ಸ್ಯಾಂಡಲ್‍ವುಡ್ ಕ್ವೀನ್ ರಮ್ಯಾಗೆ ಹೃದಯಾಘಾತ ಸಂಭವಿಸಿದ್ದು ಸಾವನ್ನಪ್ಪಿದ್ದಾರೆಂಬ ಸುದ್ದಿ ಇವತ್ತು ಬೆಳ್ಳಂಬೆಳಗ್ಗೆ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಸೋಷಿಯಲ್ ಮೀಡಿಯಾದಲ್ಲಿ ಏಕಾಏಕಿ ಹುಟ್ಟಿಕೊಂಡ ಈ ಸುದ್ದಿ ಕೇಳಿ ಅವರ ಅಭಿಮಾನಿಗಳನ್ನ ಮಾತ್ರವಲ್ಲ ಎಲ್ಲರನ್ನೂ ಆಘಾತಕ್ಕೆ ದೂಡಿತ್ತು. ತಕ್ಷಣಕ್ಕೆ ಅವರ ಆಪ್ತರನ್ನ ಸಂಪರ್ಕಿಸಿ ಮಾಹಿತಿ ಕಲೆಹಾಕಿದಾಗ ರಮ್ಯಾ ಅವರು ಆರಾಮಾಗಿದ್ದಾರೆ ಎನ್ನುವ ವಿಚಾರ ಗೊತ್ತಾಯ್ತು.
ಆದರೂ ಕೂಡ ಅವರ ಅಭಿಮಾನಿ ವಲಯ ಆತಂಕಕ್ಕೊಳಗಾಗಿತ್ತು. ಹೀಗಾಗಿ, ನಟಿ ರಮ್ಯಾ ಅವರೇ ಸೋಷಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಹಾಕಿದ್ದಾರೆ. ವಿದೇಶದಲ್ಲಿ ತಾವು ತಂಗಿರುವ ಜಾಗದಲ್ಲಿ ಕಿಟಕಿಯಿಂದ ಒಂದು ಫೋಟೋ ಕ್ಲಿಕ್ಕಿಸಿ ಅದನ್ನ ತಮ್ಮ ಇನ್ಸ್‍ಟಾಗ್ರಾಮ್ ಸ್ಟೋರಿಸ್‍ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನ ನೋಡಿದ್ಮೇಲೆ ಮೋಹಕತಾರೆ ರಮ್ಯಾ ಫ್ಯಾನ್ಸ್ ನಿಟ್ಟುಸಿರು ಬಿಟ್ಟಿದ್ದಾರೆ.
ಅಷ್ಟಕ್ಕೂ, ನಟಿ ರಮ್ಯಾಗೆ ಹಾರ್ಟ್ ಅಟ್ಯಾಕ್ ಆಗಿದೆ, ಅವರು ಕೊನೆಯುಸಿರೆಳೆದಿದ್ದಾರೆ ಅಂತ ಸುಳ್ಳು ಸುದ್ದಿ ಹಬ್ಬಿಸಿದ ಕಿಡಿಗೇಡಿಗಳು ಯಾರ್ಯಾರು ಅನ್ನೋದು ಗೊತ್ತಿಲ್ಲ. ಮೂಲಗಳ ಪ್ರಕಾರ ರಮ್ಯಾ ಹೆಸರಿನ ತಮಿಳು ಕಿರುತೆರೆ ನಟಿಯೊಬ್ಬರು ಮೃತಪಟ್ಟಿದ್ದಾರಂತೆ. ಈ ಸುದ್ದಿನಾ ಹಂಚಿಕೊಳ್ಳುವಾಗ ಕನ್‍ಫ್ಯೂಸ್ ಆಗಿ ತಮಿಳು ನಟಿ ರಮ್ಯಾ ಫೋಟೋ ಬದಲಿಗೆ ಕನ್ನಡದ ನಟಿ ರಮ್ಯಾ ಅವರ ಫೋಟೋ ಬಳಸಿಕೊಂಡು ಸುದ್ದಿ ಹಬ್ಬಿಸಲಾಗಿದೆ ಎನ್ನಲಾಗ್ತಿದೆ. ಅದೇನೇ ಇರಲಿ ಸುದ್ದಿನಾ ಹೇಳುವಾಗ, ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವಾಗ ಮೈಯೆಲ್ಲಾ ಕಣ್ಣಾಗಿದ್ದರೆ ಒಳೀತು. ಇಲ್ಲಾಂದರೆ ಇಂತಹ ಯಡವಟ್ಟುಗಳು ಸಂಭವಿಸುತ್ತವೆ. ಇದರಿಂದ ಸುದ್ದಿಯಾದ ನಟ-ನಟಿಯರನ್ನು ಆರಾಧಿಸುವ ಅಭಿಮಾನಿಗಳ ಹೃದಯಬಡಿತಕ್ಕೆ ತೊಂದರೆಯಾಗುತ್ತೆ. ಇನ್ಮುಂದೆಯಾದರೂ ಈ ರೀತಿಯ ಯಡವಟ್ಟುಗಳು ಆಗದಿರಲಿ. ಜೀವಂತವಾಗಿದ್ದವರನ್ನ ಯಾರೊಬ್ಬರು ಕೊಂದು ಶ್ರದ್ದಾಂಜಲಿ ಅರ್ಪಿಸದಿರಲಿ ಎಂದು ಹಾರೈಸೋಣ
ಸದ್ಯ ರಮ್ಯಾ ಯೂರೋಪ್ ಪ್ರವಾಸದಲ್ಲಿದ್ದಾರೆ. ಅಲ್ಲಿ ಸುತ್ತಾಡುತ್ತಾ, ಹಲವರನ್ನು ಭೇಟಿ ಮಾಡುತ್ತಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅವರು ಹಲವು ಪೋಸ್ಟ್ಗಳನ್ನು ಹಾಕುತ್ತಿದ್ದಾರೆ. ಸದ್ಯದಲ್ಲೇ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ. ಉತ್ತರಾಕಾಂಡ ಸಿನಿಮಾದಲ್ಲೂ ನಟಿ ಬಣ್ಣ ಹಚ್ಚುತ್ತಿದ್ದು, ಸಿನಿಮಾ ತಂಡವನ್ನು ಸೇರಲಿದ್ದಾರೆ.