ನಾಗಿಣಿ ಸೀರಿಯಲ್ ಮೂಲಕ ಕಿರುಪರದೆ ಮೇಲೆ ದಿಬ್ಬಣ ಹೊರಟು ಕರುನಾಡ ಮನೆಮಾತಾದ ನಟಿ ದೀಪಿಕಾ ದಾಸ್ ಸದ್ದಿಲ್ಲದೇ ಹಸೆಮಣೆ ಏರಿ ಸರ್‌ಪ್ರೈಸ್ ಕೊಟ್ಟಿದ್ದಾರೆ. ಕರ್ನಾಟಕ ಮೂಲದ ದುಬೈ ಉದ್ಯಮಿ ಜೊತೆ ಗೋವಾದ ಕಡಲ ತೀರದಲ್ಲಿ ಸಪ್ತಪದಿ ತುಳಿದಿರೋ ದೀಪಿಕಾ, ಸೋಷಿಯಲ್ ಮೀಡಿಯಾದಲ್ಲಿ ಮೂರೇ ಮೂರು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ‘ಮಿಸ್ಟರ್ & ಮಿಸೆಸ್ ಡಿ’ ವೆಲ್‌ಕಂ ಟು ಅಡ್ವೇಂಚರ್ ವರ್ಲ್ಡ್” ಹೀಗಂತ ಕ್ಯಾಪ್ಷನ್ ಸಹ ನೀಡಿದ್ದಾರೆ. ಡಿ ಅಂದರೆ ದೀಪಿಕಾ ಎಂಬುದು ಎಲ್ಲರಿಗೂ ಗೊತ್ತು. ಆದರೆ, ಹುಡುಗನ ಹೆಸರು ಕೂಡ ‘ಡಿ’ ಅಕ್ಷರಿದಿಂದಲೇ ಶುರುವಾಗಲಿದೆಯಾ ಸದ್ಯಕ್ಕಿದು ಕುತೂಹಲದ ಪ್ರಶ್ನೆ.
ಅಂದ್ಹಾಗೇ, ದೀಪಿಕಾ ಡೆಸ್ಟಿನೇಷನ್ ವೆಡ್ಡಿಂಗ್ ಮೊರೆ ಹೋಗಿದ್ದಾರೆ. ಕುಟುಂಬಸ್ಥರು, ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ವೈವಾಹಿಕ ಬದುಕಿಗೆ ಕಾಲಿರಿಸಿದ್ದಾರೆ. ಇತ್ತೀಚೆಗೆ ಸಿನಿಮಾ ಹಾಗೂ ಸೀರಿಯಲ್‌ನಿಂದ ದೂರ ಉಳಿದಿದ್ದ ದೀಪಿಕಾ, ಬೋಲ್ಡ್ ಫೋಟೋಶೂಟ್‌ಗಳ ಮೂಲಕ ಸುದ್ದಿಯಾಗ್ತಿದ್ದರು. ಇದೀಗ, ಮದ್ವೆ ವಿಚಾರಕ್ಕೆ ಬಿಗ್ ಬ್ರೇಕಿಂಗ್ ನ್ಯೂಸ್ ಆಗಿದ್ದಾರೆ. ಸದ್ದಿಲ್ಲದೇ ಸಪ್ತಪದಿ ತುಳಿದಿರೋದ್ರಿಂದ ಇದು ನಿಜವಾದ ಮದುವೆಯೇ ಅಥವಾ ಯಾವುದಾದರೂ ಜಾಹೀರಾತಿನ ಫೋಟೊಶೂಟ್‌ಗೋಸ್ಕರ ಆಗಿರೋ ಮದುವೆಯೇ ಅಂತ ಕೆಲವರು ಕಮೆಂಟ್ ಮಾಡುತ್ತಿದ್ದಾರೆ.
ಇತ್ತೀಚೆಗೆ ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಮಹೇಶ್ ಮತ್ತು ನಮ್ರತಾ ಗೌಡ ಅವರ ಮದುವೆ ಫೋಟೊಗಳು ವೈರಲ್ ಆಗಿದ್ದವು. ಆದರೆ, ನಂತರ ಅದು ಜ್ಯುವೆಲ್ಲರಿ ಜಾಹೀರಾತಿಗಾಗಿ ನಡೆಸಿದ ಫೋಟೊಶೂಟ್ ಎಂದು ತಿಳಿದುಬಂದಿತ್ತು. ಅದೇ ರೀತಿ ನಟಿ ದೀಪಿಕಾ ದಾಸ್ ಅವರು ಕೂಡ ಜಾಹೀರಾತಿಗಾಗಿ ಮದುಮಗಳು ಆಗಿರಬಹುದು ಹೀಗೊಂದು ಅನುಮಾನದ ಪ್ರಶ್ನೆ ಕೆಲವರಲ್ಲಿ ಮೂಡಿದೆ. ವರನ ಕೈಯನ್ನು ಹಿಡಿದು ದೀಪಿಕಾ ದಾಸ್ ಅವರು ತುಂಬಾ ಖುಷಿಯಿಂದ ಹೆಜ್ಜೆ ಹಾಕಿದ್ದಾರೆ. ಬೀಚ್ ಸೈಡ್‌ನಲ್ಲಿ ಮದುವೆ ಮಂಟಪ, ಸಾಂಪ್ರದಾಯಿಕ ಶೈಲಿಯಲ್ಲಿ ರೆಡಿಯಾಗಿರುವ ದೀಪಿಕಾ ಅವರ ಲುಕ್ ಆಕರ್ಷಕವಾಗಿದೆ. ಆದರೆ, ಫೋಟೊಗಳನ್ನು ನೋಡಿ ಅಭಿಮಾನಿಗಳು ಮಾತ್ರ ಗೊಂದಲದಲ್ಲಿದ್ದಾರೆ.