ಸ್ಯಾಂಡಲ್‍ವುಡ್ ಸುಂದರಿಯರು ಪರಭಾಷಾ ನಟಿಮಣಿಯರಿಗಿಂತ ನಾವು ಯಾವುದ್ರಲ್ಲೂ ಕಮ್ಮಿಯಿಲ್ಲ ಎಂಬುದನ್ನು ಪ್ರೂ ಮಾಡುತ್ತಿದ್ದಾರೆ. ಸದ್ಯ ಚಂದನವನದ ಚೆಂದುಳ್ಳಿ ಚೆಲುವೆ ನಿಶ್ವಿಕಾ ನಾಯ್ಡು, ನಟಸಾರ್ವಭೌಮ ಡಾ. ರಾಜ್‍ಕುಮಾರ್ ಥರ ಯೋಗ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ. ಅಚ್ಚರಿ ಅಂದರೆ ಹಠಯೋಗ ಮಾಡಿ ಬಾಲಿವುಡ್ ಬ್ಯೂಟಿ ಶಿಲ್ಪಾಶೆಟ್ಟಿಯ ಹೊಟ್ಟೆಯಲ್ಲಿ ಅಸಿಡಿಟಿ ಶುರುವಾಗಲಿಕ್ಕೆ ಕಾರಣವಾಗಿದ್ದಾರೆ. ಅರ್ರೇ ನಿಶ್ಚಿಕಾ ಯೋಗ ಮಾಡಿದರೆ, ಶಿಲ್ಪಾ ಹೊಟ್ಟೆಯಲ್ಲ್ಯಾಕೆ ಉರಿ ಅಂತೀರಾ ಕಂಪ್ಲೀಟ್ ಈ ಸ್ಟೋರಿ ನೋಡಿ
ಯೋಗಾಸನ ಮಾಡೋದ್ರಲ್ಲಿ ಬಾಜೀಘರ್ ಬ್ಯೂಟಿ ಶಿಲ್ಪಾಶೆಟ್ಟಿ ಎತ್ತಿದ ಕೈ. ವಯಸ್ಸು 48 ಆದ್ರೂ ಸ್ವೀಟ್ 16 ಥರ ಕಾಣೋದಕ್ಕೆ ಮಂಗಳೂರು ಚೆಲುವೆ ಹಾಕುವ ಯೋಗದ ವಿವಿಧ ಭಂಗಿಗಳು ಕಾರಣ ಅಂದರೆ ಬಹುಷಃ ತಪ್ಪಾಗಲಿಕ್ಕಿಲ್ಲ. ಆದರೆ, ಬಾಲಿವುಡ್‍ನ ಈ ಜಿರೋ ಸೈಜ್ ಫಿಗರ್‍ಗೆ ನಮ್ಮ ಸ್ಯಾಂಡಲ್‍ವುಡ್‍ನ ಸೂಜಿ ಉರುಫ್ ನಿಶ್ವಿಕಾ ನಾಯ್ಡು ಟಕ್ಕರ್ ಕೊಟ್ಟಿದ್ದಾಳೆ. ಹೊಟ್ಟೆನಾ ಒಳಕ್ಕೆ ಎಳೆದುಕೊಂಡು ತಿರುತಿರುಗಿಸಿ ಹೊರಬಿಟ್ಟು ನೋಡುಗರನ್ನ ಮಾತ್ರವಲ್ಲ ಸ್ವತಃ ಬಾಜೀಘರ್ ಬೆಡಗಿಯನ್ನ ಬೆಕ್ಕಸ ಬೆರಗಾಗಿಸಿದ್ದಾಳೆ.
ಯೋಗದ ಮೊರೆ ಹೋಗುವ ಯಾವುದೇ ನಟಿಯರನ್ನ ತಗೊಳ್ಳಿ ಅವರು ಹೊಟ್ಟೆನಾ ಒಳಕ್ಕೆ ಎಳೆದುಕೊಂಡು ತಿರುತಿರುಗಿಸಿ ಹೊರಬಿಡುವ ಉದ್ದಿಯಾನ ಬಂಧವನ್ನು ಅಭ್ಯಾಸ ಮಾಡುವುದು ತೀರಾ ಕಡಿಮೆ. ಪದ್ಮಾಸನ, ವೃಕ್ಷಾಸನ, ಚಕ್ರಾಸನ, ಶೀರ್ಷಾಸನ, ಭುಜಂಗಾಸನ ಸೇರಿದಂತೆ ವಿವಿಧ ಭಂಗಿಗಳನ್ನ ಕಲಿತು ಪ್ರಯೋಗಿಸುವ ಸುಂದರಿಯರು `ಉದ್ದಿಯಾನ ಬಂಧ’ವನ್ನ ಸಿದ್ದಿಸಿಕೊಳ್ಳುವಲ್ಲಿ ವಿಫಲರಾಗುತ್ತಾರೆ. ಆದರೆ, ಪಡ್ಡೆಹುಲಿ ಚಿತ್ರದ ಹೆಣ್ಣುಲಿ `ಉದ್ದಿಯಾನ ಬಂಧ’ ಕಲಿತು ಕರಗತ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗೋದ್ರ ಜೊತೆಗೆ ಅಣ್ಣಾವ್ರನ್ನ ಕಣ್ಮುಂದೆ ತಂದು ನಿಲ್ಲಿಸಿದ್ದಾಳೆ.
