ಆತ್ಮಹತ್ಯೆಗೆ ಯತ್ನಿಸಿದವರು ಸಿಕ್ಕಿಬಿದ್ದರೆ ಅವರಿಗೆ ಕರೆದು ಬುದ್ಧಿ ಹೇಳುತ್ತೇವೆ. ‘ಈಸಬೇಕು…ಇದ್ದು ಜೈಸಬೇಕು…’ಎಂದೆಲ್ಲಾ ಬುದ್ದಿ ಹೇಳಿ ಅವರಿಗೆ ಮತ್ತೆ ಆತ್ಮಹತ್ಯೆಗೆ ಪ್ರಯತ್ನಿಸದಂತೆ ತಡೆಯುತ್ತೇವೆ. ಆದರೆ ಇಲ್ಲಿ ಮಾತ್ರ ವಿಚಿತ್ರ. ಶವದಪಟ್ಟಿಗೆಯಲ್ಲಿ ಮಲಗಿಸುತ್ತಾರೆ. ಯಾಕೆ ಗೊಟಕ್ ಅನ್ನಲಿ ಎಂದೇ? ಅಲ್ಲ. ಅದೊಂದು ವಿಚಿತ್ರ ಚಿಕಿತ್ಸೆ. ಅಂದಹಾಗೆ ಮಧ್ಯಮಧ್ಯದಲ್ಲಿ ಪ್ರಶ್ನೆ ಕೇಳದೆ ಮುಂದೆ ಓದಿ…ಸಾಯಲು ಯತ್ನಿಸಿದವರನ್ನು ಕಾಫಿನ್ಬಾಕ್ಸ್ಗೆ ಇಳಿಸುವ ಮುನ್ನ ಬಂಧು, ಬಳಗ, ಸ್ನೇಹಿತರಿಗೆ ಸ್ವಯಂ ಸಾವಿನ ಸುದ್ದಿಯ ಪತ್ರ ಬರೆಸುತ್ತಾರೆ.
ಕ್ಯಾಂಡಲ್ ಹಚ್ಚಿ, ಸಂಸ್ಕಾರದ ಮಂತ್ರಗಳ ಪಠಣವಾಗುತ್ತದೆ. ಸಾವಿನ ಅಧಿದೇವತೆಯ ಪೋಷಾಕು ತೊಟ್ಟವನು ಕಣ್ಣುಮುಚ್ಚುವಂತೆ ತಿಳಿಸುತ್ತಾನೆ. ಅದರಂತೆ ಶವದಪೆಟ್ಟಿಗೆಗೆ ಇಳಿದ ‘ಆತ್ಮಹಂತಕ’ ಪವಡಿಸುತ್ತಾನೆ. ಒಂದು ತಾಸು ಪೆಟ್ಟಿಗೆಯಲ್ಲಿ ಮಲಗಿರಬೇಕು. ಹೊರಬಂದ ನಂತರ ಆತ್ಮಹತ್ಯೆಯ ವ್ಯಾಧಿಕಾಡದು ಅವನಿಗೆ ನಿಧನವಾಗು ವಿಷಯವನ್ನು ನಿಧಾನವಾಗುತ್ತದಂತೆ. ದಕ್ಷಿಣ ಕೊರಿಯಾದಲ್ಲಿ ಕೆಲಸದ ಒತ್ತಡ ಬಹಳ, ಸ್ಪರ್ಧೆಗಳನ್ನು ಎದುರಿಸಲಾಗದೆ ನಿತ್ಯ ಅಂದಾಜು ೪೦-೫೦ ಮಂದಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಈ ಸಮೂಹಸನ್ನಿಗೆ ‘ಕಾಫಿನ್ ಬಾಕ್ಸ್’ ಚಿಕಿತ್ಸೆ ಮದ್ದಾಗಿದ್ದು ಸಾವಿನ ಸಂಸ್ಕಾರದ ಮಂತ್ರ-ತಂತ್ರಗಳ ನಂತರ ಹಲವರಿಗೆ ಬದುಕಿನ ಜ್ಞಾನೋದಯ ತರಿಸುತ್ತಿದೆ. ಈ ಚಿಕಿತ್ಸೆ ಪುಗಸಟ್ಟೆಯಲ್ಲ. ರೊಕ್ಕ ಕೊಟ್ಟು ಹೀಗೆ ಬದುಕಿಸಿಕೊಳ್ಳಬೇಕು. ಈ ಥೆರಪಿಯಿಂದ ಅದೆಷ್ಟು ಜನ ಬದುಕಿದರೋ ಗೊತ್ತಿಲ್ಲ… ಆದರೆ ಈ ಚಿಕಿತ್ಸೆ ನೀಡುತ್ತಿರುವ ವ್ಯಕ್ತಿಯದ್ದು ಐಷಾರಾಮಿ ಬದುಕೇ ಇರಬೇಕು!
