ಹಣದ ಥೈಲಿಯ ಹಬೆಯ ಜೊತೆಗೆ ಮನುಷ್ಯತ್ವವೂ ಉಸಿರಾಡುವುದು ವಿರಳ ವಿದ್ಯಮಾನ. ಅದರಲ್ಲಿಯೂ ಉದ್ಯಮಿಗಳೆನ್ನಿಸಿಕೊಂಡವರೆಲ್ಲ ಶ್ರೀಮಂತಿಕೆಯ ರೇಸಿಗೆ ನಿಲ್ಲುತ್ತಾರೆ. ಆಸುಪಾಸಿನಲ್ಲಿ ಸುಳಿಯುವ ಜೀವಗಳೆಲ್ಲ ಅವರ ಪಾಲಿಗೆ ಎದುರಾಳಿಗಳಾಗಿ ಕಾಣಿಸುತ್ತಾರೆ. ತನ್ನೊಂದಿಗೆ ರೇಸಿಗಿಳಿದಾತ ಮುಗ್ಗರಿಸಿದಾಗ ಕೈಚಾಚುವ ಔದಾರ್ಯವಾಗಲಿ, ತಮ್ಮ ಜಗತ್ತಿನಾಚೆ ನಾನಾ ಸಂಕಷ್ಟಗಳಿಗೆ ತುತ್ತಾದವರಿಗೆ ನೆರವಾಗುವ ಮನಃಸ್ಥಿತಿಯಾಗಲಿ ಉದ್ಯಮಿಗಳಿಗೆ ಇರುವುದಿಲ್ಲ. ಹೃದಯವಿರಬೇಕಾದಲ್ಲಿ ಕ್ಯಾಲ್ಯುಕಲೇಟರ್ ಇನ್ಸ್ಟಾಲ್ ಮಾಡಿಕೊಂಡಂತೆ ಕಾಣಿಸುವ ಉದ್ಯಮಿಗಳ ನಡುವೆ ಅಕ್ಷರಶಃ ಸಂತನಂತೆ ಬದುಕಿದ್ದವರು ರತನ್ ಟಾಟಾ. ಗಳಿಸಿದ ಕಾಸನ್ನೆಲ್ಲ ಪೇರಿಸಿಟ್ಟು ಶ್ರೀಮಂತಿಕೆಯ ತಿಮಿರು ಪ್ರದರ್ಶಿಸೋ ಉದ್ಯಮಿಗಳ ನಡುವೆ ಇಂಥಾದ್ದೊಂದು ವ್ಯಕ್ತಿತ್ವ ಇತ್ತೆಂಬುದೇ ನಿಜವಾದ ಹೆಮ್ಮೆ. ಅಂಥಾದ್ದೊಂದು ಶ್ರೀಮಂತ ವ್ಯಕ್ತಿತ್ವದ ರತನ್ ಟಾಟಾ ಸಾರ್ಥಕವಾಗಿ ಬದುಕಿ ಎದ್ದು ನಡೆದಿದ್ದಾರೆ. ಅವರು ಇನ್ನಿಲ್ಲವಾಗಿ ತಿಂಗಳುಗಳು ಕಳೆಯುತ್ತಾ ಬಂದರೂ, ಅವರ ಧೀಮಂತ ವ್ಯಕ್ತಿತ್ವ ಥರ ಥರದಲ್ಲಿ ಕಾಡುತ್ತಲೇ ಸಾಗುತ್ತಿದೆ.
