ಟಾಲಿವುಡ್ ಖ್ಯಾತ ನಟ ನರೇಶ್ ಹಾಗೂ ಪವಿತ್ರ ಲೋಕೇಶ್ ಜೊತೆಗಿನ ಸಂಬಂಧ, ನಟ ನರೇಶ್ ಮತ್ತು ಪತ್ನಿ ರಮ್ಯಾ ರಘುಪತಿ ದಾಂಪತ್ಯ ಜೀವನ, ಅವರ ನಡುವಿನ ಭಿನ್ನಾಭಿಪ್ರಾಯ,ಕಲಹಗಳು ಮಾಧ್ಯಮದಲ್ಲಿ ಸಾಕಷ್ಟು ಸುದ್ದಿ ಮಾಡಿತ್ತು. ನನಗೆ ನನ್ನ ಗಂಡ ಬೇಕು ಅಂತ ಮಾಧ್ಯಮಗಳ ಮುಂದೆ ಬಂದು ಅಳಲು ತೋಡಿಕೊಂಡಿದ್ದ ರಮ್ಯಾ ರಘುಪತಿ ಕೊನೆಗೆ ಕಾನೂನಿನ ಮೊರೆ ಹೋಗಿದ್ದರು. ಆದರೆ, ನಟ ನರೇಶ್ ಕೂಡ ವಿಚ್ಚೇಧನಕ್ಕೆ ಅರ್ಜಿ ಸಲ್ಲಿಸಿದ್ದರು. ಇದೀಗ ಇವರ ಡಿವೋರ್ಸ್ ಅರ್ಜಿಯನ್ನು ಕೈಗೆತ್ತಿಕೊಂಡ ನ್ಯಾಯಾಲಯವು (Court) ‘ಕಳೆದ ಆರು ವರ್ಷಗಳಿಂದ ರಮ್ಯಾ ಮತ್ತು ನರೇಶ್ ಪರಸ್ಪರ ಪ್ರತ್ಯೇಕವಾಗಿಯೇ ವಾಸಿಸುತ್ತಿರುವ ಕಾರಣದಿಂದಾಗಿ ಮದುವೆ ಅನೂರ್ಜಿತಗೊಳಿಸಬಹುದು ಎಂದು ಅಭಿಪ್ರಾಯ ಪಟ್ಟಿದೆ. ಜೊತೆಗೆ ನರೇಶ್ ಮತ್ತು ಕುಟುಂಬದವರು ರಮ್ಯಾ ತಮ್ಮ ನಿವಾಸಕ್ಕೆ ಅಧಿಕೃತವಾಗಿ ಪ್ರವೇಶ ಮಾಡುವುದನ್ನು ನಿಷೇಧಿಸುವಂತೆ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣಕ್ಕೂ ಆದೇಶ ಹೊರಡಿಸಿದ್ದು ನರೇಶ್ ಅವರ ನಿವಾಸವನ್ನು ಪ್ರವೇಶಿಸುವುದಕ್ಕೆ ರಮ್ಯಾ ರಘುಪತಿ ಅವರಿಗೆ ಕೋರ್ಟ್ ನಿರ್ಬಂಧ ಹೇರಿದೆ.
ನಮ್ಮ ನಿಜಜೀವನದಲ್ಲಿ ನಡೆದ ಕಥೆಯನ್ನೇ ಪತಿ ನರೇಶ್ ಹಾಗೂ ಪವಿತ್ರ ಲೋಕೇಶ್ ಅವರು ಕೂಡಿ `ಮತ್ತೆ ಮದುವೆ’ ಸಿನಿಮಾ ಮಾಡಿದ್ದಾರೆ. ಆ ಚಿತ್ರ ಯಾವುದೇ ಕಾರಣಕ್ಕೂ ತೆರೆಗೆ ಬರಬಾರದು ಎಂದು ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿಯವರು ಈ ಹಿಂದೆ ಕೋರ್ಟ್ ಮೊರೆ ಹೋಗಿದ್ದರು. ಅಂದು ಅರ್ಜಿ ಕೈಗೆತ್ತಿಕೊಂಡ ನ್ಯಾಯಾಲಯ `ಮತ್ತೆ ಮದುವೆ’ ಸಿನಿಮಾ ಕಾಲ್ಪನಿಕ ಕಥೆಯಂತೆ. ಇದಕ್ಕೆ ಸೆನ್ಸಾರ್ ಮಂಡಳಿ ಕೂಡ ಒಪ್ಪಿಗೆ ಸೂಚಿಸಿ ಪತ್ರ ನೀಡಿರೋದ್ರಿಂದ ಚಿತ್ರ ಬಿಡುಗಡೆ ನಿಲ್ಲಿಸುವುದಕ್ಕಾಗಲ್ಲ ಎಂದು ತೀರ್ಪು ನೀಡಿತ್ತು. ಆದರೆ, ಅಲ್ಲಿಗೆ ಸುಮ್ಮನಾಗದ ರಮ್ಯಾ ರಘುಪತಿ ಸಿನಿಮಾ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗಬಾರದು ಅಂತ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಯಾವುದೇ ಸಕಾರಣವಿಲ್ಲದ ಕಾರಣಕ್ಕೆ ಅರ್ಜಿಯನ್ನ ವಜಾ ಮಾಡಿದೆ. ಈ ಕೇಸ್ನಲ್ಲೂ ನರೇಶ್ ಮಾಜಿ ಪತ್ನಿಗೆ ಮತ್ತೊಂದು ಸೋಲಾಗಿದೆ.
