ರಮ್ಯಾ ಮತ್ತೆ ಸಿನಿಮಾದಲ್ಲಿ ನಟಿಸುತ್ತಿದ್ದಾಂತೆ… ಹಾಗಂತ ಇದುವರೆಗೆ ಅದೆಷ್ಟು ಸಲ ಸುದ್ದಿಗಳು ಹಬ್ಬಿಕೊಂಡಿದ್ದವೊ, ಅದಕ್ಕೆ ಯಾವ್ಯಾವ ಬಣ್ಣದ ರೆಕ್ಕೆ ಪುಕ್ಕಗಳು ಸೇರಿಕೊಂಡು ಹರಿದಾಡಿದ್ದವೋ… ಇದರ ಬಗ್ಗೆ ಖುದ್ದು ಆಕೆಯ ಅಭಿಮಾನಿಗಳೇ ಲೆಕ್ಕವಿಟ್ಟಂತಿಲ್ಲ. ಆದರೆ, ಅಂಥಾದ್ದೊಂದು ಸುದ್ದಿ ಹರಿದಾಡಿದಾಗೆಲ್ಲ ಅದೆಷ್ಟೇ ಜನರ ಕಣ್ಣುಗಳಲ್ಲಿ ಹೊಳಪು ಮೂಡಿಕೊಳ್ಳುತ್ತಿತ್ತು. ರಮ್ಯಾ ಮರಳುತ್ತಿರೋದು ಯಾವ ಚಿತ್ರದ ಮೂಲಕ, ಅವರು ಯಾವ ಪಾತ್ರದಲ್ಲಿ ನಟಿಸಲಿದ್ದಾರೆ ಅಂತೆಲ್ಲ ನಾನಾ ಕೋನಗಳಲ್ಲಿ ಚರ್ಚೆಗಳಾಗುತ್ತಿದ್ದವು. ಹಾಗೆ ರಮ್ಯಾಗಮನಕ್ಕಾಗಿ ಕಣ್ಣರಳಿಸಿ ಕಾದು ಕೂತಿದ್ದವರಿಗೆಲ್ಲ ಅಡಿಗಡಿಗೆ ಎದುರಾದದದ್ದು ನಿರಾಸೆ ಮಾತ್ರ. ಆದರೀಗ ರಮ್ಯಾ ಅಭಿಮಾನಿಗಳೆಲ್ಲ ಬಹುಕಾಲದ ತರುವಾಯ ಖುಷಿಗೊಂಡಿದ್ದಾರೆ. ಆಕೆ ನಟಿಯಾಗಿ ಮರಳಬೇಕು, ಮತ್ತೆ ಹಿಂದಿನಂತೆಯೇ ಮೆರೆಯಬೇಕೆಂದು ಆಸೆ ಪಟ್ಟಿದ್ದವರೆಲ್ಲರೊಳಗೂ ತೃಪ್ತ ಭಾವವೊಂದು ಪಡಿಮೂಡಿಕೊಂಡಿದೆ. ಯಾಕೆಂದರೆ, ಕಡೆಗೂ ರಮ್ಯಾ ಮತ್ತೆ ಬಣ್ಣ ಹಚ್ಚುವ ನಿರ್ಧಾರಕ್ಕೆ ಬಂದಿದ್ದಾರೆಂದು ಹೇಳಲಾಗುತ್ತಿದೆ!
