಕುಂಡೆ ಇಳಿಬಿಟ್ಟು ಕೂರಲು ಸಾಧ್ಯವಾಗದಿದ್ದರೂ, ಕೂತಂತೆಯಾದರು ಮಾಡಬಹುದು. ಆದರೆ ನೋಡುಗರಿಗೆ ನಿಂತಂತೆ ಗೋಚರಿಸುವುದು. ರೈಲ್ವೆ ಟಿಕೆಟ್ಗಳಿಗೆ, ಸಿನಿಮಾ ಸಾಲುಗಳು ಸೇರಿದಂತೆ ಸರದಿಯಲ್ಲಿ ಚಲಿಸುವವರಿಗೆ ಪ್ರಯೋಜನ ಹೆಚ್ಚು. ಕಾಲಿನಲ್ಲಿ ತಾಕತ್ತಿಲ್ಲದವರಿಗೆ, ಹೆಚ್ಚು ಕಾಲ ನಿಲ್ಲಲು ಸಾಧ್ಯವಾಗದವರಿಗೆ, ವೆರಿಕೋಸ್ ವೈನ್ ಎಂಬ ಕಾಲಿನ ನರ ಊತದ ರೋಗವುಳ್ಳವರಿಗೆ, ಮಂಡಿ ಚಿಪ್ಪಿನ ಶಸ್ತ್ರ ಚಿಕಿತ್ಸೆ ಆದವರಿಗೆಲ್ಲಾ ಇದು ವರದಾನವಾಗಲಿದೆ.
ಜಪಾನಿನ ನಿಟ್ಟೋ ಕಂಪೆನಿಯ ತಯಾರಿಕಗೆ, ಚಿಬ್ಬಾ ವಿಶ್ವವಿದ್ಯಾಲಯ ತಾಂತ್ರಿಕ ನೆರವು ಒದಗಿಸಿದೆ. ಆರ್ಚಲಿಸ್ ಹೆಸರಿನ ಈ ಹೈಟೆಕ್ ಕುರ್ಚಿ ಸದ್ಯ ಜಪಾನ್ನಲ್ಲಿ ಲಭ್ಯ. ನೋಡಲು ಸರಳವಾಗಿದ್ದರೂ ಬೆಲೆ ದುಬಾರಿಯಾಗಿದೆ. ಈ ಚೇರ್ ನಮ್ಮಲ್ಲೂ ಬಂದರೇ…? ಚುನಾವಣೆಗಳಲ್ಲಿ ನಿಲ್ಲುವರಿಗೆ ಅನುಕೂಲವಾದೀತು. ಕಾಲಿಗೆ ಏಟು ಬಿದ್ದಂತೆ ‘ಡೌ’ ಹೊಡೆಯುವ ನಟ/ನಟಿ, ರಾಜಕಾಋಣಿಗಳಿಗೆ ಇದು ಹೆಚ್ಚು ಆಪ್ಯಾಯಮಾನವಾದೀತು. ಕುತೂಹಲಕ್ಕೆಂದು ಇದನ್ನು ಬಳಸುತ್ತಿರುವಾಗ ಆಯತಪ್ಪಿ ಕೆಳಗೆ ಬಿದ್ದು ಮಂಡಿಯ ಮೂಳೆ ಮುರಿದುಕೊಂಡರೆ? ಪರ್ಮನೆಂಟ್ ಆಗಿ ಇದನ್ನು ಬಳಸಬೇಕಾಗುತ್ತದೋ ಏನೋ?! ಅಂದಹಾಗೆ ಸರ್ವಜ್ಞ ಈ ಚೇರ್ ಕಂಡಿದ್ದರೆ ಹೀಗೆ ಹೇಳುತ್ತಿದ್ದನೋ ಏನೋ…?! ಕೂತರೂ ನಿಂತಂತಿರಬೇಕು. ನಿಂತರೂ ಕೂತಂತಿರಬೇಕು. ನಿಂತು, ಕೂತರೂ ಅನ್ಯರಿಗೆ ತಿಳಿಯಬಾರದು ಸರ್ವ…!
