ಕನ್ನಡದ ಸೂಪರ್ ಹಿಟ್ ಸಿನಿಮಾ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ತೆಲುಗಿಗೆ ‘ಬಾಯ್ಸ್ ಹಾಸ್ಟೆಲ್’ ಎಣಬ ಹೆಸರಿನಲ್ಲಿ ಡಬ್ ಆಗಿದೆ. ಇದೇ 26ಕ್ಕೆ ಆಂಧ್ರ ಮತ್ತು ತೆಲಂಗಾಣದಲ್ಲಿ ‘ಬಾಯ್ಸ್ ಹಾಸ್ಟೆಲ್’ ಸಿನಿಮಾ ಬಿಡುಗಡೆಯಾಗಲಿದೆ.
ನಿತಿನ್ ಕೃಷ್ಣಮೂರ್ತಿ ನಿರ್ದೇಶನದ ಚೊಚ್ಚಲ ಚಿತ್ರದಲ್ಲಿ ರಿಷಬ್ ಶೆಟ್ಟಿ, ದಿಗಂತ್, ಶೈನಿ ಶೆಟ್ಟಿ ಹಾಗೂ ಪವನ್ ಕುಮಾರ್ ಹಾಗೂ ರಮ್ಯಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇನ್ನು ‘ಬಾಯ್ಸ್ ಹಾಸ್ಟೆಲ್’ ತೆಲುಗು ಆವೃತ್ತಿಯಲ್ಲಿ ಕನ್ನಡದಲ್ಲಿ ಕಾಣಿಸಿಕೊಂಡಿದ್ದ ಬಹುತೇಕ ಕಲಾವಿದರ ಕಾಣಿಸಿಕೊಳ್ಳಲಿದ್ದು, ಅದರಲ್ಲಿ ರಮ್ಯಾ ಮಾತ್ರ ಮಿಸ್ ಆಗಿದ್ದಾರೆ!
ಹೌದು, ಕನ್ನಡದಲ್ಲಿ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾದಲ್ಲಿ ರಮ್ಯಾ ಮಾಡಿದ್ದ ಲೆಕ್ಚರರ್ ಪಾತ್ರವನ್ನು ತೆಲುಗಿನ ‘ಬಾಯ್ಸ್ ಹಾಸ್ಟೆಲ್’ ಸಿನಿಮಾದಲ್ಲಿ ಅಲ್ಲಿನ ನಟಿ ಕಂ ನಿರೂಪಕಿ ರಶ್ಮಿ ಗೌತಮ್ ಮಾಡಲಿದ್ದಾರೆ. ಚಿತ್ರತಂಡವೇ ಈ ಸುದ್ದಿಯನ್ನು ಬಹಿರಂಗಪಡಿಸಿದ್ದು, ಸಿನಿಮಾದಲ್ಲಿ ರಶ್ಮಿ ಗೌತಮ್ ಅವರ ಗೆಟಪ್ ಅನ್ನು ಬಿಡುಗಡೆಗೊಳಿಸಿದೆ.
ಈಗಾಗಲೇ ತೆಲುಗಿನಲ್ಲಿ ‘ಬಾಯ್ಸ್ ಹಾಸ್ಟೆಲ್’ ಸಿನಿಮಾದ ಟೈಟಲ್ ಸಾಂಗ್ ಬಿಡುಗಡೆಯಾಗಿದ್ದು, ತೆಲುಗು ಮಂದಿಯಿಂದ ಒಳ್ಳೆ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಕನ್ನಡದಲ್ಲಿ ಹಾಸ್ಟೆಲ್ ಹುಡುಗರ ಕಾಮಿಡಿ ಕ್ವಾಟ್ಲೆ ಪ್ರೇಕ್ಷಕರಿಗೆ ನಗುವಿನ ಕಚಗುಳಿ ಇಟ್ಟಿತ್ತು. ಇದೀಗ ಆಂಧ್ರ ಹಾಗೂ ತೆಲಂಗಾಣ ರಾಜ್ಯದಲ್ಲಿ ‘ಬಾಯ್ಸ್ ಹಾಸ್ಟೆಲ್’ ಎಷ್ಟರ ಮಟ್ಟಿಗೆ ಅಲ್ಲಿನ ಜನರ ಮನರಂಜಿಸುತ್ತಾರೆ ಎಂಬುದು ಇದೇ ತಿಂಗಳ ಕೊನೆಗೆ ಗೊತ್ತಾಗಲಿದೆ.