ಪ್ರಿಯಾನ ಕರೆದುಕೊಂಡು ಸಪ್ತ ಸಾಗರದಾಚೆ ಎಲ್ಲೋ ಹೋಗಿಬಂದ ಮನು `ಬ್ಯಾಚುಲರ್ ಪಾರ್ಟಿ’ ಕೊಡೋದಕ್ಕೆ ತಯ್ಯಾರಿ ನಡೆಸ್ತಿದ್ದಾರೆ, ಇದೇ ತಿಂಗಳ ಕೊನೆಯಲ್ಲಿ ಬ್ಯಾಚುಲರ್ ಪಾರ್ಟಿ ಕೊಡೋ ಡೇಟ್ನ ಅನೌನ್ಸ್ ಮಾಡ್ತಾರೆ ಅಂತ ನಾವೇ ನಿಮಗೆ ಹೇಳ್ತಿದ್ವಿ. ಫೈನಲೀ ಶೆಟ್ರು ಬ್ಯಾಚುಲರ್ ಪಾರ್ಟಿ ಕೊಡೋದಕ್ಕೆ ಡೇಟ್ ಫಿಕ್ಸ್ ಮಾಡಿದ್ದಾರೆ. ಜನವರಿ 26ರಂದು ಬ್ಯಾಚುಲರ್ ಪಾರ್ಟಿ ಹಮ್ಮಿಕೊಂಡಿದ್ದು, ಲಾಂಗ್ ವೀಕೆಂಡ್ ಬಂದಿದೆ, ನಿಮ್ದೇನ್ ಪ್ಲ್ಯಾನ್ ಹೇಳಿಬಿಡು. ಯಾಕಂದ್ರೆ, ಈ ಸಲ ಜೋರಾಗಿ ಪಾರ್ಟಿ ಕೊಡಬೇಕು ಅಂತ ಡಿಸೈಡ್ ಮಾಡಿದ್ದೀನಿ. ಯಾರು ಮಿಸ್ ಮಾಡಿಕೊಳ್ಳದೇ ತಪ್ಪದೇ ಪಾರ್ಟಿಗೆ ಬನ್ನಿ ಅಂತಿದ್ದಾರೆ. ಬಹುಷಃ ಈ ಸುದ್ದಿ ಕೇಳದಾಕ್ಷಣ ಸರ್ ಪ್ರೈಸ್ ಜೊತೆಗೆ ಶಾಕ್ ಕೂಡ ಆಗುತ್ತೆ. ಸಿಂಪಲ್ ಸ್ಟಾರ್ ಸದ್ದಿಲ್ಲದೇ ಅದ್ಯಾರ ಜೊತೆ ಎಂಗೇಜ್ ಆದ್ರು ಎನ್ನುವ ಪ್ರಶ್ನೆ ಜೊತೆಗೆ ಕುತೂಹಲ ಕೆರಳುತ್ತೆ. ಆದರೆ, ನಾವು ಹೇಳಲಿಕ್ಕೆ ಹೊರಟಿರೋದು ಗೋಧಿ ಬಣ್ಣ ಸಾಧಾರಣ ಮೈಕಟ್ಟಿನ ಶೆಟ್ರ ನಿಜಜೀವನದ `ಬ್ಯಾಚುಲರ್ ಪಾರ್ಟಿ’ ಬಗ್ಗೆ ಅಲ್ಲ ಬದಲಾಗಿ ರೀಲ್ ಲೈಫ್ `ಬ್ಯಾಚುಲರ್ ಪಾರ್ಟಿ’ ಬಗ್ಗೆ
ಯಸ್, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ರು `ಬ್ಯಾಚುಲರ್ ಪಾರ್ಟಿ’ ಹೆಸರಿನ ಸಿನಿಮಾ ನಿರ್ಮಿಸಿದ್ದಾರೆ. ತಮ್ಮ ಪರವಃ ಸ್ಟುಡಿಯೋಸ್ ವತಿಯಿಂದ ಸಾಲು ಸಾಲು ಚಿತ್ರಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ ಅವರು `ಬ್ಯಾಚುಲರ್ ಪಾರ್ಟಿ’ಗೂ ಅನ್ನದಾತರಾಗಿದ್ದಾರೆ. ಈ ಸಿನಿಮಾ ಸೆಟ್ಟೇರಿದಾಗಲೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಧರ್ಮಗಿರಿ ಮಂಜುನಾಥಸ್ವಾಮಿಯ ಸನ್ನಿಧಿಯಲ್ಲಿ ಸಿನಿಮಾಗೆ ಚಾಲನೆ ನೀಡಲಾಗಿತ್ತು. ಅವತ್ತಿಗೆ ರಿಷಬ್ ಶೆಟ್ಟಿ ಈ ಚಿತ್ರದ ಭಾಗವಾಗಿದ್ದರು. ಆದರೆ ಕಾಂತಾರ ಸಿನಿಮಾ ಪ್ಯಾನ್ ಇಂಡಿಯಾ ತುಂಬೆಲ್ಲಾ ದಿಗ್ವಿಜಯ ಸಾಧಿಸಿದ್ದರಿಂದ, ಕಾಂತಾರ ಪ್ರೀಕ್ವೆಲ್ ತಯಾರಿಯಲ್ಲಿ ತೊಡಗಿಸಿಕೊಳ್ಳಬೇಕಾದ್ದರಿಂದ ರಿಷಬ್ `ಬ್ಯಾಚುಲರ್ ಪಾರ್ಟಿ’ ಯಿಂದ ಹೊರನಡೆದಿದ್ದರು. ಆಗ ಒಂದಿಷ್ಟು ಸುದ್ದಿಯಾಗಿತ್ತು. ಇದೀಗ ಈ ಚಿತ್ರ ರಿಲೀಸ್ಗೆ ಸಜ್ಜಾಗಿದೆ. ಜನವರಿ 26ರಂದು ಅದ್ದೂರಿಯಾಗಿ ರಿಲೀಸ್ ಮಡೋದಕ್ಕೆ ಶೆಟ್ರು ಭರ್ಜರಿಯಾಗಿ ಪ್ಲಾನ್ ಮಾಡಿದ್ದಾರೆ.
`ಬ್ಯಾಚುಲರ್ ಪಾರ್ಟಿ’ಗೆ ಅಭಿಜಿತ್ ಮಹೇಶ್ ನಿರ್ದೇಶನವಿದೆ. ರಕ್ಷಿತ್ ಶೆಟ್ಟಿ ಅವರ ಸೆವೆನ್ ಆಡ್ಸ್ ತಂಡದಲ್ಲಿದ್ದ ಈ ಹಿಂದೆ ಕಿರಿಕ್ ಪಾರ್ಟಿ, ಅವನೇ ಶ್ರೀಮನ್ನಾರಾಯಣ, ಸ.ಹಿ.ಪ್ರಾ.ಶಾ. ಕಾಸರಗೋಡು ಚಿತ್ರಗಳ ಕಥೆ- ಚಿತ್ರಕಥೆಯಲ್ಲಿ ಕೆಲಸ ಮಾಡಿದ್ದ ಅಭಿಜಿತ್ ಮಹೇಶ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಬ್ಯಾಚುಲರ್ ಪಾರ್ಟಿ ಚಿತ್ರದ ಕಥೆ- ಚಿತ್ರಕಥೆ ಅಭಿಜಿತ್ ಮಹೇಶ್ ಅವರದ್ದೇ. ಈ ಪ್ರೀತಿ, ಪ್ರೇಮ, ಮದುವೆ ಪ್ರಸಂಗವನ್ನ ಹಾಸ್ಯರೂಪದಲ್ಲಿ ಕಟ್ಟಿಕೊಟ್ಟಿದ್ದು, ದಿಗಂತ್, ಅಚ್ಯುತ್ ಕುಮಾರ್, ಲೂಸ್ ಮಾದ ಯೋಗಿ, ಸಿರಿ ರವಿಕುಮಾರ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಪವನ್ ಕುಮಾರ್, ಸೌಮ್ಯ ಜಗನ್ಮೂರ್ತಿ, ಬಾಲಾಜಿ ಮನೋಹರ್, ಪ್ರಕಾಶ್ ತುಮಿನಾಡ್, ರಘು ರಾಮನಕೊಪ್ಪ, ಶೋಭರಾಜ್ ಮತ್ತು ಗುರುಪ್ರಸಾದ್ ತಾರಾಬಳಗದಲ್ಲಿದ್ದಾರೆ. ಚಿತ್ರಕ್ಕೆ ಅರ್ಜುನ್ ರಾಮು ಸಂಗೀತವಿದ್ದು, ಅರವಿಂದ ಎಸ್ ಕಶ್ಯಪ್ ಛಾಯಾಗ್ರಹಣವಿದೆ. ಹೊಸ ವರ್ಷಕ್ಕೆ ಸ್ಪೆಷಲ್ಲಾಗಿ ಕರ್ಣನ ಕಾಸಿನಲ್ಲಿ ತಯಾರಾಗಿರುವ ಬ್ಯಾಚುಲರ್ ಪಾರ್ಟಿ ಕಿಕ್ಕೇರಿಸಲಿದೆ.