ಕೆಜಿಎಫ್ ಸಿನಿಮಾ ಮೂಲಕ ಭಾರತೀಯ ಚಿತ್ರರಂಗದಲ್ಲಿ ಮಿಂಚಿನ ಸಂಚಲನ ಸೃಷ್ಟಿಸಿದ ನಿರ್ದೇಶಕ ಪ್ರಶಾಂತ್ ನೀಲ್ ಈಗ `ಸಲಾರ್’ ಮೂಲಕ ವಿಶ್ವ ಸಿನಿದುನಿಯಾವನ್ನ ಥಂಡಾ ಹೊಡೆಸಲಿಕ್ಕೆ ಹೊರಟಿರೋದು ನಿಮಗೆಲ್ಲ ಗೊತ್ತೆಯಿದೆ. ಹೈವೋಲ್ಟೇಜ್ ಆ್ಯಕ್ಷನ್ ಥ್ರಿಲ್ಲರ್ `ಸಲಾರ್’ಗೆ ಕೌಂಟ್ಡೌನ್ ಶುರುವಾಗಿದ್ದು, ಸಿನಿಮಾ ಪ್ರಚಾರದಲ್ಲಿ ನೀಲ್ ಸಾಹೇಬ್ರು ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ಇಂಗ್ಲೀಷ್ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡುವಾಗ `ಕೆಜಿಎಫ್- ಪಾರ್ಟ್3′ ಕುರಿತಾಗಿರುವ ಪ್ರಶ್ನೆ ಎದುರಾಗಿದೆ. ಈ ವೇಳೆ ನೀಲ್ ಸಾಹೇಬ್ರು ಶಾಕಿಂಗ್ ಉತ್ತರ ಕೊಟ್ಟಿದ್ದಾರೆ. ಕೆಜಿಎಫ್-3 ಬರೋದೇನೋ ಸತ್ಯ, ಸ್ಕ್ರಿಪ್ಟ್ ಕೂಡ ರೆಡಿಯಿದೆ. ರಾಕಿಭಾಯ್ ಇದ್ದೇ ಇರ್ತಾರೆ. ಆದರೆ ಡೈರೆಕ್ಷನ್ ನಾನ್ ಮಾಡ್ತೀನೋ ಇಲ್ಲವೋ ಡೌಟಿದೆ ಎಂದಿದ್ದಾರೆ.
ಅರ್ರೇ, ನೀಲ್ ಸಾಹೇಬ್ರೆ ಹೀಗಂದ್ರೆ ನರಾಚಿ ಲೋಕಾನ ಕಣ್ಮುಂದೆ ತಂದುಕೊಳ್ಳೋದಾದ್ರೂ ಹೇಗೆ? ಅವರಿಲ್ಲದ ಕೆಜಿಎಫ್ ಲೋಕವನ್ನ ಕಲ್ಪನೆ ಮಾಡಿಕೊಳ್ಳೋದಕ್ಕೆ ಸಾಧ್ಯವಿದೆಯಾ? ಇಡೀ ಜಗತ್ತಿಗೆ ಜಗತ್ತೇ ದಢಕ್ಕನೆ ಎದ್ದು ಕೂರುವಂತೆ ಮಾಡಿದವರು. ವಿಶ್ವ ಸಿನಿದುನಿಯಾವೇ ಕಣ್ಣನ್ನ ಊರಗಲ ಮಾಡ್ಕೊಂಡು ಕೆಜಿಎಫ್ನತ್ತ, ಕನ್ನಡ ಚಿತ್ರರಂಗದತ್ತ ನೋಡಿದ್ದು ನೀಲ್ ಸಾಹೇಬ್ರಿಂದ. ಅವರು ಕೆತ್ತಿದ ಕಥೆ, ಕಗ್ಗತ್ತಲ ಲೋಕದಲ್ಲಿ ಮೇಕಿಂಗ್ ಮಾಡಿ ತೋರಿಸಿದ ರೀತಿಗೆ ಹಾಲಿವುಡ್ ಲೋಕ ಕೂಡ ಅರೆಕ್ಷಣ ದಂಗಾಗಿ ಹೋಯ್ತು. ಆಲ್ ಓವರ್ ಇಂಡಿಯಾದ ಗಲ್ಲಾಪೆಟ್ಟಿಗೆ ಗಹಗಹಿಸಿ ರಾಕಿಗೆ ಬಾಕ್ಸ್ ಆಫೀಸ್ ಸಿಇಓ ಪಟ್ಟಕಟ್ಟಿತ್ತು. ಹೊಂಬಾಳೆ ಸಂಸ್ಥೆಗೆ ಸಾವಿರಾರು ಕೋಟಿ ರೂಪಾಯಿ ದುಡ್ಡು ಬಂದು ಸೇರಿತ್ತು. ಇಷ್ಟೆಲ್ಲಾ ಸಾಧ್ಯವಾಗಿದ್ದು ಕೆಜಿಎಫ್ ಸಾರಥಿಯಿಂದ ಆದ್ರೀಗ ಆ ಸಾರಥಿಯೇ `ಕೆಜಿಎಫ್-3′ ಡೈರೆಕ್ಟ್ ಮಾಡೋದು ಡೌಟ್ ಅಂತಿದ್ದಾರೆ.
