ಈ ಸುದ್ದಿಗೋಸ್ಕರ ಸುದೀಪ್ ಫ್ಯಾನ್ಸ್ ಮಾತ್ರವಲ್ಲ ಸಮಸ್ತ ಸಿನಿಮಾಪ್ರೇಮಿಗಳು ಕೂಡ ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದರು. ಕೋಟಿಗೊಬ್ಬ ಕಿಚ್ಚ ಮತ್ತೆ ಕ್ಯಾಪ್ಟನ್ ಆಗ್ಬೇಕು. ನಿರ್ದೇಶಕನ ಕುರ್ಚಿ ಮೇಲೆ ಕೂರಬೇಕು. ಡೈರೆಕ್ಟರ್ ಕ್ಯಾಪ್ ತೊಟ್ಟು ಲೈಟ್ಸ್-ಕ್ಯಾಮೆರಾ- ಆ್ಯಕ್ಷನ್ ಅಂತ ಹೇಳಬೇಕು. ಒಂದೊಳ್ಳೆ ಸಿನಿಮಾದ ಮೂಲಕ ಸಿಲ್ವರ್ ಸ್ಕ್ರೀನ್‍ಗೆ ಕಂಬ್ಯಾಕ್ ಮಾಡಬೇಕು. ಇಡೀ ಸಿನಿದುನಿಯಾವನ್ನ ಥಂಡಾ ಹೊಡಿಸಬೇಕು. ಸೌತ್ ಬಾಕ್ಸ್ ಆಫೀಸ್ ಮಾತ್ರವಲ್ಲ ಇಂಡಿಯನ್ ಬಾಕ್ಸ್ ಆಫೀಸೇ ಶೇಕ್ ಶೇಕ್ ಆಗೋಗ್ಬೇಕು. ಹೀಗೆ ನೂರೆಂಟು ಕನಸುಗಳನ್ನು ಕಟ್ಟಿಕೊಂಡು ಕಿಚ್ಚ ನಿರ್ದೇಶನಕ್ಕೆ ಮರಳುವ ಕ್ಷಣಕ್ಕಾಗಿ ಸುದೀಪಿಯನ್ಸ್ ಕಣ್ಣರಳಿಸಿದರು. ಆದರೆ, ಆ ಕ್ಷಣಕ್ಕೆ ಅಭಿನಯ ಚಕ್ರವರ್ತಿಯ ಹುಟ್ಟುಹಬ್ಬ ಸಾಕ್ಷಿಯಾಗಬಹುದು. ಬರ್ತ್‍ಡೇ ದಿನದಂದೇ ಮಿಲಿಯನ್ ಮನಸ್ಸುಗಳ ಮಹಾ ಕನಸೊಂದನ್ನ ಮಾಣಿಕ್ಯ ಈಡೇರಿಸಬಹುದು ಅಂತ ಯಾರೂ ನಿರೀಕ್ಷೆ ಮಾಡಿರಲಿಲ್ಲ. ಬಟ್, ಸುದೀಪ್ ತಮ್ಮ ಸ್ನೇಹಬಳಗಕ್ಕೆ ಜನ್ಮದಿನದಂದೇ ಸರ್ ಪ್ರೈಸ್ ಕೊಟ್ಟರು. ಕೆ ಆರ್ ಜಿ ಜೊತೆ ಕೈ ಜೋಡಿಸುವ ಮೂಲಕ ಡೈರೆಕ್ಷನ್‍ಗೆ ಕಂಬ್ಯಾಕ್ ಮಾಡಿದರು. `ಕಿಂಗು ನಾನೇ… ಕಿಂಗ್ ಮೇಕರ್ರು ನಾನೇ’ ಎನ್ನುತ್ತಾ ಕಣಕ್ಕಿಳಿದ ಕಿಚ್ಚ ಕಲಾಭಿಮಾನಿಗಳನ್ನ ಮಾತ್ರವಲ್ಲ ಸಿನಿಮಾ ಮಂದಿನೂ ಅಲರ್ಟ್ ಮಾಡಿದ್ದಾರೆ.
