‘ಸಂಜು ವೆಡ್ಸ್ ಗೀತಾ’ ಸಿನಿಮಾ ಅಂದ್ರೆ ಮೊದಲಿಗೆ ನೆನಪಿಗೆ ಬರೋದು ಅದರ ಸೂಪರ್ ಹಿಟ್ ಮೆಲೋಡಿ ಹಾಡುಗಳು ಮತ್ತು ಮೋಹಕತಾರೆ ರಮ್ಯಾ- ಶ್ರೀನಗರ ಕಿಟ್ಟಿ ಜೋಡಿ. ಇಂದಿಗೂ ಆ ಹಾಡುಗಳನ್ನು ಕೇಳಿ ಎಂಜಾಯ್ ಮಾಡುವ, ರಮ್ಯಾ- ಶ್ರೀನಗರ ಕಿಟ್ಟಿ ಕ್ಯೂಟ್ ಜೋಡಿಯನ್ನು ಮೆಚ್ಚಿಕೊಂಡಿರುವ ಅಭಿಮಾನಿಗಳ ಸಂಖ್ಯೆ ಅಪಾರ. ಮತ್ತೊಮ್ಮೆ ‘ಸಂಜು ವೆಡ್ಸ್ ಗೀತಾ’ ಸಿನಿಮಾ ಸೀರಿಸ್ ಮುಂದುವರೆಯಬಹುದು ಎಂಬ ನಿರೀಕ್ಷೆ ಸಿನಿಪ್ರಿಯರಲ್ಲಿದ್ದರೂ, ಅದು ಸಾಧ್ಯವಾಗಿರಲಿಲ್ಲ.
ಕೊನೆಗೂ, ಅಂದರೆ ಸುಮಾರು 12 ವರ್ಷಗಳ ನಂತರ, ‘ಸಂಜು ವೆಡ್ಸ್ ಗೀತಾ’ ಸಿನಿಮಾದ ಸೀಕ್ವೇಲ್ ಆಗಿ ‘ಸಂಜು ವೆಡ್ಸ್ ಗೀತಾ-2’ ಸಿನಿಮಾ ತೆರೆಗೆ ತರುವ ಕೆಲಸಕ್ಕೆ ಚಾಲನೆ ಸಿಕ್ಕಿದೆ. ಇನ್ನು ‘ಸಂಜು ವೆಡ್ಸ್ ಗೀತಾ’ ಸಿನಿಮಾವನ್ನು ನಿರ್ದೇಶಿಸಿದ್ದ ನಾಗಶೇಖರ್ ಅವರೇ ‘ಸಂಜು ವೆಡ್ಸ್ ಗೀತಾ-2’ ಸಿನಿಮಾವನ್ನೂ ನಿರ್ದೇಶನ ಮಾಡುತ್ತಿದ್ದಾರೆ. ‘ಸಂಜು ವೆಡ್ಸ್ ಗೀತಾ’ ಸಿನಿಮಾದ ಮೊದಲ ಭಾಗದಲ್ಲಿದ್ದ ಬಹುತೇಕ ಎಲ್ಲ ಕಲಾವಿದರೂ ಈ ಸಿನಿಮಾದಲ್ಲೂ ಇರುತ್ತಾರೆ. ಆದರೆ ನಾಯಕಿ ರಮ್ಯಾ ಅವರನ್ನು ಮಾತ್ರ ಸಿನಿಮಾದಿಂದ ಕೈ ಬಿಡಲಾಗಿದೆ!
‘ಸಂಜು ವೆಡ್ಸ್ ಗೀತಾ’ ಸಿನಿಮಾದಲ್ಲಿ ರಮ್ಯಾ ನಾಯಕಿಯಾಗಿದ್ದು, ‘ಸಂಜು ವೆಡ್ಸ್ ಗೀತಾ-2’ ಸಿನಿಮಾದಲ್ಲಿ ರಮ್ಯಾ ಬದಲು ರಚಿತಾ ರಾಮ್ ನಾಯಕಿಯಾಗಿ ಚಿತ್ರತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಅಂದಹಾಗೆ, ರಮ್ಯಾ ಬದಲು ರಚಿತಾ ರಾಮ್ ನಾಯಕಿಯಾಗಿ ಬದಲಾಗೋದಕ್ಕೂ ಬಲವಾದ ಕಾರಣವಿದೆಯಂತೆ.
ಅದೇನು ಎನ್ನುವುದರ ಬಗ್ಗೆ ಮಾತನಾಡುವ ನಾಗಶೇಖರ್, ‘ಸುಮಾರು 5 ವರ್ಷಗಳ ಹಿಂದೆಯೇ ಈ ಸಿನಿಮಾ ಪ್ರಾರಂಭಿಸಬೇಕಾಗಿತ್ತು. ಆದರೆ ನಾನು ತೆಲುಗು, ತಮಿಳು ಕಡೆ ಹೋಗಿದ್ದರಿಂದ ಆಗಲಿಲ್ಲ. ರಮ್ಯಾ ಅವರೇ ಈ ಸಿನಿಮಾದಲ್ಲೂ ಆ್ಯಕ್ಟ್ ಮಾಡಬೇಕಿತ್ತು. ಸಿನಿಮಾದ ಪಾತ್ರಕ್ಕಾಗಿ ಅವರಿಗೇ ಮೊದಲು ಆಫರ್ ಕೂಡ ನೀಡಿದ್ದೆವು. ಅವರು ಕೂಡ ಸಿನಿಮಾದ ಪಾತ್ರ ಕೇಳಿ ತುಂಬ ಖುಷಿಪಟ್ಟಿದ್ದರು. ಆದರೆ ಸದ್ಯಕ್ಕೆ ತಾವು ರಾಜಕೀಯ ಮತ್ತು ಒಂದಷ್ಟು ವೈಯಕ್ತಿಕ ಕೆಲಸಗಳಲ್ಲಿ ಬಿಝಿ ಇರುವುದರಿಂದ ಸಿನಿಮಾ ಮಾಡಲಾಗುತ್ತಿಲ್ಲ. ಹಾಗಾಗಿ ನನ್ನ ಬದಲು ಬೇರೆಯವರನ್ನೆ ಆಯ್ಕೆ ಮಾಡಿಕೊಳ್ಳಿ ಎಂದರು. ಅವರ ಬದಲಾಗಿ ಈ ಪಾತ್ರಕ್ಕೆ ಮೊದಲು ನನ್ನ ಕಣ್ಣಮುಂದೆ ಬಂದದ್ದೇ ರಚಿತಾ ರಾಮ್. ತಮ್ಮ ಅದ್ಭುತವಾದ ಅಭಿನಯದ ಮೂಲಕವೇ ಅವರು ಹೆಸರು ಮಾಡಿದವರು. ನನ್ನ ಚಿತ್ರದಲ್ಲಿ ಈ ಪಾತ್ರಕ್ಕೆ ಜೀವ ತುಂಬುವುದೇ ಅಭಿನಯ. ಹೀಗಾಗಿ ಅಂತಿಮವಾಗಿ ರಮ್ಯಾ ಅವರ ಜಾಗಕ್ಕೆ ರಚಿತಾ ರಾಮ್ ಅವರನ್ನು ಆಯ್ಕೆ ಮಾಡಿಕೊಂಡೆವು’ ಎಂದು ವಿವರಣೆ ಕೊಡುತ್ತಾರೆ.