ʻದಿ ಗೋಟ್ ಲೈಫ್ʼ… ಮಲೆಯಾಳಂ ಚಿತ್ರರಂಗದಲ್ಲಿ ತಯಾರಾಗ್ತಿರೋ ಬಹುನಿರೀಕ್ಷಿತ ಚಿತ್ರ. ಮ್ಯಾನ್ ಆಫ್ ಮಲ್ಟಿಟ್ಯಾಲೆಂಟೆಡ್ ಪೃಥ್ವಿರಾಜ್ ಸುಕುಮಾರನ್ ಈ ಚಿತ್ರದ ನಾಯಕ. ನ್ಯಾಷನಲ್ ಅವಾರ್ಡ್ ವಿನ್ನಿಂಗ್ ಡೈರೆಕ್ಟರ್ ಬ್ಲೆಸ್ಸಿ ಈ ಸಿನಿಮಾದ ಸಾರಥಿ. ಇವರಿಬ್ಬರ ಕಾಂಬಿನೇಷನ್‌ನಲ್ಲಿ ತಯಾರಾಗ್ತಿರೋ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ಪ್ಲಸ್ ಇವರಿಬ್ಬರ ಡ್ರೀಮ್ ಪ್ರಾಜೆಕ್ಟ್ ಸಿನಿಮಾ ಇದು. ಸೆಟ್ಟೇರಿದಾಗಿನಿಂದಲೂ ಈ ಚಿತ್ರ ಒಂದಿಲ್ಲೊಂದು ಕಾರಣಕ್ಕೆ ಸದ್ದು ಸುದ್ದಿ ಮಾಡುತ್ತಲೇ ಇದೆ. ಇದೀಗ, ಈ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಮೊದಲ ನೋಟದಲ್ಲೇ ನಾಯಕ ಪೃಥ್ವಿರಾಜ್ ಸುಕುಮಾರನ್ ನೋಡುಗರನ್ನ ದಂಗಾಗಿಸಿದ್ದಾರೆ.
ರೆಬೆಲ್ ಸ್ಟಾರ್ ಪ್ರಭಾಸ್ ʻʻದಿ ಗೋಟ್ ಲೈಫ್ʼ ಚಿತ್ರದ ಫಸ್ಟ್ ಲುಕ್ ಅನಾವರಣ ಮಾಡಿದ್ದಾರೆ. ನೋವು, ಹತಾಷೆ, ಭರವಸೆ ಎಲ್ಲವನ್ನೂ ಒಂದೇ ನೋಟದಲ್ಲಿ ವ್ಯಕ್ತಪಡಿಸಿರೋ ಗೆಳೆಯ ವರದನ ಮೊದಲ ನೋಟವನ್ನ ಜಗತ್ತಿನ ಮುಂದೆ ಹರವಿಟ್ಟಿದ್ದಾರೆ. ನಿಮಗೆಲ್ಲ ಗೊತ್ತಿರೋ ಹಾಗೇ ʻಸಲಾರ್ʼ ಸಿನಿಮಾದಲ್ಲಿ ಪೃಥ್ವಿ-ಪ್ರಭಾಸ್ ಜೀವಕ್ಕೆ ಜೀವ ಕೊಡುವ ಗೆಳೆಯರಾಗಿ ಮಿಂಚಿದ್ದರು. ವರದ-ದೇವನ ಜುಗಲ್‌ಬಂಧಿ ನೋಡಿ ನೀವೆಲ್ಲರೂ ಬಹುಪರಾಕ್ ಹಾಕಿದ್ದರು. ಇದೀಗ, ಅದೇ ಗೆಳೆಯನ ಹೈವೋಲ್ಟೆಜ್ ಸಿನಿಮಾದ ಫಸ್ಟ್ ಲುಕ್ ರಿವೀಲ್ ಮಾಡಿರೋ ಪ್ರಭಾಸ್, ʻದಿ ಗೋಟ್ ಲೈಫ್ ಚಿತ್ರತಂಡಕ್ಕೆ ಶುಭಕೋರಿದ್ದಾರೆ.
