ನಮ್ಮ ಹಳೇ ಪ್ಯಾಂಟುಗಳನ್ನು ರಾಗಿಮಿಷನ್ಗಳ ನಳಿಕೆಗೆ ಕಟ್ಟಿರುವುದನ್ನು ಕಂಡಿದ್ದೇವೆ. ಹಿಟ್ಟು ಪಾತ್ರೆಯೊಳಗೆ ಸರಾಗವಾಗಿ ಜಾರಲು ಈ ಪ್ಯಾಂಟುಗಳ ಬಳಕೆಯಾಗುತ್ತದೆ. ಇನ್ನೂ ಹೆಚ್ಚೆಂದರೆ ಬ್ಯಾಗ್ನಂತೆ ಬಳಕೆಯಾದೀತು. ಆದರೆ ಪಾಟ್ ಅಂದರೆ ಕುಂಡವಾಗಿ ರೂಪುಗೊಂಡ ಉದಾಹರಣೆ ಕಂಡಿಲ್ಲ. ಚಲ್ಲಣದಲ್ಲಿ ತಲ್ಲಣ ಸೃಷ್ಟಿಸುವ ಸುದ್ದಿಯೂ ಅಲ್ಲ, ಅಥವಾ ಆಂಟ್ಸ್ ಇನ್ ಪ್ಯಾಂಟ್ಸ್ ಕೂಡ ಅಲ್ಲ. ಪ್ಲಾಂಟ್ಸ್ ಇನ್ ಪ್ಯಾಂಟ್ಸ್ ಎನ್ನುವ ವಿಷಯವಿದು. ಪ್ಯಾಂಟಿನಲ್ಲಿ ‘ಪ್ಲಾಂಟೇಷನ್’ ಮಾಡಿದವ ಜಾಣನೇ ಸರಿ!
ಜೀನ್ಸ್ನಲ್ಲೂ ಬೀನ್ಸ್ ಬೆಳೆಸಿದ ಜೀನಿಯಸ್ಗಳು ನಮ್ಮಲ್ಲಿ ಕಂಡಿಲ್ಲ. ಬಳಸಿದ ಜೀನ್ಸ್ಗಳಿದ್ದಲ್ಲಿ ‘ಜೇನ್ಸ್’ಗಳು, ಜೇಡ್ಸ್ಗಳು ಬಾರದಂತೆ. ಏಕೆಂದರೆ ಮಾನವರ ಬೆವರಿನ ಸೋಂಕು ಇರಲಿದೆ. ಈ ವಾಸನೆಯೇ ಹಕ್ಕಿಗಳಿಗೂ ಅಲರ್ಜಿ. ಆದ್ದರಿಂದಲೇ ಬೆದರು ಬೊಂಬೆಗೆ ಹಳೇ ಪ್ಯಾಂಟು, ಹಳೇ ಶರ್ಟ್ಗಳು ತಗಲಿ ಹಾಕುತ್ತಾರೆ. ಆದರೆ ಜೀನ್ಸ್ ಪ್ಯಾಂಟುಗಳಲ್ಲೇ ಕಸಿ, ಮಾಡಿ, ಗಿಡಬೆಳೆಸಿದವರು ಅಪರೂಪ. ತೊಡೆ ಇರಿಸಬೇಕಾದ ಪಾಯಿಜಾಮದಲ್ಲಿ ‘ತೊಡೆರಹಿತ’ ಗಿಡಗಳನ್ನು ಕಲ್ಪಿಸಿಕೊಳ್ಳುವುದು ಸರಳವಾಗಿದ್ದರೂ ನಮ್ಮಲ್ಲಿ ಇದು ಸಾಕಾರವಗಿಲ್ಲ. ಲಂಡನ್ ಜನರಿಗೆ ಇದು ಹೊಳೆದಿದ್ದು ವಿಶೇಷವೇ ಸರಿ. ‘ಧರಿಸಿದರೆ ಕುಂಡಿಗಾದೆ, ಬಿಚ್ಚಿದರೆ ಕುಂಡವಾದೆ. ನೀನಾರಿಗಾದೆಯೋ ಎಲೆ ಅಂಗಿಯೇ?’ ಎಂದು ಪ್ಯಾಂಟ್ಗಳು ಷರ್ಟ್ಗಳನ್ನು ಕೇಳಿದರೆ ಅವು ‘ಧರಿಸಿರುವ ಕಮಂಗಿಯನ್ನು ಕೇಳು!’ ಎಂದಿದ್ದು ಮಾತ್ರ ಶುದ್ಧ ಕಲ್ಪನೆ. ‘ಗಿಡ ನೆಡಿ… ಗಿಡಾ ನೆಡಿ’ ಎಂದು ಯಾರಾದರೂ ಬೊಬ್ಬೆ ಹೊಡದರೆ ಮುಲಾಜಿಲ್ಲದೆ ‘ಪ್ಯಾಂಟು ಬಿಚ್ಚಿಕೊಡಿ’ ಎಂದು ಕೇಳಲು ಅಡ್ಡಿಯಿಲ್ಲ.