ಗೂಬೆ ಕೆಫೆ
‘ಅಯ್ಯೊ ಗೂಬೆ ಮುಂಡೇದೇ…ಗೂಬೆ ನನ್ನಮಗನೇ…!’ ಎಂಬುದು ನಮ್ಮಲ್ಲಿ ಕಾಮನ್. ಅದರಲ್ಲೂ ಹಗಲು ಹೊತ್ತಿನಲ್ಲಿ ಮಲಗಿ ನಿದ್ರಿಸುವವರೆಂದರೆ ಅವರನ್ನು ಗೂಬೆಗಳೆಂದೇ ಕರೆಯುವುದು ವಾಡಿಕೆಯಾಗಿದೆ. ಗೂಬೆ ಕೂತರೂ ಹಾಳು-ಕೂಗಿದರೂ ಹಾಳು ಎಂಬ ಗಾದೆಗಳೇ ಗೂಬೆಯ ‘ಅವಗುಣ’ಗಳನ್ನು ಸಾರಿ ಸಾರಿ ಹೇಳುತ್ತವೆ. ಗಾದೆಗೆ ಬಾದೆ ಬೀಳದೆ ಶಿರದಲ್ಲಿಯೇ ಗೂಬೆಗೆ ಸ್ಥಾನ ನೀಡಬಹುದು. ಮುದ್ದಾಡಬಹುದು. ಅದರ ಕೂಗಿಗೆ ಕರ್ಣ ಅರಳಿಸಿ ಆನಂದಿಸಬಹುದು… ಆಮೇಲೆ? ಗೂಬೆಯಂತೆ ಕೂತಲ್ಲಿಯೇ ತೂಕಡಿಸದೆ ಇಷ್ಟದ ಖಾದ್ಯ ಸೇವಿಸಬಹುದು. ಈ ವೇಳೆಯಲ್ಲಿ ಗೂಬೆನೂ ನೋಡ್ತಾ ಇದ್ದರೆ ಅದಕ್ಕೂ ಒಂದು ತುತ್ತು ನೀಡಬಹುದು. ನಂತರ ಜಡಿಯುವ ಬಿಲ್ಮೊತ್ತ ತೆತ್ತು ಹೊರಬರಬೇಕು. ಗೂಬೆನ ಯಾರಾದರೂ ಮುದ್ದು ಮಾಡ್ತಾರಾ? ಹೌದು ರೀ…
ಗಿರಾಕಿಗಳು ಮುಗಿಬಿದ್ದು ಬರುತ್ತಿದ್ದಾರೆ. ಗೂಬೆಗಳ ಕಣ್ಣಿಗೆ ಹೊಂದಿಕೊಳ್ಳುವಷ್ಟು ಕತ್ತಲೆ ಇಲ್ಲಿರಲಿದೆ. ಗೂಬೆಗೆ ನೋವು, ಹಿಂಸೆ ನೀಡಬಾರದು. ಕೂಗಿ ಹೆದರಿಸಬಾರದೆಂಬ ಕಂಡೀಷನ್ಗಳಿವೆ. ಒಪ್ಪದಿದ್ದಲ್ಲಿ ‘ಗೂಬೆ ಮುಂ_ದೇ’ ಎಂಬ ನಿಂದನೆಯೊಂದಿಗೆ ಹೊರಗೆ ದಬ್ಬುತ್ತಾರೆ. ಒಪ್ಪಿಗೆ ಇದ್ದವರು ಜಪಾನ್ನ ಟೋಕಿಯೊಗೆ ತೆರಳಬೇಕು. ಅಲ್ಲಿ ಬೇಜಾನ್ (ಔಲ್ ಕೆಫೆ), ‘ಗೂಬೆ ಹೋಟೆಲ್’ಗಳಿವೆ. ಅಂದಹಾಗೆ ಈ ಗೂಬೆ ಹೋಟೆಲ್ಗಳ ಮೇಲೆ ಪ್ರಾಣಿ ದಯಾ ಸಂಘದವರ ಕಣ್ಣು ಬಿದ್ದಿದೆ. ಅವರು ಪ್ರಾಣಿಗಳಿಗೆ ಅತಿಯಾಗಿ ಹಿಂಸೆ ನೀಡುತ್ತಿರುವಿರಿ. ನಿಮ್ಮ ಮೇಲೆ ಕೇಸ್ ಜಡಿಯಬೇಕಾಗುತ್ತದೆ ಎಂದಿದ್ದಾರೆ. ಆದರೆ ಹೋಟೆಲ್ನವರು ಮಾತ್ರ ‘ಗೂಬೆ ಮುಂಡೆದೇ’ ಬೇಕಿದ್ದರೆ ಬಂದು ನೋಡು ನಾವೇನು ಹಿಂಸೆ ನೀಡುತ್ತಿಲ್ಲ ಎಂದು ಹೇಳಿಲ್ಲ. ಬದಲಿಗೆ ಗೂಬೆಯಂತೆ ತೂಕಡಿಸಿಕೊಂಡು ಕೂತಿದ್ದಾರೆ!
‘ಜೋಲ್’ಮುಖ
‘ನಿನ್ನ ಮುಖಕ್ಕೆ ತೂತು ಬೀಳಾ!’ ಅಂತ ಬೈದರೆ ಜರ್ಮನಿಯ ಜೋಲ್ ಮಿಗ್ಲರ್ಗೆ ಕೋಪಬಾರದು. ಏಕೆಂದರೇ…. ಮೂಗು ಸೇರಿದಂತೆ ೧೧ ಕುಳಿಗಳನ್ನು ಕೊರೆಸಿಕೊಂಡಿದ್ದಾನೆ. ಕೆಲವು ೩೪ ಎಂ.ಎಂ. ಇನ್ನಷ್ಟು ೪೦ ಎಂ.ಎಂ. ದೊಡ್ಡದಿವೆ. ಇವುಗಳಿಗೆ ಬಿರುಡೆಗಳನ್ನು ಮಾಡಿಸಿಕೊಂಡು ಬೇಕೆಂದಾಗ ನಾಲಿಗೆ ಹೊರ ಚಾಚಿ ಚೇಷ್ಟೆ ಮಾಡುತ್ತಾನೆ. ಒಂದು ಕಪಾಳದಿಂದ ದಾರ ತೂರಿಸಿ ಮತ್ತೊಂದರಿಂದ ಹೊರತೆಗೆಯುತ್ತಾನೆ. ‘ತೂತು ಬಾಯಿಗಿಂತಲೂ ಬೊಚ್ಚಬಾಯಿ ಮೇಲು!’ ಎಂಬ ಕನ್ನಡ ಗಾದೆಗೆ ವ್ಯತಿರಿಕ್ತವಾಗಿ ‘ಬೊಚ್ಚಬಾಯಿಗಿಂತಲೂ ತೂತುಬಾಯಿಯೇ ಮೇಲು’ ಎಂದಾನು-ಜೋಲ್. ಗಿನ್ನೀಸ್ನವರು ದಾಖಲೆ ಎಂದ ಮೇಲೆ ಈತನ ತೆವಲು ಇನ್ನಷ್ಟು ಹೆಚ್ಚಾಗಿದೆ.