ಅವರು ತಿಂಗಳುಗಳ ಹಿಂದೆ ನಿರ್ಮಾಪಕಿಯಾಗಿ ಹೊಸಾ ಹೆಜ್ಜೆಯೊಂದನ್ನಿಟ್ಟಿದ್ದರು. ಸದ್ಯ ನಿರ್ಮಾಪಕಿಯ ಅವತಾರದಲ್ಲಿಯಾದರೂ ಆಕೆ ಮತ್ತೆ ಚಿತ್ರರಂಗಕ್ಕೆ ಮರಳಿದ ಖುಷಿಯಲ್ಲಿ ಅಭಿಮಾನಿ ಬಳಗವೀಗ ಮಿಂದೇಳುತ್ತಿದೆ. ಕನ್ನಡ ಚಿತ್ರರಂಗದ ಪಾಲಿನ ಲಕ್ಕಿ ಸ್ಟಾರ್ ಆಗಿ, ಮೋಹಕ ತಾರೆಯಾಗಿ ಕನ್ನಡಿಗರೆಲ್ಲರ ಪ್ರೀತಿ ಸಂಪಾದಿಸಿಕೊಂಡಿರುವಾಕೆ ನಟಿ ರಮ್ಯಾ. ಈವತ್ತಿನ ದಿನಮಾನದಲ್ಲಿ ಅದೆಷ್ಟೇ ಖ್ಯಾತಿ ಹೊಂದಿದ್ದರೂ ಒಂದಷ್ಟು ಕಾಲ ಚಿತ್ರರಂಗದಿಂದ ದೂರವಿದ್ದರೆ ಅಂಥಾ ನಟ ನಟಿಯರನ್ನು ಜನ ಮರೆತೇ ಬಿಡುತ್ತಾರೆ. ಇಂಥಾ ವಾತಾವರಣದಲ್ಲಿ, ದಶಕಗಳ ಕಾಲ ದೂರವಿದ್ದರೂ ಅದೇ ಜನಪ್ರಿಯತೆಯನ್ನು ಕಾಪಿಟ್ಟುಕೊಂಡಿರೋದು ನಟಿಯಾಗಿ ರಮ್ಯಾ ಮಾಡಿದ್ದ ಮೋಡಿಗೊಂದು ಸಾಕ್ಷಿ. ಮನಸು ಮಾಡಿದ್ದರೆ ಆಕೆ ಮತ್ತೆ ನಾಯಕಿಯಾಗಿ ಮಿರುಗುವ ಅವಕಾಶಗಳಿದ್ದವು. ನಂಬರ್ ಒನ್ ರೇಸಿನಲ್ಲಿ ನಿರಾತಂಕವಾಗಿ ಮುಂದುವರೆಯುವ ಸಾಧ್ಯತೆಗಳೂ ಇದ್ದವು. ಆದರೆ ರಮ್ಯಾ ಈ ಬಾರಿ ಅಚ್ಚರಿದಾಯಕವಾಗಿ ನಿರ್ಮಾಣ ಕ್ಷೇತ್ರವನ್ನು ಆರಿಸಿಕೊಂಡಿದ್ದಾರೆ. ಅವರ ಅಭಿಮಾನಿ ಬಳಗ ಆ ನಿರ್ಧಾರದಲ್ಲಿಯೇ ಖುಷಿ ಕಂಡುಕೊಂಡಿದೆ.
ಅಂದಹಾಗೆ, ರಮ್ಯಾ ಆಪಲ್ ಬಾಕ್ಸ್ ಅಂತೊಂದು ಸಂಸ್ಥೆಯೊಂದಿಗೆ ಚಿತ್ರ ನಿರ್ಮಾಣಕ್ಕಿಳಿಯುವ ನಿರ್ಧಾರ ಮಾಡಿದ್ದಾರೆ. ಈ ಮೂಲಕ ಮೊದಲ ಹಂತದಲ್ಲಿಯೇ ಎರಡು ಸಿನಿಮಾಗಳನ್ನು ನಿರ್ಮಾಣ ಮಾಡಲೂ ಮುಂದಾಗಿದ್ದಾರೆ. ಇದರೊಂದಿಗೆ ಓಟಿಟಿಯನ್ನು ಗುರಿಯಾಗಿಸಿಕೊಂಡು ವಿಭಿನ್ನವಾದ ವೆಬ್ ಸೀರೀಸ್‌ಗಳನ್ನು ನಿರ್ಮಾಣ ಮಾಡುವ ಯೋಜನೆಯನ್ನೂ ಹಾಕಿಕೊಂಡಿದ್ದಾರೆ. ಹಠ ತೊಟ್ಟು ನಿಂತರೆ ಅಸಾಧ್ಯವಾದುದನ್ನೂ ಸಾಧ್ಯವಾಗಿಸುವ ಕಸುವು ಹೊಂದಿರುವ ರಮ್ಯಾ, ನಟಿಯಾಗಿ ಮಿಂಚಿದಂತೆಯೇ ನಿರ್ಮಾಪಕಿಯಾಗಿಯೂ ನೆಲೆಗಾಣುವ ನಿಖರ ಯೋಜನೆಯೊಂದಿಗೇ ಅಖಾಡಕ್ಕಿಳಿದಿದ್ದಾರೆ. ಈ ಪುನರಾಗಮನದ ನಿರ್ಧಾರದ ಹಿಂದೆಯೇ ರಾಜಕೀಯ ನಡೆಯ ಸುಳಿವುಗಳೂ ಇರುವುದು ಅಚ್ಚರಿಯೇನಲ್ಲ!