ಶಿಶ್ನೋತ್ತಮ
ಇವನು ಶಿಷ್ಯ ಅಲ್ಲ ‘ಶಿಶ್ನೋತ್ತಮ!’ ಅರ್ಥವಾಗಲಿಲ್ಲವಾ? ಬೇಡ… ಮುಂದೆ ಓದಿ. ಮಣಘಾತ್ರ ತೂಗುವ ಈತ ನ್ಯೂಜಿಲ್ಯಾಂಡಿನವನು. ಮಿಚಾಸ್ಟಂಟ್ಜ್ ಎಂಬ ವಿಚಿತ್ರ ಹೆಸರು ಹೊತ್ತಿದ್ದಾನೆ. ಅಷ್ಟೇ ವಿಕ್ಷಿಪ್ತ ಸಾಧನೆ ಮಾಡಿದ್ದಾನೆ. ಎದೆ, ಶರೀರ, ತೋಳುಗಳನ್ನು ಊದಿಸಿಕೊಳ್ಳಲು ಸಿಲಿಕೊನಿ ಚುಚ್ಚುಮದ್ದುಗಳನ್ನು ಚುಚ್ಚಿಸಿಕೊಂಡ. ಸಹಯವಾಗಿಯೇ ಇವನ ಅಪೇಕ್ಷೆ ಈಡೇರಿದ್ದು, ಮೈ ‘ಪೂರಿ’ಯಾಗಿದೆ. ಅಷ್ಟೇನಾ? ಇಲ್ಲ. ಈತನ ‘ಪೌರುಷ’ದ ಅಂಗವೂ ಊದಿದೆ. ತೂಗಿದರೆ ೪.೫೩೫ ಕೆಜಿಗಳಿವೆ. ಅಳೆದರೆ ೯ ಇಂಚು ಉದ್ದ, ೫.೫ ಇಂಚು ಅಗಲವಿದೆ. ‘ತನ್ನದು’ ವಿಶ್ವದಾಖಲೆ ಎನ್ನುತ್ತಾನೆ ಮಿಚಾಸ್ಟಂಟ್ಜ್!
ಇಸ್ಸೀ ಅದನ್ನು ಹಿಡಿದು ತೂಗಿದಿರಾ? ಛೇ… ನಾವ್ಯಾಕೆ ತಕ್ಕಡಿಗೆ ಹಾಕ್ತೀವಿ… ಅವನೇ ಹಾಕಿದ. ನೋಡೋರು ನೋಡ್ತಾನೇ ಇದ್ದರು. ಈತನ ಮಣಘಾತ್ರದ ಶಿಶ್ನಕ್ಕೆ ತಲೆ ದೂಗುವವರು ದೂಗುತ್ತಲೇ ಇದ್ದರು. ಕಡೆಗೆ ಭೇಷ್ ಎಂದು ಶಿಶ್ನೋತ್ತಮ ಎಂದು ಬಿರುದು ನೀಡಿರಬೇಕು. ಮಿಚಾಸ್ಟಂಟ್ಜ್ ಎದ್ದು ಓಡಾಡುತ್ತಿದ್ದರೆ ಈತನ ಜನರೇಟರ್ಗೆ ಒಂದು ಚೀಲ (ಟ್ರಂಕ್) ಬೇಕು! ಅದನ್ನು ಕಂಡ ಕೂಡಲೇ ಕೆಲವರಿಗೆ ಅಸಹ್ಯ ತಂದರೆ ಇನ್ನು ಕೆಲವರಿಗೆ ಮೋಜು. ಸೆಂಟ್ರಲ್ ಗೌರ್ನಮೆಂಟ್ ಗಟ್ಟಿಯಾಗಿರಬೇಕು ಸರಿ ಹಾಗೆಂದು ಊದಿಕೊಂಡಿದ್ದರೆ ಚೆನ್ನಾಗಿರುತ್ತಾ…? ಅದೆಲ್ಲಾ ನಮಗ್ಯಾಕ್ರೀ… ಅವರವರ ಹುಚ್ಚು – ಅವರವರಿಗೆ ಆನಂದ. ಎಲ್ಲಾ… ಓ.ಕೆ. ಈ ಶಿಶ್ನೋತ್ತಮನನ್ನು ವರಿಸಲಿರುವ ನಾರಿಯ ಪಾಡೇನು? ಆ ‘ವರಿ’ ಬೇಡ. ಇವನು ‘ಗೇ’ ಅಂದರೆ ಸಲಿಂಗಿ. ೨೪ ಗಡಿಯಾರ್!
‘ನೂರು ಪಂಡಿತರು ಒಂದೇ ವಾದ ಮಂಡಿಸಿದರೂ ಎರಡು ಗಡಿಯಾರ ಒಂದೇ ಸಮಯ ತೋರಿಸಲ್ಲ’ ಅನ್ನುವ ಮಾತಿದೆ. ಅನುಮಾನವಿದ್ದರೆ ನಿಮ್ಮ ಬಳಿಯಲ್ಲಿರುವ ನಿಮ್ಮ ಸ್ನೇಹಿತರ ವಾಚ್, ಗೋಡೆಗಡಿಯಾರಗಳನ್ನು ನೋಡಿ…ನಿಮ್ಮ ಹಾಗೂ ನಿಮ್ಮ ಗಡಿಯಾರಗಳ ಕಥೆ ನಿಮಗೆ ಬಿಟ್ಟಿದ್ದು. ಇಲ್ಲಿರುವ ೨೪ ಗಡಿಯಾರಗಳನ್ನು ಗಮನಿಸಿ ಇದೆಲ್ಲವೂ ಒಂದೇ ಟೈಮ್ ತೋರಿಸುತ್ತಿವೆ. ನಿಮಿಷ, ಸೆಕೆಂಡ್ ಕೂಡ ವ್ಯತ್ಯಾಸವಾಗಿಲ್ಲ. ಮುಂದಿನ ವರ್ಷಕ್ಕೆ ಈ ಕ್ಲಾಕ್ ಪಾರ್ಕ್ಗೆ ಪೂರಾ ೩೦ ವರ್ಷಗಳಾಗಲಿದೆ. ಆದರೂ ‘ಕಾಲವು ನಿಲ್ಲದು ಓಡುತಲಿಹುದು’ ಎನ್ನುತ್ತಾ ಗಡಿಯಾರದ ಸಮಯ ಸಾಗುತ್ತಿದೆ.
