ನಟಿ ಮೇಘನರಾಜ್ ಸರ್ಜಾ ಹಲವು ವರ್ಷಗಳ ನಂತರ ಮತ್ತೆ ಹೊಸ ಜೋಶ್ ನಲ್ಲಿ ‘ತತ್ಸಮ ತದ್ಭವ’ ಸಿನಿಮಾದ ಮೂಲಕ ಹಿರಿತೆರೆಯತ್ತ ಬರುತ್ತಿದ್ದಾರೆ. ‘ತತ್ಸಮ ತದ್ಭವ’ ಮೇಘನಾ ರಾಜ್ ಸಿನಿ ಕೆರಿಯರ್ ನ ರೀ-ಎಂಟ್ರಿ ಸಿನಿಮಾ ಎಂದೇ ಹೇಳಲಾಗುತ್ತಿದ್ದು, ಇತ್ತೀಚೆಗೆ ಈ ಸಿನಿಮಾದ ಟ್ರೇಲರ್ ಬಿಡುಗಡೆಯಾಯಿತು.ಇತ್ತೀಚೆಗೆ ಬೆಂಗಳೂರಿನ ‘ಚಾಮುಂಡೇಶ್ವರಿ ಸ್ಟುಡಿಯೋ’ದಲ್ಲಿ ನಡೆದ ಸಮಾರಂಭದಲ್ಲಿ ನಟರಾದ ಧ್ರುವ ಸರ್ಜಾ ಹಾಗೂ ಡಾಲಿ ಧನಂಜಯ ಮುಖ್ಯ ಅತಿಥಿಗಳಾಗಿ ಆಗಮಿಸಿ, ‘ತತ್ಸಮ ತದ್ಭವ’ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಯಶಸ್ಸನ್ನು ಹಾರೈಸಿದರು. ಈ ವೇಳೆ ಹಿರಿಯ ನಟ ಸುಂದರರಾಜ್ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಹಾಜರಿದ್ದರು.
ಇದೇ ವೇಳೆ ಮಾತನಾಡಿದ ನಟಿ ಮೇಘನಾ ರಾಜ್, ‘ನಾನು ಸಿನಿಮಾದಲ್ಲಿ ನಟಿಸಬಾರದು ಎಂದು ನಿರ್ಧರಿಸಿದಾಗ ಬಂದ ಸಿನಿಮಾವಿದು. ಈ ಸಿನಿಮಾ ಆರಂಭವಾಗಲು ನನ್ನ ಪತಿ ಚಿರು ಕಾರಣ. ಅವರಿಗೆ ಪ್ರಜ್ವಲ್ ಹಾಗೂ ಪನ್ನಗ ಅವರ ಜೊತೆ ಸೇರಿ ಸದಭಿರುಚಿಯ ಸಿನಿಮಾಗಳನ್ನು ನಿರ್ಮಾಣ ಮಾಡಬೇಕೆಂಬ ಆಸೆಯಿತ್ತು. ಆನಂತರ ಪನ್ನಗಾಭರಣ ಈ ಸಿನಿಮಾದ ಕಥೆಯನ್ನು ಹೇಳಲು ನಿರ್ದೇಶಕರನ್ನು ಮನೆಗೆ ಕಳುಹಿಸಿದರು. ಕಥೆ ಇಷ್ಟವಾಗಿದ್ದರಿಂದ ಸಿನಿಮಾ ಮಾಡಲು ಒಪ್ಪಿಕೊಂಡೆ. ಪಾತ್ರ ತುಂಬ ಚೆನ್ನಾಗಿದೆ’ ಎಂದರು.
‘ತತ್ಸಮ ತದ್ಭವ’ ಕ್ರೈಮ್ ಥ್ರಿಲ್ಲರ್ ಶೈಲಿಯ ಚಿತ್ರವಾಗಿದ್ದು, ವಿಶಾಲ್ ಆತ್ರೇಯ ನಿರ್ದೇಶನವಿದೆ. ಪನ್ನಗಾಭರಣ, ಸ್ಪೂರ್ತಿ ಅನಿಲ್ ಹಾಗೂ ಚೇತನ್ ನಂಜುಂಡಯ್ಯ ಜಂಟಿಯಾಗಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಮೇಘನಾ ರಾಜ್ ಜೊತೆಗೆ, ಪ್ರಜ್ವಲ್ ದೇವರಾಜ್ ಕೂಡ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಬಿಡುಗಡೆಯಾಗಿರುವ ‘ತತ್ಸಮ ತದ್ಭವ’ ಸಿನಿಮಾದ ಟ್ರೇಲರ್ ಗೆ ಡೈನಾಮಿಕ್ ಹೀರೋ ದೇವರಾಜ್ ಧ್ವನಿ ನೀಡಿದ್ದಾರೆ. ಚಿತ್ರ ಸೆಪ್ಟೆಂಬರ್ 15 ತೆರೆಗೆ ಬರಲಿದೆ.