‘ಗುಲ್ಟು’ ಖ್ಯಾತಿಯ ನಟ ನವೀನ್ ಶಂಕರ್ ಮತ್ತು ‘ಕೆಜಿಎಫ್’ ಖ್ಯಾತಿಯ ಅರ್ಚನಾ ಜೋಯ್ಸ್ ಅಭಿನಯದ ಹೊಸಚಿತ್ರ ‘ಕ್ಷೇತ್ರಪತಿ’ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಸದ್ಯ ‘ಕ್ಷೇತ್ರಪತಿ’ ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಇತ್ತೀಚೆಗೆ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದೆ. ಟ್ರೇಲರ್ ಬಿಡುಗಡೆ ಬಳಿತ ಮಾತನಾಡಿದ ನಟ ನವೀನ್ ಶಂಕರ್, ‘’ಗುಲ್ಟು’ ಸಿನಿಮಾದ ನಂತರ ನಿರ್ದೇಶಕ ಶ್ರೀಕಾಂತ್ ಕಟಗಿ, ಈ ಸಿನಿಮಾದ ಕಥೆ ಹೇಳಿದರು. ನಾನು ಉತ್ತರ ಕರ್ನಾಟಕದವನೇ ಆಗಿರುವುದರಿಂದ ಅಲ್ಲಿನ ಪರಿಸರದ ಮೇಲೆ ಸಿನಿಮಾ ಮಾಡುವ ಆಸೆಯಿತ್ತು. ಹಾಗಾಗಿ ತಕ್ಷಣ ಒಪ್ಪಿಕೊಂಡೆ. ಆದರೆ ಹಣ ಹೂಡಲು ನಿರ್ಮಾಪಕರು ಇರಲಿಲ್ಲ. ನಾವೇ ಒಂದೊಂದು ಲಕ್ಷ ಹಾಕಿ ಸಿನಿಮಾ ಆರಂಭ ಮಾಡಿದ್ದೆವು. ಆನಂತರ ಸಾಕಷ್ಟು ನಿರ್ಮಾಪಕರು ನಮ್ಮ ಜೊತೆಯಾದರು. ಹೀಗೆ ಆರಂಭವಾದ ಚಿತ್ರ ಈಗ ಬಿಡುಗಡೆ ಹಂತಕ್ಕೆ ಬಂದಿದೆ’ ಎಂದರು.
‘ಕ್ಷೇತ್ರಪತಿ’ ಸಿನಿಮಾದಲ್ಲಿ ನಾಯಕಿ ಅರ್ಚನಾ ಜೋಯ್ಸ್ ಪತ್ರಕರ್ತೆಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಅಚ್ಯುತ ಕುಮಾರ್, ರಾಹುಲ್ ಐನಾಪುರ, ಹರ್ಷ್ ಅರ್ಜುನ್, ಕೃಷ್ಣ ಹೆಬ್ಬಾಳೆ, ಶೈಲಶ್ರೀ ಅರಸ್, ನಾಟ್ಯ ರಂಗ ಮೊದಲಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಶ್ರೀಕಾಂತ್ ಕಟಗಿ ನಿರ್ದೇಶನದಲ್ಲಿ ಮೂಡಿಬಂದಿರುವ ‘ಕ್ಷೇತ್ರಪತಿ’ ಸಿನಿಮಾಕ್ಕೆ ‘ಕೆ.ಜಿ.ಎಫ್’ ಖ್ಯಾತಿಯ ರವಿ ಬಸ್ರೂರ್ ಸಂಗೀತ ಸಂಯೋಜಿಸಿದ್ದಾರೆ. ವೈ.ವಿ.ಬಿ ಶಿವಸಾಗರ್ ಛಾಯಾಗ್ರಹಣ, ಮನು ಶೇಡ್ಗಾರ್ ಸಂಕಲನ, ನರಸಿಂಹ ಸಾಹಸ ನಿರ್ದೇಶನ ಹಾಗೂ ಜೀವನ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
ಕಳೆದ ಕೆಲ ದಿನಗಳಿಂದ ಭರ್ಜರಿಯಾಗಿ ಸಿನಿನಾದ ಪ್ರಚಾರ ಕಾರ್ಯಗಳಲ್ಲಿರುವ ಚಿತ್ರತಂಡ, ಇದೇ ಅಗಸ್ಟ್ 18 ಕ್ಕೆ ‘ಕ್ಷೇತ್ರಪತಿ’ ಯನ್ನು ತೆರೆಗೆ ತರಲು ಯೋಜನೆ ಹಾಕಿಕೊಂಡಿದೆ.‘ರವಿ ಬಸ್ರೂರ್ ಮ್ಯೂಸಿಕ್ & ಮೂವೀಸ್’ ಅರ್ಪಿಸುತ್ತಿರುವ, ‘ಆಶ್ರಗ ಕ್ರಿಯೇಷನ್ಸ್’ ಲಾಂಛನದಲ್ಲಿ ನಿರ್ಮಾಣವಾಗಿರುವ ‘ಕ್ಷೇತ್ರಪತಿ’ ಚಿತ್ರ ಪೊಲಿಟಿಕಲ್ ಡ್ರಾಮ ಕಥಾಹಂದರ ಹೊಂದಿದೆ. ‘ದಿ ಇಮೋಷನ್ಸ್ ಫ್ಯಾಕ್ಟರಿ ಗ್ರೂಪ್’ ಸಹ ನಿರ್ಮಾಣವಿರುವ ಈ ಚಿತ್ರವನ್ನು ಕೆ.ಆರ್.ಜಿ ಸ್ಟುಡಿಯೋಸ್ ಬಿಡುಗಡೆ ಮಾಡುತ್ತಿದೆ.