ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸುತ್ತಿರುವ ‘ಲವ್’ ಸಿನಿಮಾದ ಮೊದಲ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. ಕರ್ನಾಟಕ ಚಲನಚಿತ್ರ ನಿರ್ದೇಶಕ ಸಂಘದ ಅಧ್ಯಕ್ಷ ಎನ್ನಾರ್ ಕೆ. ವಿಶ್ವನಾಥ್, ಉಪಾಧ್ಯಕ್ಷ ನಾಗೇಂದ್ರ ಅರಸ್, ಖಜಾಂಚಿ ಮಂಜು, ನಟ ಅಮಿತ್, ನಿರ್ದೇಶಕ ಮಹೇಶ್ ಕುಮಾರ್ ಮೊದಲಾದವರು ‘ಲವ್’ ಸಿನಿಮಾದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಹಾಜರಿದ್ದು, ಚಿತ್ರತಂಡಕ್ಕೆ ಶುಭ ಕೋರಿದರು.ಈ ಹಿಂದೆ ‘ಓ’ ಎಂಬ ಹಾರರ್ ಸಿನಿಮಾ ನಿರ್ದೇಶಿಸಿದ್ದ ಮಹೇಶ ಸಿ. ಅಮ್ಮಳ್ಳಿದೊಡ್ಡಿ ನಿರ್ದೇಶನದಲ್ಲಿ ‘ಲವ್’ ಸಿನಿಮಾ ಮೂಡಿಬಂದಿದೆ. ಪ್ರಜಯ್ ಜಯರಾಮ್ ಹಾಗೂ ವೃಷ ಪಾಟೀಲ ಈ ಸಿನಿಮಾದ ಮೂಲಕ ನಾಯಕ-ನಾಯಕಿಯಾಗಿ ಸ್ಯಾಂಡಲ್ ವುಡ್ ಗೆ ಪರಿಚಯವಾಗುತ್ತಿದ್ದಾರೆ.
ಪ್ರಭಾಕರ್ ಕುಂದರ್, ಸತೀಶ್, ಉಮೇಶ್, ಶ್ರೀಕಾಂತ್ ತೇಲಿ, ರಾಧಿಕಾ ಭಟ್, ತಿಲಕ, ಪ್ರಸಾದ್ ಭಟ್, ಹರೀಶ್ ಶೆಟ್ಟಿ, ಸೌರಭ್ ಶಾಸ್ತ್ರೀ, ರಜತ್ ಶೆಟ್ಟಿ ಹಲವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.‘ಲವ್’ ಸಿನಿಮಾದ ಟೈಟಲ್ಲೇ ಹೇಳುವಂತೆ, ಇದೊಂದು ಪ್ರೇಮ ಕಥಾಹಂದರದ ಚಿತ್ರ. ಹಿಂದೂ ಹುಡುಗ ಹಾಗೂ ಮುಸ್ಲಿಂ ಹುಡುಗಿಯ ನಡುವೆ ಪ್ರೀತಿಗೆ ಮನೆಯವರು, ಇಡೀ ಸಮಾಜದವರು ಎದುರು ನಿಂತಾಗ ಏನಾಗುತ್ತದೆ ಎಂಬ ಸುತ್ತ ‘ಲವ್’ ಸಿನಿಮಾದ ಕಥೆ ಸಾಗುತ್ತದೆ. ಸದ್ಯ ಬಿಡುಗಡೆಯಾಗಿರುವ ಟ್ರೇಲರಿನಲ್ಲಿ ಕಥೆಯ ಎಳೆಯ ಸಣ್ಣ ಝಲಕ್ ಬಿಟ್ಟುಕೊಡಲಾಗಿದೆ.
‘ಶ್ರೀಕಾಲ ಭೈರವೇಶ್ವರ ಮೂವೀ ಮೇಕರ್ಸ್’ ನಡಿ ದಿವಾಕರ್ ‘ಲವ್’ ಚಿತ್ರ ನಿರ್ಮಿಸಿದ್ದು, ಸಿದ್ದಾರ್ಥ್ ಹೆಚ್. ಆರ್ ಛಾಯಾಗ್ರಹಣ, ರೋಸಿತ್ ವಿಜಯನ್, ಶ್ರೀ ಸಾಯಿ ಕಿರಣ್ ಸಂಗೀತ, ಶಿವಪ್ರಸಾದ್ ಹಿನ್ನೆಲೆ ಸಂಗೀತ, ಲೋಕೇಶ್ ಪುಟ್ಟೇಗೌಡ ಸಂಕಲನವಿದೆ. ಇದೇ ಅ. 6ಕ್ಕೆ ‘ಲವ್’ ಸಿನಿಮಾ ರಿಲೀಸ್ ಆಗುತ್ತಿದೆ. ನೈಜ ಘಟನೆಯ ಪ್ರೇರಿತವಾದ ಕಥೆಯಾಗಿರುವ ‘ಲವ್’ ಸಿನಿಮಾವನ್ನು ಉಡುಪಿ, ಕೋಟ, ಕುಂದಾಪುರ, ಬೈಂದೂರ್, ಬಾಗಲಕೋಟೆ ಮತ್ತು ಬೆಂಗಳೂರು ಸುತ್ತಮುತ್ತ ಚಿತ್ರೀಕರಿಸಲಾಗಿದೆ.