ಭಾರತದ ತುಂಬೆಲ್ಲ ನಾನಾ ತೆರನಾದ ಗ್ಯಾಂಗುಗಳು ಸಮಾಜ ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾವೆ. ಸ್ವಾತಂತ್ರ್ಯಾ ನಂತರದಲ್ಲಿ ಹಂತ ಹಂತವಾಗಿ ನಮ್ಮ ರಕ್ಷಣಾ ವ್ಯವಸ್ಥೆ ಬಲಗೊಳ್ಳುತ್ತಾ ಬಂದಿದೆ. ಕರ್ನಾಟಕವೂ ಸೇರಿದಂತೆ ಬಹುತೇಕ ರಾಜ್ಯಗಳ ಪೊಲೀಸ್ ಇಲಾಖೆಗಳು ದೇಶ ಮಟ್ಟದಲ್ಲಿಯೇ ಹೆಸರುವಾಸಿ ಯಾಗಿವೆ. ಈವತ್ತಿಗೆ ಮಿಲಿಟರಿ ವಿಭಾಗದಲ್ಲಿ ನೋಡಿದರೆ, ಭಾರತ ವಿಶ್ವದ ಬಲಾಢ್ಯ ದೇಶಗಳಿಗೆ ಸರಿ ಸಮನಾಗಿ ಬೆಳೆದು ನಿಂತಿದೆ. ದುರಂತವೆಂದರೆ, ಈ ಕ್ಷಣಕ್ಕೂ ಭಾರತವನ್ನು ಆಂತರಿಕವಾಗಿ ಆಂತರಿಕವಾಗಿ ಕೊರೆಯುತ್ತಿರುವಂಥಾ ನಾನಾ ಬಂಧಧೆಗಳು ಮತ್ತು ಮಾಫಿಯಾಗಳನ್ನು ಹತ್ತಿಕ್ಕುವಲ್ಲಿ ನಮ್ಮ ಆಂತರಿಕ ರಕ್ಷಣಾ ವ್ಯವಸ್ಥೆ ಪದೇ ಪದೆ ಸೋಲು ಕಾಣುತ್ತಿದೆ. ಹೇಳಿಕೇಳಿ ಭಾರತ ನೂರಾರು ಕೋಟಿ ಜನಸಂಖ್ಯೆ ಹೊಂದಿರುವಂಥಾ ದೇಶ. ಇಂಥಾ ಅಗಾಧ ಜನಸಂಖ್ಯೆ ಹೊಂದಿರುವಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಸರಿ ದಿಕ್ಕಿನಲ್ಲಿ ಮುನ್ನಡೆಸೋದು ಕಡುಗಷ್ಟದ ಕೆಲಸ. ಈ ಕಾರಣದಿಂದಲೇ ಭಾರತದಲ್ಲಿ ನಾನಾ ನಟೋರಿಯಸ್ ಗ್ಯಾಂಗುಗಳು ಅವ್ಯಾಹತವಾಗಿ ಕಾರ್ಯನಿರ್ವಹಿಸುತ್ತಿದ್ದಾವೆ. ಅವುಗಳ ವಿವರವನ್ನು ಕೇಳಿದರೆ ನೀವು ಬೆಚ್ಚಿ ಬೀಳೋದು ಗ್ಯಾರೆಂಟಿ!
ತಮಿಳ್ನಾಡು ಗ್ಯಾಂಗ್!
ಯಾವುದೇ ಅಪರಾಧ ಪ್ರಕರಣವೇ ಆಗಿದ್ದರೂ ಒಂದಕ್ಕೊಂದು ಸಂಬಂಧ ಇದ್ದೇ ಇರುತ್ತದೆ. ಚಾಣಾಕ್ಷ ಕಾಕಿ ಕಣ್ಣುಗಳಿಂದ ಅದು ತಪ್ಪಿಸಿಕೊಳ್ಳೋದು ಕಷ್ಟ. ಅದೆಷ್ಟೋ ಸಂದರ್ಭಗಳಲ್ಲಿ ಯಾವುದೋ ಕಾರಣದಿಂದ ಬಯಲಾದ ಸಣ್ಣ ಸತ್ಯವೊಂದು ಭೀಕರ ಜಾಲಗಳನ್ನೇ ಬಯಲು ಮಾಡಿದ್ದಿದೆ. ಈ ಹಿಂದೆ ಬೆಂಗಳೂರು ಪೊಲೀಸರು ಬಯಲು ಮಾಡಿರುವ ಒಂದು ಜಾಲದ ಕಥೆಯೂ ಅಂಥಾದ್ದೆ. ಅವರು ಬಂಧಿಸಿದ್ದು ಟೆಂಪೋ ಟ್ರಾವೆಲ್ ಕದಿಯುತ್ತಿದ್ದ ತಮಿಳು ಗ್ಯಾಂಗೊಂದನ್ನು. ಆದರೆ ಅದರ ಹಿನ್ನೆಲೆಯಲ್ಲಿ ಬಯಲಾದದ್ದು ರಕ್ತ ಚಂದನ ಕಳ್ಳತನದ ಭಯಾನಕ ಜಾಲ. ಕಾರು ಮತ್ತು ಟೆಂಪೋ ಟ್ರಾವೆಲರ್‌ಗಳನ್ನು ಕದ್ದು ಆಂಧ್ರ ಮತ್ತು ತಮಿಳುನಾಡಿನ ರಕ್ತ ಚಂದನ ಸ್ಮಗ್ಲರ್‌ಗಳಿಗೆ ಮಾರಾಟ ಮಾಡುತ್ತಿದ್ದ ಮೂವರನ್ನು ಚಂದ್ರಾಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮೂವರೂ ತಮಿಳುನಾಡು ಮೂಲದವರು. ಇವರುಬೆಂಗಳೂರಿಗೆ ಬಂದು ಕಳ್ಳತನ ಕೃತ್ಯಗಳನ್ನು ನಡೆಸಿ ವಾಹನ ಸಮೇತ ಪರಾರಿ ಆಗುತ್ತಿದ್ದರು. ಪ್ರಮುಖ ಆರೋಪಿ ಎಂ.ರಾಜೇಂದ್ರನ್, ಕಾಂಜೀವರಂನ ನಿವಾಸಿಯಾದರೆ, ನಾಗರತಿನ್ ಹಾಗೂ ಎಸ್.ಸೇಟು ವೆಲ್ಲೂರು ಜಿಲ್ಲೆಯವರು. ಇವರಿಂದ ಐವತ್ತು ಲಕ್ಷ ಮೌಲ್ಯದ ನಾಲ್ಕು ಟೆಂಪೋ ಟ್ರಾವೆಲರ್ ವಾಹನ ಜಪ್ತಿ ಮಾಡಲಾಗಿದೆ. ಈ ಆರೋಪಿಗಳ ಬುಡಕ್ಕೊದೆಯುತ್ತಲೇ ರಕ್ತ ಚಂದನ ಅಕ್ರಮ ಮಾರಾಟ ಗ್ಯಾಂಗಿನೊಂದಿಗಿನ ನಂಟನ್ನೂ ಕಾರಿಕೊಂಡಿದ್ದಾರೆ.
ಬಂಧಿತ ಮೂವರೂ ಕಳೆದ ಹದಿನಾರು ವರ್ಷಗಳಿಂದ ಕದ್ದ ವಾಹನಗಳ ನಂಬರ್ ಪ್ಲೇಟ್ ಬದಲಾಯಿಸಿ ಕಳ್ಳ ಮಾರ್ಗದ ಮೂಲಕವೇ ಆಂಧ್ರ ಮತ್ತು ತಮಿಳುನಾಡಿಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಿದ್ದರು. ರೈಲಿನಲ್ಲಿ ಬೆಂಗಳೂರಿಗೆ ಬರುತ್ತಿದ್ದ ಇವರು ಹಗಲು ಹೊತ್ತಿನಲ್ಲಿ ಸುತ್ತಾಡಿ ಮನೆ ಮುಂದೆ ನಿಂತಿರುವ ಟೆಂಪೋ ವಾಹನಗಳನ್ನು ಗುರುತು ಹಿಡಿಯುತ್ತಿದ್ದರು. ರಾತ್ರಿವೇಳೆ ಬಂದು ಕಳ್ಳತನ ಮಾಡುತ್ತಿದ್ದರು. ಇಡೀ ವಾಹನದ ಸ್ವರೂಪವನ್ನೇ ಬದಲಾಯಿಸಿ ಬೇರೆ ನಂಬರ್ ಪ್ಲೇಟ್‌ಗಳನ್ನು ಅಳವಡಿಸಿ ಅತ್ಯಂತ ಕಡಿಮೆ ಹಣಕ್ಕೆ ರಕ್ತ ಚಂದನ ಸಾಗಾಟ ಮಾಡೋ ಗ್ಯಾಂಗಿಗೆ ಮಾರಾಟ ಮಾಡಿ ಬಿಡುತ್ತಿದ್ದರು. ವಿದೇಶದಲ್ಲಿ ರಕ್ತ ಚಂದನಕ್ಕೆ ವಜ್ರದಷ್ಟು ಬೆಲೆ ಇರುವ ಕಾರಣದಿಂದಲೇ ಆಂಧ್ರ ಪ್ರದೇಶದಲ್ಲಿ ಇದನ್ನು ಕಡಿತಲೆ ಮಾಡಿ ಮಾರಾಟ ಮಾಡುವ ದೊಡ್ಡ ಜಾಲವೇ ಇದೆ. ಮಂಗಳೂರು, ಚೆನ್ನೈ, ಗೋವಾ, ಮುಂಬೈನ ಬಂದರುಗಳ ಮೂಲಕ ಚೀನಾ, ಜಪಾನ್, ಕೊರಿಯಾ, ಲ್ಯಾಟೀನ್ ಅಮೆರಿಕ ದೇಶಗಳಿಗೆ ರಕ್ತಚಂದನವನ್ನು ಮಾರಾಟ ಮಾಡಲಾಗುತ್ತದೆ. ಬಂದರುಗಳಿಗೆ ರಕ್ತಚಂದನವನ್ನು ಸಾಗಿಸಲು ಕದ್ದ ಟೆಂಪೋ ಟ್ರಾವೆಲರ್‌ಗಳನ್ನು ಸ್ಮಗ್ಲರ್‌ಗಳ ಜಾಲ ಬಳಸುತ್ತಿದೆ. ತೀರ್ಥ ಕ್ಷೇತ್ರಗಳಿಗೆ ತೆರಳುತ್ತಿರುವುದಾಗಿ ಹೇಳಿ ಪೊಲೀಸರಿಂದ, ಚೆಕ್ ಪೋಸ್ಟ್‌ಗಳಲ್ಲಿ ತಪ್ಪಿಸಿಕೊಳ್ಳುವುದು ಸುಲಭವಾದ್ದರಿಂದ ಸುಸಜ್ಜಿತವಾದ ಟೆಂಪೋ ಟ್ರಾವೆಲರ್‌ಗಳನ್ನೇ ಸ್ಮಗ್ಲರ್‌ಗಳು ಬಳಸುತ್ತಾರೆ. ಈ ಕಾರಣದಿಂದ ಬಂಧಿತ ಆರೋಪಿಗಳು ಸುಸಜ್ಜಿತ ಸ್ಥೀತಿಯಲ್ಲಿದ್ದ ಟೆಂಪೋ ವಾಹನಗಳನ್ನೇ ಕದಿಯುತ್ತಿದ್ದರು. ಹೀಗೆ ವಾಹನ ಕದ್ದೇಟಿಗೆ ಅದು ಸ್ವರೂಪವನ್ನೇ ಬದಲಾಯಿಸಿಕೊಂಡು ರಕ್ತಚಂದನ ಕಳ್ಳರ ಪಾಲಾಗುತ್ತಿತ್ತು.
