ಔಷಧ ಸೇವನೆ ಜಾಲಿಯ ಸಂಗತಿಯಲ್ಲ. ಆದರೆ ಜಾಲಿಯನ್ನೇ ಔಷಧಿಯನ್ನಾಗಿ ಮಾಡಿದರೆ ಏನಾಗಬಹುದು? ಚುಚ್ಚುವುದು ಕಮ್ಮಿಯಾಗಬಹುದು. ಅಸಲಿಗೆ ಈಗ ಏನಾಯಿತೆಂದರೇ…. ಜಾಲಿ ಮುಳ್ಳು ಔಷಧಿಯಾಗಿ ಬಳಕೆ ಮಾಡಬಹುದು. ಈ ಸಂಗತಿಯನ್ನು ನಮ್ಮ ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯದ ಸಸ್ಯರೋಗ ವಿಜ್ಞಾನಿಗಳು ಸಾಬೀತುಮಾಡಿದ್ದಾರೆ. ಉರುವಲು, ಎಳೆ ಮಕ್ಕಳ ಕಿವಿಗೆ ಚುಚ್ಚಲು, ಬಳಕೆಯಾಗುತ್ತಿದ್ದ ಬಳ್ಳಾರಿ ಜಾಲಿ ಇನ್ನು ಮುಂದೆ ದಾಳಿಂಬೆಯ ದುಂಡಾಣು ರೋಗದ ನಿಯಂತ್ರಕ ಮದ್ದಾಗಿ ಬಳಕೆಯಾಗಲಿದೆ.
ಬಳ್ಳಾರಿ ಜಾಲಿ ಸೊಪ್ಪನ್ನು ಚೆನ್ನಾಗಿ ರುಬ್ಬಿ ಅದರ ರಸವನ್ನೇ ಕಷಾಯವಾಗಿ ಬಳಕೆ ಮಾಡಲಾಗುತ್ತದೆ. ೫೦ ಗ್ರಾಂ ಸೊಪ್ಪಿನಿಂದ ತಯಾರಿಸಿದ ರಸವನ್ನು ಒಂದು ಲೀಟರ್ ನೀರಿಗೆ ಬೆರೆಸಿ ಅದನ್ನು ಗಿಡಗಳಿಗೆ ಸಿಂಪಡಿಸಬೇಕಿದೆ. ಇದರಿಂದ ಶೇ ೭೦ರಷ್ಟು ದುಂಡಾಣು ರೋಗ ನಿಯಂತ್ರಣ ಸಾಧ್ಯ ಎನ್ನುತ್ತಾರೆ ತಜ್ಞರು. ದುಂಡಾಣು ರೋಗಕ್ಕೆ ಸ್ಟ್ರೆಪ್ಟೊಸೈಕ್ಲಿನ್ ಎಂಬ ರಾಸಾಯನಿಕ ದ್ರಾವಣವನ್ನು ಬೆಳೆಗಾರರು ಸಿಂಪಡಿಸುತ್ತಾರೆ. ಸ್ಟ್ರೆಪ್ಟೊಸೈಕ್ಲಿನ್ ಒಂದು ಆಂಟಿ ಬಯೊಟಿಕ್ ಆಗಿದ್ದು ದಾಳಿಂಬೆ, ಟಮೋಟೊ, ಸಾಸಿವೆ, ಗಸಗಸೆಗಿಡಗಳಿಗೆ ತಗಲುವ ದುಂಡಾಣು ರೋಗಗಳ ನಿಯಂತ್ರಣಕ್ಕೆ ಬಳಕೆಯಾಗುತ್ತಿತ್ತು. ಇದರ ಅತಿ ಬಳಕೆಯಿಂದ ಹಣ್ಣುಗಳ ರುಚಿ, ಸ್ವಾದ ಎಲ್ಲವು ಮಾಯವಾಗುತ್ತಿತ್ತು. ಈಗ ಸ್ಟ್ರೆಪ್ಟೊಸೈಕ್ಲಿನ್ ಬದಲಿಗೆ ಹಿತ್ತಲ ಗಿಡದ ಈ ಮದ್ದನ್ನು ಮುದ್ದಾಗಿ ಬಳಸಲು ಅಡ್ಡಿಯಿಲ್ಲ. ಚುಚ್ಚುವ ಗಿಡದಿಂದ ಕೈ ಕಚ್ಚುವ ಬೆಳೆಯನ್ನು ಉಳಿಸಿಕೊಳ್ಳಬಹುದು. ಚುಚ್ಚಿಸಿಕೊಂಡವರ ಪಾಲಿಗೆ ಜಾಲಿ ತಂದೀತು ಗೋಳು. ದಾಳಿಂಬೆ ಬೆಳೆಗಾರರ ಪಾಲಿಗೆ ನಿಜಕ್ಕೂ ಮುಳ್ಳಿನ ಗಿಡ ‘ಜಾಲಿ’ಯಾಗಿದೆ.
