ಅಪ್ಪ ಮತ್ತು ಅಪ್ಪು ಪರಂಪರೆಯನ್ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮುಂದುವರೆಸಿದ್ದಾರೆ.ತಂದೆ ಹಾಗೂ ತಮ್ಮನ ಹಾದಿಯಲ್ಲೇ ಸಾಗುತ್ತಿರುವ ದೊಡ್ಮನೆಯ ಹಿರಿಮಗ ಸಂಭಾವನೆ ಪಡೆಯದೇ ಕೆಎಂಫ್ ಉತ್ಪನ್ನಗಳನ್ನು ಪ್ರಚಾರ ಮಾಡುತ್ತಿದ್ದಾರೆ. ಇಂದು ಕರ್ನಾಟಕ ಹಾಲು ಒಕ್ಕೂಟದ ನಂದಿನಿ ಬ್ರಾಂಡ್ ನ ಹೊಸ ಉತ್ಪನ್ನಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ನಂದಿನಿ ಉತ್ಪನ್ನಗಳ ನೂತನ ಬ್ರ್ಯಾಂಡ್ ರಾಯಭಾರಿ ಶಿವರಾಜ್ಕುಮಾರ್ ಅವರು ಜಾಹೀರಾತನ್ನು ಬಿಡುಗಡೆ ಮಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿವರಾಜ್ಕುಮಾರ್ ಅವರನ್ನು ಸನ್ಮಾನಿಸಿದರು. ಸಮಾರಂಭದಲ್ಲಿ ಗೀತಾ ಶಿವರಾಜ್ಕುಮಾರ್, ಸಚಿವ ಮಧು ಬಂಗಾರಪ್ಪ, ಕೆ.ಎಂ.ಎಫ್ಅಧ್ಯಕ್ಷ ಭೀಮಾ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು.
2009ರಲ್ಲಿ ಪುನೀತ್ ರಾಜಕುಮಾರ್ ಅವರು ರಾಯಭಾರಿಯಾಗಿ (Nandini Brand Ambassador) ನೇಮಕವಾಗಿದ್ದರು. ಅವರು ನಿಧನರಾದ ಹಿನ್ನೆಲೆಯಲ್ಲಿ ಕರ್ನಾಟಕ ಹಾಲು ಮಹಾಮಂಡಳಿಯ (ಕೆಎಂಎಫ್) ನಂದಿನಿ ಹಾಲು ಹಾಗೂ ಹಾಲಿನ ಉತ್ಪನ್ನಗಳ ಹೊಸ ರಾಯಭಾರಿಯಾಗಿ ಶಿವರಾಜ್ ಕುಮಾರ್ ಅವರು ಆಯ್ಕೆಯಾಗಿದ್ದರು. ಡಾ.ರಾಜ್ ಕುಟುಂಬ ಹಾಗೂ ಕೆಎಂಎಫ್ಗೆ ಹತ್ತಿರದ ನಂಟಿದೆ. 1996ರಲ್ಲಿ ಡಾ.ರಾಜ್ ಕುಮಾರ್ ಅವರು ನಂದಿನಿ ಉತ್ಪನ್ನಗಳಿಗೆ ಉಚಿತವಾಗಿಯೇ ರಾಯಭಾರಿಯಾಗಲು ಒಪ್ಪಿಕೊಂಡಿದ್ದರು. ಅದು ಅವರ ಮೊದಲ ಜಾಹೀರಾತು ಆಗಿತ್ತು. ಅವರ ನಂತರ 2009ರಲ್ಲಿ ಪುನೀತ್ ರಾಜಕುಮಾರ್ ಆಯ್ಕೆಯಾಗಿದ್ದರು. ಈ ಹಿಂದೆ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಟ್ವೀಟ್ ಮಾಡಿ, “ನಂದಿನಿ” ಉತ್ಪನ್ನಗಳ ಪ್ರಚಾರ ರಾಯಭಾರಿಯಾಗಲು ಒಪ್ಪಿಕೊಂಡಿರುವ ಕರುನಾಡ ಚಕ್ರವರ್ತಿ, ಸ್ಯಾಂಡಲ್ವುಡ್ ನಟ, ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಅವರಿಗೆ ಕೆ.ಎಂ.ಎಫ್, ಸಮಸ್ತ ಕರ್ನಾಟಕ ರೈತರು ಹಾಗೂ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸಿ ಶುಭ ಕೊರಲಾಯಿತು ಎಂದು ತಿಳಿಸಿದ್ದರು.