ಕನ್ನಡ ಚಿತ್ರರಂಗದಲ್ಲಿ ಯಶಸ್ಸೊಂದನ್ನು ಮುಡಿಗೇರಿಸಿಕೊಳ್ಳಬೇಕೆಂದು ನಾನಾ ಸರ್ಕಸ್ಸು ನಡೆಸಿದ ನಟಿಯರಿದ್ದಾರೆ. ಕಡೆಗೂ ಅದು ಸಾಧ್ಯವಾಗದ ಮರೆಗೆ ಸರಿದವರೂ ಇದ್ದಾರೆ. ಮತ್ತೆ ಕೆಲವರಿಗೆ ಅದೆಷ್ಟೋ ಸಿನಿಮಾಗಳಲ್ಲಿ ನಟಿಸಿದ ನಂತರ ಗೆಲುವೊಂದು ಕೈ ಹಿಡಿದಿದ್ದಿದೆ. ಅದರಲ್ಲಿಯೂ ನಟಿಯಾಗಿ ನೆಲೆ ಕಂಡುಕೊಂಡರೂ ನಂಬರ್ ಒನ್ ನಾಯಕಿಯೆಂಬ ಪಟ್ಟ ಸಿಗುವುದು ಸಲೀಸಿನ ಸಂಗತಿಯೇನಲ್ಲ. ಈ ವಿಚಾರದಲ್ಲಿ ರಮ್ಯಾ ನಿಜಕ್ಕೂ ಲಕ್ಕಿ ಹುಡುಗಿ. ಯಾಕೆಂದರೆ ೨೦೦೩ರಲ್ಲಿ ತೆರೆಕಂಡಿದ್ದ, ಪುನೀತ್ ರಾಜ್‌ಕುಮಾರ್ ನಾಯಕನಾಗಿ ನಟಿಸಿದ್ದ ಅಪ್ಪು ಚಿತ್ರದ ಮೂಲಕ ನಾಯಕಿಯಾಗಿ ಅವತರಿಸಿದ್ದ ರಮ್ಯಾಗೆ ಆರಂಭದಲ್ಲಿಯೇ ಗೆಲುವು ದೊರೆತಿತ್ತು. ಅದು ನಾಯಕ ನಟನಾಗಿ ಅಪ್ಪು ಪಾಲಿಗೆ ಮೊದಲ ಚಿತ್ರ. ಅದಕ್ಕೆ ನಾಯಕಿಗಾಗಿ ವ್ಯಾಪಕ ಹುಡುಕಾಟ ನಡೆದಿತ್ತು. ಸ್ವತಃ ಪಾರ್ವತಮ್ಮ ರಾಜ್‌ಕುಮಾರ್ ಅವರೇ ಅದರ ನೇತೃತ್ವ ವಹಿಸಿಕೊಂಡಿದ್ದರು. ಕಡೆಗೂ ಆ ಅದೃಷ್ಟ ರಮ್ಯಾಗೆ ಒಲಿದು ಬಂದಿತ್ತು.