ಮನೆಯಲ್ಲಿಟ್ಟು ನಿತ್ಯ ಆರೈಕೆ ಮಾಡುತ್ತಿಲ್ಲ. ಬಯಲಲ್ಲಿಟ್ಟು ನೀವೇ ನೋಡಿಕೊಳ್ಳಿ ಎಂದಿದ್ದಾರೆ. ಕೆಟ್ಟಿರುವುದು ಯಾರೂ ಕಂಡಿಲ್ಲ. ಇದರಲ್ಲಿನ ಸಮಯ ವ್ಯತ್ಯಾಸವಾಗಿದ್ದೂ ಯಾರ ಗಮನಕ್ಕೂ ಬಂದಿಲ್ಲ. ಇದೆಲ್ಲಾ ಸರಳ ಅನ್ನಿಸಬಹುದು. ಆದರೆ ಇಂತಹ ತಾಂತ್ರಿಕ ನೈಪುಣ್ಯತೆ ಸುಲಭಕ್ಕೆ ಸಿದ್ದಿಸುವುದಿಲ್ಲ. ‘ಪಾರ್ಕ’ಲಾಂ (ನೋಡೋಣಾ..) ಎನ್ನುವ ಅಪೇಕ್ಷೆ ಉಳ್ಳವರು ಜರ್ಮನಿಯ ಡುಸಾಲ್ಡರ್ಫ್ಗೆ ತೆರಳಬೇಕು. ಈ ಕ್ಲಾಕ್ ಪಾರ್ಕ್ ನಮ್ಮ ವಿಧಾನಸೌಧದಲ್ಲಿ ಅಥವಾ ಸಿಎಂ ಅವರ ಅಧಿಕೃತ ನಿವಾಸ ‘ಕೃಷ್ಣ’ದಲ್ಲಿ ನಿರ್ಮಿಸಿದರೆ ಹೇಗೆ? ಬೇಡ. ಸಣ್ಣದೊಂದು ಕೈ ಗಡಿಯಾರ ಸಂಭಾಳಿಸುವಲ್ಲಿಯೇ ಸಿಎಂ ಸಿದ್ದರಾಮಯ್ಯ ಸಾಕಷ್ಟು ಬಸವಳಿದಿದ್ದಾರೆ. ಅಂತಿರುವಾಗ ೨೪ ಗಡಿಯಾರಗಳ ತಂಟೆಗೆ ಹೋದರೆ ಅದೇನು ವಕ್ರೀಭವನ ಆಗುತ್ತದೆಯೋ?!
ಒಂದು ‘ಹೊತ್ತಿಗೆ!’
ಅಂಗಡಿ ಅಂದರೆ ಅಲ್ಲಿ ಥರಾವರಿ ಇರಬೇಕು. ವಿವಿಧತೆ ಇರಬೇಕು. ಆದರೆ ಯೋಶಿಯುಕಿ ಮೊರಿಯಾಕನ ಮಳಿಗೆಯಲ್ಲಿ ದೊರೆಯುವುದು ಒಂದೇ ಪುಸ್ತಕ. ಐಷಾರಾಮಿ ಶಾಪಿಂಗ್ ಕಾಂಪ್ಲೆಕ್ಸ್ನಲ್ಲಿ ಈತನ ಮಾರಾಟ ಕೇಂದ್ರವಿದ್ದರೂ ದಿನಕ್ಕೊಂದೇ ಬುಕ್ ಎನ್ನುತ್ತಾನೆ. ಮೊರಿ’ಯಾಕ’ ಹೀಗೆ ‘ಮಾರಾ’ಕ ಹತ್ತಾನೆ? ಇವನಿಗೆ ಲೆಕ್ಕ ಹಾಕಲು ಬರುವುದಿಲ್ಲವಾ…? ಅಥವಾ ಹಲವು ಪುಸ್ತಕಗಳಿದ್ದರೆ ನೋಡಿಕೊಳ್ಳಲು ಕೆಲಸಗಾರರ ಕೊರತೆಯಾ? ಅದ್ಯಾವುದೂ ಅಲ್ಲವಂತೆ. ಸಾಮಾನ್ಯವಾಗಿ ಎಲ್ಲರೂ ಕೇಳೋದು ಒಂದೇ ಶೀರ್ಷಿಕೆಯ ಪುಸ್ತಕವಂತೆ. ಆ ಸಂದರ್ಭಕ್ಕೆ ತಕ್ಕ ಜನಪ್ರಿಯ ಪುಸ್ತಕವನ್ನಿಟ್ಟು ವ್ಯವಹಾರಕ್ಕೆ ಕೂತಿದ್ದಾನೆ. ಸುಮಾರು ಒಂದೂವರೆ ವರ್ಷದ ಅನುಭವ ಅದೇನು ಕಲಿಸಿದೆಯೋ ಅವನೇ ಹೇಳಬೇಕು.
ದಿನಕ್ಕೆ ಒಂದೇ ಟೈಟಲ್ ಆದರೂ ನೂರಾರು ಪ್ರತಿಗಳನ್ನು ಬಿಕರಿಗಿಡುತ್ತಾನೆ. ಮರುದಿನ ಇನ್ನೊಂದು…ಟೈಟಲ್ನ ಪುಸ್ತಕ ಸಿದ್ದವಿರುತ್ತದೆ. ಹೀಗೆ ಸಾಗುತ್ತಿದೆ ಇವನ ಬುಕ್ ಬ್ಯುಸಿನೆಸ್… ಕೊಳ್ಳುಗರಿಗೆ ಸುಲಭ. ಇವನಿಗೂ ನೊಣ ಹೊಡೆಯಲು ಅನುಕೂಲ. ‘ಒಂದೇ ಹೊತ್ತಿಗೆ’ ಮಳಿಗೆ ನೋಡಲು ಜಪಾನ್ನ ಟೋಕಿಯೋದಲ್ಲಿನ ಗಿಂಜಾಗೆ ತೆರಳಬೇಕು. ‘ಒಂದೇ ಶೀರ್ಷಿಕೆಯ ಪುಸ್ತಕದಮಳಿಗೆ ಇರುವಂತೆ ಒಂದೇ ಡಿಸೈನ್ನ ಸೀರೆಯಂಗಡಿ ಬಂದರೇ ಎಷ್ಟು ಚೆನ್ನಾ’ ಅಲ್ವಾ? ಎಂಬುದು ಅಮ್ಮಾವ್ರ ಗಂಡಂದ್ರ ಅಪೇಕ್ಷೆಯಾಗಿದೆಯಂತೆ!
