ಬುಧವಾರ, ಜುಲೈ 2, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

online pharmacy mafia: ಆನ್ ಲೈನಲ್ಲಿ ಔಷಧಿ ಆರ್ಡರ್ ಮಾಡಿದ್ರೆ ಅಪಾಯ ಖಚಿತ!

Majja Webdeskby Majja Webdesk
15/03/2025
in Lifestyle, Majja Special
Reading Time: 1 min read
online pharmacy mafia: ಆನ್ ಲೈನಲ್ಲಿ ಔಷಧಿ ಆರ್ಡರ್ ಮಾಡಿದ್ರೆ ಅಪಾಯ ಖಚಿತ!

-ನಿಮ್ಮ ಬೆರಳ ಮೊನೆಯಲ್ಲಿದೆ ಮಹಾ ಗಂಡಾಂತರ!

-ಯಾಮಾರಿದರೆ ಜೀವ ಹೋಗುತ್ತೆ ಜೋಪಾನ! 

 

ಈಗ ಆನ್ ಲೈನ್ ಯುಗ ಚಾಲ್ತಿಯಲ್ಲಿದೆ. ಎಲ್ಲವನ್ನೂ ಕುಂತಲ್ಲಿಗೇ ತರಿಸಿಕೊಳ್ಳುವಂಥಾ ಟ್ರೆಂಡ್ ಒಂದು ನಗರ ಪ್ರದೇಶಗಳನ್ನು ಮಾತ್ರವಲ್ಲದೇ, ಹಳ್ಳಿಗಾಡಿಗೂ ಹಬ್ಬಿಕೊಂಡಿದೆ. ಹೀಗೆ ಕೂತ ಜಾಗದಿಂದಲೇ ಬಟ್ಟೆ ಬರೆ, ಫ್ಯಾನ್ಸಿ ಐಟಮ್ಮುಗಳನ್ನು ತರಿಸಿಕೊಳ್ಳುವ ಪರಿಪಾಠವೊಂದು ಆರಂಭದ ದಿನಗಳಲ್ಲಿ ಅದೊಂಥರಾ ಥ್ರಿಲ್ ಮೂಡಿಸುತ್ತಿದ್ದದ್ದು ನಿಜ. ಈ ಕ್ಷಣಕ್ಕೂ ಅಂಥಾ ಥ್ರಿಲ್ ಚಾಲ್ತಿಯಲ್ಲಿದ್ದುಕೊಂಡು ಅನಾಹುತಕಾರಿ ಘಟ್ಟ ತಲುಪಿಕೊಂಡಿದೆ. ಯಾವುದನ್ನು ಆನ್ ಲೈನಲ್ಲಿ ಆರ್ಡರ್ ಮಾಡಬೇಕು, ಮತ್ಯಾವುದನ್ನು ಮಾಡಕೂಡದೆಂಬ ವಿವೇಚನೆಯೇ ಬಹುತೇಕರಿಗೆ ಇಲ್ಲವಾಗಿ ಬಿಟ್ಟಿದೆ. ಸಾಮಾನ್ಯವಾಗಿ ಯಾವುದೇ ಐಷಧಿಯನ್ನು ವೈದ್ಯರು ಬರೆದು ಕೊಟ್ಟಾಗ, ಅದನ್ನು ಮೆಡಿಕಲ್ ಶಾಪಿನಿಂದ ಖರೀದಿಸಿ, ಮತ್ತೊಮ್ಮೆ ವೈದ್ಯರಿಗೆ ತೋರಿಸೋದು ರೂಢಿ. ಅದು ಅತ್ಯಂತ ಸೇಫ್ ಆದ ಮಾರ್ಗ. ಅದು ಅನೇಕ ಅನಾಹುತಗಳನ್ನು ತಡೆಯುತ್ತದೆ. ಹಾಗಿರುವಾಗ ಯಾವುದೇ ಆನ್ ಲೈನ್ ಫ್ಲಾಟ್ ಫಾರ್ಮಿನ ಮೂಲಕ ಔಷಧಿ ಖರೀದಿಸೋದು ಖಂಡಿತವಾಗಿಯೂ ಸುರಕ್ಷಿತ ಮಾರ್ಗ ಅಲ್ಲವೇ ಅಲ್ಲ!


ಇಂಥಾ ಆನ್ ಲೈನ್ ಔಷಧ ವ್ಯಾಪಾರ ಭರಾಟೆಯಿಂದಾಗಿ ನಾನಾ ಕೋರ್ಸ್ ಮಾಡಿ ಪರವಾನಗಿ ಪಡೆದು ಮೆಡಿಕಲ್ ಶಾಪ್ ನಡೆಸುವವರಿಗೂ ತೊಂದರೆಯಾಗುತ್ತಿದೆ. ಅದು ಅನೇಕ ಜನರ ಜೀವಕ್ಕೂ ಕೂಡಾ ಕಂಟಕವಾಗಿ ಬಿಟ್ಟಿದೆ. ಇದರ ವಿರುದ್ಧ ವರ್ಷಗಳ ಹಿಂದೆಯೇ ಔಷಧ ಮಳಿಗೆಗಳ ಮಾಲೀಕರು ಯಶಸ್ವಿಯಾಗಿ ಬಂದ್ ಆಚರಿಸಿದ್ದರು. ಇದರಿಂದಾಗಿ ಸರ್ಕಾರಕ್ಕೆ ಸಾಕಷ್ಟು ಲುಕ್ಸಾನು ಆಗಿದೆ. ಕೇಂದ್ರ, ರಾಜ್ಯ ಸರ್ಕಾರಕ್ಕೆ ಇದರ ಬಿಸಿ ಮುಟ್ಟಿದೆ. ಬಂದ್ ಮಾಡುತ್ತಿರುವ ಬಗ್ಗೆ ಪೂರ್ವಭಾವಿಯಾಗಿಯೇ ಸೂಚಿಸಿದ್ದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗಿಲ್ಲ. ಆಸ್ಪತ್ರೆಗಳಲ್ಲಿರುವ ಔಷಧಾಲಯಗಳನ್ನು ಈ ಬಂದ್‌ನಿಂದ ಹೊರಗಿಟ್ಟು ಅಗತ್ಯದ ಔಷಧಿಗಳು ಲಭ್ಯವಾಗುವಂತೆ ಮಾಡಿ, ಔಷಧ ಮಾರಾಟಗಾರರು ಮಾನವೀಯತೆಯನ್ನು ಎತ್ತಿ ಹಿಡಿದಿದ್ದರು. ಆದರೆ, ಸಾರ್ವಜನಿಕರ ಮೇಲೆ ಆನ್ ಲೈನ್ ವ್ಯಾಪಾರಿಗಳಿಗೆ ಮಾತ್ರ ಇಂಥಾ ಕಾಳಜಿ ಇರಲು ಸಾಧ್ಯವೇ ಇಲ್ಲ.