ಟೆಂಪೋಗಳು ಕಣ್ಮರೆ
ಬೆಂಗಳೂರಿನ ಅನೇಕ ಕಡೆಗಳಲ್ಲಿ ಇಂಥಾ ಟೆಂಪೋ ಟ್ರಾವೆಲರ್‌ಗಳು ಕಾಣೆಯಾಗುತ್ತಿದ್ದವು. ಚಂದ್ರಾ ಲೇಔಟ್ ಪ್ರದೇಶವೊಂದರಲ್ಲಿಯೇ ಇಂಥಾ ಹತ್ತಾರು ಕೇಸುಗಳು ದಾಖಲಾಗಿದ್ದವು. ಆದರೆ ಅದೇನೇ ಮಾಡಿದರೂ ಇದರ ಮೂಲ ಮಾತ್ರ ಪತ್ತೆಯಾಗುತ್ತಿರಲಿಲ್ಲ. ಯಾವಾಗ ಟಿಟಿ ಕಳ್ಳತನದ ಪ್ರಕರಣಗಳು ಅತಿಯಾದವೋ ಆಗ ಪೊಲೀಸರು ಮುಳ್ಳನ್ನು ಮುಳ್ಳಿಂದಲೇ ತೆಗೆಯುವ ತಂತ್ರವೊಂದನ್ನು ಜಾರಿಗೆ ತಂದಿದ್ದರು. ಈ ಭಾಗದ ಕೆಲ ಟಿಟಿ ವಾಹನಗಳಿಗೆ ಜಿಪಿಆರ್‌ಎಸ್ ಅಳವಡಿಸಲು ನಿರ್ಧರಿಸಲಾಗಿತ್ತು. ಅದೇ ರೀತಿ ಚಂದ್ರಾಲೇಔಟ್ ವ್ಯಾಪ್ತಿಯಿಂದ ಕಳ್ಳತನವಾಗಿದ್ದ ಟೆಂಪೋ ವಾಹನದಲ್ಲಿಯೂ ಜಿಪಿಎಸ್ ಅಳವಡಿಸಲಾಗಿತ್ತು. ಈ ವಾಹನ ತಮಿಳುನಾಡಿನಲ್ಲಿರುವುದಾಗಿ ಜಿಪಿಎಸ್ ಮೂಲಕ ಗೊತ್ತಾಗಿತ್ತು. ಅಲ್ಲಿಗೆ ತೆರಳಿದ ತಂಡ ವಾಹನವನ್ನು ಮತ್ತು ಖದೀಮರನ್ನು ಪತ್ತೆ ಹಚ್ಚಿತ್ತು. ತಿರುಪತಿ ತಿರುಮಲ ಸುತ್ತುವರೆದಿರುವಂತೆ ಕಡಪ ಹಾಗೂ ಚಿತ್ತೂರು ಅರಣ್ಯದಲ್ಲಿ ರಕ್ತ ಚಂದನ ಕಳ್ಳಸಾಗಣೆ ಇದೇ ಮೊದಲಲ್ಲ ಔಷಧಿಯ ಗುಣಗಳುಳ್ಳ ಇಲ್ಲಿನ ರಕ್ತ ಚಂದನಕ್ಕೆ ಎಲ್ಲಿಲ್ಲದ ಬೇಡಿಕೆ. ವಿದೇಳಗಳಲ್ಲೂ ಇದಕ್ಕೆ ಡಿಮ್ಯಾಂಡ್. ರಕ್ತ ಚಂದನದ ಕಳ್ಳಸಾಗಣೆ ದಶಕಗಳಿಂದ ನಿರಂತರವಾಗಿ ನಡೆಯುತ್ತಿದೆ. ರಕ್ತಚಂದನ ಕಳ್ಳಸಾಗಣೆ ಪ್ರಕರಣದಲ್ಲಿ ಗಂಗಿರೆಡ್ಡಿ ಎಂಬಾತ ಕರ್ನಾಟಕದಲ್ಲಿ ಕಾಡುಗಳ್ಳ ವೀರಪ್ಪನ್‌ನಷ್ಟೇ ಕುಖ್ಯಾತಿ ಪಡೆದಿದ್ದ. ತಲೆಮರೆಸಿಕೊಂಡಿದ್ದ ಆತನನ್ನು ಮಲೇಷ್ಯಾದಲ್ಲಿ ಬಂಧಿಸಲಾಗಿತ್ತು.
ಚಂದ್ರಗಿರಿ ಅರಣ್ಯದಲ್ಲಿ ರಕ್ತ ಚಂದನ ಮರಗಳನ್ನು ಕಡಿದು ಸಾಗಿಸುವ ಕೃತ್ಯ ಮಾಡಿಸಲಾಗುತ್ತಿತ್ತು. ಇದರ ಹಿಂದೆ ಪ್ರಭಾವಿಗಳ ಕೈವಾಡವೂ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕಳ್ಳಸಾಗಣೆದಾರರಿಂದ ವಶಕ್ಕೆ ಪಡೆದಿದ್ದ ರಕ್ತ ಚಂದನವನ್ನು ತಿರುಪತಿಯಲ್ಲಿ ಇತ್ತೀಚೆಗೆ ಹರಾಜು ಹಾಕಿದ್ದಾಗ ಮುನ್ನೂರು ಕೋಟಿಗೂ ಹೆಚ್ಚು ಮೊತ್ತಕ್ಕೆ ಮಾರಾಟವಾಗಿತ್ತು. ದೇಶದ ವಿವಿಧೆಡೆಯಿಂದ ಆಗಮಿಸಿದ್ದ ಖ್ಯಾತ ಆಯುರ್ವೇದ ಪಂಡಿತರು ಹರಾಜಿನಲ್ಲಿ ಭಾಗವಹಿಸಿ ಖರೀದಿಸಿದ್ದರು. ಹೀಗೆ ರಕ್ತ ಚಂದನವನ್ನು ಒಂದೆಡೆಯಿಂದ ಸಾಗಿಸುವ ಕೆಲಸಕ್ಕೆ ಬಳಕೆಯಾಗುತ್ತಿದ್ದದ್ದು ಇದೇ ಕಾರ್ಯತಂತ್ರ. ರಕ್ತ ಚಂದನ ಅಕ್ರಮವಾಗಿ ಮಾರಾಟ ಮಾಡುವ ದೊಡ್ಡ ಜಾಲವೇ ಇದೆ. ಇತ್ತೀಚೆಗೆ ಹೊಸಕೋಟೆಯಲ್ಲಿ ರಕ್ತ ಚಂದನ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ತಂಡದ ಮೇಲೆ ಮೂರ್‍ನಾಲ್ಕು ಬಾರಿ ದಾಳಿ ನಡೆಸಿ ಸುಮಾರು ಹತ್ತು ಕೋಟಿ ರೂ. ಮೊತ್ತದ ರಕ್ತ ಚಂದನ ವಶಕ್ಕೆ ಪಡೆಯಲಾಗಿತ್ತು. ಈ ಪ್ರಕರಣದಲ್ಲಿ ಚೀನಾ ಪ್ರಜೆಗಳು ಬಂಧನಕ್ಕೊಳಗಾಗಿದ್ದರು.ರಕ್ತ ಚಂದನ ಮಾರಾಟ ಜಾಲ ಕರ್ನಾಟಕ ದಲ್ಲೂ ವ್ಯಾಪಿಸಿರುವುದರಿಂದ, ರಕ್ತ ಚಂದನ ಕಳ್ಳ ಸಾಗಣೆಗಾಗಿ ತಮಿಳು ನಾಡಿನ ಗ್ಯಾಂಗ್ ಕರ್ನಾಟಕದ ಮೂಲಕವೇ ಆಂಧ್ರ ಪ್ರವೇಶಿಸಿರುವುದು ಖಚಿತವಾಗಿರುವುದರಿಂದ ಇದೀಗ ಆಂಧ್ರಪ್ರದೇಶ ಪೊಲೀಸರ ಕಣ್ಣು ರಾಜ್ಯದ ಮೇಲೆ ಬಿದ್ದಿತ್ತು. ಇದೀಗ ಸಿಕ್ಕಿ ಬಿದ್ದಿರುವ ಟಿಟಿ ಕಳ್ಳರ ಕಡೆಯಿಂದ ದೇಶಾಧ್ಯಂತ ಆಕ್ಟೀವ್ ಆಗಿರುವ ಈ ಜಾಲ ಬಯಲಾಗೋ ಎಲ್ಲ ಲಕ್ಷಣಗಳೂ ಇವೆ.
ಭಯಾನಕ ಭಿಲ್ ಗ್ಯಾಂಗ್!
ಕರ್ನಾಟಕ ಪೊಲೀಸ್ ಇಲಾಖೆ ಇತ್ತೀಚಿನ ವರ್ಷಗಳಲ್ಲಿ ಪತ್ತೆ ಹಚ್ಚಿದ ಅತ್ಯುತ್ತಮ ಪ್ರಕರಣಗಳಲ್ಲಿ ಭಿಲ್ ಗ್ಯಾಂಗ್ ಸದಸ್ಯರ ಬಂಧನ ಕೂಡ ಒಂದೆಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಶುಕ್ರವಾರ ಪೊಲೀಸರು ನಡೆಸಿದ ತನಿಖೆಯ ಬಗ್ಗೆ ಇಲಾಖೆ ತಿಳಿಸಿದ ನಂತರ ಸಾರ್ವಜನಿಕವಾಗಿ ಬೆಂಗಳೂರು ಪೊಲೀಸರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಇವೆಲ್ಲದರ ನಡುವೆ ಇಡೀ ಭಿಲ್ ಸಮುದಾಯವನ್ನೇ ಕ್ರಿಮಿನಲ್ ಟ್ರೈಬ್ ಎಂಬ ಹಣೆಪಟ್ಟಿ ಕಟ್ಟುವ ಪ್ರಯತ್ನವೂ ನಡೆದುಹೋಗಿದೆ. ಆದರೆ ಭಿಲ್ ಸಮುದಾಯದ ಇತಿಹಾಸದ ಪುಟಗಳನ್ನು ತಿರುವಿದರೆ ಅಲ್ಲಿ ಹೋರಾಟವಿದೆ, ಸಂಗ್ರಾಮವಿದೆ, ಬಂಡವಾಳಶಾಹೀ ವಿರುದ್ಧದ ಕೂಗಿದೆ, ಸಮಾಜದಿಂದ ಬಹಿಷ್ಕರಿಸಲ್ಪಟ್ಟ ನೋವಿದೆ ಮತ್ತು ಅದೆಲ್ಲಕ್ಕಿಂತ ವಿಭಿನ್ನವಾದ ಬಿಲ್ವಿದ್ಯಾ ಪ್ರಾವೀಣ್ಯತೆ ಕಾಣುತ್ತದೆ. ಒಂದು ಕಾಲದಲ್ಲಿ ಬ್ರಿಟೀಷರ ವಿರುದ್ಧ ಸೆಣಸಾಡಿ ಬಹಿಷ್ಕರಿಸಲ್ಪಟ್ಟ ಭಿಲ್ ಸಮುದಾಯದ ಇಂದಿನ ಸ್ಥಿತಿಗತಿಗಳೇನು ವಿಸ್ತೃತ ವರದಿ ಇಲ್ಲಿದೆ…
ಮಧ್ಯ ಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ಗುಜರಾತ್ ಮತ್ತು ತ್ರಿಪುರಾದ ಕೆಲ ಭಾಗಗಳಲ್ಲಿ ನೆಲೆಸಿರುವ ಭಿಲ್ ಅಥವಾ ಭೀಲ್ ಎಂದು ಕರೆಸಿಕೊಳ್ಳುವ ಸಮುದಾಯ ಉತ್ತರಭಾರತದ ಅತಿ ದೊಡ್ಡ ಆದಿವಾಸಿ ಜನಾಂಗ. ಬಿಲ್ವಿದ್ಯೆಯಲ್ಲಿ ಅತ್ಯುತ್ತ ಪ್ರಾವೀಣ್ಯತೆ ಹೊಂದಿರುವ ಭಿಲ್ ಜನರು ರಾಜಾಳ್ವಿಕೆಯ ಕಾಲಗಳಲ್ಲಿ ಸೇನೆಯ ಅವಿಭಾಜ್ಯ ಅಂಗವಾಗಿದ್ದವರು. ಅದೆಷ್ಟೋ ಯುದ್ಧಗಳ ಗತಿಯನ್ನೇ ಬದಲಿಸಿದ ಕೀರ್ತಿಯೂ ಇವರಿಗಿದೆ. ದೈಹಿಕವಾಗಿ ಬಲಾಢ್ಯರಾಗಿರುವ ಈ ಸಮುದಾಯದ ಮಂದಿ ಸಾವಿರಾರು ವರ್ಷಗಳ ಕಾಲ ಸೈನಿಕರಾಗಿಯೇ ಜೀವನ ಸಾಗಿಸಿದ್ದಾರೆ. ನಾಗರೀಕತೆ ಬೆಳೆದಂತೆ, ಅಸ್ತ್ರ-ಶಸ್ತ್ರಗಳ ಬಳಕೆ ಆರಂಭವಾಗಿತ್ತು. ಜನರಿನ್ನೂ ಬಿಲ್ಲು ಬಾಣಗಳನ್ನು ಬಳಸಲು ಮುಂದಾಗುವ ಮೊದಲೇ ಭಿಲ್ ಸಮುದಾಯ ಪರಿಣಿತಿ ಹೊಂದಿತ್ತು. ಅದಕ್ಕಾಗಿಯೇ ಇವರು ಸೈನ್ಯದಲ್ಲಿ ಪ್ರಾಮುಖ್ಯತೆ ಪಡೆದಿದ್ದರು ಎಂಬ ಅಂಶಗಳು ಅಂತರ್ಜಾಲದಲ್ಲಿ ಲಭ್ಯವಾಗುತ್ತದೆ.
