ಆಧುನಿಕತೆ ಬೆಳೆದಂತೆಲ್ಲ ಕಾಯಿಲೆ ಕಸಾಲೆಗಳಿಗೆ ಮದ್ದು ಹುಡುಕುವ ಶಕ್ತಿ ನಮಗೆ ಸಿಕ್ಕಿದೆ. ಆದರೆ, ಸಣ್ಣಪುಟ್ಟ ಹಳೇ ಕಾಯಿಲೆಗಳಿಗೆ ಮದ್ದರೆದು ಬೀಗುತ್ತಿರೋ ಮನುಷ್ಯನನ್ನು ದಿನದಿಂದ ದಿನಕ್ಕೆ ಚಿತ್ರವಿಚಿತ್ರ ಕಾಯಲೆಗಳು ಬಾಧಿಸಲಾರಂಭಿಸಿವೆ. ಮನುಷ್ಯನ ಒಟ್ಟಾರೆ ದೇಹವೇ ಇದೀಗ ನಾನಾ ರೀತಿಯ ಕಾಯಿಲೆಗಳ ಕೊಂಪೆಯಂತಾಗಿ ಬಿಟ್ಟಿದೆ. ನಿಖರವಾಗಿ ಹೇಳಬೇಕೆಂದರೆ, ಸಾವೆಂಬೋ ಸಾವು ನಮ್ಮೆಲ್ಲರ ದೇಹದಲ್ಲಿಯೂ ಹೊಂಚಿ ಕೂತಿದೆ ಎಂಬಂಥಾ ಭಯವೊಂದು ಎಲ್ಲರನ್ನೂ ಆವರಿಸಿಕೊಂಡಿದೆ. ತೀರಾ ಶಾಲಾ ಕಾಲೇಜು ವಿದ್ಯಾರ್ಥಿಗಳೇ ಕುಸಿದು ಬಿದ್ದು ಸಾಯುತ್ತಿದ್ದಾರೆ. ಆಯುಷ್ಯವೆಂಬುದು ನೂರು ವರ್ಷದಿಂದ ಏಕಾಏಕಿ ಐವತ್ತು ವರ್ಷಕ್ಕೆಲ್ಲ ಇಳಿಮುಖವಾದಂತಿದೆ.
ಹಾಗಾದರೆ ಇಕದೆಲ್ಲವೂ ಕೊರೋನಾ ನಂತರದಲ್ಲಿ ಉಂಟಾದ ಬಾಧೆಯಾ? ಇದೆಲ್ಲದಕ್ಕು ಕೂಡಾ ನಾವೆಲ್ಲ ಹಾಕಿಸಿಕೊಂಡಿರುವ ಕೊರೋನಾ ಲಸಿಕೆ ಮಾತ್ರವೇ ಕಾರಣವಾ ಎಂಬಂಥಾ ಪ್ರಶ್ನೆ ಮೂಡಿಕೊಳ್ಳುತ್ತೆ. ಯಾವುದೇ ಭ್ರಮೆ, ಸಿನಿಕತನ ಇಲ್ಲದೆ ಆಲೋಚಿಸಿದರೆ, ಕೊರೋನಾ ಬರೋದಕ್ಕೂ ಮುನ್ನ, ಅಂದರೆ ದಶಕಗಳಷ್ಟು ಹಿಂದಿನಿಂದಲೇ ಮನುಷ್ಯರನ್ನೆಲ್ಲ ನಾನಾ ದೈಹಿಕ ಬಾಧೆಗಳು ಹಿಂಡಲಾರಂಭಿಸಿದ್ದವೆಂಬಂಥಾ ನಗ್ನ ಸತ್ಯವೊಂದು ತಂತಾನೇ ಎದುರಾಗುತ್ತದೆ. ಆಧುನೀಕತೆ ಅನ್ನೋದು ಆರಂಭವಾಗುತ್ತಲೇ ಕೃಷಿಯಲ್ಲಿಯೂ ಕೂಡಾ ಬದಲಾವಣೆಗಳಾಗುತ್ತಿವೆ. ಥರ ಥರದ ಆಹಾರಗಳ ಹೆಸರಲ್ಲಿ ಯಥೇಚ್ಛವಾಗಿ ವಿಷ ತಿನ್ನೋದನ್ನೇ ಬುದ್ಧಿವಂತಿಕೆ ಅಂದುಕೊಳ್ಳಲಾಗುತ್ತಿದೆ. ಅತ್ತ ಕೃಷಿಯಲ್ಲಿ ರಾಸಾಯನಿಕ, ಕೀಟನಾಶಕಗಳ ಬಳಕೆ, ಇತ್ತ ಆಹಾರ ತಯಾರಿಕೆಯಲ್ಲಿಯೇ ವಿಷದ ನರ್ತನ… ಇದೆಲ್ಲದರಿಂದಾಗಿ ನಮ್ಮ ಅನ್ನದ ಬಟ್ಟಲೇ ವಿಷದ ಕಾರ್ಖಾನೆಯಂತಾಗಿ ಬಿಟ್ಟಿದೆ!