ಅಡ್ನಾಡಿ ದಂಧೆ


ಯಾವಾಗ ಆನ್ ಲೈನಿನಲ್ಲಿ ಐಷಧ ಮಾರಾಟ ಭರಾಟೆ ಹೆಚ್ಚಿಕೊಂಡಿತ್ತೋ ಆ ಕ್ಷಣದಿಂದಲೇ ಅದರ ಸಂಭಾವ್ಯ ಅನುಆಹುತಗಳನ್ನು ಅನೇಕರು ಮನಗಂಡಿದ್ದರು. ಔಷಧಿಗಳನ್ನು ಆನ್ ಲೈನಿನಲ್ಲಿ ಮಾರಾಟ ಮಾಡಕೂಡದೆಂಬಂಥಾ ಆಗ್ರಹಗಳೂ ಕೇಳಿ ಬಂದಿದ್ದವು. ಆದರೆ ಅದನ್ಯಾರೂ ಕೂಡಾ ಕಿವಿಗೆ ಹಾಕಿ ಕೊಳ್ಳಲೇ ಇಲ್ಲ. ಹಾಗೆ ನೋಡಿದರೆ, ರೈತ ಸಂಘಟನೆಗಳಂತೆಯೇ ಕೆಮಿಸ್ಟ್ ಮತ್ತು ಡ್ರಗ್ಗಿಸ್ಟ್‌ಗಳ ಸಂಘಟನೆಯೂ ಹತ್ತು ಹಲವು ಸಂಘಟನೆಗಳಿವೆ. ಪಟ್ಟಭದ್ರರು ಬೇಕೆಂದೇ ಇವುಗಳನ್ನು ಪ್ರತ್ಯೇಕ ಸಂಘಟನೆಗಳನ್ನಾಗಿ ಮಾಡಿದ್ದಾರೆ. ಸದ್ಯಕ್ಕೆ ಅಭಿಪ್ರಾಯ ಬೇಧಗಳ ಹೊರತಾಗಿ ಈ ಎಲ್ಲರೂ ಫೆಡರೇಷನ್ ರೀತಿಯಲ್ಲಿ ಒಗ್ಗೂಡಿ ಫಾರ್ಮಸಿಸ್ಟ್‌ಗಳ ರಕ್ಷಣೆಗೆ ಮುಂದಾಗಿದ್ದಾರೆ. ರಾಜ್ಯದ ಔಷಧಿ ವ್ಯಾಪಾರಿಗಳ ಚಳವಳಿಯಲ್ಲಿಯೇ ವರ್ಷಗಳ ಹಿಂದೆ ಐತಿಹಾಸಿಕವಾದೊಂದು ಚಳುವಳಿ ನಡೆದಿತ್ತು. ಆದರೆ, ಈ ಕ್ಷಣಕ್ಕೂ ಕೂಡಾ ಆನ್ ಲೈನ್ ಔಷಧ ಮಾರಾಟ ದಂಧೆಗೆ ಮಾತ್ರ ಬ್ರೇಕ್ ಹಾಕಲು ಸಾಧ್ಯವಾಗಿಲ್ಲ.
ನಿಖರವಾಗಿ ಹೇಳುವುದಾದರೆ ಡ್ರಗ್ಗಿಸ್ಟ್‌ಗಳನ್ನು ಒಗ್ಗೂಡುವಂತೆ ಮಾಡಿದ್ದೇ ಆನ್‌ಲೈನ್ ವ್ಯವಹಾರ ಎಂಬ ಅಡ್ನಾಡಿ ಬ್ಯುಸಿನೆಸ್. ಆನ್‌ಲೈನ್ ವ್ಯಾಪಾರ ನಿರಾಯಾಸವಾಗಿ ಬೇಕಾದ ವಸ್ತುವನ್ನು ಬೇಕೆಂದ ಸ್ಥಳಕ್ಕೆ ತಲುಪಿಸುತ್ತಿದೆ. ಮೊಬೈಲ್ ಫೋನ್, ಬಟ್ಟೆ, ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟದ ಮೂಲಕ ಪ್ರಸಿದ್ಧಿ ಪಡೆದ ಆನ್‌ಲೈನ್ ವ್ಯವಹಾರ ಈಗ ಔಷಧಕ್ಷೇತ್ರಕ್ಕೂ ಲಗ್ಗೆ ಇಟ್ಟಿದೆ. ಆನ್‌ಲೈನ್ ವ್ಯವಹಾರದಿಂದ ಮೊಬೈಲ್ ಮಾರಾಟದ ಸಣ್ಣಪುಟ್ಟ ಅಂಗಡಿಗಳ ಸಹಿತ ಸಂಗೀತ, ಯೂನಿವರ್ಸಲ್ ಅನೇಕ ಮೊಬೈಲ್ ಮಾರಾಟ ಸಂಸ್ಥೆಗಳು ಮೇಲೆ ನಷ್ಟ ಅನುಭವಿಸುತ್ತಿವೆ. ಅದೇ ರೀತಿಯಲ್ಲಿ ಬಟ್ಟೆ ವ್ಯಾಪಾರಿಗಳು, ಎಲೆಕ್ಟ್ರಾನಿಕ್‌ವಸ್ತುಗಳ ವ್ಯಾಪಾರಿಗಳು ಲುಕ್ಸಾನು ಅನುಭವಿಸಿದ್ದಾರೆ. ಇದೀಗ ಇ ಫಾರ್ಮಸಿ ಅಥವಾ ಇಫಾರ್ಮಸ್ಯುಟಿಕಲ್ಸ್ ಮೂಲಕ ಔಷಧಕ್ಷೇತ್ರಕ್ಕೂ ಆನ್‌ಲೈನ್ ಕಾಲಿಟ್ಟರೆ ಅದರಿಂದ ಔಷಧವ್ಯಾಪಾರವನ್ನೆ ನಂಬಿ ಬದುಕುತ್ತಿರುವ ಲಕ್ಷಾಂತರ ಕುಟುಂಬಗಳು ಅತಂತ್ರವಾಗಲಿದೆ ಎಂಬುದು ಫಾರ್ಮಸಿಸ್ಟ್ ಸಂಘಟನೆಗಳ ಖಚಿತ ಅಭಿಪ್ರಾಯವಾಗಿದೆ. ಇದು ನಿಜವೂ ಹೌದು.