ಅದ್ಯಾಕ್ ಡೌಟ್? ಏನಾಯ್ತು ಕೆಜಿಎಫ್ ಅಖಾಡದಲ್ಲಿ? ಈ ಕುತೂಹಲಕ್ಕೆ ಉತ್ತರವಿಲ್ಲ. ಆದರೆ, ಕೆಜಿಎಫ್ ಕ್ಯಾಪ್ಟನ್ `ಸಲಾರ್’ ನಂತರ ಯಂಗ್ ಟೈಗರ್ ಸಿನಿಮಾ ಒಪ್ಪಿಕೊಂಡಿದ್ದಾರೆ. `ಎನ್ಟಿಆರ್-31′ ಸಿನಿಮಾದ ಜವಾಬ್ದಾರಿ ನೀಲ್ ಸಾಹೇಬ್ರ ಮೇಲಿದೆ. ಸಲಾರ್ ಮುಗಿಸಿ ಮೂರ್ನಾಲ್ಕು ತಿಂಗಳಲ್ಲಿ ತಾರಕ್ ಸಿನಿಮಾಗೆ ಸ್ಕ್ರಿಪ್ಟ್ ರೆಡಿಮಾಡಿಕೊಂಡು `2024′ ಸೆಕೆಂಡ್ ಹಾಫ್ನಲ್ಲಿ ಯಂಗ್ ಟೈಗರ್ ಜೊತೆಗೆ ಕಣಕ್ಕಿಳಿಬೇಕಿದೆ. ಅನಂತರ ಮೆಗಾ ಪ್ರಿನ್ಸ್ ರಾಮ್ಚರಣ್ ತೇಜಾಗೆ ಸಿನಿಮಾ ಡೈರೆಕ್ಟ್ ಮಾಡಬೇಕಿದೆ. ಅದಾದ ನಂತರವಷ್ಟೇ ನೀಲ್ ಸಾಹೇಬ್ರು ಫ್ರೀ ಆಗೋದು. ಅಲ್ಲಿವರೆಗೂ ಕಾಯಬೇಕು ಅಂದರೆ ಎರಡ್ಮೂರು ವರ್ಷಗಳ ಕಾಲ ಕೆಜಿಎಫ್-3 ಶುರು ಮಾಡಲಿಕ್ಕೆ ಸಾಧ್ಯವಾಗೋದಿಲ್ಲ. ಅಷ್ಟು ಗ್ಯಾಪ್ ಆದ್ಮೇಲೆ ಕೆಜಿಎಫ್-3ಗೆ ಕಿಕ್ಸ್ಟಾರ್ಟ್ ಕೊಟ್ರೆ ಕೆಜಿಎಫ್ ಕ್ರೇಜ್ ಎಂದಿನಂತೆ ಇರುತ್ತೋ ಇಲ್ಲವೋ ಗೊತ್ತಿಲ್ಲ. ಬಹುಷಃ ಹೀಗಾಗಿಯೇ ಹೊಂಬಾಳೆ ಮಾಲೀಕರು ನೀಲ್ ಸಾಹೇಬ್ರು ಕೆತ್ತಿದ ಕಥೆ ಇಡ್ಕೊಂಡು ಡೈರೆಕ್ಷನ್ ಬೇರೆಯವರ ಹತ್ತಿರ ಮಾಡಿಸೋದಕ್ಕೆ ಪ್ಲ್ಯಾನ್ ಮಾಡಿದ್ದಾರೆ ಅನ್ಸುತ್ತೆ. ಅಷ್ಟಕ್ಕೂ, ಆ ಡೈರೆಕ್ಟರ್ ಯಾರು? ಯಾರಿಗೆ ಕೆಜಿಎಫ್-3 ನಿರ್ದೇಶಿಸುವ ಅವಕಾಶ ಸಿಗುತ್ತೆ ಅನ್ನೋದನ್ನ ಕಾದುನೋಡಬೇಕು.