ಬುಲೆಟ್ ಮಂದಿರ್
ಇಲ್ಲಿ ಬೈಕೇ ದೇವರು. ಅದೇ ಮೂಲ ದೇವರು. ಇದೇ ಉತ್ಸವ ಮೂರ್ತಿ ಎಂದು ಭಾವಿಸಬೇಡಿ. ಇಲ್ಲಿ ಉತ್ಸವ ಇಲ್ಲ. ಅದೆಲ್ಲಕ್ಕಿಂತಲೂ ಅಚ್ಚರಿ ಎಂದರೆ ಮದ್ಯವೇ ತೀರ್ಥ. ಇಲ್ಲಿ ಪೂಜಾರಿಯೂ ಇದ್ದಾನೆ. ಬೈಕಿಗೆ ಆರತಿ, ಪೂಜೆ ಮಾಡುತ್ತಾನೆ. ಗಂಧದ ಕಡ್ಡಿ ಹಚ್ಚುತ್ತಾನೆ. ಅದೇನೋ ಮಂತ್ರವನ್ನೂ ಹೇಳುತ್ತಾನೆ. ಬುಲೆಟ್‌ಗೆ ಅಡ್ಡಬೀಳಲು ಸಾಕಷ್ಟು ಸಂಖ್ಯೆಯ ಭಕ್ತರೂ ಬರುತ್ತಾರೆ. ಕುಚೋದ್ಯವಲ್ಲ – ವಾಸ್ತವ. ರಾಜಸ್ತಾನದ ಜೋದ್‌ಪುರ ಸಮೀಪ ಬುಲೆಟ್‌ಟೆಂಪಲ್ ಇದೆ. ಶ್ರೀಮಂತನ ಪುತ್ರನೊಬ್ಬ ೧೯೯೮ರಲ್ಲಿ ಬೈಕ್‌ನಲ್ಲಿ ಬರುವಾಗ ಮರಕ್ಕೆ ಡಿಕ್ಕಿ ಹೊಡೆದು ಅಸುನೀಗಿದ. ಅದ್ಯಾಕೆ ಡಿಕ್ಕಿ ಹೊಡೆದ?
ಸಕ್ಕತ್ತಾಗಿ ತೀರ್ಥಹಾಕಿದ್ದ. ಅವನ ಜ್ಞಾಪಕಾರ್ಥವಾಗಿ ಈ ಬುಲೆಟ್ ಮಂದಿರ್ ನಿರ್ಮಾಣವಾಗಿದೆ. ಫುಲ್ ೩೫೦ ಸಿಸಿಯ ಬುಲೆಟ್ ಗಾಡಿ ಪೂಜಿಸಿಕೊಂಡು ನಿಂತಿದೆ. ಆರಂಭದಲ್ಲಿ ಇದು ಶ್ರದ್ಧಾ ಭಕ್ತಿಯ ಕೇಂದ್ರವಾಗಿತ್ತು. ಜ್ಞಾನಿಗಳಿಗೆ ಮೌಢ್ಯದ ಕೇಂದ್ರ ಎನಿಸಿತ್ತು ಅಷ್ಟೇ… ಆದರೆ ಬರ ಬರುತ್ತಾ ಭಕ್ತಿಯ ನೆಪದಲ್ಲಿ ಬೀರ್ ಮಾರಾಟದ ದಂಧೆ ನಡೆಯುತ್ತಿದೆ. ಅದಾದ ಮೇಲೆ ಇದಲ್ವಾ ಎನ್ನುವಂತೆ ಬೀರ್, ವೈನ್, ರಮ್, ಜಿನ್ ಎಲ್ಲಾ ತೀರ್ಥಗಳ ಭರ್ಜರಿ ವ್ಯವಹಾರ ಇಲ್ಲಿ ನಡೆಯುತ್ತಿದೆ. ಮದವೇರಿ, ಮರಕ್ಕೆ ಡಿಕ್ಕಿ ಹೊಡೆದ. ಅದೇ ಮಾನಿನಿಯೊಂದಿಗೆ ಗೊಟಕ್ ಎಂದಿದ್ದರೆ ಶ್ರೀಮಂತನಾದ ಅಪ್ಪ ಇಲ್ಲೊಂದು ‘ಮಾಂಸದ ಅಡ್ಡೆಯನ್ನೇ ತೆರೆಯುತ್ತಿದ್ದನೋ ಏನೋ…?! ಶ್ರೀಮಂತರ ಮಕ್ಕಳು ಸತ್ತರೆ ಹೊಸ ಸಂಸ್ಕೃತಿ/ಪದ್ದತಿಯೇ ಸೃಷ್ಟಿಯಾಗುತ್ತದೆ. ಬಡವರು ಸತ್ತರೆ ಅನಾದಿಯೊಬ್ಬನ ಸಾವಾಗುತ್ತಿತ್ತು. ಸುದ್ದಿಯೂ ಆಗುತ್ತಿರಲಿಲ್ಲ. ಮದ್ಯ ಮಾರಾಟದ ಅಡ್ಡಯೂ ಇಲ್ಲಿರುತ್ತಿರಲಿಲ್ಲ.
‘ಕಾಲ್’ ಗರ್ಲ್
ಈಕೆ ‘ಅಂಗೈ ತೋರಿಸಿ ಅವಲಕ್ಷಣ ಅನ್ನಿಸಿಕೊಂಡಿಲ್ಲ’ ಬದಲಿಗೆ ತನ್ನ ಕಾಲು ತೂರಿಸಿ ‘ಕಾಲ್ಗುಣ’ ಚೆನ್ನಾಗಿದೆ ಎಂದಿದ್ದಾಳೆ. ಅಂದದ ಕಾಲೇ ಇವಳ ಬಂಡವಾಳ. ಜನ ಇವಳ ಕಾಲನ್ನು ಗಮನವಿಟ್ಟು ನೋಡುತ್ತಾರೆ. ಪಡ್ಡೆಗಳು ರೋಮಾಂಚನಗೊಳ್ಳುತ್ತಾರೆ. ಮಹಿಳೆಯರು ಇವಳ ‘ಕಾಲ’ ನಮಗಿಲ್ವಲ್ಲಾ…’ ಎಂದು ಗೊಣಗುತ್ತಾರೆ. ಸಾರ್ವಜನಿಕವಾಗಿ ಹೀಗೆ ತನ್ನ ಕಾಲು ತೂರಿಸಿ/ತೋರಿಸಿ ಕೂತಿದ್ದು ಅಪರೂಪವೇ ಸರಿ. ಆದರೆ, ಇನ್ಸ್ಟಾಗ್ರಾಮ್‌ನಲ್ಲಿ ‘ಸ್ತ್ರೀ ಪಾದ’ ಪ್ರದರ್ಶನಕ್ಕಿಟ್ಟು ವರ್ಷಕ್ಕೆ ೭೦,೦೦೦ ಡಾಲರ್ ದುಡಿಯುತ್ತಿದ್ದಾಳೆ.
