Nishvika Naidu: ಪಡ್ಡೆಹುಲಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ನಟಿ ನಿಶ್ವಿಕಾ ನಾಯ್ಡು. ಮೊದಲ ಸಿನಿಮಾ ಗೆಲ್ಲಲಿಲ್ಲ. ನಂತರ ನಟಿಸಿದ ಸಿನಿಮಾಗಳು ಆಟಕ್ಕುಂಟು ಲೆಕ್ಕಕಿಲ್ಲದಂತಾಗಿದೆ. ಬಿಗ್ ಹಿಟ್‌ಗಾಗಿ ಪರಿತಪಿಸುತ್ತಿರುವ ನಟಿ ಇಂದೇಕೋ ಭಾವನಾತ್ಮಕ ಪೋಸ್ಟ್ ಹಾಕಿ ನೋವು ಹಂಚಿಕೊಂಡಿದ್ದಾರೆ.
ನಿಶ್ವಿಕಾ ನಾಯ್ಡು(Nishvika Naidu) ಆರಂಭದಿಂದಲೂ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಸ್ಥಾನಕ್ಕೇರಲು ಪ್ರಯತ್ನಿಸುತ್ತಲೇ ಇದ್ದಾರೆ. ಆದರೆ ಆಯ್ಕೆ ಮಾಡಿಕೊಂಡ ಸಿನಿಮಾಗಳೋ ಅಥವಾ ನಸೀಬೋ ಯಾವ ಸಿನಿಮಾಗಳು ಕೈ ಹಿಡಿಯುತ್ತಿಲ್ಲ. ಯೋಗರಾಜ್ ಭಟ್ ಗರಡಿಯಲ್ಲಿ ಹೊಡಿರಲೇ ಹಲಗಿ ಹಾಡಿಗೆ ಹಾಟ್ ಆಗಿ ಸ್ಟೆಪ್ ಹಾಕಿ ಗಮನ ಸೆಳೆದ ನಟಿ ಮತ್ತದೇ ಭಟ್ಟರ ಕರಟಕ ದಮನಕ ಸಿನಿಮಾ ಹಾಡಿನಿಂದಲೇ ಜನಪ್ರಿಯತೆ ಗಳಿಸಿಕೊಂಡಿದ್ದಾರೆ. ಹಿತ್ತಲಕ ಕರಬ್ಯಾಡ ಮಾವಾ ಹಾಡು ಸಖತ್ ವೈರಲ್ ಆಗಿದ್ದು, ಇಂಡಿಯನ್ ಡಾನ್ಸ್ ಐಕಾನ್ ಪ್ರಭುದೇವ ಜೊತೆ ಮಸ್ತ್ ಸ್ಟೆಪ್ ಹಾಕಿ ನಿಶ್ವಿಕಾ ಕೂಡ ಭೇಷ್ ಎನಿಸಿಕೊಂಡಿದ್ದಾರೆ. ಆದ್ರೆ ಆಕೆಗೊಂದು ನೋವು ಬೆನ್ ಬಿಡದೇ ಕಾಡುತ್ತಿದೆ. ಅದುವೇ ಆಕೆಯ ಪ್ರೀತಿಯ ಶ್ವಾನ ಲಿಯೋ.
ನಿಶ್ವಿಕಾ ನಾಯ್ಡು(Nishvika Naidu) ಹಾಗೂ ಆಕೆಯ ಕುಟುಂಬ ಪ್ರೀತಿಯಿಂದ ಸಾಕಿದ್ದ ಲಿಯೋ ಶ್ವಾನ ಕಳೆದ ಡಿಸೆಂಬರ್‌ನಲ್ಲಿ ಅಸುನೀಗಿದ್ದು, ಇದ್ರಿಂದ ಆಘಾತ ಅನುಭವಿಸಿರುವ ನಟಿ ಆ ನೋವಿನಲ್ಲೇ ಇದ್ದಾರೆ. ಆದ್ರಿಂದ ಈ ಬಾರಿ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿಲ್ಲ ಎಂದಿದ್ದಾರೆ. ಈ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ನಟಿ ವೈಯಕ್ತಿಕ ಬದುಕಲ್ಲಿ ಆದ ಭಾವನಾತ್ಮಕ ಏರುಪೇರಿನಿಂದ ಆಚೆ ಬರಲು ಆಗುತ್ತಿಲ್ಲ. ಆದ್ರಿಂದ ಹುಟ್ಟುಹಬ್ಬ ಆಚರಣೆ ಮಾಡಿಕೊಳೋದಿಲ್ಲ. ಆ ದಿನ ಯಾರೂ ಮನೆ ಬಳಿ ಬರಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.