‘ಕಚೋರಿ’ ಎಂಬುದು ಬಹುತೇಕ ಎಲ್ಲರೂ ಇಷ್ಟಪಡುವಂಥ ರುಚಿಕರವಾದ ಖಾದ್ಯ. ಈಗ ಇದೇ ‘ಕಚೋರಿ’ ಎಂಬ ಹೆಸರಿನಲ್ಲಿ ಚಿತ್ರವೊಂದು ನಿರ್ಮಾಣವಾಗಿದ್ದು, ತೆರೆಗೆ ಬರಲು ಸಿದ್ದವಾಗಿದೆ. ‘ಸಿನಿವೇ ಸಿನಿ ಕ್ರಿಯೇಶನ್ಸ್’ ಮೂಲಕ ಈ ಚಿತ್ರವನ್ನು ಆರ್ಯನ್ ನಿರ್ಮಾಣ ಮತ್ತು ನಿರ್ದೇಶನ ಮಾಡುವುದರ ಜೊತೆಗೆ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ಇಳಾ ವಿಟ್ಲ ನಾಯಕಿ ಪಾತ್ರ ನಿರ್ವಹಿಸಿದ್ದಾರೆ. ಹಿರಿಯ ನಟ ಕೀರ್ತಿರಾಜ್ ಒಬ್ಬ ಡಾನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೃಪಾಕರ್ ಈ ಸಿನಿಮಾದ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ.
ಸಿನಿಮಾದ ನಾಯಕ ‘ಕಚೋರಿ’ ಮಾರುವ ಹುಡುಗ, ಆತ ಶ್ರೀಮಂತ ಹುಡುಗಿಯನ್ನು ಲವ್ ಮಾಡುತ್ತಾನೆ. ನಂತರ ಬ್ರೇಕಪ್ ಆಗುತ್ತೆ, ಏಕೆ ಬ್ರೇಕಪ್ ಆಯ್ತು, ಅದಕ್ಕೆ ಕಾರಣ ಏನು? ಎಂದು ಹುಡುಕುವುದೇ ‘ಕಚೋರಿ’ ಸಿನಿಮಾದ ಕಥೆಯ ಎಳೆ. ಗಂಗಾವತಿ ಸುತ್ತಮುತ್ತ ‘ಕಚೋರಿ’ ಸಿನಿಮಾದ ಮಾತಿನ ಭಾಗದ ಚಿತ್ರೀಕರಣ ನಡೆಸಲಾಗಿದೆ. ಗಾಯಕ ವಿಜಯ ಪ್ರಕಾಶ್ ಹಾಡಿದ ಡ್ಯುಯೆಟ್ ಸಾಂಗನ್ನು ಮನಾಲಿಯಲ್ಲಿ ಶೂಟ್ ಮಾಡಲಾಗಿದೆ. ನಾಯಕ ಆರ್ಯನ್, ನಾಯಕಿ ಇಳಾ ವಿಟ್ಲ ಜೊತೆಗೆ ಕೆಂಪೇಗೌಡ, ಮೋಹನ್ ಜುನೇಜಾ, ಮಂಜುನಾಥ್ ಮೊದಲಾದವರು ‘ಕಚೋರಿ’ ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ‘ಕಚೋರಿ’ ಇಡೀ ಫ್ಯಾಮಿಲಿ ಕೂತು ನೋಡುವಂಥ ಸಿನಿಮಾವಾಗಿದೆ. ಸದ್ಯ ಸೆನ್ಸಾರ್ ಮುಂದಿರುವ ‘ಕಚೋರಿ’ ಸಿನಿಮಾವನ್ನು ಆದಷ್ಚು ಬೇಗ ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ ಚಿತ್ರತಂಡ.