ʻದಿ ಗೋಟ್ ಲೈಫ್ʼ …. ಬರಹಗಾರ ಬೆನ್ಯಾಮಿನ್ ಅವರು ಬರೆದಿರುವ ಜನಪ್ರಿಯ ಕಾದಂಬರಿ ‘ಆಡು ಜೀವಿತಂ’ ಆಧರಿಸಿ ತಯಾರಾಗಿರೋ ಸಿನಿಮಾ. 90 ರ ದಶಕದಲ್ಲಿ ಅದೃಷ್ಟ ಹುಡುಕಿ ವಲಸೆ ಬಂದ ನಜೀಬ್ ಎಂಬ ಯುವಕನ ನೈಜ ಕಥೆಯನ್ನ ಈ ಚಿತ್ರ ಒಳಗೊಂಡಿದೆ. ಈ ಚಿತ್ರದಲ್ಲಿ ನಜೀಬ್ ಮೊಹಮ್ಮದ್ ಪಾತ್ರಕ್ಕೆ ಮಲೆಯಾಳಂ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಬಣ್ಣ ಹಚ್ಚಿದ್ದಾರೆ. ಬರೋಬ್ಬರಿ ಐದು ವರ್ಷಗಳ ಕಾಲ ಈ ಪಾತ್ರಕ್ಕಾಗಿ ಶ್ರಮವಹಿಸಿದ್ದಾರಂತೆ. ನಜೀಬ್ ಪಾತ್ರಕ್ಕೆ ನ್ಯಾಯ ಸಲ್ಲಿಸೋಕೆ ದೇಹ ದಂಡಿಸಿದ್ದಾರೆ. ಮಾನಸಿಕವಾಗಿಯೂ ಸಾಕಷ್ಟು ತಯಾರಿ ನಡೆಸಿಕೊಂಡೇ ಅಖಾಡಕ್ಕಿಳಿದ ಬಗ್ಗೆ ಹಿಂದೊಮ್ಮೆ ಹೇಳಿಕೊಂಡಿದ್ದರು. ಸದ್ಯ, ರಿವೀಲ್ ಆಗಿರುವ ಲುಕ್‌ನಲ್ಲಿ ಪೃಥ್ವಿರಾಜ್‌ನ ಗುರ್ತಿಸಲು ಅಸಾಧ್ಯ. ಯಾಕಂದ್ರೆ, ಅಷ್ಟರ ಮಟ್ಟಿಗೆ ಫಿಸಿಕಲ್ ಟ್ರಾನ್ಸರ್ಫಾಮೇಷನ್ ಮಾಡಿಕೊಂಡಿದ್ದಾರೆ. ಸುಕ್ಕುಗಟ್ಟಿರೋ ಮುಖ, ಗಡ್ಡಮೀಸೆ, ಕಣ್ಣಂಚಲ್ಲಿ ತುಂಬಿರೋ ಆ ನೀರು ಕಲಾಭಿಮಾನಿಗಳ ಕಣ್ಣರಳಿಸಿದೆ. ದಿ ಗೋಟ್ ಲೈಫ್ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿದೆ.
ಒಂದು ದಶಕದ ಪ್ರಯತ್ನದ ನಂತರ, ನೈಜ ಕಥೆ ಆಧರಿಸಿದ ಈ ಕಾದಂಬರಿ ದೃಶ್ಯ ರೂಪಕ್ಕೆ ಬಂದಿದೆ. ಈ ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್ ಅಲ್ಲದೇ ಹಾಲಿವುಡ್ ನಟ ಜಿಮ್ಮಿ ಜೀನ್-ಲೂಯಿಸ್, ಅಮಲಾ ಪೌಲ್, ಭಾರತೀಯ ನಟ ಕೆ.ಆರ್.ಗೋಕುಲ್ ಮತ್ತು ಪ್ರಸಿದ್ಧ ಅರಬ್ ನಟರಾದ ತಾಲಿಬ್ ಅಲ್ ಬಲೂಶಿ ಮತ್ತು ರಿಕಾಬಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಗೋಟ್ ಲೈಫ್ ಸಿನಿಮಾಗೆ ಅಕಾಡೆಮಿ ಪ್ರಶಸ್ತಿ ವಿಜೇತರಾದ ಎ.ಆರ್. ರೆಹಮಾನ್ ಮತ್ತು ರೆಸುಲ್ ಪೂಕುಟ್ಟಿ ಅವರ ಸಂಗೀತ ನಿರ್ದೇಶನ ಮತ್ತು ಧ್ವನಿ ವಿನ್ಯಾಸವಿದೆ. ಚಿತ್ರದ ಅದ್ಭುತ ದೃಶ್ಯಗಳನ್ನು ಸುನಿಲ್ ಕೆ.ಎಸ್ ತಮ್ಮ ಕ್ಯಾಮೆರಾದಲ್ಲಿ ಚಿತ್ರೀಕರಿಸಿದ್ದು, ಶ್ರೀಕರ್ ಪ್ರಸಾದ್ ಸಂಕಲನವಿದೆ. ವಿಶ್ವದಾದ್ಯಂತ ಅನೇಕ ದೇಶಗಳಲ್ಲಿ ಚಿತ್ರೀಕರಣಗೊಂಡಿರುವ ಈ ಚಿತ್ರ ಮಲಯಾಳಂ ಚಿತ್ರೋದ್ಯಮದ ಅತಿದೊಡ್ಡ ಸಿನಿಮಾ ಎನಿಸಿದೆ. ಬ್ಲೆಸ್ಸಿ ನಿರ್ದೇಶನದ ಈ ಸಿನಿಮಾವನ್ನು ವಿಷುಯಲ್ ರೊಮ್ಯಾನ್ಸ್ ನಿರ್ಮಿಸಿದೆ. ಅಂದಹಾಗೆ, ಗೋಟ್ ಲೈಫ್ ಸಿನಿಮಾ 2024ರ ಏಪ್ರಿಲ್ 10 ರಂದು ಕನ್ನಡ, ಹಿಂದಿ, ಮಲಯಾಳಂ, ತಮಿಳು, ತೆಲುಗು ಭಾಷೆಯಲ್ಲಿ ಬಿಡುಗಡೆಯಾಗಲಿದೆ.