Ramarasa: ಗುರುದೇಶಪಾಂಡೆ ಅವರು ನಿರ್ಮಿಸುತ್ತಿರುವ, ‘ಜಟ್ಟ’ ಗಿರಿರಾಜ್ ನಿರ್ದೇಶನದ ನೂತನ ಚಿತ್ರ ‘ರಾಮರಸ’(Ramarasa). ಚಿತ್ರದಲ್ಲಿ ನಾಯಕ ನಟನಾಗಿ ಬಿಗ್ ಬಾಸ್ ಸೀಸನ್ ಹತ್ತರ ವಿನ್ನರ್ ಕಾರ್ತಿಕ್ ಮಹೇಶ್(Karthik Mahesh) ನಟಿಸುತ್ತಿದ್ದಾರೆ. ಅಭಿನಯ ಚಕ್ರವರ್ತಿ ಬಾದ್ ಶಾ ಕಿಚ್ಚ ಸುದೀಪ್(Kichcha Sudeep) ‘ರಾಮರಸ’ (Ramarasa) ಚಿತ್ರಕ್ಕೆ ಸಾಥ್ ನೀಡಿದ್ದಾರೆ. ನಾಯಕ ನಟನನ್ನು ಪರಿಚಯಿಸುವ ವಿಶೇಷ ವಿಡಿಯೋ ಬಿಡುಗಡೆ ಮಾಡುವ ಮೂಲಕ ಚಿತ್ರಕ್ಕೆ ಸುದೀಪ್ ಸಾಥ್ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಸುದೀಪ್(Sudeep), ‘ನಾನು ‘ಬಿಗ್ ಬಾಸ್’ ಕಾರ್ಯಕ್ರಮವನ್ನು ಎಷ್ಟು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದೇನೆ. ಆದರೆ, ಪ್ರತಿ ಸೀಸನ್ನಲ್ಲೂ ಒಬ್ಬ ಹೊಸ ಹೀರೋ ಹುಟ್ಟಿಕೊಳ್ಳುತ್ತಿದ್ದಾನೆ. ‘ಬಿಗ್ ಬಾಸ್’ ಗೆಲ್ಲುವುದು ಅಷ್ಟು ಸುಲಭವಲ್ಲ. ಕಾರ್ತಿಕ್ ಅವರಿಗಂತೂ ಬಹಳಷ್ಟು ಸ್ಪರ್ಧಿಗಳಿದ್ದರು. ಅದು ಅವರಿಗೆ ಗೊತ್ತು. “ಬಿಗ್ ಬಾಸ್” ಗೆದ್ದ ಮೇಲೆ ಕಾರ್ತಿಕ್ ಅವರಿಗೆ ಒಳ್ಳೆಯ ಅವಕಾಶಗಳು ಬರುತ್ತಿದೆ. ಕಾರ್ತಿಕ್ ಸರಿಯಾದ ಹಾದಿಯಲ್ಲಿದ್ದಾರೆ. ಪ್ಯಾಷನೇಟ್ ಜನರು ಅವರ ಜೊತೆಯಾಗಿದ್ದಾರೆ. ಈ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳಿ’ ಎಂದು ಹಾರೈಸಿದರು. ನಿರ್ಮಾಪಕ ಗುರು ದೇಶಪಾಂಡೆ ನಿರ್ಮಾಣದ ಶೈಲಿ ಹಾಗೂ ನಿರ್ದೇಶಕ ಗಿರಿರಾಜ್ ಅವರ ಕಾರ್ಯವೈಖರಿಯನ್ನು ಸುದೀಪ್ ಮುಕ್ತಕಂಠದಿಂದ ಶ್ಲಾಘಿಸಿದರು.
ನಾಯಕ ಕಾರ್ತಿಕ್ ಮಹೇಶ್((Karthik Mahesh) ಮಾತನಾಡಿ, ಮೊದಲಿನಿಂದಲೂ ನನಗೆ ಸುದೀಪ್ ಸರ್ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಅವರಿಗೆ ಹಾಗೂ ಈ ಚಿತ್ರದಲ್ಲಿ ಅವಕಾಶ ಕೊಟ್ಟ ನಿರ್ಮಾಪಕರಿಗೆ, ನಿರ್ದೇಶಕರಿಗೆ ಧನ್ಯವಾದಗಳು. ಒಳ್ಳೆಯ ತಂಡದೊಂದಿಗೆ ಕೆಲಸ ಮಾಡುತ್ತಿರುವ ಖುಷಿಯಿದೆ. ಸುದೀಪ್ ಅವರ ಮೇಲೆ ನನಗೆ ವಿಶೇಷ ಪ್ರೀತಿ ಹಾಗೂ ಗೌರವ. ಹಾಗಾಗಿ “ಬಿಗ್ ಬಾಸ್” ಫಿನಾಲೆಯಲ್ಲಿ ಅವರು ಕೊಟ್ಟಿದ್ದ ಡ್ರೆಸ್ ಅನ್ನು ಇಂದು ಹಾಕಿಕೊಂಡು ಬಂದಿದ್ದೇನೆ ಎಂದರು.
