ಕನ್ನಡ ಚಿತ್ರರಂಗದಲ್ಲಿ ‘ಲಾಕಪ್ ಡೆತ್’, ‘ಎ. ಕೆ. 47’, ‘ಮಂಡ್ಯ’, ‘ಹುಬ್ಬಳ್ಳಿ’ ಸೇರಿದಂತೆ ಅನೇಕ ಸೂಪರ್ ಹಿಟ್ ಆ್ಯಕ್ಷನ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಓಂ ಪ್ರಕಾಶ್ ರಾವ್ ನಿರ್ದೇಶನದ ಈಗ ಮತ್ತೊಂದು ಹೊಸ ಕ್ರೈಂ-ಥ್ರಿಲ್ಲರ್ ಸಿನಿಮಾಕ್ಕೆ ತಯಾರಾಗಿದ್ದಾರೆ. ಓಂ ಪ್ರಕಾಶ್ ರಾವ್ ನಿರ್ದೇಶನದ ಹೊಸ ಸಿನಿಮಾಕ್ಕೆ ‘ಫೀನಿಕ್ಸ್’ ಎಂದು ಹೆಸರಿಡಲಾಗಿದ್ದು, ಇತ್ತೀಚೆಗೆ ಈ ಸಿನಿಮಾದ ಮುಹೂರ್ತ ಸಮಾರಂಭ ಬೆಂಗಳೂರಿನ ಮಾಗಡಿ ರಸ್ತೆಯ ಅಂಗಾಳ ಪರಮೇಶ್ವರಿ ದೇವಸ್ಥಾನದಲ್ಲಿ ನೆರವೇರಿತು.
ಮಹಿಳಾ ಪ್ರಧಾನ ಮತ್ತು ಕ್ರೈಮ್-ಥ್ರಿಲ್ಲರ್ ಕಥಾಹಂದರ ಹೊಂದಿರುವ ‘ಫೀನಿಕ್ಸ್’ ಸಿನಿಮಾದಲ್ಲಿ ನಿಮಿಕಾ ರತ್ನಾಕರ್, ಕೃತಿಕಾ ಲೋಗೊ, ತನುಷಾ ರಜಪುತ್ ನಾಯಕಿಯರಾಗಿ ನಟಿಸುತ್ತಿದ್ದಾರೆ. ಭಾಸ್ಕರ್ ಶೆಟ್ಟಿ ಕಾಕ್ರೊಚ್ ಸುಧೀ, ವಿನೋದ್ ಕಿನ್ನಿ, ರೋಬೊ ಗಣೇಶ್, ಆರ್ಯನ್ ಮತ್ತಿತರರು ‘ಫೀನಿಕ್ಸ್’ ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಮುಹೂರ್ತದ ಬಳಿಕ ‘ಫೀನಿಕ್ಸ್’ ಸಿನಿಮಾದ ಬಗ್ಗೆ ಮಾತನಾಡಿದ ನಿರ್ದೇಶಕ ಓಂ ಪ್ರಕಾಶ್ ರಾವ್, ‘ಇದೊಂದು ಮಹಿಳಾ ಪ್ರಧಾನ ಸಿನಿಮಾ. ರಿಮೇಕ್ ಸಿನಿಮಾಗಳಿಗೆ ಬ್ರೇಕ್ ಹಾಕಿ ಸ್ವಮೇಕ್ ಚಿತ್ರವೊಂದನ್ನು ನಿರ್ದೇಶಿಸುತ್ತಿದ್ದೇನೆ. ಇದು ನನ್ನ ನಿರ್ದೇಶನದ 49ನೇ ಚಿತ್ರ. ಬೆಂಗಳೂರು, ಜರ್ಮನ್ ಹಾಗೂ ಆಸ್ಟ್ರೀಯಾ ದಲ್ಲಿ ಚಿತ್ರೀಕರಣ ನಡೆಯಲಿದೆ. ಮುಂದಿನ ವರ್ಷದ ಮಧ್ಯ ಭಾಗದಲ್ಲಿ ಸಿನಿಮಾವನ್ನು ತೆರೆಗೆ ತರುವ ಯೋಚನೆಯಿದೆ’ ಎಂದರು.
‘ಶ್ರೀ ಗುರು ಚಿತ್ರಾಲಯ’ ಬ್ಯಾನರ್ ನಲ್ಲಿ ತ್ರಿಶಾ ಪ್ರಕಾಶ್ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ‘ಫೀನಿಕ್ಸ್’ ಸಿನಿಮಾದ ಹಾಡುಗಳಿಗೆ ಸಾಧುಕೋಕಿಲ ಸಂಗೀತ ಸಂಯೋಜಿಸುತ್ತಿದ್ದು, ರವಿಕುಮಾರ್ ಛಾಯಾಗ್ರಹಣ, ಲಕ್ಷ್ಮಣ್ ರೆಡ್ಡಿ ಸಂಕಲನವಿದೆ. ಎಂ.ಎಸ್ ರಮೇಶ್ ಸಿನಿಮಾಕ್ಕೆ ಸಂಭಾಷಣೆ ಬರೆಯುತ್ತಿದ್ದಾರೆ. ಸದ್ಯ ‘ಫೀನಿಕ್ಸ್’ ಸಿನಿಮಾದ ಮುಹೂರ್ತ ನೆರವೇರಿಸಿರುವ ಚಿತ್ರತಂಡ, ಚಿತ್ರೀಕರಣದತ್ತ ಹೊರಟಿದೆ.