ಕಾಫಿಲಾರಂ
ಈ ಚಳಿಗಾಲದಲ್ಲಿ ಬೆಡ್ ಕಾಫಿಯಿಂದಲೇ ಬೆಳಕು ಕಾಣುವ ಮಂದಿಗೆ ಕೊರತೆಯಿಲ್ಲ. ದಿನ ನಿತ್ಯ ಹಾಸಿಗೆ ಮೇಲೆ ಬಿದ್ದುಕೊಂಡೇ ಕಾಫಿ ಕೇಳಿದರೆ ಎಂಥಾ ಪತಿವ್ರತೆಯಾದರೂ ಕೊಡುವುದಿಲ್ಲ. ತ್ರಿಪುರ ಸುಂದರಿಯೇ ಆಗಿದ್ದರೂ ಪತಿಯಾದವನು ನಿತ್ಯವೂ ಕಾಫಿ ಕೊಟ್ಟು ಸೇವೆ ಮಾಡುವುದೂ ಇಲ್ಲ. ಅದು ಸಾಧ್ಯವೂ ಅಲ್ಲ. ಕಾಫಿ ಕುಡಿದು ಮೇಲೇಳುವ ಜನರಿಗೆಂದೇ ‘ಕಾಫಿ ಅಲಾರಂ’ ಬಂದಿದೆ. ನಿಶ್ಚಿತ ಸಮಯಕ್ಕೆ ಕಾಫಿ ಮಾಡಿ, ಅಲಾರಂ ಸದ್ದು ಮಾಡಲಿದೆ. ಘಮ ಕಾಫಿ ಹೀರಿ ನಿದ್ದೆಗೆ ಗುಡ್ ಬೈ ಹೇಳಬಹುದು. ಅಥವಾ ಕಾಫಿ ಹೀರಿ ಮತ್ತೊಮ್ಮೆ ಹಾಸಿಗೆಯಲ್ಲಿಯೇ ಬಿದ್ದು ಹೊರಳಾಡಬಹುದು.
ಬರಿಸ್ಯುಯರ್ ಅಲಾರಂ ಕ್ಲಾಕ್ ಹೆಸರಿನ ಈ ಉಪಕರಣದಲ್ಲಿ ಕಾಫಿ ಪುಡಿ, ಸಕ್ಕರೆ, ನೀರು, ಪುಟ್ಟ ಲೋಟದಲ್ಲಿ ಹಾಲು ಇವೆಲ್ಲ ರಾತ್ರಿ ಮಲಗುವ ಮುನ್ನವೇ ಇರಿಸಿ, ಅಲಾರಂ ಫಿಕ್ಸ್ ಮಾಡಿದರೆ ಸಾಕು. ಉಳಿದಿದ್ದು ಈ ಎಲೆಕ್ಟ್ರಾನಿಕ್ ಉಪಕರಣವೇ ಮಾಡಿಕೊಡಲಿದೆ. ಚಹಾ ಪ್ರಿಯರು ಇದನ್ನು ಬಳಸಲು ಅಡ್ಡಿಯಿಲ್ಲ. ಕಾಫಿ ಬೀಜದ ಬದಲು ಚಹಾಪುಡಿ ಇರಿಸಿದರೆ ಸಾಕು. ಸದ್ಯಕ್ಕೆ ಲಂಡನ್ನಲ್ಲಿ ಲಭ್ಯ. ಬೆಲೆ ೨೫೦ ಪೌಂಡ್ಗಳು. ಕಾಫಿ ಕೊಟ್ಟು ಮೇಲೆಬ್ಬಿಸುವ ಈ ಅಲಾರಂನ್ನು ಕಾಫಿಲಾರಂ ಎಂದರೆ ತಪ್ಪಾಗದು. ಕೋಳಿ ಕೂಗಿದ್ರೆ ಅಥವಾ ಕಾಫಿ ಕುಡಿದ್ರೆ ಮಾತ್ರ ಬೆಳಕಾಗೋಲ್ಲ. ಆದರೆ ಕೆಲವರಿಗೆ ಇವಿದ್ದರೆ ಮಾತ್ರನೇ ಬೆಳಕು ಹರಿದಿದ್ದು ತಿಳಿದೀತು. ಹೀಗಾಗಿ ‘ಕಾಫಿಲಾರಂ’ಗಳು ಇರಲೇ ಬೇಕು ಅಲ್ವಾ.
