ಈ ಜಗತ್ತಿನಲ್ಲಿ ಚಾಲ್ತಿಯಲ್ಲಿರುವ ಪ್ರತೀ ಧರ್ಮಗಳೂ ಕೂಡಾ ಕಾರುಣ್ಯದ ತಳಹದಿಯ ಮೇಲೆಯೇ ಜೀವ ಪಡೆದುಕೊಂಡಿವೆ. ಆದರೆ, ಅದೇಕೋ ಆಧುನಿಕ ಜಗತ್ತು ಧರ್ಮಗಳ ಅಸಲೀಯತ್ತನ್ನೇ ಅದಲುಬದಲು ಮಾಡಿ, ಅದರ ನವಿರುತನಕ್ಕೆ ಕರ್ಮಠ ಸಿದ್ಧಾಂತಗಳ ಒಗರು ಮೆತ್ತಿ ಬಿಟ್ಟಿದೆ. ಸದ್ಯದ ಮಟ್ಟಿಗೆ ಒಂದಿಡೀ ಜಗತ್ತನ್ನೇ ಬೆಚ್ಚಿ ಬೀಳಿಸುತ್ತಿರುವ, ಅದೆಷ್ಟೋ ಅಮಾಯಕ ಜೀವಗಳನ್ನು ನಿರ್ದಾಕ್ಷಿಣ್ಯವಾಗಿ ಬಲಿ ಬೀಳಿಸಿರುವ ಭಯೋತ್ಪಾದನೆ ಕೂಡಾ ಧರ್ಮ ಉಳಿಸೋ ಧಾವಂತದ ಕೂಸಾಗಿರೋದು ಬಹುಶಃ ಮನುಷ್ಯಮಾತ್ರರ್ಯಾರೂ ಅರಗಿಸಿಕೊಳ್ಳಲಾರದ ಸತ್ಯ. ಇದೀಗ ಪಾಕಿಸ್ತಾನವೆಂಬೋ ದೇಶ ಭಯೋತ್ಪಾದಕರ ಉಗ್ರಾಣವಾಗಿದೆ. ಯಾವುದೋ ಸೆಳವಿಗೆ ಸಿಕ್ಕು ಬಂದೂಕು, ಬಾಂಬುಗಳನ್ನು ಕೈಗೆತ್ತಿಕೊಂಡ ಆ ದೇಶದ ದುಷ್ಟರ ಪಾಲಿಗೀಗ ಭ ಆರತದ ಮುಕುಟದಂತಿರೋ ಸುಂದರ ಕಾಶ್ಮೀರ ಅಸ್ತ್ರದಂತೆ ಸಿಕ್ಕಿಬಿಕಟ್ಟಿದೆ. ಬಹು ಕಾಲದ ನಂತರ ಆ ದೇವಭೂಮಿಗೆ ಮತ್ತೆ ನೆತ್ತರ ಸಿಂಚನವಾಗಿದೆ!
ಪೆಹಲ್ಗಾಮ್ ನರಮೇಧ
ಈ ಬಾರಿಯೂ ಖೂಳ ಭಯೋತ್ಪಾದಕರ ಅಟ್ಟಹಾಸಕ್ಕೆ ಸಿಕ್ಕು ಜೀವ ಬಿಟ್ಟಿರೋದು ಅಮಾಯಕ ಜೀವಗಳೇ ಅನ್ನೋದನ್ನು ಬಿಡಿಸಿ ಹೇಳಬೇಕಾಗಿಲ್ಲ. ಕಾಶ್ಮೀರವನ್ನು ಕಣ್ತುಂಬಿಕೊಳ್ಳುತ್ತಾ, ಇಷ್ಟದ ಜೀವಗಳೊಂದಿಗೆ ಒಡನಾಡಿ ಸಂಭ್ರಮಿಸುವ ಇರಾದೆಯಿಂದ ಅದೆಷ್ಟೋ ಮಂದಿ ಕಾಶ್ಮೀರಕ್ಕೆ ಎಡತಾಕುತ್ತಾರೆ. ಅಷ್ಟಕ್ಕೂ ಜೀವನದಲ್ಲಿ ಒಮ್ಮೆಯಾದರೂ ಆ ಪ್ರದೇಶವನ್ನೊಮ್ಮೆ ಕಣ್ತುಂಬಿಕೊಳ್ಳಬೇಕೆಂಬ ಆಸೆ ನಮ್ಮ ದೇಶದ ಬಹುತೇಕರಿಗಿದೆ. ವಿದೇಶದ ಮಂದಿಯನ್ನೂ ಕೂಡಾ ಕಾಶ್ಮೀರವೆಂಬುದು ಅಷ್ಟೇ ತೀವ್ರವಾಗಿ ಸೆಳೆಯುತ್ತದೆ. ಅಂಥಾದ್ದೊಂದು ಸೆಳೆತದಿಂದಲೇ ಆ ದಿನವೂ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಪೆಹಲ್ಗಾಮ್ ಪ್ರದೇಶದ ಸ್ವರ್ಗದಂಥಾ ಪರಿಸರದಲ್ಲಿ ಕೆನೆದಾಡುತ್ತಿದ್ದರು.
ಆ ಸಂಭ್ರಮ ಸ್ವಲ್ಪದರಲ್ಲಿಯೇ ಸೂತಕವಾಗಿ ಬದಲಾದೀತೆಂಬ ಸಣ್ಣ ಕಲ್ಪನೆ ಯಾರೆಂದರೆ ಯಾರಿಗೂ ಇರಲಿಲ್ಲ. ಹೇಳಿಕೇಳಿ ಕಾಶ್ಮೀರದ ಪಾಲಿಗೆ ಪ್ರವಾಸೋದ್ಯಮವೇ ಜೀವಾಳ. ಅದಕ್ಕಾಗಿ ಯಾವುದನ್ನೂ ಕೂಡಾ ಕೃತಕವಾಗಿ ನಿರ್ಮಾಣ ಮಾಡುವ ಅವಶ್ಯಕತೆಯೇ ಅಲ್ಲಿಲ್ಲ. ಬಳಿ ಬಂದವರನ್ನು ಅವಾಕ್ಕಾಗಿಸುವಂತೆ ಮಾಡಬಲ್ಲ ಎಎಲ್ಲವೂ ಪ್ರಾಕೃತಿಕವಾಗಿಯೇ ಆ ಭಾಗಕ್ಕೆ ಲಭಿಸಿದೆ. ಆದರೆ, ಆಳುವ ಮಂದಿ ಕೊಂಚ ಭದ್ರತೆಯತ್ತ ಗಮನ ಹರಿಸಿದ್ದರೆ ಬಹುಶಃ ಇಂಥಾ ನರಮೇಧ ಸಂಭವಿಸುತ್ತಿರಲಿಲ್ಲ ಎಂಬ ಅಭಿಪ್ರಾಯ ಬಹುತೇಕ ಭಾರತೀಯರಲ್ಲಿದೆ. ಕಡೆಗೂ ಇಪ್ಪತ್ತಾರು ಮಂದಿಯನ್ನು ದುಷ್ಟ ಭಯೋತ್ಪಾದಕರು ನಿರ್ದಾಕ್ಷಿಣ್ಯವಾಗಿ ಗುಂಡಿಟ್ಟು ಕೊಂದಿದ್ದಾರೆ. ಯಾವ ಯಾಚನೆಗೂ ಕರಗದ ರಕ್ಕಸ ಮನಃಸ್ಥಿತಿಯ ಮಂದಿ ಕೊಂದು ಬಿಲ ಸೇರಿಕೊಂಡಿದ್ದಾರೆ. ಇಂಥಾ ರಾಕ್ಷಸರ ಪಾಲಿನ ಅಡಗುದಾಣದಂತಿರೋ ಪಾಕಿಸ್ತಾನದ ಆಡಳಿತಗಾರು ಮತ್ತದೇ ನೌಟಂಕಿ ಮಾತುಗಳನ್ನಾಡುತ್ತಾ, ಭಾರತದ ಶತ್ರು ದೇಶವಾದ ಚೀನಾದ ಮುಂದೆ ಕೈಚಾಚಿ ದೈನೇಸಿ ಸ್ಥಿತಿಯಲ್ಲಿ ನಿಂತಿದೆ.
