ಕನ್ನಡದ ಕೆಡಿ ಸಿನಿಮಾ ಸೆಟ್‍ನಲ್ಲಿ ಬಾಲಿವುಡ್ ನಟ ಸಂಜಯ್ ದತ್ತ್ ಗಾಯಗೊಂಡಿದ್ದಾರೆ ಎನ್ನಲಾಗಿತ್ತು. ಸೀಕ್ವೆನ್ಸ್ ಶೂಟಿಂಗ್ ಸಂದರ್ಭದಲ್ಲಿ ಅವಘಡ ಸಂಭವಿಸಿದ್ದು, ಸಂಜುಬಾಬ ಕಣ್ಣಿಗೆ, ಮುಖಕ್ಕೆ, ಮೊಣಕೈಗೆ ಪೆಟ್ಟಾಗಿರುವ ಬಗ್ಗೆ ಸುದ್ದಿ ಕೇಳಿಬಂದಿತ್ತು. ಈ ಕುರಿತು ಸ್ವತಃ ಸಂಜಯ್ ದತ್ತ್ ಸ್ಟೇಟಸ್ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ. ನಿರ್ದೇಶಕ ಜೋಗಿ ಪ್ರೇಮ್ ಕೂಡ ಘಟನೆಯ ಬಗ್ಗೆ ಕ್ಲ್ಯಾರಿಟಿ ನೀಡಿದ್ದಾರೆ.
ಕೆಡಿ ಶೂಟಿಂಗ್ ಸೆಟ್‍ನಲ್ಲಿ ದುರಂತ ಸಂಭವಿಸಿದೆಯಂತೆ. ಮಾಗಡಿ ರಸ್ತೆಯ ಸೀಗೆನಹಳ್ಳಿಯಲ್ಲಿ ಸಾಹಸ ಸನ್ನಿವೇಶದ ಚಿತ್ರೀಕರಣ ಮಾಡ್ತಿದ್ದಾಗ ಆಗಿದೆಯಂತೆ. ಆ್ಯಕ್ಷನ್ ಸೀಕ್ವೆನ್ಸ್‍ನಲ್ಲಿ ಭಾಗಿಯಾಗಿದ್ದ ಬಾಲಿವುಡ್ ನಟ ಸಂಜಯ್ ದತ್ತ್ ಗಂಭೀರವಾಗಿ ಗಾಯಗೊಂಡಿದ್ದಾರಂತೆ. ಗ್ಲಾಸ್ ಚೂರು ಕಣ್ಣಿಗೆ ಕೆಳಭಾಗಕ್ಕೆ ತಗುಲಿದ್ದರಿಂದ ಕಣ್ಣಿಗೆ ಹೊಡೆತ ಬಿದ್ದಿದೆ. ಮುನ್ನಭಾಯ್ ಮುಖಕ್ಕೆ, ಮೊಣಕೈಗೆ ಪೆಟ್ಟಾಗಿದೆ, ಶೂಟಿಂಗ್ ಸ್ಥಗಿತಗೊಳಿಸಿದ್ದು, ಸಂಜಯ್ ದತ್ತ್ ಅವರನ್ನು ಮುಂಬೈ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿದೆಅನ್ನೋ ಸುದ್ದಿ ನಿನ್ನೆ ಮಧ್ಯಾಹ್ನದ ಹೊತ್ತಿಗೆ ಬರಸಿಡಿಲಿನಂತೆ ಬಂದೆರಗಿತ್ತು. ಅಧೀರನ ಅಭಿಮಾನಿ ಬಳಗವನ್ನ ಆತಂಕ್ಕೀಡು ಮಾಡಿತ್ತು. ಘಟನೆ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದೇ, ಸಂಜುಬಾಬ ಸದ್ಯದ ಸ್ಥಿತಿ ಹೇಗಿದೆ ಎಂಬುದು ತಿಳಿಯದೇ ಫ್ಯಾನ್ಸ್ ಒದ್ದಾಡಿ ಹೋಗಿದ್ದರು. ಕೊನೆಗೆ ಬಾಬಾನೇ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.