ಏನಿದೆ ಇವಳ ಕಾಲಲ್ಲಿ? ಏನೂ ಇಲ್ಲಾ… ಒಡೆದಿಲ್ಲ, ಸೀಳಿಲ್ಲ, ವಕ್ರ ರೇಖೆಗಳಿಲ್ಲ, ಕುಳಿಗಳಲ್ಲಿ, ಆಣಿಗಳಿಲ್ಲ…ಹೆಪ್ಪು ಗಟ್ಟಿಲ್ಲ, ಆನೆಕಾಲು ರೋಗವೂ ಇಲ್ಲ… ರುಜಿನವೂ ಇಲ್ಲ ಹೀಗೆ ಏನೂ ಇಲ್ಲದ ಕಾಲಿಗೂ ಬೇಡಿಕೆ ಬಂದಿದೆ… ಏನು ‘ಕಾಲ’ ಬಂತಪ್ಪಾ ಅಂದ್ರಾ… ನಮಗೆ ಉತ್ತಮಕಾಲುಗಳು ಬೇಕು ಎಂಬ ಜಾಹೀರಾತು ಕಂಡಳು. ಅರ್ಜಿ ಗುಜರಾಯಿಸಿದಳು ಅಷ್ಟೇ. ಇನ್ಸ್ಟಾಗ್ರಾಂ ಇವಳ ಬೆನ್ನಿಗೆ ನಿಂತಿದೆ. ಅದೃಷ್ಟ ಇವಳದ್ದಾಗಿದೆ. ಕಾಲ್ ಮೇಲೆ ಕಾಲ್ ಹಾಕ್ಕೊಂಡು ರೊಕ್ಕ ಎಣಿಸುತ್ತಾಳೆ. ಅಂದಹಾಗೆ ಈ ಕಾಲಕನ್ಯೆ ಕೆನಡಾ ದೇಶದ ಆಂಟಾರಿಯೋ ನಗರದಲ್ಲಿದ್ದಾಳೆ. ಹೆಸರು: ಜೆಸ್ಸಿಕಾ ಗ್ಲೌಡ್. ಇವಳನ್ನು ಕನ್ನಡ ಇಂಗ್ಲಿಷ್ ಎರಡೂ ಬೆರಿಸಿ.. ಏನನ್ನಬಹುದು? ಅಂದಹಾಗೆ ನಮ್ಮ ಮಹಿಳೆಯರು ಸೀರಿಯಲ್ ಕಥೆಗಳನ್ನು ಹಿಡಿದು…ಪುಟ್ಟಗೌರಿ ಕಾಲ್ಗುಣ ಸರಿಯಿಲ್ಲ… ಚಂದ್ರಿಕನ ಕಾಲ್ಗುಣ ನೆಟ್ಟಗಿಲ್ಲ… ಎಂದೋ ಕಾಲಹರಣ ಮಾಡುತ್ತಾರೆ. ಆದರೆ ಜೆಸ್ಸಿಕಾ ಗ್ಲೌಡ್ ‘ಕಾಲ’ಹಣ ಮಾಡುತ್ತಾಳೆ!
ಎತ್ತರ ಕುಮಾರ
ಇವನು ಉತ್ತರ ಕುಮಾರ ಅಲ್ಲ ಎತ್ತರ ಕುಮಾರ. ಹಾಗೆಂದು ಇದು ಇವನ ನಿಜವಾದ ಹೆಸರಲ್ಲ. ಇವನ ಎತ್ತರದಿಂದ ಈ ಹೆಸರು ಇರಿಸಬೇಕಾಗಿದೆ. ‘ಬೆಳೆಯುವ ಸಿರಿ ಮೊಳಕೆಯಲ್ಲೇ’ ಎಂಬ ಮಾತನ್ನು ಕರಣ್‌ಸಿಂಗ್ ಹೇಗೆ ಅರ್ಥೈಸಿಕೊಂಡನೋ ತಿಳಿಯದು. ಹುಟ್ಟುತ್ತಲೇ ಬಾರಿ ಗಾತ್ರ-ಎತ್ತರದ ಮಗು ಎಂಬ ಗಿನ್ನೀಸ್ ದಾಖಲೆ ಸೇರಿಯೇ ಹೊರಬಂದಿದ್ದ. ಹುಟ್ಟುಗುಣ ಸುಟ್ಟರೂ ಹೋಗದಂತೆ ‘ಏರುತ್ತರ’ವಿಲ್ಲದೆ ಬೆಳೆಯುತ್ತಿದ್ದಾನೆ. ೫ವರ್ಷದ ಈ ಪೋರ ೫ ಅಡಿ ೭ ಇಂಚಿದ್ದು ಏರುಗತಿಯ ಬೆಳವಣಿಗೆಯಿಂದ ಗಿನ್ನೀಸ್ ದಾಖಲೆಸೇರಿದ್ದಾನೆ.
ಎತ್ತರ ಕುಮಾರನ ಬಗ್ಗೆ ತಂದೆಯನ್ನು ಕೇಳಲು ತೆರಳಿದರೆ ಆತ ೬ ಅಡಿ ೭ಇಂಚಿದ್ದಾನೆ. ‘ಅಪ್ಪಾ-ಮಗ’ನಿಗೆ ಗೂಟಬಡಿದು(?!) ಮೊಟಕು ಮಾಡಿರೆಂದು ಅಮ್ಮ ಶ್ವೇತಾಸಿಂಗ್‌ರ ಬಳಿ ತೆರಳಿದರೆ… ಆಕೆ ಇವರಿಬ್ಬರಿಗಿಂತಲೂ ಎತ್ತರದವಳು! ಟೇಪ್ ಹಿಡಿದು ಅಳೆದರೆ ಆಕೆ ೭ ಅಡಿ ೩ ಇಂಚು ಇದ್ದಾಳೆ! ದಕ್ಷಿಣ ಏಷ್ಯಾದ ಎತ್ತರದ ಮಹಿಳೆ ಎಂಬ ‘ಉನ್ನತ’ಸಾಧನೆ ಇವಳದ್ದು. ಈ ‘ಉತ್ತುಂಗ’ಸಾಧನೆ ಮಾಡಿರುವ ಈ ಕುಟುಂಬ ಮೂಲತಃ ಬೆಂಗಳೂರಿನವರಾಗಿದ್ದು ಈಗ ಮೀರತ್‌ನಲ್ಲಿದ್ದಾರೆ. ಈ ಮೂವರ ಕುಟುಂಬ ನಡೆದು ಬರುತ್ತಿದ್ದರೆ ಬಟ್ಟೆ ಸುತ್ತಿದ ಮರಗಳು ನಡೆದು ಬರುತ್ತಿರುವಂತೆ ಗೋಚರವಾಗಲಿದೆ. ಹೀಗೆ ಎತ್ತರೆತ್ತರಕ್ಕೆ ಬೆಳೆಯುತ್ತಿರುವ ಕರಣ್ ಸಿಂಗ್‌ಗೆ ಬೆಸ್ಕಾಂನಲ್ಲಿ ಯಾವ ನೌಕರಿ ನೀಡಬಹುದು? ಕೆಟ್ಟಿರುವ ಬಲ್ಬ್‌ಗಳನ್ನು ಬದಲಿಸುವ ನೌಕರಿ ಉತ್ತಮವಾದೀತು!
ಮಹಾ’ಮಾತೆ’
‘ಮಾತು ಮನೆ ಕೆಡಿಸಿತು – ತೂತು ಒಲೆ ಕೆಡಿಸಿತು’ ಎನ್ನುವ ಗಾದೆ ಇವಳಿಗೆ ಹೊಂದದು. ಏಕೆಂದರೆ ಇವಳಿಗೆ ಬಾಯೇ ಬಂಡವಾಳ. ಬಾಯಿಗೆ ಮೋಟರ್ ಫಿಟ್ ಮಾಡಿಕೊಂಡವಳಂತೆ ವಟಗುಟ್ಟುತ್ತಾಳೆ. ಇವಳ ಮಾತೇ ಇವಳನ್ನು ‘ದಾಖಲೆ’ ಪುಸ್ತಕಕ್ಕೆ ಸೇರಿಸಿದೆ. ಅಂದಹಾಗೆ ಇವಳು ಕ್ಷಣದಲ್ಲಿ ೧೧ ಪದಗಳಿಗೆ ಧ್ವನಿಯಾಗಬಲ್ಲಳು. ನಿಮಿಷದಲ್ಲಿ ೬೦೦ ಪದಗಳನ್ನು ಹೊರಹಾಕುತ್ತಾಳೆ. ‘ತ್ರಿ ಲಿಟಲ್ ಪಿಗ್ಸ್’ ಎಂಬ ಇಂಗ್ಲಿಷ್ ಕಥೆಯನ್ನು ೧೫ ಸೆಕೆಂಡುಗಳಲ್ಲಿ ಹೇಳಿ ಗಿನ್ನೀಸ್ ದಾಖಲೆ ಪುಸ್ತಕದಲ್ಲಿ ತನ್ನ ಹೆಸರು ನಮೂದಿಸಿದ್ದಾಳೆ. ಬಾಲ್ಯದಲ್ಲೇ ವಾಚಾಳಿಯಾಗಿದ್ದಳಂತೆ. ಈಗ ಮಾತಿನ ಮಲ್ಲಿಯಾಗಿ ಮಹಾ’ಮಾತೆ’ಯಾಗಿದ್ದಾಳೆ.
ಫ್ರಾನ್‌ಕ್ಯಾಪೋ ಹೆಸರಿನ ಈ ಮಹಿಳೆ ಅಮೆರಿಕದ ನ್ಯೂಯಾರ್ಕ್‌ನಲ್ಲಿದ್ದಾಳೆ. ರಾಕೆಟ್ ಹಾರುವ ವೇಗದಲ್ಲಿ ಮಾತನಾಡಿದರೆ ಅರ್ಥವಾಗುವುದು ಹೇಗೆ? ಮಾತು, ಧ್ವನಿಗಳನ್ನು ಗ್ರಹಿಸಬಲ್ಲ ಕರ್ಣ ಶಕ್ತಿ ಅದನ್ನು ಅರ್ಥ ಮಾಡಿಕೊಳ್ಳಬಲ್ಲ ಬುದ್ಧಿ ಶಕ್ತಿ ಇದ್ದಲ್ಲಿ ಖಂಡಿತ ಅರ್ಥವಾಗುತ್ತದೆ. ಇಲ್ಲವಾದಲ್ಲಿ? ರೆಕಾರ್‍ಡ್ ಮಾಡಿಕೊಂಡು, ಅದನ್ನು ಸ್ಲೋ ಮೋಷನ್‌ನಲ್ಲಿ ಕೇಳಿ ತಿಳಿದುಕೊಳಬೇಕು. ಸಾಮಾನ್ಯವಾಗಿ ಮಾತನಾಡುವ ಮಹಿಳೆಯರನ್ನು ‘ಮಾತೆ’ಯರು ಎಂದು ವ್ಯಂಗ್ಯವಾಗಿ ಹೇಳುವವರಿದ್ದಾರೆ. ಈಕೆ ಮಹಾಮಾತೆಯೇ ಸರಿ. ಎಲುಬಿಲ್ಲದ ನಾಲಿಗೆ ಹೇಗೆ ಬೇಕೋ ಹಾಗೆ ಹೊರಳತ್ತೆ… ಫ್ರಾನ್‌ಕ್ಯಾಪೋ ಅಂತಹವರಿಗೆ ವೇಗವೂ ಒಲಿಯುತ್ತದೆ… ಉಳಿದವರಿಗೆ ಈ ‘ನ್ಯಾಕ್’ ಇರದು. ಅಂತಹವರಿಗೆ ನ್ಯಾಕೋದಿಕ್ಕೆ ಬಳಕೆಯಾಗುತ್ತದೆ.