ಕಾಶ್ಮೀರ ಕಣಿವೆಯ ಆತಂಕ
ಸ್ವಾತಂತ್ರ್ಯಾ ನಂತರದಲ್ಲಿ ದೇಶ ವಿಭಜನೆಯ ನಂತರದಲ್ಲಿ ಪಾಕಿಸ್ತಾನವೆಂಬೋ ದೇಶವೊಂದು ಉಗಮವಾಗಿತ್ತು. ಆದರೆ, ಆ ನಂತರದಲ್ಲಿ ಭಾರತದ ಕಳಶದಂತಿರುವ ಕಾಶ್ಮೀರ ತಮಗೆ ಸೇರಬೇಕೆಂಬರ್ಥದಲ್ಲಿ ಅಲ್ಲಿನ ನಾಯಕರು ರೊಳ್ಳೆ ತೆಗೆಯಲಾರಂಭಿಸಿದ್ದರು. ಅರವತತ್ತರ ದಶಕದ ನಂತರದಲ್ಲಿ ಪಾಕಿಸ್ತಾನ ಜಿದ್ದಿಗೆ ಬಿದ್ದಂತೆ, ಕಾಶ್ಮೀರವನ್ನು ಮುಂದಿಟ್ಟುಕೊಂಡು ಭಾರತದ ನೆಮ್ಮದಿ ಕೆಡಿಸಲು ಟೊಂಕ ಕಟ್ಟಿ ನಿಂತಿತ್ತು. ಕಾಶ್ಮೀರ ನಮ್ಮದು ಅನ್ನುತ್ತಲೇ ಭಾರತದಾದ್ಯಂತ ಉಗ್ರ ಜಾಲ ಹಬ್ಬಿಸುವಲ್ಲಿ ನಿರತವಾಗಿತ್ತು. ರಜಾಕರ್ಸ್ ತುಕಡಿಗಳನ್ನು ರೂಪಿಸಿ, ಅವುಗಳಿಗೆ ಉಗ್ರ ತರಬೇತಿ ಕೊಡುವ ಮೂಲಕ ಭಾರತಕ್ಕೆ ನುಸುಳುವಂತೆ ಮಾಡುವಲ್ಲಿ ಯಶ ಕಂಡಿತ್ತು.
ಅಲ್ಲಿಂದೀಚೆಗೆ ಕಾಶ್ಮೀರಿ ಪಂಡಿತರೂ ಸೇರಿದಂತೆ ಭಾರತದ ಪ್ರಜೆಗಳನ್ನು ಪಾಕಿಸ್ತಾನ ಪ್ರಣೀತ ಉಗ್ರವಾದಿ ಜಾಲ ಬಲಿ ಹಾಕುತ್ತಾ ಬಂದಿದೆ. ಇಂಥಾ ಉಗ್ರರ ಕಾರಣದಿಂದಾಗಿಯೇ ಭಾರತದ ಮುಕುಟದಂಥಾ ಕಾಶ್ಮೀರ ಸ್ವಾತಂತ್ರ್ಯಾ ನಂತರದಲ್ಲಿ ಸದಾ ನೆತ್ತರ ಮಡುವಲ್ಲಿಯೇ ಒದ್ದಾಡುವಂತಾಗಿತ್ತು. ಪಾಕಿಸ್ತಾನದ ಅತಿಯಾಸೆಯಿಂದಾಗಿ ಕಾಶ್ಮೀರದಲ್ಲಿಯೇ ಹುಟ್ಟಿ ಬೆಳೆದ ಅನೇಕರು ಸಾವನ್ನು ಬೆನ್ನಲ್ಲಿಟ್ಟುಕೊಂಡೇ ಬದುಕುವಂತಾಗಿ ಬಿಟ್ಟಿತ್ತು. ತನಗೆ ಸಿಕ್ಕ ಭಾಗವನ್ನೇ ನೆಟ್ಟಗೆ ಸಂಭಾಳಿಸಲಾಗದ ದುಷ್ಟ ದೇಶ ಪಾಕಿಸ್ತಾನ. ಆದರೆ, ಅದಕ್ಕೆ ಅದೇಕೋ ಕಾಶ್ಮೀರ ತನ್ನದಾಗಬೇಕೆಂಬಂಥಾ ಬಯಕೆ. ಅದು ಪಾಕಿಸ್ತಾನದ ಪಾಲಿಗೆ ಕೇಡುಗಾಲದ ಮುನ್ಸೂಚನೆಯೂ ಹೌದು. ಅಷ್ಟಕ್ಕೂ ಪಾಕಿಸ್ತಾನಕ್ಕೆ ಸ್ವತತಂತ್ರವಾಗಹಿ ಭಾರತವನ್ನು ಕೆಣಕುವ ಧೈರ್ಯವಿಲ್ಲ. ಚೀನಾ ಎಂಬ ಮತ್ತೊಂದು ದುಷ್ಟ ದೇಶ ಹಿತ್ತಿಲಿಂದ ಪಾಕಿಗೆ ಸಹಾಯಹಸ್ತ ಚಾಚುತ್ತಿರೋದು ನಿಚ್ಚಳ. ಇತ್ತೀಚಿನ ವರ್ಷಗಳಲ್ಲಿ ಕಾಶ್ಮೀರದಲಲಿ ಶಾಂತಿ ನೆಲೆಸೋ ಆಶಾದಾಯಕ ವಾತಾವರಣವಿತ್ತು. ಆದರೀಗ ಪೆಹಲ್ಗಾಮ್ ಘಟನೆಯ ಮೂಲಕ ಮತ್ತೆ ಮುಂಚಿನದ್ದೇ ಪರಿಸ್ಥಿತಿ ಆವರಿಸಿಕೊಂಡಿದೆ.
ವಿಶ್ವಾದ್ಯಂತ ಜಾಲ
ಮಧ್ಯಪ್ರಾಚ್ಯದಲ್ಲಿ ರಷ್ಯಾ ಹಾಗೂ ಅಮೆರಿಕ ಮಿತ್ರಪಡೆಗಳ ಸಹಯೋಗದೊಂದಿಗೆ ಸೇನಾಪಡೆಗಳು ನಡೆಸುತ್ತಿರುವ ಜಂಟಿ ಕಾರ್ಯಾಚರಣೆಗೆ ಬೆಚ್ಚಿ ಬಿದ್ದು, ಇರಾಕ್, ಸಿರಿಯಾದಿಂದ ಕಾಲ್ಕೀಳುತ್ತಿರುವ ಐಸಿಸ್ ಸಂಘಟನೆ ಈಗ ನೆರವಿಗಾಗಿ ಪಾಕಿಸ್ತಾನದ ಭಯೋತ್ಪಾದನಾ ಸಂಘಟನೆಗಳ ಎದುರು ಕೈಚಾಚಿದೆ. ತನ್ನ ಕೈತಪ್ಪಿರುವ ದೇಶಗಳನ್ನು ಮರುವಶ ಮಾಡಿಕೊಳ್ಳುವ ಉದ್ದೇಶದಿಂದ ಪಾಕಿಸ್ತಾನ, ಅಫ್ಘಾನಿಸ್ತಾನದ ಉಗ್ರ ಸಂಘಟನೆಗಳೊಂದಿಗೆ ಕೈಜೋಡಿಸಿ ವಿಧ್ವಂಸಕ ಕೃತ್ಯ ಮುಂದುವರಿಸುವ ಹೊಣೆಗಾರಿಕೆ ಯನ್ನು ಹೊರಗುತ್ತಿಗೆ ನೀಡುತ್ತಿದೆ. ಇಂಥದ್ದೊಂದು ಅಚ್ಚರಿಯ ವಿಷಯವನ್ನು ವಿಶ್ವಸಂಸ್ಥೆ ಬಯಲು ಮಾಡಿದೆ. ಹೀಗೆ ಪಾಕಿಸ್ತಾನಕ್ಕೆ ವಿಶ್ವದ ನಾನಾ ದೇಶಗಳ ಭಯೋತ್ಪಾದಕರು ಜಮೆಯಾಗುತ್ತಿದ್ದಾರೆ. ಅವರೆಲ್ಲರೂ ಸೇರಿಕೊಂಡು ಪಾಕ್ ಪರವಾಗಿ ಕಾಶ್ಮೀರ ಸೇರಿದಂತೆ ಭಾರತದ ನಾನಾ ಭಾಗಗಳಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸುವ ಮೂಲಕ ಋಣ ತೀರಿಸುತ್ತಿವೆ.