ಇಂಥಾ ಆನ್ ಲೈನ್ ದಂಧೆಗಳು ಶುರುವಾದ ನಂತರ ವೈದ್ಯಕೀಯ ಕ್ಷೇತ್ರದಲ್ಲಿ ನಾನಾ ಬದಲಾವಣೆಗಳು ನಡೆಯಲಾರಂಭಿಸಿದ್ದಾವೆ. ಇಕಾಮರ್ಸ್ ಔಷಧ ಕ್ಷೇತ್ರಕ್ಕೆ ಕಾಲಿಟ್ಟ ಬಳಿಕ ಅದು ಸೃಷ್ಟಿಸುತ್ತಿರುವ ಆತಂಕ, ತಲ್ಲಣ ಊಹಿಸಲೂ ಅಸಾಧ್ಯ. ಕಡಿಮೆ ಬೆಲೆಯಲ್ಲಿ ಮನೆ ಬಾಗಿಲಿಗೇ ಔಷಧ ಸಿಗುತ್ತದೆ ಎನ್ನುವುದು ಮೇಲ್ನೋಟಕ್ಕೆ ಕಾಣುವ ಆಕರ್ಷಣೆ. ಆದರೆ, ಅದರ ಇನ್ನೊಂದು ಮುಖ ಕರಾಳ. ಅಷ್ಟಾಗಿಯೂ ಆನ್‌ಲೈನ್ ಫಾರ್ಮಸಿಯೂ ಜನಪ್ರಿಯಗೊಳ್ಳುತ್ತಿದೆ. ಆದರೆ, ಔಷಧಕ್ಕೂ ಇತರೆ ವಸ್ತುಗಳಿಗೂ ವ್ಯತ್ಯಾಸವಿದೆ. ಯಾವುದೇ ವಸ್ತು ಸರಿ ಇಲ್ಲ ಎಂದರೆ ಅದನ್ನು ಹಿಂದಕ್ಕೆ ಕಳುಹಿಸಬಹುದು. ಆದರೆ, ಆನ್‌ಲೈನ್ ಕಂಪನಿಗಳು ಕಡಿಮೆ ಬೆಲೆಗೆ ಔಷಧಗಳನ್ನು ಮಾರಾಟ ಮಾಡುತ್ತವೆ ಎಂದರೆ ಅದರ ವಿಶ್ವಾಸಾರ್ಹತೆ ಪ್ರಶ್ನೆ ಉದ್ಭವವಾಗುತ್ತದೆ. ಅವು ಪೂರೈಸಿರುವ ಔಷಧಿ ಅಸಲಿಯೋ? ನಕಲಿಯೋ? ಎಂಬುದನ್ನು ಸುಲಭಕ್ಕೆ ಪತ್ತೆ ಮಾಡಲಾಗದು. ಸೇವಿಸಿ ಅಡ್ಡಪರಿಣಾಮ ಅಥವಾ ವ್ಯತಿರಿಕ್ತ ಪರಿಣಾಮಗಳಾದಲ್ಲಿ ಮಾತ್ರ ಬೆಳಕಿಗೆ ಬಂದೀತು!
ದೊಡ್ಡ ಕಂಪನಿಗಳ ನಕಲಿ ಔಷಧಗಳ ತಯಾರಿಕೆ ಪ್ರಕರಣಗಳೂ ನಮ್ಮ ಮುಂದಿರುವಾಗ ಆನ್‌ಲೈನ್ ಕಂಪನಿಗಳು ಪೂರೈಸುವ ಔಷಧಗಳು ಅಸಲಿಯೇನಕಲಿಯೇ ಎಂಬುದನ್ನು ಪತ್ತೆ ಹಚ್ಚುವುದು ಹೇಗೆ? ಇದನ್ನು ನಿಯಂತ್ರಿಸಲು ಭಾರತ ಸರ್ಕಾರ ಯಾವುದೇ ನಿರ್ದಿಷ್ಟ ಕಾನೂನು ಮಾಡಿಲ್ಲ. ಮಹಾರಾಷ್ಟ್ರದಲ್ಲಿ ಆಹಾರ ಮತ್ತು ಔಷಧ ಆಡಳಿತ ಮುಂಬೈ, ಥಾಣೆ ಮತ್ತು ಪುಣೆಗಳಲ್ಲಿ ಇಪ್ಪತ್ತೇಳು ಆನ್‌ಲೈನ್ ಕಂಪನಿಗಳ ಮೇಲೆ ದಾಳಿ ನಡೆಸಿ ಎರಡು ಕೋಟಿ ಮೌಲ್ಯದ ಔಷಧವನ್ನು ವಶಕ್ಕೆ ತೆಗೆದುಕೊಂಡಿರುವುದು ವರದಿಯಾಗಿದೆ. ಕರ್ನಾಟಕದಲ್ಲಿ ಎರಡು ಪ್ರಕರಣಗಳಲ್ಲಿ ಲೈಸೆನ್ಸ್ ರದ್ದುಪಡಿಸಲಾಗಿದೆ. ಆದರೆ ನಾನಾ ನೌಟಂಕಿ ನಾಟಕಗಳನ್ನು ನಡೆಸಿ ಮತ್ತೊಂದು ರೂಪದಲ್ಲಿ, ಅವತಾರಗಳಲ್ಲಿ ಆಠನ್ ಲೈನ್ ದಂಧೆಕೋರರು ಜನರ ಜೀವದ ಜೊತೆ ಆಟವಾಡಲಾರಂಭಿಸಿದ್ದಾರೆ.