ಎರಡೂ ಕೈಗಳ ಕರಾಮತ್ತು
ಇಂದಿನ ಮಕ್ಕಳು ಎರಡು ಕಿವಿಗಳಿಂದ ಪಾಠ ಕೇಳಿ, ಎರಡು ಕಣ್ಣಿನಿಂದ ಓದಿದರೆ ಸಾಲ್ದು. ಎರಡು ಕೈಗಳಿಂದ ಬರೆಯುವಂತಾಗಬೇಕು. ಆಗ ಹೆಚ್ಚಿನ ಅಂಕಗಳು ಬಂದೀತು…ಎನ್ನುವ ಅಪೇಕ್ಷೆ ಹಲವಷ್ಟು ಪೋಷಕರಿಗೆ ಇದೆ. ತಂದೆತಾಯಿಯರ ತೆವಲಿಗೆ ತಕ್ಕಂತೆ ಇಲ್ಲೊಂದು ಶಾಲೆ ಇದೆ… ಇಲ್ಲಿ ೩ನೇ ತರಗತಿಯಿಂದಲೇ ವಿದ್ಯಾರ್ಥಿಗಳಿಗೆ ಎರಡೂ ಕೈಗಳಲ್ಲಿ ಬರೆಯಲು ಕಲಿಸುತ್ತಾರೆ. ೧೯೯೯ರಲ್ಲಿ ಈ ಶಾಲೆ ಆರಂಭಿಸಲಾಯಿತು. ಇದರ ಪ್ರಿನ್ಸಿಪಾಲ್ ವಿ. ಪಿ. ಶರ್ಮ ಈ ಶರ್‍ಮ ಈ ಪ್ರಯೋಗಕ್ಕೆ ಮುಂದಾದಾಗ ಹಲವರು ವಿರೋಧ ಮಾಡಿದರು. ಮೊದಲು ಪೋಷಕರಿಗೆ ನಂತರ ಮಕ್ಕಳಿಗೆ ತಿಳಿ ಹೇಳತೊಡಗಿದರು. ಇದೀಗ ಇದೊಂದು ಅನನ್ಯ ಶಾಲೆ ಎಂಬ ಕೀರ್ತಿಗೆ ಭಾಜನವಾಗಿದೆ.
ಮೊದಲ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ಅವರು ಹೀಗೆ ಎರಡೂ ಕೈಗಳಲ್ಲಿ ಬರೆಯುತ್ತಿದ್ದರೆಂಬ ಸಂಗತಿ ತಿಳಿದ ನಂತರ ಶರ್ಮಾ ಅವರಿಗೆ ಅದೇ ಪ್ರೇರಣೆಯಾಯಿತು. ಅದು ಪ್ರಯೋಗವಾಯಿತು. ಮುಂದಿನದ್ದು ಯಶಸ್ಸು, ಕೀರ್ತಿ… ಒಮ್ಮೆಗೇ ಒಂದು ಕೈಯ್ಯಲ್ಲಿ ಇಂಗ್ಲಿಷ್ ಮತ್ತೊಂದರಲ್ಲಿ ಹಿಂದಿ. ಬಲಗೈಯ್ಯಲ್ಲಿ ವಿಜ್ಞಾನ – ಎಡಗೈಯ್ಯಲ್ಲಿ ಗಣಿತ ಕಲಿಸಿ, ಮಕ್ಕಳನ್ನು ಪರಿಣಿತರನ್ನಾಗಿ ಮಾಡಿದ್ದಾರೆ. ಈ ಶಾಲೆಯಲ್ಲಿ ೩೦೦ಕ್ಕೂ ಹೆಚ್ಚು ಮಕ್ಕಳಿದ್ದು ಎಲ್ಲರಿಗೂ ಇದು ಕರಗತ. ತಮ್ಮ ಮಕ್ಕಳನ್ನು ದಾಖಲಿಸಲು ಅಪೇಕ್ಷಿಸುವ ಪೋಷಕರು ಕೂಡಲೇ ಮಧ್ಯಪ್ರದೇಶದ ಸಿಂಗರೂಲಿ ಜಿಲ್ಲೆಯ ವೀಣಾ ವಂದಿನಿ ಶಾಲೆಗೆ ತೆರಳಬೇಕು. ನಮ್ಮಲ್ಲೂ ಈ ಶಾಲೆ ಬಂದರೆ ಹೇಗೆ? ಸೂಪರ್ ಸಾರ್… ಆದರೆ ಈಗ ರೂ. ೧ ಲಕ್ಷ ಇರುವ ಡೊನೇಷನ್ ಆಗ ಎರಡು ಲಕ್ಷವಾದರೂ ಅಚ್ಚರಿಯಿಲ್ಲ! ನಗುವಾಗಾ ಎಲ್ಲಾ ನೆಂಟರೂ…
ಮುಖದ ಅಂದಕ್ಕೆ ನಗುವಿಗೂ ಮಿಗಿಲಾದ ಆಭರಣವಿಲ್ಲ. ಈ ಸಂಗತಿ ಕನ್ನಡಿಗರಿಗೆ ಮಾತ್ರವಲ್ಲದೆ ಈ ಕನ್ನಡಿಗೂ ಗೊತ್ತು. ಹೀಗಾಗಿಯೇ ನಕ್ಕಾಗ ಮಾತ್ರ ಈ ಕನ್ನಡಿ ಪ್ರತಿಬಿಂಬ ತೋರುತ್ತದೆ. ಅತ್ತರೆ, ಮುಖ ಸಿಂಡ್ರಿಸಿಕೊಂಡರೆ ಬಿಂಬ ಮೂಡದು. ಒಂದು ರೀತಿಯಲ್ಲಿ ಮ್ಯಾಜಿಕ್ ಮಿರರ್ ಇದು. ಏನ್ ಕಿಂಡಲ್ ಮಾಡ್ತೀರಾ? ದೇವರಾಣೆಗ್ಲೂ ಇಲ್ರೀ….. ಮುಖದ ಹಾವಭಾವ ಗ್ರಹಿಸುವ ಪ್ರೊಪ್ರೈಟರಿ ಸಾಫ್ಟ್‌ವೇರ್ ಅಳವಡಿಕೆಯ ಹೈಟೆಕ್ ತಂತ್ರಜ್ಞಾನದಲ್ಲಿ ಈ ಮಿರರ್ ರೂಪಿಸಲಾಗಿದೆ. ನೋಡಲು ‘ಟ್ಯಾಬ್ಲೆಟ್’ (ಕಂಪ್ಯೂಟರ್)ನಂತೆ ಗೋಚರಿಸುತ್ತದೆ. ಆದರೆ ಇದು ಕನ್ನಡಿ.