ಆಯುಷ್ಯದಲ್ಲಿ ಕಡಿತ
ಸಮ್ಮನೊಮ್ಮೆ ನಮ್ಮ ಪೂರ್ವಜರತರ್‍ತ ನೋಡಿದರೆ ಯಾವ ಸೌಕರ್ಯ ಸವಲತ್ತುಗಳು ಇಲ್ಲದೇ ಹೋದರೂ ಕೂಡಾ ಆರೋಗ್ಯವೆಂಬ ಸಂಪತ್ತು ಅವರಲ್ಲಿ ಯಥೇಚ್ಛವಾಗಿತ್ತು. ಹಾಗೆ ನೋಡಿದರೆ, ಸರಿಯಾಗಿ ಮೂರು ಹೊತ್ತು ತಿನ್ನಲು ಅನ್ನಕ್ಕೂ ತತ್ವಾರವಿತ್ತು. ಆದರೆ ಒಪ್ಪೊತ್ತಿನ ಅನ್ನ ಉಂಡರೂ ಅದು ಸತ್ವಯುತವಾಗಿರುತ್ತಿತ್ತು. ಅವರೆಲ್ಲರೂ ಯಾವುದೇ ರೀತಿಯ ಅನಾರೋಗ್ಯವಿಲ್ಲದೆಯೇ, ಆರೋಗ್ಯದಿಂದ ತೊನೆಯುತ್ತಾ ನೂರಾರು ವರ್ಷಗಳ ಕಾಲ ಆರಾಮಾಗಿ ಬದುಕುತ್ತಿದ್ದರು. ಆದರೆ ಈ ತಲೆಮಾರಿನ ನಮಗೆ ಅದೂಕೂಡಾ ಯಾವುದೋ ಸಿನಿಮಾ ಕಥೆಯಂತೆ ಕಾಣಿಸುತ್ತಿರೋದು ದುರಂತ!
ಈವತ್ತಿಗೆ ಎಲ್ಲವೂ ಸಲೀಸಾಗಿದೆ. ತಿನ್ನೋದಕ್ಕಿಂತ ಹಾಳು ಮಾಡೋದೇ ಹೆಚ್ಚೆಂಬಷ್ಟು ಆಹಾರ ಗುಡ್ಡೆ ಬಿದ್ದಿದೆ. ಈವತ್ತಿಗೆ ಹೊಟ್ಟೆ ಬಟ್ಟೆಗೆ ಯಾವುದೇ ರೀತಿಯ ಸಮಸ್ಯೆಗಳು ಇಲ್ಲದೇ ಹೋದರೂ ಕೂಡಾ ಮೂವತ್ತು ವರ್ಷ ತುಂಬುವ ಮೊದಲೇ ಅಧಿಕ ರಕ್ತದೊತ್ತಡ, ಮಧುಮೇಹ ಮುಂತಾದ ಕಾಯಿಲೆಗಳು ಅಮರಿಕೊಳ್ಳುತ್ತಿವೆ. ನಲವತ್ತು ವರ್ಷದೊಳಗೇ ವರ್ಷಕ್ಕೆಲ್ಲಾ ಹೃದಯಾಘಾ, ಕಿಡ್ನಿ ವೈಫಲ್ಯಗಳಿಂದ ಬೇಗನೆ ಸಾವು ಸಂಭವಿಸುವ ದುರಂತಗಳು ನಡೆಯುತ್ತಿದ್ದಾವೆ. ಹಾಗಾದರೆಡ, ಇದ್ಕ್ಕೆಲ್ಲ ಕಾರಣವೇನು ಅಂತ ಹುಡುಕ ಹೋದರೆ ನಮ್ಮ ಜೀವನ ಕ್ರಮ ಮತ್ತು ನಮ್ಮ ಆಹಾರ ಪದ್ಧತಿಯೇ ಅದೆಲ್ಲದಕ್ಕೂ ಕಾರಣ ಎಂಬ ಸತ್ಯವೊಂದು ಜಾಹೀರಾಗುತ್ತದೆ. ಜಗತ್ತು ಏನೇ ಮುಂದುವರೆದರೂ ಯಾವುದಕ್ಕೇ ಕೊರತೆ ಇಲ್ಲದೇ ಹೋದರೂ ಕೂಡಾ ಆಹಾದಲ್ಲಿ ಗುಣ ಮಟ್ಟ ಕಾಯ್ದುಕೊಳ್ಳುವಲ್ಲಿ ನಾವೆಲ್ಲ ಎಡವುತ್ತಿದ್ದೇವೆ. ರಾಸಾಯನಿಕ, ವಿಷವಿಲ್ಲದ ಆಹಾರ ಉತ್ಪಾದಿಸುವಲ್ಲಿ ಆಧುನಿಕ ಜಗತ್ತು ಹೀನಾಯವಾಗಿಯೇ ಸೋಲು ಕಂಡಿದೆ!