‘ರಾಕಿಂಗ್’ ಶೂಸ್
ಈ ಬೂಟುಗಳಿಗೆ ‘ಬೂಟಾಟಿಕೆ’ ಸ್ವಭಾವವಿವಿಲ್ಲ. ಒಳಗೊಂದು ಹೊರಗೊಂದು-ಗಳಿಗೆಗೊಮ್ಮೆ ಬಣ್ಣ ಬದಲಿಸುವುದಿಲ್ಲ. ಹಿಗ್ಗುವುದಿಲ್ಲ. ಕುಗ್ಗುವುದಿಲ್ಲ. ಮನೆಯ ಹೊರಗೆ ಬಿಟ್ಟಿದ್ದರೂ ಕಳ್ಳರು ಕದಿಯುವುದಿಲ್ಲ. ನಾಯಿ ಹಿಡಿದೆಳೆಯುವುದಿಲ್ಲ… ಏನ್ರೀ ಬರೀ ಇಲ್ಲಾ…ಇಲ್ಲಾ.. ಅಂತಲೇ ಹೇಳುತ್ತಿದ್ದೀರಾ… ಏನಿದೆ ಹೇಳಿ…ಸ್ವಲ್ಪ ತಡ್ಕೊಳಿ… ಈ ಶೂ ಸವೆಯದು. ಕಳ್ಳತನ ಆಗದು. ಸುಲಭಕ್ಕೆ ಧರಿಸಿಕೊಂಡು ಅಡ್ಡಾಡಲೂ ಆಗದು. ಏಕೆಂದರೆ ಇದು ಕಲ್ಲಿನ ಶೂಗಳು. ತೂಗಿದರೆ ೫೩ಕೆ.ಜಿ.ಗಳಾಗಲಿವೆ. ೫೫ ವರ್ಷಗಳ ಹುವಾಂಗ್ ಬೊವ್ಕ್ವಾನ್ ಎಂಬ ಸಾಹಸಿಗ ಇವುಗಳನ್ನು ಧರಿಸಿ ನಿತ್ಯ ೩ಕಿ.ಮೀ ವಾಕಿಂಗ್ ಮಾಡುತ್ತಾನೆ. ಈತನ ಕಾಲುಗಳ ತಾಕತ್ತು ಕಂಡು ಜನ ನಿಬ್ಬೆರಗಾಗಿ ಈತನ ಕಾಲುಗಳನ್ನೇ ನೋಡುತ್ತಾರೆ. ಪುರುಷ ಪಾದಗಳನ್ನೂ ನೋಡುಗರಿದ್ದಾರಲ್ಲಾ ಎಂಬುದೇ ಸಂತಸ.
ಕಲ್ಲಿನ ಬೂಟು ಧರಿಸಿ ಹುವಾಂಗ್ ವಾಕಿಂಗ್ ಮಾಡುವಾಗ ಕೈ ಬೀಸಿ ನಡೆಯುವುದಿಲ್ಲ. ಕೈಗಳಲ್ಲಿ ಕಬ್ಬಿಣದ ಡಂಬಲ್ಸ್ಗಳಿರುತ್ತವೆ. ಒಟ್ಟಾಗಿ ಹೇಳಬೇಕಂದರೆ ಈತನೊಬ್ಬ ‘ತೂಕ’ದ ವ್ಯಕ್ತಿತ್ವದವನು. ರಾಕ್ ಅಂದರೆ ಶಿಲೆ ಇದರಿಂದ ಮಾಡಿದ ಈ ಬೂಟುಗಳನ್ನು ‘ರಾಕಿಂಗ್’ ಶೂಸ್ ಎನ್ನಲು ಅಡ್ಡಿಯಿಲ್ಲ. ಈತನ ‘ರಾಕಿಂಗ್’ ಶೂಸ್ಗಳನ್ನು ನೋಡಲು ನೆರೆಯ ಚೀನಾ ದೇಶದ ಚೆಂಗ್ಡು ಪ್ರಾಂತ್ಯಕ್ಕೆ ತೆರಳಬೇಕು. ಈ ಶೂಗಳನ್ನು ಧರಿಸಿ ನಮ್ಮ ಬಿಎಂಟಿಸಿ ಬಸ್ ಏರಿದರೆ ಏನಾಗಬಹುದು? ಎಲ್ಲರೂ ಕರೆದು ಸೀಟು ಕೊಟ್ಟು ಕೈ ಮುಗಿಯುವರು… ಇಲ್ಲಾ ಅಂದರೆ ಕಾಲುಗಳು ಖಚಕ್!