ಮಾಣಿಕ್ಯ ಚಿತ್ರದ ನಂತರ ನಾನಾ ಕಾರಣಗಳಿಂದ ಕಿಚ್ಚ ಡೈರೆಕ್ಷನ್‍ನಿಂದ ದೂರ ಉಳಿದಿದ್ದರು. ಈಗ ಭರ್ತಿ ಒಂಭತ್ತು ವರ್ಷಗಳು ಉರುಳಿದ್ಮೇಲೆ ಸುದೀಪ್ ಮತ್ತೆ ನಿರ್ದೇಶನಕ್ಕೆ ಮರಳುತ್ತಿದ್ದಾರೆ. ಕೆ ಆರ್ ಜಿ ಜೊತೆ ಕೈ ಜೋಡಿಸುವ ಮೂಲಕ ಕಣಕ್ಕಿಳಿದಿದ್ದಾರೆ. ಕಿಚ್ಚನ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಸಿನಿಮಾ ಘೋಷಣೆಯಾಗಿದೆ. ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಮಾಡಲಾಗಿದ್ದು, ಸದ್ಯಕ್ಕೆ `ಕೆಕೆ’ ಹೆಸರಿನಿಂದ ಕರೆಯಲಾಗಿದೆ. `ದೇವರು ಕ್ಷಮಿಸುತ್ತಾನೆ ಆದರೆ ನಾನು ಕ್ಷಮಿಸಿಲ್ಲ’ ಎನ್ನುವ ಟ್ಯಾಗ್‍ಲೈನ್ ಕುತೂಹಲದ ಕೋಟೆಯನ್ನೇ ಕಟ್ಟಿದೆ. ಕೈಗೆ ತೊಡಿಸಿರುವ ಕೋಳ ಬಿಚ್ಚಿಕೊಂಡು, ರಕ್ತ ನದಿಯಾಗಿ ಹರಿಯುವಂತೆ ಮಾಡಿ, ಹೆಣಗಳ ರಾಶಿ ಮಧ್ಯೆ ನಿಲ್ಲುವ ಪೈಲ್ವಾನ್, ಪ್ಯಾನ್ ಇಂಡಿಯಾ ತುಂಬೆಲ್ಲಾ ಬಿಗ್ ಬ್ರೇಕಿಂಗ್ ನ್ಯೂಸ್ ಆಗುವ ಸೂಚನೆ ಹೊರಬಿದ್ದಿರೋ ಪೋಸ್ಟರ್ ನಿಂದಲೇ ಸಿಗ್ತಾಯಿದೆ. ಕಿಂಗ್ ಕಿಚ್ಚನ ಕೆಕೆ ಸಿನಿಮಾ ಸಪ್ತಸಾಗರ ದಾಟಿ ಸುನಾಮಿ ಎಬ್ಬಿಸೋ ಲಕ್ಷಣ ಗೋಚರಿಸುತ್ತಿದೆ.
ಅಂದ್ಹಾಗೇ, ಕೆಕೆ ಕಿಚ್ಚನ 47ನೇ ಸಿನಿಮಾ. ಆದರೆ, ಡೈರೆಕ್ಷನ್ ಅಂತೆ ಬಂದರೆ ಇದು ಕಿಚ್ಚನ ಏಳನೇ ಸಿನಿಮಾ. ಮೈ ಆಟೋಗ್ರಾಫ್ ಮೂಲಕ ಡೈರೆಕ್ಷನ್ ಡಿಪಾರ್ಟ್‍ಮೆಂಟ್ ಗೆ ಲಗ್ಗೆ ಇಟ್ಟ ಕಿಚ್ಚ ಬಾಸ್, ಶಾಂತಿನಿವಾಸ, ವೀರ ಮದಕರಿ, ಜಸ್ಟ್ ಮಾತ್ ಮಾತಲ್ಲಿ, ಕೆಂಪೇಗೌಡ, ಮಾಣಿಕ್ಯ ಹೀಗೆ ಒಟ್ಟು ಆರು ಚಿತ್ರಗಳನ್ನ ಡೈರೆಕ್ಟ್ ಮಾಡಿದ್ದರು. ರಿಮೇಕ್ ಜೊತೆ ಸ್ವಮೇಕ್ ಸಿನಿಮಾ ಮಾಡಿಯೂ ಸಿನಿಮಾ ಪ್ರೇಮಿಗಳಿಂದ ಸುದೀಪ್ ಸೈ ಎನಿಸಿಕೊಂಡಿದ್ದರು. ನಟನೆಯ ಜೊತೆಗೆ ನಿರ್ದೇಶನದಲ್ಲೂ ತಮ್ಮದೇ ಆದ ಛಾಪು ಮೂಡಿಸುವ ಮೂಲಕ ಚಿತ್ರಬ್ರಹ್ಮರ ಸಾಲಿಗೆ ಸೇರ್ಪಡೆಗೊಂಡಿದ್ದರು. ಆದರೆ, ಅದ್ಯಾಕೋ ಏನೋ ಗೊತ್ತಿಲ್ಲ ನಿರ್ದೇಶನದಿಂದ ಕೊಂಚ ಅಂತರ ಕಾಯ್ದುಕೊಂಡಿದ್ದರು. ಇದೀಗ ಮತ್ತೆ ಕಾಲ ಮೂಡಿಬಂದಿದೆ. ಕೆಕೆ ಚಿತ್ರದ ಮೂಲಕ ಸಾರಥಿ ಪ್ಲಸ್ ಅಧಿಪತಿಯಾಗುವ ಅದೃಷ್ಟ ಅರಸಿಕೊಂಡು ಬಂದಿದೆ. ನಟನಾಗಿ ಸಾಕಷ್ಟು ಭಾರೀ ಪ್ಯಾನ್ ಇಂಡಿಯಾ ದಿಬ್ಬಣ ಹೋಗಿ ಬಂದಿರುವ ಮಾಣಿಕ್ಯ `ಕೆಕೆ’ ಚಿತ್ರದ ಮೂಲಕ ಆ್ಯಕ್ಟರ್ ಕಂ ಡೈರೆಕ್ಟರ್ ಆಗಿ ಪ್ಯಾನ್ ಇಂಡಿಯಾ ಮೆರವಣಿಗೆ ಹೊರಡ್ತಾರೆ. ಅಭಿನಯದ ಜೊತೆಗೆ ನಿರ್ದೇಶನದ ತಾಕತ್ತೇನು ಅನ್ನೋದನ್ನ ಸ್ಯಾಂಡಲ್‍ವುಡ್ ಬಾದ್ ಷಾ ಇಡೀ ಸಿನಿದುನಿಯಾ ಮುಂದೆ ಸಾಬೀತುಪಡಿಸಲಿದ್ದಾರೆ.