ಎಲ್ಲಾ ಓ.ಕೆ. ಈ ಕನ್ನಡಿ ಯಾಕೆ? ಕ್ಯಾನ್ಸರ್ ರೋಗಿಗಳು ಕಾಯಿಲೆಗೆ ಅಂಜಿ ಅಳುವುದನ್ನೇ ಅಭ್ಯಾಸ ಮಾಡಿಕೊಂಡಿದ್ದಾರೆ. ಕೊಂಚ ಸುಧಾರಣೆ ಕಂಡಾಗ ಕನ್ನಡಿಯಲ್ಲಿ ಮುಖ ನೋಡಿಕೊಂಡು ‘ಹೇಗಿದ್ದವನು ಹೇಗಾದೆ…?’ ಎಂದು ದುಃಖಿಸುವರು. ನಕ್ಕಾಗ ಬಿಂಬ ಮೂಡಿದಾಗ ನೋವು ಮರೆಯುತ್ತಾರೆ. ತಮ್ಮ ದುಃಖ ಮರೆಯಲು ಇಂತಹ ಕನ್ನಡಿಗಳು ಸಹಕಾರಿ. ಕ್ಯಾನ್ಸರ್ ಪೀಡಿತರಲ್ಲಿ ಬದುಕುವ ಆಸೆ ತುಂಬಲು ಈ ಕನ್ನಡಿ ಉಪಯೋಗಿ. ‘ನಗುವಾಗ ಎಲ್ಲಾ ನೆಂಟರೂ… ಅಳುವಾಗ… ಕನ್ನಡಿನೂ ಇಲ್ಲಾ…!’ ಅಂತ ಆಗಬಾರದೆಂಬ ಸದುದ್ದೇಶವಿರಬೇಕು. ಅಂದಹಾಗೆ ಈ ಕನ್ನಡಿ ಸದ್ಯ ಅಮೆರಿಕದಲ್ಲಿ ಮಾತ್ರ ಲಭ್ಯ. ಬೆಲೆ $೨೦೦೦-$೪೦೦೦ವರೆಗೆ ಇದೆ. ಈ ಕನ್ನಡಿ ಬೆಲೆ ಕೇಳಿಯೇ ಕಣ್ಣೀರು ಬಂತಾ..? … ಧಾರಣೆ ತಗ್ಗಿದ ನಂತರ ಕೊಳ್ಳೋಣಾ…!
ಬಾಲವೊಂದಿದೆ ಅಷ್ಟೇ!
‘ನನ್ನ ಮುಂದೆ …ಬಾಲ ಆಡಿಸ್ಕೊಂಡು ಬಿದ್ದಿರಲಿ’ ಎಂದೇ ಧಿಮಾಕಿನ ಶ್ರೀಮಂತರು ಹಲಬುತ್ತಾರೆ. ರೊಕ್ಕ ಕೊಟ್ಟು ಇಟ್ಕೊಂಡಿರೋ ಜೀತದ ಆಳುಗಳೇ ಹಾಗೆ ಮಾಡುವುದಿಲ್ಲ. ಅಷ್ಟೆಲ್ಲಾ ಏಕೆ ನಾಯಿನೂ ಇಂತಹವರ ತೆವಲಿಗೆ ಸ್ಪಂದಿಸುವುದಿಲ್ಲ. ಅಂತಿರುವಾಗ ಯಾರು ತಾನೆ ಬಾಲ ಆಡಿಸಿಕೊಂಡು ಬಿದ್ದಿರುತ್ತಾರೆ ಅಲ್ವಾ? ಹಾಗಂತ ದೌಲತ್ತಿನ ಮಂದಿ ತಮ್ಮ ತೆವಲು ಬಿಟ್ಟಿಲ್ಲ. ಇಂತಹ ‘ತೆವಲುದಾರ’ರಿಗೆಂದೇ ಬಂದಿದೆ. ಬಾಲ ಆಡಿಸಿಕೊಂಡಿರುವ ದಿಂಬು. ಈ ದಿಂಬಿಗೆ ಕೂಬೊ ಎಂಬ ಹೆಸರಿದೆ. ಕೊಬ್ಬುಳ್ಳ ಮಂದಿಗೆ ಹೇಳಿ ಮಾಡಿಸಿದ್ದಿರಬೇಕು. ಇದರಲ್ಲಿ ಪುಟ್ಟ ಸಾಫ್ಟ್‌ವೇರ್, ಪುಟ್ಟ ಬ್ಯಾಟರಿ, ಹೆಚ್ಚು ಸದ್ದು ಮಾಡದ ಮೋಟಾರ್ ಎಲ್ಲವೂ ಇದೆ.