ಸಿರಿಯಾ ಮತ್ತು ಇರಾಕ್ನಲ್ಲಿ ಸೋಲನ್ನಪ್ಪಿದ ಬಳಿಕ ಐಸಿಸ್ ಗೆ ಯುದ್ಧ ಮುಂದುವರಿಯುವಷ್ಟು ಜನಬಲ ಇಲ್ಲವಾಗಿದೆ. ಹೀಗಾಗಿ ಅಫ್ಘಾನಿ ಸ್ತಾನದಲ್ಲಿ ನೆಲೆ ಕಂಡುಕೊಳ್ಳಲು ಯತ್ನಿಸಿರುವ ಐಸಿಸ್ ಅಲ್ಲಿನ ತಾಲಿಬಾನ್ ಹಾಗೂ ಭಾರತೀಯ ಉಪಖಂಡದ ಅಲ್ಖೈದಾ ಸಂಘಟನೆಗಳಿಗೆ ಆತ್ಮಾಹುತಿ ದಾಳಿ ನಡೆಸುವ ಕಾರ್ಯವನ್ನು ಹೊರಗುತ್ತಿಗೆ ನೀಡುತ್ತಿದೆ. ಇತ್ತೀಚೆಗೆ ಅಫ್ಘಾನಿಸ್ತಾನದ ವಿವಿಧೆಡೆ ಅದರಲ್ಲೂ ವಿಶೇಷವಾಗಿ ಕಾಬೂಲ್?ನಲ್ಲಿ ನಡೆದ ದಾಳಿಗಳನ್ನು ತಾಲಿಬಾನ್, ಅಲ್ಖೈದಾ ಮತ್ತು ಪಾಕಿಸ್ತಾನಿ ತಾಲಿಬಾನ್ ಉಗ್ರರಿಂದ ಮಾಡಿಸಿ ರುವ ಐಸಿಸ್ ಅದರ ಹೊಣೆಯನ್ನು ತಾನೇ ಹೊತ್ತು ಕೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಪಡೆಯುವ ತಂತ್ರ ರೂಪಿಸುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಭಾರತೀಯ ಉಪಖಂಡದ ಅಲ್ಖೆ ದಾ ಮತ್ತು ಆಫ್ಘಾನಿಸ್ತಾನ ತಾಲಿಬಾನ್ ಉಗ್ರ ಸಂಘಟನೆಗಳಲ್ಲಿ ಅಂದಾಜು ಏಳು ಸಾವಿರ ಸದಸ್ಯರಿದ್ದಾರೆ. ಇವೆರಡರ ಪೈಕಿ ತಾಲಿಬಾನ್ ನ ಪ್ರಭಾವವೇ ಹೆಚ್ಚು. ಅಫ್ಘಾನಿಸ್ತಾನದ ತಾಲಿಬಾನ್ ಐಸಿಸ್ನೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಹೊಂದಿರುವುದರಿಂದ ಮೊದಲಿನಿಂದಲೂ ವಿರೋಧಿಸಿಕೊಂಡೇ ಬರುತ್ತಿದೆ. ಆದರೆ ಇದೀಗ ತಮಗೆ ಬೆಂಬಲ ವ್ಯಕ್ತಪಡಿಸಿರುವ ಉಗ್ರ ಶೇಷ್ ಮೊಹಮ್ಮದ್ ಘಜಾನ್ಪರ್ ಎಂಬಾತನೊಂದಿಗೆ ಕೈಜೋಡಿಸಿರುವ ಐಸಿಸ್ ಉಗ್ರರು ದೇಶಾದ್ಯಂತ ಉಗ್ರ ದಾಳಿಯನ್ನು ಸಂಘಟಿಸುತ್ತಿದ್ದಾರೆಂದು ತಿಳಿದು ಬಂದಿದೆ. ಸಿರಿಯಾ ಮತ್ತು ಇರಾಕ್ನಲ್ಲಿ ನೆಲೆ ಕಳೆದುಕೊಂಡಿರುವ ಐಸಿಸ್?ಗೆ ಆರ್ಥಿಕ ಬಲವೂ ಕ್ಷೀಣಿಸಿದೆ. ಆದರೂ ಅಫ್ಘಾನಿಸ್ತಾನದಲ್ಲಿರುವ ಸಂಘಟನೆಯ ಸದಸ್ಯರಿಗೆ ನಿರಂತರವಾಗಿ ಹಣ ರವಾನಿಸುತ್ತಿದೆ. ಸ್ವಂತ ಆದಾಯ ಇಲ್ಲದ ಅಫ್ಘಾನಿಸ್ತಾನದ ಐಸಿಸ್ ಉಗ್ರರು ಈ ಹಣ ಬಳಸಿಕೊಂಡು ಕಳೆದ ಮೂರು ವರ್ಷಗಳಿಂದ ದೇಶದ ಉತ್ತರ ಭಾಗದಲ್ಲಿ ಹೊಸ ಉಗ್ರರ ನೇಮಕಾತಿಯಲ್ಲಿ ತೊಡಗಿದ್ದಾರೆ. ಆದರೆ ಸ್ವತಃ ದಾಳಿ ಸಂಘಟಿಸುವಷ್ಟು ಸಾಮರ್ಥ್ಯ ಪಡೆಯಲು ಈ ಉಗ್ರರಿಗೆ ಸಾಧ್ಯವಾಗಿಲ್ಲ.
ಕರ್ನಾಟಕದಲ್ಲೂ…
ಕಾಸರಗೋಡು ಜಿಲ್ಲೆಯ ಪಡನ್ನ, ಕಣ್ಣೂರು ಜಿಲ್ಲೆಯ ಕನಕಮಲೆ ಹಾಗೂ ಬೆಹರೇನ್ ಕೇಂದ್ರೀಕರಿಸಿ ಕೇರಳದ ಯುವಕ, ಯುವತಿಯರನ್ನು ಐಸಿಸ್ಗೆ ಸೇರ್ಪಡೆಗೊಳಿಸುವ ಜಾಲದ ಪ್ರಧಾನ ಸೂತ್ರಧಾರ ಕಣ್ಣೂರು ನಿವಾಸಿ ಹಂಸಾ ಎಂಬುವನನ್ನು ಪೊಲೀಸರು ಈ ಹಿಂದೆ ಬಂಧಿಸಿದ್ದರು. ಈತ ನೀಡಿದ ಮಾಹಿತಿ ಅನ್ವಯ ಕಣ್ಣೂರು ಜಿಲ್ಲೆಯ ಇತರ ಐವರನ್ನು ಬಂಧಿಸಲಾಗಿತ್ತು. ಈ ಐವರು ತುರ್ಕಿಯ ಐಸಿಸ್ ಕೇಂದ್ರಕ್ಕೆ ಸಾಗುವ ದಾರಿ ಮಧ್ಯೆ ಅಲ್ಲಿನ ಪೊಲೀಸರು ತಡೆದು ಭಾರತಕ್ಕೆ ಗಡೀಪಾರು ಮಾಡಿದ್ದರು. ನಂತರ ವಳಪಟ್ಟಣ ಪೊಲೀಸರು ಇವರನ್ನು ಬಂಧಿಸಿದ್ದರು. ಕೇರಳದಲ್ಲಿ ವಿವಿಧ ಸಂಘಟನೆಗಳ ಹೆಸರಲ್ಲಿ ಐಸಿಸ್ ನಂಟು ಹೊಂದಿರುವ ೨೦ ಮಂದಿ ಚಟುವಟಿಕೆ ನಡೆಸುತ್ತಿರುವ ಬಗ್ಗೆ ಹಂಸಾ ಪೊಲೀಸರ ಮುಂದೆ ಬಾಯಿಬಿಟ್ಟಿದ್ದ. ಎನ್ಐಎ ಪ್ರಕರಣಗಳ ತನಿಖೆ ನಡೆಸುತ್ತಿದೆ. ಕಾಶ್ಮೀರ ಗೆಲುವಿಗಾಗಿ ಬೆಂಗಳೂರು, ಮುಂಬೈ, ದೆಹಲಿ ಹಾಗೂ ಕೊಲ್ಕತಾದಲ್ಲಿ ಉಗ್ರ ದಾಳಿ ನಡೆಸುವುದಾಗಿ ಜಾಗತಿಕ ಉಗ್ರ ಸಂಘಟನೆ ಅಲ್ ಖೈದಾ ಬೆದರಿಕೆ ಹಾಕಿತ್ತು. ಗಮನೀಯ ಸಂಗತಿಯೆಂದರೆ, ಇಂಥಾ ಎಲ್ಲ ಉಗ್ರ ಸಂಘಟನೆಗಳ ತವರು ನೆಲ ಪಾಕಿಸ್ತಾನ!
