ಸಿನಿಮಾ: ಮೆಹಬೂಬಾ
ನಿರ್ದೇಶನ: ಅನೂಪ್ ಆಂಟೋನಿ
ನಿರ್ಮಾಪಕ: ಶಶಿ
ಸಂಗೀತ: ಮ್ಯಾಥ್ಯೂಸ್ ಮನು
ಕ್ಯಾಮೆರಾ ನಿರ್ದೇಶನ: ಕಿರಣ್ ಹಂಪಾಪುರ
ತಾರಾ ಬಳಗ: ಶಶಿ, ಪಾವನ ಗೌಡ, ಜೈಜಗದೀಶ್, ಬುಲೆಟ್ ಪ್ರಕಾಶ್, ವಿಜಯಲಕ್ಷ್ಮಿ ಸಿಂಗ್, ಶಿವರಾಂ, ಕಬೀರ್ ದುಹಾನ್ ಸಿಂಗ್
ಬಿಗ್ ಬಾಸ್ ವಿನ್ ಆದೋರೆಲ್ಲ ಸಿನಿಮಾ ಹೀರೋ ಆಗೋದು ಹೊಸತೇನಲ್ಲ. ವಿನ್ ಆದ ಮೇಲೆ ಸಿನಿಮಾ ಆಫರ್ ಗಳಿಗಂತೂ ಕೊರತೆಯಿಲ್ಲ. ಅಂತೆಯೇ ಬಿಗ್ ಬಾಸ್ ಕನ್ನಡ ಸೀಸನ್ 6ರ ವಿನ್ನರ್ ‘ಮಾಡ್ರನ್ ರೈತ’ ಎಂದೇ ಖ್ಯಾತಿ ಗಳಿಸಿಕೊಂಡಿರುವ ಶಶಿ ನಾಯಕ ನಟನಾಗಿ ಚಿತ್ರರಂಗಕ್ಕೆ ಹೆಜ್ಜೆ ಇಟ್ಟಿದ್ದಾರೆ. ಶಶಿ ನಟನೆಯ ‘ಮೆಹಬೂಬಾ’ ಸಿನಿಮಾ ತೆರೆ ಕಂಡಿದೆ. ‘ಮೆಹಬೂಬಾ’ ಮೂಲಕ ರೋಮ್ಯಾಂಟಿಕ್ ಹೀರೋ ಆಗಿ, ನಿರ್ಮಾಪಕನಾಗಿಯೂ ಮೊದಲ ಹೆಜ್ಜೆ ಇಟ್ಟಿದ್ದಾರೆ.
ಎಂಪಿ ಕ್ಯಾಂಡಿಡೇಟ್ ಕೃಷ್ಣೇಗೌಡ ಪುತ್ರ ಕಾರ್ತಿಕ್ (ಶಶಿ). ಮನೆಯವರ ಕೆಂಗಣ್ಣಿಗೆ ಸದಾ ಗುರಿಯಾಗೋ ಈತ ಅವರದ್ದೇ ದೃಷ್ಟಿಯಲ್ಲಿ ಕೆಲಸಕ್ಕೆ ಬಾರದ ಹುಡಗ. ಯಾವುದೇ ಕೆಲಸ ಕಾರ್ಯ ಮಾಡದ ಈತನಿಗೆ ಬೈಕ್ ಅಲ್ಟ್ರೇಶನ್ ಪ್ಯಾಶನ್. ಆದ್ರೆ ಈ ಕೆಲಸ ಮನೆಯವರಿಗೆ ಇಷ್ಟ ಇಲ್ಲ. ಹೀಗಿರುವಾಗ ನಜ಼್ ರೀಯಾ ಬಾನು (ಪಾವನ ಗೌಡ) ಮೇಲೆ ಪ್ರೀತಿಯಾಗುತ್ತೆ. ಇಬ್ಬರ ಪ್ರೀತಿ ಜಾತಿ ವಿಚಾರವಾಗಿ ಬಹಳಷ್ಟು ವಿರೋಧ ಪಡೆದುಕೊಳ್ಳುತ್ತೆ. ಆ ಪ್ರೀತಿಯನ್ನು ಹೇಗೆ ಉಳಿಸಿಕೊಳ್ಳುತ್ತಾನೆ ಅನ್ನೋದ್ರ ಸುತ್ತ ಹೆಣೆದ ಕಥಯೇ ‘ಮೆಹಬೂಬಾ'
.