ಅಪರೂಪದ ವ್ಯಕ್ತಿತ್ವ
ಹಣವಂತರ ಮಕ್ಕಳು ಸಲೀಸಾಗಿ ಎಲ್ಲವನ್ನೂ ಸಂಭಾಳಿಸಿಕೊಂಡು ಹೋಗುತ್ತಾರೆ, ಅವರ ಬದುಕು ಸಲೀಸು ಎಂಬಂಥಾ ನಂಬಿಕೆ ನಮ್ಮ ನಡುವಲ್ಲಿದೆ. ಹೆಚ್ಚೂಕಡಿಮೆ ಹಣವಂತರ ಮಕ್ಕಳು ಮರಿಗಳೆಲ್ಲ ಪೂರ್ವಿಕರು ಮಾಡಿಟ್ಟ ಆಸ್ತಿ ಕರಗಿಸಿ ಎದ್ದು ನಡೆಯುವುದೇ ಹೆಚ್ಚು. ಇಂಥಾ ಎಲ್ಲರ ಸಾಲಿನಲ್ಲೂ ಭಿನ್ನವಾಗಿ ನಿಲ್ಲುವ ವ್ಯಕ್ತಿತ್ವ ರತನ್ ಟಾಟಾ ಅವರದ್ದು. ಬಹುಶಃ ಬೇರೆಲ್ಲರಂತೆ ಬದುಕಿದ್ದರೆ, ಅವರೆಂಥಾ ಸಾಮ್ರಾಜ್ಯ ಕಟ್ಟಿದ್ದರೂ ರತನ್ ಟಾಟಾ ಓರ್ವ ಉದ್ಯಮಿಯಾಗಿಯಷ್ಟೇ ನಿರ್ಗಮಿಸುತ್ತಿದ್ದರು. ಅವರ ಸಾವು ಈ ನೆಲದ ಬಹುತೇಕ ಜೀವಗಳನ್ನು ಇಷ್ಟು ತೀವ್ರವಾಗಿ ತಾಕುತ್ತಿರಲಿಲ್ಲ. ಇದು ಓರ್ವ ಹೃದಯವಂತನ ಅಗಲಿಕೆಯಾಗಿ, ಸ್ಫೂತಿದಾಯಕ ವ್ಯಕ್ತಿತ್ವವೊಂದರ ಕಣ್ಮರೆಯಂತಾಗಿ ರತನ್ ಟಾಟಾ ಅಗಲಿಕೆ ದೇಶವಾಸಿಗಳನ್ನು ಕಾಡುತ್ತಿದೆ. ಮುಂದೆಯೂ ಅವರಿಲ್ಲದ ನಿರ್ವಾತ ಸ್ಥಿತಿಯೊಂದು ಅಡಿಗಡಿಗೆ ಭಾರತೀಯರನ್ನು ಕಾಡಲಿದೆ.
ಉದ್ಯಮಿಗಳಲ್ಲಿ ಬಡಬಗ್ಗರ ಬಗೆಗೊಂದು ತಾತ್ಸಾರ ಮಾಮೂಲು. ಬಡತನಕ್ಕೆ ಸೋಂಭೇರಿತನವೇ ಕಾರಣವೆಂಬ ಅಮಾನವೀಯ ಸಿದ್ಧಸೂತ್ರಕ್ಕೆ ಈ ಕ್ಷಣವೂ ಇಲ್ಲಿನ ಬಹುಪಾಲು ಉದ್ಯಮಿಗಳು ಜೋತುಬಿದ್ದಿದ್ದಾರೆ. ಅಂಥಾ ನಿರ್ಗತಿಕ ಬದುಕುಗಳನ್ನು ಆರ್ಧ್ರ ಮನಸಿನಿಂದ ದಿಟ್ಟಿಸುವ, ಅಂಥಾ ಸ್ಥಿತಿಗೆ ಕಾರಣವೇನೆಂದು ಹುಯಡುಕುವ ತಾಯ್ತನವಿದೆಯಲ್ಲಾ? ಅದು ರತನ್ ಟಾಟಾರನ್ನು ಓರ್ವ ಉದ್ಯಮಿಯಾಗಿ ಉತ್ತುಂಗಕ್ಕೇರಿಸಿದಂತೆ ಭಾಸವಾಗುತ್ತದೆ. ಕೊರೋನಾ ಮಾರಿ ಭಾರತವನ್ನು ಆವರಿಸಿಕೊಂಡ ಘಳಿಗೆಯಲ್ಲಿ ಹೆಚ್ಚಿನ ಹಣವಂತರು ತಂತಮ್ಮ ಸಂಸಾರ ಸೇಫ್ ಆಗಿಸಿಕೊಂಡು ಹೊದ್ದು ಮಲಗಿದ್ದರು. ಕೆಲ ಮಂದಿ ಚೆರ್ಪು ಕಾಸು ಹಂಚಿ ಮಹಾನ್ ದಾನಿಗಳಂತೆ ಪೋಸು ಕೊಟ್ಟಿದ್ದರು. ಕಾರ್ಮಿಕರು ಬಸ್ಸಿಗೂ ಗತಿಯಿಲ್ಲದೆ ಕಿಲೋಮೀಟರುಗಟ್ಟಲೆ ನಡೆದು ಪಾದ ಸವೆಸಿಕೊಂಡಾಗ ಅದೆಷ್ಟೋ ಮಂದಿಗೆ ಸಣ್ಣದೊಂದು ಕನಿಕರವೂ ಹುಟ್ಟಲಿಲ್ಲ. ಅಂಥಾ ದಿನಮಾನದಲ್ಲಿ ತಮ್ಮ ಗಳಿಕೆಯ ಬಹುಪಾಲನ್ನು ದೇಶಕ್ಕಾಗಿ ಮುಡಿಪಾಗಿಟ್ಟ ಮಹಾನ್ ವ್ಯಕ್ತಿಯಾಗಿ ರತನ್ ಟಾಟಾ ಸಸಾ ಜೀವಂತವಾಗಿರುತ್ತಾರೆ.