ಕುಚದ ಕುಡಿಕೆ
ಇವೆಲ್ಲಾ ಕಾಮೋತ್ತೇಜಕ ಕುಡಿಕೆಗಳೆನಿಸಬಹುದು. ಆದರೆ ಅದು ‘ಕಾಮಣ್ಣರಿಗೆ’ ಮಾತ್ರ. ಆದರೆ, ಕಲೆ ಹುಡುಕವವರಿಗೆ ಇದು ಕಲಾಪರಿಕರಗಳು. ಅದೆಲ್ಲಾ ಏನಾದರೂ ಇರ್ಲಿ…ಕುಚದ ಕುಡಿಕೆಯಲ್ಲಿ ಬಿಯರ್ ಕೊಟ್ಟರೆ ಕಿರಿಕಿರಿ ಮಾಯವಾಗಿ ಕಿಕ್ ಏರುವುದು ಸಹಜವಂತೆ. ವೈಜ್ಞಾನಿಕವಾಗಿ ಇದು ನಿರೂಪಿತವಾಗಿಲ್ಲದಿದ್ದರೂ ಕಾಮದ ಕಣ್ಣಿಂದ ಕಂಡಿದ್ದವರಿಗೆ ಇದರ ಅರಿವಾಗಿರುತ್ತದೆ. ಉನ್ಮಾದ ಅಲೆಯಲ್ಲಿ ತೇಲುತ್ತಿರುವ ‘ಕಾಮಣ್ಣಿಯ’ರಿಗೆ ಶಿಶ್ನ ಪಾತ್ರೆಯಲ್ಲಿ ಕೊಟ್ಟ ಮದ್ಯ ಮದವೇರಿಸೀತು. ಹೀಗಾಗಿ ನಿಮಿರಿದ ಶಿಶ್ನ ಪಾತ್ರೆ, ಶಿಶ್ನ ಹಿಡಿಯುಳ್ಳ ಜಗ್ ಇವೆಲ್ಲಾ ಇಲ್ಲಿ ಕಾಮನ್.
ಬಾರ್ನೊಳಗೆ ‘ಕಾಮಕೇಳಿಯ ಪಾತ್ರೆಗಳು’ ಮೇಲಾಟವಿದ್ದಲ್ಲಿ , ಹೊರಗೆ ಕೃತಕ ಕುಚ ಧರಿಸಿದವರು ‘ಆಡುಂಬೊಲ’ಕ್ಕಾಗಿ ಗಿರಾಕಿಗಳನ್ನು ಆಹ್ವಾನಿಸುತ್ತಾರೆ. ಇವರ ಜೋತು ಬಿದ್ದ ಕೃತಕ ಕುಚಗಳನ್ನು ನೋಡಿಯೇ ಹೊರಗಿದ್ದವರಿಗೆ ‘ಥ್ರಿಲ್’ ಆಗಿ ‘ಡ್ರಿಲ್’ ಮಾಡಬೇಕೆನಿಸುತ್ತದೆ. ಅಶ್ಲೀಲ ಆಕಾರದ ಪಾತ್ರೆಗಳನ್ನು ಮುಟ್ಟಿ ನೋಡಿ, ಅವುಗಳನ್ನು ಬಳಸಿ ಕುಡಿಯುವ ಉಮೇದು ಉಳ್ಳವರು ಚೀನಾದ ಬೀಜಿಂಗ್ ಶಿಯರ್ ಬಾರ್ಗೆ ತೆರಳಬೇಕು. ಅಲ್ಲಿ ‘ಕುಚಗುಳಿ’ ಕಾಮ’ನ್’. ಅಂದಹಾಗೆ ಈ ಬಾರ್ನ್ನು ಲುಲು ಎಂಬ ಮಹಿಳೆ ನಡೆಸುತ್ತಿದ್ದಾಳೆ. ಅವಳಿಗೆ ಇಂತಹ ಪಾತ್ರೆಗಳ ಮೇಲೆ ಅದೇಕೆ ಮೋಹ ಬಂತೋ ಗೊತ್ತಿಲ್ಲ. ಆದರೆ ಈಕೆ ತನ್ನ ಹಾದಿಯಲ್ಲಿಯೇ ಹಲವರನ್ನು ಒಯ್ಯುತ್ತಿರುವುದು ಸೋಜಿಗ. ಮತ್ತೇರಿಸುವ ಈ ಬಾರ್ ಮಾಲೀಕಳಾದ ಲುಲುಳನ್ನು ಏನನ್ನಬಹುದು? ‘ಕುಚೋನ್ಮತ್ತೇ’!
ಸಲಿಂಗ ಸಂಭ್ರಮಕ್ಕೆ ಸಂಸತ್ ಅನುಮೋದನೆ!