ಇಲ್ಲಿ ಗಟ್ಟಿಕಥೆಯೂ ಇಲ್ಲ, ಚಿತ್ರಕಥೆಯೂ ಇಲ್ಲ. ಕೊನೆಗೆ ‘ಮೆಹಬೂಬಾ’ ಹೆಸರಿಗೆ ತಕ್ಕದಾದ ಪ್ರೀತಿ ಕಥೆಯು ಕಾಣಸಿಗದೇ ಪ್ರೇಕ್ಷಕ ಒದ್ದಾಡುತ್ತಾನೆ. ನಾಯಕ ನಟ ಶಶಿ( Shashi) ಅಭಿನಯದಲ್ಲಿ ಹೆಚ್ಚಾಗಿಯೇ ಪಳಗಬೇಕಿದೆ. ‘ಗೊಂಬೆಗಳ ಲವ್’ ಸೇರಿದಂತೆ ಹಲವು ಸಿನಿಮಾದಲ್ಲಿ ತಮ್ಮ ಅಭಿನಯದ ಮೂಲಕ ಗಮನ ಸೆಳೆದಿದ್ದ ಪಾವನ ಗೌಡ (Pavana Gowda) ಈ ಸಿನಿಮಾದಲ್ಲಿ ಯಾಕೋ ಡಲ್ ಆಗಿದ್ದಾರೆ. ಸಿನಿಮಾ ಕಥೆ ಹಾಗೂ ನಿರ್ದೇಶನದ ವಿಚಾರದಲ್ಲಿ ಗೊಂದಲಕ್ಕೆ ಒಳಗಾಗಿರೋ ನಿರ್ದೇಶಕ ಅನೂಪ್ ಆಂಟೋನಿ ನೋಡೋ ಪ್ರೇಕ್ಷಕರ ತಾಳ್ಮೆಯನ್ನು ಪರೀಕ್ಷಿಸುತ್ತಾರೆ. ಪ್ರತಿ ಸೀನ್ ನಲ್ಲಿ ಏನ್ ಮಾಡಬೇಕು ಎಂಬ ಗೊಂದಲದಲ್ಲಿ ಒದ್ದಾಡಿದ್ದಾರೆ ಅನ್ನೋದು ಕ್ಲಿಯರ್ ಆಗಿ ಗೊತ್ತಾಗುತ್ತೆ. ನಿರ್ದೇಶಕ್ರು ಸಿನಿಮಾ ನಿರ್ದೇಶನದ ಪಟುಗಳನ್ನು ಇನ್ನೂ ಹೆಚ್ಚಾಗೇ ಕರಗತ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಹೆಚ್ಚಿದೆ ಅನ್ನೋದು ಎದ್ದು ಕಾಣುತ್ತೆ.
ರೋಮ್ಯಾಂಟಿಕ್ ಜಾನರ್ ಸಿನಿಮಾದಲ್ಲಿ ಹಾಡುಗಳ ಘಮ ಜೋರಿರುತ್ತೆ ಆದ್ರೆ ಇಲ್ಲಿ ಯಾವ ಹಾಡು ಮನಸ್ಸಿನ ಹತ್ತಿರಕ್ಕೂ ಬರೋದಿಲ್ಲ. ಮ್ಯಾಥ್ಯೂಸ್ ಮನು ಸಂಗೀತ ಮನಸ್ಸಿಗೆ ಮುದ, ಕಿರಣ್ ಹಂಪಾಪುರ ಕ್ಯಾಮೆರಾ ವರ್ಕ್ ಕಣ್ಣಿಗೆ ಹಿತ ನೀಡೋದಿಲ್ಲ. ಜೈಜಗದೀಶ್( Jai Jagadish) ಶಿವರಾಂ( Shivram),ವಿಜಯಲಕ್ಷಿ ಸಿಂಗ್(Vijaylakshmi Sing) ಪಾತ್ರಕ್ಕೆ ಜೀವ ತುಂಬಿದ್ದು, ಬೇರೆ ಪಾತ್ರಗಳ ಬಗ್ಗೆ ಮಾತನಾಡುವಷ್ಟೇನು ಅಭಿನಯ ಮೂಡಿ ಬಂದಿಲ್ಲ. ಒಟ್ನಲಿ, `ಮೆಹಬೂಬ’ ಪೇಕ್ಷಕರಿಗೆ ಹತ್ತಿರವಾಗುವಲ್ಲಿ ಜೊತೆಗೆ ಒಂದೊಳ್ಳೆ ಪ್ರಯತ್ನ ಎನಿಸಿಕೊಳ್ಳುವಲ್ಲೂ ವಿಫಲವಾಗಿದೆ.