ಹುಳುಕಿಲ್ಲದ ವ್ಯಕ್ತಿತ್ವ
ಟೀಕಿಸಲೆಂದೇ ಹುಟ್ಟಿದಂತಿರುವವರಿಗೆ, ಇಸಂಗಳ ಇಸುಬಿಗೆ ತುತ್ತಾದವರಿಗೆ ರತನ್ ಟಾಟಾ ವ್ಯಕ್ತಿತ್ವದಲ್ಲಿಯೂ ಹುಳುಕುಗಳು ಗೋಚರಿಸಬಹುದೇನೋ. ಅದಾಗಲೇ ಬೃಹದಾಕಾರದಲ್ಲಿ ಬೆಳೆದು ನಿಂತಿದ್ದ ಟಾಟಾ ಸಮೂಹವನ್ನು ಮುನ್ನಡೆಸಿದ್ದೇನು ಮಹಾ ಸಾಧನೆಯೇ ಅನ್ನಿಸಿದರೂ ಅಚ್ಚರಿಯೇನಿಲ್ಲ. ಆದರೆ, ಓರ್ವ ಉದ್ಯಮಿಯಾಗಿಯೂ ವ್ಯಕ್ತಿಯಾಗಿಯೂ ರತನ್ ಟಾಟಾ ಸಾಹಸಿಯಾಗಿ ಕಾಣಿಸುತ್ತಾರೆ. ರತನ್ ಟಾಟಾರ ತಾತ ಜೇಮ್ಶೆಡ್ಜಿ ಟಾಟಾ ಕೂಡಾ ಭಾರತ ಕಂಡ ದೈತ್ಯ ಉದ್ಯಮಿ. ಟಾಟಾ ಸಮೂಹದ ಹುಟ್ಟಿನ ಹಿಂದೆ, ಅದು ದೊಡ್ಡ ಮಟ್ಟದಲ್ಲಿ ಬೆಳೆದಿದ್ದರ ಹಿಂದೆ ಅವರ ಕೊಡುಗೆ ಅಪಾರವಾಗಿದೆ. ಅವರ ಕಾಲದಲ್ಲಿ ಟಾಟಾ ಸಮೂಹವೆಂಬುದು ಒಂದು ಉದ್ಯಮವಾಗಿತ್ತಷ್ಟೆ. ಒಂದು ವೇಳೆ ರತನ್ ಟಾಟಾ ಬದಲಿಗೆ ಬೇರ್ಯಾರೇ ಟಾಟಾ ಸಮೂಹದ ಉತ್ತರಾಧಿಕಾರಿಯಾಗಿದ್ದರೂ ಅವರ ಹೆಸರು ಭಾರತದ ಶ್ರೀಮಂತ ಉದ್ಯಮಿಗಳ ಸಾಲಿನಲ್ಲಿರುತ್ತಿತ್ತು; ಭಾರತೀಯರ ಹೃದಯದಲ್ಲಿ ಅಚ್ಚಾಗುತ್ತಿರಲಿಲ್ಲ.