ಹಾಗೊಂದಿತ್ತು ಕಾಲ!
ಕೃಷಿಯೇ ನಮ್ಮ ದೇಶದ ಪ್ರಧಾನ ಕಸುಬು. ಮನುಕುಲ ಹುಟ್ಟಿಕೊಂಡ ಬಳಿಕ ಆರಂಭವಾದ ಕೃಷಿ ಒಂದಷ್ಟು ರೂಪಾಂತರಗಳ ಮೂಲಕ ಗುಣ ಮಟ್ಟ ಕಾಯ್ದುಕೊಂಡು ಬಂದಿತ್ತು. ಲಕ್ಷಾಂತರ ಹಳ್ಳಿಗಳ ಕೋಟಿ ಕೋಟಿ ರೈತರು ಒಟ್ಟಾರೆ ಆರ್ಥಿಕತೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತಾ ಬಂದಿದ್ದರು. ಅವರ ಬಳಿ ಇದ್ದಷ್ಟು ಜಮೀನುಗಳಲ್ಲಿಯೇ ಮಳೆಯಾಧಾರಿತವಾಗಿ ಬೆಳೆಗಳನ್ನು ಬೆಳೆಯುವ ಮೂಲಕಲ ತಿಂದು ಮಾರುವಷ್ಟನ್ನು ಉತ್ಪಾದಿಸುತ್ತಿದ್ದರು. ಆಗೆಲ್ಲ ರಾಸಾಯನಿಕಗಳ ಪರಿಚಯವೇ ಇರಲಿಲ್ಲ. ಮನೆಯ ದನಕರುಗಳು, ಆಡು ಕುರಿಗಳ ತಿಪ್ಪೆ ಗೊಬ್ಬರವನ್ನೇ ಬಳಸುತ್ತಾ ವರ್ಷಕ್ಕೊಂದೆರಡು ಬೆಳೆದು ತಮ್ಮ ಮನೆಗೆ ಬೇಕಾದಷ್ಟನ್ನು ಬಳಸಿಕೊಂಡು ಉಳಿದದ್ದನ್ನು ಆಸುಪಾಸಿನವರಿಗೆ ಹಂಚಿ, ಆ ಮೇಲೆರ ಉಳಿದಿದ್ದನ್ನು ಮಾರಿ ಸುಖ ಸಂತೃಪ್ತಿಯಿಂದ ಬದುಕೋ ಕ್ರಮವಿತ್ತು.
ಹೆಚ್ಚೇನೂ ಅಲ್ಲ; ತೊಂಬತ್ತರ ದಶಕದ ವರೆಗೂ ಕೂಡಾ ದನಕರುಗಳನ್ನು ಹೊಂದಿರುವವರೇ ಭಾರೀ ಶ್ರೀಮಂತರು ಎಂಬಂಥಾ ವಾತಾವರಣವಿತ್ತು. ಕೂಡು ಕುಟುಂಬಗಳಲ್ಲಿ ಮನೆ ತುಂಬಾ ಜನ ಇರುತ್ತಿದ್ದರು. ಮನೆಯ ಹಟ್ಟಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ದನಕರುಗಳು ಇರುತ್ತಿದ್ದರು. ಹೀಗೆ ಯಾರ ಮನೆಯ ಕೊಟ್ಟಿಗೆ ದೊಡ್ಡದಿರುತ್ತೋ ಅವರೇ ಶ್ರೀಮಂತರು ಎಂಬಂಥಾ ವಾತಾವಣವಿತ್ತು. ಈ ರೀತಿಯಲ್ಲಿ ದನಕರು ಹೆಚ್ಚಾಗಿರುವವರ ಮನೆಯವರಿಗೆ ಸಹಜವಾಗಿಯೇ ಹೊಲ ಗದ್ದೆಯೂ ತುಸು ಹೆಚ್ಚಾಗಿಯೇ ಇರುತ್ತಿತ್ತು. ತೀರಾ ಮದುವೆಯಂಥಾ ಮಹತ್ವದ ಘಟ್ಟದಲ್ಲಿಯೂ ಕೂಡಾ ಇಂಥಾ ಆಸ್ತಿ ಪಾಸ್ತಿಗೂ ಮಿಗಿಲಾಗಿ ಹಟ್ಟಿಯಲ್ಲಿರುವ ದನ ಕರುಗಳ ಸಂಖ್ಯೆಯೇ ಪ್ರಧಾನವಾಗಿರುವ ಕಾಲವೊಂದಿತ್ತು.