ಸದ್ಯದ ಮಟ್ಟಿದೆ ಶೆಡ್ಯೂಲ್ ಎಚ್ ಒನ್ ಮತ್ತು ಶೆಡ್ಯೂಲ್ ಎಕ್ಸ್ ಅಡಿ ಬರುವ ಔಷಧ ಅಥವಾ ಗುಳಿಗೆಗಳನ್ನೂ ಸುಲಭವಾಗಿ ಆನ್‌ಲೈನ್ ನಲ್ಲಿ ಪಡೆಯಬಹುದಾಗಿದೆ. ಶೆಡ್ಯೂಲ್ ಎಚ್ ಒನ್ ರಲ್ಲಿ ನಲವತ್ತಾರುಬಗೆಯ ಔಷಧಗಳಿದ್ದಾವೆ. ಅವುಗಳಲ್ಲಿ ಅತ್ಯಧಿಕ ರೋಗನಿರೋಧಕ ಅಂಶಗಳು, ನಿದ್ದೆ ಮತ್ತು ಅಮಲು ತರುವ ಅಂಶಗಳಿರುತ್ತವೆ. ಈ ಔಷಧಿಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುವ ಮಾತು ಹಾಗಿರಲಿ, ವೈದ್ಯರ ಲಿಖಿತ ಸೂಚನೆ ಇಲ್ಲದೆ, ಔಷಧದ ಅಂಗಡಿಗಳಲ್ಲೂ ಮಾರುವಂತಿಲ್ಲ. ಇವು ಮನೋರೋಗ ಸಂಬಂಧಿ ಔಷಧಗಳು. ಇದಕ್ಕೆ ವೈದ್ಯರ ಪ್ರಿಸ್ಕ್ರಿಪ್ಷನ್ ಕಡ್ಡಾಯ. ಪ್ರಿಸ್ಕ್ರಿಪ್ಷನ್ ತೋರಿಸಿದರೆ ಮಾತ್ರ ನೀಡಬೇಕು. ಹಾಗೆ ನೀಡುವಾಗ, ಪ್ರಿಸ್ಕ್ರಿಪ್ಷನ್ ಚೀಟಿ ಮೇಲೆ ಸೀಲ್ ಹಾಕಿಕೊಡಬೇಕು. ಯಾವ ರೋಗಿಗೆ, ಯಾವ ವೈದ್ಯರ ಸೂಚನೆ ಮೇಲೆ ನೀಡಲಾಗಿದೆ ಎಂಬುದನ್ನು ಲಾಗ್‌ಬುಕ್‌ನಲ್ಲಿ ನಮೂದಿಸಿ ಎರಡು ವರ್ಷಗಳ ಕಾಲ ದಾಖಲೆಯನ್ನು ಕಾಪಾಡಿಕೊಳ್ಳಬೇಕು. ಆದರೆ ಅಂಥಾದ್ದೇನೂ ಪಾಲನೆಯಾಗುತ್ತಿಲ್ಲ.
ಈವತ್ತಿಗೆ ಆನ್‌ಲೈನ್‌ನಲ್ಲಿ ಯಾವುದೇ ನಿಯಮಗಳನ್ನು ಪಾಲಿಸುವುದಿಲ್ಲ. ಅವರಿಗೆ ಔಷಧಿ ಎಂಬುದು ಒಂದು ಸರಕಾಗಿದೆ. ಹೇಗಾದರೂ ಮಾಡಿ ಇದನ್ನು ಬಿಕರಿಗಿಟ್ಟು ಕಾಂಚಾಣ ಎತ್ತಬೇಕೆಂಬ ತೆವಲಷ್ಟೇ ಇರಲಿದೆ. ಅದಕ್ಕೆ ಸಾಕ್ಷಿಯಾಗಿ ಮೆಡಿಬಿಜ್ ಸಾಕ್ಷಿಯಾಗಿದೆ. ಆನ್‌ಲೈನ್ ಫಾರ್ಮಸಿ ವ್ಯವಹಾರದಲ್ಲಿ ತೊಡಗಿ ಪರವಾನಗಿ ರದ್ದು ಮಾಡಿಕೊಂಡ ಮೆಡಿಬಿಜ್ ಫಾರ್ಮ ಎರಡು ಮೂರು ವರ್ಷಗಳಲ್ಲಿ ಆನ್‌ಲೈನ್ ಮೂಲಕ ನೂರಾ ಇಪ್ಪತ್ತು ಕೋಟಿಯಷ್ಟು ವ್ಯವಹಾರ ನಡೆಸಿದೆ ಎಂದರೆ ನಿಜಕ್ಕೂ ಅಚ್ಚರಿಯಾಗದಿರೋದಿಲ್ಲ. ಹೆಲ್ತ್ ಕಾರ್ಟ್ ಶೆಡ್ಯೂಲ್ ಎಚ್ ಮತ್ತು ಶೆಡ್ಯೂಲ್ ಎಕ್ಸ್ ಅಡಿ ಬರುವ ಔಷಧಗಳನ್ನು ಮಾರಾಟ ಮಾಡಿದ ಹಿನ್ನೆಲೆಯಲ್ಲಿ ಪರವಾನಗಿ ರದ್ದು ಕ್ರಮಕ್ಕೆ ಒಳಗಾಗಿದೆ. ಆದರೂ ಆ ಕಂಪೆನಿಯೀಗ ಬೇರೆ ಅವತಾರವೆತ್ತಿ ಮತ್ತದೇ ದಂಧೆ ನಡೆಸುತ್ತಿದೆ.