ಅಚ್ಚರಿ ಅಂದರೆ ಹಿಂದೊಮ್ಮೆ ಹೊಂಬಾಳೆ ಮಾಲೀಕರು ರಾಕಿ ಇಲ್ಲದ ಕೆಜಿಎಫ್ ಕುರಿತಾಗಿಯೂ ಮಾತನಾಡಿದ್ದರು. ಕೆಜಿಎಫ್ ಫ್ರ್ಯಾಂಚೈಸಿ ಮುಂದುವರೆಸೋದು ಖರ್ರೇ, ಆದರೆ, ಕೆಜಿಎಫ್ 3,4,5 ನಂತರ ರಾಕಿಯೂ ಬದಲಾಗಬಹುದು. ರಾಕಿಭಾಯ್ ಜಾಗಕ್ಕೆ ಬೇರೊಬ್ಬ ನಟನ ಆಗಮನವಾಗಬಹುದು ಅಂತ ತಿಳಿಸಿದ್ದರು. ಈ ಮಾತು ಈಗ ಮತ್ತೆ ನೆನಪು ಮಾಡಿಕೊಳ್ಳೋದಕ್ಕೆ ಕಾರಣ ಸದ್ಯ ಯಶ್ ಕೂಡ ಕೆಜಿಎಫ್-3 ಸೈಡಿಗಿಟ್ಟು ಮತ್ತೊಂದು ಸಿನಿಮಾ ಮಾಡ್ತಿದ್ದಾರೆ. ನಾಳೆಯೇ ಆ ಸಿನಿಮಾದ ಅನೌನ್ಸ್ ಮೆಂಟ್ ಇದೆ. ಹೊಂಬಾಳೆಯಂತೆಯೇ ಪ್ರತಿಷ್ಠಿತ ಸಂಸ್ಥೆಯಾಗಿರುವ ಕೆವಿಎನ್ ಸಂಸ್ಥೆ ಜೊತೆ ರಾಕಿ ಕೈ ಜೋಡಿಸಿದ್ದು ಟೈಟಲ್ ಘೋಷಣೆ ಮಾಡಲಿದ್ದಾರೆ. ಈ ಮಧ್ಯೆ ನೀಲ್ ಸಾಹೇಬ್ರು ನಾನು ಕೆಜಿಎಫ್-3 ಡೈರೆಕ್ಷನ್ ಮಾಡೋದು ಡೌಟಿದೆ ಅಂತ ಹೇಳಿರೋದು ನೋಡಿದರೆ, ಪ್ರಶಾಂತ್ ನೀಲ್ ಅವ್ರನ್ನ ಬಿಟ್ಟು, ಯಶ್ ಭಾಯ್ ಅವ್ರನ್ನ ಬಿಟ್ಟು ಹೊಂಬಾಳೆ `ಕೆಜಿಎಫ್-3′ ಮಾಡಲಿಕ್ಕೆ ಹೊರಟಿತಾ? ಹೀಗೊಂದು ಸಂಶಯವಂತೂ ಕೆಲವರಲ್ಲಿ ಹುಟ್ಟಿದೆ. ಅಷ್ಟಕ್ಕೂ, ಈ ಅನುಮಾನ ನಿಜವಾ ಅಥವಾ `ಯಶ್-19′ ಮುಗಿಸಿ ಆದಷ್ಟು ಬೇಗ ಅಣ್ತಮ್ಮ `ಕೆಜಿಎಫ್-3′ ಅಖಾಡಕ್ಕೆ ಧುಮ್ಕುತ್ತಾರವಾ? ಕಾದುನೋಡಬೇಕು.