ಈವತ್ತಿಗೆ ದಿನಬಳಕೆಯ ಉಪ್ಪಿನಿಂದ ಮೊದಲ್ಗೊಂಡು, ಸಾಮಾನ್ಯ ಜನರು ಊಹಿಸಲಾಗದ ಬೆಲೆಯ ಕಾರು ಉತ್ಪಾದನೆಯ ತನಕ ಟಾಟಾ ಪ್ರಭೆ ಹಬ್ಬಿಕೊಂಡಿದೆ. ದೇಶ ವಿದೇಶಗಳಲ್ಲಿ ಟಾಟಾ ಸಮೂಹ ಕಾರ್ಯನಿರ್ವಹಿಸುತ್ತಿದೆ. ರತನ್ ಟಾಟಾರ ಹೃದಯವಂತಿಕೆ, ಇಲ್ಲಿನ ಜನಸಾಮಾನ್ಯರ ಬದುಕೂ ಹಸನಾಗಬೇಕೆಂಬ ಕಳಕಳಿಗಳನ್ನು ನೋಡಿದಾಗ ಅಚ್ಚರಿಯಾಗದಿರೋದಿಲ್ಲ. ಹಣದ ಥೈಲಿಗಳ ನಡುವೆ ಆಡಿ ಬೆಳೆದ ಹುಡುಗನೊಬ್ಬನೊಳಗೆ ಇಂಥಾ ಹೃದಯವಂತಿಕೆ ಬೇಳೆಯಲು ಸಾಧ್ಯವೇ ಅಂತೊಂದು ಬೆರಗು ಮೂಡಿಕೊಳ್ಳುತ್ತದೆ. ಎಳವೆಯಲ್ಲಿಯೇ ಬದುಕು ಕೊಟ್ಟ ಉಳಿಯೇಟು, ಬಹುಕೋಟಿ ಇದ್ದರೂ ಅಪ್ಪ ಅಮ್ಮನ ಸಾಂಗತ್ಯವಿಲ್ಲದೆ ಬೆಳೆದ ತಬ್ಬಲಿತನಗಳೇ ಉದ್ಯಮಿಯಾಗಿ ಕಳೆದು ಹೋಗಬಹುದಿದ್ದ ರತನ್ ಟಾಟಾರನ್ನು ಹೃದಯವಂತನಾಗಿ ಮಾರ್ಪಡಿಸಿತೇನೋ ಅನ್ನಿಸದಿರೋದಿಲ್ಲ.
ಏಳುಬೀಳಿನ ಹಾದಿ
ಬದುಕು ನಾನಾ ರೀತಿಯಲ್ಲಿ ರತನ್ ಟಾಟಾರನ್ನು ಪರೀಕ್ಷೆಗೊಡ್ಡಿತ್ತು. ಹಂತ ಹಂತವಾಗಿ ನಿರಾಸೆಗಳು ಅವರನ್ನು ಆವರಿಸಿಕೊಂಡಿದ್ದವು. ಹಾಗಿ ಬಿದ್ದ ಏಟುಗಳೆಲ್ಲವೂ ಅವರನ್ನು ಸೂಕ್ಷ್ಮಗ್ರಾಹಿಯಾಗಿ ಮಾರ್ಪಾಟು ಮಾಡಿತ್ತು. ಹೆಸರಿಗೆ ಜೇಮ್ಶೆಡ್ಜಿ ಎಂಬ ಮಹಾನ್ ಉದ್ಯಮಿಯ ಮೊಮ್ಮಗ. ಆದರೆ, ಓರ್ವ ಸಾಮಾನ್ಯ ಕುಟುಂಬದಲ್ಲಿ ಜನಿಸಿದ್ದ ಹುಡುಗನೊಬ್ಬನನ್ನು ಕಾಡಬಹುದಾದ ಎಲ್ಲ ಮನೋ ವ್ಯಾಕುಲಗಳೂ ರತನ್ರನ್ನು ಕಾಡಿದ್ದವು. ಹೀಗೆಯೇ ಹದಗೊಳ್ಳುತ್ತಾ ಬಂದಿದ್ದ ರತನ್ ಟಾಟಾ ೧೯೯೧ರಲ್ಲಿ ಆರ್ಜೆಡಿ ಟಾಟಾ ನಿವೃತ್ತಿಯ ನಂತರ ಟಾಟಾ ಸಮೂಹದ ಜವಾಬ್ದಾರಿ ಹೊತ್ತುಕೊಂಡಿದ್ದರು. ಆ ಕ್ಷಣದಲ್ಲಿ ಉದ್ಯಮವನ್ನು ಸಮಾಜಮುಖಿಯಾಗಿ ಬೆಳೆಸುವ ಸಂಕಲ್ಪದೊಂದಿಗೇ ರತನ್ ಜವಾಬ್ದಾರಿ ಹೊತ್ತುಕೊಂಡಿದ್ದರು. ಆ ನಂತರ ಟಾಟಾ ಸಮೂಹ ಹೊರಳಿಕೊಂಡ ದಿಕ್ಕು ನಿಜಕ್ಕೂ ಈ ದೇಶದ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದುಕೊಳ್ಳುತ್ತದೆ.