ಅಂದಹಾಗೆ ಈತನೇ ಹೀಗೆಲ್ಲಾ ಮಾಡಿಕೊಂಡಿಲ್ಲ. ಬದಲಿಗೆ ಕಾಸ್ಮೆಟಿಕ್ ಸರ್ಜರಿ ತಜ್ಞರಿಗೆ ಲಕ್ಷಾಂತರ ಹಣ ನೀಡಿ ತೂತು ಕೊರೆಸಿಕೊಂಡಿದ್ದಾನೆ. ಜೋಲ್ನಿಂದಾಗಿ…. ರೌದ್ರಮುಖ, ನಗೆಮುಖ ಪಟ್ಟಿಗೆ ಹೊಸ ಸೇರ್ಪಡೆ… ‘ಜೋಲ್’ಮುಖ. ನಮ್ಮ ರಾಜಕಾರಣಿಗಳಿಗೂ ಇಂತಹ ಬಾಯಿ ಇದ್ದರೆ ಹುರಿದು ಮುಕ್ಕಲು ಅನುಕೂಲವಾಗಲಿದೆ! ಮುಖ್ಯಬಾಯಿಂದ ಬಲಗೈಯ್ಯಲ್ಲಿ ತುರುಕಿಕೊಂಡು ಪಕ್ಕದ ಬಾಯಿಂದ ಎಡಗೈಯ್ಯಲ್ಲಿ ಇನ್ನಷ್ಟು ತುರುಕಿಕೊಳ್ಳಬಹುದು ಅಲ್ವಾ…? ನೊ… ವಿಪಕ್ಷದವರು ಸುಮ್ಮನೆ ಇರಲ್ಲ… ಬಲಗೆನ್ನೆಯ ಬಾಯಿಗೆ ಒಳಗಿರುವುದೆಲ್ಲಾ ತೆಗೆದು ಬಿಡುತ್ತಾರೆ! ಹೀಗಾಗಿಯೇ ನಮ್ಮ ರಾಜಕಾರಣಿಗಳು ಇಂತಹ ಜೋಲ್ ಬಾಯಿ ಇರುವುದಿಲ್ಲ. ಅವರಿಗೇನಿದ್ದರು ನಾಲಿಗೆ ಹರಕು ಬೇಕಿದ್ದರೆ ಈಶ್ವರಪ್ಪ, ಶೋಭಾ, ಅನಂತ್ಕುಮಾರ್ ಹೆಗಡೆ, ಸಿಟಿ ರವಿ ಅವರನ್ನೇ ಗಮನಿಸಿ…
ಶ್ವಾನ್ಟ್ರೈನ್
‘ನಾಯಿಗೂ ಒಂದು ಕಾಲ’ ಅಂದರೆ ಇದೇ ಇರಬೇಕು…ಯೂಗ್ಜೆನ್ ಬೋಸ್ಟಿಕ್ನ ಎಂಟು ಬೋಗಿಗಳ ಎಕ್ಸ್ಪ್ರೆಸ್ ಟ್ರೈನ್ ಹೊರಟರೆ ಅಲ್ಲಿ ‘ಕೂ…ಕೂ… ಚುಗ್, ಬುಗ್’ಗೆ ಬದಲಾಗಿ ‘ಬೌ… ಬೌ…ಔ…ಔ’ಗಳೇ ಹೆಚ್ಚು. ಏಕೆಂದರೆ ಇದು ಶ್ವಾನ್ಟ್ರೈನ್. ಅಂದರೆ ಇದು ನಾಯಿಗಳಿಗೆ ಮಾತ್ರವೇ ಇರುವ ರೈಲು. ಯೂಗ್ಜೆನ್ ಅಜ್ಜನಿಗೆ ಅರಿವೆ ಚಿಂತೆಯಿಲ್ಲ-ಶ್ವಾನಗಳದ್ದೇ ಚಿಂತೆ. ಬೀಡಾಡಿ ನಾಯಿಗಳ ರಕ್ಷಕ ಈತ. ಹಲವು ನಾಯಿಗಳನ್ನು ರಕ್ಷಿಸಿದ್ದಾನೆ. ಅವುಗಳನ್ನು ಮುದ್ದಾಡಿದ್ದಾನೆ. ಹಸಿದಾಗ ಆಹಾರ ನೀಡಿದ್ದಾನೆ. ಪ್ರತಿಯಾಗಿ ಅವುಗಳು ಇವನ ತೋಟ ಕಾಯುತ್ತಿವೆ. ಅಜ್ಜ ಸಾಮಾನ್ಯದವನಲ್ಲಾ ರೀ….ಇದೇ ಕೆಲಸಕ್ಕೆ ಆಳುಗಳನ್ನು ನೇಮಿಸಿಕೊಂಡಿದ್ದರೆ ಇದಕ್ಕಿಂತಲೂ ಹತ್ತರಷ್ಟು ರೊಕ್ಕ ಖರ್ಚಾಗುತ್ತಿತ್ತು. ಅದೆಲ್ಲಾ ಏನಾದ್ರೂ ಇರ್ಲೀ ರೀ…
ಈಗ ಶ್ವಾನ್ ಟ್ರೈನ್ ವಿಷಯಕ್ಕೆ ಬರೋಣ… ವಾರದಲ್ಲಿ ಎರಡು ಬಾರಿ ‘ಬೌ ಬೌ ಎಕ್ಸ್ಪ್ರೆಸ್’ ಸಂಚರಿಸುತ್ತದೆ. ತನ್ನ ೧೧ ಎಕರೆ ಫಾರಂ ಹೌಸ್ ಶುನಕಗಳ ಸಂಚಾರ ಭೂಮಿಯಾಗಿದೆ. ಈ ರೈಲಿಗೆ ಹಳಿ ಇಲ್ಲ. ಬದಲಿಗೆ ರಸ್ತೆಯಲ್ಲು ಸಂಚರಿಸುತ್ತವೆ. ಈ ಶ್ವಾನ್ ಟ್ರೈನ್ ಕಂಡವರಿಗೂ ಇಷ್ಟು ಮೋಜು. ಹಲವು ಪ್ರಯೋಗಗಳನಂತರ, ಈ ಡಾಗ್ ಎಕ್ಸ್ಪ್ರೆಸ್ ಓಡಾಟಕ್ಕೆ ಬಂದಿದೆ. ಹಳೇ ಟ್ರಾಕ್ಟರ್ ಒಂದರ ಎಂಜಿನ್, ಫೈಬರ್ಗ್ಲಾಸ್ನ ಬೋಗಿಗಳಲ್ಲಿ ದಿಂಬುಗಳಿದ್ದು ನಾಯಿಗಳಿಗೆ ಸುಖಾಸನಗಳಿವೆ. ಶುನಕ ಸುಖಕ್ಕಾಗಿ ೮೭ರ ಯೂಗ್ಜೆನ್ ಸಾಕಷ್ಟು ನಾಯಿಪಾಡು ಪಟ್ಟಿದ್ದಾನೆ. ಈ ಡಾಗ್ ಟ್ರೈನ್, ಓಡಿಸುವ ಅಜ್ಜ, ಫಾರಂ ಹೌಸ್ ಎಲ್ಲವೂ ಅಮೆರಿಕದ ಟೆಕ್ಸಾಸ್ನಲ್ಲಿದೆ. ಒಂದು ಡೌಟು…ನಾಯಿನ ಸಿಂಹಾಸನದ ಮೇಲೆ ಕೂರಿಸಿದರೆ ಅದನ್ನು ಕಂಡು ಡೈವ್ ಹೊಡೆಯುತ್ತದೆ ಎನ್ನುತ್ತಾರೆ. ಇಲ್ಲಿ ರೈಲಲ್ಲಿ ಕೂತ ಶ್ವಾನಗಳು ಅದನ್ನು ಕಂಡು… ಆಸೆಪಟ್ಟಿರುವ ಘಟನೆ ನಡೆದಿದೆಯಾ? ಮಾಂಸಾಹರದ ವರ್ಜನೆ
ಕೆಲವರಿಗೆ ಮಾಂಸಾಹಾರ ಅದೆಷ್ಟು ಪ್ರಿಯವೆಂದರೆ ಹಾಟ್ ಡಾಗ್ಸ್, ಚಿಕನ್, ಕಬಾಬ್, ಕೂರ್ಮಾ…ಹೀಗೆ ಏನೇಕೊಟ್ಟರು ಗುಳುಂ ಎನಿಸಿ ಬಿಡುತ್ತಾರೆ. ಹೆಚ್ಚು ತಿಂದು ಆರೋಗ್ಯ ಹಾಳು ಮಾಡಿಕೊಳ್ಳುತ್ತಾರೆ. ಮಾಂಸಾಹಾರ ಇಚ್ಚೆಯನ್ನೇ ತೊಲಗಿಸಿ ಬಿಟ್ಟರೆ ಆಗ ಇವರ ಆರೋಗ್ಯ ಸುಧಾರಿಸಲಿದೆ… ಆ ಕುರಿತ ಸುದ್ದಿಯೊಂದು ಇಲ್ಲಿದೆ. ತೆರೆದಿಟ್ಟ ಖರ್ಜೂರದಂತೆ ಗೋಚರಿಸುವ ಈ ಕೀಟದ ಹೆಸರು-ಆಂಬ್ಲಿಯೊಮ ಅಮೆರಿಕ್ಯಾನಂ-ಂmbಟಥಿommಚಿ ಚಿmeಡಿiಛಿಚಿಟಿum, ಕುಟುಕಿದರೆ ಕಾಯಿಲೆಗಳು ಏರಿ ಬರುತ್ತದೆ. ರೋಗ ನಿರೋಧಕ ಬ್ಯಾಕ್ಟೀರಿಯಾಗಳು ಶರೀರದಲ್ಲಿ ಉತ್ಪತ್ತಿಯಾಗುತ್ತದೆ. ಕಾಯಿಲೆ ಗುಣವಾದರೂ ಮಾರಕ ಬ್ಯಾಕ್ಟೀರಿಯಾಗಳು ಸುಲಭವಾಗಿ ಸಾಯುವುದಿಲ್ಲ. ಅಡ್ಡಪರಿಣಾಮವಾಗಿ ಜೀವನ ಪೂರಾ ಮಾಂಸಾಹಾರದ ಇಚ್ಛೆ ಬಾರದಂತೆ ಮಾಡುತ್ತದೆ!
ಅರ್ಥಾತ್ ಮಾಂಸಾಹಾರಿಗಳು ಸಸ್ಯಾಹಾರಿಗಳಾಗಲು ಇದರಿಂದ ಕುಟುಕಿಸಬೇಕು. ಆಹಾರ ತಜ್ಞರು, ವೈದ್ಯರು, ವಿಜ್ಞಾನಿಗಳು ಮಾಡದ ಕೆಲಸವನ್ನು ಆಂಬ್ಲಿಯೊಮ ಮಾಡುತ್ತದೆ. ಇದರ ‘ಕುಟುಕು -ಕಾರ್ಯಾಚರಣೆ’ ಮಾಡಿ ರೊಕ್ಕ ಎತ್ತುವುದು ಹೇಗೆ? ಎಂದು ನಮ್ಮ ವೈದ್ಯರು ತಲೆ ತುರಿಸಿಕೊಳ್ಳುತ್ತಿದ್ದಾರೆ. ‘ಕೀಟಲೆ’ : ಪ್ರಾಣಿ ದಯಾಸಂಘದ ಮಂದಿ ಆಂಬ್ಲಿಯೊಮದಿಂದ ಕುಟುಕಿಸಿದರೆ ಏನಾಗಬಹುದು? ಎಲ್ಲರೂ ಸಸ್ಯಾಹಾರಕ್ಕೆ ಮುಗಿ ಬೀಳುತ್ತಾರೆ. ಆಗ ಬದನೆಕಾಯಿ, ಕುಂಬಳಕಾಯಿ, ಹಾಗಲಕಾಯಿ ಕೂಡ ಕೆ.ಜಿ.ಗೆ ರೂ. ೫೦೦ ದಾಟಬಹುದಲ್ಲವೇ? ಅಲ್ಲದೆ ಕುಕ್ಕೋಟದ್ಯಮ, ಮತ್ಸೋದ್ಯಮ, ಜಾನುವಾರು ಉದ್ಯಮಗಳೆಲ್ಲಾ ಮಟಾಶ್ ಆಗಿ ಹೋಗುವ ಅಪಾಯಗಳಿವೆ. ಮಾಂಸದ ಹೋಟೆಲ್ಗಳಿಗೆ ಬೀಗ ಬಿದ್ದೀತು. ಹೀಗಾಗಿ ಆಂಬ್ಲಿಯೊ ‘ಕೀಟಲೆ’ ಬೇಡ.