‘ನಮ್ಮ ‘ನಂದಿನಿ’ ಭಾರತದಲ್ಲೇ ಅತೀ ಬೇಡಿಕೆ ಇರುವ ಉತ್ಪನ್ನ. ಆ ಬೇಡಿಕೆಯನ್ನು ಹಾಗೇ ಉಳಿಸಿಕೊಳ್ಳುವುದಕ್ಕೆ ನಮ್ಮ ಸಹಕಾರ ಖಂಡಿತ ಇರುತ್ತದೆ. ನನಗೆ ಸಮಯ ಆದಾಗೆಲ್ಲ ಎಲ್ಲೆಲ್ಲಿ ಕೆಎಂಎಎಫ್ ಶಾಖೆ ಗಳಿವೆಯೋ, ಅಲ್ಲೆಲ್ಲ ಹೋಗುತ್ತೇನೆ. ಕೆಲಸ, ಕಾರ್ಯ ವೈಖರಿ ಬಗ್ಗೆ ತಿಳಿದುಕೊಳ್ಳುತ್ತೇನೆ. ನಂದಿನಿ ಹಾಲಿನಲ್ಲಿ ಗುಣಮಟ್ಟ ಜಾಸ್ತಿ ಇದೆ. ಹಾಗಾಗಿ ದರ ಹೆಚ್ಚಾದರೂ, ಅದರಿಂದ ತೊಂದರೆ ಆಗುವುದಿಲ್ಲ ಎಂದುಕೊಂಡಿದ್ದೇನೆ’ ಎಂದು ಶಿವಣ್ಣ ಈ ಹಿಂದೆಯೇ ಹೇಳಿದ್ದರು.
ನಂದಿನಿ ಉತ್ಪನ್ನಗಳಿಗೆ ಅಂಬಾಸಿಡರ್ ಆಗಲು ಶಿವರಾಜ್ಕುಮಾರ್ ಕೂಡ ಸಂಭಾವನೆ ಪಡೆಯುತ್ತಿಲ್ಲ. ಈ ವಿಚಾರಕ್ಕೆ ಪ್ರತಿಕ್ರಿಯಿಸಿದ್ದ ಶಿವಣ್ಣ, ‘ಇದು ನಮ್ಮ ಸರ್ಕಾರದ ಕಾರ್ಯಕ್ರಮ. ನಮ್ಮ ರೈತರ ಪ್ರಾಡೆಕ್ಟ್. ನಮ್ಮ ರೈತರ ಪರ ನಾವು ಸದಾ ಬೆಂಬಲವಾಗಿ ನಿಂತುಕೊಳ್ಳಬೇಕು. ನಾವು ನಮ್ಮ ರೈತರಿಗೋಸ್ಕರ ಯಾವಾಗಲು ಜೊತೆಯಲ್ಲಿರುತ್ತೇನೆ. ಇದು ನಮ್ಮ ತ್ಯಾಗ ಅಲ್ಲ ನಮ್ಮ ಕರ್ತವ್ಯ. ಇದರಿಂದ ನಾವು ಏನನ್ನೂ ನಿರೀಕ್ಷಿಸಬಾರದು’ ಎಂದು ನೂತನ ರಾಯಭಾರಿ ಆಗಿ ನೇಮಕವಾದಾಗಲೇ ತಿಳಿಸಿದ್ದರು