ಪುನೀತ್ ರಾಜ್‌ಕುಮಾರ್ ಅವರಿಗೇ ಸರಿಸಾಟಿಯಾಗುವಂಥಾ ಚುರುಕಿನ ಅಭಿನಯದಿಂದ ಗಮನ ಸೆಳೆದಿದ್ದ ರಮ್ಯಾ, ಅಪ್ಪು ಚಿತ್ರದಿಂದಲೇ ನಾಯಕಿಯಾಗಿ ನೆಲೆ ಕಂಡುಕೊಂಡಿದ್ದರು. ಆ ನಂತರದ್ದೆಲ್ಲವೂ ಗೆಲುವಿನ ಯಾನವೇ. ಆ ಗೆಲುವಿನ ಬೆನ್ನಲ್ಲಿಯೇ ತೆರೆಗಂಡಿದ್ದ ಎಕ್ಸ್‌ಕ್ಯೂಸ್‌ಮೀ ಕೂಡಾ ಸೂಪರ್ ಹಿಟ್ ಆಗಿತ್ತು. ಅರಲ್ಲಿನ ಮಧುಮಿತಾ ಎಂಬ ಪಾತ್ರದ ಮೂಲಕ ರಮ್ಯಾ ಪ್ರೇಕ್ಷಕರೆದೆಗೆ ಲಗ್ಗೆ ಇಟ್ಟಿದ್ದರು. ಅದಾದ ಬಳಿಕ ರಂಗ ಎಸ್‌ಎಸ್‌ಎಲ್‌ಸಿ ಚಿತ್ರದಲ್ಲಿ ಸುದೀಪ್‌ಗೆ ನಾಯಕಿಯಾಗೋ ಅವಕಾಶವೂ ಒಲಿದು ಬಂದಿತ್ತು. ಕೇವಲ ಆರೇಳು ವರ್ಷಗಳಲ್ಲಿ ಮೂವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸುವುದರೊಂದಿಗೆ ನಂಬರ್ ಒನ್ ನಾಯಕಿ ಎಂಬ ಪಟ್ಟ, ಮೋಹಕತಾರೆ ಎಂಬ ಪ್ರೀತಿಯ ಬಿರುದೆಲ್ಲವೂ ರಮ್ಯಾಗೆ ಲಭಿಸಿತ್ತು. ಸಾಕಷ್ಟು ಪ್ರಶಸ್ತಿ, ಗೌರವಗಳೂ ಕೂಡಾ ಅವರನ್ನರಸಿ ಬಂದಿದ್ದವು.
ಆ ದಶಕದ ಕಡೇಯ ಹೊತ್ತಿಗೆಲ್ಲ ಪಥ ಬದಲಿಸಲಾರಂಭಿಸಿದ್ದ ರಮ್ಯಾ ಎಲ್ಲರೂ ಅಚ್ಚರಿ ಪಡುವಂತೆ ರಾಜಕೀಯದತ್ತ ಮುಖ ಮಾಡಿದ್ದರು. ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ರಾಜಕಾರಣಿಯಾಗ ಹೊರಟ ಈಕೆಯ ಬಗ್ಗೆ ಆರಂಭದಲ್ಲಿ ಮೂದಲಿಕೆಯ ಮಾತುಗಳೂ ಕೇಳಿ ಬಂದಿದ್ದವು. ೨೦೧೧ರಲ್ಲಿ ರಾಷ್ಟರೀಯ ಕಾಂಗ್ರಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ರಮ್ಯಾ, ೨೦೧೩ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲ್ಲುವ ಮೂಲಕ ಎಲ್ಲರ ಅಚ್ಚರಿಗೆ ಕಾರಣರಾಗಿದ್ದರು. ಆದರೆ, ಓರ್ವ ರಾಜಕಾರಣಿಯಾಗಲು ಬೇಕಾದ ಅನುಭವ, ಪ್ರಬುದ್ಧ ಮನಃಸ್ಥಿತಿ ಆಗಿನ್ನೂ ರಮ್ಯಾಗೆ ಸಿದ್ಧಿಸಿರಲಿಲ್ಲ ಅನ್ನೋದು ಸತ್ಯ. ನಂತರ ಹದಿನಾರನೇ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಮಂಡ್ಯದಿಂದ ಕಣಕ್ಕಿಳಿದಿದ್ದ ರಮ್ಯಾ, ಜೆಡಿಎಸ್‌ನ ಸಿ.ಎಸ್ ಪುಟ್ಟರಾಜು ವಿರುದ್ಧ ಹೀನಾಯವಾಗಿ ಸೋತಿದ್ದರು.