ಭಿಲ್ ಎಂಬ ಹೆಸರು ತಮಿಳಿನ ವಿಲ್ಲುವಾರ ಎಂಬ ಪದದಿಂದ ಬಂದಿದೆ ಎನ್ನಲಾಗುತ್ತದೆ. ಅದೇ ರೀತಿ ವಿಲ್ಲು ಅಥವಾ ಬಿಲ್ಲು ಎಂಬ ಪದದಿಂದ ಆ ಹೆಸರು ಬಂದಿದೆ ಎಂಬುದಾಗಿಯೂ ಹೇಳಲಾಗುತ್ತದೆ. ಒಟ್ಟಿನಲ್ಲಿ ವೃತ್ತಿಪರ ಬಿಲ್ಲುಗಾರರಾಗಿದ್ದರಿಂದ ಸಮುದಾಯವನ್ನು ಭಿಲ್ ಎಂದು ಕರೆದಿರುವುದು ಸ್ಪಷ್ಟ. ರಾಮಾಯಣ ಮತ್ತು ಮಹಾಭಾರತದಲ್ಲಿಯೂ ಭಿಲ್ ಜನಾಂಗದ ಉಲ್ಲೇಖವಿದೆ. ಅಪಹರಣವಾದ ಸೀತೆಯನ್ನು ಹುಡುಕಿ ಹೋಗುವ ರಾಮನಿಗೆ ದಾರಿಯಲ್ಲಿ ಭಿಲ್ ಜನಾಂಗದ ಕೆಲ ಮಹಿಳೆಯರು ಊಟ ಉಪಚಾರ ಮಾಡಿದ ಉಲ್ಲೇಖವಿದೆ. ಮಹಾ ಕಾವ್ಯಗಳಲ್ಲಿ ಮತ್ತು ಪುರಾಣಗಳಲ್ಲಿ ಅಲ್ಲಲ್ಲಿ ಇಣುಕಿ ಮರೆಯಾಗುವ ಭಿಲ್ ಜನರು ನಂತರ ಇತಿಹಾಸದಲ್ಲಿ ದೊಡ್ಡ ಪಾತ್ರವನ್ನು ಹೊಂದಿದ್ದಾರೆ. ಹಿಂದಿನ ಕಾಲದಲ್ಲಿ ಭಿಲ್‌ರನ್ನು ಮಹಾ ಯೋಧರೆಂದು ಗುರುತಿಸಲಾಗುತ್ತಿತ್ತು. ಮೊಘಲರ, ಮರಾಠರ ಮತ್ತು ಬ್ರಿಟೀಷರ ವಿರುದ್ಧ ಯುದ್ಧದಲ್ಲಿ ಭಿಲ್ ಸೇನಾನಿಗಳು ಭಾಗಿಯಾಗಿದ್ದರು. ಬ್ರಿಟಿಷರಿಗೆ ಹಲವು ಆದಿವಾಸಿ ಜನಾಂಗಗಳಂತೆ ಭಿಲ್ ಸಮುದಾಯವೂ ಕೂಡ ದೊಡ್ಡ ಶತ್ರುವಾಗಿತ್ತು. ಭಿಲ್ ಜನರ ಗೊರಿಲ್ಲಾ ಯುದ್ಧದಿಂದ ಬ್ರಿಟೀಷ್ ಸೇನೆ ಹೈರಾಣಾಗಿಹೋಗಿತ್ತು. ಭಿಲ್‌ರನ್ನು ತಡೆಯಲು ಸಾಧ್ಯವೇ ಆಗದ ಸಂದರ್ಭಗಳೂ ಸೃಷ್ಟಿಯಾಗಿತ್ತು ಎನ್ನಲಾಗುತ್ತದೆ. ಆಗ, ಬ್ರಿಟೀಷ್ ಸೇನೆ ಭಿಲ್ ಜನಾಂಗವನ್ನು ಬಹಿಷ್ಕರಿಸಿ, ಅವರಿಗೆ ಕಳ್ಳರು ಮತ್ತು ಹಿಂಸಾಚಾರಿಗಳು ಎಂಬ ಪಟ್ಟ ನೀಡಿತ್ತು. ರಾಜದ್ರೋಹದ ಕಾನೂನಿನಡಿಯಲ್ಲಿ ಹಲವು ಭಿಲ್ ಸಮುದಾಯದ ನಾಯಕರನ್ನು ಬಂಧಿಸಲಾಗಿತ್ತು ಎಂದೂ ಹೇಳಲಾಗುತ್ತದೆ.
ವಿಶೇಷ ಸಮುದಾಯ
ಬೇರೆ ರಾಜ್ಯಗಳನ್ನು ಹೊರತುಪಡಿಸಿ, ರಾಜಸ್ಥಾನದಲ್ಲಿ ಮೂವತೊಂಭತ್ತು ಭಾಗದಷ್ಟು ಜನಸಂಖ್ಯೆ ಹೊಂದಿರುವ ಭಿಲ್ ಸಮುದಾಯ ಹೊಂದಿದೆ ಎಂಬ ಮಾಹಿತಿವೀಗಾಗಲೇ ಲಭ್ಯವಾಗಿದೆ. ಅವರು ಬಳಸುವ ಭಾಷೆ ಭಿಲಿ. ಅದೊಂದು ಇಂಡೋ-ಆರ್ಯನ್ ಭಾಷೆ. ಮರಾಠಿ, ರಾಜಸ್ಥಾನಿಯ ಸೊಗಡೂ ಅದರಲ್ಲಿ ಸೇರಿಕೊಂಡಿದೆ. ಭಿಲ್ ಸಮುದಾಯ ಮಹಿಳೆಯರು ಸಾಂಪ್ರದಾಯಿಕ ಸೀರೆಗಳನ್ನು ತೊಟ್ಟರೆ, ಪುರುಷರು ಉದ್ದವಾದ ಜುಬ್ಬಾ ಮತ್ತು ಪೈಜಾಮ ಧರಿಸುತ್ತಾರೆ. ಹಿತ್ತಾಳೆಯ ಆಭರಣಗಳನ್ನು ಮಹಿಳೆಯರು ಧರಿಸುತ್ತಾರೆ. ಭಿಲ್ ಜನರು ನೀಳ ಕಾಯದವರು, ಉತ್ತಮ ಶರೀರ ಹೊಂದಿದವರು ಮತ್ತು ನೋಡಲು ಸ್ಪುರದ್ರೂಪಿಗಳು. ಸರಳತೆ ಮತ್ತು ಸತ್ಯನುಡಿಗಾಗಿ ಅವರು ಹೆಸರಾದವರು ಮತ್ತು ಸ್ವತಂತ್ರ್ಯವನ್ನು ಬಹಳವಾಗಿ ಪ್ರೀತಿಸುವವರು ಎನ್ನಲಾಗುತ್ತದೆ. ಅದರ ಜತೆ ವಂಶಪಾರಂಪರಿಕವಾಗಿ ಭಿಲ್ ಜನ ಶಕ್ತಿಶಾಲಿಗಳು ಮತ್ತು ಧೈರ್ಯಶಾಲಿಗಳು. ಭಿಲ್ ಜನಾಂಗದ ಶಸ್ತ್ರ ಬಿದುರಿನಿಂದ ಮಾಡಿದ ಬಿಲ್ಲು. ತಲೆತಲಾಂತರದಿಂದ ಭೇಟೆಯಾಡುವುದರಲ್ಲಿ ನಿಸ್ಸೀಮರು. ಸದ್ಯ ರೈತರಾಗಿ ಬದಲಾಗಿದ್ದಾರೆ. ಎಲ್ಲಾ ಕೋಮು, ಪಂಥ, ಧರ್ಮದಲ್ಲಿರುವಂತೆಯೇ ಇಲ್ಲಿಯೂ ದುಷ್ಟರಿರಬಹುದು, ಕಳ್ಳರಿರಬಹುದು, ಆದರೆ ಇಡೀ ಜನಾಂಗ ಸತ್ಯ ಮತ್ತು ನ್ಯಾಯಕ್ಕೆ ಹತ್ತಿರವಾದ ಜೀವನ ನಡೆಸಿಕೊಂಡು ಬಂದಿದೆ. ಕೆಲವು ಮೂಲಗಳ ಪ್ರಕಾರ, ಅವರು ಇವತ್ತಿಗೂ ಹೆಬ್ಬೆರಳನ್ನು ಬಳಸಿ ಬಿಲ್ಲು ಬಾಣಗಳ ಪ್ರಯೋಗ ಮಾಡುವುದಿಲ್ಲ. ಅವರ ಆರಾದ್ಯ ದೈವ ಏಕಲವ್ಯನ ನೆನಪಿಗಾಗಿ ಹೀಗೊಂದು ಸಂಪ್ರದಾಯವನ್ನು ಅವರು ಆಚರಿಸಿಕೊಂಡು ಬರುತ್ತಿದ್ದಾರೆ.