ಎದುರಿಗೆ ಉಗಿಬಂಡಿ…
ಸಾಗುತಿದೆ ಬದುಕು ಜಟಕಾ ಬಂಡಿ ಸಾವಿನ ಸನಿಹದಲ್ಲಿಯೇ ಬದುಕಿದೆ. ಬದುಕಿನ ‘ಮಾರ್ಗ’ದಲ್ಲಿ ಅಪಾಯವಿದೆ.ಅಪಾಯದಲ್ಲೇ ಜೀವನದ ಅವಸರವಿದೆ! ಬದುಕಿನ ವಿಷಾಧದ ಪದಗಳು ಇಲ್ಲೇಕೆ? ಎಂದು ಯೋಚಿಸದೆ ಮುಂದೆ ಓದಿದರೆ ವಿಷಯ ಅರಿವಾಗಲಿದೆ…. ಇಲ್ಲಿ ಕಿರಿದಾದ ರೇಲ್ವೇ ಮಾರ್ಗವಿದೆ. ಮಾರ್ಗಕ್ಕೆ ಹೊಂದಿಕೊಂಡಂತೆಯೇ ಮನೆಯ ಅಂಗಳವಿದೆ. ರೈಲ್ವೆ ಹಳಿಗೂ ಮನೆಗೂ ೪-೫ ಅಡಿಯ ದೂರ ಮಾತ್ರ. ಬಾಗಿಲ ಹಿಡಿಯಷ್ಟು ಅಡಿಯಲ್ಲಿ ಉಗಿ ಬಂಡಿ ಗೀಳಿಡುತ್ತಾ ಸಾಗುತ್ತವೆ. ಅಪಾಯವಾಗದೆ? ಅಪಾಯವನ್ನು ಅನುಭವಿಸಿಕೊಂಡೇ ಇಲ್ಲಿನವರು ಬದುಕುತ್ತಿದ್ದಾರೆ. ಕಣ್ಣೆದುರೇ ನೋಡ ನೋಡುತ್ತಿದ್ದಂತೆಯೇ ಹಲವರು ಸಾವಿನ ಕದ ತಟ್ಟಿದ್ದಾರೆ. ಆದರೂ ಜನ/ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಎಲ್ಲಿದೆ ಇಂತಹ ಹದಗೆಟ್ಟ ವ್ಯವಸ್ಥೆ?
ಮಾದಕ ವಸ್ತುಗಳಿಗೆ ಕುಖ್ಯಾತವಾಗಿರುವ ವಿಯಟ್ನಾಂ ರಾಜಧಾನಿ ಹನೋಯ್ ನಗರದಲ್ಲಿನ ಸ್ಥಿತಿ. ಇಲ್ಲಿ ಜೀವಗಳು-ಜೀವಿಗಳು ಬಲು ಅಗ್ಗ ಒಂದು ಕಡೆ ಸರ್ಕಾರವನ್ನೇ ನಿಯಂತ್ರಿಸುವ ‘ಮಾದಕ’ ಲೋಕ. ಮತ್ತೊಂದೆಡೆ ಅವ್ಯವಸ್ಥೆಗಳ ಆಗರವಾಗಿರುವ ಸರ್ಕಾರ. ಪುನರ್ ವ್ಯವಸ್ಥೆ ಕಲ್ಪಿಸಿಕೊಟ್ಟು ಈ ಬಡವರನ್ನು ಬೇರೆಡೆಗೆ ವರ್ಗಾಯಿಸಬಹುದು. ಆ ಕೆಲಸ ಊಹಿಸುವುದೂ ಕಷ್ಟ. ಇದು ಅತ್ತ ಭಾಗದ ಕಥೆಯಾದರೆ …ಥೈಲ್ಯಾಂಡ್ ದೇಶದ ಬ್ಯಾಂಕಾಕ್ ಸಮೀಪದ ಸಮುತ್ ಸಾಂಗ್ಖರಂನ ಮಾರ್ಕೆಟ್ನೊಳಗೇ ರೈಲು ನುಗ್ಗಿ ಬರುತ್ತದೆ… ಇಲ್ಲಿನ ಜನ/ಸರ್ಕಾರ ಕೂಡ ಅಡ್ಜೆಸ್ಟ್ ಮಾಡಿಕೊಂಡು ಹೋಗುತ್ತಿದ್ದಾರೆ. ಬದುಕು ಜಟಕಾ ಬಂಡಿ ಸಾಗಿದೆ…. ಎದುರಿಗೆ ಉಗಿಬಂಡಿಯೂ ಬರುತ್ತಿದೆ…
ಶಿಶ್ನೋತ್ಸವ
ಶಿಶ್ನೋತ್ಸವಕ್ಕೆ ಇಂದಿಗೆ (೧ನೇ ಜನವರಿ ೨೦೧೮) ಸರಿಯಾಗಿ ನಾಲ್ಕು ತಿಂಗಳಿವೆ. ಆಗಲೇ ಶಿಶ್ನೋತ್ಸವಕ್ಕೆ ಬನ್ನಿ… ದೇಶ ಸುತ್ತಿ.. ಸಂಸ್ಕೃತಿ ಅರಿಯಿರೆಂದು ಅಂತರಜಾಲದಲ್ಲಿ ಜಾಹೀರಾತುಗಳು ಮೂಡಿ ಬರುತ್ತಿವೆ. ಥೂ ಏನ್ರೀ ಅದು ಶಿಶ್ನೋತ್ಸವ… ಅಶ್ಲೀಲ…ಥೂ… ಹಾಗೆಲ್ಲ ಅನ್ನದಿರಿ… ಇದು ಜಪಾನೀಯರ ವಿಶಿಷ್ಟ ಹಬ್ಬ. ನಾವು ರಾಮೋತ್ಸವ, ಗಣೇಶೋತ್ಸವ ಮಾಡುವಂತೆ ಅವರು ಈ ಹಬ್ಬ (ಪೆನ್ನಿಸ್ ಹಬ್ಬ) ಆಚರಿಸುತ್ತಾರೆ. ಅಂದಹಾಗೆ ಜಪಾನೀಯರು ಇದನ್ನು ಫಲವತ್ತತೆಯ ಹಬ್ಬೆನ್ನುತ್ತಾರೆ. ಕೇಕ್, ಜಾಮ್, ಸ್ವೀಟ್ಸ್ಗಳನ್ನು ಬಳಸಿ ಮರದ ಕಟ್ಟಿಗೆಯೊಂದಕ್ಕೆ ಶಿಶ್ನದ ರೂಪ ನೀಡುತ್ತಾರೆ. ಈ ‘ಶ್ರೀ ಶಿಶ್ನ ಮೂರ್ತಿ’ಯನ್ನು ಅಲಂಕರಿಸಿ, ಭಾಜಾಭಜಂತ್ರಿಯಲ್ಲಿ ಹಾದಿ ಬೀದಿಗಳಲ್ಲಿ ಮೆರವಣಿಗೆ ಮಾಡುತ್ತಾರೆ.
ಜಪಾನ್ ದೇಶದ ಕೆಲವು ಭಾಗದಲ್ಲಿ ಮಹಿಳೆಯರು ಶ್ರೀ ಶಿಶ್ನರಥವನ್ನು ಎಳೆದರೆ ಇನ್ನು ಕೆಲವು ಪ್ರಾಂತ್ಯಗಳಲ್ಲಿ ಶಿಶ್ನದ ಪಲ್ಲಕ್ಕಿಯನ್ನು ಪುರುಷರು ಹೊತ್ತು ಸಾಗುತ್ತಾರೆ. ಮಕ್ಕಳಾಗದ ಮಹಿಳೆಯರು ಶಿಶ್ನದ ಆಕೃತಿಯಲ್ಲಿರುವ ಐಸ್ಕ್ಯಾಂಡಿ, ಕೇಕ್ಗಳನ್ನು ಸವಿಯುತ್ತಾರೆ. ಹಾಗೆ ಮಾಡಿದರೆ ಮಕ್ಕಳಾಗುವುದೆಂಬ ನಂಬಿಕೆಯಿದೆ. ಕನ್ಯೆಯರು ಸವಿದರೆ ವಿವಾಹ ಪ್ರಾಪ್ತಿ! ಅಂದು ಶ್ರೀ ಶಿಶ್ನದೇವರಿಗೆ ಬೆಳಗುವುದು ಶಿಶ್ನಾಕೃತಿಯ ಕ್ಯಾಂಡಲ್… ಆದಿನವೆಲ್ಲಾ ಶಿಶ್ನಮಯ. ನಂತರ ಶಿಶ್ನ ಸಮಾರಾಧಾನೆ ಮಾಡುತ್ತಾರೆ… ಆಗಮಿಸಿದ (ಭಕ್ತ?) ಮಹಾಜನರಿಗೆ ಕೇಕ್ ಕತ್ತರಿಸಿ ಸವಿಯುಣಿಸುತ್ತಾರೆ. ಈ ಆಚರಣೆಯಿಂದ ಫಲವತ್ತತೆ ಹೆಚ್ಚಾಗಿ… ಮಕ್ಕಳು… ಮರಿಗಳಾಗುತ್ತದಂತೆ. ಈ ವರ್ಷದ ಶಿಶ್ನ ಸಂಭ್ರಮವನ್ನು ಕಾಣಲು ೧ನೇ ಏಪ್ರಿಲ್ನಂದು ಜರುಗಲಿದ್ದು ಪಾಲ್ಗೊಳ್ಳಲು ಇಚ್ಚಿಸುವವರು ಜಪಾನ್ನ ಕವಾಸಾಕಿಗೆ ತೆಳಬೇಕು.ನಮ್ಮಲ್ಲೂ ಈ ಹಬ್ಬ ಮಾಡಬಹುದಲ್ಲವೇ…? ತ್ರಿಗುಣ ಸಂಪನ್ನೆ’
….ನೋಡಿದ್ರಾ… ?ಏಣಿಸಿದರೆ ‘ಮೂರು’ ಇತ್ತಾ? ಹಾಗಿದ್ದರೇ… ನಿಮ್ಮ ಲೆಕ್ಕಾ ಸರಿಯಿದೆ. ಇದು ಪಕ್ಕಾನಾ? ಹೌದು ಪಕ್ಕ ಪಕ್ಕದಲ್ಲೇ ಇದೆಯಲ್ಲಾ…!? ಅದಲ್ಲಾ ರೀ… ಇವಳಿಗೆ ೩ ಕಂಚುಕವಿರುವುದು ಖಚಿತವಾ? ಅನುಮಾನವೇ ಬೇಡ! ಇವಳಿಗೆ ೩ ಇದೆ. ಚೈನಾ ಮೂಲದ ಕೆನಡಾದೇಶದ ಮಾಡೆಲ್, ಕಂ-ಸುಂದರಿ, ಕಂ -ನಟಿ ಕ್ಯಾಟಲಿನ್ ಲೀಬ್ಳ ತ್ರಿಗುಣ ಸಂಪತ್ತಿದು. ಏನೇ ನಿನಗೆ ‘ಮೂರು’ ಇದೆಯಾ? ಎಂದರೇ ಹೌದು ಎಂದು ಸಂಕೋಚವಿಲ್ಲದೆ ಹೇಳುತ್ತಾಳೆ. ಬಿಚ್ಚಿ ತೋರಿಸು ಎಂದರೆ ಅದಕ್ಕೂ ಸಿದ್ಧ.