ಹಾಗೊಂದು ಸೋಲು ಕಂಡ ನಂತರವೂ ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ಪ್ರಭಾವ ಸ್ಥಾಪಿಸಿಕೊಂಡಿದ್ದ ರಮ್ಯಾ, ಐಟಿ ಸೆಲ್ ಮುಖ್ಯಸ್ಥೆಯಾಗಿಯೂ ಕಾರ್ಯನಿರ್ವಹಿಸಿದ್ದರು. ಈ ಹಂತದಲ್ಲಿ ಹಲವಾರು ನಿಷ್ಠುರವಾದ, ಜೀವಪರವಾದ ನಿಲುವುಗಳ ಮೂಲಕ ಒಂದಷ್ಟು ಜನಪ್ರಿಯತೆ ಮತ್ತು ವಿವಾದಗಳಿಗೂ ಕಾರಣರಾಗಿದ್ದರು. ಈ ಮೂಲಕ ಬಲಪಂಥೀಯರ ಕೆಂಗಣ್ಣಿಗೂ ಗುರಿಯಾಗಿದ್ದರೂ. ಇದೇನೇ ಆದರೂ ತಾನು ನಂಬಿದ ಸಿದ್ಧಾಂತಗಳಿಗೆ, ತಾನು ಪ್ರತಿಪಾದಿಸಿದ ವಿಚಾರಗಳಿಗೆ ಬದ್ಧರಾಗುಳಿಯುವ ಮೂಲಕ ಮನ್ನಣೆ ಗಳಿಸಿಕೊಂಡಿದ್ದರು. ಇದರಾಚೆಗೆ ರಾಜಕೀಯವಾಗಿಯೂ ರಮ್ಯಾ ಬಗ್ಗೆ ನಾನಾ ರೂಮರ್‌ಗಳು ಕೇಳಿ ಬರಲಾರಂಭಿಸಿದ್ದವು. ಹೈಕಮಾಂಡಿನೊಂದಿಗೆ ರಮ್ಯಾ ಮುನಿಸಿಕೊಂಡಿದ್ದಾರೆಂಬ ಮಾತೂ ಕೇಳಿ ಬಂದಿತ್ತು.
ಆದರೆ, ರಾಜಕೀಯವಾಗಿ ನಾನಾ ಮಹತ್ವಾಕಾಂಕ್ಷೆ ಇಟ್ಟುಕೊಂಡಿರುವ ರಮ್ಯಾ, ಅದಕ್ಕೆ ವೇದಿಕೆ ಗಟ್ಟಿಗೊಳಿಸಿಕೊಳ್ಳುತ್ತಲೇ ಸಾಗಿ ಬರುತ್ತಿದ್ದಾರೆ. ಈವತ್ತಿಗೆ ರಮ್ಯಾ ನಿರ್ಮಾಪಕಿಯಾಗಿ ಮರಳಿರೋದರಿಂದ ಆಕೆ ರಾಜಕೀಯ ರಂಗದಿಂದ ನಿರ್ಗಮಿಸಿದ್ದಾರೆಂದುಕೊಂಡರೆ ಅದು ಮೂರ್ಖತನವಾದೀತು. ಯಾಕೆಂದರೆ, ನಿರ್ಮಾಪಕಿಯಾಗಿ ಮರಳಿದ್ದರ ಹಿಂದೆಯೂ ರಾಜಕೀಯ ಲೆಕ್ಕಾಚಾರಗಳಿದ್ದಾವೆ. ಆಪ್ತ ವಲಯವೇ ಹೇಳುವ ಪ್ರಕಾರ, ನಿರ್ಮಾಪಕಿಯಾಗಿ ಚಿತ್ರರಂಗದಲ್ಲಿ ಮುಂದುವರೆಯಬೇಕೆಂಬ ಆಸೆ ರಮ್ಯಾಗಿದೆಯೇ ಹೊರತು ಅಲ್ಲಿ ಸಕ್ರಿಯವಾಗಿ ನೆಲೆಗೊಳ್ಳುವ ಯಾವ ಇರಾದೆಯೂ ಇದ್ದಂತಿಲ್ಲ.