ಭಿಲ್ ಜನಾಂಗದ ಧಾರ್ಮಿಕ ಪದ್ಧತಿಗಳು ಸ್ಥಳದಿಂದ ಸ್ಥಳಕ್ಕೆ ಭಿನ್ನವಾಗಿವೆ. ಹೆಚ್ಚಿನ ಜನರು ಸ್ಥಳೀಯವಾದ ದೇವರುಗಳನ್ನು ಆಚರಿಸುತ್ತಾರೆ. ಖಂಡೋಬಾ, ಕನ್ಹೋಬಾ, ಬಹಿರೋಬಾ ಮತ್ತು ಸೀತಾಲ್ಮಾತ, ಹೆಚ್ಚು ಜನರಿಂದ ಪೂಜಿತವಾಗುವ ದೇವದೇವತೆಗಳು. ಭಿಲ್‌ರಲ್ಲಿ ಕೆಲವರು ಹುಲಿಯನ್ನು ದೇವರೆಂದು ಪೂಜಿಸುತ್ತಾರೆ. ಅದಕ್ಕೆ ವಾಗ್ದೇವ್, ಎಂಬ ಹೆಸರಿನಿಂದ ಕರೆಯುತ್ತಾರೆ. ಆದರೆ ವಿಶೇಷವೆಂದರೆ ಅವರಿಗೆ ಅವರದ್ದೇ ಆದ ಸ್ವಂತ ದೇವಸ್ಥಾನಗಳಿಲ್ಲ. ಇದು ಎಲ್ಲಾ ಆದಿವಾಸಿ ಜನಾಂಗಗಳಿಗೂ ಅನ್ವಯಿಸುವ ಸಾಧ್ಯತೆಯೂ ಇದೆ. ಬುಡಕಟ್ಟು ಜನಾಂಗಗಳಲ್ಲಿ ಕಂಡುಬರುವ ಅಮಾಯಕ ಮೂಢನಂಬಿಕೆಗಳೂ ಭಿಲ್‌ರಲ್ಲಿ ಹಾಸುಹಿಕ್ಕಾಗಿದೆ. ಯುದ್ಧಕ್ಕೆ ಹೊರಡುವ ಮುನ್ನವೂ ಅವರು ಶಕುನಕ್ಕಾಗಿ ಕಾಯುತ್ತಿದ್ದರು. ಯಾವುದೇ ಕೆಲಸ ಕಾರ್ಯಗಳಿಗೂ ಶಕುನವಿಲ್ಲದೇ ಹೊರಡುವವರಲ್ಲ. ಹಳ್ಳಿಗೊಬ್ಬ ಸ್ಥಳೀಯವಾಗಿ ಗುರು ಇರುತ್ತಾರೆ. ಪೂಜೆ ಪುನಸ್ಕಾರಗಳನ್ನು ಅವರೇ ಮಾಡುತ್ತಾರೆ. ಅದೇ ರೀತಿ ಹಳ್ಳಗೊಬ್ಬ ಮುಖ್ಯಸ್ಥ, ಆತನೇ ಕೋರ್ಟ್, ಆತನೇ ನ್ಯಾಯಾಧೀಶ. ಭಿಲ್ ಸಮುದಾಯ ಇರುವೆಲ್ಲ ಕಡೆ ಇಂದಿಗೂ ಪೊಲೀಸ್ ಠಾಣೆಗಳಿಗೆ ದೂರುಗಳು ಹೋಗುವುದು ತೀರಾ ಕಡಿಮೆ. ಸಮುದಾಯದ ಕಟ್ಟುಪಾಡುಗಳನ್ನು ಜನರು ತಪ್ಪದೇ ಪಾಲಿಸುತ್ತಾರೆ. ಹಾಡು ಮತ್ತು ನೃತ್ಯಕ್ಕೆ ಭಿಲ್ ಜನಾಂಗ ಹೆಚ್ಚಿನ ಒತ್ತು ನೀಡುತ್ತದೆ. ಘೂಮರ್ ಎಂಬ ನೃತ್ಯಶೈಲಿ ಭಿಲ್ ಸಮುದಾಯದ ಪ್ರಖ್ಯಾತ ನೃತ್ಯ ಪ್ರಾಕಾರ. ಶ್ರಾವಣ ಮಾಸದಲ್ಲಿ ಪುರುಷರು ಥಾನ್ ಗಾಯಿರ್, ಎಂಬ ನೃತ್ಯ ರೂಪಕವನ್ನು ಮಾಡುತ್ತಾರೆ. ಇದೊಂದು ಧಾರ್ಮಿಕ ನೃತ್ಯ ರೂಪಕವಾಗಿದ್ದು, ಭಿಲ್ ಜನಾಂಗದ ಇತಿಹಾಸವನ್ನೂ ಸಾರುತ್ತದೆ. ಶಿಲ್ಪಕಲೆಯಲ್ಲಿಯೂ ಪರಿಣಿತಿ ಹೊಂದಿರುವ ಭಿಲ್ ಜನರು ಕರಕುಶಲ ಕಲೆಯನ್ನೂ ಬಲ್ಲವರಾಗಿದ್ದಾರೆ.
ಇತಿಹಾಸದಲ್ಲಿ ಎದುರಿಸಿದ ನೂರೆಂಟು ಯುದ್ಧಗಳು, ನಂತರದಲ್ಲಿ ಬ್ರಿಟೀಷರ ಆಳ್ವಿಕೆಯನ್ನು ಸಹಿಸದೇ ನಡೆಸಿದ ಹೋರಾಟ, ನಂತರದ ರಾಜದ್ರೋಹಿ ಪಟ್ಟ ಇವೆಲ್ಲವನ್ನೂ ಸಹಿಸಿ ಈಗ ಕೃಷಿ ಮತ್ತು ಕೂಲಿನಾಲಿ ಮಾಡಿಕೊಂಡು ಬದುಕು ಸಾಗಿಸುತ್ತಿದ್ದಾರೆ. ವೀರ ಯೋಧ ಎನಿಸಿಕೊಂಡವರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗಳು ಇಂದು ಹಳಸಿವೆ. ಮುಖ್ಯವಾಗಿ ಮಧ್ಯಪ್ರದೇಶ ಮತ್ತು ರಾಜಸ್ಥಾನ ಭಾಗಗಳಲ್ಲಿರುವ ಭಿಲ್ ಸಮುದಾಯ ಹಿಂದುಳಿದ ವರ್ಗಗಳಾಗಿಯೇ ಉಳಿದಿದೆ. ಬ್ರಿಟೀಷರು ತಮ್ಮ ವಿರುದ್ಧ ಹೋರಾಟ ಮಾಡಿದ ಕಾರಣಕ್ಕೆ ಕ್ರಿಮಿನಲ್ ಟ್ರೈಬ್, ಎಂದು ಹಲವು ಬುಡಕಟ್ಟು ಜನಾಂಗಗಳನ್ನು ಬಹಿಷ್ಕರಿಸಿತ್ತು. ಅದೇ ಸ್ಥಿತಿ ಇವತ್ತಿಗೂ ಮುಂದುವರೆದಿದ್ದು, ಆಧುನೀಕತೆಯ ಓಟದಲ್ಲಿ ಭಿಲ್ ಜನಾಂಗ ಹಿಂದೆಬಿದ್ದಿದೆ.
ಇವತ್ತಿಗೂ ಓಟ್ ಬ್ಯಾಂಕ್ ಆಗಿ ಬಳಕೆಯಾಗುತ್ತಿರುವ ಭಿಲ್ ಕುಟುಂಬಗಳಿಗೆ ಓದುವ ಅವಕಾಶ ವಿರಳ. ಮಧ್ಯಪ್ರದೇಶ ಮತ್ತು ರಾಜಸ್ಥಾನ ಭಾಗಗಳಲ್ಲಿ ಭೂಮಾಲೀಕರಿಂದ ಸಾಲ ಪಡೆಯುತ್ತಾರೆ. ಅತೀ ದೊಡ್ಡ ಮೊತ್ತದ ಬಡ್ಡಿ ಇವರ ಮೇಲೆ ಹೇರಲಾಗುತ್ತದೆ. ಅದು ಎಷ್ಟರ ಮಟ್ಟಿಗೆಂದರೆ ಅದನ್ನು ತೀರಿಸಲು ಎಂದಿಗೂ ಸಾಧ್ಯವೇ ಇಲ್ಲ. ಸಾವಿರಾರು ಸಂಖ್ಯೆಯಲ್ಲಿ ಭಿಲ್ ಜನರು ಜೀತದಾಳುಗಳಾಗಿದ್ದಾರೆ. ಕೆಲವರು ಸಣ್ಣಪುಟ್ಟ ಕೂಲಿ ಮಾಡಿ ಜೀವನ ಸಾಗಿಸುತ್ತಾರೆ, ಕೃಷಿ ಭೂಮಿ ಇರುವವರು ಕೃಷಿ ಮಾಡುತ್ತಾರೆ. ಏನೂ ಇಲ್ಲದ ಕೆಲವರು ಶತಮಾನಗಳ ಪ್ರವೀಣತೆಯನ್ನು ಹೊತ್ತು ಅಪರಾಧ ಲೋಕಕ್ಕೆ ಕಾಲಿಟ್ಟಿದ್ದಾರೆ. ಅಂತವರಲ್ಲಿಯೇ ಕೆಲವು ಈಗ ಬೆಂಗಳೂರು ಪೊಲೀಸರ ಅತಿಥಿಗಳು.
ರಾಬರಿ ಟ್ರಿಪ್ ಗ್ಯಾಂಗ್!
ಸದ್ಯ ಭಾರೀ ಸದ್ದು ಮಾಡುತ್ತಿರುವ ಮಂಗಳೂರು ಸೀಮೆಯ ಪಡ್ಡೆ ಹುಡುಗರ ಈ ದರೋಡೆ ಗ್ಯಾಂಗು ಸದ್ಯ ಭಾರೀ ಸದ್ದು ಮಾಡುತ್ತಿದೆ. ನೆಟ್ಟಗೆ ಮೈ ಬಗ್ಗಿಸಿ ದುಡಿಯುವ ಯೋಗ್ಯತೆ ಇಲ್ಲದೆ ಕಾಸು ಮಾಡಲು ಪ್ರಳಯಾಂತಕ ಹಾದಿ ತುಳಿಯುವ ಯುವ ಸಮೂಹದ ಕೆಟ್ಟ ಮನಸ್ಥಿತಿಗೆ ಈ ಗ್ಯಾಂಗು ಪಕ್ಕಾ ಉದಾಹರಣೆಯಂತೆಯೂ ಇದೆ. ನಿಯತ್ತಾಗಿ ಕೆಲಸ ಮಾಡಿದರೆ ಬದುಕಿಗೇನೂ ತೊಂದರೆಯಾಗದಂಥಾ ಕೆಲಸವಿದ್ದರೂ ನಾನಾ ಖಯಾಲಿ ಮೈಗಂಟಿಸಿಕೊಂಡಿದ್ದ ಈ ಗ್ಯಾಂಗಿನ ಇಬ್ಬರನ್ನು ಸದ್ಯ ಬೆಂಗಳೂರು ಪೊಲೀಸರು ಡಿಸಿಪಿ ಹರ್ಷ ನೇತೃತ್ವದಲ್ಲಿ ಬಂಧಿಸಿದ್ದಾರೆ. ಮಂಗಳೂರು ಸೀಮೆಯ ಸುರತ್ಕಲ್, ಸುಳ್ಯ ಮುಂತಾದೆಡೆಗಳಲ್ಲಿ ದರೋಡೆ, ಕಳ್ಳತನ ಮುಂತಾದವುಗಳಲ್ಲಿ ಪಳಗಿಕೊಂಡಿದ್ದ ಈ ಗ್ಯಾಂಗು ತದ ನಂತರ ಬೈಕೇರಿ ಜಾಲಿ ರೈಡ್ ನೆಪದಲ್ಲಿ ಪರವೂರುಗಳಿಗೂ ತೆರಳಿ ದರೋಡೆ ನಡೆಸುವ ಕಾನ್ಸೆಪ್ಟ್ ಒಂದನ್ನು ಕಾರ್ಯರೂಪಕ್ಕೆ ತಂದಿತ್ತು. ಇದರ ಮೂಲಕವೇ ಒಂದಷ್ಟು ಕಾಸು ಕಂಡಿದ್ದ ಈ ಗ್ಯಾಂಗು ಖಾಕಿ ಕೈಗೆ ತಗುಲಿಕೊಳ್ಳುವಂತೆ ಮಾಡಿದ್ದು ದೇವನಳ್ಳಿಯ ಜೆಡಿಎಸ್ ಶಾಸಕ ಪಿಳ್ಳಮುನಿಶಾಮಪ್ಪ ರಾಜೀನಾಮೆ ಸುತ್ತಲಿನ ವಿದ್ಯಮಾನ!
