ಸ್ಯಾಂಡಲ್ವುಡ್ನ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಸೆರೆವಾಸ ಅನುಭವಿಸಿದ್ದರ ಬಗ್ಗೆ ನಿಮಗೆಲ್ಲ ಗೊತ್ತೆಯಿದೆ. ಹೊಸ ವಿಚಾರ ಏನಪ್ಪಾ ಅಂದರೆ ನಟಿ ರಾಗಿಣಿ ಖಾಸಗಿ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ್ದಾರೆ. ಅಲ್ಲಿ, ಒಂದಿಷ್ಟು ವಿಷ್ಯಗಳ ಬಗ್ಗೆ ಚರ್ಚೆ ಮಾಡುತ್ತಾ, ಕಂಬಿ ಎಣಿಸಿದ ದಿನಗಳನ್ನ ನೆನಪು ಮಾಡಿಕೊಂಡಿದ್ದಾರೆ. ಸೈಲೆಂಟಾಗಿದ್ದೀನಿ ಅಂದ ಮಾತ್ರಕ್ಕೆ ನಾನು ಸುಮ್ನೆ ಕೂತಿಲ್ಲ. ಬಂಧನದ ದಿನಗಳನ್ನು ಯಾವುದೇ ಕಾರಣಕ್ಕೂ ಮರೆಯೋದು ಇಲ್ಲ ಎಂದಿರೋ ರಾಗಿಣಿ, ಕಂಬಿ ಹಿಂದಿನ ಆ 90 ದಿನಗಳ ಬಗ್ಗೆ ಒಂದು ಪುಸ್ತಕ ಹೊರತರುವುದಾಗಿ ಹೇಳಿಕೊಂಡಿದ್ದಾರೆ.
ತುಪ್ಪದ ಬೆಡಗಿಯಂತಲೇ ಫೇಮಸ್ಸಾದ ನಟಿ ರಾಗಿಣಿ ಸ್ಯಾಂಡಲ್ವುಡ್ನ ಬೋಲ್ಡ್ ಅಂಡ್ ಬ್ಯೂಟಿಫುಲ್ ನಟಿಮಣಿ. ಬರೀ ಸೌಂದರ್ಯದಿಂದ ಮಾತ್ರವಲ್ಲ ಅಭಿನಯದಿಂದಲೂ ಗುರ್ತಿಸಿಕೊಂಡಿರುವ ಈ ಚೆಲುವೆ, ಚಂದನವನದಲ್ಲಿ ಮಾತ್ರವಲ್ಲದೇ ಪರಭಾಷೆಯಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಕಿಚ್ಚ ಸುದೀಪ್, ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ, ದುನಿಯಾ ವಿಜಯ್, ಶ್ರೀನಗರ ಕಿಟ್ಟಿ, ಲೂಸ್ ಮಾದ ಯೋಗಿ, ದಿಗಂತ್, ಡೆಡ್ಲಿಸೋಮ ಆದಿತ್ಯ ಸೇರಿದಂತೆ ಸಾಕಷ್ಟು ನಟರ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ಮಹಿಳಾ ಪ್ರಧಾನ ಸಿನಿಮಾಗಳಿಗೆ ಬಣ್ಣ ಹಚ್ಚಿ ಸೈ ಎನಿಸಿಕೊಂಡಿದ್ದಾರೆ.
ಆದರೆ, ಕಳೆದ ಮೂರು ವರ್ಷದಿಂದ ಚಿತ್ರರಂಗದಿಂದ ದೂರ ಉಳಿದಿದ್ದರು. ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿ ಸಂಕಷ್ಟ ಎದುರಿಸಿದ್ದರು. ಆದ್ರೀಗ ಸೆಡ್ಡುಹೊಡೆದಂತೆ ಮತ್ತೆ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ. ಎಲ್ರ ಕಾಲೆಳೆಯುತ್ತೆ ಕಾಲ ಅಂತಿರೋ ರಾಗಿಣಿ, ಸ್ವಾರಿ ಕರ್ಮ ರಿಟನ್ರ್ಸ್ ಅಂತ ಕಂಬ್ಯಾಕ್ ಮಾಡೋದಕ್ಕೆ ರೆಡಿಯಾಗಿದ್ದಾರೆ. ಈ ಕುರಿತು ಮಾತನಾಡುತ್ತಾ, ಕರಿಯರ್ ಬಗ್ಗೆ ಹೇಳಿಕೊಳ್ಳುತ್ತಾ ಒಂದಿಷ್ಟು ವಿಚಾರಗಳನ್ನು ಖಾಸಗಿ ಪತ್ರಿಕೆಯ ಜೊತೆ ಹಂಚಿಕೊಂಡಿರುವ ನಟಿ ರಾಗಿಣಿ, ಕಂಬಿ ಹಿಂದಿನ ಆ 90 ದಿನಗಳ ಬಗ್ಗೆ ಒಂದು ಪುಸ್ತಕ ಹೊರತರುವುದಾಗಿ ಹೇಳಿಕೊಂಡಿದ್ದಾರೆ.