ಹಾಗಾದರೆ, ರಮ್ಯಾ ಮುಂದಿನ ನಡೆಯೇನು? ರಾಜಕೀಯವಾಗಿ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಅಂತೆಲ್ಲ ಪ್ರಶ್ನೆಗಳೇಳುತ್ತವೆ. ಅದಕ್ಕುತ್ತರವಾಗಿ ನಿಲ್ಲುವುದು ಇನ್ನೆರಡು ವರ್ಷಗಳ ಬಳಿಕ ಎದುರುಗೊಳ್ಳಲಿರುವ ಲೋಕಸಭಾ ಚುನಾವಣೆ. ಈ ಹಿಂದೆ ಕಾಂಗ್ರೆಸ್ ಐಟಿ ಸೆಲ್ ಮುಖ್ಯಸ್ಥೆಯಾಗಿ, ಅದರಿಂದ ನಿರ್ಗಮಿಸಿದ್ದ ರಮ್ಯಾ ಕಾಂಗ್ರೆಸ್‌ನೊಂದಿಗಿನ ಸಂದಂಭ ಕಡಿದುಕೊಂಡಿದ್ದಾರೆಂಬ ಸುದ್ದಿ ಹಬ್ಬಿತ್ತು. ಆ ಬಗ್ಗೆ ಯಾವ ಪ್ರತಿಕ್ರಿಯೆಗಳನ್ನೂ ನೀಡದೆ ಆಕೆ ತನ್ನ ರಾಜಕೀಯ ಭವಿಷ್ಯವನ್ನು ಗಟ್ಟಿಗೊಳಿಸಿಕೊಳ್ಳೋದರತ್ತ ಗಮನ ಕೇಂದ್ರೀಕರಿಸಿದ್ದರು. ಒಂದು ಮೂಲದ ಪ್ರಕಾರ ರಮ್ಯಾ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದಲೇ ಕಣಕ್ಕಿಳಿಯಲಿದ್ದಾರೆ. ಆ ಚುನಾವಣೆಯನ್ನು ಜೈಸಿಕೊಳ್ಳಲು ಬೇಕಾದ ಸಕಲ ತಯಾರಿಗಳನ್ನೂ ಕೂಡಾ ಈಗಾಗಲೇ ಮಾಡಿಕೊಂಡಿದ್ದಾರೆ. ರಾಜ್ಯ ನಾಯಕರ ಕಡೆಯಿಂದ ಒಂದು ವೇಳೆ ಪ್ರತಿರೋಧ ಕೇಳಿ ಬಂದರೂ, ಅನಾಯಾಸವಾಗಿ ಟಿಕೆಟು ಪಡೆದು ದಕ್ಕಿಸಿಕೊಳ್ಳಲೂ ಆಕೆ ಸನ್ನದ್ಧರಾಗಿದ್ದಾರೆ.