ಮಂಗಳೂರು ಭಾಗದ ಈ ಪಡ್ಡೆಗಳ ಗ್ಯಾಂಗಿಗೂ ಶಾಸಕ ಪಿಳ್ಳಮುನಿಶಾಮಪ್ಪ ರಾಜೀನಾಮೆಗೂ ಎಲ್ಲಿಂದೆಲ್ಲಿಯ ಕನೆಕ್ಷನ್ನು ಅಂತ ಅಚ್ಚರಿಯಾಗೋದು ಸಹಜವೇ. ಆದರೆ ಈ ರಾಜೀನಾಮೆ ಹಿನ್ನೆಯಲ್ಲಿ ನಡೆದ ಈ ಗ್ಯಾಂಗಿನ ಕೈಚಳಕವೇ ಅದನ್ನು ಖಾಕಿ ಕಸ್ಟಡಿಗೊಪ್ಪಿಸಿದ್ದು ಕಣ್ಣೆದುರಿನ ಸತ್ಯ. ದೇವನಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕರಾಗಿದ್ದ ಪಿಳ್ಳಮುನಿಶಾಮಪ್ಪ ಈ ಭಾಗದಲ್ಲಿ ಒಂದಷ್ಟು ಪ್ರಭಾವ ಹೊಂದಿದ್ದಾರೆ. ಒಂದಷ್ಟು ಕಾಲದಿಂದಲೂ ದೇವೇಗೌಡರ ಪಾಳೆಯದಲ್ಲಿ ಗುರುತಿಸಿಕೊಂಡಿದ್ದ ಈತ ಕೆಲ ದಿನಗಳ ಹಿಂದೆ ತಮ್ಮದೇ ಪಕ್ಷದಲ್ಲಿ ನಡೆದಿದ್ದ ವಿದ್ಯಮಾನದಿಂದ ಕನಲಿ ಹೋಗಿದ್ದರು. ಯಾಕೆಂದರೆ, ಜೆಡಿಎಸ್ ವರಿಷ್ಟರು ಇದೇ ಭಾಗದಲ್ಲಿಯ ನಿಸರ್ಗ ಲನಾರಾಯಣಸ್ವಾಮಿ ಎಂಬವರನ್ನು ಜೆಡಿಎಸ್‌ಗೆ ಸೆರಿಸಿಕೊಂಡಿದ್ದರು. ಆದರೆ ಈ ನಿರ್ಧಾರ ಕೈಗೊಳ್ಳುವ ಮುನ್ನ ಇಲ್ಲಿ ಹಾಲಿ ಶಾಸಕರಾಗಿದ್ದ ಮುನಿಶಾಮಪ್ಪರನ್ನು ಒಂದು ಮಾತೂ ಕೇಳಿರಲಿಲ್ಲ. ಇದಾದ ನಂತರದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಿಸರ್ಗ ನಾರಾಯಣಸ್ವಾಮಿಯೇ ಅಭ್ಯರ್ಥಿ ಎಂಬಂತೆ ರೂಮರುಗಳೆದ್ದಿದ್ದವು. ಇದರಿಂದ ಕಂಗಾಲಾದ ಪಿಳ್ಳ ಮುನಿಶಾಮಪ್ಪ ಏಕಾಏಕಿ ರಾಜೀನಾಮೆ ನೀಡಿ ರೆಬೆಲ್ ಅವತಾರವೆತ್ತಿದ್ದರು.
ಪಿಳ್ಳ ಮುನಿಶಾಮಪ್ಪ ರಾಜ್ಯಮಟ್ಟದ ರಾಜಕಾರಣದಲ್ಲಿ ಅನಾಮಿಕರಂತಿದ್ದಾರಾದರೂ ದೇವನಳ್ಳಿ ಭಾಗದಲ್ಲಿ ಒಂದಷ್ಟು ಖದರ್ ಹೊಂದಿರೋದೇನೂ ಸುಳ್ಳಲ್ಲ. ಈ ಭಾಗದಲ್ಲಿ ಜೆಡಿಎಸ್ ಕಾರ್ಯಕರ್ತರನ್ನು ಸರಿಕಟ್ಟಾಗಿ ಸಂಘಟಿಸಿದ್ದ ಮುನಿಶಾಮಪ್ಪ, ರಾಜೀನಾಮೆ ನೀಡುವ ಘಳಿಗೆಯನ್ನು ತಮ್ಮ ಶಕ್ತಿಪ್ರದರ್ಶನದ ಅಖಾಡವಾಗಿಸುವ ಚಾಲಾಕಿತನವನ್ನೂ ಪ್ರದರ್ಶಿಸಿದ್ದರು. ಈ ಸಂದರ್ಭದಲ್ಲಿ ಬೇಕೆಂದೇ ನೂಕು ನುಗ್ಗಲು ಕೂಡಾ ಸೃಷ್ಟಿಯಾಗಿತ್ತು. ಇಂಥಾ ಸಂದರ್ಭದಲ್ಲಿ ಶಾಸಕ ಕರೆಸಿಕೊಂಡಿದ್ದ ಅಷ್ಟೂ ಬಾಡಿ ಗಾರ್ಡುಗಳು ಹೈರಾಣಾಗಿ ಹೋಗಿದ್ದರು. ಅದರಲ್ಲಿಯೂ ಶಾಸಕರ ಖಾಯಂ ಗನ್ ಮ್ಯಾನ್ ಆಗಿದ್ದ ನರಸಿಂಹ ಮೂರ್ತಿಯಂತೂ ಜನಸ್ತೋಮವನ್ನು ನಿಯಂತ್ರಿಸುವ ಕಾರ್ಯ ಮಾಡುತ್ತಾ ಸುಸ್ತೆದ್ದು ಹೋಗಿದ್ದ. ಈ ಕೆಲಸದಲ್ಲಿ ಹೈರಾಣಾದ ನರಸಿಂಹ ಮೂರ್ತಿ ರಾತ್ರಿಯಾಗುತ್ತಲೇ ಸೀದಾ ದೇವನಳ್ಳಿಯ ಡಾಬಾಕ್ಕೆ ಹೋಗಿ ಗಡದ್ದಾಗಿ ಉಂಡು ಗುಂಡು ಹೊಡೆದಿದ್ದ.
ದೇಹಕ್ಕೆ ಆಯಾಸವಾದ್ದರಿಂದ ಗುಂಡು ತುಸು ಹೆಚ್ಚೇ ಆಗಿದ್ದರಿಂದ ನರಸಿಂಹಮೂರ್ತಿ ತೂರಾಡಿಕೊಂಡು ವಾಪಾಸು ಮನೆಗೆ ಹೊರಟವನು ಗಾಡಿ ಏರುವ ಮೊದಲೇ ಉದುರಿ ಬಿದ್ದಿದ್ದ. ನರಸಿಂಹಮೂರ್ತಿಯ ಈ ಎಲ್ಲ ಚಲನ ವಲನಗಳನ್ನೂ ಕೂಡಾ ಮಂಗಳೂರು ಮೂಲದ ಈ ರಾಬರಿ ಟ್ರಿಪ್ ಗ್ಯಾಂಗಿನ ಧನುಷ್ ಮತ್ತು ವಿಜಯ್ ಎಂಬ ಖದೀಮರು ನೋಡುತ್ತಲೇ ಇದ್ದರು. ಯಾಕೆಂದರೆ ಈ ಇಬ್ಬರೂ ಕತ್ತಲಾಗುತ್ತಿದ್ದಂತೆಡಯೇ ದರೋಡೆ ಕಾರ್ಯಾಚರಣೆಗಿಳಿಯುವ ಸನ್ನಾಹದಲ್ಲಿ ಊಟ ಮಾಡಲು ಕೂತಿದ್ದರು. ಯಾವಾಗ ನರಸಿಂಹ ಮೂರ್ತಿ ಆಯಾಸ ಮತ್ತು ಎಣ್ಣೆ ಏಟಲ್ಲಿ ಕುಸಿದು ಬಿದ್ದನೋ ಈ ಪ್ರಳಯಾಂತಕರು ಸೀದಾ ಬನಳಿ ಹೋಗಿ ನರಸಿಂಹಮೂರ್ತಿಯ ಸರ್ವಿಸ್ ರಿವಾಲ್ವರ್, ಪರ್ಸ್ ಮತ್ತು ಎರಡು ಮೊಬೈಲುಗಳನ್ನು ಚಕ ಚಕನೇ ದೋಚಿಕೊಂಡು ಬೈಕೇರಿ ಪರಾರಿಯಾಗಿದ್ದರು. ತುಂಬಾ ಹೊತ್ತಿನ ನಂತರ ನಶೆಯಿಂದ ಹೊರ ಬಂದ ನರಸಿಂಹಮೂರ್ತಿಗೆ ಆದ ಅನಾಹುತದ ಅರಿವಶಾಗುತ್ತಲೇ ಆತ ಬೇರೆ ದಾರಿ ಕಾಣದೆ ಈ ವಿಚಾರವನ್ನು ತನ್ನ ಬಾಸ್ ಶಾಸಕ ಪಿಳ್ಳಮುನಿಶಾಮಪ್ಪನಿಗೆ ಹೇಳಿದ್ದ. ಆತನ ಕಡೆಯಿಂದ ತಕ್ಷಣವೇ ಯಲಹಂಕ ಪೊಲೀಸ್ ಠಾಣೆಗೆ ದೂರು ರವಾನೆಯಾಗಿತತ್ತು.