ಕಾಸ್ಮೆಟಿಕ್ ಸರ್ಜರಿ ಮೂಲಕ ಶಾಶ್ವತವಾಗಿ ಇಂತಹವುಗಳನ್ನು ಶಾಶ್ವಥವಾಗಿ ಫಿಟ್ ಮಾಡಿಕೊಳ್ಳಬಹುದು. ಒಂದು ವಾರಕ್ಕೆ ಸಾಕು ಎಂದರೆ ಅಧಿಕ ಪ್ರೊಟೀನ್ ಅಂಶಗಳುಳ್ಳ ‘ಸಿಂಥೋಲ್’ ಇಂಜಕ್ಶನ್ ಚುಚ್ಚಿಕೊಂಡು ಕೃತಕ ಎದೆವಂತರಾಬಹುದು. ವಿದೇಶಗಳಲ್ಲಿ ಇದು ಪಡೆಯುತ್ತಿದೆ. ಗಂಡಸರಿಗೂ ಇದು ಸಾಧ್ಯ. ಹಲವರು ಇಂತಹ ಪ್ರಯೋಗ ಮಾಡಿದ್ದಾರೆ. ನಟಿ ಕಾಟಲಿನ್ ಈ ನಿಟ್ಟಿನಲ್ಲಿ ‘ಕೃತಕ ಎದೆಯ ಮಾತೃ’ ಸ್ವರೂಪಿಣಿ! ಅವಳು ಭಿಡೆಯಿಲ್ಲದೆ ತನ್ನ ಬೂಬ್ಸ್ ಪ್ರದರ್ಶನಕ್ಕೆ ಇಟ್ಟಿದ್ದೇ ಎಲ್ಲರಿಗೂ ಪ್ರೇರಣೆಯಾಗಿರಬೇಕು. ಕ್ಯಾಟಲಿನ್ಗೆ ಮಳ್ಳಿ ಮಳ್ಳಿ ಒಂದು ಪ್ಲಸ್ ಒಂದು ಎಷ್ಟೂ ಅಂದ್ರೇ? ‘ಮೂರು ಮೈನಸ್ ಒಂದು’ ಎಂದ್ಲಂತೆ ಎನ್ನುವುದು ಕುಹಕ.
ವೃತ್ತಪಾಥ
ನಮ್ಮಲ್ಲಿ ರಾಮಕೃಷ್ಣ ಸರ್ಕಲ್ ಎಂದು, ನೆಹರು ಸರ್ಕಲ್ ಎಂದೆಲ್ಲಾ ಇರುತ್ತದೆ. ಅಲ್ಲಿ ಹೋಗಿ ನೋಡಿದರೆ… ಸಣ್ಣದೊಂದು ವೃತ್ತ ಕೂಡ ಇರದು. ಆದರೆ ಚೀನಿಯರು ಹಾಗಲ್ಲ. ಅಕ್ಷರಶಃ ಕೂಡು ರಸ್ತೆಯಲ್ಲಿ ವೃತ್ತ ಮಾಡಿದ್ದಾರೆ.ಅನುಮಾನವಿದ್ದರೆ ಈ ಚಿತ್ರಗಳನ್ನೇ ನೋಡಿ… ೬ ರಸ್ತೆಗಳ ಕೂಡು ಜಾಗದಲ್ಲಿನ ಸರ್ಕಲ್ಯಿದು. ಭೂಮಿ ದುಂಡಾಗಿದೆಯೋ ಇಲ್ಲವೊ ಬೇಕಿಲ್ಲ. ಇದಂತೂ ಗುಂಡಾಗಿದೆ. ಇದರ ಮೇಲೆ ವಾಕ್-ಟಾಕ್ ಮಾಡುತ್ತಾ ನಡೆದರೆ ಕಡೆಗೆ ನಾವು ಹೊರಟ ಜಾಗಕ್ಕೇ ಬಂದು ನಿಂತಿರುತ್ತೇವೆ. ಅಂದಹಾಗೆ ಈ ಮೇಲು ವೃತ್ತದ ಮೇಲೆ ಸಾಗುತ್ತಾ ಹೋದರೆ… ಮ್ಯೂಸಿಯಂ, ಅಕ್ವೇರಿಯಂ, ಸೇರಿದಂತೆ ಹಲವು ಕಟ್ಟಡಗಳ ಬಾಹ್ಯ ಸೊಗಸನ್ನು ಆಸ್ವಾದಿಸುತ್ತಾ ಸಾಗಬಹುದು. ನೆಲದಿಂದ ೨೦ ಅಡಿಗಳಷ್ಟು ಮೇಲಿದೆ. ಒಟ್ಟಿಗೆ ೧೫ ಜನ ಒಬ್ಬರ ಕೈ ಒಬ್ಬರು ಹಿಡಿದು ಸಾಗಬಹುದಾದಷ್ಟು ವಿಶಾಲವಾಗಿದೆ. ಈ ಬ್ರಿಡ್ಜ್ ಏರಲು ಹಲವು ಕಡೆಗಳಲ್ಲಿ ಮೆಟ್ಟಿಲು, ಎಸ್ಕಲೇಟರ್ಗಳೆಲ್ಲಾ ಇದೆ. ಚೀನಾಗೆ ಮಾತ್ರವಲ್ಲದೆ ವಿಶ್ವದ ಪ್ರಮುಖ ವೃತ್ತಗಳಲ್ಲಿ ಒಂದೆನಿಸಿದ್ದು, ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.