ಈಗ ನಿರ್ಮಾಪಕಿಯಾಗಿ ಅವತರಿಸಿದ್ದರೂ ರಮ್ಯಾರ ಪ್ರಧಾನ ಆಸಕ್ತಿ ರಾಜಕೀಯವೇ. ಸಂಸದೆಯಾಗಿ ಮತ್ತೆ ಆಯ್ಕೆಯಾಗಿ ರಾಜಕೀಯವಾಗಿ ಎತ್ತರಕ್ಕೇರುವ ಆಕಾಂಕ್ಷೆ ರಮ್ಯಾಗಿದೆ. ಎಲ್ಲವೂ ಜಾತಿ ಧರ್ಮಗಳ ಸಂಕುಚಿತ ಮನೋಭಾವದಿಂದ ಕೂಡಿರುವ ಈ ದಿನಮಾನದಲ್ಲಿ ಜೀವಪರ ನಿಲುವಿನ ರಮ್ಯಾ ರಾಜಕೀಯವಾಗಿ ಅಧಿಕಾರ ಕೇಂದ್ರಕ್ಕೆ ಬರುವ ಜರೂರತ್ತಿರೋದು ನಿಜ. ಕೆವಲೊಮ್ಮೆ ಜಗಳಗಂಟಿಯಾಗಿ, ಮತ್ತೆ ಕೆಲವೊಮ್ಮೆ ಮೆಚ್ಯೂರಿಟಿ ಇಲ್ಲದ ಬಾಲಿಷ ವ್ಯಕ್ತಿತ್ವವಾಗಿ ಕಾಣಿಸುತ್ತಿದ್ದ ರಮ್ಯಾ ಇತ್ತೀಚೆಗೆ ಒಂದಷ್ಟು ಪಕ್ವಗೊಂಡಂತಿದೆ. ತನಗೆ ಎಲ್ಲವನ್ನೂ ನೀಡಿದ ಚಿತ್ರರಂಗಕ್ಕೆ ಏನಾದರೊಂದು ಕೊಡುಗೆ ಕೊಡುವ, ಅದರ ಭಾಗವಾಗಿ ಮುಂದುವರೆಯುವ ಉದ್ದೇಶದಿಂದಷ್ಟೇ ಆಕೆ ನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ. ಅವರ ಪ್ರಧಾನ ಉದ್ದೇಶ ಸುತ್ತುತ್ತಿರೋದು ಪೂರ್ಣಪ್ರಮಾಣದ ರಾಜಕಾರಣಿಯಾಗುವತ್ತಲೇ. ಸದ್ಯಕ್ಕೆ ಒಂದಷ್ಟು ತಿಂಗಳ ಹಿಂದೆ ಆಪಲ್ ಬಾಕ್ಸ್ ಓಪನ್ ಆಗಿದೆ. ಶೀಘ್ರದಲ್ಲಿಯೇ ರಮ್ಯಾ ರಾಜಕೀಯ ನಡೆಯೂ ಸ್ಪಷ್ಟವಾಗಿ ಅನಾವರಣಗೊಳ್ಳಲಿದೆ.