ಮರದ ಕೊಂಬೆಯಲ್ಲಿ ಮೊಳೆ
‘ಮನೆಯಲ್ಲಿ ಅಕ್ಕಿ ಇದ್ದರೆ ತಪ್ಪಿಲ್ಲ – ಮರದಲ್ಲಿ ಹಕ್ಕಿ ಇದ್ದರೆ ತಪ್ಪಿಲ್ಲ’ ಅನ್ನೋದು ಕನ್ನಡದ ಗಾದೆ. ಆದರೆ ಈ ದರಿದ್ರ ಜನರ ಮನೆಯಲ್ಲಿ ಅಕ್ಕಿ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಮರದ ಮೇಲೆ ಹಕ್ಕಿ ಕೂರಲು ಬಿಡುತ್ತಿಲ್ಲ! ಏನು ಮಾಡಿದ್ದಾರೆ ಈಗ? ಹಕ್ಕಿ ಕೂರದಂತೆ ಮರದ ಟೊಂಗೆ-ಕೊಂಬೆಗೆಲ್ಲಾ ಮೊಳೆ ಜಡಿದಿದ್ದಾರೆ. ಅಪ್ಪಿ ತಪ್ಪಿ ಹಕ್ಕಿ ಬಂದು ಕೂತರೆ ‘ಗೊಟಕ್’ ಎನ್ನಲಿದೆ. ಯಾಕೆ ಹೀಗೆ ಮಾಡಿದರು? ತಮ್ಮ ಐಷಾರಾಮಿ ಕಾರುಗಳ ಮೇಲೆ ಹಕ್ಕಿಗಳು ಹಿಕ್ಕೆ ಹಾಕುತ್ತವೆ. ಅಲ್ಲಿಂದ ಇಲ್ಲಿಂದ ತಂದ ಆಹಾರದ ತುಂಡುಗಳನ್ನು ಉದುರಿಸುತ್ತವೆ. ಮರದ ಎಲೆ/ಹೂಗಳನ್ನು ಉದುರಿಸುತ್ತವೆ. ಏನಾಯಿತು ಈಗ? ದುಬಾರಿ ಕಾರು ಗಲೀಜಾಗುತ್ತದೆ. ಮಾಲೀಕನ ಮಾನ ಮೂರು ಕಾಸಿಗೆ ಹರಾಜಾಗುತ್ತಿದೆ. ಆತನ ಘನತೆ, ಗಾಂಭೀರ್ಯಗಳು ನೆಲದ ಪಾಲಾಗುತ್ತಿದೆ… ಹೀಗಾಗಿ ಕೊಂಬೆಗೆಲ್ಲಾ ಮೊಳೆ ಹೊಡೆಸಿದ್ದಾನೆ.
ಹಕ್ಕಿಗಳ ಬದುಕಿಗೇ ಸಂಚಕಾರ ತಂದ ಶ್ರೀಮಂತ ಜಂತುಗಳು ಎಲ್ಲಿವೆ? ಇಂಗ್ಲೇಂಡ್ನ ಬ್ರಿಸ್ಟೋಲ್ನಲ್ಲಿ ನೆಲೆಸಿವೆ. ಸ್ಥಳೀಯ ಆಡಳಿತ ತೆಪ್ಪಗೆ ನೋಡುತ್ತಿದೆಯಾ? ಹೌದು! ಏಕೆಂದರೆ ಮರ ರಸ್ತೆಯಲ್ಲಿಲ್ಲ. ಅಥವಾ ಸಾರ್ವಜನಿಕ ಸ್ಥಳದಲ್ಲಿ ಇಲ್ಲ. ಬದಲಿಗೆ ಕಾರ್ ಮಾಲೀಕನ ಅಂಗಳದಲ್ಲಿಯೇ ಇದೆ. ಹೀಗಾಗಿ ಹಕ್ಕಿ ಇಲ್ಲದ ಮರಗಳು ಮಾತ್ರ ಇಲ್ಲಿವೆ. ಈಗ ಓ.ಕೆ. ಮುಂದೆ ಮರದ ಟೊಂಗೆಗಳು ಬೆಳೆದರೆ ಆಗ? ಸೂಪರ್ ಸಾರ್… ಒಳ್ಳೆ ಪ್ರಶ್ನೆ… ಟೊಂಗೆಗಳು ಬೆಳೆಯಲಿ… ಹಕ್ಕಿಗಳು ಅಲ್ಲಿ ಗೂಡುಕಟ್ಟಲಿ. ಸಂಸಾರ ಮಾಡಲಿ… ಹಕ್ಕಿಗಳ ಕಲರವ ಮೂಡಲಿ…ಆ ಸದಾಶಯ ಮಾತ್ರ ನಮ್ಮದು.
ಕಪಾಳ ಮೋಕ್ಷ
ಅವಳ ಕೆನ್ನೆಗೆ ಇವಳು ತಟ್ಟಿದಳು. ಇವಳ ಕೆನ್ನೆಗೆ ಅವಳು ಬಡಿದಳು… ಪರಸ್ಪರ ಹೋಯ್ ಕೈ ನಡೆದು ಹೋಯಿತು. ಹಾಗೆಂದು ಇದೇನು ಅತ್ತೆ ಸೊಸೆಯರ ಕಾಟದ ಕಥೆಯಲ್ಲ. ಸಾರ್ವಜನಿಕ ನಲ್ಲಿಯಲ್ಲಿ ನೀರು ಹಿಡಿಯಲು ಬಂದ ನಾರಿಯರ ಕ್ರೈಂಸ್ಟೋರಿಯೂ ಅಲ್ಲ. ಬದಲಿಗೆ ಇದೊಂದು ಶಿಕ್ಷೆ ಹಾಗೂ ತಂಡಕ್ಕೆ ಸ್ಪೂರ್ತಿ ನೀಡಲು ಹೀಗೆ ಮಾಡಲಾಯಿತಂತೆ. ನಮ್ಮಲ್ಲಿ ಸಾಮಾನ್ಯವಾಗಿ ಗುರಿ ತಲುಪದ ತಂಡಕ್ಕೆ ವೇತನ ಹೆಚ್ಚಳ, ಬೋನಸ್, ಇನ್ನಿತರೆ ಸೌಲಭ್ಯಗಳನ್ನು ಕಡಿತಗೊಳಿಸಿ ಶಿಕ್ಷಿಸಲಾಗುತ್ತದೆ. ಇನ್ನೂ ಹೆಚ್ಚೆಂದರೆ ಡಿಸ್ಮಿಸ್ ಮಾಡಿ ಮನೆಗೆ ಕಳುಹಿಸಲಾಗುತ್ತದೆ. ಆದರೆ ಚೀನಾದ ಸೌಂದರ್ಯ ವರ್ಧಕ ಹಾಗೂ ಚರ್ಮ ರಕ್ಷಣೆ ವಸ್ತುಗಳನ್ನು ತಯಾರಿಸುವ ಕಂಪೆನಿ(ಓಚಿಟಿಛಿhಚಿಟಿg ಎiಟಿhuಚಿಥಿuಚಿಟಿ ಒeiಥಿe,) ಹೀಗೆ ಮಾಡಲಿಲ್ಲ. ಎಲ್ಲ ನೌಕರರನ್ನೂ ‘ಗೆಟ್ ಟುಗೆದರ್’ಗೆ ಆಹ್ವಾನಿಸಿತು. ಅಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ಗುರಿಸಾಧಿಸದ ಮಹಿಳಾ ನೌಕರರನ್ನು ವೇದಿಕೆಗೆ ಬರಮಾಡಿಕೊಂಡಿತು. ಪ್ರತಿ ತಂಡದಲ್ಲಿ ಇಬ್ಬರು ಮಹಿಳಾ ನೌಕರರು ಎದುರು ಬದುರು ಮೊಣಕಾಲಿನ ಮೇಲೆ ಕೂರುವಂತೆ ತಿಳಿಸಿತು.