ಹೀಗೆ ಹಲವಾರು ಪ್ರಶ್ನೆಗಳು ನಮ್ಮಲ್ಲಿ ಮೂಡುವುದು ಸಹಜ. ಆದರೆ ಇಂತಹ ಪ್ರಶ್ನೆಗಳಿಗೆ ಉತ್ತರ ಹುಡುಕುವ ಗೋಜಿಗೆ ಹೋಗುವವರು ಎಷ್ಟು ಜನ? ಹಾಗೇ ಸಿಕ್ಕ ಉತ್ತರದಿಂದ ಉಪಯೋಗ ಪಡೆದವರು ಹಾಗೇ ಜನಕ್ಕೆ ಇದರ ಬಗ್ಗೆ ಅರಿವು ಮೂಡಿಸಿದವರು ಎಷ್ಟು ಜನ? ಭಯೋತ್ಪಾದನೆ ಹಾಗೂ ಅಂತರ್ಜಾಲದ ಸಂಬಂಧದ ಬಗ್ಗೆ ಹೆಕ್ಕಿ ತೆಗೆದ ವಿಷಯಗಳು ಇಲ್ಲಿವೆ. ಭಯೋತ್ಪಾದನೆ ಹಾಗೂ ಅಂತರ್ಜಾಲ ಎರಡು ರೀತಿಯಾಗಿ ಸಂಬಂಧ ಹೊಂದಿದೆ. ಮೊದಲನೆಯದು ಅಂತರ್ಜಾಲ ಭಯೋತ್ಪಾದಕರ ಗುಂಪು. ಇವರು ಅಂತರ್ಜಾಲದ ಮೂಲಕ ಅಥವಾ ಅದರ ಸಹಾಯದಿಂದ ಭಯೋತ್ಪಾದನೆ, ದ್ವೇಷ ಅಸಹನೀಯ ಸಂದೇಶಗಳನ್ನು ಹರಡಲು ಹಾಗೂ ಪರಸ್ಪರ ಸಂಪರ್ಕಿಸಲು ಅಂತರ್ಜಾಲ ಮಾಧ್ಯಮವನ್ನು ಉಪಯೋಗಿಸುತ್ತಾರೆ.
ಭಯೋತ್ಪಾದನೆಯು ದೇಶದೆಲ್ಲೆಡೆ ಕ್ರೌರ್ಯ ಮತ್ತು ಅವಮಾನಕರವಾದ ಕೃತ್ಯಗಳಂತಹ ಚಟುವಟಿಕೆಗಳಲ್ಲಿ ತೊಡಗಿಕೊಂಡು ದೇಶದ ಜನರಲ್ಲಿ ಭಯವನ್ನುಂಟು ಮಾಡುವುದಾಗಿದೆ. ಭಯೋತ್ಪಾದನೆ ಅಥವಾ ಟೆರರಿಸಂ ಎಂಬ ಪದವು ಲ್ಯಾಟಿನ್ ಭಾಷೆಯ ಖಿeಡಿಡಿeಡಿe ಎಂಬ ಪದದಿಂದ ಬಂದಿದೆ. ಧಾರ್ಮಿಕ ಮೂಲಭೂತವಾದ ಈಶಾನ್ಯ ಭಾರತದ ಜನಾಂಗೀಯ ಸಮಸ್ಯೆಗಳು, ರಾಜಕೀಯ ಸಮಸ್ಯೆಗಳು, ಪ್ರಾದೇಶಿಕವಾದ ಅಥವಾ ಪ್ರತ್ಯೇಕತಾವಾದಗಳು ಭಯೋತ್ಪಾದನೆಗೆ ಕಾರಣವಾಗಿದೆ. ಹಿಂದೂ, ಮುಸ್ಲಿಂ, ಸಿಖ್ರ ನಡುವೆ ಕೋಮು ಸಾಮರಸ್ಯ ಕೆಟ್ಟು ಕೋಮು ಗಲಭೆಗೆ ತಿರುಗುತ್ತದೆ. ಇದರಿಂದ ದೇಶದಲ್ಲಿ ಭಯೋತ್ಪಾದನೆಗೆ ಎಡೆಮಾಡಿ ಕೊಟ್ಟಂತಾಗುತ್ತದೆ. ಈಶಾನ್ಯ ಭಾರತದ ಜನಾಂಗೀಯ ಸಮಸ್ಯೆಯಿಂದ ಈ ಭಾಗಗಳಲ್ಲಿ ಭಯೋತ್ಪಾದನೆ ಹೆಚ್ಚಾಗಿ ಕಂಡು ಬರುತ್ತದೆ. ನಾಗಾಲ್ಯಾಂಡ್ ನ ಕುಶಿ ಪ್ರದೇಶದಲ್ಲಿ ಜನಾಂಗಗಳ ದ್ವೇಷಪೂರಿತ ಭಾsವನೆಯೂ ಕೂಡಾ ಭಯೋತ್ಪಾದನೆಗೆ ಕಾರಣವಾಗಿದೆ.
ನಮ್ಮ ವ್ಯವಸ್ಥೆಯೇ ಕಾರಣ
ಭಯೋತ್ಪಾದನೆ ಗಟ್ಟಿಗೊಳ್ಳಲು ರಾಜಕೀಯ ಸಮಸ್ಯೆಗಳು ಒಂದು ಪ್ರಬಲ ಕಾರಣವಾಗಿದೆ. ಭಾರತದಲ್ಲಿ ಬಹುಪಕ್ಷ ಪದ್ಧತಿಯು ಅಸ್ತಿತ್ವದಲ್ಲಿರುವುದರಿಂದ ರಾಜಕೀಯ ಕ್ಷೇತ್ರವು ದುರ್ಬಲವಾಗಿದೆ . ಬಹುಪಕ್ಷ ಪದ್ಧತಿಯು ಆಡಳಿತ ನಡೆಸುವುದರಿಂದ ಪಕ್ಷಗಳು ವಿಭಿನ್ನ ನಿಲುವನ್ನು ತೆಗೆದುಕೊಂಡು ಭಯೋತ್ಪಾದನಾ ಚಟುವಟಿಕೆಯನ್ನು ನಿಯಂತ್ರಿಸುವಲ್ಲಿ ವಿಫಲಗೊಂಡಿದೆ. ಮಾವೋವಾದಿಗಳು ಪೀಪಲ್ಸ್ ವಾರ್ ಗ್ರೂಪ್ ಹಾಗೂ ಇನ್ನಿತರ ಉಗ್ರವಾದಿ ಸಂಘಟನೆಗಳು ದೇಶದಲ್ಲಿ ಆತಂಕವನ್ನುಂಟು ಮಾಡಿ, ದೇಶದ ಪ್ರಜಾಪ್ರಭುತ್ವಕ್ಕೆ ದಕ್ಕೆಯನ್ನುಂಟುಮಾಡುತ್ತಿವೆ. ಭಾರತದಲ್ಲಿ ಹಲವಾರು ವರ್ಷಗಳಿಂದಲೂ ಗಡಿಭಾಗದ ಸಮಸ್ಯೆಗಳು ಬಗೆಹರಿಯದೆ ಹಾಗೆಯೇ ಉಳಿದುಕೊಂಡಿವೆ. ಇದರಲ್ಲಿ ರಾಜಕೀಯ ಹಿತಾಸಕ್ತಿ ಯಾರನ್ನೋ ಓಲೈಸಲು ಆಳುವವರು ಪ್ರಯತ್ನಿಸುತ್ತಿದ್ದಾರೆ.. ಇದು ಭಯೋತ್ಪಾದನಾ ಚಟುವಟಿಕೆಗೆ ಕಾರಣವಾಗುತ್ತಿದೆ. ಇನ್ನೊಂದು ಆಘಾತಕಾರಿ ವಿಷಯವೆಂದರೆ ಉನ್ನತ ವಿದ್ಯಾರ್ಹತೆ ಪಡೆದ ಅನುಕೂಲ ಕುಟುಂಬಗಳಿಂದ ಬಂದ ಯುವಕರು ಭಯೋತ್ಪಾದನಾ ಚಟುವಟಿಕೆಗಳಿಂದ ಆಕರ್ಷಿತರಾಗಿರುವುದು. ಇಂಟರ್ ನೆಟ್, ಬಾಂಬ್ ತಯಾರಿಕೆಯ ತಂತ್ರಜ್ಞಾನವನ್ನು ಕರಗತ ಮಾಡಿಕೊಂಡಿರುವ ಇವರಿಂದ ಉಂಟಾಗುವ ಭೀಕರತೆಯನ್ನು ಊಹಿಸಲೂ ಅಸಾಧ್ಯ. ಶಾಂತಿಪ್ರಿಯರ ನಾಡಾಗಿದ್ದ ಕರ್ನಾಟಕದ ಬೆಂಗಳೂರು, ಮಂಗಳೂರು ಮತ್ತು ಭಟ್ಕಳ ಪ್ರದೇಶಗಳು ಭಯೋತ್ಪಾದನಾ ಅಡಗುತಾಣವಾಗುತ್ತಿರುವುದು ಆತಂಕಕಾರಿ ವಿಚಾರವಾಗಿದೆ. ಈ ಪ್ರದೇಶದ ಪೊಲೀಸ್ ಇಲಾಖೆಯನ್ನು ಬಲಪಡಿಸಬೇಕು. ಗುಪ್ತಚರ ಇಲಾಖೆಯನ್ನು ಪನರ್ ರಚಿಸಬೇಕು. ಸರಕಾರ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಸಿಬ್ಬಂದಿಗಳನ್ನು ಕೂಡಲೇ ನೇಮಕ ಮಾಡಬೇಕು.
