ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಸಿನಿಮಾಗಳಲ್ಲಿ ʻಉತ್ತರಕಾಂಡʼ (Uttarakaanda)ಕೂಡ ಒಂದು. ಟಗರು ಕಾಂಬೋ ಮತ್ತೆ ಒಂದಾಗಿರೋದಕ್ಕೆ, ಶಿವಣ್ಣ (Shivarajkumar) ಹಾಗೂ ಡಾಲಿ ಧನಂಜಯ್ (DollyDhananjaya) ಜೊತೆ ಮೋಹಕತಾರೆ ರಮ್ಯಾ (Ramya) ಕಣಕ್ಕಿಳಿಯುತ್ತಿರುವುದಕ್ಕೆ ʻಉತ್ತರಕಾಂಡʼ ಸಿನಿಮಾ ಮೇಲಿನ ನಿರೀಕ್ಷೆ ಡಬ್ಬಲ್ ಅಲ್ಲ ತ್ರಿಬಲ್ ಆಗಿದೆ. ಬಿಗ್‌ಸ್ಕ್ರೀನ್ ಮೇಲೆ ಟಗರು-ಡಾಲಿ ಜುಗಲ್‌ಬಂಧಿ ನೋಡೋದಕ್ಕೆ ಎಷ್ಟು ಜನ ಫ್ಯಾನ್ಸ್ ಕಣ್ಣಿಗೆ ಎಣ್ಣೆಬಿಟ್ಕೊಂಡು ಕಾಯ್ತಿದ್ದಾರೋ, ಅಷ್ಟೇ ಮಂದಿ ಸಿನಿಮಾ ಪ್ರೇಮಿಗಳು ಬೆಳ್ಳಿತೆರೆ ಮೇಲೆ ಊರಿಗೊಬ್ಳೆ ಪದ್ಮಾವತಿನಾ ಕಣ್ತುಂಬಿಕೊಳ್ಳೋದಕ್ಕೆ ಕಾತುರರಾಗಿದ್ದಾರೆ. ಶೂಟಿಂಗ್ ಯಾವಾಗ ಶುರು ಆಗುತ್ತೆ? ಈ ಮೂವರು ಧ್ರುವತಾರೆಯರ ಲುಕ್ಕು-ಗೆಟಪ್ ಹೇಗಿರುತ್ತೆ ಅಂತ ಕಲಾಭಿಮಾನಿಗಳು ಕಣ್ಣರಳಿಸಿರುವಾಗಲೇ ʻಉತ್ತರಕಾಂಡʼ ಸಿನಿಮಾದ ಬಗ್ಗೆ ಖುಷಿ ಸುದ್ದಿಯೊಂದು ಕೇಳಿಬಂದಿದೆ.
ಏನದು ತಾಜಾ ಸಮಾಚಾರ ಅಂತೀರಾ? ಉತ್ತರಕಾಂಡ (Uttarakaanda) ಸಿನಿಮಾದ ಸೆಟ್ ವರ್ಕ್ ಶುರುವಾಗಿದೆಯಂತೆ. ಏಪ್ರಿಲ್‌ನಿಂದ ಶೂಟಿಂಗ್ ಹೊರಡಲು ಫಿಲ್ಮ್ ಟೀಮ್ ತಯಾರಿ ನಡೆಸಿದೆಯಂತೆ. ಹೌದು, ಬರೋ ತಿಂಗಳು ಸಿನಿಮಾದ ಶೂಟಿಂಗ್ ಶುರುವಾಗಲಿದ್ದು, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ನಟರಾಕ್ಷಸ ಡಾಲಿ ಧನಂಜಯ್ ಜೊತೆ ಲಕ್ಕಿ ಬೆಡಗಿ ರಮ್ಯಾ ಕಣಕ್ಕಿಳಿಯುತ್ತಿದ್ದಾರಂತೆ. ಆರ್ಯನ್ ಸಿನಿಮಾದಲ್ಲಿ ಶಿವಣ್ಣ ಹಾಗೂ ರಮ್ಯಾ ಜೋಡಿನಾ ಕಣ್ತುಂಬಿಕೊಂಡಿದ್ರೂ ಕೂಡ, ʻಉತ್ತರಕಾಂಡʼ (Uttarakaanda) ಸಿನಿಮಾದಲ್ಲಿ ಕರುನಾಡ ಚಕ್ರವರ್ತಿ ಜೊತೆಯಾಗಿ ಗೌರಮ್ಮ ನನ್ನ ಕಾಣಲು ಒಂಟಿಕಾಲಿನಲ್ಲಿ ನಿಂತಿದ್ದಾರೆ. ಅಟ್ ದಿ ಸೇಮ್ ಟೈಮ್ ನಟರಾಕ್ಷಸ ಡಾಲಿ ಹಾಗೂ ರಮ್ಯಾ ಜೋಡಿ ತೆರೆಮೇಲೆ ಹೇಗ್ ಕಾಣಬಹುದು ಅಂತ ಪ್ರೇಕ್ಷಕರು ಕುತೂಹಲಭರಿತರಾಗಿದ್ದಾರೆ.