ದೇಶದೊಳಗೆ ವ್ಯಾಪಿಸಿಕೊಂಡಿದ್ದ ಟಾಟಾ ಸಮೂಹವನ್ನು ಹಾಗೆಯೇ ಮುಂಣದುವರೆಸಿಕೊಂಡು ಹೋಗಿದ್ದರೂ ರತನ್ ಟಾಟಾ ಯಶ ಕಾಣುತ್ತಿದ್ದರು. ಆದರೆ, ಉದ್ಯಮಿಯಾಗಿಯೂ ಅರೋರ್ವ ಸಾಹಸಿ ಕನಸುಗಾರ. ಟಾಟಾ ಸಮೂಹವನ್ನು ಇಡೀ ಜಗತ್ತಿಗೆ ವ್ಯಾಪಿಸಿ, ಹೊಸ ಹೊಸಾ ಕ್ಷೇತ್ರಗಳಿಗೆ ಪಾದಾರ್ಪಣೆ ಮಾಡಬೇಕೆಂಬ ಕನಸು ಅವರಲ್ಲಿತ್ತು. ಅದಕ್ಕೆ ಸರಿಯಾಗಿ ಶ್ರಮವಹಿಸಿ ಕಂಡ ಕನಸುಗಳನ್ನೆಲ್ಲ ನನಸು ಮಾಡಿದ್ದರು. ಈವತ್ತಿಗೆ ಟಾಟಾ ಸಮೂಹ ಮುಟ್ಟದ ಕ್ಷೇತ್ರವೇ ಇಲ್ಲ ಎಂಬಂತಾಗಿ ಹೋಗಿದೆ. ಹೀಗೆ ಉದ್ಯಮವನ್ನು ಬೇರೆಯದ್ದೇ ಮಟ್ಟಕ್ಕೆ ಕೊಂಡೊಯ್ದ ರತನ್ ಟಾಟಾ ನಿಜಕ್ಕೂ ಸಂತನಂಥಾ ಮನಃಸ್ಥಿತಿಯನ್ನು ರೂಢಿಸಿಕೊಂಡಿದ್ದರು. ತಾವು ದುಡಿದಿದ್ದರಲ್ಲಿ ಬಹುಭಾಗವನ್ನು ಈ ಸಮಾಜಕ್ಕಾಗಿ ಮೀಸಲಿಡುವ ತೀರ್ಮಾನಕ್ಕೆ ಬಂದಿದ್ದರು.
ಅಪ್ಪಟ ತಾಯ್ತನ
ಉದ್ಯಮವೆಂದರೆ ಕೇವಲ ಸಂಸ್ಥೆಗಳನ್ನು ಕಟ್ಟಿ ಕಾಸು ಪೇರಿಸಿಕೊಳ್ಳುವುದಲ್ಲ; ಅದರ ಜೊತೆ ಜೊತೆಗೇ ಈ ಸಮಾಜದಲ್ಲಿರುವ ತಳಮಟ್ಟದ ಬದುಕುಗಳನ್ನು ಸುಧಾರಿಸುವಂತೆ ಮಾಡುವ ಜವಾಬ್ದಾರಿಯೂ ಉದ್ಯಮ ವಲಯಕ್ಕಿದೆ ಎಂಬ ಸೂಕ್ಷ್ಮತೆ ಅವರಲ್ಲಿತ್ತು. ಹಂತ ಹಂತವಾಗಿ ಅದನ್ನು ಕಾರ್ಯರೂಪಕ್ಕೆ ತಂದ ರತನ್ ಟಾಟಾ, ದೇಶಕ್ಕೆ ಅವಶ್ಯಕತೆ ಬಿದ್ದಾಗೆಲ್ಲ ಕೈಯೆತ್ತಿ ದಾನ ಮಾಡುತ್ತಾ ಬಂದಿದ್ದರು. ಐಸ್ಟಿನ ಮೂಲಕ ಜಗತ್ತಿಒನ ಮುಂದೆ ಯಾವ ಪೋಸುಗಳನ್ನೂ ಕೊಡದೆ ಸಾಮಾಜಿಕ ಪರಿವರ್ತಕರಾಗಿ ಕಾರ್ಯನಿರ್ವಹಿಸಿದರು.
