ಕಿರುತೆರೆಯ ‘ಕನ್ನಡತಿ’ ಧಾರಾವಾಹಿ ಖ್ಯಾತಿಯ ನಟ ಕಿರಣ್ ರಾಜ್ ನಾಯಕನಾಗಿ ನಟಿಸಿರುವ ‘ರಾನಿ’ (Ronny) ಸಿನಿಮಾದ ಕೆಲಸಗಳು ಜೋರಾಗಿ ನಡೆಯುತ್ತಿದೆ. ಇದರ ನಡುವೆಯೇ ‘ರಾನಿ’ ಚಿತ್ರತಂಡದ ಕಡೆಯಿಂದ ಹೊಸ ಸುದ್ದಿಯೊಂದು ಹೊರಬಂದಿದೆ. ಅದೇನೆಂದರೆ, ‘ರಾನಿ’ ಸಿನಿಮಾದ ಆಡಿಯೋ ಹಕ್ಕಗಳನ್ನು ಪ್ರತಿಷ್ಠಿತ ಆಡಿಯೋ ಕಂಪೆನಿ ‘ಟಿ-ಸೀರಿಸ್’ ಖರೀದಿಸಿದೆಯಂತೆ.
ಈ ಸುದ್ದಿಯನ್ನು ಖಚಿತಪಡಿಸಿರುವ ಚಿತ್ರತಂಡ, ‘ರಾನಿ’ ಸಿನಿಮಾದ ಆಡಿಯೋ ರೈಟ್ಸ್ ದೊಡ್ಡ ಮೊತ್ತಕ್ಕೆ ಮಾರಾಟವಾಗಿದೆ. ಭಾರತದ ಅತಿದೊಡ್ಡ ಆಡಿಯೋ ಕಂಪೆನಿ ತಮ್ಮ ಸಿನಿಮಾದ ಹಾಡುಗಳನ್ನು ಮೆಚ್ಚಿಕೊಂಡು, ಅದರ ರೈಟ್ಸ್ ಕೊಂಡುಕೊಂಡಿರುವುದು ನಮ್ಮ ತಂಡದ ಉತ್ಸಾಹ ಮತ್ತು ಸಿನಿಮಾದ ಮೇಲಿನ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದಿದೆ.
‘ರಾನಿ’ ಸಿನಿಮಾದ ಹಾಡುಗಳಿಗೆ ಮಣಿಕಾಂತ್ ಕದ್ರಿ ಸಂಗೀತ ಸಂಯೋಜಿಸಿದ್ದಾರೆ. ಸಿನಿಮಾದಲ್ಲಿ 5 ಹಾಡುಗಳಿದ್ದು, ‘ಕಾಂತರ’ ಖ್ಯಾತಿಯ ಪ್ರಮೋದ್ ಮರವಂತೆ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಕುನಾಲ್ ಗಾಂಜಾವಾಲ, ಹಂಸಿಕ ಐಯ್ಯರ್, ಶ್ವೇತಾ ಮೋಹನ್ ಮೊದಲಾಗ ಗಾಯಕರು ‘ರಾನಿ’ ಸಿನಿಮಾದ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ‘ರಾನಿ’ (Ronny) ಸಿನಿಮಾದ ಟೀಸರ್ ಸೋಶಿಯಲ್ ಮೀಡಿಯಾಗಳಲ್ಲಿ ಒಂದಷ್ಟು ಗಮನ ಸೆಳೆದಿತ್ತು. ಗುರುತೇಜ್ ಶೆಟ್ಟಿ ನಿರ್ದೇಶನದ ‘ರಾನಿ’ ಸಿನಿಮಾವನ್ನು ‘ಸ್ಟಾರ್ ಕ್ರಿಯೇಷನ್ಸ್’ ಬ್ಯಾನರ್ ನಲ್ಲಿ ಚಂದ್ರಕಾಂತ್ ಮತ್ತು ಉಮೇಶ್ ಹೆಗ್ಡೆ ನಿರ್ಮಾಣ ಮಾಡುತ್ತಿದ್ದಾರೆ.