ನಾವು ನಾನಾ ರೋಗ ರುಜಿನಗಳಿಗೆ ಬಳಸುವ ಔಷಧಿಗಳು ನಮಗೇ ಗೊತ್ತಿಲ್ಲದ ಅಡ್ಡ ಪರಿಣಾಮಗಳನ್ನು ಹೊಂದಿರುತ್ತವೆ. ಮಾದಕ ದ್ರವ್ಯದ ಅಂಶವುಳ್ಳ ನೋವು ನಿವಾರಕ, ಭ್ರಮಾತ್ಮಕ ಸ್ಥಿತಿಗೆ ಒಯ್ಯುವ ಗುಳಿಗೆ, ಸಿರಪ್‌ಗಳು ಮತ್ತು ಕಾಮೋತ್ತೇಜಕ ವಯಾಗ್ರಗಳು, ಗರ್ಭಪಾತದ, ಗರ್ಭಧಾರಣೆಯಾಗದ ಹಾಗೂ ಅದಕ್ಕೆ ಸಂಬಂಧಿಸಿದ ಔಷಧಿಗಳು ಆನ್‌ಲೈನ್ ಮೂಲಕ ಭಾರಿ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ ಒಂದು ಕಾಲದಲ್ಲಿ ಸೆಕ್ಸ್ ವಿಚಾರಗಳನ್ನು ಬಹಿರಂಗವಾಗಿ ಮಾತನಾಡಲು ಹಿಂಜರಿಯುವ ನಮ್ಮ ಜನ ಔಷಧ ಅಂಗಡಿಗಳಿಗೆ ಹೋಗಿ ಕದ್ದು ಮುಚ್ಚಿ ಕೇಳಿ ತರುತ್ತಿದ್ದರು. ಆದರೆ, ಈಗ ಮೊಬೈಲ್‌ನಲ್ಲಿ ಆರ್ಡರ್ ಮಾಡಿ ತಾವಿದ್ದ ಕಡೆಗೆ ವಯಾಗ್ರ ಮತ್ತು ಅಂಥಾದ್ದೇ ಪರಿಣಾಮ ಬೀರುವ ಮಾತ್ರೆಗಳನ್ನು ತರಿಸಿಕೊಳ್ಳುತ್ತಿರುವುದು ನಗರ ಪ್ರದೇಶಗಳಲ್ಲಿ ಹೆಚ್ಚಾಗಿದೆ. ಇದಕ್ಕೆಲ್ಲಾ ಕಾರಣವಾಗಿರುವುದು ಇ ಫಾರ್ಮಸಿ ಎಂಬ ಆನ್‌ಲೈನ್ ವ್ಯವಹಾರ. ಇದೀಗ ಹಳ್ಳಿಗಾಡಿನ ಮಂದಿಯೂ ಆಪ್ಯಾಯವಾಗಿ ಕಾಣಿಸುತ್ತಿದೆ. ಏನಾದರೂ ಅನಾಹುತ ನಡೆದರೆ ಮಾತ್ರ ಯಾರೊಂದಿಗೂ ಹೇಳಿಕೊಳ್ಳಲೂ ಆಗದ, ಸುಮ್ಮನಿರಲೂ ಆಗದ ಪರಿಣಾವಾಗಿ ಬಿಡುತ್ತದೆ.
ಈಗಾಗಲೇ ಅನೇಕರು ಅನೇಕ ರೀತಿಯಲ್ಲಿ ಈ ದಂಧೆಯ ವಿರುದ್ಧ ಸಮರ ಸಾರಿದ್ದಾರೆ. ರಿಯಾಲಿಟಿ ಚೆಕ್ ಕಾರ್ಯಕರ್ತರೊಬ್ಬರು ಆನ್‌ಲೈನ್ ವ್ಯವಹಾರದ ಸತ್ಯಾಸತ್ಯೆಯಲ್ಲಿ ಪತ್ತೆ ಮಾಡಲು ಪ್ರಿಸ್ಕ್ರಿಪ್ಶನ್ ಸಲ್ಲಿಸದೆಯೂ ಶೆಡ್ಯೂಲ್ ಎಚ್ ಒನ್ ಮತ್ತು ಶೆಡ್ಯೂಲ್ ಎಕ್ಸ್ ಅಡಿ ಬರುವ ಔಷಧಗಳನ್ನು ಖರೀದಿಸಿದ್ದಾಗಿ ಹೇಳುತ್ತಾರೆ. ಭಾರತ ಸರ್ಕಾರದ ಔಷಧ ಮತ್ತು ಪ್ರಸಾಧನ ಕಾಯ್ದೆ ಮತ್ತು ನಿಯಮಾವಳಿ ಪ್ರಕಾರ ಯಾವುದೇ ಔಷಧವನ್ನು ವಿತರಣೆ ಮಾಡುವ ಮುನ್ನ ಮಳಿಗೆಯವರು ವೈದ್ಯರ ಚೀಟಿಯನ್ನು ಪರಿಶೀಲಿಸಬೇಕು. ಇದನ್ನು ಉಲ್ಲಂಘಿಸಿ ಮಾರಾಟ ಮಾಡುವುದು ಕೂಡ ಅಪರಾಧವಾಗಲಿದೆ. ಆದರೆ ಇ-ಫಾರ್ಮಸಿಯಲ್ಲಿ ಯಾರು ಈ ಕಾರ್ಯನಿರ್ವಹಿಸುತ್ತಾರೋ? ಹೇಗೆ ನಿರ್ವಹಿಸುತ್ತಾರೋ? ಆ ಭಗವಂತನಿಗೇ ಗೊತ್ತು. ಇಂದು ಇದು ನಡೆಯುತ್ತಿರೋ ರೀತಿಯಂತೂ ನಿಜಕ್ಕೂ ಗಾಬರಿ ಮೂಡಿಸುವಂತಿದೆ.