ಆ ಕಾಲದಲ್ಲಿ ಅಡುಗೆಗೆ ಅಗತ್ಯವಿದ್ದ ಮಸಾಲೆಗಳನ್ನು ಕೈಯ್ಯಾರೆ ಕುಟ್ಟಿ, ಬೀಸಿ, ರುಬ್ಬಿ ಶುಚಿ ರುಚಿಯಾದ ಅಡುಗೆ ಮಾಡಲಾಗುತ್ತಿತ್ತು. ಹೀಗೆ ಅಡುಗೆಯ ಸಮಯಲ್ಲಿ ಅಕ್ಕಿ, ತರಕಾರಿ ತೊಳೆದ ನೀರನ್ನು ಸುಮ್ಮನೆ ಹೊರಗೆ ಚೆಲ್ಲದೇ ಹಸುಗಳಿಗೆ ಕುಡಿಯಲು ಕೊಡುವ ಪರಿಪಾಠವಿತ್ತು. ಮನೆಯ ಹಿತ್ತಲಲ್ಲಿ ಪಾತ್ರೆ ತೊಳೆದ ನೀರು ಮತ್ತು ಕೈ ತೊಳೆದ ನೀರೂ ಕೂಡಾ ಅದು ಹಿತ್ತಲಿನ ಕೈತೋಟದ ತರಕಾರಿ, ಹೂಗಿಡಗಳು, ಬಾಳೆ ಗಿಡ, ಕರಿಬೇವಿನ ಸೊಪ್ಪಿನ ಮರಕ್ಕೆ ಆಹಾರವಾಗುತ್ತಿತ್ತು. ಈ ರೀತಿಯಲ್ಲಿ ಶುದ್ದ ನೀರಿನಲ್ಲಿ ಸಹಜವಾದ ಗೊಬ್ಬರದಲ್ಲಿ ಬೆಳೆದ ಹಣ್ಣು ಮತ್ತು ತರಕಾರಿಗಳು ಸತ್ವ ಭರಿತವಾಗಿರುತ್ತಿದ್ದವು. ಸಾವಯವವಾಗಿ ಬೆಳೆಯುತ್ತಿದ್ದ ಆಹಾರ ಹಾಗೂ ಪರಿಶುದ್ಧವಾದ ನೀರು ಕುಡಿಯುತ್ತಿದ್ದ ನಮ್ಮ ಪೂರ್ವಜರು ಎಂಭತ್ತು ದಾಟಿದರೂ ಕೆಲಸ ಕಾರ್ಯ ಮಾಡುತ್ತಾ ಆರಾಮಾಗಿರುತ್ತಿದ್ದರು.
ಬದಲಾಯ್ತು ಕಾಲ!
ಇಂಥಾದ್ದೊಂದು ಚೆಂದದ ಕಾಲದ ನೆತ್ತಿ ಮೇಲೆ ಆಧುನೀಕರಣದ ಎಳೇ ಕಿರಣ ಬಿದ್ದಾಗ ಜಗತ್ತೆಲ್ಲ ಥ್ರಿಲ್ ಆಗಿತ್ತು. ಇದು ಮನುಕುಲಕ್ಕೆ ಹೊಸಾ ದಿಕ್ಕು ತೋರುತ್ತದೆಂಬ ನಂಬಿಕೆ ಬಂದಿತ್ತು. ಆದರೆ ಕಾಲ ಬದಲಾದಂತೆಲ್ಲಾ ಮನುಷ್ಯನ ಆಸೆಗಳೆಲ್ಲವೂ ಬದಲಾಗುತ್ತಾ, ಅದು ಅತಿಯಾಸೆಯಾಗಿ ಮಾರ್ಪಾಟಾಗುತ್ತಾ ಸಾಗಿತ್ತು. ಕಡಿಮೆ ಭೂಮಿಯಲ್ಲಿ ಹೆಚ್ಚು ಹೆಚ್ಚು ಆಹಾರವನ್ನು ಬೆಳೆಯುವ ಖಯಾಲಿ ಚಿಗುರಿಕೊಂಡಿತ್ತು. ಕೃತಕವಾದ ರಾಸಾಯನಿಕ ಗೊಬ್ಬರಗಳನ್ನು ಚಿನ್ನದಂಥಾ ಮಣ್ಣಿಗೆ ಸುರಿಯುವ ಪರಿಪಾಠ ಶುರುವಾಗಲಾರಂಭಿಸಿತ್ತು. ಈ ರೀತಿ ಹೆಚ್ಚೆಚ್ಚು ಬೆಳೆಯುವ ಭರದಲ್ಲಿ ಕೀಟಗಳ ಬಾಧೆ ತಾಗದಿರಲಿ ಅಂತ ಕೃತಕವಾದ ರಾಸಾಯನಿಕ ಕೀಟನಾಶಕಗಳನ್ನು ಬಳಸಲು ಆರಂಭಿಸಿದ ನಂತರ ಇಳುವರಿ ಹೆಚ್ಚಾಗಿ, ಗುಣಮಟ್ಟ ಇಳಿಮುಖ ಕಂಡಿತ್ತು.
ಹೀಗೆ ಯಥೇಚ್ಛವಾಗಿ ವಿಷ ಸುರಿದು ಬೆಳೆದ ತರಕಾರಿ ಬೆಳೆಗಳು ಅಕಾಲದಲ್ಲಿ ಮಾಗವಬೇಕೆಂಬ ಆಸೆ ಶುರುವಾಗಿತ್ತು. ಇದಕ್ಕಾಗಿ ಪುರಾತನ ಪದ್ಧತಿಯನ್ನು ಬದಿಗೊತ್ತಿ ರಾಸಾಯನಿಕ ಸಿಂಪಡಿಸಿ ಹಣ್ಣು ಮಾಗುವಂತೆ ಮಾಡಲಾರಂಭಿಸಿದರು. ಹಣ್ಣಿನ ಒಳಗಡೆ ಬಣ್ಣ ಬರಲೆಂದು ಮತ್ತದೇ ರಾಸಾಯಿನಿಕವನ್ನು ಚುಚ್ಚಲಾರಂಭಿಸಿದರು. ಈ ರೀತಿಯಲ್ಲಿ ರಾಸಾಯನಿಕ ವಸ್ತುಗಳನ್ನು ಎಗ್ಗಿಲ್ಲದೇ ಬಳಸುತ್ತಿರುವುದರಿಂದ ಅದೇ ಹಣ್ಣು ಮತ್ತು ತರಕಾರಿಗಳನ್ನು ಆಹಾರದ ಮೂಲಕ ಪರೋಕ್ಷವಾಗಿ ವಿಷ ಮನುಷ್ಯನ ದೇಹ ಸೇರುತ್ತಿದೆ. ಇದು ಅನೇಕಾನೇಕ ಕಾಯಿಲೆ ಕಸಾಲೆಗಳಿಗೂ ಕಾರಣವಾಗುತ್ತಿದೆ. ಇದುವೇ ಅಕಾಲಿಒಕ ಮರಣ ಪ್ರಮಾಣವನ್ನೂ ದಿನೇ ದಿನೆ ಹೆಚ್ಚು ಮಾಡುತ್ತಿದೆ.
ಈ ನಡುವೆ ಸಾವಯವ ಕೃಷಿ ವ್ಯಾಪಕವಾಗಿಸಿ ಸಿರಿದಾನ್ಯಗಳನ್ನು ಬೆಳೆಯಲು ಸರ್ಕಾರಗಳು ಪ್ರೋತ್ಸಾಹಿತ್ತಿದ್ದಾವೆ. ಆದರೂ ಕೂಡಾ ಕೆಲ ಮಂದಿಗೆ ಅಧಿಕ ಇಳುವರಿಯ ಆಸೆ ಇಂಗಿಲ್ಲ. ಬೀಜ ಮೊಳಕೆ ಒಡೆದು ಸಣ್ಣ ಸಸಿಯಾಗೋ ಘಳಿಗೆಯಿಂದಲೇ ರಾಸಾಯನಿಕ ಔಷಧಿಗಳನ್ನು ಸಿಂಪಡಿಸುವ ಮೂಲಕ ನೇರವಾಗಿ ಭೂಮಿಯ ಫಲವತ್ತೆಯನ್ನು ಕಡಿಮೆ ಮಾಡಲಾಗುತ್ತಿದೆ. ಹೀಗೆ ರಾಸಾಯನಿಕ ಸುರಿದ ಭೂಮಿ ಕೆಲವೇ ವರ್ಷಗಳಲ್ಲಿ ಆ ಒಂದು ಹುಲ್ಲು ಕಡ್ಡಿಯೂ ಬೆಳೆಯದಂಥಾ ಸ್ಥಿತಿ ತಲುಪಿಕೊಳ್ಳುತ್ತದೆ.