ಪ್ರತಿಯೊಬ್ಬ ನಿರ್ದೇಶಕನಿಗೂ ಗುರು ದೇಶಪಾಂಡೆ ಅವರಂತಹ ನಿರ್ಮಾಪಕರು ಸಿಗಬೇಕು. ಅವರಿಗೆ ಸಿನಿಮಾ ಮೇಲೆ ತುಂಬಾ ಪ್ರೀತಿ. ಅದ್ದೂರಿಯಾಗಿ ಮೂಡಿಬಂದಿರುವ ನಾಯಕನ ಪರಿಚಯದ ವಿಶೇಷ ವಿಡಿಯೋ ಅದಕ್ಕೆ ಸಾಕ್ಷಿ. ಕಾರ್ತಿಕ್ ಮಹೇಶ್ ಅವರು ಈ ಚಿತ್ರದ ನಾಯಕನಾಗಿ ಆಯ್ಕೆಯಾಗಿದ್ದಾರೆ. ಸುದೀಪ್ ಅವರು ನಾಯಕನನ್ನು ಪರಿಚಯಿಸಿದ್ದಾರೆ. ಈ ಸಂದರ್ಭದಲ್ಲಿ ಸುದೀಪ್ ಅವರಿಗೆ ವಿಶೇಷ ಧನ್ಯವಾದ ತಿಳಿಸುತ್ತೇನೆ ಎಂದರು ನಿರ್ದೇಶಕ ಗಿರಿರಾಜ್. ಜಿ ಅಕಾಡೆಮಿಯ 16 ಜನ ಹೊಸ ಪ್ರತಿಭೆಗಳಿಗೆ ತರಬೇತಿ ನೀಡಿ ಈ ಚಿತ್ರದಲ್ಲಿ ನಟಿಸಲು ಅವಕಾಶ ನೀಡಲಾಗಿದೆ. ಅವರೊಂದಿಗೆ ಜನಪ್ರಿಯ ನಟರೊಬ್ಬರು ನಾಯಕನಾಗಿ ನಟಿಸಲಿದ್ದಾರೆ ಎಂದು ನಾನು ಮೊದಲು ತಿಳಿಸಿದೆ. “ರಾಮರಸ” ಚಿತ್ರಕ್ಕೆ ಕಾರ್ತಿಕ್ ಮಹೇಶ್ ನಾಯಕನಾಗಿದ್ದಾರೆ. ನಮ್ಮ ಚಿತ್ರದ ನಾಯಕನನ್ನು ಪರಿಚಯಿಸುವ ಟೀಸರ್ ಬಿಡುಗಡೆ ಮಾಡಿಕೊಟ್ಟ ಕಿಚ್ಚ ಸುದೀಪ್ ಅವರಿಗೆ ಅನಂತ ಧನ್ಯವಾದಗಳು ಎಂದರು ನಿರ್ಮಾಪಕ ಗುರು ದೇಶಪಾಂಡೆ(Guru Deshpande). ‘ರಾಮರಸ’(Ramarasa) ಚಿತ್ರಕ್ಕೆ ಬಿ.ಜೆ. ಭರತ್ ಸಂಗೀತ, ಎ.ವಿ. ಕೃಷ್ಣಕುಮಾರ್, ಅರ್ಜುನ್ ಕಿಟ್ಟು ಸಂಕಲನವಿದೆ. ಮುರಳಿ ಮಾಸ್ಟರ್ ನೃತ್ಯ ನಿರ್ದೇಶನ ಹಾಗೂ ಪುನೀತ್ ಆರ್ಯ ಗೀತರಚನೆಯಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಸುನೀಲ್ ಹೆಚ್ ಸಿ ಗೌಡ.