ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಸೆಂಚುರಿಸ್ಟಾರ್ ಶಿವರಾಜ್‍ಕುಮಾರ್ ಸೇರಿದಂತೆ ಸೌತ್-ನಾರ್ತ್ ಸೂಪರ್ ಸ್ಟಾರ್ ಗಳು ಸಮಾಗಮಗೊಂಡಿರೋ `ಜೈಲರ್’ ಚಿತ್ರ ಬಿಡುಗಡೆಯಾಗಿ ಭರ್ಜರಿ ಜಯಭೇರಿ ಬಾರಿಸಿದೆ. ಕಳೆದ ಎರಡು ದಿನಗಳ ಹಿಂದೆ ವಿಶ್ವದಾದ್ಯಂತ ತೆರೆಗಪ್ಪಳಿಸಿದ `ಜೈಲರ್’ ಸಿನಿಮಾ ಬಾಕ್ಸ್ ಆಫೀಸ್‍ನಲ್ಲಿ 100 ಕೋಟಿ ಗಳಿಕೆ ಕಂಡಿದೆ. ಎರಡೇ ದಿನದಲ್ಲಿ ಸೆಂಚುರಿ ಬಾರಿಸಿ ಮುನ್ನುಗುತ್ತಿರುವ ಹೊತ್ತಲ್ಲಿ ಸೆಂಚುರಿ ಸ್ಟಾರ್ ಶಿವಣ್ಣನ ಮನೆಯಲ್ಲಿ `ಜೈಲರ್’ ಸಂಭ್ರಮಾಚರಣೆ ನಡೀತು. ಜೈಲರ್ ಚಿತ್ರವನ್ನ ಕರ್ನಾಟಕದಾದ್ಯಂತ ವಿತರಣೆ ಮಾಡಿದ್ದ ಜಯಣ್ಣ ಫಿಲಂಸ್ ಹಾಗೂ ವೆಂಕಟ್ ಮೀಡಿಯಾದ ಮಾಲೀಕರು ಕರುನಾಡ ಚಕ್ರವರ್ತಿಯ ಮನೆಗೆ ಭೇಟಿಕೊಟ್ಟು ಅಭಿನಂದಿಸಿದ್ದಾರೆ. ಮಾತ್ರವಲ್ಲ ಭಜರಂಗಿಗೆ ತಿರುಪತಿ ತಿಮ್ಮಪ್ಪನ ವಿಗ್ರಹವನ್ನ ಉಡುಗೊರೆಯಾಗಿ ನೀಡುವ ಮೂಲಕ ಸಂತಸ ಹಂಚಿಕೊಂಡಿದ್ದಾರೆ.
ಅಂದ್ಹಾಗೇ, ಜೈಲರ್ ಬಿಡುಗಡೆಯಾದ ಎಲ್ಲಾ ಕಡೆ ಬಿಗ್ ಓಪನ್ನಿಂಗ್ ಪಡೆದುಕೊಂಡಿದೆ. ಸರಿಸುಮಾರು 7000 ಸ್ಕ್ರೀನ್‍ಗಳಲ್ಲಿ ವಲ್ರ್ಡ್‍ವೈಡ್ ರಿಲೀಸ್ ಆಗಿದ್ದು, ಕರ್ನಾಟಕದಲ್ಲೇ 1000ಕ್ಕೂ ಹೆಚ್ಚು ಸ್ಕ್ರೀನ್‍ಗಳಲ್ಲಿ ತೆರೆಗಪ್ಪಳಿಸುವ ಮೂಲಕ ಹಳೆಯ ರೆಕಾರ್ಡ್‍ಗಳನ್ನೆಲ್ಲಾ ಧೂಳೀಪಟ ಮಾಡಿದೆ. ಬೆಳ್ಳಿಭೂಮಿ ಮೇಲೆ ಜೈಲರ್ ಘರ್ಜನೆ ಜೋರಾಗಿದ್ದು, ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕೋಟಿ ಕಲೆಕ್ಷನ್ ಆಗ್ತಿದೆ. ಟೈಗರ್ ಮುತ್ತುವೇಲ್ ಪಾಂಡಿಯನ್ ಅಲಿಯಾಸ್ ರಜನಿಯ ಅಬ್ಬರ-ಆರ್ಭಟ ಕಂಡು ಥಿಯೇಟರ್‍ನಲ್ಲಿ ವಿಸಿಲ್ ಹೊಡೆಯುತ್ತಿರೋ ಫ್ಯಾನ್ಸ್, ನರಸಿಂಹನಾಗಿ ಧಗಧಗಿಸಿರೋ ಮಾಸ್ ಲೀಡರ್ ಶಿವಣ್ಣನ್ನ ನೋಡಿ ಸರಪಟಾಕಿ ಹಚ್ಚುತ್ತಿದ್ದಾರೆ. ಕಣ್ಣಲ್ಲೇ ಕೆಂಡಕಾರುವ ಕರುನಾಡ ಚಕ್ರವರ್ತಿನಾ ಕಂಡು ಕಾಲಿವುಡ್ ಮಂದಿ ಕೂಡ ಬೆಕ್ಕಸ ಬೆರಗಾಗಿದ್ದಾರೆ. ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್‍ಗೆ `ಜೈಲರ್-2′ ಮಾಡಿ ಅಂತ ಕೇಳಿಕೊಳ್ತಿದ್ದಾರೆ.