ರಾಸಾಯನಿಕ ಭರಾಟೆ
ಈಗಂತೂ ತಿನ್ನುವ ತರಕಾರಿಯಿಂದ ಹಿಡಿದು ಹಣ್ಣು ಹಂಪಲುಗಳವರೆಗೆ ಎಲ್ಲವೂ ರಾಸಾಯನಿಕಮನ. ಕೇವಲ ಗೊಬ್ಬರವಾಗಿದ್ದರೆ ಹೇಗೋ ತಡೆದುಕೊಳ್ಳಬಹುದೇನೋ. ಆದರೆ, ಕ್ರಿಮಿ ನಾಶಕಗಳ ಹೆಸರಲ್ಲಿ ನಾವು ತಿನ್ನೋ ಆಹಾರಕ್ಕೆ ವಿಷ ಯಥೇಚ್ಛವಾಗಿಯೇ ಸೇರಿಕೊಂಡಿರುತ್ತದೆ. ದ್ರಾಕ್ಷಿ ಬಳ್ಳಿಗಳು ಚಿಗುರೊಡೆಯಲು ಆರಂಭಿಸಿದ ಘಳಿಗೆಯಿಂದ ಶುರುವಾದರೆ, ಹಣ್ಣಾಗುವವರೆಗೂ ರಾಸಾಯನಿಕ ಗೊಬ್ಬರ, ಕೀಟ ನಾಶಕ ಬಳಕೆ ಹೇರಳವಾಗಿರುತ್ತೆ. ಇಂಥಾ ವಿಷ ಬಳಕೆಯಿಂದ ವಾತಾವರಣದಲ್ಲಿನ ಗಾಳಿಯೂ ಕಲುಷಿತಗೊಂಡು ಕ್ರಮೇಣ ಯಾವ ಬೆಳೆ ಬೆಳೆದರೂ ಲುಕ್ಸಾನು ಅನುಭವಿಸುವಂತಾಗುತ್ತದೆ. ಅಚ್ಚರಿಯ ಮತ್ತೊಂದು ವಿಚಾರವಿದೆ. ದ್ರಾಕ್ಷಿ ಬೆಳೆಗೆ ಬಳಸುವುದಕ್ಕಿಂತಲೂ ಹೆಚ್ಚಿನ ರಾಸಾಯನಿಕವನ್ನು ನಾಲ್ಕು ತಿಂಗಳ ಬೆಳೆಯಾದ ಮೆಣಸಿನಕಾಯಿಗೆ ಬಳಸಲಾಗುತ್ತದೆ.
ಹಾಗೆ ನೋಡಿದರೆ ಮೆಣಸಿನ ಕಾಯಿಯಂಥವುಗಳನ್ನು ಮಣ್ಣಿಗಿಂತಲೂ ಹೆಚ್ಚಾಗಿ ರಾಸಾಯನಿಕ ಹಾಗೂ ಕ್ರಿಮಿ ನಾಶಕಗಳನ್ನು ಬಳಸಲಾಗುತ್ತಿದೆ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಹೀಗೆ ದಿನಕ್ಕೆ ಎರಡು ಬಾರಿಯಂತೆ ಸರಿಸುಮಾರು ನೂರಾ ಇಪ್ಪತ್ತು ದಿನಗಳ ಕಾಲ ರಾಸಾಯನಿಕ ವಸ್ತುಗಳನ್ನು ಸಿಂಪರಣೆ ಮಾಡಲಾಗುತ್ತದೆ. ಇದರಿಂದಾಗಿ ಆಯಾ ತರಕಾರಿಗಳ ಕಥೆ ಹಾಗಿರಲಿ; ವಾತಾವರಣದಲ್ಲಿನ ಗಾಳಿ ಕೂಡಾ ಸಂಪೂರ್ಣವಾಗಿ ವಿಷವಾಗುತ್ತದೆ. ಇದರ ಪರಿಣಾಮ ಎಂಥಾದ್ದಿರುತ್ತದೆ ಎಂದರೆ, ಅಕ್ಕ ಪಕ್ಕದ ಕೆರೆ ಬಾವಿಗಳ ನೀರು ಸಹಾ ಕಲುಷಿತವಾಗಿ ಬಿಡುತ್ತದೆ.
