ಈ ಹಿಂದೆ ‘ಒಲವೇ ಮಂದಾರ’ ಎಂಬ ಸಿನಿಮಾ ತೆರೆಗೆ ಬಂದಿತ್ತು. ಜಯತೀರ್ಥ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾದಲ್ಲಿ ಶ್ರೀಕಿ ನಾಯಕನಾಗಿ ಕಾಣಿಸಿಕೊಂಡಿದ್ದರು. ಈಗ ಅದೇ ಹೆಸರಿನಲ್ಲಿ ‘ಒಲವೇ ಮಂದಾರ 2’ ಎಂಬ ಸಿನಿಮಾ ತೆರೆಗೆ ಬರುತ್ತಿದೆ. ಅಂದಹಾಗೆ, ಈಗಾಗಲೇ ಬಂದಿರುವ ‘ಒಲವೇ ಮಂದಾರ’ ಸಿನಿಮಾಕ್ಕೂ ಈಗ ಬರುತ್ತಿರುವ ‘ಒಲವೇ ಮಂದಾರ 2’ ಸಿನಿಮಾಕ್ಕೂ ಯಾವುದೇ ಸಂಬಂಧವಿಲ್ಲ. ಇದೊಂದು ಪ್ರೇಮಕಥಾಹಂದರದ ಸಿನಿಮಾ. ಈ ಸಿನಿಮಾದ ಕಥೆ ಹೊಂದಾಣಿಕೆಯಾಗುತ್ತದೆ ಎಂಬ ಕಾರಣಕ್ಕೆ ಚಿತ್ರತಂಡ ತಮ್ಮ ಸಿನಿಮಾಕ್ಕೂ ‘ಒಲವೇ ಮಂದಾರ 2’ ಎಂದು ಹೆಸರಿಟ್ಟುಕೊಂಡಿದೆಯಂತೆ
ಈಗಾಗಲೇ ‘ಒಲವೇ ಮಂದಾರ 2’ ಸಿನಿಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು ಸೆನ್ಸಾರ್ ಮುಂದಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಇದೇ ಸೆಪ್ಟೆಂಬರ್ 15ಕ್ಕೆ ಸಿನಿಮಾವನ್ನು ತೆರೆಗೆ ತರುವ ಯೋಚನೆಯಲ್ಲಿದೆ. ‘ಬಸವ ಕಂಬೈನ್ಸ್’ ಬ್ಯಾನರಿನಲ್ಲಿ ರಮೇಶ್ ಮಾರ್ಗೋಲ್ ಮತ್ತು ಟಿ. ಎಂ ಸತೀಶ್ ಜಂಟಿಯಾಗಿ ನಿರ್ಮಿಸುತ್ತಿರುವ ‘ಒಲವೇ ಮಂದಾರ 2’ ಸಿನಿಮಾಕ್ಕೆ ಎಸ್. ಆರ್ ಪಾಟೀಲ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ‘ಒಲವೇ ಮಂದಾರ 2’ ಸಿನಿಮಾಕ್ಕೆ ‘ಒಂದು ಮುತ್ತಿನ ಕಥೆ’ ಎಂಬ ಅಡಿಬರಹವಿದೆ. ಪ್ರೀತಿಸೋದು ತಪ್ಪಲ್ಲ… ಪೋಷಕರು ಅದನ್ನು ನೋಡುವ ದೃಷ್ಟಿ ಬದಲಾಗಬೇಕು ಎಂಬ ಸಂದೇಶ ಸಿನಿಮಾದಲ್ಲಿದೆ, ಕಥೆಗೆ ಹೊಂದಾಣಿಕೆಯಾಗುತ್ತದೆ ಎಂಬ ಕಾರಣಕ್ಕೆ ಈ ಟೈಟಲ್ ಇಡಲಾಗಿದೆ ಎಂಬುದು ಚಿತ್ರತಂಡದ ಮಾತು.
ಸನತ್ ನಾಯಕನಾಗಿ ಅಭಿನಯಿಸುತ್ತಿರುವ ‘ಒಲವೇ ಮಂದಾರ 2’ ಸಿನಿಮಾದಲ್ಲಿ ಅನೂಪಾ, ಪ್ರಜ್ಞಾ ಭಟ್ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಭವ್ಯಾ, ವಿಜಯಲಕ್ಷ್ಮೀ, ಮಂಜುಳಾ ರೆಡ್ಡಿ, ಬೆನಕ ಮಂಜಪ್ಪ, ಡಿಂಗ್ರಿ ನಾಗರಾಜ್, ಮಡೆನೂರು ಮನು ಮೊದಲಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ಚಿತ್ರದ ನಾಲ್ಕು ಹಾಡುಗಳಿಗೆ ಡಾ. ಕಿರಣ್ ತೋಟಂಬೈಲು ಸಾಹಿತ್ಯ ಬರೆದು ಸಂಗೀತ ಸಂಯೋಜಿಸಿದ್ದಾರೆ. ಹೇಮಂತ್, ಅನುರಾಧಾ ಭಟ್, ಅಂಕಿತಾ ಮೊದಲಾದವರು ಸಿನಿಮಾದ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಚಿತ್ರಕ್ಕೆ ಆನಂದ ಇಳಯರಾಜ ಛಾಯಾಗ್ರಹಣ, ಮಧು ತುಂಬಕೆರೆ ಸಂಕಲನವಿದೆ. ಬೆಂಗಳೂರು, ಕಲಬುರಗಿ, ಚಿತ್ತಾಪುರ ಸುತ್ತಮುತ್ತ ಸಿನಿಮಾದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ.