ನಿಮ್ಮಿ ಡಾರ್ಲಿಂಗ್ ಅಂದರೆ ನಿಮ್ಮಲ್ಲಿ ಕೆಲವರಿಗೆ ಕನ್‍ಫ್ಯೂಶನ್ ಆಗ್ಬೋದು. ಆದರೆ, `ಪುಷ್ಪವತಿ ಅಂದರೆ ನಿಮ್ಮಲ್ಲಿ ಯಾರೊಬ್ಬರಿಗೂ ಕನ್‍ಫ್ಯೂಶನ್ ಆಗೋದಕ್ಕೆ ಸಾಧ್ಯನೇ ಇಲ್ಲ. ಯಾಕಂದ್ರೆ, ಸ್ಯಾಂಡಲ್ ವುಡ್ ಗೆ ಇರೋದು ಒಬ್ಬರೇ ಪುಷ್ಪವತಿ. ಆಕೆ ಪಡ್ಡೆಹೈಕ್ಳ ಹೃದಯದೊಡತಿ. ಡಿಬಾಸ್ ಜೊತೆ ಹೆಜ್ಜೆ ಹಾಕಿ ಅಭಿಮಾನಿಗಳ ಜೊತೆ ಬೆಳ್ಳಿತೆರೆಯನ್ನೂ ಕುಣಿಸಿದ, ಬಾಕ್ಸ್ ಆಫೀಸ್ ಶೇಕ್ ಮಾಡಿದ ಬೊಂಬಾಟ್ ಬ್ಯೂಟಿ. ಕಣ್ಮುಚ್ಚಿ ತೆಗೆಯೋದ್ರೊಳಗೆ ಕರುನಾಡ ಕ್ರಷ್ ಪಟ್ಟಕ್ಕೇರಿದಾಕೆ. ಮುತ್ತಿನ ಪಲ್ಲಕ್ಕಿಯಲ್ಲಿ ಕುಳಿತು ಕರುನಾಡ ತುಂಬೆಲ್ಲಾ ದಿಬ್ಬಣ ಹೋಗಿಬಂದಾಕೆ. ಹೀಗಾಗಿ ಪುಷ್ಪವತಿ ಬಗ್ಗೆ ನಿಮ್ಮೆಲ್ಲರಿಗೂ ತಿಳಿದಿರುತ್ತೆ. ಕಡಲತಡಿಯ ಹುಡುಗಿ ನಿಮಿಕಾ ರತ್ನಾಕರ್ ಗಿರುವ ಕ್ರೇಜ್, ಡಿಮ್ಯಾಂಡ್ ಬಗ್ಗೆಯೂ ನಿಮ್ಮ ಗಮನಕ್ಕೆ ಬಂದಿರುತ್ತೆ.
ಅಷ್ಟಕ್ಕೂ, ನಾವ್ ಇವತ್ತು ಪುಷ್ಪವತಿ ಬಗ್ಗೆ ಮಾತನಾಡ್ತಿರುವುದಕ್ಕೆ ಕಾರಣ ಇಂದು ಆಕೆಯ ಬರ್ತ್‍ಡೇ. ಇಲ್ಲಿತನಕದ ಹುಟ್ಟುಹಬ್ಬದ ಸಂಭ್ರಮಾಚರಣೆಗಿಂತ ಈ ವರ್ಷದ ಬರ್ತ್‍ಡೇ ತುಂಬಾನೇ ಸ್ಪೆಷಲ್. ಅದು ಯಾಕೇ? ಹೇಗೆ ಅಂತ ನಮ್ಮ ಜೊತೆ ವಿವರಿಸಿದ ಪುಷ್ಪವತಿ, ಚಾಲೆಂಜಿಂಗ್ ಸ್ಟಾರ್ ಕ್ರಾಂತಿ, ಡಿಬಾಸ್ ಸೆಲೆಬ್ರಿಟಿಸ್ ಕೊಟ್ಟ ಕಿರೀಟ, ರಿಯಲ್ ಸ್ಟಾರ್ ಉಪ್ಪಿ ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ನಟಿಸಿದ `ತ್ರಿಶೂಲಂ’ ಚಿತ್ರದ ಕುರಿತು ಒಂದಿಷ್ಟು ಇಂಟ್ರೆಸ್ಟಿಂಗ್ ವಿಚಾರಗಳನ್ನ ಹಂಚಿಕೊಂಡಿದ್ದಾರೆ. ಅದೆಲ್ಲವನ್ನೂ ನಿಮ್ಮ ಮುಂದೆ ಹರವಿಡಲೆಂದೆ ಹೊತ್ತು ಬಂದಿದ್ದೇವೆ.
ಆಗಸ್ಟ್ 01, ಈ ದಿನಕ್ಕಾಗಿ ಇಷ್ಟು ವರ್ಷ ನಿಮ್ಮಿ ಹಾಗೂ ನಿಮ್ಮಿ ಫ್ಯಾಮಿಲಿ ಮಾತ್ರ ಎದುರುನೋಡ್ತಿತ್ತು. ಆದರೆ, ಈ ವರ್ಷ ನಿಮ್ಮಿ ಕುಟುಂಬದ ಜೊತೆಗೆ ಸಮಸ್ತ ಡಿಬಾಸ್ ಅಭಿಮಾನಿಗಳು ಕಾಯ್ತಿದ್ದರು. ಬಹುಷಃ ಈ ಮಾತು ಅತಿಶಯೋಕ್ತಿಯೆನಿಸಲ್ಲ ಎಂಬುದಕ್ಕೆ ದಚ್ಚು ಭಕ್ತಬಳಗದಿಂದ ಹರಿದುಬರುತ್ತಿರುವ ಹುಟ್ಟುಹಬ್ಬದ ಶುಭಾಷಯದ ಮಹಾಪೂರವೇ ಉದಾಹರಣೆ. ಅಂದ್ಹಾಗೇ, ಡಿಬಾಸ್ ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಬರೀ ವಿಶ್ ಮಾಡಿ ಸುಮ್ಮನಾಗುತ್ತಿಲ್ಲ ಬದಲಾಗಿ ಪುಷ್ಪವತಿನಾ ಹುಡುಕಿಕೊಂಡು ಮನೆವರೆಗೂ ಹೋಗಿದ್ದಾರೆ. ಕೇಕ್ ಮೇಲ್ ಕಟ್ ಮಾಡ್ಸಿ, ತಿನ್ಸಿ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಿದ್ದಾರೆ. ಇದೇ ಮೊದಲ ಭಾರಿಗೆ ಇದನ್ನೆಲ್ಲಾ ಕಾಣುತ್ತಿರುವ ಕಡಲತಡಿಯ ಬೆಡಗಿ ಬೆಕ್ಕಸ ಬೆರಗಾಗಿದ್ದಾರೆ. ಕೋಟ್ಯಾಂತರ ಅಭಿಮಾನಿ ದೇವರುಗಳ ಒಡೆಯನಿಗೆ ನಮಸ್ಕರಿಸುತ್ತಾ, ಮನಸ್ಸು ಬೆಚ್ಚಿ ನಮ್ಮೊಟ್ಟಿಗೆ ಮಾತನಾಡಿದ್ದಾರೆ.
ಕ್ರಾಂತಿಗೂ ಮೊದಲು ಲೀಡ್ ರೋಲ್ ನಲ್ಲಿ ಅಭಿನಯಿಸಿದ್ದೆ ಆದರೆ ಸ್ಪೆಷಲ್ ಅಪಿಯರೆನ್ಸ್ ನಿಂದ ಕ್ರಾಂತಿ ತಂದುಕೊಟ್ಟ ಖ್ಯಾತಿ ನನ್ನ ಕರಿಯರ್ ಗೆ ಕಳಸಪ್ರಾಯ. ಅದ್ರಲೂ ಡಿಬಾಸ್ ಸೆಲೆಬ್ರಿಟಿಸ್ ಗಳು ತೊಡಿಸಿದ ಕರ್ನಾಟಕ ಕ್ರಷ್ ಕಿರೀಟಕ್ಕೆ ಬೆಲೆ ಕಟ್ಟಲು ಸಾಧ್ಯಾನೇ ಇಲ್ಲ. ಅವರು ತೋರಿಸುವ ಪ್ರೀತಿ ಹಾಗೂ ಕಾಳಜಿಗೆ ಧನ್ಯ ಎನ್ನುವ ನಿಮಿಕಾ, ಕರ್ನಾಟಕದ ಮೂಲೆ ಮೂಲೆ ತಲುಪುವುದಕ್ಕೆ, ಕನ್ನಡಿಗರ ಪ್ರೀತಿ, ವಿಶ್ವಾಸ ಗಳಿಸುವುದಕ್ಕೆ ಕ್ರಾಂತಿ ಚಿತ್ರವೇ ಕಾರಣ ಅಂತಾರೇ. ಪುಷ್ಪವತಿ ನಂತರ ಶ್ರುತಿಯಾಗಿ ಕರುನಾಡಿನ ಅಂಗಳದಲ್ಲಿ ಸಂಚಲನ ಮೂಡಿಸಲು ಸಜ್ಜಾಗುತ್ತಿದ್ದಾರೆ.