ಡ್ರಗ್ಸ್ ಕೇಸ್ನಲ್ಲಿ ತುಪ್ಪದ ಬೆಡಗಿ ಜೈಲಿಗೆ ಹೋಗಿಬಂದಿರುವ ವಿಚಾರ ನಿಮಗೆಲ್ಲ ಗೊತ್ತಿರೋದೆ. ಆದರೆ, ಮೇಲ್ನೋಟಕ್ಕೆ ಕಾಣೋದು ಬೇರೆ, ಒಳಗಿರೋ ಸತ್ಯ ಬೇರೆ ಎನ್ನುವ ನಟಿ ರಾಗಿಣಿ, ಕಂಬಿ ಹಿಂದಿನ ಆ ದಿನಗಳ ಕ್ರೂರತೆ ಮತ್ತು ವಾಸ್ತವ ಅನಾವರಣ ಮಾಡ್ತೀನಿ ಅಂತ ಹೊರಟು ನಿಂತಿದ್ದಾರೆ. ಬಂಧಿಖಾನೆಯಲ್ಲಿದ್ದಷ್ಟು ದಿನ, ಪ್ರತಿಕ್ಷಣ ಅನುಭವಿಸಿದ ನೋವು, ಕಣ್ಣೀರು, ಸಂಕಷ್ಟ, ನರಕಯಾತನೆ, ವೇದನೆ ಜೊತೆಗೆ ಆ 90 ದಿನಗಳು ಕಲಿಸಿದಂತಹ ಪಾಠ ಎಲ್ಲವನ್ನೂ ಅಕ್ಷರಗಳ ರೂಪಕ್ಕೆ ಇಳಿಸಿದ್ದೇನೆ. ಕಂಬಿ ಎಣಿಸುವಾಗ್ಲೇ ಎಲ್ಲವನ್ನೂ ಬರೆದಿಟ್ಟುಕೊಂಡಿದ್ದೆ ಎನ್ನುವ ನಟಿ ರಾಗಿಣಿ, ಈಗ ಅದನ್ನು ಪುಸ್ತಕದ ಮೂಲಕ ಜನರ ಮುಂದೆ ತರುವುದಕ್ಕೆ ರೆಡಿಯಾಗಿದ್ದಾರೆ.
ಅಷ್ಟಕ್ಕೂ, ಆ ಪುಸ್ತಕದಲ್ಲಿ ಯಾವೆಲ್ಲಾ ವಿಚಾರಗಳನ್ನ ಅವರು ಬಹಿರಂಗ ಪಡಿಸ್ತಾರೆ. ಅದ್ಯಾವ ಸತ್ಯವನ್ನ ಎಲ್ಲರ ಮುಂದೆ ಹರವಿಡ್ತಾರೆ ಎಂಬ ಕುತೂಹಲಕ್ಕೆ ಸದ್ಯಕ್ಕೆ ಉತ್ತರವಿಲ್ಲ. ಆದರೆ, ಸೆರೆವಾಸದಿಂದ ಸಾಕಷ್ಟು ನೊಂದಿದ್ದಾರೆ. ಗಾಡ್ಫಾದರ್ ಇಲ್ಲದೇ ಚಿತ್ರರಂಗಕ್ಕೆ ಬಂದು ತನ್ನ ಸ್ವಂತ ಪ್ರತಿಭೆಯಿಂದ ಬಣ್ಣದ ಬದುಕು ಕಟ್ಟಿಕೊಂಡಿದ್ದರು. ಸ್ಯಾಂಡಲ್ವುಡ್ ಅಂಗಳದಲ್ಲಿ ನೇಮು-ಫೇಮು ಗಿಟ್ಟಿಸಿಕೊಂಡು ಸ್ಟಾರ್ಢಮ್ ಕ್ರಿಯೇಟ್ ಮಾಡಿಕೊಂಡಿದ್ದರು. ಆದರೆ ಅದು ಡ್ರಗ್ಸ್ಕೇಸ್ನಿಂದ, ಜೈಲುವಾಸದಿಂದ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಯ್ತು. ಕಷ್ಟಪಟ್ಟು ಮಾಡಿದ ಹೆಸರಿಗೆ ಮತ್ತು ಕೀರ್ತಿಗೆ ಕಳಂಕ ಬಂತು. ಇದ್ರಿಂದ ಬಹಳಷ್ಟು ನೊಂದಿರುವ ರಾಗಿಣಿ ದ್ವಿವೇದಿ, ನನಗೆ ಬಂದಂತಹ ಪರಿಸ್ಥಿತಿ ಮತ್ಯಾರಿಗೂ ಬಾರದಿರಲೆಂದು ಬಯಸ್ತಿದ್ದಾರೆ. ಕೆಲವೊಂದು ಕಾರಣಗಳಿಂದ ನಾನು ಸೈಲೆಂಟಾಗಿದ್ದೇನೆ, ಆದರೆ ಆ ಕಾರಣ ಏನು ಅನ್ನೋದು ಜಗತ್ತಿಗೆ ಗೊತ್ತಾಗುತ್ತೆ ಅಂತಿದ್ದಾರೆ. ಏನದು ಕಾರಣ ಅನ್ನೋದನ್ನು ನಟಿ ರಾಗಿಣಿಯೇ ತಿಳಿಸಬೇಕು.