ಕೆಡಿ ಚಿತ್ರೀಕರಣದ ಸಂದರ್ಭದಲ್ಲಿ ನಾನು ಗಾಯಗೊಂಡಿರೋ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡ್ತಿದೆ. ಆದರೆ, ಅದ್ಯಾವುದು ನಿಜವಲ್ಲ. ಕೇಳಿಬರುತ್ತಿರುವ ಎಲ್ಲಾ ಸುದ್ದಿಯೂ ಶುದ್ದಸುಳ್ಳು. ದೇವರ ದಯೆಯಿಂದ ನಾನು ಆರೋಗ್ಯವಾಗಿದ್ದೇನೆ. ಕೆಡಿ ಸಿನಿಮಾ ಚಿತ್ರೀಕರಣದಲ್ಲಿ ನಾನು ತೊಡಗಿಸಿಕೊಂಡಿದ್ದು, ನನ್ನ ಭಾಗದ ದೃಶ್ಯಗಳನ್ನ ಶೂಟಿಂಗ್ ಮಾಡುವಾಗ ಕೆಡಿ ಸಿನಿಮಾ ಟೀಮ್ ಸಾಕಷ್ಟು ಮುನ್ನಚರಿಕೆ ವಹಿಸ್ತಿದೆ. ಎನಿವೇ ನನ್ನ ಆರೋಗ್ಯದ ಬಗ್ಗೆ ಕಾಳಜಿವಹಿಸಿ ವಿಚಾರಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ ಬಾಲಿವುಡ್ ನಟ ಸಂಜಯ್ ದತ್ತ್.
ಅತ್ತ ಸಂಜಯ್ ದತ್ತ್ ಟ್ವೀಟ್ ಮಾಡಿ ಸ್ಪಷ್ಟನೆ ಕೊಟ್ಟ ಬೆನ್ನಲ್ಲೇ ಕೆಡಿ ಸಿನಿಮಾದ ನಿರ್ದೇಶಕ ಜೋಗಿ ಪ್ರೇಮ್ ಕೂಡ ಟ್ವೀಟ್ ಮಾಡಿ ಕ್ಲ್ಯಾರಿಟಿ ಕೊಟ್ಟಿದ್ದಾರೆ. ಕೆಡಿ ಸೆಟ್ನಲ್ಲಿ ದುರಂತ ಸಂಭವಿಸಿದೆ. ಬಾಲಿವುಡ್ ಬಾಬಾಗೆ ಗಂಭೀರ ಗಾಯಗಳಾಗಿದೆ ಎಂಬ ಸುದ್ದಿ ಹಬ್ಬಿಸುತ್ತಿದ್ದಾರೆ. ಘಟನೆ ನಡೆದಿರೋದೇನೋ ನಿಜ. ಆದರೆ, ನೀವು ಹೇಳ್ತಿರುವ ಹಾಗೇ ದೊಡ್ಡ ಅವಘಡವೇನಲ್ಲ. ಸಣ್ಣ ಘಟನೆ ಘಟಿಸಿದ್ದರಾದ್ರೂ ಸಂಜಯ್ ದತ್ತ್ ಆರೋಗ್ಯವಾಗಿದ್ದಾರೆ. ನಿಮ್ಮ ಪ್ರೀತಿ ಮತ್ತು ಕಾಳಜಿಗೆ ಧನ್ಯವಾದ ಎಂದಿರೋ ಪ್ರೇಮ್, ಶೂಟಿಂಗ್ ಭರದಿಂದ ಸಾಗ್ತಿರುವ ಬಗ್ಗೆ ಅಪ್‍ಡೇಟ್ ಕೊಟ್ಟಿದ್ದಾರೆ.