ಪ್ರತಿಯೊಬ್ಬ ನಾಗರಿಕನೂ ದೇಶದ ಗುರುತು ಚೀಟಿಯನ್ನು ಹೊಂದಿರಬೇಕು. ಕಳೆದ ೨೦ ವರ್ಷಗಳಿಂದ ಎಲ್ಲಾ ಮತದಾರರಿಗೂ ಚುನಾವಣಾ ಗುರುತಿನ ಚೀಟಿಯನ್ನು ನೀಡಲು ಕೇಂದ್ರ ಸರಕಾರದಿಂದ ಸಾಧ್ಯವಾಗಲಿಲ್ಲ. ಎಷ್ಟೋ ನುಸುಳುಕೋರರು ಇಲ್ಲಿಗೆ ಬಂದು ನಿರಾತಂಕವಾಗಿ ನೆಲೆಸಿದ್ದಾರೆ. ಇವರನ್ನು ಪತ್ತೆ ಹಚ್ಚಿ ದಂಡಿಸುವ ಕೆಲಸ ಕನಸಿನ ಮಾತಾಗಿದೆ. ಭಯೋತ್ಪಾದನೆಯು ಭಾರತದ ಸಂವಿಧಾನಕ್ಕೆ ಒಂದು ಮಾರಕ ಬೆಳವಣಿಗೆಯಾಗಿದೆ. ಇದರಿಂದ ಸಂವಿಧಾನದ ನಿಯಮಗಳು ಉಲ್ಲಂಘನೆಯಾಗಿ ಆಡಳಿತ ಯಂತ್ರದಲ್ಲಿ ಅಸಮತೋಲನ ಉಂಟಾಗುತ್ತದೆ. ಭಯೋತ್ಪಾದಕರ ಬೇಡಿಕೆಗಳನ್ನು ಈಡೇರಿಸಲು ಸರಕಾರ ಮಣಿಯಬೇಕಾಗುತ್ತದೆ. ಭಯೋತ್ಪಾದನೆಯು ಭಾರತದಲ್ಲಿ ಆರ್ಥಿಕ ಅಸಮಾನತೆಯನ್ನುಂಟು ಮಾಡುವಲ್ಲಿ ಕಾರಣೀಭೂತವಾಗಿದೆ. ಸರಕಾರದ ಆರ್ಥಿಕ ಸಂಪನ್ಮೂಲಗಳಾದ, ಆಹಾರ, ಆರೋಗ್ಯ, ಶಿಕ್ಷಣಕ್ಕೆ ವ್ಯಯವಾಗುವುದಕ್ಕಿಂತ ಹೆಚ್ಚು ಭಯೋತ್ಪಾದನಾ ನಿಗ್ರಹಕ್ಕೆ ಖರ್ಚಾಗುತ್ತದೆ. ಇದರಿಂದ ಸಮಾಜದಲ್ಲಿ ಶ್ರೀಮಂತರು ಮತ್ತು ಬಡವರು ಎಂಬ ಎರಡು ವರ್ಗಗಳು ಸೃಷ್ಟಿಯಾಗಿವೆ. ಈ ಆರ್ಥಿಕ ಅಸಮಾನತೆಯೇ ಭಯೋತ್ಪಾದನೆಗೆ ಆಸ್ಪದ ನೀಡಿದಂತಾಗುತ್ತದೆ. ಅಲ್ಲದೇ ಕೆಲವು ರಾಜ್ಯಗಳಲ್ಲಿ ನಡೆಯುತ್ತಿರುವ ಆಸ್ಮಿತೆ ರಾಜಕಾರಣ ಭಯೋತ್ಪಾದನೆಗೆ ಇಂಬು ಕೊಟ್ಟಂತಾಗುತ್ತದೆ.
ಪ್ರತಿಭಾನ್ವಿತ ವಿದ್ಯಾರ್ಥಿಗಳು ಭಯೋತ್ಪಾದನೆಯ ಕಡೆಗೆ ಆಕರ್ಷಿತರಾಗಿರುವುದು ಆತಂಕಕಾರಿ ವಿಚಾರ. ನಮ್ಮ ನೆರೆಮನೆಯಲ್ಲಿ ಕುಳಿತು ಇಂಟರ್ನೆಟ್ ಮೂಲಕ ಭಯೋತ್ಪಾದನಾ ಚಟುವಟಿಕೆಗಳೊಂದಿಗೆ ಕೈಜೋಡಿಸಿರುವ ವಿಚಾರಗಳು ರಾಷ್ಟ್ರೀಯ ಹಬ್ಬಗಳ ಸಂದರ್ಭಗಳಲ್ಲಿ ಬೆಳಕಿಗೆ ಬರುತ್ತವೆ. ದೊಡ್ಡ ಅನಾಹುತಗಳು ಸಂಭವಿಸಿ ಸಾವಿರಾರು ಮುಗ್ಧ ನಾಗರೀಕರ ಹತ್ಯೆಯಾಗುವ ಮೊದಲೇ ಗುಪ್ತಚರ ಇಲಾಖೆಗೆ ಪತ್ತೆ ಹಚ್ಚಲು ಸಾಧ್ಯವಿಲ್ಲವೇ? ಗುಪ್ತಚರ ಇಲಾಖೆ ಮತ್ತು ಪೋಲೀಸ್ ಇಲಾಖೆಗಳನ್ನು ಹೆಚ್ಚು ಆಧುನೀಕರಣಗೊಳಿಸಿ ಎಲ್ಲರಿಗೂ ತರಬೇತಿ ನೀಡುವುದು ಅವಶ್ಯಕವಾಗಿದೆ. ಉತ್ತಮ ವೇತನ ಸೌಲಭ್ಯಗಳನ್ನು ನೀಡಿ ಭೃಷ್ಟಾಚಾರಗಳಿಂದ ಮುಕ್ತಗೊಳಿಸುವುದು ರಾಜಕೀಯ ಹಸ್ತಕ್ಷೇಪಗಳಿಂದಲೂ ಮುಕ್ತಗೊಳಿಸುವುದು ಅನಿವಾರ್ಯವಾಗಿದೆ. ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಭಯೋತ್ಪಾದನಾ ಚಟುವಟಿಕೆಗಳಲ್ಲಿ ಆಕರ್ಷಿತರಾಗದಂತೆ ನೈತಿಕ ಮತ್ತು ಮಾನವೀಯ ಶಿಕ್ಷಣ ನೀಡುವುದು ಅನಿವಾರ್ಯವಾಗಿದೆ. ಹೆಚ್ಚು ಸಂಬಳ ತರುವ ಉದ್ಯೋಗಗಳಲ್ಲಿ ತಮ್ಮ ಮಕ್ಕಳು ಸೇರಬೇಕೆಂದು ಹೆತ್ತವರು ಬಯಸುವ ಬದಲು ತಮ್ಮ ಮಕ್ಕಳು ಉತ್ತಮ ನಾಗರಿಕನಾಗಿ ನೆಮ್ಮದಿಯ ಜೀವನ ನಡೆಸಲು ಪೋಷಕರು ಪ್ರೋತ್ಸಾಹಿಸ ಬೇಕು.
ಆತ ಧೋವಲ್!