ಯಸ್,ಪುಷ್ಪವತಿಯಾಗಿ ನಿಮ್ಮನ್ನೆಲ್ಲಾ ಕುಂತಲ್ಲೇ ಕುಣಿಸಿದ ನಿಮಿಕಾ ಈಗ ಶ್ರುತಿಯಾಗಿ ರಿಯಲ್ ಸ್ಟಾರ್ ಗೆ ಜೋಡಿಯಾಗಿದ್ದಾಳೆ. ಓಂ ಪ್ರಕಾಶ್ ರಾವ್ ನಿರ್ದೇಶನದ ತ್ರಿಶೂಲಂ ಚಿತ್ರದಲ್ಲಿ ಉಪ್ಪಿ, ಪುಷ್ಪ ಜತೆಯಾಗಿದ್ದು, ರವಿಮಾಮನೊಟ್ಟಿಗೂ ಕೆಲವು ಸೀನ್ ಗಳಲ್ಲಿ ಸ್ಕ್ರೀನ್ ಶೇರ್ ಮಾಡಿದ್ದಾಳೆ. ಸ್ಯಾಂಡಲ್ ವುಡ್ ನ ರಣಧೀರ ಹಾಗೂ ಕಠಾಧೀವೀರನೊಟ್ಟಿಗೆ ನಟಿಸೋ ಚಾನ್ಸ್ ಗಿಟ್ಟಿಸಿಕೊಂಡಿರುವ ಕರಾವಳಿ ಬೆಡಗಿ ತ್ರಿಶೂಲಂ ಬಿಡುಗಡೆಗಾಗಿ ಕುತೂಹಲದಿಂದ ಕಾಯ್ತಿರುವುದಾಗಿ ಹೇಳಿಕೊಳ್ತಾರೆ
ಪುಷ್ಪವತಿ ಹಾಡಿನಂತೆ ತ್ರಿಶೂಲಂ ಚಿತ್ರದಲ್ಲೂ ಸ್ಪೆಷಲ್ ಸಾಂಗ್ ಇದೆ. ಒಟ್ಟು ಎರಡು ಹಾಡುಗಳಲ್ಲಿ ನಾನು ಚೆಂದ ಕಂಡಿದ್ದೇನೆ. ಮಾಸ್ ಸಿನಿಮಾ ಆದರೂ ಕೂಡ ನನ್ನನ್ನ ತುಂಬಾ ಚೆನ್ನಾಗಿ ತೋರಿಸಿದ್ದಾರೆ. ಫಸ್ಟ್ ಹಾಫ್ ಫುಲ್ ಫನ್, ಸೆಕೆಂಡ್ ಹಾಫ್ನಲ್ಲಿ ಸೀರಿಯಸ್ಸಾಗಿ ನನ್ನ ಪಾತ್ರ ಸಾಗುತ್ತೆ. ಸೆಟ್ನಲ್ಲಿ ಉಪ್ಪಿ ಸರ್, ರವಿ ಸರ್, ಸಾಧು ಕೋಕಿಲ ಸರ್, ನಿರ್ದೇಶಕ ಓಂ ಪ್ರಕಾಶ್ ರಾವ್ ನಾಲ್ಕು ಜನ ಇದ್ದಿದ್ದರಿಂದ ಕಲಿಯೋದಕ್ಕೆ ತುಂಬಾ ಸಿಗ್ತು ಅಂತಾರೇ. ಅಂದ್ಹಾಗೇ, ಇಂತಹ ಅವಕಾಶ ಎಲ್ಲಾ ನಟಿಯರಿಗೂ ಅಂಬೆಗಾಲಿಡುವ ಹೊತ್ತಲ್ಲಿ ಸಿಗೋದಿಲ್ಲ.ಆದರೆ, ನಿಮಿಕಾಗೆ ಮೊದಲೆರಡು ಹೆಜ್ಜೆಯಲ್ಲೇ ಅವಕಾಶ ಅರಸಿಕೊಂಡು ಬಂದಿದೆ. ಚಾಲೆಂಜಿಂಗ್ ಸ್ಟಾರ್ ಬೆನ್ನಲ್ಲೇ ರಿಯಲ್ ಸ್ಟಾರ್, ಕ್ರೇಜಿಸ್ಟಾರ್ ಜೊತೆ ಬೆಳ್ಳಿ ಪರದೆ ಮೇಲೆ ಮೆರವಣಿಗೆ ಹೊರಡುವ ಚಾನ್ಸ್ ಸಿಕ್ಕಿದೆ.
