ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ ಚಿತ್ರಗಳ ಪೈಕಿ `ಕೆಡಿ’ ಕೂಡ ಒಂದು. ಜೋಗಿ ಪ್ರೇಮ್ ನಿರ್ದೇಶನದಲ್ಲಿ ತಯ್ಯಾರಾಗುತ್ತಿರುವ ಕೆಂಡದಂತಹ ಈ ಸಿನಿಮಾಗೆ ರಾಮ್-ಲಕ್ಷ್ಮಣ್ ಎಂಟ್ರಿಯಾಗಿದೆ. ಸೌತ್ ಸಿನಿದುನಿಯಾದಲ್ಲಿ ಸೆನ್ಸೇಷನಲ್ ಸಾಹಸ ಸಂಯೋಜಕರಾಗಿ ಹೆಸರುವಾಸಿಯಾಗಿರುವ ಈ ಅವಳಿ ಸಹೋದರರು, `ಕೆಡಿ’ ಸಿನಿಮಾದ ಮೂಲಕ ಮತ್ತೆ ಕನ್ನಡಕ್ಕೆ ಬಂದಿದ್ದಾರೆ. ಈ ಸಂಗತಿಯನ್ನ ಶೋ ಮ್ಯಾನ್ ಪ್ರೇಮ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, `ಕೆಡಿ’ ವಾರ್ ಫೀಲ್ಡ್ ಗೆ ಡೆಡ್ಲಿ ಕಂಪೋಸರ್ ಗಳು ಹೆಜ್ಜೆಯಿಟ್ಟಾಗಿದೆ ಎಂದಿದ್ದಾರೆ.
ಅಷ್ಟಕ್ಕೂ, `ಕೆಡಿ’ ಚಿತ್ರೀಕರಣ ಎಲ್ಲಿ ನಡೆಯುತ್ತಿದೆ, ಎಲ್ಲಿವರೆಗೂ ಬಂದಿದೆ ಇದ್ಯಾವ ಮಾಹಿತಿಯನ್ನ ಪ್ರೇಮ್ ಸಾಹೇಬ್ರು ಬಿಟ್ಟುಕೊಟ್ಟಿಲ್ಲ. ಆದರೆ ಐದು ಭಾಷೆಯಲ್ಲಿ ಹೈವೋಲ್ಟೇಜ್ ಆ್ಯಕ್ಷನ್ ಮೂವೀಯಾಗಿ `ಕೆಡಿ’ ಹೊರಬರುತ್ತಿದೆ. ಇದೇ ಮೊದಲ ಭಾರಿಗೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಜೋಗಿ ಪ್ರೇಮ್ ಕೈ ಜೋಡಿಸಿರೋದ್ರಿಂದ ಕುತೂಹಲ ಹೆಚ್ಚಿದೆ. ಈಗಾಗಲೇ ರಿಲೀಸ್ ಆಗಿರೋ ಟೈಟಲ್ ಟೀಸರ್ ಪ್ಯಾನ್ ಇಂಡಿಯಾ ಪ್ರೇಕ್ಷಕರ ಗಮನ ಸೆಳೆದಿದೆ. ಬಹದ್ದೂರ್ ಹುಡುಗನ ಮಾಸ್ ಲುಕ್ಕು ಹಾಗೂ ಖದರ್ `ಕೆಡಿ’ ಮೇಲೆ ಕಣ್ಣಿಡುವಂತಾಗಿದೆ.