ಇನ್ನೂ, ಕಿಚ್ಚನಿಗೋಸ್ಕರ ಕಾದುಕುಳಿತಿದ್ದ ಕೆ ಆರ್ ಜಿ ಸಂಸ್ಥೆಗೆ ಕೊನೆಗೂ ಕಾಲ್‍ಶೀಟ್ ಸಿಕ್ಕಿದೆ. ಅಭಿನಯ ಚಕ್ರವರ್ತಿಯ 47ನೇ ಸಿನಿಮಾವನ್ನ ನಿರ್ಮಾಣ ಮಾಡುವ ಅವಕಾಶ ದಕ್ಕಿದೆ. ಇದಕ್ಕೆ ಕೃತಜ್ಞರಾಗಿರುವ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ `ಕೆಕೆ’ ಸಿನಿಮಾವನ್ನ ಪ್ಯಾನ್ ಇಂಡಿಯಾ ಲೆವೆಲ್‍ನಲ್ಲಿ ನಿರ್ಮಾಣ ಮಾಡೋದಕ್ಕೆ ಮುಂದಾಗಿದ್ದಾರೆ. ಅಂದ್ಹಾಗೇ, ಕೆ ಆರ್ ಜಿ ಸಂಸ್ಥೆ ಕನ್ನಡ ಚಿತ್ರರಂಗದಲ್ಲಿ ಬಹುದೊಡ್ಡ ಹೆಸರು ಮಾಡ್ತಿದೆ. ಆರಂಭದಲ್ಲಿ ಸಿನಿಮಾ ವಿತರಣೆ ಮಾಡಲು ಶುರು ಮಾಡಿದ್ದ ಈ ಸಂಸ್ಥೆ ಕೆಜಿಎಫ್, ಕಾಂತಾರ, ಚಾರ್ಲಿ, ದಸರಾ, ಆದಿಪುರುಷ್ ಹೀಗೆ ಹಲವು ಬ್ಲಾಕ್‍ಬಸ್ಟರ್ ಚಿತ್ರಗಳನ್ನ ಕರ್ನಾಟಕದಲ್ಲಿ ಹಂಚಿಕೆ ಮಾಡಿತ್ತು. ರತ್ನನ್ ಪ್ರಪಂಚ ಸಿನಿಮಾದ ಮೂಲಕ ಪ್ರೊಡಕ್ಷನ್ ಶುರು ಮಾಡಿ ಗುರುದೇವ್ ಹೊಯ್ಸಳ, ಉತ್ತರಕಾಂಡ ಚಿತ್ರಕ್ಕೆ ಬಂಡವಾಳ ಹೂಡಿದೆ. ಈಗ ಕೋಟಿಗೊಬ್ಬನ ಪಿಕ್ಚರ್ ಘೋಷಣೆ ಮಾಡಿ ಕುತೂಹಲ ಕೆರಳಿಸಿದೆ. ‘ಹುಚ್ಚ’ ಚಿತ್ರದಿಂದ ನಾನು ಸುದೀಪ್ ಅವರ ದೊಡ್ಡ ಅಭಿಮಾನಿಯಾಗಿದ್ದು, ಅವರ ಜೊತೆಗೆ ಕೆಲಸ ಮಾಡುವುದು ನನ್ನ ಕನಸಾಗಿತ್ತು. ಆ ಕನಸು ಇದೀಗ ನನಸಾಗುತ್ತಿದ್ದು, ಅವರು ನಟನೆಯ ಜೊತೆಗೆ ನಿರ್ದೇಶನ ಸಹ ಮಾಡುತ್ತಿರುವುದು ನಮ್ಮ ಸಂಭ್ರಮವನ್ನು ಇಮ್ಮಡಿಗೊಳಿಸಿದೆ’ ಎಂದು ಕೆ ಆರ್ ಜಿ ಸ್ಟುಡಿಯೋಸ್ ಮಾಲೀಕರಾದ ಕಾರ್ತಿಕ್ ಗೌಡ್ರು ಹೇಳಿಕೊಂಡಿದ್ದಾರೆ. ಹಂತ ಹಂತವಾಗಿ ಕೆಕೆ ಬಗ್ಗೆ ಮಾಹಿತಿ ರಿವೀಲ್ ಮಾಡುವುದಾಗಿ ತಿಳಿಸಿದ್ದಾರೆ.