ಸಿನೆಮಾ ಕ್ಷೇತ್ರದಲ್ಲಿ ಪರಸ್ಪರ ಪ್ರೀತಿಸಿ ಮದುವೆಯಾಗಿರುವ ಹಲವು ಜೋಡಿಗಳಾದ್ದಾರೆ. ಆ ಪ್ರೇಮ ಪಕ್ಷಿಗಳ ಸಾಲಿಗೆ ಹೊಸದಾಗಿ ಸೇರ್ಪಡೆಯಾಗ್ತಿರೋದು ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ . ಮೂಲತಃ ಕೊಡಗಿನವರಾದ ಇವರಿಬ್ಬರೂ ಪ್ರೀತಿಯ ವಿಚಾರವನ್ನೂ ಎಲ್ಲೂ ಬಿಟ್ಟು ಕೊಡದೇ ತಮ್ಮ ೬ ವರ್ಷದ ಪ್ರೇಮವನ್ನ ಗುಟ್ಟಾಗಿಯೇ ಇಟ್ಟು,ಸ್ನೇಹಿತರಂತೆ ಇದ್ದರು. ಇವರಿಬ್ಬರನ್ನ ಜೋಡಿಯಾಗಿ ನೋಡ್ತಿದ್ದ ಅಭಿಮಾನಿಗಳ ಮನಸಲ್ಲಿದ್ದ ಆಸೆ ಮತ್ತು ಸಣ್ಣ ಅನುಮಾನದಂತೆ ಕೊನೆಗೂ ಈ ಜೋಡಿ ಸಪ್ತಪದಿ ತುಳಿಯಲು ದಿನಾಂಕ ನಿಗಧಿಸಿಕೊಂಡಿದೆ.
ತಾಯ್ತ ಚಿತ್ರದ ಹಾಡಿನ ಬಿಡುಗಡೆ ಸಮಾರಂಭದಲ್ಲಿ ಇವರ ಮದುವೆಯ ದಿನಾಂಕವನ್ನು ಮೊದಲು ಸಾಧುಕೋಕಿಲ ಅವರು ತಮ್ಮ ಕಾಮಿಡಿ ಸ್ಟೈಲ್‌ನಲ್ಲಿ ಘೋಷಣೆ ಮಾಡಿದ್ದಾರೆ. ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ಇತ್ತೀಚಿನ ಕೆಲ ದಿನಗಳ ಹಿಂದಷ್ಟೇ ಮದುವೆ ಆಗುವುದಾಗಿ ಹೇಳಿಕೊಂಡಿತ್ತು. ಆದರೆ, ದಿನಾಂಕ ಮತ್ತು ಸ್ಥಳದ ಬಗ್ಗೆ ಮಾಹಿತಿ ಲಭ್ಯವಾಗಿರಲಿಲ್ಲ. ಇದೀಗ ಆ ಎಲ್ಲದರ ಮಾಹಿತಿಯನ್ನು ಈ ಜೋಡಿ ಹಂಚಿಕೊಂಡಿದೆ.
ಆಗಸ್ಟ್ 23 ಮತ್ತು 24ರಂದು ಕೊಡಗಿನ ವಿರಾಜಪೇಟೆಯ ಅಮ್ಮತ್ತಿ ಕೊಡವ ಸಮಾಜ ದಲ್ಲಿ , ಕೊಡವ ಸಂಪ್ರದಾಯದಂತೆ ನಡೆಯಲಿದೆ. ಲಗ್ನಪತ್ರಿಕೆಯನ್ನು ಕೊಡವ ಭಾಷೆಯಲ್ಲಿ ಮುದ್ರಿಸಲಾಗಿದ್ದು, ಮದುವೆ ಕೆಲಸ,ಶಾಪಿಂಗ್ ನಲ್ಲಿ ಈ ಜೋಡಿ ಬ್ಯುಸಿಯಾಗಿದೆ. ಸಿನಿಮಾ ಕೆಲಸಗಳ ಜತೆಗೆ ಸಾಮಾಜಿಕ ಕಾರ್ಯಗಳಲ್ಲಿಯೂ ಈ ಜೋಡಿ ಸ್ನೇಹಿತರಂತೆ ಒಟ್ಟಾಗಿ, ತಮ್ಮದೇ ಫೌಂಡೇಶನ್ ನಿರ್ಮಿಸಿಕೊಂಡು ಕೊಡಗು ಪ್ರವಾಹ, ಕರೊನಾ ಸಂಕಷ್ಟದ ಸ್ಥಿತಿಯಲ್ಲಿ, ಉತ್ತರ ಕರ್ನಾಟಕ ಭಾಗದ ಕಡೆಗೂ ಪ್ರಯಾಣ ಬೆಳೆಸಿ ತಮ್ಮ ಕೈಲಾದ ಸಹಾಯ ಮಾಡಿದ್ರು.
ಕುಚ್ಚಿಕು ಕುಚ್ಚಿಕು, ರಾಂಧವ ಹಾಗು ಇನ್ನೂ ಬೇರೆ ಸಿನೆಮಾಗಳಲ್ಲಿ ನಟಿಸಿರೋ ಭುವನ್ ಪೊನ್ನಣ್ಣ ಮಾಡೆಲ್ ಸಹ ಹೌದು.ಇನ್ನು ಹರ್ಷಿಕಾ ಪೂಣಚ್ಚ ಕನ್ನಡದ ಮಾತ್ರವಲ್ಲದೆ, ತೆಲುಗು, ತಮಿಳು ಹಾಗೂ ಭೋಜಪುರಿಯಲ್ಲಿ ನಟಿಸಿ ಸೈ ಎನಿಸಿಕೊಂಡು ಕೈಯಲ್ಲೊಂದಿಷ್ಟು ಸಿನೆಮಾಗಳಿವೆ. ಒಟ್ನಲ್ಲಿ ತಮ್ಮ ಆರು ವರ್ಷದ ಪ್ರೀತಿಗೆ ದಾಂಪತ್ಯ ದ ಹೆಸರಿಡಲು ಸಪ್ತಪದಿ ತುಳಿಯಲಿರುವ ಈ ಜೋಡಿಯ ವಿವಾಹ ಸಮಾರಂಭಕ್ಕೆ ಕುಟುಂಬಸ್ಥರು, ಚಿತ್ರರಂಗದ ಗಣ್ಯರು,ಬಂಧು ಮಿತ್ರರಿಗೆ ಆಹ್ವಾನವಿದ್ದು ವಿವಾಹ ಕೂಟದಲ್ಲಿ ಭಾಗವಹಿಸಿ ಹಾರೈಸಲಿದ್ದಾರೆ.