ಸಮಾಜ ಸೇವೆ, ಬಡಬಗ್ಗರ ಕಾಳಜಿಯಾಚೆ ಓರ್ವ ಉದ್ಯಮಿಯಾಗಿಯೂ ರತನ್ ಟಾಟಾ ಸ್ಫೂರ್ತಿಯಾಗುತ್ತಾರೆ. ತಾತ ಕಟ್ಟಿದ ಸಾಮ್ರಾಜ್ಯದ ತುಣುಕುಗಳನ್ನವರು ದಾನ ಮಾಡಲಿಲ್ಲ. ಆ ಸಾಮ್ರಾಜ್ಯವನ್ನು ದೇಶದ ನರನಾಡಿಗಳಿಗೆ ಹಬ್ಬಿಸಿ, ಜಾಗತಿಕ ಮಟ್ಟಕ್ಕೇರಿಸಿ ಅದರಿಂದ ಬಂದ ಫಾಯಿದೆಯನ್ನು ಈ ನೆಲದ ಜನರಿಗೆಲ್ಲ ಉಪಯೋಗವಾಗುವಂತೆ ವಿನಿಯೋಗಿಸಿದ್ದಾರೆ. ಸ್ವತಂತ್ರ ಭಾರತದ ಉದ್ಯಮ ಜಗತ್ತನ್ನೊಮ್ಮೆ ನಿಂತು ದಿಟ್ಟಿಸಿದರೆ, ಆಳೋ ಮಂದಿಯ ಬೂಟು ನೆಕ್ಕುತ್ತಲೇ ಪ್ರವರ್ಧಮಾಬನಕ್ಕೆ ಬಂದವರು ಸಿಗುತ್ತಾರೆ. ಇದೇ ಬಲದೊಂದಿಗೆ ಬರ್ಬಾದೆದ್ದ ಉದ್ಯಮವನ್ನು ಭರಪೂರವಾಗಿ ಕಟ್ಟಿ ನಿಲ್ಲಿಸಿದವರು ಸಿಗುತ್ತಾರೆ. ಸರ್ಕಾರಗಳ ಮರ್ಜಿ ಬಳಸಿಕೊಂಡು ಎರಡ್ಮೂರು ವರ್ಷಗಳ ಅಂತರದಲ್ಲಿ ನಷ್ಟದಿಂದ ಲಾಭದತ್ತ ಚಿಮ್ಮಿದ ಚಾಲಾಕಿಗಳಿದ್ದಾರೆ. ಒಂದೊಂದಾಗಿ ಸರ್ಕಾರಿ ಸಂಸ್ಥೆಗಳನ್ನು ಕಬ್ಜಾ ಮಾಡಿಕೊಳ್ಳುವ ದಗಲ್ಬಾಜಿಗಳಿಗೂ ಇಲ್ಲಿ ಬರವಿಲ್ಲ.
ನಿಜದ ಮಹಾ ಸಂತ
ಇಂಥವರ ಸಂತೆಯಲ್ಲಿ ಅಕ್ಷರಶಃ ಸಂತನಂತೆ ಬದುಕಿ ಹೋದವರು ರತನ್ ಟಾಟಾ. ಓರ್ವ ಹಣವಂತ ಉದ್ಯಮಿಗೆ ಮಾತೃ ಹೃದಯವಿದ್ದರೆ, ಎಂಥಾ ಮ್ಯಾಜಿಕ್ಕು ನಡೆಯಬಲ್ಲದೆಂಬುದಕ್ಕೂ ಭಾರತದಲ್ಲಿ ಉದಾಹರಣೆಗಳು ಸಿಗುತ್ತವೆ. ಇತ್ತೀಚೆಗಷ್ಟೇ ಅನಿಲ್ ಅಂಬಾನಿ ಸಾವಿರಾರು ಕೋಟಿ ಸುರಿದು ಮಗನ ಮದುವೆ ಮಾಡಿ ಪೋಸು ಕೊಟ್ಟಿದ್ದ. ಮದುವೆಯನ್ನೂ ಕೂಡಾ ಇಂಟರ್ನಾಷನಲ್ ಇವೆಂಟಿನಂತೆ, ರಾಷ್ಟ್ರೀಯ ಜಾತ್ರೆ ಎಂಬಂತೆ ನಡೆಸಿ ಸಂಭ್ರಮಿಸಿದ್ದ. ಅರೆಹೊಟ್ಟೆಯಲ್ಲಿ ಮಲಗೋ ಮಂದಿಯ ಎದೆಗೆ ತಿವಿದಂಥಾ ಈ ತಿಮಿರು ಬೆರಗನ್ನಲ್ಲ; ಅಸಹ್ಯ ಹುಟ್ಟಿಸಿತ್ತು. ದಾನದತ್ತ ವಾಲದಿದ್ದರೆ ರತನ್ ಟಾಟಾ ಕೂಡಾ ಶ್ರೀಮಂತ ಉದ್ಯಮಿಗಳ ಸಾಲಿಗೆ ಸೇರುತ್ತಿದ್ದರೋ ಏನೋ. ಆದರೆ ಈ ವರ್ಷದಲ್ಲಿ ರತನ್ ಟಾಟಾ ಆಸ್ತಿ ಮೊತ್ತ ಮೂರುಸಾವಿರ ಚಿಲ್ಲರೆ ಕೋಟಿಯಷ್ಟೇ ಇತ್ತು. ಜಗದಗಲ ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಅವರು ತಮ್ಮ ದುಡಿಮೆಯ ಅರ್ಧಕ್ಕೂ ಹೆಚ್ಚು ಭಾಗವನ್ನು ದಾನ ಧರ್ಮಗಳಿಗೆ ವ್ಯಯಿಸಿದ್ದರು. ಇಂಥಾ ಅನರ್ಘ್ಯ ರತ್ನವೀಗ ವಯೋಸಹಜ ಕಾಯಿಲೆಗಳಿಂದ ನಿರ್ಗಮಿಸಿದೆ. ಅವರ ವ್ಯಕ್ತಿತ್ವದ ಪ್ರಭೆಗೆ ಖಂಡಿತಾ ಸಾವಿಲ್ಲ!
ಪ್ರೀತಿ ದಕ್ಕಲಿಲ್ಲ!
ರತನ್ ಟಾಟಾ ಬದುಕಿನುದ್ದುಕ್ಕೂ ಒಬ್ಬಂಟಿಯಾಗಿಯೇ ಬದುಕಿ ಬಾಳಿದವರು. ಮೂಕ ಪ್ರಾಣಿಗಳನ್ನು ಜೀವದಂತೆ ಹಚ್ಚಿಕೊಂಡಿದ್ದ ಅವರ ಪಾಲಿಗೆ ಪ್ರೀತಿಯೆಂಬುದು ಮರೀಚಿಕೆಯಾಗಿತ್ತು. ಹತ್ತು ವರ್ಷದವರಿರುವಾಗಲೇ ರತನ್ ಅಪ್ಪ ಅಮ್ಮನಿಂದ ದೂರಾಗಿದ್ದರು. ಅಜ್ಜಿಯ ಪ್ರೀತಿ ಸಿಕ್ಕರೂ ಕೂಡಾ ಅಮ್ಮನ ಕನವರಿಕೆಯಲ್ಲಿಯೇ ಬಾಲ್ಯ ಕಳೆದವರು ರತನ್ ಟಾಟಾ. ಅಂಥಾದ್ದೊಂದು ಕೊರಗಿಟ್ಟುಕೊಂಡು, ಏಕಾಂಗಿತನವನ್ನು ತಮ್ಮೊಳಗೆ ಸಾಕಿಕೊಂಡು ಬೆಳೆದಿದ್ದ ಅವರ ಬದುಕಿಗೆ ಅಮೆರಿಕಾದಲ್ಲಿ ವ್ಯಾಸಂಗ ನಡೆಸುವಾಗ ಹುಡುಗಿಯೊಬ್ಬಳ ಪ್ರವೇಶವಾಗಿತ್ತು.
ಹಾಗೆ ರತನ್ ಟಾಟಾರ ಮನಸು ಕದ್ದ ಹುಡುಗಿ ಚೀನಾ ಮೂಲದವರು. ಆಕೆಯೊಳಗೆ ತಾಯಿಯನ್ನು ಕಂಡಿದ್ದ ರತನ್ ಟಾಟಾ ತೀವ್ರವಾಗಿ ಪ್ರೀತಿಸಿದ್ದರು. ಅರವತ್ತರ ದಶಕದ ಆರಂಭದಲ್ಲಿ ಹುಟ್ಟಿಕೊಂಡಿದ್ದ ಆ ಪ್ರೀತಿ ಎರಡ್ಮೂರು ವರ್ಷಗಳಲ್ಲಿ ಮತ್ತಷ್ಟು ಬಲಗೊಂಡಿತ್ತು. ಆ ಹಂತದಲ್ಲಿ ಅವರಿಬ್ಬರೂ ಮದುವೆಯಾಗಲೂ ತಯಾರಾಗಿದ್ದರು. ರತನ್ ಟಾಟಾಠ ತನ್ನ ಇಷ್ಟದ ಜೀವಚದೊಂದಿಗೆ ಅಮೆರಿಕಾದಲ್ಲಿಯೂ ಉಳಿದುಕೊಳ್ಳುವ ಇರಾದೆಯಿಟ್ಟುಕೊಂಡಿದ್ದರು.
