ಕಿರುತೆರೆಯಲ್ಲಿ ‘ಅಗ್ನಿಸಾಕ್ಷಿ’ ಮತ್ತು ‘ಸೀತಾರಾಮ’ ಧಾರಾವಾಹಿಗಳ ಮೂಲಕ ಗಮನ ಸೆಳೆದಿರುವ ನಟಿ ವೈಷ್ಣವಿ ಗೌಡ, ಈಗ ಮತ್ತೊಂದು ಹೊಸ ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ಬರಲು ತಯಾರಾಗಿದ್ದಾರೆ. ವೈಷ್ಣವಿ ಅಭಿನಯದ ಹೊಸ ಸಿನಿಮಾಕ್ಕೆ ‘ಬಿಳಿ ಚುಕ್ಕಿ ಹಳ್ಳಿ ಹಕ್ಕಿ’ ಎಂದು ಹೆಸರಿಡಲಾಗಿದ್ದು, ಇದೇ ವರಮಹಾಲಕ್ಷ್ಮೀ ಹಬ್ಬದಂದು ಈ ಸಿನಿಮಾದ ಮುಹೂರ್ತ ಕೂಡ ನೆರವೇರಿದೆ.
ಈ ಹಿಂದೆ ‘ಮಹಿರ’ ಎಂಬ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪರಿಚಯವಾಗಿದ್ದ ಮಹೇಶ್ ಗೌಡ ‘ಬಿಳಿ ಚುಕ್ಕಿ ಹಳ್ಳಿ ಹಕ್ಕಿ’ ಸಿನಿಮಾವನ್ನು ನಿರ್ದೇಶಿಸಿ, ಜೊತೆಗೆ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ. ‘ಬಿಳಿ ಚುಕ್ಕಿ ಹಳ್ಳಿ ಹಕ್ಕಿ’ ಸಿನಿಮಾದಲ್ಲಿ ನಿರ್ದೇಶಕ ಕಂ ನಾಯಕ ನಟ ಮಹೇಶ್ ಗೌಡ ಶಿವ ಎಂಬ ಪಾತ್ರದಲ್ಲಿ ಮತ್ತು ನಟಿ ವೈಷ್ಣವಿ ಗೌಡ ಹಳ್ಳಿ ಹುಡುಗಿಯಾಗಿ ಕವಿತಾ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶಿವನ ಸಮಸ್ಯೆ ಗೊತ್ತಿದ್ರು ಬಾಳ ಸಂಗಾತಿಯಾಗಿ ಕವಿತಾ ಬರುತ್ತಾಳೆ. ಸಮಸ್ಯೆ ಗೊತ್ತಿದ್ರು ಕವಿತಾ ತನ್ನನ್ನ ಯಾಕೆ ಮದುವೆ ಆಗಿದ್ದಾಳೆ ಎನ್ನುವ ಗೊಂದಲದಲ್ಲಿರೋ ನಾಯಕನ ಕಥೆ. ಈ ಗೊಂದಲದ ಮಧ್ಯೆಯೇ ಸಾಗುವ ಒಂದು ಮುದ್ದಾದ ಪ್ರೇಮಕಥೆ ‘ಬಿಳಿ ಚುಕ್ಕಿ ಹಳ್ಳಿ ಹಕ್ಕಿ’ ಸಿನಿಮಾ ಎಂಬುದು ಚಿತ್ರತಂಡದ ಮಾತು.
ತೊನ್ನು (ವಿಟಿಲಿಗೋ) ಸಮಸ್ಯೆಯನ್ನು ಪ್ರಧಾನವಾಗಿಟ್ಟುಕೊಂಡು ‘ಬಿಳಿ ಚುಕ್ಕಿ ಹಳ್ಳಿ ಹಕ್ಕಿ’ ಸಿನಿಮಾವನ್ನು ಸಸ್ಪೆನ್ಸ್- ಥ್ರಿಲ್ಲರ್ ಶೈಲಿಯಲ್ಲಿ ತೆರೆಗೆ ತರಲಾಗುತ್ತಿದೆ. ನಿರ್ದೇಶನ ಮಹೇಶ್ ಗೌಡ ತಮ್ಮಲ್ಲಿರುವ ವಿಟಿಲಿಗೋ ಸಮಸ್ಯೆಗೆ ಕಾಮಿಡಿ ಹಾಗೂ ರೋಮ್ಯಾಂಟಿಕ್ ಟಚ್ ಕೊಟ್ಟು ‘ಬಿಳಿ ಚುಕ್ಕಿ ಹಳ್ಳಿ ಹಕ್ಕಿ’ ಕಥೆ ರೂಪಿಸಿದ್ದಾರೆ. ‘ಹೊನ್ನುಡಿ ಪ್ರೊಡಕ್ಷನ್’ ನಡಿ ನಿರ್ಮಾಣವಾಗುತ್ತಿರುವ ಈ ಸಿನಿಮಾಕ್ಕೆ ಕಿರಣ್ ಸಿಎಚ್ಎಂ ಛಾಯಾಗ್ರಹಣ ಮತ್ತು ರಿಯೋ ಆಂಟೋನಿ ಸಂಗೀತ ಸಂಯೋಜಿಸುತ್ತಿದ್ದಾರೆ. ಸದ್ಯ ಮುಹೂರ್ತ ನೆರವೇರಿಸಿಕೊಂಡಿರುವ ಚಿತ್ರತಂಡ ಕೊಪ್ಪ, ಶೃಂಗೇರಿ ಸುತ್ತಮುತ್ತ ಚಿತ್ರೀಕರಣ ನಡೆಸಲು ಪ್ಲಾನ್ ಹಾಕಿಕೊಂಡಿದೆ.