ಸೋಲಿನ ಸುಳಿಯಿಂದ ನಿರ್ದೇಶಕ ನೆಲ್ಸನ್ ಹಾಗೂ ತಲೈವಾ ಇಬ್ಬರು ಹೊರಬಂದಿದ್ದಾರೆ. ಅಣ್ಣಾತೆ ನಂತರ ಎರಡು ವರ್ಷಗಳಾದ್ಮೇಲೆ ಅಖಾಡಕ್ಕಿಳಿದ ತಲೈವಾ ತನ್ನ ತಾಕತ್ತೇನು ಅನ್ನೋದನ್ನ ಪ್ರೂ ಮಾಡಿದ್ದಾರೆ. ಅಚ್ಚರಿ ಅಂದರೆ 72 ಆದ್ರೂ ತಲೈವಾ ಖದರ್ರು ಕಿಂಚಿತ್ತೂ ಕಮ್ಮಿಯಾಗಿಲ್ಲ. ಎಂದಿನಂತೆ ಶಿವಾಜಿ ತಮ್ಮ ಸ್ವ್ಯಾಗ್ ಹಾಗೂ ಬೆಂಕಿ ಡೈಲಾಗ್ ನಿಂದ ತಮ್ಮ ಅಭಿಮಾನಿ ಬಳಗವನ್ನ ಹುಚ್ಚೆಬ್ಬಿಸಿದ್ದಾರೆ. ಮಲೆಯಾಳಂ ಸೂಪರ್‍ಸ್ಟಾರ್ ಮೋಹನ್ ಲಾಲ್, ಬಾಲಿವುಡ್ ಸೂಪರ್ ಸ್ಟಾರ್ ಜಾಕಿಶ್ರಾಫ್, ವಿನಾಯಕನ್, ನಾಗೇಂದ್ರ ಬಾಬು, ಸುನೀಲ್, ವಸಂತ್ ರವಿ, ಯೋಗಿ ಬಾಬು, ರಮ್ಯಾಕೃಷ್ಣ, ತಮನ್ನಾ ಸೇರಿದಂತೆ ಹಲವು ತಾರೆಯರು `ಜೈಲರ್’ ಸಕ್ಸಸ್‍ಗೆ ಕಾರಣವಾಗಿದ್ದಾರೆ. ಸನ್ ಪಿಕ್ಚರ್ಸ್ ನಿರ್ಮಿಸಿದ ಈ ಚಿತ್ರವನ್ನ ಚಿತ್ರಪ್ರೇಮಿಗಳು ಮೆಚ್ಚಿಕೊಂಡು ತಲೆಮೇಲೆ ಹೊತ್ತು ಮೆರೆಸುತ್ತಿದ್ದಾರೆ. ಒಟ್ನಲ್ಲಿ ಜೈಲರ್ ನಾಗಾಲೋಟ ಮುಂದುವರೆದಿದ್ದು, ಬಾಬಾ ಬಾಕ್ಸ್ ಆಫೀಸ್ ಕಿಂಗ್ ಅನ್ನೋದು ಮಗದೊಮ್ಮೆ ಸಾಬೀತಾಗಿದೆ.