ಈ ನಡುವೆ ರಮ್ಯಾ ಹೋದಲ್ಲಿ ಬಂದಲ್ಲಿ ಮತ್ತೆ ನಟಿಸೋದ್ಯಾವಾಗ ಅಂತೊಂದು ಪ್ರಶ್ನೆ ಎದುರಾಗುತ್ತಿದೆ. ಈಕೆ ನಟಿಯಾಗಿ ನೇಪಥ್ಯಕ್ಕೆ ಸರಿದು ಭರ್ತಿ ದಶಕವೇ ಕಳೆದಿದ್ದರೂ ಕೂಡಾ ಫ್ಯಾನ್ ಬೇಸ್ ಎಂಬುದು ಈ ಕ್ಷಣಕ್ಕೂ ಕಡಿಮೆಯಾಗಿಲ್ಲ. ಹಾಗೆ ಊರು ತುಂಬೆಲ್ಲ ಹಬ್ಬಿಕೊಂಡಿರುವ ಮೋಹಕತಾರೆಯ ಅಭಿಮಾನಿಗಳು, ತಮ್ಮಿಷ್ಟದ ನಟಿಯನ್ನು ಮತ್ತೆ ನಾಯಕಿಯಾಗಿ, ಭಿನ್ನವಾದ ಪಾತ್ರದಲ್ಲಿ ನೋಡಲು ಹಾತೊರೆಯುತ್ತಿದ್ದಾರೆ. ತೀರಾ ಇತ್ತೀಚಿನವರೆಗೂ ಕೂಡಾ ರಮ್ಯಾ ಇಂಥಾ ಅಭಿಮಾನಿಗಳ ಮನದಾಸೆಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೀಗ ಕಡೆಗೂ ಅಭಿಮಾನಿಗಳ ಬಹುದಿನಗಳ ಆಸೆಯನ್ನು ಪೂರೈಸುವಂಥಾ ನಿರ್ಧಾರವನ್ನು ರಮ್ಯಾ ಅವರು ತಳೆದಂತಿದೆ. ಈಗ ಹಬ್ಬಿಕೊಂಡಿರುವ ಆಪ್ತ ವಲಯದ ಪಲ್ಲಟಗಳನ್ನು ನೋಡಿದರೆ ಶೀಘ್ರದಲ್ಲಿಯೇ ಅಭಿಮಾನಿಗಳ ಪಾಲಿಗೆ ಹಬ್ಬವಾಗುವಂಥಾ ಎಲ್ಲ ಲಕ್ಷಣಗಳೂ ಢಾಳಾಗಿಯೇ ಕಾಣಿಸಲಾರಂಭಿಸಿದೆ.
ಹಾಗೆ ಹಬ್ಬಿಕೊಂಡಿರುವಂಥಾ ಸುದ್ದಿಯೊಂದರ ಪ್ರಕಾರವಾಗಿ ನೋಡೋದಾದರೆ, ಶೀಘ್ರದಲ್ಲಿಯೇ ರಮ್ಯಾ ದಿವ್ಯಾ ಸ್ಪೊಂದನ ಅವರು ನಟಿಯಾಗಿ ಬಣ್ಣ ಹಚ್ಚೋದು ಖರೆ. ತಾನು ರಾಜಕಾರಣಿಯಾಗಿ ಬದಲಾದರೂ, ಒಂದು ಸಿದ್ಧಾಂತವನ್ನು ಪ್ರತಿಪಾದಿಸಿದರೂ ಕೂಡಾ ತನ್ನ ಅಭಿಮಾನಿ ಬಳಗೆ ಹಾಗೆಯೇ ಉಳಿದುಕೊಂಡಿರೋದನ್ನು ಕಂಡು ರಮ್ಯಾ ಭಾವುಕರಾಗಿದ್ದಾರೆ. ಅವರ ಆಪ್ತ ವಲಯದ ಕೆಲ ಮಂದಿ ಕೂಡಾ ಇದು ಕೆಲವೇ ಕೆಲ ನಟಿಯರಿಗೆ ಮಾತ್ರವೇ ಸಿಗಬಹುದಾದ ಸೌಭಾಗ್ಯವಾದ್ದರಿಂದ ಅದನ್ನು ವ್ಯರ್ಥವಾಗಿಸದಂತೆ ಸಲಹೆ ನೀಡಿದ್ದಾರಂತೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ರಮ್ಯಾ ನಟಿಯಾಗಿ ಮತ್ತೆ ಬಣ್ಣ ಹಚ್ಚಲು ತಯಾರಾಗಿದ್ದಾರೆ. ಇನ್ನೂ ವಿಶೇಷಜವೆಂದರೆ, ಈ ಸಿನಿಮಾ ಅವರ ನಿಮ,ಆಣ ಸಂಸ್ಥೆಯಾದ ಆಪಲ್ ಬಾಕ್ಸ್ ನಿಂದ ನಿರ್ಮಾಣಗೊಂಡರೂ ಅಚ್ಚರಿಯೇನಿಲ್ಲ!