ಹೀಗೆ ಆನ್ ಲೈನಿನಲ್ಲಿ ಔಷಧಿ ಬಿಕರಿಗಿಟ್ಟಿರುವ ರೀತಿ ಕಂಡು ತಜ್ಞ ವೈದ್ಯರೇ ಹೌಹಾರಿದ್ದಾರೆ. ಶೆಡ್ಯೂಲ್ ಎಚ್ ಒನ್ ಮತ್ತು ಶೆಡ್ಯೂಲ್ ಎಕ್ಸ್ ವರ್ಗದಡಿ ಬರುವ ಔಷಧಗಳು ನಿರ್ಬಂಧಿತ ಸ್ವರೂಪದ್ದು. ಲೇಬಲ್ ಮೇಲೆಯಾ ಡ್ರಗ್ ಕಂಟೆಂಟಿನ ಪರಿಣಾಮ ಕುರಿತ ಟಿಪ್ಪಣಿ ಹಾಕಲೇಬೇಕು. ಶೆಡ್ಯೂಲ್ ಎಚ್ ಪಟ್ಟಿಯಲ್ಲಿ ಐನೂರಾ ಮೂವತ್ತಾರು ಔಷಧಗಳು ಸೇರಿವೆ. ಇದರಲ್ಲಿ ನಾರ್ಕೆಟಿಕ್ ಮತ್ತು ಸೈಕೋಟ್ರೊಪಿಕ್ ಔಷಧಗಳಿವೆ. ಇವುಗಳಿಂದ ಭ್ರಮೆಗೊಳಗಾಗುವುದು, ಬುದ್ಧಿ ವಿಕಲ್ಪತೆ, ಕೃತಕವಾಗಿ ಶಮನ ಸ್ಥಿತಿಗೆ ತಲುಪುವುದು ಮತ್ತು ಹಿಪ್ನೊಟಿಕ್ ಸ್ಥಿತಿಗೆ ತಲುಪುವ ಸಾಧ್ಯತೆ ಇರುತ್ತದೆ. ಇಂದು ಹುಡುಕಾಡಿದರೆ ಆನ್ ಲೈನ್ ಔಷಧಿಗಳಿಂದ ಮತಿಭ್ರಮಣೆ ಸೇರಿದಂತೆ ಅನೇಕ ಗಂಭೀರ ಸಮಸ್ಯೆ ಅಚಿಟಿಸಿಕೊಂಡಿರುವ ಅನೇಕರು ಕಾಣ ಸಿಗುತ್ತಾರೆ. ಅಷ್ಟಾದರೂ ಸಂಬಂಧಿಸಿದವರು ಮಾತ್ರ ಯಾವ ಕ್ರಮಗಳನ್ನೂ ಕೈಗೊಳ್ಳದೆ ಮುಗುಮ್ಮಾಗಿದ್ದಾರೆ.
ವೈದ್ಯಕೀಯ ವಿಭಾಗದಕ್ಕಾಗಿಯೇ ಅನೇಕ ಕಾನೂನುಗಳನ್ನು ಇದುವರೆಗೂ ಸರ್ಕಾರಗಳು ತಂದಿವೆ. ೨೦೧೪ರಲ್ಲಿ ಕೇಂದ್ರ ಸರ್ಕಾರ ಐಟಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಅನಾಹುತ ತಡೆಯಲು ಮುಂದಾಗಿತ್ತು. ಅದರಲ್ಲಿ ಇರುವ ಪ್ರಿಸ್ಕ್ರಿಪ್ಷನ್ ಕ್ಯಾನ್ ಬಿ ರೀಡ್ ಎಲೆಕ್ಟ್ರಾನಿಕಲಿ ಎಂಬ ಪದವನ್ನು ದುರ್ಬಳಕೆ ಮಾಡಿಕೊಂಡು ಆನ್‌ಲೈನ್ ಬಿಜಿನೆಸ್ ನಡೆಸಲಾಗುತ್ತಿದೆ. ಇ-ಫಾರ್ಮಸಿ ಬಗ್ಗೆ ಯಾವುದೇ ಉಲ್ಲೇಖ ಕಾಯ್ದೆಯಲ್ಲಿ ಇಲ್ಲ. ಈ ರೀತಿಯ ಉದ್ಯಮದ ಮೇಲೆ ನಿಗಾ ಇಡುವ ವ್ಯವಸ್ಥೆಯೂ ಇಲ್ಲದಿರುವುದರಿಂದ ಈ ಔಷಧಗಳ ದುರ್ಬಳಕೆ ವ್ಯಾಪಕವಾಗುತ್ತಿದೆ. ಶೆಡ್ಯೂಲ್ ಎಚ್ ಒಂದು ಔಷಧಿಗಳ ದುರ್ಬಳಕೆ ತಪ್ಪಿಸಲೆಂದೇ ೨೦೧೩ರ ಆಗಸ್ಟ್ ೩೦ರಿಂದ ಕೇಂದ್ರ ಸರ್ಕಾರ ಇವುಗಳ ಮೇಲೆ ನಿಯಂತ್ರಣ ವಿಧಿಸಿದೆ. ಆದರೆ ಅದು ಕಡತದಲ್ಲಿಯೇ ಕೊಳೆಯುತ್ತಿದೆಯಷ್ಟೆ!