ಅಂದ್ಹಾಗೇ, ಕೆಡಿ ಕನ್ನಡದ ಬಹುನಿರೀಕ್ಷಿತ ಸಿನಿಮಾ. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಜೋಗಿ ಪ್ರೇಮ್ ಕಾಂಬಿನೇಷನ್‍ನಲ್ಲಿ ಬರ್ತಿರೋ ಮೊದಲ ಚಿತ್ರ ಇದಾಗಿದ್ದು, ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಟೈಟಲ್‍ನಿಂದ, ಟೀಸರ್‍ನಿಂದ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದುಸುದ್ದಿ ಮಾಡುತ್ತಿರೋ ಕೆಡಿ, ಬಿಗ್ ಕ್ಯಾನ್ವಾಸ್‍ನಿಂದ, ಬಿಗ್ ಸ್ಟಾರ್‍ಕಾಸ್ಟ್‍ನಿಂದಲೂ ಸೌಂಡ್ ಮಾಡುತ್ತಿದೆ. ಹೌದು, ಕೆಡಿ ಚಿತ್ರದಲ್ಲಿ ಅದ್ಧೂರಿ ತಾರಾಬಳಗವೇ ಇದೆ. ಸಂಜಯ್ ದತ್ತ್, ಬಾಲಿವುಡ್ ಬ್ಯೂಟಿ ಶಿಲ್ಪಾಶೆಟ್ಟಿ, ತಮಿಳು ನಟ ವಿಜಯ್ ಸೇತುಪತಿ, ಕ್ರೇಜಿಸ್ಟಾರ್ ರವಿಚಂದ್ರನ್, ರೀಷ್ಮಾನಾಣಯ್ಯ ಪಾತ್ರವರ್ಗದಲ್ಲಿದ್ದಾರೆ. ಇನ್ನೂ ಯಾರ್ಯಾರು ಈ ಸಿನಿಮಾ ತಂಡವನ್ನ ಸೇರಿಕೊಳ್ಳಲಿದ್ದಾರೋ ಗೊತ್ತಿಲ್ಲ. ಆದರೆ, ಶೋ ಮ್ಯಾನ್ ಪ್ರೇಮ್ ಸಾಹೇಬ್ರು ಆರು ಜನ ಹೀರೋಗಳನ್ನ ಹಾಕ್ಕೊಂಡು ಸಿನಿಮಾ ಮಾಡ್ತೀನಿ ಅಂತ ದಿ ವಿಲನ್ ಸಮಯದಲ್ಲಿ ಹೇಳಿದ್ದರಿಂದ ಆ ಆರು ಜನ ಹೀರೋಗಳು ಕೆಡಿಯಲ್ಲೇ ಬರ್ತಾರಾ ಎನ್ನುವ ನಿರೀಕ್ಷೆ ಚಿತ್ರಪ್ರೇಮಿಗಳಲ್ಲಿದೆ.
ಕೆಡಿ 70ರ ದಶಕದ ಅಂಡರ್‍ವಲ್ಡ್ ಕಥೆಯನ್ನೊಳಗೊಂಡಿದ್ದು, ಅದ್ದೂರಿ ಸೆಟ್ ಹಾಕಿ ಕೆಡಿನಾ ಕ್ಯಾಪ್ಚರ್ ಮಾಡೋದ್ರಲ್ಲಿ ಚಿತ್ರತಂಡ ನಿರತವಾಗಿದೆ. ಕೆವಿಎನ್ ಪ್ರೊಡಕ್ಷನ್ ಬಂಡವಾಳ ಹೂಡಿದ್ದು, ಕೆಜಿಎಫ್, ಕಬ್ಜ ನಂತರ ಬಿಗ್ ಬಜೆಟ್‍ನಲ್ಲಿ ಮೂಡಿಬರ್ತಿರೋ ಹೈವೋಲ್ಟೇಜ್ ಸಿನಿಮಾ ಸಾಲಿಗೆ ಕೆಡಿ ಸೇರಿಕೊಂಡಿದೆ. ಅರ್ಜುನ್ ಜನ್ಯಾ ಸಂಗೀತ ಚಿತ್ರಕ್ಕಿದ್ದು, ಶೋ ಮ್ಯಾನ್ ಪ್ರೇಮ್ ಪ್ಲಸ್ ಮ್ಯಾಜಿಕಲ್ ಕಂಪೋಸರ್ ಜನ್ಯಾಜೀ ಕಾಂಬೋ ಯಾವ್ ರೀತಿ ವರ್ಕ್ ಆಗುತ್ತೆ ಅನ್ನೋದನ್ನ ಕಾದುನೋಡ್ಬೇಕಿದೆ