ಉಳಿದಂತೆ ಸಾಫ್ಟ್ ಕಾಟನ್, ಉಲನ್, ಹಾಗೂ ಸ್ಟೆಚಲಾನ್‌ಗಳಿಂದ ಇದನ್ನು ರೂಪಿಸಲಾಗಿದೆ. ಚಾರ್ಜರ್ ಮೂಲಕ ೪-೫ ಗಂಟೆಗಳ ಕಾಲ ಚಾರ್ಜ್ ಮಾಡಿದರೆ ಸುಮಾರು ೫-೬ ಗಂಟೆ ಬಾಲ ಆಡಿಸಿಕೊಂಡು ಬಿದ್ದಿರುತ್ತದೆ. ಆ ನಂತರ ಸುಸ್ತಾಗಿ ಸುಮ್ಮನಾಗುತ್ತದೆ. ಯುಎಸ್‌ಬಿ ಕೇಬಲ್ ಮೂಲಕ ಚಾರ್‍ಜ್ ಮಾಡಬಹುದು. ಮನೆಗೆ ಯಾರಾದರೂ ‘ಅಲ್ಪರು’ ಬಂದರೆ ಅವರೆದರು ಇಂತಹ ಬಾಲ ಆಡಿಸುವ ದಿಂಬುಗಳಿದ್ದಲ್ಲಿ ಮಾಲೀಕನ ಶ್ರೀಮಂತಿಕೆಗೆ ಬೆಲೆ ಬಂದೀತು!ಅಲ್ಲದೆ ಬಾಲ ಇರುವ ಪ್ರಾಣಿಗಳನ್ನು ಮುದ್ದುಮಾಡಿ ಅಭ್ಯಾಸವುಳ್ಳವರಿಗೆ ಇದು ಉತ್ತಮ ಆಟಿಕೆಯಾಗಲಿದೆ. ಅಮೆರಿಕಿಗಳ ಅಪೇಕ್ಷೆಗೆ ಜಪಾನೀಯರು ಈ ದಿಂಬು ಅವಿಷ್ಕರಿಸಿದ್ದಾರಂತೆ. ಮುಂದಿನ ಬೇಸಿಗೆಗೆ ಈ ದಿಂಬುಗಳು ಬಿಕರಿಗೆ ಲಭ್ಯ. ಬೆಲೆ ೧೦೦$ ಮಾತ್ರ. ಈ ದಿಂಬನ್ನು ಸಂಶೋಧಿಸಿದ ಕಲಾವಿದ? ‘ಬಾಲ’ಕಲಾವಿದ!
ಮಿನರಲ್ ಏರ್!
ಮಿನರಲ್ ವಾಟರ್ ಬಾಟಲ್‌ಗಳು ಇಂದು ನಮ್ಮ ಅಗತ್ಯವಾಗಿ ಹೋಗಿದೆ. ಅದ್ಯಾವುದೋ ನೀರು ಕುಡಿದು ಕಾಯಿಲೆಗೆ ಆಹ್ವಾನ ನೀಡುವ ಬದಲು ಮಿನರಲ್ ವಾಟರ್ ಹೆಚ್ಚು ಆರೋಗ್ಯಕರ. ಈ ಶುದ್ಧೀಕರಿಸಿದ ನೀರಿನ ನಂತರ ಇದೀಗ ಮಿನರಲ್ ಏರ್ ಬಂದಿದೆ. ಇದನ್ನು ಮೂಗಿಗೆ ಮೂಗುತಿಯಂತೆ ಮೆತ್ತಿಕೊಂಡು ಅಡ್ಡಾಡಿದರೆ ಆಯಿತು. ಶುಭ್ರ ಸ್ವಚ್ಛ ಆಮ್ಲಜನಕ ನಾಸಿಕದ ಮೂಲಕ ಶರೀರಕ್ಕೆ ಇಳಿಯಲಿದೆ. ಮಲಿನಗಾಳಿಯ ಸೇವನೆ ಹಲವು ರೋಗಗಳಿಗೆ ಆಹ್ವಾನ. ಅದನ್ನು ತಪ್ಪಿಸಲೆಂದೇ ಈ ಮೂಗುತಿ ಸೃಷ್ಟಿಸಲಾಗಿದೆ. ಶ್ವಾಸಕೋಶದ ಸಮಸ್ಯೆ, ಉಬ್ಬಸ, ದಮ್ಮು ಅಲರ್ಜಿ ಸಮಸ್ಯೆಗಳಿಂದ ಮುಕ್ತರಾಗಲು ಈ ಮೂಗುತಿಯಾಕಾರದ ಫಿಲ್ಟರ್ ಸಹಕಾರಿ.
ಟ್ರೀಪೆಕ್ಸ್ ಹೆಸರಿನ ಸಾಧನದಲ್ಲಿ ಸೇವಿಸುವ ಗಾಳಿಯಲ್ಲಿರುವ ಬ್ಯಾಕ್ಟೀರಿಯಾಗಳನ್ನು ಕೊಲ್ಲಲಿದೆ. ಅಲ್ಲದೆ, ಪುಟ್ಟ ಯಂತ್ರಗಳು, ಫಿಲ್ಟರ್‌ಗಳು ಮಲಿನ ಅಂಶಗಳನ್ನು ಫಿಲ್ಟರ್ ಮಾಡಲಿದೆ. ೩೦ ನಿಮಿಷ ಚಾರ್‍ಜ್ ಮಾಡಿ, ೨೪ ಗಂಟೆಗಳ ಕಾಲ ಬಳಸಬಹುದು. ಜಾರ್ಜಿಯ ದೇಶದಲ್ಲಿ ಇದರ ಆವಿಷ್ಕಾರವಾಗಿದ್ದು, ಸದ್ಯದಲ್ಲೇ ವಿಶ್ವದ ಎಲ್ಲೆಡೆ ಇದು ಲಭ್ಯವಾಗಲಿದೆ. ‘ಮೂಗುಗಿಂತಲೂ ಮೂಗುತಿ ಭಾರ’ ಎನ್ನುವಂತೆ ಸದ್ಯಕ್ಕೆ ದುಬಾರಿ ರೇಟ್ ಇದ್ದು, ಮುಂದೆ ತಗ್ಗಲಿದೆ. ಮತ್ತೊಬ್ಬರ ವಿಷಯದಲ್ಲಿ ಮೂಗು ತೂರಿಸಿ ಮಾತನಾಡುವ ಜನಕ್ಕೆ ಇದು ಹೆಚ್ಚು ಉಪಯೋಗವಾದೀತು!