ಆದರೆ, ಆ ಹೊತ್ತಿಗೆಲ್ಲ ಅವರನ್ನು ಬಾಲ್ಯದಿಂದ ಸಾಕಿ ಸಲಹಿದ್ದ ಅಜ್ಜಿಯ ಆರೋಗ್ಯ ಏರುಪೇರಾಗಿತ್ತು. ಬೇರೆ ದಾರಿಯಿಲ್ಲದೆ ಭಾರತಕ್ಕೆ ಮರಳುವ ತೀರ್ಮಾನ ಮಾಡಬೇಕಾಗಿ ಬಂದಿತ್ತು. ಹಾಗೆ ಭಾರತಕ್ಕೆ ಬಂದ ರೆತನ್ ಟಾಟಾರಿಗೆ ತನ್ನ ಜೀವದಂಥಾ ಹುಡುಗಿಯೂ ಇಲ್ಲಿಗೇ ಬಂದು ಜೊತೆಯಾಗುತ್ತಾರೆಂಬ ನಿರೀಕ್ಷೆಯಿತ್ತು. ಆದರೆ, ೧೯೬೨ರಲ್ಲಿ ಶುರುವಾದ ಇಂಡೋ ಚೈನಾ ಯುದ್ಧ ಅವರ ಪ್ರೀತಿಯ ಪಾಲಿಗೆ ವಿಲನ್ ಆಗಿತ್ತು. ಅವರು ಪ್ರೀತಿಸಿದ್ದ ಹುಡುಗಿಯ ಹೆತ್ತವರು ಮಗಳನ್ನು ಭಾರತಕ್ಕೆ ಕಳಿಸಲು ಸುತಾರಾಂ ಇಷ್ಟವಿರಲಿಲ್ಲ. ಮಗಳು ಶತ್ರುರಾಷ್ಟ್ರದ ಸೊಸೆಯಾಗಬಾರದೆಂಬ ಕರ್ಮಠ ಜಿದ್ದಿಗೆ ಬಿದ್ದ ಪೋಶಕರು, ಆಕೆಗೆ ಒತ್ತಾಯದ ಮದುವೆ ಮಾಡುವ ಮೂಲಕ ಪ್ರಾಂಜಲ ಪ್ರೀತಿಯನ್ನು ಹೊಸಕಿ ಹಾಕಿದ್ದರು.
ಮನಸು ಮಾಡಿದರೆ ಎಂತೆಂಥಾ ಹುಡುಗಿಯರು ರತನ್ ಟಾಟಾರಿಗೆ ಸಿಗುತ್ತಿದ್ದರು. ಆದರೆ ಕೈ ಜಾರಿದ ಪ್ರೀತಿಯ ಗುಂಗಲ್ಲಿ ಒಬ್ಬಂಟಿಯಾಗುಳಿಯುವ ತೀರ್ಮಾನ ಮಾಡಿದ್ದರು. ಈ ಮೂಲಕ ಅಮರ ಪ್ರೇಮಿಯಾಗಿ ದಾಖಲಾದ ರತನ್ ಟಾಟಾ ಆ ವಿಚಾರವನ್ನು ಸಾರ್ವಜನಿಕವಾಗೆಲ್ಲೂ ಹೇಳಿಕೊಂಡಿಲ್ಲ. ಆದರೆ, ಉದ್ಯಮ ಜಗತ್ತಿನಲ್ಲಿದ್ದುಕೊಂಡು ಪ್ರೀತಿಗೆ ಬೆಲೆ ಕೊಟ್ಟು ಬದುಕಿದ ಅಪರೂಪದ ವ್ಯಕ್ತಿಯಾಗಿ ರತನ್ ಟಾಟಾ ಸದಾ ಭಾರತೀಯ ಸೃತಿಯಲ್ಲುಳಿಯುತ್ತಾರೆ.