ಕೆಲಸದಲ್ಲಿ ಮುಂದುವರೆಯಲು ಬಯಸುವಿರಾದರೆ ಪರಸ್ಪರ ಕಪಾಳ ಮೋಕ್ಷ ಮಾಡಿಕೊಳ್ಳಿ! ಎಂದು ಹೇಳಿತು. ಉದ್ಯೋಗದ ಅಗತ್ಯತೆಯುಳ್ಳವರು ಕಪಾಳ ಮೋಕ್ಷ ಮಾಡಿಕೊಂಡರೆ, ಮ್ಯಾನೇಜರ್-ಮಾಲೀಕರುಗಳು ವೇದಿಕೆಯ ಕೆಳಗೆ ಕೂತು ಕೇಕೆ ಹಾಕುತ್ತಿದ್ದರು. ಮಹಿಳಾ ನೌಕರರು ಹೋಯ್ ಕೈ ಮಾಡಿಕೊಳ್ಳುತ್ತಿದ್ದರೆ ಇವರನ್ನು ಅಣಕಿಸುವಂತೆ ‘ನಿರ್ದಯಿ ತಂಡ’ ಎಂದು ಫಲಕದ ಮೇಲೆ ಬರೆಯಲಾಗಿತ್ತು! ಈ ಹಿಂದೆ ಕೂಡ ಇದೇ ಕಂಪೆನಿ ಇದೇ ರೀತಿ ವಿಲಕ್ಷಣ ಶಿಕ್ಷೆ ನೀಡಿ ಅಪಮಾನಿಸಿತ್ತು. ಕಮ್ಯೂನಿಸ್ಟರ ನಾಡಿನಲ್ಲೇ ಕಾರ್ಮಿಕರಿಗೆ ಗೌರವ ಇಲ್ಲವೆಂದರೆ ಹೇಗೆ? ‘ಉದ್ಯೋಗಂ ನಾರಿಲಕ್ಷಣಂ’ ಆಗಿರುವ ಚೀನಾದಲ್ಲಿ ಕಂಪೆನಿಗಳಿಗೆ ಕೊರತೆಯಿಲ್ಲ. ಆದರೆ ಉದ್ಯೋಗಾವಕಾಶ ಕಮ್ಮಿ. ಹೀಗಾಗಿ ಖಾಸಗಿ ಕಂಪೆನಿಗಳು ನೀಡುವ ಶಿಕ್ಷೆ ಅನಿವಾರ್ಯವಾಗಿ ಅನುಭವಿಸಬೇಕಂತೆ.
ಹಣ್ಣು ಕದ್ದ ಸೇನಾಧಿಕಾರಿ
ಅಡಿಕೆಯಲ್ಲಿ ಹೋದ ಆನೆ ಕೊಟ್ಟರೂ ಬರಲ್ವಂತೆ ಕನ್ನಡದ ಈ ಗಾದೆ ಇಸ್ರೇಲ್ ದೇಶದ ಸೇನಾ ಕಮಾಂಡರ್ಗೆ ತಿಳಿದಿಲ್ಲ. ಹೀಗಾಗಿ ಹಣ್ಣು ಕದ್ದು ಸಿಕ್ಕಿದ್ದು ಮೆದ್ದು ಕಡೆಗೆ ಡಿಸ್ಮಿಸ್ ಆಗಿದ್ದಾನೆ. ಏನಾಯಿತು? ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೆರುಸಲೇಂನ್ನು ಇಸ್ರೇಲ್ ರಾಜಧಾನಿ ಎಂದು ಘೋಷಿಸಿದ. ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನಚ್ಚರಿಕೆ ಕ್ರಮವಾಗಿ ಸೇನಾ ಸಿಬ್ಬಂದಿ ನಿಯೋಜಿಸಲಾಗಿತ್ತು. ಆದರೂ ಅಲ್ಲೆಲ್ಲಾ ದೊಂಬಿ, ಗಲಭೆಗಳು, ಗಲಾಟೆ ನಡೆದಿವೆ. ಕಾನೂನು ರಕ್ಷಣೆಯ ನೆಪದಲ್ಲಿ ಈ ವೇಳೆ ರಸ್ತೆ ಬದಿಯಲ್ಲಿದ್ದ ತಳ್ಳೋ ಗಾಡಿಯಲ್ಲಿದ್ದ ಹಣ್ಣುಗಳನ್ನು ಕದ್ದಿದ್ದಾರೆ.
