Raghava Lawrence: ದಕ್ಷಿಣ ಭಾರತದ ಖ್ಯಾತ ನಟ ರಾಘವ ಲಾರೆನ್ಸ್(Raghava Lawrence) ಮಾಡಿರುವ ಕಾರ್ಯವೊಂದು ದೇಶದಾದ್ಯಂತ ಶ್ಲಾಘನೆಗೆ ಪಾತ್ರವಾಗಿದೆ. ತಮಿಳು ಚಿತ್ರರಂಗದಲ್ಲಿ ಸಕ್ರಿಯರಾಗಿರುವ ರಾಘವ ಲಾರೆನ್ಸ್ ಸಿನಿಮಾ ಜೊತೆಗೆ ಸಮಾಜ ಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ತಮ್ಮ ಸಂಸ್ಥೆ ಮೂಲಕ ಅವರು ರೈತರಿಗಾಗಿ ಮಾಡಿರುವ ಕಾರ್ಯ ಶ್ಲಾಘನೆಗೆ ಪಾತ್ರವಾಗಿದೆ.
ರಾಘವ ಲಾರೆನ್ಸ್(Raghava Lawrence) ತಮಿಳು ಚಿತ್ರರಂಗದ ಖ್ಯಾತ ನಟ. ತಮ್ಮ ವಿಭಿನ್ನ ನಟನೆಯ ಮೂಲಕ ಅಪಾರ ಅಭಿಮಾನಿ ಬಳಗ ಹೊಂದಿರುವ ನಟ. ಸಿನಿಮಾ ಮೂಲಕ ಮನರಂಜನೆ ನೀಡುವ ಇವರು ಕೈಲಾದ ಸಮಾಜ ಸೇವೆಯಲ್ಲೂ ಸದಾ ಮುಂದು. ಅವಶ್ಯಕತೆ, ಅನಿವಾರ್ಯತೆ ಇರುವ ಜನರ ಸೇವೆಗೆ ನಿಲ್ಲುವ ವ್ಯಕ್ತಿತ್ವ ಇವರದ್ದು. ತಮ್ಮ ಮಂತ್ರಂ ಚಾರಿಟಿ ಮೂಲಕ ಅನೇಕ ಜನರ ಜೀವನಕ್ಕೆ ಬೆಳಕಾಗಿರುವ ನಟ ಸಂಕಷ್ಟದಲ್ಲಿರುವ, ಕಡುಬಡತನದಲ್ಲಿರುವ ರೈತರಿಗೆ ಹತ್ತು ಟ್ರ್ಯಾಕ್ಟರ್ ನೀಡಿದ್ದಾರೆ. ಸ್ವತಃ ತಾವೇ ಹೋಗಿ ವಿಲುಪುರಂ ಜಿಲ್ಲೆಯ ಹಳ್ಳಿಯೊಂದರ ರೈತನಿಗೆ ಮೊದಲ ಟ್ರ್ಯಾಕ್ಟರ್ ನೀಡಿ ಅವರ ಖುಷಿಯ ಕ್ಷಣದಲ್ಲಿ ಭಾಗಿಯಾಗಿದ್ದಾರೆ. ಇವರ ಈ ಕಾರ್ಯ ಜನಮನ್ನಣೆ ಪಡೆದುಕೊಂಡಿದೆ.
ಸದಾ ಒಂದಿಲ್ಲೊಂದು ಸಮಾಜಮುಖಿ ಕಾರ್ಯದ ಮೂಲಕ ಇನ್ನೊಬ್ಬರ ಬಾಳಿಗೆ ಬೆಳಕಾಗೋ ಹಲವು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಹಿಂದೆ ಕೆಲ ಅಂಗವಿಕಲರಿಗೆ ತ್ರಿಚಕ್ರ ವಾಹನ ಉಡುಗೊರೆ ನೀಡಿ ನೆರವು ನೀಡಿ ಸುದ್ದಿಯಾಗಿದ್ರು. ಸಿನಿಮಾಗಳಲ್ಲೂ ಬ್ಯುಸಿಯಾಗಿರುವ ಇವರು ಕಳೆದ ವರ್ಷ ತೆರೆಕಂಡ ‘ಜಿಗರ್‌ತಂಡ ಡಬಲ್X’ ಗೆಲುವಿನ ಖುಷಿಯಲ್ಲಿದ್ದಾರೆ. ಸದ್ಯ ‘ದುರ್ಗ’ ಸಿನಿಮಾದ ನಟನೆ ಹಾಗೂ ನಿರ್ದೇಶನದಲ್ಲಿ ಬ್ಯುಸಿಯಾಗಿದ್ದಾರೆ.