ಇನ್ನೂ, ಪವಿತ್ರಾ ಲೋಕೇಶ್ ಹಾಗೂ ನರೇಶ್ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ `ಮತ್ತೆ ಮದುವೆ’ ಸಿನೆಮಾ, ತೆಲುಗು ಮತ್ತು ಕನ್ನಡದಲ್ಲಿ ರಿಲೀಸ್ ಆಗಿ ಪ್ರೇಕ್ಷಕರ ಮನ್ನಣೆ ಪಡೆದಿದೆ. ನರೇಶ್ ಅವರ ತಾಯಿ, ಹಿರಿಯ ನಟಿ, ನಿರ್ದೇಶಕಿ ವಿಜಯಾ ನಿರ್ಮಲಾ ಅವರು 1973ರಲ್ಲಿ ‘ಸೂಪರ್ ಸ್ಟಾರ್’ ಕೃಷ್ಣ ಅವರ ಜತೆಗೂಡಿ ವಿಜಯ ಕೃಷ್ಣ ಮೂವೀಸ್ ಆರಂಭಿಸಿದ್ದರು. ಆ ಬ್ಯಾನರ್ಗೆ ಭರ್ತಿ 50 ವರ್ಷ ತುಂಬಿದೆ. ಆ ಹಿನ್ನೆಲೆಯಲ್ಲಿ ಆ ಬ್ಯಾನರ್ ಮೂಲಕ ಮತ್ತೆ ಮದುವೆ ಸಿನಿಮಾವನ್ನು ನರೇಶ್ ನಿರ್ಮಾಣ ಮಾಡಿದ್ದರು. ತೆಲುಗಿನಲ್ಲಿ ಮಳ್ಳಿ ಪೆಳ್ಳಿ ಟೈಟಲ್ ಮೂಲಕ ಈ ಸಿನೆಮಾ ಮೇ 26ರಂದು ಥಿಯೇಟರ್ ನಲ್ಲಿ ಬಿಡುಗಡೆಯಾಗಿತ್ತು.ಕನ್ನಡದಲ್ಲಿ ಮತ್ತೆ ಮದುವೆ ಹೆಸರಿನಲ್ಲಿ ಜೂನ್ 9ರಂದು ತೆರೆಕಂಡಿತ್ತು. ಸಧ್ಯ ಪ್ರತಿಷ್ಠಿತ ಒಟಿಟಿ (OTT) ಅಮೇಜಾನ್ ಪ್ರೈಮ್ ನಲ್ಲಿ ಜೂನ್ 23 ರಿಂದ ಸ್ಕ್ರೀಮಿಂಗ್ ಆಗುತ್ತಿದೆ. ಚಿತ್ರಕ್ಕೆ ಎಂ. ಎಸ್. ರಾಜು, ಕಥೆ ಬರೆದು ಆಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ಅತೀ ದೊಡ್ಡ ತಾರಾಬಳಗ ಇದೆ. ಜಯಸುಧ ಮತ್ತು ಶರತ್ ಬಾಬು, ವನಿತಾ ವಿಜಯಕುಮಾರ್, ಅನನ್ಯ ನಾಗೆಲ್ಲ, ರೋಶನ್, ರವಿವರ್ಮ, ಅನ್ನಪೂರ್ಣ, ಭದ್ರಂ, ಯುಕ್ತ, ಪ್ರವೀಣ್ ಯಂಡಮುರಿ, ಮಧು ಹಾಗೂ ಇನ್ನಿತರರು ಬಣ್ಣ ಹಚ್ಚಿದ್ದಾರೆ.