ಈ ಜಗತ್ತಿನಲ್ಲಿ ಹೊರಜಗತ್ತಿಗೆ ಗೊತ್ತಾಗದಂಥಾ ಅದೆಷ್ಟೋ ಕೆಲಸ ಕಾರ್ಯಗಳಿರುತ್ತವೆ. ಸಾಮಾನ್ಯವಾಗಿ ಪ್ರಿಯೊಬ್ಬರೂ ಕೂಡಾ ತಾನು ಮಾಡೋ ಕೆಲಸಕ್ಕೆ ವಾರಸೂದಾರಿಕೆ ಬೇಕೆಂದು ಆಶಿಸುತ್ತಾರೆ. ಆದರೆ ಕೆಲವಾರು ಕೆಲ ಕಾರ್ಯಗಳಿಗೆ ಅದು ಸಿಕ್ಕೋದೇ ಇಲ್ಲ. ಪ್ರತೀ ಕ್ಷಣವೂ ಭಯವನ್ನು ಬೆನ್ನಿಗಿಟ್ಟುಕೊಂಡೇ ಬದುಕುತ್ತಾ, ಕೊಂಚ ಯಾಮಾರಿದರೂ ಅನಾಥ ಹೆಣವಾಗಿ ಬಿಡುವ ಅಪಾಯ ಸದಾ ಕೆಲ ಕಸುಬುದಾರರ ಸುತ್ತ ಗಸ್ತು ತಿರುಗುತ್ತಿರುತ್ತದೆ. ಅಂಥಾ ಅಪಾಯಕಾರಿ ವೃತ್ತಿಗಳಲ್ಲಿ ಗೂಢಾಚಾರ ವೃತ್ತಿ ಪ್ರಧಾನವಾದದ್ದು. ಅದರಲ್ಲಿಯೂ ಶತ್ರು ರಾಷ್ಟರಗಳಿಗೆ ತೆರಳಿ ದೇಶದ ಪರವಾಗಿ ಗೂಢಾಚರ್ಯೆ ನಡೆಸೋದಿದೆಯಲ್ಲಾ? ಅದರಷ್ಟು ಅಪಾಯದ ಕಸುಬು ಬೇರೊಂದಿಲ್ಲ. ಗುರುತು ಪರಿಚಯವಿಲ್ಲದ ಊರು, ಜನರ ನಡುವೆ ದೇಶದ ಪರವಾಗಿ ಮಾಹಿತಿ ಕಲೆ ಹಾಕುತ್ತಾ, ಅದನ್ನು ಸ್ವದೇಶದ ಅಧಿಕಾರಿಗಳಿಗೆ ರವಾನಿಸೋದು ಅದೆಂಥಾ ರಿಸ್ಕಿ ಕೆಲಸವೆಂಬುದು ಯಾರಿಗಾದ್ರೂ ಅರ್ಥವಾಗುತ್ತೆ. ಅಂಥಾ ಕೆಲಸ ಮಾಡಿ ಪ್ರಸಿದ್ಧ ಸ್ಪೈ ಅನ್ನಿಸಿಕೊಂಡ ಅನೇಕರು ನಮ್ಮ ದೇಶದಲ್ಲಿದ್ದಾರೆ. ಆ ಯಾದಿಯಲ್ಲಿ ದೊಡ್ಡ ಹೆಸರು ಸಂಪಾದಿಸಿರುವವರು ಅಜಿತ್ ದೋವಲ್. ಅಜಿತ್ ದೋವಲ್ ಭಾರತದ ಪ್ರಖ್ಯಾತ ಗೂಢಾಚಾರ ವ್ಯಕ್ತಿ. ಅವರು ವರ್ಷಾಂತರಗಳ ಹಿಂದೆ ಪಾಕಿಸ್ತಾನದಲ್ಲಿ ಭಾರತದ ಪರವಾಗಿ ಗೂಢಾಚರ್ಯೆ ನಡೆಸಿದ್ದರು. ಅವರು ಅಲ್ಲಿ ಓರ್ವ ಮುಸ್ಲಿಮನ ಗೆಟಪ್ಪಿನಲ್ಲಿಯೇ ಓಡಾಡುತ್ತಾ ಗೂಢಚರ್ಯೆ ನಡೆಸಲಾರಂಭಿಸಿದ್ದರು.
ಹೀಗೇ ಒಂದು ದಿನ ಹತ್ತಿರದ ಮಸೀದಿಗೆ ದೋವಲ್ ನಮಾಜಿಗೆಂದು ತೆರಳಿದ್ದರು. ಅಲ್ಲಿಯೇ ನಮಾಜು ಮಾಡುತ್ತಿದ್ದ ಮತ್ತೋರ್ವ ದೋವಲ್ರ ಕಿವಿ ಚುಚ್ಚಿಸಿರೋ ಮಾರ್ಕ್ ಅನ್ನು ಪತ್ತೆಹಚ್ಚಿ ಅವರೋರ್ವ ಹಿಂದೂ ಅಂತ ಗುರುತಿಸಿದ್ದ. ಆ ವ್ಯಕ್ತಿ ನಮಾಜಿನ ನಡುವೆಯೇ ನೀನು ಮುಸ್ಲಿಂ ಅಲ್ಲ ಹಿಂದೂ ಅಲ್ವಾ ಅಂತ ಕಿವಿಯಲ್ಲಿ ಉಸುರಿದಾಗ ದೋವಲ್ಗೆ ಅರೆಕ್ಷಣ ಭೂಮಿಯೇ ಬಾಯ್ಬಿರಿದ ಅನುಭವವಾಗಿತ್ತಂತೆ. ನಂತರ ಆತ ದೋವಲ್ರನ್ನು ತನ್ನ ಮನೆಗೆ ಕರೆದುಕೊಂಡು ಹೋಗಿದ್ದ. ದೋವಲ್ಗೆ ಅದೇಕೋ ತಮ್ಮ ಅಂತ್ಯ ಸಮೀಪಿಸ್ತಿದೆ ಅಂತಲೇ ಅನ್ನಿಸೋಕೆ ಶುರುವಾಗಿತ್ತು. ಆದರೆ ಆ ವ್ಯಕ್ತಿ ತಾನೂ ಕೂಡಾ ಹಿಂದೂ, ಆದ್ರೆ ಹಲವಾರು ವರ್ಷಗಳಿಂದ ಜೀವ ಉಳಿಸಿಕೊಳ್ಳಲು ಮುಸ್ಲಿಮನಾಗಿ ಬದುಕುತ್ತಿರೋದಾಗಿ ವಿವರಿಸಿದ್ದನಂತೆ. ಅದು ಗೂಢಾಚಾರರು ಶತ್ರು ಪಾಳೆಯದಲ್ಲಿ ಎದುರಿಸಬೇಕಾದ ಅತ್ಯಂತ ಕ್ಲಿಷ್ಟಕರ ಸನ್ನಿವೇಶವಾಗಿ ದಾಖಲಾಗುತ್ತದೆ.
ಆನ್ಲೈನ್ ಕಾರ್ಯಾಚರಣೆ
ಈ ಹಿಂದೆ ಉಗ್ರ ಸಂಘಟನೆಗಳು ನಾನಾ ಸರ್ಕಸ್ಸು ನಡೆಸುತ್ತಾ ಯುವಕರನ್ನು ಸೆಳೆದುಕೊಂಡು ಬಲಗೊಳ್ಳುತ್ತಿದ್ದವು. ಊರೂರುಗಳಿಗೆ ವೇಷ ಮರೆಸಿಕೊಂಡು ನುಸುಳಿ ತ್ರಾಸದಾಯಕವಾಗಿ ಕಾರ್ಯ ನಿರ್ವಹಿಸುತ್ತಾ ಬಂದಿದ್ದ ಉಗ್ರರ ಪಾಲಿಗೆ ಸಾಮಾಜಿಕ ಜಾಲತಾಣಗಳು ಪ್ರವರ್ಧಮಾನಕ್ಕೆ ಬಂದ ನಂತರದಲ್ಲಿ ಎಲ್ಲವೂ ಸಲೀಸಾಗಿದೆ. ಅಂಥಾ ಸಂಘಟನೆಗಳಲ್ಲಿ ಸಾಮಾಜಿಕ ಜಾಲತಾಣಗಳತ್ತ ಕಣ್ಣಿಟ್ಟು ಕಾಯಲೆಂದೇ ಉಗ್ರದ ತಂಡವೊಂದು ಕಾರ್ಯ ನಿರ್ವಹಿಸುತ್ತಿದೆಯಂತೆ. ಈ ಚಾಲಾಕಿ ಟೀಮು ಸಾಮಾಜಿಕ ಜಾಲತಾಣಗಳಲ್ಲಿ ದೇಶವಿರೋಧಿ ಪೋಸ್ಟ್ಗಳನ್ನು ಹಾಕುವವರನ್ನು ಸಂಪರ್ಕಿಸಿ ಸಲೀಸಾಗಿ ಸಂಘಟನೆಗೆ ಸೆಳೆದುಕೊಳ್ಳುತ್ತಿದ್ದಾರೆಂಬ ಅಘಾತಕಾರಿ ಸಂಗತಿಯೊಂದೀಗ ಬಯಲಾಗಿದೆ.ಇಂಥಾದ್ದೊಂದು ಆಘಾತಕಾರಿ ವಿಚಾರ ಬಯಲಾಗಿರೋದು ನಗ್ರೊಟಾ ಎನ್ಕೌಂಟರ್ ಸುತ್ತಲಿನ ವಿಚಾರಣೆಯ ಸಂದರ್ಭದಲ್ಲಿ. ಈ ಎನ್ಕೌಂಟರ್ ಸಂಬಂಧವಾಗಿ ಜೈಶ್ ಸಂಘಟನೆಯ ಪರವಾಗಿ ಕಾರ್ಯನಿರ್ವಹಿಸುತ್ತಿದ್ದ ಯುವಕರನ್ನು ಬಂಧಿಸಲಾಗಿತ್ತು.