ನಿಮಗೆ ಅಚ್ಚರಿಯಾಗಬಹುದೇನೋ… ನಮ್ಮಲ್ಲಿ ಮೆಣಸು ಮುಂತಾದವುಗಳನ್ನು ಬೆಳೆಯುವಾಗ ಬಳಸಿದ ರಾಸಾಯನಿಕ ಖಾಲಿ ಡಬ್ಬಿಗಳು ಮತ್ತು ಪ್ಲಾಸ್ಟಿಕ್ ಬಾಟಲಿಗಳನ್ನು ಗುಜರಿ ಅಂಗಡಿಗೆ ಮಾರಿದರೆ ಸಾವಿರಾರು ರೂಪಾಯಿ ಹುಟ್ಟುತ್ತದೆಂದರೆ ಅದರ ಪ್ರಮಾಣ ಎಷ್ಟಿರಬಹುದೆಂದು ಯಾರಿಗಾದರೂ ಅರ್ಥವಾಗುತ್ತದೆ. ಇದು ಕೇವಲ ಹೊಲಕ್ಕೆ ಮಾತ್ರವೇ ಸೀಮಿತವಾದ ಪಲ್ಲಟವಲ್ಲ. ಆರೋಗ್ಯಕರವಾದ ಹಾಲು ಕೊಡುವ ದೇಸೀ ನಾಟಿ ಹಸುಗನ್ನು ಕಡಿಮೆ ಪ್ರಮಾಣದಲ್ಲಿ ಹಾಲು ಕೊಡುತ್ತವೆಂಬ ಕಾರಣದಿಂದ ಬದಿಗೆ ಸರಿಸಲಾಗಿದೆ. ಹೆಚ್ಚು ಹಾಲಿನ ಹುಚ್ಚಿಗೆ ಬಿದ್ದು ಜರ್ಸಿ ಹಸುಗಳನ್ನು ಸಾಕಲಾಗುತ್ತಿದೆ. ಅಂಥಾದ್ದೇ ಹುಚ್ಚಿನಿಂದಾಗಿ ಪುಟ್ಟ ಕೋಳಿಗಳಿಗೆ ಇಂಜೆಕ್ಷನ್ ಕೊಟ್ಟು ನಾನಾ ಥರದ ವಿಷಗಳನ್ನು ಚುಚ್ಚುವ ಮೂಲಕ ನಲವತೈದು ದಿನಗಳೊಳಗಾಗಿ ನಾಲಕೈದು ಕೇಜಿ ತೂಗುವ ಮಟ್ಟಕ್ಕೆ ಬೆಳೆಸಲಾಗುತ್ತೆ. ಇಂಥಾ ವಿಷದ ಮಾಂಸದಿಂದ ಮಾಡುವ ಆಹಾರ ಪದಾರ್ಥಗಳಿಗೂ ಕೆಟ್ಟ ವಿಷದ ಬಣ್ಣ ಬಳಿಯಲಾಗುತ್ತೆ. ಆ ವಿಷಕ್ಕೆ ಹೆಚ್ಚಿನ ರುಚಿ ನೀಡಲು ಅಜಿನೋಮೋಟೋ ಎಂಬ ಕರುಳು ತೂತು ಬೀಳಿಸುವ ಕಾರ್ಕೋಟಕವನ್ನು ಸೇರಿಸಲಾಗುತ್ತೆ. ಹೀಗಿರುವಾಗ ನಮ್ಮೆಲ್ಲರ ಅನ್ನದ ಬಟ್ಟಲು ವಿಷವಾಗದಿರಲು ಸಾಧ್ಯವೇ?
ಎಣ್ಣೆಯಲ್ಲೂ ವಿಷವುಂಟು
ಇನ್ನು ನಾವು ಬಳಸುವ ಅಡುಗೆ ಎಣ್ಣೆಗಳ ವಿಚಾರಕ್ಕೆ ಬಂದರೆ ಮತ್ತೊಂದು ಭಯಾನಕ ವಿಚಾರ ತೆರೆದುಕೊಳ್ಳುತ್ತೆ. ಅದುವೇ ಸಣ್ಣ ವಯಸ್ಸಿನಲ್ಲಿ ಜೀವ ಬಲಿ ಪಡೆಯುತ್ತಿರುವ ಹೃದಯಾಘಾತಕ್ಕೂ ಕಾರಣವಾಗುತ್ತಿರೋದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಹಿಂದಿನ ಕಾಲದಲ್ಲಿ ಎತ್ತಿನ ಗಾಣಗಳಿಗೆ ಕಡಲೇಕಾಯಿ, ಒಣಕೊಬ್ಬರಿ, ಎಳ್ಳು, ಸೂರ್ಯಕಾಂತಿ, ಸಾಸಿವೆ ಮುಂತಾದ ಎಣ್ಣೆ ಬೀಜಗಳನ್ನು ಖುದ್ದಾಗಿ ತೆಗೆದುಕೊಂಡು ಹೋಗಿ ಎಣ್ಣೆ ತೆಗೆಸಿಕೊಂಡು ಅದರಿಂದ ಬಂದ ಬೂಸಾವನ್ನು ಮನೆಯ ಹಸುಗಳು ಮೇವಾಗಿ ಬಳಸಲಾಗುತ್ತಿತ್ತು. ಆದರೀಗ ಕಚ್ಚಾ ತೈಲದಿಂದ ಡೀಸೆಲ್ ಮತ್ತು ಪೆಟ್ರೋಲ್ ಹೊರ ತೆಗೆದ ನಂತರ ಬಳಿದುಕೊಳ್ಳುವ ಲಿಕ್ವಿಡ್ ಪ್ಯಾರಾಫೈನ್ ಎಂಬ ವಿಷಕಾರಿ ತ್ಯಾಜ್ಯದ ಜಿಡ್ಡನ್ನು ಆಕರ್ಷಕವಾಗಿಸಿ ಮಾರಲಾಗುತ್ತಿದೆ.