ಬಿಗ್ ಬಜೆಟ್ನಲ್ಲಿ, ಬಹುತಾರಾಗಣದಲ್ಲಿ ಮೂಡಿಬರ್ತಿರೋ ಕೆಡಿ ಬಗ್ಗೆ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ ಪ್ಯಾನ್ ಇಂಡಿಯಾ ತುಂಬೆಲ್ಲ ನಿರೀಕ್ಷೆಯಿದೆ. ಪ್ರತಿಷ್ಟಿತ ನಿರ್ಮಾಣ ಸಂಸ್ಥೆ ಕೆವಿಎನ್ ಬಂಡವಾಳ ಸುರಿಸಿದ್ದು ಸೌತ್-ನಾರ್ತ್ ಸೂಪರ್ ಸ್ಟಾರ್ಗಳಿಗೆ ರತ್ನಗಂಬಳಿ ಹಾಕಿ `ಕೆಡಿ’ ಕಣಕ್ಕೆ ಬರಮಾಡಿಕೊಂಡಿದೆ. ಕನ್ನಡದಿಂದ ಕ್ರೇಜಿಸ್ಟಾರ್ ರವಿಚಂದ್ರನ್, ರಮೇಶ್ ಅರವಿಂದ್, ರೀಷ್ಮಾ ನಾಣಯ್ಯ ಸೇರಿದಂತೆ ಹಲವರು ಪ್ರಮುಖ ಪಾತ್ರವರ್ಗದಲ್ಲಿದ್ದು, ಬಿಟೌನ್ನಿಂದ ಸಂಜುಬಾಬ, ಶಿಲ್ಪಾಶೆಟ್ಟಿ ಸ್ಪೆಷಲ್ ಅಪಿಯರೆನ್ಸ್ ಮಾಡಿದ್ದಾರೆ. ವಿಂಟೇಜ್ ಲುಕ್ನಲ್ಲಿರೋ `ಕೆಡಿ’ ಕಲಾವಿದರು, ಕಲಾಭಿಮಾನಿಗಳನ್ನ ಮಾತ್ರವಲ್ಲ ಕಲಾಲೋಕವೇ ಕಣ್ಣರಳಿಸಿ ನೋಡುವಂತೆ ಮಾಡಿದ್ದಾರೆ.
ಪೊಗರು ಹುಡುಗ ಧ್ರುವ ಸರ್ಜಾ ಕೆರಿಯರ್ ಗೆ ಪ್ಯಾನ್ ಇಂಡಿಯನ್ ಟಚ್ ಕೊಡೋಕೆ `ಕೆಡಿ’ ಜೊತೆಗೆ ಮಾರ್ಟಿನ್ ಕೂಡ ಬರ್ತಿದೆ. ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ಮಾರ್ಟಿನ್ 2024 ಮಾರ್ಚ್ ವೇಳೆಗೆ ಕಂಪ್ಲೀಟ್ ಶೂಟ್ ಮುಗಿಸಿ ಬರುತ್ತೆ. ಮಾರ್ಟಿನ್ ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡದೇ ಹೋದ್ರು, ಮಾರ್ಚ್ ನಲ್ಲೇ ಮಾರ್ಟಿನ್ ಆಗಮನ ನಿಗದಿಯಾಗಿದೆ. ನಿರ್ಮಾಪಕ ಉದಯ್ ಮೆಹತಾ ಬಿಡುಗಡೆಗೆ ರೈಟ್ ಟೈಮ್ ಬರಲಿ, ನಾವ್ ರೆಡಿ ಅಂತ ರಿಲೀಸ್ ನಿರೀಕ್ಷೆಗಳನ್ನು ಡಬಲ್ ಮಾಡುತ್ತಿದ್ದಾರೆ.