ಅಲ್ಲಾ ರೀ… ಈ ವೃತ್ತದ ಮೇಲೆ ಸಾಗುತ್ತಿರುವಾಗ ವಾಹನಗಳು ಬಂದು ಡಿಕ್ಕಿ ಹೊಡೆದರೆ ಏನು ಗತಿ? ನೋ ಚಾನ್ಸ್… ಅದಕ್ಕೆ ಅವಕಾಶವೇ ಇಲ್ಲ. ಏಕೆಂದರೆ ಇದರ ಮೇಲೆ ವಾಹನಗಳ ಪ್ರವೇಶವೇ ಇಲ್ಲ. ಇದು ಕೇವಲ ಪಾದಚಾರಿ ರಸ್ತೆ. ಅಲಿಯಾಸ್ ಸ್ಕೈವಾಕ್. ಚೈನಾದೇಶದ ಶಾಂಘ್ಝೈ ಪಟ್ಟಣದ ಲೂಝಿಯಾಜಿಯ ಟ್ರಾಫಿಕ್ ಸರ್ಕಲಿದು. ವೃತ್ತಾಕಾರದ ಫುಟ್ಪಾಥ್ನ್ನು ವೃತ್ತ ಪಾಥ ಎಂಬುದೇ ಸೂಕ್ತ. ನಮ್ಮಲಿ ಇಂತಹವುಗಳನ್ನು ನಿರ್ಮಾಣ ಮಾಡುವ ಮೊದಲು ಈಗಿರುವ ಸ್ಕೈವಾಕ್ಗಳನ್ನು ನೆಟ್ಟಗೆ ನಿರ್ವಹಣೆ ಮಾಡುವುದು ಒಳಿತು
ಅಂತರಿಕ್ಷ ದಾಟಿದ ಕಬಾಬ್!
ಹೌದು ರೀ… ಕಬಾಬ್ ಬೆಲೆ ಗಗನದಾಟಿದೆ. ಛೇ…ಛೇ… ಅದಲ್ಲಾ ನಾವು ಹೇಳಲು ಹೊರಟಿದ್ದು. ಸಿದ್ದಪಡಿಸಿದ ಕಬಾಬ್ನ್ನು ಡಿಸೆಂಬರ್ ಕೊನೆಯವಾರದಲ್ಲಿ ಅಂತರಿಕ್ಷಕ್ಕೆ ಹಾರಿ ಬಿಟ್ಟಿದ್ದಾಋ. ಭೂ ವಾತಾವರಣದಿಂದ ಬರೋಬ್ಬರಿ ೧,೨೪,೦೦೦ಅಡಿಗಳೆಷ್ಟು ಎತ್ತರಕ್ಕೆ ಹಾರಿದೆ. ಆಮೇಲೆ? ತಣ್ಣನೆಯ ವಾತಾವರಣಕ್ಕೆ ಐಸ್ ರೂಪವಾಗಿ ಚೆಲ್ಲಾಪಿಲ್ಲಿಯಾಗಿದೆ. ಯಾಕೆ ಈ ಚೇಷ್ಟೆ? ಸ್ವಿಟ್ಜರ್ಲ್ಯಾಂಡಿನ ಜೂರಿಚ್ನಲ್ಲಿ ಐವೆರ್ದಿಸ್ ರೆಸ್ಟೋರೆಂಟ್ ಆರಂಭವಾಗಿದೆ.
ಜಾಹೀರಾತು ನೀಡಿ, ಟೇಪ್ ಕತ್ತರಿಸಿ ಹೋಟೆಲ್ ಪ್ರಾರಂಭಿಸುವುದಕ್ಕಿಂತಲೂ ಭಿನ್ನವಾಗಿರಲೆಂದು ಈ ಬಿಲ್ಡಪ್ಗಳು ಹೋಟೆಲ್ ಸ್ಟಾರ್ಟಪ್ಗೆ ಅದೆಷ್ಟು ಶ್ರಮಹಾಕಿದರೋ ತಿಳಿಯದು. ಆದರೆ ಕಬಾಬ್ ಉಡ್ಡಯನ ಹಾಗೂ ಅದರ ಹಾರಾಟದ ಚಿತ್ರೀಕರಣಕ್ಕೆ ಸುಮಾರು ೩ ತಿಂಗಳ ಶ್ರಮಹಾಕಿದ್ದಾರೆ. ಕಡೆಗೂ ಕ್ರಿಸ್ಮಸ್ ಮರುದಿನ ಭಾರಿ ಘಾತ್ರದ ಕಬಾಬ್ ಅತಿ ದೊಡ್ಡ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಗ್ಯಾಸ್ ಬೆಲೂನ್ಗೆ ಕಟ್ಟಿ ಆಗಸದತ್ತ ಬಿಟ್ಟಿದ್ದಾರೆ. ಹಾರಿಸಿದ ಎರಡು ಗಂಟೆಗಳ ಅವಧಿಯಲ್ಲಿ ಅಂತರಿಕ್ಷ ತಲುಪಿ ಚೆಲ್ಲಾಪಿಲ್ಲಿಯಾದ ಸುದ್ದಿಬಂದಿದೆ. ಅಲ್ಲಾ ರೀ… ಹೀಗೆ ಸೇವಿಸುವ ಆಹಾರವನ್ನು ಹಾರಿಸಿ ವೇಸ್ಟ್ ಮಾಡುವ ಬದಲು ತಿನ್ನಲು ಕೊಡಬಹುದಿತ್ತು ಅಲ್ವಾ? ತಿಂದಮೇಲೂ ‘ವೇಸ್ಟೇ’ ಅಲ್ವಾ ಆಗೋದು….!