ಇಂಥಾ ವಿಷವನ್ನು ಎಣ್ಣೆಯ ರೂಪದಲ್ಲಿ ಬಳಸುತ್ತಿರೋದರಿಂದಲೇ ಎಂಟತ್ತು ವರ್ಷಗಳ ಹೆಣ್ಣುಮಕ್ಕಳು ಋತುಮತಿಯರಾಗುತ್ತಿದ್ದಾರೆ. ಅದು ಒಂದು ಹೆಣ್ಣುಮಗುವಿನ ಮೇಲೆ ದೀರ್ಘಕಾಲದವರೆಗೂ ಪರಿಣಾಮ ಬೀರುತ್ತದೆ. ಕ್ರಮೇಣ ಸಮಯಕ್ಕೆ ಸರಿಯಾಗಿ ಋತುಚಕ್ರವಾಗದೇ ಪಡಿಪಾಟಲು ಪಡಬೇಕಾಗುತ್ತದೆ. ಮದುವೆಯಾದ ನಂತರವೂ ಮಕ್ಕಳಾಗೋ ವಿಚಾರದಲ್ಲಿಯೂ ನಾನಾ ಕಷ್ಟ ಅನುಭವಿಸಬೇಕಾಗುತ್ತದೆ. ಗರ್ಭಧರಿಸಿದರೂ ಕೂಡಾ ಸರಿಯಾಗಿ ಬೆಳವಣಿಗೆ ಹೊಂದದ ಕೂಸುಗಳಿಗೆ ಜನ್ಮ ನೀಡುವ ಸಾಧ್ಯತೆಯೇ ಹೆಚ್ಚು. ಹಾಗಂತ ಹೆಣ್ಣು ಮಕ್ಕಳ ಮೇಲಷ್ಟೇ ಇದರ ಪರಿಣಾಮ ಅಂದುಕೊಳ್ಳಬೇಕಿಲ್ಲ. ಗಂಡು ಮಕ್ಕಳೂ ಕೂಡಾ ನಾನಾ ಆರೋಗ್ಯ ಬಾಧೆಗಳಿಂದ ತೊಂದರೆಗೀಡಾಗಬೇಕಾಗುತ್ತದೆ.
ಇನ್ನುಳಿದಂತೆ ಒಂದಷ್ಟು ದಿನ ಬಳಕೆಯ ವಸ್ತುಗಳನ್ನು ಮನೆಯಲ್ಲಿಯೇ ತಯಾರಿಸಲಾಗುತ್ತಿತ್ತು. ಅರಿಶಿನ ಪುಡಿ ಶ್ರೀಗಂದ, ಕೊಬ್ಬರಿ ಎಣ್ಣೆ ಮುಂತಾದವುಗಳನ್ನು ಹಚ್ಚುವ ಮೂಲಕ ಗಾಯಕ್ಕೆ ಮದ್ದು ಮಾಡಲಾಗುತ್ತಿತ್ತು. ಶೀತ, ನೆಗೆಡಿ ಕೆಮ್ಮುಗಳಾದರೆ ಅದಕ್ಕೂ ಮನೆಯಲ್ಲಿಯೇ ಪರಿಹಾರವಿರುತ್ತಿತ್ತು. ಆದರೀಗ ಅಂಥಾದ್ದಕ್ಕೆಲ್ಲ ಜಗ್ಗ್ದಂತೆ ಕಾಯಿಲೆಗಳು ಬರುತ್ತಿವೆ. ಆಸ್ಪತ್ರೆಯೊಂದೇ ಪರಿಹಾರವಾಗಿ ಬಿಟ್ಟಿದೆ. ಯಾಕೆಂದರೆ ವಿಷದ ಆಹಾರ ತಿಂದೂ ತಿಂದು ನಮ್ಮ ದೇಹವೂ ಅದರ ಕೊಂಪೆಯಾಗಿದೆ. ಎಲ್ಲವನ್ನೂ ಕಡಿಮೆ ಬೆಲೆಗೆ ದಕ್ಕಿಸಿಕೊಳ್ಳುವ ದುರಾಸೆ ಬಿಟ್ಟು ಬೆಲೆ ಹೆಚ್ಚಾದರೂ ನೈಸರ್ಗಿಕವಾಗಿ, ವಿಷ ಸೋಕಿಸದೆ ಬೆಳೆಸಿದ, ತಯಾರಿಸಿದ ಆಹಾರ ತಿನ್ನೋದೊಂದೇ ನಮಗೆಲ್ಲ ಬದುಕುಳಿಯಲು ಉಳಿದುಕೊಂಡಿರುವ ಏಕೈಕ ದಾರಿ. ಮೊದಲು ನಮ್ಮ ಅನ್ನದ ಬಟ್ಟಲನ್ನು ವಿಷದಿಂದ ಮುಕ್ತವಾಗಿಸಿಕೊಂಡರೆ, ಅದುವೇ ನಮ್ಮ ಜೀವ ಕಾಪಾಡಬಲ್ಲದು.