ತೊಳ್ಕೊಳಕ್ಕೆ ಟಾಟಾ…
ಕೋಪ ಬಂದಾಗ ‘ಯಾಕೋ ತಿ… ತೊಳ್ಕೊಂಡಿಲ್ವಾ?’ ಎಂದು ಗದರುತ್ತೇವೆ. ಅಥವಾ ನಮ್ಮೆದುರು ನಿಂತವನಿಂದ ವಾಸನೆ ಬರುತ್ತಿದ್ದರೆ ಇಂತಹ ಡೈಲಾಗ್ ಉದುರಿಸುತ್ತೇವೆ. ನಮ್ಮ ಸಹಾಯಕ್ಕೆ ಯಾರೂ ಬಾರದಿದ್ದಾಗ ‘ನಮ್ಮ ತಿ.. ನಾವೇ ತೊಳೆದುಕೊಳ್ಳಬೇಕು!’ ಎಂದು ಸಮಾಧಾನ ಮಾಡಿಕೊಳ್ಳುತ್ತೇವೆ, ಅದು ಸಹಜ ಕೂಡ. ಈ ಸತ್ಯವನ್ನು ಒಂದಿಲ್ಲ ಒಂದು ಬಾರಿಯಾದರೂ ಹೇಳುತ್ತೇವೆ. ‘ಜಗ ಒಪ್ಪಿದ ಈ ಎರಡೂ ನಿಜ’ವನ್ನು ಸುಳ್ಳಾಗಿಸುತ್ತಿದೆ. ಜಪಾನ್‌ನ ಟೊಟೊ ಕಂಪೆನಿ. ಅವಸರವಾದಾಗ ಕಂಪ್ಯೂಟರ್ ಚಾಲಿತ ಕಮೋಡ್ ಕಟ್ಟೆ ಏರಿ ಕೂತು, ‘ಪಿಚಕ್’ ಎನಿಸಿದರೆ ಸಾಕು… ನಮ್ಮ ಬ್ಯಾಕ್‌ಗೆ ಬಿಸಿ ನೀರು ಬಿಟ್ಟು, ತೊಳೆದು, ಒಣಗಿಸಿ ಹೊರ ಹೋಗಲು ಸೂಚಿಸುತ್ತದೆ!
ಹಿಟ್ಟು ರುಬ್ಬಲೂ ಮೆಶಿನ್… ಬಟ್ಟೆ ಒಗೆಯಲೂ… ಪಾತ್ರೆ ತೊಳೆಯಲೂ … ಇದೀಗ ‘ಬುಡ’ ಜಾಡಿಸಲೂ ಮೆಶಿನ್ ಬಂದಿದೆ…ಯಂತ್ರಗಳಿಗೆ ನಾವು ದಾಸರಾಗುತ್ತಿದ್ದೇವೆ. ಅಪಘಾತವಾಗಿ ಎರಡೂ ಕೈಗಳೂ ಸ್ವಾದೀನವಿಲ್ಲದಿದ್ದಾಗ, ಅಸ್ವಸ್ಥ ಹಿರಿಯನಾಗರಿಕರಿಗೆ, ಅಥವಾ ಕಾಯಿಲೆಯುಳ್ಳವರಿಗೆ ಬುಡ ವಾಶ್ ಮಾಡುವ ಮೆಶಿನ್ ಸೂಕ್ತವಾದೀತು. ಆದರೆ ನಮ್ಮಲ್ಲಿ ಇದು ಬಂದರೆ ಕಾಯಿಲೆಯುಳ್ಳವರಿಗಿಂತಲೂ ಅನ್ಯರೇ ಇದರ ವಾರಸ್ದಾರರಾಗುತ್ತಾರೆ. ‘ನಮ್ಮ ಮನೆಯಲ್ಲಿ ಈ ಮೆಶಿನ್ ಇದೆ ಗೊತ್ತಾ…?’ ಎಂದು ಹಾಲಲ್ಲೇ ಫಿಕ್ಸ್ ಮಾಡಿಸಿ ಎಲ್ಲರೆದರು ತೋರಿಸಲು ಕೂರುವ ‘ಧಿಮಾಕಿ’ನ ಮಂದಿಗೂ ಕೊರತೆಯಿಲ್ಲ! ಅಂದಹಾಗೆ ಈ ಹೈಟೆಕ್ ಶೌಚವನ್ನು ಬಳಸಿದ ನಂತರ ನಮಗೆ ಗೊಣಗಲೂ ಏನೂ ಉಳಿಯದಲ್ವಾ…? ಹಾಗೇನೂ ಇಲ್ಲಾ ರೀ… ‘ಥೂ… ಏನು ಕಾಲ ಬಂತಪ್ಪಾ… ನಮ್ದನ್ನು ನಾವು ತೊಳ್ಕೊಳಂಗಿಲ್ಲ!’ ಎಂದು ಗೊಣಗಲು ಅಡ್ಡಿ ಎಲ್ಲಿದೆ?