ಅದ್ದೂರಿ ಕಾಂಬಿನೇಷನ್ನಲ್ಲಿ ಬರುತ್ತಿರುವ `ಮಾರ್ಟಿನ್’ ಸಿನಿಮಾ ಭರ್ಜರಿಯಾಗೇ ತಯ್ಯಾರಾಗುತ್ತಿದೆ. ಮಾರ್ಟಿನ್ ಚಿತ್ರದ ಮೂಲಕ ದಕ್ಷಿಣ ಭಾರತೀಯ ಚಿತ್ರರಂಗ ಪ್ರವೇಶಿಸಿರುವ ಇಟಲಿ ಬೆಡಗಿ, ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಜೊತೆ ಸಖತ್ತಾಗಿ ಹೆಜ್ಜೆ ಹಾಕಿದ್ದಾರೆ. ಆ್ಯಕ್ಷನ್ ಪ್ರಿನ್ಸ್ ಜೊತೆ ವೈಭವಿ ಶಾಂಡಿಲ್ಯ, ಸುಕೃತ ವಾಗ್ಲೆ, ಅನ್ವೇಶಿ ಜೈನ್, ನವಾಬ್ ಷಾ, ರೋಹಿತ್ ಪಾಠಕ್, ಮಾಳವಿಕಾ ಅವಿನಾಶ್, ಅಚ್ಯುತ್ ಕುಮಾರ್, ಚಿಕ್ಕಣ್ಣ, ಸಾಧುಕೋಕಿಲ ಸೇರಿದಂತೆ ಹಲವರು ಪಾತ್ರವರ್ಗದಲ್ಲಿದ್ದಾರೆ. ಮಣಿಶರ್ಮಾ ಸಂಗೀತ ಸಿನಿಮಾಗಿದ್ದು, ರವಿಬಸ್ರೂರ್ ಹಿನ್ನಲೆ ಸಂಗೀತ ಒದಗಿಸಿದ್ದಾರೆ. ರಾಮ್-ಲಕ್ಷ್ಮಣ್ ಹಾಗೂ ರವಿವರ್ಮಾ ಸಾಹಸ ಸಂಯೋಜನೆ ಮಾಡಿದ್ದಾರೆ.
ಎ.ಪಿ ಅರ್ಜುನ್ ನಿರ್ದೇಶನ, ಉದಯ್ ಕೆ.ಮೆಹ್ತಾ ನಿರ್ಮಾಣದಲ್ಲಿ ಬಹುಕೋಟಿ ವೆಚ್ಚದಲ್ಲಿ ಮೂಡಿಬರ್ತಿರೋ ಈ ಚಿತ್ರದ ಮೇಲೆ ನಿರೀಕ್ಷೆ ತುಸು ಜಾಸ್ತಿನೆಯಿದೆ. ಹೈವೋಲ್ಟೇಜ್ ಆ್ಯಕ್ಷನ್ ಥ್ರಿಲ್ಲರ್ ಚಿತ್ರ ಇದಾಗಿದ್ದು, ವಿದೇಶಿ ಮೂಲದ ಖ್ಯಾತ ಬಾಡಿಬಿಲ್ಡರ್ಗಳ ಜೊತೆ ಧ್ರುವ ಹೊಡೆದಾಡಿದ್ದಾರೆ. ಅಷ್ಟಕ್ಕೂ, ಧ್ರುವ ಗ್ಯಾಂಗ್ ಸ್ಟರ್ರಾ ಅಥವಾ ಸೋಲ್ಜರ್ರಾ? ಈ ಕುತೂಹಲವನ್ನ ಬಿಟ್ಟುಕೊಡದ ಎ.ಪಿ ಅರ್ಜುನ್ `ಮಾರ್ಟಿನ್’ಗಾಗಿ ಇಂಡಿಯಾದ ಜೊತೆಗೆ ಪಾಕ್ ಕೂಡ ಕಣ್ಣರಳಿಸಿ ಕಾಯುವಂತೆ ಮಾಡಿದ್ದಾರೆ. ಎಲ್ಲಾ ಅಂದುಕೊಂಡಂತೆ ಆದರೆ ಮಾರ್ಚ್ನಲ್ಲಿ `ಮಾರ್ಟಿನ್’ ಅಖಾಡಕ್ಕಿಳಿಯೋದು ಪಕ್ಕಾ . ಕನ್ನಡ, ತೆಲುಗು, ತಮಿಳು, ಮಲೆಯಾಳಂ ಸೇರಿದಂತೆ ಪ್ಯಾನ್ ಇಂಡಿಯಾ ತುಂಬೆಲ್ಲಾ ಮಾರ್ಟಿನ್ ಮೇನಿಯಾ ಶುರುವಾಗೋದು ಸತ್ಯ