ಹೇಳಿಕೇಳಿ ಶಾಸಕನ ಗನ್‌ಮ್ಯಾನ್ ಬಳಿಯಿದ್ದ ಮೊಬೈಲು ಮತ್ತು ಪರ್ಸ್ ಕಳುವಾಗಿತ್ತು. ಅಷ್ಟಾಗಿದ್ದರೆ ಈ ವಿಚಾರ ಪೊಲೀಸ್ ಠಾಣೆ ವರೆಗೆ ತಲುಪಿತ್ತಲೇ ಇರಲಿಲ್ಲವೇನೋ. ಆದರೆ ಸರ್ವಿಸ್ ರಿವಾಲ್ವರ್ ಕಳುವಾಗಿತ್ತಲ್ಲಾ? ಅದರಿಂದ ಆಗಬಹುದಾದ ಅನಾಹುತದ ಬಗ್ಗೆ ಪೊಲೀಸರೇ ತಲೆ ಕೆಡಿಸಿಒಕೊಂಡಿದ್ದರು. ಆದರೆ ಈ ವಿಚಾರದ ಬಗ್ಗೆ ನಗರ ಪೊಲೀಸ್ ಆಯುಕ್ತರಾದ ಪ್ರವೀಣ್ ಸೂದ್ ಅವರ ಕಡೆಯಿಂದ ತನಿಖೆಗೆ ಸ್ಪಷ್ಟ ಆದೇಶ ಬಂದಾಗಲೂ ಯಶವಂತಪುರ ಪೊಲೀಸರಿಗೆ ಏನೆಂದರೆ ಏನೂ ಸುಳಿವು ಸಿಕ್ಕಿರಲಿಲ್ಲ. ಈ ಒಟ್ಟಾರೆ ಘಟನೆ ಕಂಡಾಗ ಯಾವ ಅಧಿಕಾರಿಯ ಗಮನವಾದರೂ ಬೆಂಗಳೂರಿನ ಸುತ್ತಲೇ ಗಿರಕಿ ಹೊಡೆಯುತ್ತಿತ್ತು. ಆದರೆ ಈ ಘಟನೆಯ ಎಲ್ಲಾ ಮಾಹಿತಿ ಪಡೆದುಕೊಂಡ ಹರ್ಷ ಅವರ ಚಿತ್ತ ಏಕಾಏಕಿ ಮಂಗಳೂರು ಸೀಮೆಯತ್ತ ಹೊರಳಿಕೊಂಡಿತ್ತು. ನರಸಿಂಹಮೂರ್ತಿಯಿಂದ ಕಳುವಾದ ವಿವರ ಕೇಳುತ್ತಲೇ ಹರ್ಷ ಅವರಿಗೆ ನೆನಪಾದದ್ದು ಮಂಗಳೂರು ಸೀಮೆಯಲ್ಲಿ ಕುಖ್ಯಾತಿ ಗಳಿಸಿದ್ದ ದರೋಡೆ ಟ್ರಿಪ್ ಗ್ಯಾಂಗ್. ಈ ದೆಓಡೆ ಟ್ರಿಪ್ ಗ್ಯಾಂಗ್‌ನಲ್ಲೀಗ ಅನೇಕ ತುಕಡಿಗಳು ಸೃಷ್ಟಿಯಾಗಿವೆಯಾದರೂ ಇದನ್ನು ಸರಿಕಟ್ಟಾಗಿ ನಿಭಾಯಿಸುತ್ತಿರುವವರು ಧನುಷ್ ಮತ್ತು ವಿಜಯ್. ಈ ಇಬ್ಬರೂ ಕೂಡಾ ಮಂಗಳೂರಿನ ಸುರತ್ಕಲ್ಲಿನವರು. ಧನುಷ್ ಸುರತ್ಕಲ್ಲಿನಲ್ಲಿಯೇ ಪೇಂಟರ್ ಆಗಿ ಕೆಲಸ ಮಾಡಿದರೆ, ವಿಜಯ್ ಐಸ್‌ಕ್ರೀಂ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಬಾಲ್ಯದಿಂದಲೂ ಒಂದೇ ಊರಲ್ಲಿ ಹುಟ್ಗಟಿ ಬೆಳೆದ ಈ ಇಬ್ಬರ ಖಯಾಲಿಗಳಿಗೆ ತಮ್ಮ ವೃತ್ತಿಯಿಂದ ಬರುತ್ತಿದ್ದ ಆದಾಯ ಶೋಕಿ ಕಾರ್ಯಗಳಿಗೆ ಎತ್ತಲಿಂದಲೂ ಸಾಲುತ್ತಿರಲಿಲ್ಲ.
ಮೈಗಳ್ಳರ ಪಟಾಲಮ್ಮು
ಬಳಿಕ ಇದಕ್ಕೆ ಕಾಸು ಹೊಂದಿಸಲು ಈ ಇಬ್ಬರೂ ಆರಿಸಿಕೊಂಡಿದ್ದ ಸಣ್ಣಪುಟ್ಟ ಕಳವಿನ ಹಾದಿಯನ್ನು. ಆರಂಭದಲ್ಲಿ ಹೊಂಚು ಹಾಕಿ ಕೂತು ಪೇಟೆಯಿಂದ ಹಳ್ಳಿಗೆ ರಾತ್ರಿ ಹೊತ್ತಲ್ಲಿ ನಡೆದು ಹೋಗುವವರನ್ನು ಮುಂಡಾಯಿಸಿ ಕಾಂಸು ಕಂಡ ಇವರು ನಂತರ ಮನೆ ಕಳ್ಳತನದಲ್ಲಿಯೂ ಯಶ ಕಂಡಿದ್ದರು. ಆದರೆ ಪಕ್ಕಾ ಪ್ರಳಯಾಂತಕ ಆಸಾಮಿಗಳಾದ ಇವರು ಅನುಮಾನ ಬರುತ್ತದೆಂಬ ಕಾರಣದಿಂದ ಹಗಲು ಹೊತ್ತು ಮಾಡುತ್ತಿದ್ದ ಕೆಲಸ ಬಿಟ್ಟಿರಲಿಲ್ಲ. ಆದರೆ ಯಾವಾಗ ರಾತ್ರಿ ಕಸುಬಿನಲ್ಲಿ ಕೈ ತುಂಬಾ ಕಾಸು ಬಂತೋ ಆಗ ಆ ಕಾಸಲ್ಲಿಯೇ ಮತ್ತಷ್ಟು ಶೋಕಿ ಶುರುವಿಟ್ಟುಕೊಂಡ ಈ ಇಬ್ಬರೂ ಕಾಲೇಜುಗಳ ಎದುರು ಪೆರೇಡು ನಡೆಸುತ್ತಾ ಹುಡುಗೀರಿಗೆ ಕಲಾಳು ಹಾಕಲಾರಂಭಿಸಿದ್ದರು. ಹೀಗೆ ಮಾಡಲು ಹೋಗಿ ಪೊಲೀಸರಿಂದ ತದುಕಿಸಿಕೊಂಡ ಸಂದರ್ಭವೊಂದರಲ್ಲಿಯೇ ಒಂದು ಸಲ ಈ ಪೇಂಟರ್ ವಿಜಯ ಕಳ್ಳತನದ ಬಗ್ಗೆ ಬಾಯಿ ಬಿಟ್ಟಿದ್ದ. ಅದು ಹೇಗೋ ಈ ಇಬ್ಬರೂ ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಬಂದಿದ್ದರು.
ಇದಾದ ನಂತರ ಒಂದೇ ಊರಲ್ಲಿದ್ದರೆ ಅಪಾಯ ಖಾಯಂ ಎಂದರಿತ ಇವರು ಬೈಕೇರಿ ಊರುರು ಅಲೆದು ದರೋಡೆ ಕಳ್ಳತನ ಮಾಡುವ ರಾಬರಿ ಟ್ರಿಪ್ ಕಾನ್ಸೆಪ್ಟಿಗೆ ಜೀವ ನೀಡಿದ್ದರು. ಈಗ್ಗೆ ಮೂರು ವರ್ಷದ ಹಿಂದೆ ಈ ಕೆಲಸ ಶುರು ಮಾಡಿದ ಈಓ ಗ್ಯಾಂಗಿನ ಮೇಲೆ ಸುರತ್ಕಲ್ ಕಂಕನಾಡಿ ಪಂಜಿಮೊಗೇರು ಮುಂತಾದ ಏರಿಯಾಗಳಲ್ಲಿ ಒಂದಷ್ಟು ಕೇಸುಗಳು ದಾಖಲಾಗಿವೆ. ಇಂಥಾ ಗ್ಯಾಂಗು ಈಚೆಗೆ ಆರಿಸಿಕೊಂಡಿದ್ದದ್ದು ಬೆಂಗಳೂರನ್ನು. ಹೀಗೆ ಬಂದು ಇಲ್ಲಿಯೂ ನಾನಾ ಕಚಡಾ ಕೆಲಸ ಮಾಡಿದ್ದ ಈ ಇಬ್ಬರೂ ನೆಸಿಂಹಮೂತಿಉಯಿಂದ ಪರ್ಸ್ ಮೊಬೈಲು ಕದ್ದು ಅದನ್ನು ಯಶವಂತಪುರದ ಸೆಕೆಂಡ್ ಹ್ಯಾಂಡ್ ಮೊಬೈಲ್ ಅಂಗಡಿಗೆ ಮಾರಿದ್ದರು. ಈ ಮೊಬೈಲ್ ಬಳಕೆ ಮೇಲೆ ನಿಗಾ ಇಟ್ಟಿದ್ದ ಪೊಲೀಸರು ಕೂಡಲೇ ಅದನ್ನು ಚೇಸ್ ,ಮಾಡಿದ್ದರು. ಯಶವಂತಪುರದ ವೈಷ್ಣವಿ ಬಾರ್ ಸಮೀಪ ರೂಮು ಮಾಡಿದ್ದ ಈ ದರೋಡೆಕೋರರಿಗೆ ದೇವನಳ್ಳಿ ಏರಿಯಾದಿಂದ ಅಲ್ಲಿಗೆ ಹೋಹಗಲು ದಾರಿ ಗೊತ್ತಾಗದ್ದರಿಂದ ಕದ್ದ ಮೊಬೈಲಿನಲ್ಲಿ ರೂಟ್ ಮ್ಯಾಪು ಹಾಕಿ ನೋಡಿದ್ದರು. ಈ ಮ್ಯಾಪ್ ಲಾಡ್ಜ್ ಬಳಿ ಕೊನೆಯಾಗಿದ್ದನ್ನು Sಳೀಸರು ಪತ್ತೆಹಚ್ಚಿದ್ದರು. ಇದೇ ಹೊತ್ತಲ್ಲಿ ಡಿಸಿಪಿ ಹರ್ಷ ಧನುಷ್ ಮತ್ತು ವಿಜಯನ ಮೊಬೂಲ್ ನಂಬರನ್ನೂ ಸಂಗ್ರಹಿಹಿಸಿದ್ದರಿಂದ ಬಂದನ ಮತ್ತಷ್ಟು ಸಲೀಸಾಗಿತ್ತು. ಇದರ ಆದಾರದಲ್ಲಿಯೇ ಮಂಗಳೂರಿನಲ್ಲೇ ಆರೋಪಿಗಳನ್ನು ಬಂಧಿಸಲಾಗಿದೆ.
ಇದು ಕೂಲಿ ಗ್ಯಾಂಗ್!
ಬೆಂಗಳೂರಲ್ಲಿ ನಡೆಯುವ ಕಟ್ಟಡ ಕಾಮಗಾರಿಗಳಿಗೆ ಬಿಹಾರ ಮುಂತಾದ ರಾಜ್ಯಗಳಿಂದ ಕೂಲಿ ಕಾರ್ಮಿಕರನ್ನು ಕರೆ ತರುವ ಕವಿಚಾರ ಹಳೆಯದ್ದು. ಆದರೆ ದರೋಡೆ ಮತ್ತು ಕಳ್ಳತನಕ್ಕೂ ಕೂಲಿಗಳನ್ನು ಕರೆಸುತ್ತಾರೆಂದರೆ ನಂಬುವುದು ತುಸು ಕಷ್ಟವಾದೀತು. ಆದರೆ ಜೆಪಿ ನಗರದ ಪ್ರಖ್ಯಾತ ಚಿನ್ನಾಭರಣ ಅಂಗಡಿಯಾದ ಪ್ರಿಯದರ್ಶಿನಿ ಜ್ಯುವೆಲ್ಲರಿ ಶಾಪ್‌ನ ದರೋಡೆ ಯತ್ನದ ಮೂಲಕ ಈ ವಿಚಾರ ಸಾಬೀತಾಗಿದೆ. ಪಕ್ಕದ ದೇಶ ಬಾಂಗ್ಲಾದಿಂದ ದಿನನಿತ್ಯ ಭಾರತಕ್ಕೆ ಅನೇಕರು ನುಸುಳಿ ಬರುತ್ತಾರಲ್ಲಾ? ಅಂಥವರನ್ನೆಲ್ಲ ಗಡಿಯಲ್ಲಿಯೇ ಹಿಡಿದು ಸಮಾಜವಿರೋಧಿ ಕೆಲಸಕ್ಕೆ ಬಳಸಿಕೊಳ್ಳುವ ಭಯಾನಕ ಜಾಲವೂ ಈ ಪ್ರಕರಣದ ಮೂಲಕವೇ ಬಹಿರಂಗಗೊಂಡಿದೆ. ಸದ್ಯ ಸುರಂಗ ಕೊರೆದು ಚಿನ್ನಾಭರಣ ಅಂಗಡಿ ದೋಚುವ ಪ್ರಯತ್ನವನ್ನು ಜೆ.ಪಿ.ನಗರ ಪೊಲೀಸರು ತಡೆದಿದ್ದಾರೆ. ಈ ಸಂದರ್ಭದಲ್ಲಿ ಸುರಂಗದ ಮೂಲಕ ಕನ್ನ ಕೊರೆಯುವ ಬಾಂಗ್ಲಾ ಮೂಲದ ಮೂವರು ಸ್ಪಷಲಿಸ್ಟ್‌ಗಳನ್ನು ಕೆಡವಿಕೊಂಡಿದ್ದಾರೆ. ಆದರೆ ಈ ಮೂವರ ಮೂಲಕ ಜಾಹೀರಾದ ಕೆಲ ವಿಚಾರಗಳನ್ನು ತಿಳಿದು ಪೊಲೀಸರೇ ಹೌಹಾರಿದ್ದಾರೆ!
