ರಾಮಾಚಾರಿ-ಮಾರ್ಗರೇಟ್ ಈ ಎರಡು ಎವರ್ಗ್ರೀನ್ ಕ್ಯಾರೆಕ್ಟರ್ ಗಳು. ಚಿತ್ರಬ್ರಹ್ಮ ಪುಟ್ಟಣ್ಣ ಕಣಗಲ್ ಅವರು ಸೃಷ್ಟಿಮಾಡಿದಂತಹ, ಆಲ್ಟೈಮ್ ಕ್ಲಾಸಿಕಲ್ ಸಿನಿಮಾ ನಾಗರಹಾವು ಚಿತ್ರದ ಈ ಎರಡು ಪಾತ್ರಗಳು ಇವತ್ತಿಗೂ ಜೀವ್ವಜೀವಂತ. ಸಿನಿಮಾ ಇರುವವರೆಗೂ ಮಾತ್ರವಲ್ಲ ಸೂರ್ಯ, ಚಂದ್ರರು ಇರುವತನಕವೂ ಈ ಎರಡು ಕ್ಯಾರೆಕ್ಟರ್ ಗಳು ಅಜರಾಮರ ಎಂಬುದಕ್ಕೆ ಒಬ್ಬರಾದ ಮೇಲೊಬ್ಬರು ಈ ಎರಡು ಪಾತ್ರದ ಬೆನ್ನತ್ತಿರುವುದೇ ಸಾಕ್ಷಿ.
ನಾಗರಹಾವು ಸಿನಿಮಾ ರಿಲೀಸ್ ಆಗಿ ಭರ್ತಿ 50 ವರ್ಷಗಳು ಕಳೆದಿವೆ. ಆದರೆ, ಸಿನಿಮಾದ ಪ್ರಭಾವ ಮಾತ್ರ ಕಡಿಮೆಯಾಗಿಲ್ಲ. ಈ ಚಿತ್ರದ ರಾಮಾಚಾರಿ ಹಾಗೂ ಮಾರ್ಗರೇಟ್ ಪಾತ್ರಕ್ಕಿರುವ ಕ್ರೇಜ್ ಕಡಿಮೆಯಾಗುತ್ತಿಲ್ಲ. ಮುಂದೆಯೂ ಕಡಿಮೆಯಾಗೋದಿಲ್ಲ ಅನ್ನೋದಕ್ಕೆ ಈ ಎರಡು ಕ್ಯಾರೆಕ್ಟರ್ಗಳ ಹೆಸರಲ್ಲಿ ಸೆಟ್ಟೇರುತ್ತಿರುವ ಸಿನಿಮಾಗಳೇ ಕಣ್ಣಮುಂದಿನ ಉದಾಹರಣೆ
ರಾಮಾಚಾರಿಯಾಗಿ ಕ್ರೇಜಿಸ್ಟಾರ್ ರವಿಚಂದ್ರನ್, ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿಯಾಗಿ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಶೈನ್ ಆಗಿದ್ದು ಗೊತ್ತೆಯಿದೆ. ಇದೀಗ ಅಭಿಲಾಷ್ ಹಾಗೂ ಸೋನಲ್ ಜೋಡಿ ರಾಮಾಚಾರಿ ಹಾಗೂ ಮಾರ್ಗರೇಟ್ ಆಗಿ ಮಿಂಚೋದಕ್ಕೆ ರೆಡಿಯಾಗಿದ್ದಾರೆ.