ಪ್ಯಾಲೆಸ್ತೈನ್ ವ್ಯಾಪಾರಿಯ ಹಣ್ಣನ್ನು ಕದ್ದ ಕಾರಣ ಹೆಬ್ರಾನ್ ನ ಪಶ್ಚಿಮ ಪ್ರದೇಶದಲ್ಲಿ ಸೇನಾ ಕಮಾಂಡರ್ ಅನ್ನು ಅಮಾನತು ಮಾಡಲಾಗಿದೆ. ಕಮಾಂಡರ್ ಹಣ್ಣನ್ನು ಕದಿಯುತ್ತಿರುವ ದೃಶ್ಯಗಳನ್ನು ಪ್ಯಾಲೆಸ್ತೈನ್ ವ್ಯಕ್ತಿಯೊಬ್ಬ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ. ಈ ವಿಡಿಯೋವನ್ನು ಆಧಾರವಾಗಿಟ್ಟುಕೊಂಡು ಕಮಾಂಡರ್ ನನ್ನು ಅಮಾನತು ಮಾಡಲಾಗಿದೆ. ವಿಡಿಯೋದಲ್ಲಿ ಕಮಾಂಡರ್ ಹಣ್ಣಗಳನ್ನು ಕದ್ದು ಸೈನಿಕರಿಗೆ ನೀಡಿರುವ ದೃಶ್ಯಗಳು ಸೆರೆಯಾಗಿವೆ. ಈಗ ಏನು ಮಾಡುತ್ತಿದ್ಧಾನೆ ಈ ಕಮಾಂಡರ್? ‘ಕದ್ದ ಹಣ್ಣು ರುಚಿ ಹೆಚ್ಚು – ಹೋದ ಕೆಲಸದಿಂದ ರೋಧನೆ ಹೆಚ್ಚು!’ ಎನ್ನುವ ಗಾದೆ ಹೇಳಿಕೊಂಡು ಅಂಡಲೆಯುತ್ತಿರಬಹುದು!
೩ಗಂಟೆಯಲ್ಲಿ ೫೩ ಫೋನ್ ಕದ್ದ!
ಹೆಂಗಸರ ಈಜುಡುಗೆ ಧರಿಸಿರುವ ಈತನದ್ದು ಅಮಾಯಕನ ಲುಕ್. ಈತನ ಪೆಚ್ಚುಮೋರೆ ನೋಡುಗರಲ್ಲಿಯೇ ಅನುಕಂಪ ಸಹಜವಾಗಿಯೇ ಅನುಕಂಪ ಮೂಡುತ್ತದೆ. ಆದರೆ ಕರುಣೆ ಇಲ್ಲದ ಪೊಲೀಸರು ಈತನ ಬಂಧಿಸಿದರು!
ಯಾಕೋ…? ಈತನ ಬಳಿಯಲ್ಲಿ ೫೦ಕ್ಕೂ ಹೆಚ್ಚು ಮೊಬೈಲ್ಗಳಿತ್ತು! ಕೊಂಡಿದ್ದಲ್ಲ. ಕದ್ದಿದ್ದು! ಎಲ್ಲವನ್ನೂ ಒಂದೇ ದಿನದಲ್ಲಿ ಅಂದರೆ ಕೆಲವೇ ಗಂಟೆಗಳಲ್ಲಿ ಅಬೇಸ್ ಮಾಡಿ ತನ್ನ ಕೈ ಚಳಕ ತೋರಿದ್ದಾನೆ. ತನ್ನ ಅಮಾಯಕನ ಪೋಷಾಕಿನಲ್ಲಿಯೇ ದಿನಾಂಕ ೮ನೇ ನವೆಂಬರ್ ೨೦೧೭ರಂದು ಬರ್ಮಿಂಗ್ ಹ್ಯಾಂನ ಕಾರ್ಯಕ್ರಮಕ್ಕೆ ಆಗಮಿಸಿದ. ಕೇಳುಗನಂತೆ ಜಾಗ ಮಾಡಿಕೊಳ್ಳುತ್ತಾ ನುಸುಳತೊಡಗಿದ. ಒಂದೊಂದೇ ಫೋನ್ ಕದ್ದು ತನ್ನ ಕಿಸೆಯೊಳಗೆ ಇಳಿಸತೊಡಗಿದ. ಕದ್ದಿದ್ದೆಲ್ಲಾ ಸ್ಮಾರ್ಟ್ ಫೋನ್ಗಳೇ.
ಕದ್ದಿದ್ದನ್ನು ತನ್ನ ಕಾರೊಳಗೆ ಇರಿಸಿಕೊಳ್ಳುವ ವೇಳೆಗೆ ಸಿಕ್ಕಿ ಬಿದ್ದ. ಕದ್ದಾಗ ಜಾಗರೂಕನಾಗಿದ್ದ ಈತ ಕಾರಿನೊಳಗೆ ಇರಿಸುವಾಗ ಕೊಂಚ ಯಾಮಾರಿದ. ಇಂಗ್ಲೆಂಡ್ ಪೊಲೀಸರು ರುಬ್ಬಿದಾಗ ಇವನ ಕೈ ಚಳಕಕ್ಕೆ ದಂಗಾದರು ರೊಮೇನಿಯಾ ದೇಶದ ಪ್ರಜೆಯಾದ ಈತನ ಹೆಸರು ಆಲಿನ್ ಮೆರಿನ್ ಅಂತೆ. ಇನ್ನೂ ೨೨ ವರ್ಷ ಮಾತ್ರ. ಕದಿಯುವುದೇ ಇವನ ವೃತ್ತಿ ಪ್ರವೃತ್ತಿ. ಕಳ್ಳ ಮಾಲುಗಳನ್ನು ಸುಲಭವಾಗಿ ಬಿಕರಿ ಮಾಡಿ, ಮತ್ತೆ ಅದನ್ನು ಕಿಸೆಗಿಳಿಸುವ ತಾಕತ್ತೂ ಇವನಿಗಿದೆಯಂತೆ. ಬರ್ಮಿಂಗ್ ಹ್ಯಾಂನ ಕ್ರೌನ್ ಕೋರ್ಟ್ ಇವನ ಕರ್ಮಕಾಂಡಗಳು, ಕಳ್ಳತನದಲ್ಲಿನ ಇವನ ಸಾಧನೆ ಎಲ್ಲವನ್ನೂ ಗಮನಿಸಿ ೧೮ನೇ ಡಿಸೆಂಬರ್ ೨೦೧೭ರಂದು ಬಹುಮಾನ ಪ್ರಕಟಿಸಿದೆ!