ಜೆ.ಪಿ.ನಗರ ಮೊದಲ ಹಂತದ ಹದಿನಾಲ್ಕನೇ ತಿರುವಿನಲ್ಲಿರುವ ಸಾರಕ್ಕಿಯ ಪ್ರಿಯದರ್ಶಿನಿ ಜ್ಯುವೆಲ್ಲರಿ ಶಾಪ್ ಸಾರ್ವಜನಿಕರು ಮತ್ತು ಪೊಲೀಸರ ಸಮಯಪ್ರಜ್ಞೆಯಿಂದ ಬಚಾವಾಗಿದೆ; ಕಬೀರ್, ಹುಸೇನ್ ಮತ್ತು ಸಲೀಂ ಎಂಬ ಖತಾರ್ನಾಕ್ ಕಳ್ಳರ ಬಂಧನದ ಮೂಲಕ. ಇವರನ್ನು ಸುರಂಗ ಕೊರೆಯಲು ಬಿಟ್ಟು ಹೊರಗೆ ಕಾವಲಿಗೆ ನಿಂತಿದ್ದ ಇಸ್ಮಾಯಿಲ್ ಎಂಬಾತ ಸದ್ಯ ಪರಾರಿಯಾಗಿದ್ದಾನೆ. ಪ್ರಿಯದರ್ಶಿನಿ ಜ್ಯುವೆಲ್ಲರಿ ಶಾಪ್‌ನಿಂದ ಸರಿ ಸುಮಾರು ಮುನ್ನೂರು ಅಡಿ ದೂರದಲ್ಲಿ ಚರಂಡಿಯ ಮುಚ್ಚಳ ತೆರೆದುಕೊಂಡಿತ್ತು. ಇದರೊಳಗಿನಿಂದ ನುಸುಳಿ ಬಂದ ಆರೋಪಿಗಳು ಅಂಗಡಿಯ ಬಾಗಿಲಿನವರೆಗೂ ಸುರಂಗ ಕೊರೆದಿದ್ದರು. ಸತತ ಮೂರು ದಿನಗಳಿಂದ ಸುರಂಗ ಕೊರೆದಿದ್ದರೂ ಈ ಬಗ್ಗೆ ಯಾರೊಬ್ಬರಿಗೂ ಅನುಮಾನ ಬಂದಿಲ್ಲವೆಂದರೆ ಇವರ ಕಸುಬುದಾರಿಕೆ ಎಂಥಾದ್ದೆಂಬುದು ಅರ್ಥವಾಗುತ್ತದೆ. ಅತ್ಯಂತ ಕಿರಿದಾದ ಚರಂಡಿಯಲ್ಲಿ ಇಳಿದು ಅಲ್ಲಿಂದ ದೊಡ್ಡ ಚರಂಡಿ ಪ್ರವೇಶಿಸುವ ಮೂಲಕ ಅಂಗಡಿಯ ಸಮೀಪಕ್ಕೆ ಬಂದಿದ್ದದೀ ಐನಾತಿಗಳು ಇನ್ನೂ ಹತ್ತು ಅಡಿ ಸುರಂಗ ಪೂರ್ಣಗೊಂಡಿದ್ದರೆ ಆವತ್ತೇ ರಾತ್ರಿ ಅಂಗಡಿಯೊಳಗೆ ನುಸುಳಿ ಚಿನ್ನಾಭರಣ ದೋಚುತ್ತಿದ್ದರು. ಆದರೆ ಆ ಪರ್ವ ಕಾಲಕ್ಕೆ ಇನ್ನೊಂದೇ ಒಂದು ಘಂಟೆ ಬಾಕಿಯಿರುವಾಗ ಇವರ ನಸೀಬು ತೀರಾ ಖರಾಬುಗೊಂಡಿತ್ತು!
ಈ ಚಿನ್ನದಂಗಡಿಯ ಪಕ್ಕದ ರಸ್ತೆಯಲ್ಲಿ ಆವತ್ತು ನಡು ಮದ್ಯಾಹ್ನ ಅಜ್ಜಿಯೊಬ್ಬರು ಮೃತಪಟ್ಟಿದ್ದರು. ಮೃತದೇಹವನ್ನು ನೋಡಲು ಬಂದಿದ್ದ ಸಂಬಂಧಿಗಳಿಬ್ಬರು ಅಂಗಡಿ ಕಟ್ಟೆ ಮೇಲೆ ಕುಳಿತು ಸಿಗರೆಟ್ ಸೇದುತ್ತಿದ್ದರು. ಸಾಮಾನ್ಯವಾಗಿ ಈ ಅಂಗಡಿಯೆದುರು ಸದಾ ಜನ ಜಾತ್ರೆಯಿರುತ್ತದೆ. ಸಾಮಾನ್ಯವಾದ ಯಾವ ಶಬ್ದವೂ ಕೇಳಿಸುವುದಿಲ್ಲ. ಅದನ್ನೇ ಈ ಕಳ್ಳರು ಉಪಯೋಗಿಸಿಕೊಂಡಿದ್ದರು. ಆದರೆ ಕತ್ತಲಾವರಿಸುತ್ತಲೇ ಸಾವಿನ ಮನೆಗೆ ಬಂದವರಿ ಸಿಗರೇಟ್ ಸೇದುತ್ತಾ ಕುಳಿತಿದ್ದ ಜಾಗದ ಕೆಳಗೆ ಸುರಂಗ ಕೊರೆಯುವ ಶಬ್ದ ಕೇಳಿಸಿತ್ತು. ಅನುಮಾನಗೊಂಡು ಚರಂಡಿ ಚಪ್ಪಡಿಯ ಸಂದಿಯಲ್ಲಿ ಇಣುಕಿದಾಗ ಕಾಣಿಸಿದ್ದು ಬ್ಯಾಟರಿ ಬೆಳಕು. ತಕ್ಷಣವೇ ಅವರು ಗಸ್ತು ಪೊಲೀಸರಿಗೆ ವಿಷಯ ತಿಳಿಸಿದರು. ಗಸ್ತು ಪೊಲೀಸರು ಹಿರಿಯ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿ ಹೆಚ್ಚಿನ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿಕೊಂಡು ಆ ಜಾಗವನ್ನು ಸುತ್ತವರಿದರು. ನಂತರ ಚರಂಡಿಗೆ ಹೊದಿಸಲಾಗಿದ್ದ ಚಪ್ಪಡಿ ಕಲ್ಲುಗಳನ್ನು ಒಂದೊಂದಾಗಿ ಕಿತ್ತು ತೆಗೆದ ಪೊಲೀಸರು ಸುರಂಗದೊಳಗಿದ್ದ ಮೂವರನ್ನೂ ಮೇಲಕ್ಕೆತ್ತಿ ಬಂಧಿಸಿದ್ದಾರೆ!
ಕತ್ತಲಲ್ಲಿ ಕಾರ್ಯಾಚರಣೆ
ಈ ಖದೀಮರ ಕಾರ್ಯಾಚರಣೆ ಕತ್ತಲಾವರಿಸುತ್ತಿದ್ದಂತೆಯೇ ತೀವ್ರಗೊಳ್ಳುತ್ತಿತ್ತು. ಹಗಲಲ್ಲಿ ಬಾಜಿನಲ್ಲೆಲ್ಲೋ ಮಲಗುತ್ತಿದ್ದ ಇವರುಗಳು ರಾತ್ರಿ ಒಬ್ಬೊಬ್ಬರಾಗಿ ಚರಂಡಿಯ ಒಳಗಿಳಿಯುತ್ತಿದ್ದರು. ಇದರಲ್ಲಿ ಕಾವಲುಗಾರನಂತೆ ಕೆಲಸ ಮಾಡುತ್ತಿದ್ದ ಇಸ್ಮಾಯಿಲ್ ಮಾತ್ರ ಮೆಜೆಸ್ಟಿಕ್‌ನಲ್ಲಿ ರೂಂ ಮಾಡಿಕೊಂಡಿದ್ದ. ಆತ ಇಂಥಾ ತಂಡಗಳನ್ನು ನಿಭಾಯಿಸುವ ಲೀಡರ್. ಆತನೇ ಈ ಕನ್ನ ಸ್ಪೆಷಲಿಸ್ಟ್‌ಗಳಿಗೆ ಊಟ ತಿಂಡಿ ಖರ್ಚಿಗೆ ಹಣ ಕೊಡುತ್ತಿದ್ದ. ಆತ ಇವರಿಗೆ ಸಿಗುತ್ತಿದ್ದದ್ದು ರಾತ್ರಿ ಮಾತ್ರ. ಮೂಲತಃ ಕೂಲಿ ಕೆಸಕ್ಕೆಂದು ದೂರದ ಬಾಂಗ್ಲಾ ದೇಶದಿಂದ ಭಾರತದ ಗಡಿ ದಾಟಿ ಬಂದ ಈ ಅಮಾಯಕರನ್ನು ಈ ಚಕ್ರ ಸುಳಿಗೆ ಸಿಲುಕಿಸಿದ್ದು ಈ ಇಸ್ಮಾಯಿಲನೆ. ಈ ಕೆಲಸ ಮುಗಿಸಿದರೆ ಲಕ್ಷಾಂತರ ರೂ. ಕೊಡುವುದಾಗಿ ಆತ ಈ ಕೂಲಿಗಳಿಗೆ ಆಸೆ ಹುಟ್ಟಿಸಿದ್ದ. ಇನ್ನೇನು ಚಿನ್ನದಂಗಡಿ ಸಮೀಪ ಹೋಗುವಾಗಲೇ ತಗುಲಿಕೊಂಡ ಈ ಮೂವರು ಕೂಲಿಗಳು ಪೊಲೀಸರೆದುರಿ ಬಾಯ್ಬಿಟ್ಟ ಸತ್ಯಗಳು ಥರಾವರಿ ಮಜಲುಗಳನ್ನು ಬಿಚ್ಚಿಟ್ಟಿದೆ.