ಇನ್ನೂ ತ್ರಿಶೂಲಂ ಶೂಟಿಂಗ್ ನಡೀತಿದೆ. ಈ ಮಧ್ಯೆ ನಿರ್ದೇಶಕ ಓಂ ಪ್ರಕಾಶ್ ರಾವ್ ಮತ್ತೊಂದು ಸಿನಿಮಾ ಅನೌನ್ಸ್ ಮಾಡಿದ್ದಾರೆ. ಫೀನಿಕ್ಸ್ ಹೆಸರಿಟ್ಟು ಫೀನಿಕ್ಸ್ ಹಕ್ಕಿಯಂತೆ ಅಖಾಡಕ್ಕಿಳಿಯುವುದಾಗಿ ಸೂಚನೆ ಕೊಟ್ಟಿದ್ದಾರೆ. ಇದಕ್ಕೆ ಮೂರು ಜನ ನಾಯಕಿಯರಿದ್ದು, ನಟಿ ನಿಮಿಕಾ ರತ್ನಾಕರ್ ಕೂಡ ಲೀಡ್ ರೋಲ್ ಪ್ಲೇ ಮಾಡ್ತಿದ್ದಾರೆ. ಹೀಗೆ, ಒಂದೊಂದೇ ಅವಕಾಶ ಪುಷ್ಪವತಿ ಅಕೌಂಟ್ ಗೆ ಜಮೆಯಾಗ್ತಿದೆ. ನಾಲ್ಕೈದು ಸಿನಿಮಾಗಳಿಗೆ ಶೀಘ್ರದಲ್ಲೇ ಆನ್ ಬೋರ್ಡ್ ಆಗುವ ಸಾಧ್ಯತೆ ಇದೆ. ಒಟ್ನಲ್ಲಿ ಪುಷ್ಪವತಿಗೆ ಬಜಾರ್ ನಲ್ಲಿ ಬೇಡಿಕೆ ಹೆಚ್ಚುತ್ತಿದೆ. ರಾಮಧಾನ್ಯ, ಅಬ್ಬರ, ಮಿಸ್ಟರ್ ಬ್ಯಾಚುಲರ್ ನಂತರ ಬಿಗ್ ಸ್ಟಾರ್ ಜೊತೆಗೆ ತ್ರಿಶೂಲಂ ಚಿತ್ರದಲ್ಲಿ ನಟಿಸಿದ್ದು ಸ್ವತಃ ನಿಮಿಕಾ ಕುತೂಹಲದಿಂದ ಕಾಯ್ತಿದ್ದಾರೆ. ಸಿನಿಮಾ ಜೊತೆಗೆ ಮಾಡೆಲಿಂಗ್ ಲೋಕದಲ್ಲೂ ಸಕ್ರಿಯವಾಗಿರುವ, ಮಿಸ್ ಇಂಡಿಯಾ ಸೂಪರ್ ಟ್ಯಾಲೆಂಟೆಡ್ ಎನಿಸಿಕೊಂಡಿರುವ ನಿಮಿಕಾ ರತ್ನಾಕರ್ ಸದ್ಯ ಸ್ಯಾಂಡಲ್ ವುಡ್ ಅಂಗಳದಲ್ಲಿ ಕರ್ನಾಟಕ ಕ್ರಷ್ ಆಗಿ ಮೆರೆಯುತ್ತಿದ್ದಾರೆ. ಈಕೆಯ ಚಾರ್ಮ್ ನೋಡಿದರೆ ಮುಂದೊಂದು ದಿನ ಡಿಪ್ಪಿಯಂತೆ ಬಾಲಿವುಡ್ ಅಂಗಳಕ್ಕರ ಜಿಗಿದು ಬ್ಯಾಂಗ್ ಮಾಡುವ ಲಕ್ಷಣಗಳು ಕಾಣ್ತಿವೆ. ಎನಿವೇ ಆಲ್ ದಿ ಬೆಸ್ಟ್ ನಿಮ್ಮಿ, ಕೀಪ್ ರಾಕಿಂಗ್