ವಿಶೇಷ ಅಂದರೆ ಉತ್ತರಕಾಂಡ (Uttarakaanda) ನಟಿ ರಮ್ಯಾ ಅವ್ರ ಪಾಲಿಗೆ ಕಂಬ್ಯಾಕ್ ಸಿನಿಮಾವಾಗಲಿದೆ. ನಾಗರಹಾವು ಹಾಗೂ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರದಲ್ಲಿ ಲಕ್ಕಿ ಬೆಡಗಿ ಸ್ಪೆಷಲ್ ಅಪಿಯರೆನ್ಸ್ ಮಾಡಿದ್ದರು. ಆದರೆ, ಫುಲ್ ಪ್ಲೆಡ್ಜ್ ಆಗಿ ಬೆಳ್ಳಿತೆರೆ ಮೇಲೆ ಮಿಂಚಿ ಭರ್ತಿ 10 ವರ್ಷಗಳು ಕಳೆದಿವೆ. 2014ರಲ್ಲಿ ಶಿವಣ್ಣ ಜೊತೆ ಆರ್ಯನ್ ಸಿನ್ಮಾವೇ ಕೊನೆ. ಅಲ್ಲಿಂದ ಪದ್ಮಾವತಿ ಸಿನಿಮಾದಿಂದ ದೂರ ಉಳಿದು ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದರು. ಕಳೆದ ವರ್ಷ ನಿರ್ಮಾಪಕಿಯಾಗಿ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಿದ್ದಾರೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಅವರದ್ದೇ ನಿರ್ಮಾಣದ ಚೊಚ್ಚಲ ಸಿನಿಮಾ ʻಸ್ವಾತಿ ಮುತ್ತಿನ ಮಳೆ ಹನಿಯೇʼ ಮೂಲಕ ಬೆಳ್ಳಿತೆರೆಗೆ ರಿಟರ್ನ್ ಆಗ್ಬೇಕಿತ್ತು. ಆದರೆ, ಕಾರಣಾಂತರಗಳಿಂದ ಬರೀ ನಿರ್ಮಾಪಕಿಯಾಗಿ ಉಳಿದರು. ಇದೀಗ ʻಉತ್ತರಕಾಂಡʼ ಚಿತ್ರದ ಮುಖೇನ ಗಂಧದಗುಡಿಗೆ ಗ್ರ್ಯಾಂಡ್ ಆಗಿ ರೀಎಂಟ್ರಿ ಕೊಡಲು ಸಜ್ಜಾಗಿದ್ದಾರೆ.
‘ಉತ್ತರಕಾಂಡ’ (Uttarakaanda) ಚಿತ್ರವು ಉತ್ತರ ಕರ್ನಾಟಕದ ಪ್ರದೇಶದಲ್ಲಿ ನಡೆಯುವ ಕಥೆಯಾಗಿದ್ದು, ಗಬ್ರು ಸತ್ಯ ಎಂಬ ಗ್ಯಾಂಗ್ ಸ್ಟರ್ ಪಾತ್ರದಲ್ಲಿ ಧನಂಜಯ್ ಕಾಣಿಸಿಕೊಂಡಿದ್ದಾರೆ. ‘ಕೆ ಆರ್ ಜಿ ಸ್ಟುಡಿಯೋಸ್’ ಲಾಂಛನದಲ್ಲಿ ಕಾರ್ತಿಕ್ ಗೌಡ ಮತ್ತು ಯೋಗಿ ಜಿ. ರಾಜ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ರೋಹಿತ್ ಪದಕಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಅದ್ವೈತ ಗುರುಮೂರ್ತಿ ಛಾಯಾಗ್ರಹಣ ಮತ್ತು ಚರಣ್ ರಾಜ್ ಸಂಗೀತ ಈ ಚಿತ್ರಕ್ಕಿದೆ. ಈಗಾಗಲೇ ಬಿಡುಗಡೆಯಾಗಿರುವ ಗಬ್ರು ಸತ್ಯ ಪಾತ್ರ ಪರಿಚಯದ ಟೀಸರ್ ಸಖತ್ ಸದ್ದು ಮಾಡಿದೆ. ಶಿವಣ್ಣ ಹಾಗೂ ರಮ್ಯಾ ಎಂಟ್ರಿಯಿಂದ ಸಿನಿಮಾಗೆ ಮತ್ತೊಂದು ತೂಕ ಬಂದಿದೆ.