ನಾಗರಹಾವು ಚಿತ್ರದಿಂದ ಸ್ಪೂರ್ತಿ ಹೊಂದಿರುವ ನಿರ್ದೇಶಕ ಗಿರಿಧರ್ ಕುಂಬಾರ ಅವರು `ಮಾರ್ಗರೇಟ್ ಲವರ್ ಆಫ್ ರಾಮಾಚಾರಿ’ ಹೆಸರಲ್ಲಿ ಸಿನಿಮಾ ಮಾಡೋದಕ್ಕೆ ಮುಂದಾಗಿದ್ದಾರೆ. ಮೂಲತಃ ರಂಗಭೂಮಿ ಕಲಾವಿದನಾಗಿರುವ, ಕೆಜಿಎಫ್, ಲವ್ಮಾಕ್ಟೇಲ್, ಬಡವ ರಾಸ್ಕಲ್, ಗುರುದೇವ್ ಹೊಯ್ಸಳ ಸೇರಿದಂತೆ ಒಂದಿಷ್ಟು ಸಿನಿಮಾಗಳಲ್ಲಿ ನಟಿಸಿರುವ ಕಲಾವಿದ ಅಭಿಲಾಷ್ ಅವರನ್ನು ಈ ಚಿತ್ರದ ಮೂಲಕ ನಾಯಕನಟನನ್ನಾಗಿ ಇಂಟ್ರುಡ್ಯೂಸ್ ಮಾಡ್ತಿದ್ದಾರೆ. ರಾಮಾಚಾರಿ ಅಲಿಯಾಸ್ ರಾಮು ಪಾತ್ರದಲ್ಲಿ ಅಭಿಲಾಷ್ ಕಾಣಿಸಿಕೊಂಡರೆ, ಮೀರಾ ರಾಘವ್ ರಾಮ್ ಅಲಿಯಾಸ್ ಮ್ಯಾಗಿಯಾಗಿ ಸೋನಲ್ ಮಿಂಚಲಿದ್ದಾರೆ. ಅವಿನಾಶ್, ರವಿಶಂಕರ್ ಸೇರಿದಂತೆ ಹಲವರು ತಾರಾಬಳಗದಲ್ಲಿರಲಿದ್ದಾರೆ.
ಇದೊಂದು ಕ್ರೈಮ್ ಸಬ್ಜೆಕ್ಟ್ ಇರುವ ಚಿತ್ರ. ಬರೋಬ್ಬರಿ 3 ವರ್ಷಗಳ ಕಾಲ ಟೈಮ್ ತಗೊಂಡು ಈ ಸಿನಿಮಾ ಕಥೆ ಮಾಡಿಕೊಂಡಿದ್ದಾರೆ. ತೆಲುಗು ಸಿನಿಮಾಟೋಗ್ರಾಫರ್ ಕೊಳಂಚಿ ರಾಕೇಶ್ ಇದೇ ಮೊದಲ ಭಾರಿಗೆ ಈ ಚಿತ್ರದ ಮೂಲಕ ಕನ್ನಡಕ್ಕೆ ಕಾಲಿಡುತ್ತಿದ್ದಾರೆ. ವಾಸುಕಿ ವೈಭವ್ ಸಂಗೀತ ಸಂಯೋಜಿಸಲಿದ್ದಾರೆ. ಏಪ್ರಿಲ್ 24ರಂದು `ಮಾರ್ಗರೇಟ್ ಲವರ್ ಆಫ್ ರಾಮಾಚಾರಿ’ ಸೆಟ್ಟೇರಲಿದೆ. ಚಿತ್ರದುರ್ಗದಲ್ಲೇ ಶೂಟಿಂಗ್ ಮಾಡುವುದಕ್ಕೆ ಪ್ಲ್ಯಾನ್ ಮಾಡಿರುವ ಚಿತ್ರತಂಡ, ಮೇ 11ರಿಂದ ಶೂಟಿಂಗ್ ಹೊರಡಲಿದೆ. ನಿಹಾಂತ್ ಪ್ರೊಡಕ್ಷನ್ ಅಡಿಯಲ್ಲಿ ವನಿತಾ ಎಚ್ಎನ್ ಅವರ ನಿರ್ಮಾಣದಲ್ಲಿ ಈ ಸಿನಿಮಾ ಮೂಡಿಬರ್ತಿದೆ.