ಇದೇ ಸಂದರ್ಭದಲ್ಲಿ ಸಮೀರ್ ಧರ್ ಎಂಬಾತನೂ ಬಂಧನಕ್ಕೀಡಾಗಿದ್ದ. ಆ ಯುವಕ ಬಾಯ್ಬಿಟ್ಟಿದ್ದ ಆಘಾತಕಾರಿ ವಿಚಾರವನ್ನು ಕೇಳಿ ಖುದ್ದು ಅಧಿಕಾರಿಗಳೇ ಕಂಗಾಲಾಗಿದ್ದರು. ಈತನ ಸಂಬಂಧಿಕ ಈಗಿನ್ನೂ ಇಪ್ಪತ್ತರ ಪ್ರಾಯದ ಸುಹೈಲ್ ಎಂಬಾತನನ್ನೂ ಕೂಡಾ ಪೊಲೀಸರು ಬಂಧಿಸಿದ್ದರು. ಈತ ಭಾರತ ವಿರೋಧಿ ಹೇಳಿಕೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಡಿಗಡಿಗೆ ಪೋಸ್ಟ್ ಮಾಡುತ್ತಿದ್ದ. ಕೆಲವೇ ದಿನಗಳಲ್ಲಿ ಜೈಶ್ ಸಂಘಟನೆಯ ಆನ್ಲೈನ್ ಟೀಮಿನ ಕಣ್ಣಿಗೆ ಈತ ಬಿದ್ದಿದ್ದ. ಕೆಲವೇ ದಿನಗಳಲ್ಲಿ ಜೈಶ್ ಉಗ್ರರು ಈತನನ್ನು ಸಂಪರ್ಕಿಸಿ ತಮ್ಮತ್ತ ಸೆಳೆದುಕೊಂಡಿದ್ದರು. ಆ ನಂತರ ತರಬೇತಿ ಕೊಡಿಸಿ ಉಗ್ರನನ್ನಾಗಿಸಿದ್ದರು. ಹೀಗೆಯೇ ಭಾರತದ ತುಂಬಾ ಅದೆಷ್ಟೋ ಯುವಕರನ್ನು ಈ ಸಂಘಟನೆಗಳೊಳಗೆ ಸೇರಿಸಿಕೊಳ್ಳಾಗಿದೆಯೆಂಬ ಮಾಹಿತಿ ಅಧಿಕಾರಿಗಳಿಗೆ ಸಿಕ್ಕಿದೆ.
ಸ್ಲೀಪರ್ ಸೆಲ್ ಆಕ್ಟೀವ್
ಫೇಸ್ಬುಕ್, ಟ್ವಿಟರ್, ಸ್ಕೈಪ್ ಮುಂತಾದ ಸಾಮಾಜಿಕ ಜಾಲತಾಣಗಳ ಮೂಲಕ ಗ್ರರು ಕಟ್ಟುಮಸ್ತಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. `ಜುಂದ್ ಉಲ್ ಖಲೀಫಾ ಎ ಹಿಂದ್ ‘ ಎನ್ನುವ ಹೆಸರಿನಲ್ಲಿ ಸ್ಲೀಪರ್ಸೆಲ್ ಕೂಡಾ ರಚನೆಯಾಗಿದೆ. ಇದು ಈಗ ಬಂಧಿತರಾದವರು ಮಾಡಿಕೊಂಡಿರುವ ಸೆಲ್. ರಾಜ್ಯದಲ್ಲಿ ಇಂತಹ ಅನೇಕ ಸ್ಲೀಪರ್ ಸೆಲ್ಗಳು ಆಕ್ಟೀವ್ ಆಗಿವೆ. ಇಂತಹ ವಿಷಕ್ಕೆ ಹಾಲು, ನೀರು ಎರೆಯುವವರೂ ಯಥೇಚ್ಚವಾಗಿದ್ದಾರೆ. ಹೀಗೇ ಬಿಟ್ಟರೆ ಮಹಾ ದುರಂತ ಗ್ಯಾರೆಂಟಿ ಎಂದರಿತ ಎನ್ಐಎ ದ್ರೋಹಿಗಳ ಬಿಲದ ಮೇಲೆ ಕೆಂಗಣ್ಣು ಬೀರಿದೆ. ಐಸಿಸ್ ಬಗ್ಗೆ ಸಹಾನುಭೂರ್ತಿ ಹೊಂದಿದ್ದ ಸುಮಾರು ಹದಿನಾರು ದೇಶದ್ರೋಹಿಗಳನ್ನು ದೇಶಾದ್ಯಂತ ಬಂಧಿಸಲಾಗಿದೆ. ಇದರಲ್ಲಿ ಹೆಚ್ಚಿನ ಪಾಲು ಕರ್ನಾಟಕದ್ದೆ. ರಾಜ್ಯದ ಭಟ್ಕಳ, ಕರಾವಳಿ ತೀರ, ಮಂಗಳೂರು, ಬೆಂಗಳೂರು, ಹುಬ್ಬಳ್ಳಿ, ಗುಲ್ಬರ್ಗದವರೆಗೂ ಇವರ ನೆಟ್ವರ್ಕ ಇದೆ. ಇಂಥವರನ್ನು ಓಟ್ಬ್ಯಾಂಕ್ಗಾಗಿ ಕಾಂಗ್ರೆಸ್ ಸರ್ಕಾರ ರಕ್ಷಿಸುತ್ತಿದೆ ಎಂಬ ಆರೋಪ ಜನಸಾಮಾನ್ಯರ ಕಡೆಯಿಂದಲೇ ತೂರಿ ಬರುತ್ತಿದೆ.
ಕರಾವಳಿ ಸೀಮೆಯ ಕೆಲ ಸೂಕ್ಷ್ಮ ಪ್ರದೇಶಗಳಲ್ಲಿ ನಿರುದ್ಯೋಗಿ ಯುವಕರು ಐಸಿಸ್, ಐಎಂ ಹಾಗೂ ಇತರ ಉಗ್ರಗಾಮಿ ಸಂಘಟನೆಗಳ ಪ್ರಚೋದನೆಗೆ ಬಲಿಯಾಗಿ ಉಗ್ರರಿಗೆ ನೆರವಾಗುತ್ತಿದ್ದಾರೆ. ಈ ಬಗ್ಗೆ ವಿಸ್ತ್ರತ ವಿಚಾರಣೆ ನಡೆಸಿದರೆ ಸತ್ಯಾಂಶ ಹೊರಬರಬಹುದು. ಆದರೆ ಈವತ್ತು ರಾಜಕೀಯದೊಂದಿಗೆ ರೌಡಿಸಂ ಬೆರೆತಂತೆ ಮತೀಯವಾದ, ಉಗ್ರವಾದಗಳೂ ಬೆರೆತು ಹೋಗಿವೆ. ರಾಜಕೀಯ ಬೇಳೆ ಬೇಯಿಸಿಕೊಳ್ಳುವ, ಯಾವುದೋ ಸಮುದಾಯವನ್ನು ಓಲೈಸಿಕೊಳ್ಳುವ ಉದ್ದೇಶದಿಂದ ಭಯೋತ್ಪಾದನೆಯಂಥಾ ಬೀಭತ್ಸ ವಿಚಾರದಲ್ಲಿಯೂ ಕಣ್ಕಟ್ಟು ನಡೆಸಲಾಗುತ್ತಿದೆ. ಹೀಗೆ ಉಗ್ರರು ಸೆರೆ ಸಿಕ್ಕಾಕ್ಷಣ ಅವರವರ ಮನೆಯವರು `ಅವರು ಅಮಾಯಕರು’ ಅಂತ ಫೀಲ್ಡಿಗಿಳಿಯುವುದು ಮಾಮೂಲು. ಕೆಲವೊಮ್ಮೆ ಕರುಳ ಸಂಕಟವೂ ಅದಕ್ಕೆ ಕಾರಣವಾಗುತ್ತದೆ. ಆದರೆ ಇಂಥಾ ಉಗ್ರರ ಪರವಾಗಿ ರಾಜಕೀಯ ಪ್ರೇರಿತವಾದ ಬ್ಯಾಟಿಂಗು ಶುರುವಾಗುತ್ತದಲ್ಲಾ? ಅದು ಮಾತ್ರ ಅನಾಹುತಕಾರಿ.