ದ್ವಿಲಿಂಗಿಗಳು ಮದುವರೆಯಾದರೆನೇ ಮಕ್ಕಳು-ಮರಿ ಆಗೋದು ಅನುಮಾನ. ಅಂತಿರುವಾಗ ಸಲಿಂಗಿಗಳ ಮದುವೆಯಾದರೆ ‘ಕೂಸು’ ಹುಟ್ಟುತ್ತಾ? ಅಂದರೆ ಖಂಡಿತ ಇಲ್ಲ. ಆದರೂ ಸಲಿಂಗ ಮದುವೆಗೆ ಆಸ್ಟ್ರೀಯಾ ದೇಶ ಒಪ್ಪಿಗೆ ನೀಡಿದ್ದರ ಬೆನ್ನಲ್ಲೇ ಇದೀಗ ಆಸ್ಟ್ರೇಲಿಯಾ ಸಂಸತ್ ಸಹ ಸಲಿಂಗ ಮದುವೆಗೆ ಅನುಮೋದನೆ ನೀಡಿದೆ. ಫೆಬ್ರವರಿಯಲ್ಲಿ ದೇಶದ ಮೊದಲ ಸಲಿಂಗ ಮದುವೆ ನಡೆಯಲಿದೆ. ಆಸ್ಟ್ರಿಯಾ ಬಿಡ್ರಿ… ಆಸ್ಟ್ರೇಲಿಯಾ ಭಾರತಕ್ಕಿಂತಲೂ ದೊಡ್ಡ ದೇಶ ಜನ ಸಂಖ್ಯೆ ವಿರಳ. ನಮ್ಮವರನ್ನು ದುಡ್ಡು, ಜಮೀನು ಕೊಟ್ಟು ಕರೆಸಿಕೊಳ್ಳುತ್ತಿದ್ದಾರೆ. ಅಂತಿರುವಾಗ ಸಲಿಂಗಿಗಳು ಮದುವೆಗೂ ಅಸ್ತು ಎಂದಿರುವುದು ಅಚ್ಚರಿಯೇ ಸರಿ.
ಆಸ್ಟ್ರೇಲಿಯಾದ ಮೇಲ್ಮನೆಯಲ್ಲಿ ಸಲಿಂಗ ಮದುವೆ ಅಧಿನಿಯಮಕ್ಕೆ ಒಪ್ಪಿಗೆ ಸಿಕ್ಕಿದ್ದು ಕೆಳಮನೆಯಲ್ಲೂ ಸಂಸದರು ಸಲಿಂಗ ವಿವಾಹಕ್ಕೆ ಮತ ಚಲಾಯಿಸಿದ್ದರಿಂದ ಅನುಮೋದನೆ ಸಿಕ್ಕಿದೆ. ನವೆಂಬರ್ ನಲ್ಲಿ ನಡೆದ ಐತಿಹಾಸಿಕ ಸರ್ವೆ ನಂತರ ಆಸ್ಟ್ರೇಲಿಯಾ ಸರ್ಕಾರ ಸಲಿಂಗ ಮದುವೆಯನ್ನು ಗಂಭೀರವಾಗಿ ಪರಿಗಣಿಸಿತ್ತು. ಸರ್ವೆಯಲ್ಲಿ ಸಲಿಂಗ ಮದುವೆ ಕುರಿತು ಜನರು ಅಭಿಮತ ವ್ಯಕ್ತಪಡಿಸಿದ್ದು ಶೇಖ ೬೧ರಷ್ಟು ಮಂದಿ ಒಪ್ಪಿಗೆ ನೀಡಿದ್ದರು. ಸಲಿಂಗ ಮದುವೆಗೆ ಕಾನೂನಿನಲ್ಲಿ ಒಪ್ಪಿಗೆ ಸಿಗುತ್ತಿದ್ದಂತೆ ಸಲಿಂಗಕಾಮಿಗಳು ಸಿಹಿ ಹಂಚಿ ಸಂಭ್ರಮಿಸಿದರೆಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ನಮ್ಮಲ್ಲೂ ಇಂತಹ ಮದುವೆಗಳಿಗೆ ಅಸ್ತು ಎಂದರೆ ಹೇಗೆ? ಇಸ್ಸೀ ಅಂದಾರು. ಇನ್ನು ಕೆಲವರು ‘ಸಲಿಂಗಿಗಳ ಸಂಗ ಅಭಿಮಾನ ಭಂಗ’ ಎಂದು ಗಾದೆ ಪೋಣಿಸಿ ಹೇಳಿದರೂ ಅಚ್ಚರಿಯೇನಿಲ್ಲ.