ಮಂಜುನಾಥ್ ಬಡಿಗೇರ್ ಮೊದಲ ಬಾರಿಗೆ ನಿರ್ದೇಶಿಸಿ, ನಾಯಕನಾಗಿ ನಟಿಸಿರುವ ‘ಆರಂಭ’ ಸಿನಿಮಾ ಪ್ರೇಕ್ಷಕರ ಮುಂದೆ ಬರಲು ತಯಾರಾಗುತ್ತಿದೆ. ಈಗಾಗಲೇ ‘ಆರಂಭ’ ಸಿನಿಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಇತ್ತೀಚೆಗೆ ಸಿನಿಮಾದ ಮೊದಲ ಟ್ರೇಲರ್ ಬಿಡುಗಡೆಯಾಗಿದೆ.
‘ಶ್ರೀ ಕಾಳಿಕಾದೇವಿ ಪ್ರೊಡಕ್ಷನ್ಸ್’ ಬ್ಯಾನರ್ ಅಡಿಯಲ್ಲಿ ಸಾಂಭಯ್ಯ ಆಚಾರ್ಯ ನಿರ್ಮಾಣದ ‘ಆರಂಭ’ ಕೆಲವು ನೈಜ ಘಟನೆಗಳಿಂದ ಸ್ಫೂರ್ತಿ ಪಡೆದ ಕಥೆಯನ್ನು ಹೊಂದಿದ ಸಿನಿಮಾ. ಪಕ್ಷಿಗಳ ರಕ್ಷಣೆಗಾಗಿ ಹೋರಾಡುತಿದ್ದ ಯುವತಿಯೊಬ್ಬಳ ಅತ್ಯಾಚಾರ ಹಾಗೂ ಕೊಲೆಯಾಗುತ್ತದೆ. ಆ ಕೊಲೆಯ ಪ್ರತಿಕಾರಕ್ಕೆ ಇಬ್ಬರು ಯುವಕರು ಮುಂದಾಗುತ್ತಾರೆ. ಅವರ ಹೋರಾಟಕ್ಕೆ ಜಯ ಸಿಗುತ್ತಾ ಎಂಬುದರ ಸುತ್ತ ಚಿತ್ರದ ಕಥೆ ಸಾಗುತ್ತದೆ.
ಈ ಹಿಂದೆ ‘ಜಗನ್ನಾಥ ದಾಸರು’ ಸಿನಿಮಾದಲ್ಲಿ ನಟಿಸಿದ್ದ ನಿಶ್ಚಿತಾ ಶೆಟ್ಟಿ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಎರಡನೇ ನಾಯಕನಾಗಿ ಪೃಥ್ವಿರಾಜ್, ಪೊಲೀಸ್ ಪಾತ್ರದಲ್ಲಿ ಗಣೇಶ್ ರಾವ್ ನಟಿಸಿದ್ದಾರೆ. ಉಳಿದಂತೆ ಕುಮಾರ್ ಬೋರಕನವರ್, ರಜತಾದ್ರಿ ಪ್ರಶಾಂತಂ, ಪ್ರಿಯಾಂಕಾ, ಕಾಳಚಾರಿ, ಪ್ರಭು ಹಿರೇಮಠ್ ಮುಂತಾದವರು ಸಿನಿಮಾದ ಇತರ ಪ್ರಮುಖ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ಮುಂಜಾನೆ ಮಂಜು ಛಾಯಾಗ್ರಹಣ, ಆಚಾರ್ಯ ಗುರು ಸಂಕಲನವಿದೆ. ಸಿನಿಮಾದ ಹಾಡುಗಳಿಗೆ ಅಲೆಕ್ಸ ಸಂಗೀತ ಸಂಯೋಜಿಸಿದ್ದಾರೆ.