ಏನದು ಉಡುಗೊರೆ? ೩ ವರ್ಷಗಳ ಜೈಲು ಶಿಕ್ಷೆ. ಈಗ ಅಲ್ಲಿ ಏನು ಕದಿಯುತ್ತಿದ್ದಾನೋ… ಗೊತ್ತಿಲ್ಲ. ಬಾಳಿಗೊಂದು ಬೆರಳ್!
ಎಳನೀರನ್ನು ಕೊಚ್ಚಿ ಕುಡಿಸೋರು ಗೊತ್ತು. ಚಚ್ಚಿ ಕುಡಿಸೋರು ಗೊತ್ತು. ಆದರೆ ಇವನು ಎಳನೀರಿನ ಬುರಡೆಯನ್ನೇ ಪಂಚರ್ ಮಾಡುತ್ತಾನೆ. ಹಾಗೆಂದು ಕತ್ತಿ, ಮೊಳೆಗಳನ್ನು ಬಳಸುವುದಿಲ್ಲ. ಬದಲಿಗೆ ಕೈ ಬೆರಳಷ್ಟೇ ಇವನ ಆಯುಧ. ಬೆರಳ್ ಶಕ್ತಿಯನ್ನು ಕಾಣಬೇಕಾ…? ಹಾಗಾದರೆ ಮಲೇಶ್ಯಾದ ಮಲಾಕಾ ಜೋಂಕಾರ್ ಬೀದಿಗೆ ಪ್ರತಿ ಶುಕ್ರ/ಶನಿವಾರಗಳಂದು ರಾತ್ರಿ ೮ಕ್ಕೆ ತೆರಳಬೇಕು. ಅಲ್ಲಿ ಹೊ ಎಂಗ್ ಹುಯಿ ಎಂಬಾತ ಎಳನೀರನ್ನು ತನ್ನ ಬೆರಳಿಂದ ಚುಚ್ಚಿ – ಪಂಚರ್ ಮಾಡಿ ಕೊಡುತ್ತಾನೆ- ಕುಡಿಯಿರಿ.
ತೋರ್ ಬೆರಳನ್ನೇ ‘ತೂರ್’ ಬೆರಳ್ ಮಾಡಿಕೊಂಡು ಬುರುಡೆಯನ್ನು ಪಂಚರ್ ಮಾಡುತ್ತಾನೆ. ಈ ಆಟವೇನೂ ಪುಗಸಟ್ಟೆಯಲ್ಲ. ರೊಕ್ಕ ಕೊಟ್ಟು ವೀಕ್ಷಿಸಬೇಕು. ಎಳನೀರಿಗೆ ಮತ್ತಿಷ್ಟು ರೊಕ್ಕ ಕೊಡಬೇಕು. ಕೆಲವರು ಬೆರಳ್ ತೋರಿಸಿದರೆ ಹಸ್ತವನ್ನೇ ನುಂಗುತ್ತಾನೆ. ಆದರೆ ಹೊ ಎಂಗ್ ಬೆರಳ್ ತೋರ್ಸಿ-ತೂರ್ಸಿ ಬದುಕುತ್ತಿದ್ದಾನೆ. ಜೊತೆಗೆ ದಾಖಲೆಯು ಬರೆದಿದ್ದಾನೆ. ೪ ಎಳನೀರನ್ನು ಕೇವಲ ೧೨.೧೫ ಸೆಕೆಂಡುಗಳಲ್ಲಿ ಬಗೆದು ಗಿನ್ನೀಸ್ ….ದಾಖಲೆ ಪುಸ್ತಕಕ್ಕೆ ಸೇರ್ಪಡೆಗೊಂಡಿದ್ದಾನೆ. ಕುಂಗ್ ಫು ಕಲೆ ಬಲ್ಲ ಈತನ ಬೆರಳು ಕೊಂಚ ಬಾಗಿದೆ. ಅದು ಕೂಡ ಇವನಿಗೆ ಸಹಕಾರಿಯಾಗಿರಬೇಕು. ಅವರಿವರ ವಿಷಯದಲ್ಲಿ ಮೂಗು ತೂರ್ಸಿ ಬದುಕುವುದಕ್ಕಿಂತಲೂ ಎಳನೀರಿಗೆ ಬೆರಳ್ ತೂರ್ಸಿ ಬದುಕವ ಹೊ ಎಂಗ್ ಒಂದರ್ಥದಲ್ಲಿ ಗ್ರೇಟ್ ಅಲ್ವಾ? ಜತೆಗೆ ಅವನು ಸರಿಯಿಲ್ಲ – ಇವನು ಸರಿಯಿಲ್ಲ ಎಂದು ತೋರ್ ಬೆರಳಿಟ್ಟು ಹೇಳುವುದಕ್ಕಿಂತಲೂ ‘ಬುರುಡೆ’ಯತ್ತ ಬೆಟ್ಟು ಮಾಡಿ ಬದುಕೋದು ಎಲ್ಲರಿಗೂ ಸಾಧ್ಯವಿಲ್ಲ.