‘ಅಯೋಗ್ಯ’ ಸಿನಿಮಾದಲ್ಲಿ ನೀನಾಸಂ ಸತೀಶ್ ಮತ್ತು ರಚಿತಾ ರಾಮ್ ಕಾಂಬಿನೇಷನ್‌ನಲ್ಲಿ ಮೂಡಿಬಂದಿದ್ದ ‘ಏನಮ್ಮಿ ಏನಮ್ಮಿ…’ ಹಾಡು ಯು-ಟ್ಯೂಬ್‌ನಲ್ಲಿ ಬರೋಬ್ಬರಿ 108 ಮಿಲಿಯನ್‌ಗೂ ಅಧಿಕ ವೀಕ್ಷಣೆ ಕಂಡು ದಾಖಲೆ ಬರೆದಿತ್ತು. ಇದೀಗ ಮತ್ತೆೆ ಸತೀಶ್ ಮತ್ತು ರಚಿತಾ ಜೋಡಿ ಅಂಥದ್ದೇ ಮತ್ತೊಂದು ಹಾಡಿನಲ್ಲಿ ಒಟ್ಟಾಗಿ ಹೆಜ್ಜೆ ಹಾಕಿದೆ. ಅದು ‘ಮ್ಯಾಟ್ನಿ’ ಸಿನಿಮಾದ ‘ಸಂಜೆ ಮೇಲೆ ಸುಮ್ನೆ ಹಂಗೆ…’ ಎಂಬ ಹಾಡಿನಲ್ಲಿ. ಇತ್ತೀಚೆಗಷ್ಟೇ ‘ಮ್ಯಾಟ್ನಿ’ ಸಿನಿಮಾದ ‘ಸಂಜೆ ಮೇಲೆ ಸುಮ್ನೆ ಹಂಗೆ…’ ಹಾಡು ಬಿಡುಗಡೆಯಾಗಿದ್ದು, ಈ ಹಾಡಿನಲ್ಲಿ ಮತ್ತೊಮ್ಮೆ ನೀನಾಸಂ ಸತೀಶ್ ಮತ್ತು ರಚಿತಾ ರಾಮ್ ಜೋಡಿಯಾಗಿ ಹೆಜ್ಜೆ ಹಾಕಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಈ ಗೀತೆಗೆ ವಿಜಯ್ ಪ್ರಕಾಶ್ ದನಿಯಾಗಿದ್ದು, ತುಂಬ ರೊಮ್ಯಾಂಟಿಕ್ ಹಾಕಿ ಈ ಹಾಡನ್ನು ಚಿತ್ರೀಕರಿಸಲಾಗಿದೆ.
ಇನ್ನು ಈ ಹಾಡಿನ ಬಗ್ಗೆ ಮಾತನಾಡುವ ನಟ ನೀನಾಸಂ ಸತೀಶ್, ‘ಇಂದಿಗೂ ನನ್ನ ಸಿನಿಮಾದ ಸೂಪರ್ ಹಿಟ್ ಹಾಡುಗಳ ಸಾಲಿನಲ್ಲಿ ಇರುವಂಥದ್ದು, ‘ಏನಮ್ಮಿ ಏನಮ್ಮಿ…’ ಹಾಡು. ಮೊದಲ ಬಾರಿಗೆ ರಚಿತಾ ಜೊತೆಗೆ ಅಭಿನಯಿಸಿದ್ದ ಈ ಹಾಡು ಎಲ್ಲರಿಗೂ ಇಷ್ಟವಾಗಿತ್ತು. ಅದೇ ರೀತಿ ‘ಮ್ಯಾಟ್ನಿ’ ಸಿನಿಮಾದ ಈ ಹಾಡು ಕೂಡ ಎಲ್ಲರಿಗೂ ಇಷ್ಟವಾಗಲಿದೆ. ಕಲರ್‌ಫುಲ್ ಸೆಟ್‌ನಲ್ಲಿ ಈ ಹಾಡನ್ನು ಚಿತ್ರೀಕರಿಸಲಾಗಿದೆ. ಈ ಹಾಡು ಮತ್ತು ಚಿತ್ರೀಕರಿಸಿದ ರೀತಿ ಎಲ್ಲವೂ ನೋಡುವವರ ಗಮನ ಸೆಳೆಯಲಿದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಟಿ ರಚಿತಾ ರಾಮ್ ಕೂಡ, ‘ಒಂದು ಹಾಡು ಹಿಟ್ ಆಯಿತು ಅಂದ್ರೆೆ ಅದರ ಮೇಲೆ ಸಹಜವಾಗಿಯೇ ಪ್ರೇಕ್ಷಕರಿಗೆ ಕುತೂಹಲ ಮೂಡುತ್ತದೆ. ‘ಮ್ಯಾಟ್ನಿ’ ಸಿನಿಮಾದ ‘ಸಂಜೆ ಮೇಲೆ ಸುಮ್ನೆ ಹಂಗೆ…’ ಹಾಡು ಕೂಡ ಕೇಳುಗರನ್ನು ಕಾಡುವಂತಿದೆ. ಸಿನಿಮಾಕ್ಕೆ ಈ ಹಾಡು ಮೊದಲ ಇನ್ವಿಟೇಶನ್ ಇದ್ದಂತೆ’ ಎನ್ನುತ್ತಾರೆ. ಲವ್ ಕಂ ರೊಮ್ಯಾಂಟಿಕ್, ಜೊತೆಗೆ ಹಾರರ್ ಕಾಮಿಡಿ ಕಥಹಂದರವಿರುವ ‘ಮ್ಯಾಟ್ನಿ’ ಸಿನಿಮಾದಲ್ಲಿ ಸತೀಶ್ ನೀನಾಸಂ ಶ್ರೀಮಂತ ಮನೆತನದ ಹುಡುಗನಾಗಿ ಲವರ್ ಬಾಯ್ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರಂತೆ. ಸಿನಿಮಾದಲ್ಲಿ ಸತೀಶ್ ನೀನಾಸಂಗೆ ರಚಿತಾ ರಾಮ್ ಜೊತೆಗೆ ಅದಿತಿ ಪ್ರಭುದೇವ ಕೂಡ ನಾಯಕಿಯಾಗಿ ನಟಿಸಿದ್ದಾರೆ.