ಈವತ್ತು ಚಿನ್ನದಂಗಡಿಗೆ ಕನ್ನ ಕೊರೆಯಲು ಸುರಂಗ ಮಾರ್ಗದ ಮೊರೆ ಹೋದ ಈ ಕೂಲಿಗಳು ಪಕ್ಕಾ ಐನಾತಿಗಳಂತೆಯೂ, ಪ್ರಳಯಾಂತಕರಂತೆಯೂ ಕಾಣಿಸಬಹುದು. ಆದರೆ ಇದರ ಹಿಂದೆ ಅಪ್ಪಟ ಬಡತನವಿದೆ. ಇಂಥವರನ್ನು ಬಳಸಿಕೊಂಡು ಕೋಟಿ ಕೋಟಿ ಖಮಾಯಿಸುವ ಇಸ್ಮಾಯಲ್‌ನಂಥವರ ದುಷ್ಟತನಗಳಿವೆ. ಇಸ್ಮಾಯಿಲ್‌ಗೇ ಬಾಸ್‌ಗಳಾಗಿರುವ ನ್ಯಾಷನಲ್ ಲೆವೆಲ್ ದರೋಡೆ ದೊರೆಗಳ ಅತಿಯಾಸೆಗಳಿವೆ. ಒಟ್ಟಾರೆಯಾಗಿ ಹೇಳಬೇಕೆಂದರೆ ತಗುಲಿಕೊಂಡಿರೋ ಕೂಲಿಗಳು ಅಕ್ಷರಶಃ ಬಲಿಪಶುಗಳು. ಪೊಲೀಸರ ದಾಳಿ ವೇಳೆ ಪರಾರಿಯಾಗಿರುವ ಇಸ್ಮಾಯಿಲ್ ಬಾಂಗ್ಲಾದಲ್ಲಿ ಅತ್ಯಂತ ಶ್ರೀಮಂತ ಕುಳ. ಇವನೇ ಕಬೀರ್, ಹುಸೇನ್ ಮತ್ತು ಸಲೀಂರನ್ನು ಭಾರತಕ್ಕೆ ಕರೆದುಕೊಂಡು ಬಂದಿದ್ದ. ಬಂದ ಹೊಸತರಲ್ಲಿ ಕೂಲಿ ಕೆಲಸ ಮಾಡಿ ಹೊಟ್ಟೆ ಹೊರೆದುಕೊಂಡಿದ್ದ ಈ ಅಮಾಯಕರನ್ನು ಇಸ್ಮಾಯಿಲ್, ಭಾರೀ ಹಣದಾಸೆ ತೋರಿಸಿ ಈ ಕೆಲಸಕ್ಕಿಳಿಸಿದ್ದ. ಎರಡು ಮೂರು ಬಾರಿ ಗ್ರಾಹಕನ ಸೋಗಿನಲ್ಲಿ ಆತನೇ ಅಂಗಡಿಗೆ ಬಂದು ಸುತ್ತಲ ವಾತಾವರಣ ಪರಿಶೀಲಿಸಿ ಪಕ್ಕಾ ಪ್ಲಾನ್ ರೆಡಿ ಮಾಡಿದ್ದ. ಅದನ್ನು ಈ ಕೂಲಿಗಳು ಸಾಕಾರ ಮಾಡಲು ಬೆವರು ಹರಿಸಿದ್ದರು. ಇವರಿಗಿದು ಕೂಲಿ ಕೆಲಸವಿದ್ದಂತೆಯೇ!
ಹಾಗೆ ಈ ಸುಳಿಗೆ ಸಿಕ್ಕ ಈ ಕೂಲಿಗಳು ಮಧ್ಯರಾತ್ರಿಯಿಂದ ನಸುಕಿನವರೆಗೂ ಮಲಗಿಕೊಂಡೇ ಸುರಂಗ ಕೊರೆಯುತ್ತಿದ್ದರು. ಇವರ ಹಿಂದಿರೋದು ದೊಡ್ಡ ಮಟ್ಟದಲ್ಲಿ ಕಾಸು ಕೊಟ್ಟು ದರೋಡೆ ಮಾಡಿಸುವ ಭಯಾನಕ ಗ್ಯಾಂಗ್. ಇದು ಸದ್ಯ ಸಂಚಲನವೆಬ್ಬಿಸಿರುವ ಕೂಲಿ ಗ್ಯಾಂಗ್. ಈಗ ಸೆರೆ ಸಿಕ್ಕಿರುವ ಆರೋಪಿಗಳೆಲ್ಲರೂ ಬಾಂಗ್ಲಾದ ಕುಲ್ಲಾನಾ ಜಿಲ್ಲೆಯ ಗರೀಂಭಾಗ್‌ನವರು. ಇವರನ್ನು ಬಾಂಗ್ಲಾದಿಂದ ಕಳ್ಳತನದ ಕೂಲಿಗೆ ಕರೆದುಕೊಂಡು ಬಂದವನೇ ಇಸ್ಮಾಯಿಲ್. ಆತನಿಗೆ ಬಾಂಗ್ಲಾದ ಭಗೀರಥ್ ಎಂಬ ಐಷಾರಾಮಿ ಏರಿಯಾದಲ್ಲಿ ಭಾರೀ ಆಸ್ತಿಯಿದೆ. ಇದೇ ಊರಲ್ಲಿ ಇವನೊಂದಿಗೆ ಕೂಲಿಗೆ ಬಂದು ಭಾರೀ ಕುಬೇರರಾದವರು ಬಹಳಷ್ಟು ಮಂದಿಯಿದ್ದಾರಂತೆ!
ಸಾರಕ್ಕಿಯಲ್ಲಿ ಸುರಂಗ
ಸಾರಕ್ಕಿ ಸುರಂಗ ಪ್ರಕರಣದಲ್ಲಿ ಪರಾರಿಯಾಗಿರುವ ಇಸ್ಮಾಯಿಲ್ ಬಹಳಷ್ಟು ಪ್ರಕರಣಗಳ ಹಿಂದಿರುವ ಅಸಲೀ ದೊರೆ. ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನ ತಿರುಚ್ಚಿಯಿಂದ ರೈಲಿನ ಮೂಲಕ ಪ್ರಯಾಣಿಸುವ ಇಂಥಾ ಕೂಲಿಗಳು ರೈಲಿನ ಕೊನೇಯ ಜನರಲ್ ಬೋಗಿಯಲ್ಲಿ ಹಾರೆ ಗುದ್ದಲಿ ಇಟ್ಟುಕೊಂಡು ನೆಲದ ಮೇಲೆ ಕೂತಿರುತ್ತಾರೆ. ಯಾರೂ ಸಹ ಇವರ ಮೇಲೆ ಅನುಮಾನ ಪಡಲು ಸಾಧ್ಯವೇ ಇಲ್ಲ. ಆದರೆ ಇವರ ಪ್ರಯಾಣ ಒಂದು ದರೋಡೆಗೆ ಸಿದ್ದಂತೆಯಂತಿರುತ್ತದೆ. ಇವರೆಲ್ಲರೂ ಇಸ್ಮಾಯಿಲ್‌ನಂಥವರ ಇಷಾರೆಯ ಮೇರೆಗೇ ಪ್ರಯಾಣಿಸುತ್ತಿರುತ್ತಾರೆ. ಒಂದು ವೇಳೆ ದರೋಡೆ ನಡೆದ ಬಳಿಕ ಈ ಕೂಲಿಗಳು ಸಿಕ್ಕರೂ ಆಭರಣ ಸಿಗುವುದಿಲ್ಲ. ಕಳ್ಳತನ ನಡೆದ ನಂತರ ಒಂದಷ್ಟು ಹಣವನ್ನು ಇವರ ಕೈಗೆ ಕೊಟ್ಟು ಇಸ್ಮಾಯಿಲ್‌ನಂಥವರು ಒಡವೆಗಳ ಸಮೇತ ಪರಾರಿಯಾಗುತ್ತಾರೆ. ಆ ಚಿನ್ನಾಭರಣ ಮುಂದೇನಾಗುತ್ತದೆ, ಅದನ್ನು ಎಲ್ಲಿ ಮಾರುತ್ತಾರೆಂಬ ಸುಳಿವು ಈ ಕೂಲಿಗಳಿಗಿರುವುದಿಲ್ಲ.
ತಮಿಳುನಾಡಿನ ತಿರುಚ್ಚಿಯ ಅಲುಕಾಸ್ ಗ್ರೂಪ್‌ನ ಆಭರಣ ಮಳಿಗೆಯಲ್ಲಿ ಹದಿನಾಲ್ಕು ಕೋಟಿ ಮೌಲ್ಯದ ಚಿನ್ನ ಮತ್ತು ವಜ್ರದ ಲೂಟಿ ನಡೆದಿತ್ತು. ಆಭರಣ ಅಂಗಡಿಯ ಹಿಂಬದಿ ಗೋಡೆಯಲ್ಲಿದ್ದ ಎಕ್ಸಾಸ್ಟ್ ಫ್ಯಾನನ್ನು ಕಿತ್ತು ತೆಗೆದು ಲೂಟಿ ಮಾಡಲಾಗಿತ್ತು. ಈ ಘಟನೆ ನಡೆದ ತಿಂಗಳಿನಲ್ಲಿಯೇ ಚೆನ್ನೈನ ಇಂಡಿಯನ್ ಓವರ್‌ಸೀಸ್ ಬ್ಯಾಂಕಿನ ಲೂಟಿ ಇದೇ ರೀತಿ ನಡೆದಿತ್ತು. ತಿರುಚ್ಚಿಯ ಗ್ರೇಟ್ ರಾಬರಿ ಎಂದು ಕರೆಸಿಕೊಂಡಿದ್ದ ಹದಿನಾಲ್ಕು ಕೋಟಿ ರೂ. ಲೂಟಿ ಪ್ರಕರಣದಲ್ಲೂ ಸಿಕ್ಕಿಬಿದ್ದಿರುವ ಆರೋಪಿಗಳು ಬಾಂಗ್ಲಾ ಮೂಲದವರೇ. ಅವರೂ ಕೂಡಾ ಕೂಲಿ ಗ್ಯಾಂಗ್‌ನವರೇ ಇರಬಹುದೆಂಬ ಗುಮಾನಿ ಇದೀಗ ಬಲವಾಗಿದೆ.
ಇಂಥವರೆಲ್ಲ ಕೂಲಿ ಗ್ಯಾಂಗ್‌ನವರೆಂಬುದು ಗೊತ್ತಾಗುತ್ತದೆಯೇ ಹೊರತು ಇದರ ಅಸಲೀ ಕುಳಗಳು ಇದುವರೆಗೂ ಪತ್ತೆಯಾಗಿಲ್ಲ. ಈ ಪ್ರಕರಣದಲ್ಲಿ ಇಸ್ಮಾಯಿಲ್ ಹೆಸರು ಕೇಳಿ ಬಂದಿದೆಯಾದರೂ ಆತ ಸಿಕ್ಕಿಲ್ಲ. ಇವನನ್ನು ಬಂಧಿಸಿದರೆ ಈ ದಂಧೆಯ ಹಿಂದಿರುವವರನ್ನು ಪತ್ತೆ ಹಚ್ಚೋದು ಸುಲಭ. ಇದುವರೆಗೆ ದೇಶದ ನಾನಾ ಕಡೆಗಳಲ್ಲಿ ಈ ಗ್ಯಾಂಗ್ ಕೂಲಿಗಳನ್ನು ಬಳಸಿ ಲೂಟಿ ಮಾಡಿದೆ. ಇಂಥಾ ಅನೇಕ ಪ್ರಕರಣಗಳಲ್ಲಿ ಕಾಸಿನಾಸೆಗೆ ಬಿದ್ದ ಬಡಪಾಯಿ ಕೂಲಿಗಳೇ ಬಲಿಪಶುಗಳಾಗಿದ್ದಾರೆ. ಆದರೆ ಈ ಪ್ರಕರಣವನ್ನು ಅತ್ಯಂತ ಚಾತುರ್ಯದಿಂದ ಬೇಧಿಸಿರುವವರು ಜೆಪಿ ನಗರದ ಸೂಪರ್‌ಕಾಪ್ ಇನ್ಸ್‌ಪೆಕ್ಟರ್ ಸಂಜೀವ್ ಕುಮಾರ್ ಮಹಾಜನ್. ಸೌತ್ ಡಿಸಿಪಿ ಲೋಕೇಶ್ ಕುಮಾರ್ ಅವರು ಕೂಡಾ ಈ ಪ್ರಕರಣದ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ. ಈ ಅಧಿಕಾರಿಗಳು ಈ ದಂಧೆಯ ಅಸಲೀ ಕುಳಗಳನ್ನು ಬಂಧಿಸಿದರೆ ಕರ್ನಾಟಕ ಪೊಲೀಸ್ ಇಲಾಖೆಯ ಮುಡಿಗೆ ಮತ್ತೊಂದು ಗೌರವದ ಗರಿ ಮೂಡಿದಂತಾಗುತ್ತದೆ.