ಈಗ ದೇಶಾಧ್ಯಂತ ಹದಿನಾರು ಮಂದಿ ಮತ್ತು ರಾಜ್ಯದಲ್ಲಿ ಆರು ಮಂದಿ ಉಗ್ರರು ಬಲೆಗೆ ಬೀಳುತ್ತಲೇ ಇಂಥಾ ಜನ ಉಗ್ರರ ಪರವಾಗಿ ಬ್ಯಾಟಿಂಗ್ ಆರಂಭಿಸಿದ್ದಾರೆ. ಆದರೆ ಈ ಉಗ್ರರನ್ನು ಹಾಗೇ ಬಿಟ್ಟಿದ್ದರೆ ಗಣರಾಜ್ಯೋತ್ಸವದ ಆಸುಪಾಸಲ್ಲಿ ರಕ್ತಪಾತವೇ ನಡೆಯುತ್ತಿತ್ತು. ಇಂಥಾ ದುಷ್ಟತನಕ್ಕೆ ಹಿಂದೂ ಮುಸ್ಲಿಂ ಸೇರಿದಂತೆ ಎಲ್ಲ ಧರ್ಮಗಳ ಅಮಾಯಕರೂ ಬಲಿ ಬೀಳುತ್ತಾರೆ. ಯಾಕೆಂದರೆ ಬಿರಿವ ಬಾಂಬುಗಳಿಗೆ ಇಂತಾ ಯಾವ ಬೇಧ ಭಾವವೂ ಇರುವುದಿಲ್ಲ. ಹೀಗೆ ಉಗ್ರವಾದಕ್ಕೆ ಪ್ರಚೋದನೆ ನೀಡುವವರಿಗೂ ಬೆಂಡೆತ್ತು ಕರ್ನಾಟಕದಲ್ಲಿ ಭಯೋತ್ಪಾದನೆಯ ಬೇರುಗಳನ್ನು ಕಿತ್ತೊಗೆಯುವ ಕೆಲಸ ತುರ್ತಾಗಿ ನಡೆಯಬೇಕಿದೆ. ಸೆಕ್ಯುಲರ್ ಹೆಸರಲ್ಲಿ ಮೆಲ್ಲಗೆ ಓಲೈಕೆಯ ರಾಜಕಾರಣದತ್ತ ವಾಲುತ್ತಿರುವಂತೆ ಕಾಣುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನಾದರೂ ಎಚ್ಚೆತ್ತುಕೊಂಡರೆ ಅನಾಹುತ ತಪ್ಪೀತು!
ಅಮ್ಮನನ್ನೇ ಕೊಂದಿದ್ದ ಉಗ್ರ!
ಯಾವನೇ ಉಗ್ರನನ್ನು ಬಂಧಿಸಿದಾಗಲೂ ಆತನ ಹೆತ್ತವರಿಗಿಂತಲೂ ಮೊದಲೇ ಮಮ್ಮಲ ಮರುಗುವ ಭಯಾನಕ ಕಾಳಜಿ ಹೊಂದಿರುವೊಂದು ಗುಂಪೇ ಇಲ್ಲಿ ಸಕ್ರಿಯವಾಗಿದೆ. ನಿಜ, ಕೆಲವೊಮ್ಮೆ ಅಮಾಯಕರನ್ನೂ ಬಲಿಯಾಗಿಸುವ ಪ್ರಯತ್ನಗಳು ನಡೆದಿದ್ದಿರಬಹುದು. ಅದು ವಿರೋಧಿಸಬೇಕಾದ ಸಂಗತಿಯೇ. ಆದರೆ ಮಾಡಿದ ಅನಾಹುತ ಕಣ್ಣೆದುರೇ ಇದ್ದರೂ ಅಂಥಾ ಉಗ್ರರ ಪರವಾಗಿ ಮಾತಾಡೋದರ ಹಿಂದಿರುವುದು ಯಾರನ್ನೋ ಓಲೈಸಿಕೊಳ್ಳುವ ರಾಜಕೀಯ ಹಿಕಮತ್ತೆಂಬುದೀಗ ಬಹುತೇಕ ಎಲ್ಲರಿಗೂ ಅರ್ಥವಾಗಿದೆ. ಹೀಗೆ ಯಾರಿಗೋ ಬಕೀಟು ಹಿಡಿದು ರಾಜಕೀಯ ಲಾಭ ಗಿಟ್ಟಿಸುವವರೊಮ್ಮೆ ಸಿರಿಯಾದಲ್ಲಿ ನಡೆದ ಈ ಭಯಾನಕ ಘಟನೆಯನ್ನು ಓದಿದರೊಳಿತು. `ಮಗನೇ ಐಎಸ್ ಸಂಘಟನೆಯ ಸಹವಾಸವೇ ಬೇಡ. ಈ ನಗರ ಬಿಟ್ಟು ಬೇರೆಡೆ ಹೋಗಿ ಬದುಕೋಣ’ ಅಂತ ಬುದ್ಧಿ ಮಾತು ಹೇಳಿದ್ದು ಹೆತ್ತ ತಾಯಿ. ಅದಕ್ಕೆ ಉಗ್ರವಾದವನ್ನು ಆವಾಹಿಸಿಕೊಂಡಿದ್ದ ಆಕೆಯ ಮಗ ಕೊಟ್ಟ ಉತ್ತರ ಮಾತ್ರ ಎಂಥವರನ್ನೂ ದಂಗು ಬಡಿಸುವಂತಿದೆ. ಹೀಗೆ ಬುದ್ಧಿವಾದ ಹೇಳಿದ ಹೆತ್ತ ತಾಯಿಯನ್ನಾತ ಜನರು ನೋಡುತ್ತಿದ್ದಂತೆಯೇ ಹಣೆಗೆ ಗುಂಡಿಟ್ಟು ಹತ್ಯೆ ಮಾಡಿದ್ದಾನೆ. ಸಿರಿಯಾದ ರಖ್ಖಾ ನಗರದಲ್ಲಿ ಈ ಘಟನೆ ನಡೆದ ಈ ಘಟನೆ ಉಗ್ರರ ಮನಸ್ಥಿತಿ ಮತ್ತು ಅದರಿಂದಾಗುವ ಅನಾಹುತಗಳಿಗೆ ಸ್ಪಷ್ಟ ಉದಾಹರಣೆಯಂತಿದೆ.
ಇಪ್ಪತ್ತು ವರ್ಷದ ಜಿಹಾದಿ ಅಲಿ ಸಖ್ರ್ ಅಲ್- ಖಾಸಿಮ್ ಅಸಾಲ್ಟ್ ರೈಫಲ್ನಿಂದ ತನ್ನ ತಾಯಿ ಲೆನಾಳ ಹಣೆಗೆ ಗುಂಡಿಟ್ಟು ಕೊಂದಿದ್ದಾನೆ. ಐಸಿಸ್ ಭಯೋತ್ಪಾದಕ ಗುಂಪನ್ನು ಬೆಂಬಲಿಸದೇ ಇರುವ ಯಾರನ್ನೇ ಆದರೂ ಕೊಲ್ಲಲು ಸಮರ್ಥನೆ ನೀಡುತ್ತದೆ. ಇಸ್ಲಾಮಿಕ್ ಸ್ಟೇಟ್ ತ್ಯಜಿಸಲು ಮತ್ತು ಒಟ್ಟಾಗಿ ರಖ್ಖಾದಿಂದ ತಪ್ಪಿಕೊಂಡು ಹೋಗಲು ಆಕೆ ಮಗನನ್ನು ಪ್ರಚೋದಿಸಿದಳು ಎಂಬುದು ಲೆನಾ ವಿರುದ್ಧ ಹೊರಿಸಲಾಗಿದ್ದ ಆರೋಪ. ಈ ಪಾಪಿ ಐಸಿಸ್ ಸಂಘಟನೆಯ ಮುಖ್ಯಸ್ಥರ ಆದೇಶದ ಮೇರೆಗೆ ಹೆತ್ತಮ್ಮನನ್ನೇ ಕೊಂದು ಹಾಕಿದ್ದಾನೆ. ಇದು ಉಗ್ರವಾದದ ಅಸಲೀ ರಾಕ್ಷಸತ್ವ. ಉಗ್ರ ಸಂಘಟನೆಗಳ ಸಾಹಚರ್ಯಕ್ಕೆ ಬಂದವರು ಅಕ್ಷರಶಃ ರಾಕ್ಷಸರಾಗುತ್ತಾರೆ. ಕೊಲ್ಲುವುದೊಂದೇ ಅವರ ಪರಮ ಗುರಿ. ಈ ಧೈಯದಿಂದ ಬಂದೂಕು ಹಿಡಿದು ನಿಂತವನಿಗೆ ಹೆತ್ತವರಾದರೇನು ಯಾರಾದರೇನು? ಹೀಗೆ ಉಗ್ರ ಸಂಘಟನೆ ಸೇರುವವರು ಹೆಚ್ಚಿನದಾಗಿ ಮನೆಯವರ ವಿರೋಧವನ್ನೂ ಲೆಕ್ಕಿಸದೆ ದ್ರೋಹಿಗಳಾಗುತ್ತಾರೆ. ಈಗ ತಗುಲಿಕೊಂಡವರಲ್ಲಿ ಒಂದಷ್ಟು ಜನ ಅಂಥವರೇ. ಇಂಥವರನ್ನು ರಕ್ಷಿಸಲು ಹೋದರೆ ಮತ್ತೆ ಇಂಥಾ ಸಂತತಿಯೇ ಬೆಳೆಯುತ್ತದೆ. ಬಕೀಟು ಗಲಗಲಿಸುತ್ತಿರುವವರಿಗೆ, ಆ ಸದ್ದು ಕೇಳಿ ರೋಮಾಂಚಿತರಾಗಿ ಮೈಮರೆತಿರುವವರಿಗೆ ಈ ಸತ್ಯದ ಅರಿವಾದೀತಾ?