ಹೌದು, `ಉದ್ದಿಯಾನ ಬಂಧ’ ಭಂಗಿಯನ್ನು ಹಾಕುವುದರಲ್ಲಿ ಅಣ್ಣಾವ್ರು ನಿಸ್ಸೀಮರಾಗಿದ್ದರು. ಕಾಮನಬಿಲ್ಲು ಚಿತ್ರದಲ್ಲಿ ಅಣ್ಣಾವ್ರು ಮಾಡಿ ತೋರಿಸಿದ ಯೋಗದ ವಿವಿಧ ಆಸನಗಳನ್ನು ನೋಡಿ ಇಡೀ ಕರುನಾಡು ಶರಣೆಂದಿತ್ತು. ಇವತ್ತಿಗೂ ಯೋಗ ಅಂದಾಕ್ಷಣ ವರನಟ ಡಾ. ರಾಜ್‍ಕುಮಾರ್ ಅವರು ಕಣ್ಮುಂದೆ ಬರುತ್ತಾರೆ. ಯೋಗದಲ್ಲಿ ತೊಡಗಿಸಿಕೊಳ್ಳುವುದಕ್ಕೆ ಸ್ಪೂರ್ತಿಯಾಗುತ್ತಾರೆ. ಇದೀಗ ನಟಿ ನಿಶ್ವಿಕಾ ನಾಯ್ಡು ಅಣ್ಣಾವ್ರಂತೆ ನೌಲಿ ಕ್ರಿಯಾ ಯೋಗ ಮಾಡುವ ಮೂಲಕ ಪ್ರೇರಣೆಯಾಗಿದ್ದಾರೆ.
ಕರೋನಾ ಟೈಮ್ನಲ್ಲಿ ನಿಶ್ವಿಕಾ ನಾಯ್ಡು ಯೋಗದ ಮೊರೆ ಹೋಗ್ತಾರೆ. ಬೇಸಿಕ್ ಯೋಗವನ್ನು ಕಲಿಯೋದಕ್ಕೆ ಶುರುಮಾಡಿದ ನಿಶ್ವಿಕಾ ಇವತ್ತು ಹಠಯೋಗದಲ್ಲಿ ನಿಪುಣತೆ ಸಾಧಿಸಿದ್ದಾರೆ. ಯೋಗದಿಂದ ಬರೀ ಫಿಟ್ನೆಸ್‍ನಷ್ಟೇ ಕಾಯ್ದುಕೊಂಡಿಲ್ಲ ಬದಲಾಗಿ ಆಂತರಿಕ ಶಾಂತಿ, ನೆಮ್ಮದಿ ಕಂಡುಕೊಂಡಿದ್ದೇನೆ ಎನ್ನುವ ಈ ನಟಿ, ಸ್ಯಾಂಡಲ್‍ವುಡ್ ಅಂಗಳದಲ್ಲಿ ಸ್ಟಾರ್ ನಾಯಕಿಯಾಗುವತ್ತ ಮುನ್ನುಗುತ್ತಿದ್ದಾರೆ. `ಅಮ್ಮಾ ಐ ಲವ್ ಯೂ’ ಚಿತ್ರದ ಮೂಲಕ ಚಂದನವನ ಪ್ರವೇಶಿಸಿದ ಕನ್ನಡದ ಹುಡುಗಿ ನಿಶ್ವಿಕಾ, ವಾಸು ನಾನ್ ಪಕ್ಕಾ ಕಮರ್ಷಿಯಲ್, ಪಡ್ಡೆಹುಲಿ, ಜೆಂಟಲ್‍ಮ್ಯಾನ್, ರಾಮಾರ್ಜುನ, ಸಖತ್, ಗುರು ಶಿಷ್ಯರು, ದಿಲ್ ಪಸಂದ್ ಚಿತ್ರದಲ್ಲಿ ನಟಿಸಿದ್ದಾರೆ. ಸದ್ಯ, ಯೋಗರಾಜ್ ಭಟ್ ನಿರ್ದೇಶನದ ಕರಟಕ ದಮನಕ ಚಿತ್ರದ ನಾಯಕಿಯಾಗಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್, ಡ್ಯಾನ್ಸಿಂಗ್ ಐಕಾನ್ ಪ್ರಭುದೇವ್ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ಸದ್ಯ `ಉದ್ದಿಯಾನ ಬಂಧ’ ಯೋಗ ಮಾಡುವ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ.
ಒಟ್ನಲ್ಲಿ ಹಠಕ್ಕೆ ಬಿದ್ದಂತೆ ಹಠಯೋಗ ಮಾಡಿ ತೋರಿಸಿರುವ ನಿಶ್ವಿಕಾನ ನೋಡಿದರೆ ಶಿಲ್ಪಾಶೆಟ್ಟಿಗೆ ಮಾತ್ರವಲ್ಲ ಸಮಸ್ತ ಯೋಗಪ್ರಿಯರ ಹೊಟ್ಟೆಯಲ್ಲಿ ಸಣ್ಣಗೆ ಅಸಿಡಿಟಿ ಶುರುವಾಗುತ್ತೆ. ನಿಶ್ವಿಕಾ ಥರ ನಾನು `ಉದ್ದಿಯಾನ ಬಂಧ’ ಯೋಗ ಮಾಡಿ ತೋರಿಸ್ಬೇಕು ಎನ್ನುವ ಛಲ ಹುಟ್ಟಿಕೊಳ್ಳುತ್ತೆ. ಕಾದುನೋಡೋಣ ಯಾರ್ಯಾರು ಹಠಕ್ಕೆ ಬಿದ್ದು ಹಠಯೋಗ ಮಾಡ್ತಾರೆ ಅಂತ.