ಶೆಡ್ಯೂಲ್ ಎಕ್ಸ್ ವರ್ಗದ ಔಷಧಗಳನ್ನು ಯಾವಾಗಲೂ ಭದ್ರವಾಗಿ ಲಾಕ್‌ಮಾಡಿ ಇಡಬೇಕು. ಜವಾಬ್ದಾರಿಯುತ ವ್ಯಕ್ತಿಗಳು ಮಾತ್ರ ಅದನ್ನು ಇಡುವ ಮತ್ತು ತೆಗೆಯುವ ಕರ್ತವ್ಯ ನಿರ್ವಹಿಸಬೇಕು ಎನ್ನುತ್ತದೆ ಕರ್ನಾಟಕ ಔಷಧ ನಿಯಂತ್ರಕ ಕಾಯ್ದೆ. ಆದರೆ ಈ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಇ ಫಾರ್ಮಸಿಗಳು ಎಲ್ಲಾ ಬಗೆಯ ಔಷಧಿಗಳನ್ನು ಸರಕು ಎಂಬ ರೀತಿಯಲ್ಲಿ ಮಾರಾಟ ಮಾಡುತ್ತಿವೆ. ಇಷ್ಟಾದರೂ ಕೂಡಾ ಆಳುವ ಸರ್ಕಾರಗಳು ಇಂಥಾದ್ದದನ್ನು ಊರು ತುಂಬ ಹಬ್ಬಲು ಬಿಟ್ಟಿರೋದ್ಯಾಕೋ ತಿಳಿಯುತ್ತಿಲ್ಲ. ಇದರಿಂದಾಗಿ ಮುಂದಿನ ದಿನಗಳಲ್ಲಿ ನಾನಾ ಸಾವು ನೋವುಗಳಾದರೂ ಅಚ್ಚರಿಯೇನಿಲ್ಲ. ಈಗಾಗಲೇ ಒಂದಷ್ಟು ಮಂದಿ ಇಉಉದರಿಂದ ನಾನಾ ಬಾಧೆ ಗೀಡಾಗಿದ್ದಾರೆ. ಈಗಾಗಲೇ ಆನ್ ಲೈನ್ ಔಷಧ ಮಾರಾಟ ದಂಧೆ ಮಾಫಿಯಾ ಸ್ವರೂಪ ಪಡೆದುಕೊಂಡಿದೆ. ಅದನ್ನು ಹತ್ತಿಕ್ಕದಿದ್ದರೆ ಶೀಘ್ರದಲ್ಲಿಯೇ ಅದು ಸರ್ಕಾರಗಳನ್ನೇ ಹತೋಟಿಗೆ ತೆಗೆದುಕೊಳ್ಳುವ ಹಂತಕ್ಕೆ ಬೆಳೆದರೂ ಅಚ್ಚರಿಯೇನಿಲ್ಲ.
ಹಾಗಂತ ಡೀ ವಿಶ್ವದಲ್ಲಿಯೂ ಇಂಥಾದ್‌ದೇ ವಾತಾವರಣ ಇದೆ ಅನ್ನುವಂತಿಲ್ಲ. ವಿದೇಶಗಳ್ಲ್ಲಿ ಈಗಾಗಲೇ ಆನ್ ಲೈನ್ ಔಷಧ ಮಾರಾಟಕ್ಕೆ ಲಗಾಮು ಹಾಕಲಾಗಿದೆ. ಇ ಫಾರ್ಮಸಿಗೆ ಅವಕಾಶ ಕಲ್ಪಿಸಿರುವ ರಾಷ್ಟ್ರಗಳಲ್ಲಿ ಕಠಿಣ ಕಾನೂನುಗಳಿವೆ. ಅಮೆರಿಕದಲ್ಲಿ ಅಲ್ಲಿನ ಫೆಡರಲ್ ಡ್ರಗ್ ಅಡ್ಮಿನಿಸ್ಟ್ರೇಷನ್ ಪ್ರಕಾರ ಇ ಫಾರ್ಮಸಿ ನಡೆಸುವ ಕಂಪೆನಿಗಳು ಸ್ವಂತ ಕಟ್ಟಡ ಹೊಂದಿರಬೇಕು. ವೈದ್ಯರ ಪ್ರಿಸ್ಕ್ರಿಪ್ಶನ್ ಇಲ್ಲದೆ ಔಷಧಿ ಮಾರುವಂತಿಲ್ಲ. ಬಳಕೆದಾರರು ಆನ್‌ಲೈನ್ ಮೂಲಕ ಕೊಳ್ಳುತ್ತಿರುವ ಔಷಧಿಗಳ ಕುರಿತು ಮಾಹಿತಿ ನೀಡಲು ಫಾರ್ಮಸಿಸ್ಟ್ ಇರಬೇಕು. ಔಷಧ ನಿಯಂತ್ರಕರು ನೀಡಿರುವ ಪರವಾನಗಿ ಪತ್ರ, ಇತ್ಯಾದಿ ವಿವರಗಳನ್ನು ತಮ್ಮ ವೆಬ್‌ಸೈಟ್‌ನಲ್ಲಿ ಛಾಪಿಸಿರಬೇಕು… ಅಲ್ಲಿ ಮೂವತ್ತೇಳು ಇ ಫಾರ್ಮ ಕಂಪೆನಿಗಳಿದ್ದಾವೆ. ಎಲ್ಲರೂ ಚಾಚೂ ತಪ್ಪದೆ ಈ ನಿಯಮಗಳನ್ನು ಪಾಲಿಸುತ್ತಿದ್ದಾರೆ. ಅಷ್ಟೇ ಕಾಳಜಿಯಿಂದ ಎಫ್‌ಡಿಎ ಹದ್ದಿನ ಕಣ್ಣುಗಳಿಂದ ಗಮನಿಸುತ್ತಿದೆ ಕೂಡ. ಆದರೆ, ನಮ್ಮ ದೇಶದಲ್ಲಿ ಆನ್ ಲೈನ್ ದಂಧೆಕೋರರು ಮನ ಬಂದಂತೆ ವ್ಯವಹಾರ ನಡೆಸುತ್ತಿದ್ದಾರೆ.
ಬೇರೆಲ್ಲ ದೇಶಗಳಲ್ಲಿಯೂ ಕೂಡಾ ಆನ್ ಲೈನ್ ಮೆಡಿಕಲ್ ಮಾಫಿಯಾವನ್ನು ಹತೋಟಿಯಲ್ಲಿಟ್ಟುಕೊಳ್ಳಲಾಗಿದೆ. ಬ್ರಿಟನ್, ಆಸ್ಟ್ರೇಲಿಯಾ ಕೆನಡಾಗಳಲ್ಲೂ ಹೆಚ್ಚು ಕಮ್ಮಿ ಇದೇ ರೀತಿಯ ಕಾನೂನುಗಳು ಹಾಗೂ ಉಸ್ತುವಾರಿ ಇದೆ. ಬ್ರಿಟನ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇ ಫಾರ್ಮದ ಲೋಗೋ ಅಥವಾ ಚಿಹ್ನೆಯನ್ನು ಜಾರಿಗೆ ತಂದಿದೆ. ಆದರೆ ನಮ್ಮಲ್ಲಿ ಸೂಕ್ತ ಕಾನುನುಗಳಿಲ್ಲ. ೨೦೧೪ರ ಪ್ರಿಸ್ಕ್ರಿಪ್ಷನ್ ಕ್ಯಾನ್ ಬಿ ರೀಡ್ ಎಲೆಕ್ಟ್ರಾನಿಕಲಿ ಎಂಬ ಪದಗಳ ನಾಮಬಲದಲ್ಲಿಯೇ ಇಲ್ಲಿ ವ್ಯವಹಾರ ನಡೆಯುತ್ತಿದ್ದು ನಾನಾ ಅನಾಹುತಗಳಿಗೆ ಕಾರಣವಾಗಬಹುದಾಗಿದೆ.


ಈ ಸಂಬಂಧವಾಗಿ ಸಂಕಷ್ಟದಲ್ಲಿ ಲಕ್ಷಾಂತರ ಕುಟುಂಬಗಳು ಒದ್ದಾಡುತ್ತಿದ್ದಾವೆ.
ನಿಖರವಾಗಿ ಹೇಳಬೇಕೆಂದರೆ ಈ ಆನ್ ಲೈನ್ ಫಾರ್ಮಸಿ ಎಂಬುದು ಎರಡಲಗಿನ ಕತ್ತಿ ಇದ್ದಂತೆ. ಒಂದೆಡೆ ಔಷಧದ ದುರ್ಬಳಕೆ ಹೆಚ್ಚುತ್ತಿದ್ದರೆ, ಮತ್ತೊಂದೆಡೆ ದೇಶದಲ್ಲಿರುವ ಲಕ್ಷಾಂತರ ಕುಟುಂಬಗಳಿಗೆ ಹೊಡೆತ ಬೀಳಲಿದೆ ಎಂಬ ವಾದವಿದೆ. ಇವರ ಹೊಟ್ಟೆ ಮೇಲೆ ಹೊಡೆದು ಆನ್‌ಲೈನ್ ಮಾರಾಟಗಾರರು ಶ್ರೀಮಂತಿಕೆಯಲ್ಲಿ ತೇಲಲಿದ್ದಾರೆ. ರಾಜ್ಯದಲ್ಲಿ ಸುಮಾರು ಇಪ್ಪತ್ತೆಂಟು ಸಾವಿರ ಮಳಿಗೆಗಳಿವೆ. ಇಫಾರ್ಮಸಿಗೆ ಅವಕಾಶ ಮಾಡಿಕೊಟ್ಟರೆ ಇವರೆಲ್ಲಾ ತೊಂದರೆಗೆ ಸಿಲುಕುವುದು ನಿಶ್ಚಿತ. ಕರ್ನಾಟಕದಲ್ಲಿ ಹಲವು ವರ್ಷಗಳಿಂದ ವ್ಯವಹಾರ ನಡೆಸಿಕೊಂಡು ಬರುತ್ತಿರುವ ಇವರು ಶೇಖಡಾ ೧೨ರಷ್ಟು ಮಾರ್ಜಿನ್‌ನಲ್ಲಿ ವ್ಯವಹಾರ ನಡೆಸುತ್ತಿದ್ದಾರೆ. ಅಲ್ಲಿ ಈವತ್ತಿಗೂ ಒಂದು ನ್ಯಾಯಸಮ್ಮತ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಆದರೆ ಆನ್ ಲೈನ್ ದಂಧೆಕೋರರು ಡಿಸ್ಕೌಂಟಿನ ತುಪ್ಪ ಸವರುತ್ತಲೇ ನಕಲಿ ಔಷಧ ಮಾರಾಟ ಮಾಡುತ್ತ ದುಂಡಗಾಗುತ್ತಿದ್ದಾರೆ.
ಈ ಆನ್ ಲೈನ್ ಮಂದಿ ಔಷಧಿ ಮಾರಾಟ ಮಾಡುವ ರೀತಿಯೇ ಎಲ್ಲವನ್ನೂ ಜಾಹೀರು ಮಾಡುವಂತಿದೆ. ಆನ್‌ಲೈನ್ ಫಾರ್ಮಸಿ ಶೇಖಡಾ ಹದಿನೈದಕ್ಕೂ ಹೆಚ್ಚು ರಿಯಾಯ್ತಿ ಘೋಷಿಸಿ ಬಿಜಿನೆಸ್ ನಡೆಸುತ್ತದೆ. ಇಂಥಾ ರಿಯಾಯಿತಿ ಬೇಡ ಎನ್ನುವವರಿಗೆ ಮುನ್ನೂರು ಮುಖಬೆಲೆಯ ಟಾಯ್ಲೆಟ್ ಕ್ಲೀನರ್, ಸೋಪು ಮತ್ತಿತರ ಗೃಹೋಪಯೋಗಿ ಶಾಂಪುಗಳನ್ನು ಪುಕ್ಕಟ್ಟೆ ನೀಡಿ ಆನ್‌ಲೈನ್‌ನತ್ತ ಆಕರ್ಷಿಸುತ್ತಿವೆ. ಹೀಗಾಗಿ ಜನ ಅದಕ್ಕೆ ಮುಗಿಬಿದ್ದರೆ, ಸಾಂಪ್ರದಾಯಿಕ ಔಷಧಾಲಯಗಳಿಗೆ ಬಾಗಿಲು ಹಾಕುವ ಸ್ಥಿತಿ ಉದ್ಭವಿಸುತ್ತದೆ. ಫಾರ್ಮಸಿಗಳನ್ನು ಉಳಿಸಲು ಔಷಧ ಮತ್ತು ಪ್ರಸಾದನ ಕಾಯ್ದೆಯಲ್ಲಿ ಕೆಲವು ತಿದ್ದುಪಡಿ ಮಾಡಬೇಕು ಎಂದು ಬೆಂಗಳೂರಿನ ಫಾರ್ಮಸಿ ವ್ಯಾಪಾರಿಗಳು ನಡೆಸಿರುವ ಧರಣಿಯೂ ಫಲ ಕೊಟ್ಟಿಲ್ಲ. ಯಾಕೆಂದರೆ ದಿನ ನಿತ್ಯ ಇಂಥಾ ಆನ್ ಲೈನ್ ಔಷಧ ಮಾರಾಟ ದಂಧೆ ವಿಸ್ತರಿಸುತ್ತಲೇ ಇದೆ. ರಾಜ್ಯದಲ್ಲಿ ಇದಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಸರ್ಕಾರ ಮುಂದುವರೆಯಬೇಕಿದೆ.

Tags: #awareness#helth#mustread#onlinepharmacy#onlinepharmacymafia

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
weird facts: ಕಂಡು ಕೇಳರಿಯದ ವಿಚಿತ್ರ ವಿಚಾರಗಳು!

weird facts: ಕಂಡು ಕೇಳರಿಯದ ವಿಚಿತ್ರ ವಿಚಾರಗಳು!

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.